ಮತ್ಸ್ಯಗಂಧಿಯ ಕಥನ

ಸತ್ಯವತಿಯು ಮೀನಿನ ಹೊಟ್ಟೆಯಲ್ಲಿ ಜನಿಸಿದ್ದರಿಂದ ಮತ್ತು ಮೀನಿನ ವಾಸನೆ ಹೊಂದಿದ್ದರಿಂದ ಈಕೆಯನ್ನು ಮತ್ಸ್ಯಗಂಧಿ ಎಂದೂ ಕರೆಯಲಾಗುತ್ತದೆ. ಉಪರಿಚರ ಎನ್ನುವ ರಾಜ ಒಮ್ಮೆ ತನ್ನ ತೇಜಸ್ಸನ್ನು ಹೊರ ಬಿಡುತ್ತಾನೆ. ನಂತರ ಈ ತೇಜಸ್ಸನ್ನು ಹದ್ದಿನ ಮುಖಾಂತರ ತನ್ನ ಹೆಂಡತಿಗೆ ತಲುಪಿಸಲು ಮುಂದಾದ. ಈ ಹದ್ದು ಹಾರುತ್ತಾ ಸಾಗುವಾಗ ಮತ್ತೊಂದು ಹದ್ದು ಎದುರಾಗಿ ಜಗಳ ಪ್ರಾರಂಭವಾಯಿತು. ಈ ವೇಳೆ ಉಪರಿಚರನ ತೇಜಸ್ಸು ಕೆಳಗೆ ಬಿದ್ದು ನದಿಯ ಪಾಲಾಗುತ್ತದೆ. ಮೀನೊಂದು ಈ ತೇಜಸ್ಸನ್ನು ನುಂಗಿ ಗರ್ಭಧರಿಸಿದ್ದರಿಂದ, ಒಂದು ಗಂಡು ಮತ್ತು ಹೆಣ್ಣಿನ ಜನನವಾಗುತ್ತದೆ. ಅದ್ರಿಕೆ ಎನ್ನುವ ಅಪ್ಸರೆ ಯಾವುದೋ ಶಾಪದಿಂದ ಮೀನಾಗಿ ಹುಟ್ಟಿರುತ್ತಾಳೆ.

ಅಂಬಿಗನಾದ ದಾಶರಾಜನು ನದಿಯಲ್ಲಿದ್ದ ಎರಡು ಮಕ್ಕಳನ್ನು ಕಂಡು, ಏನು ಮಾಡುವುದೆಂದು ತಿಳಿಯದೆ ಅರಸನ ಬಳಿಗೆ ಕರೆದೊಯ್ಯುತ್ತಾನೆ. ಆಗ ಅರಸ ಗಂಡು ಮಗುವನ್ನಿಟ್ಟುಕೊಂಡು, ಹೆಣ್ಣು ಮಗುವನ್ನು ಪುನಃ ದಾಶರಾಜನಿಗೆ ಕೊಡುತ್ತಾನೆ. ಈಕೆಯೇ ಸತ್ಯವತಿಯಾಗಿ ಅಂಬಿಗ ದಾಶರಾಜನ ಮಗಳಾಗಿ ಬೆಳೆಯುತ್ತಾಳೆ. ಕಪ್ಪು ಬಣ್ಣವನ್ನು ಹೊಂದಿದ್ದರಿಂದ ಈಕೆಯನ್ನು ಕಾಳಿ ಅಂತಲೂ ಕರೆಯಲಾಗುತ್ತದೆ. ಒಮ್ಮೆ ದಾಶರಾಜನಿಗೆ ಮಹರ್ಷಿಯೊಬ್ಬ “ನೀನು ಬೆಳೆಸುತ್ತಿರುವ ಈ ಮಗಳು, ಮುಂದೊಮ್ಮೆ ಚಕ್ರವರ್ತಿಯ ಪತ್ನಿಯಾಗುತ್ತಾಳೆ” ಎಂದು ಭವಿಷ್ಯ ನುಡಿಯುತ್ತಾನೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ದಾಶರಾಜ, ಕಾಲದ ನಿರೀಕ್ಷೆಯಲ್ಲಿ ಜೀವನ ಸಾಗಿಸುತ್ತಾನೆ.

ಸತ್ಯವತಿ ಬೆಳೆಯುತ್ತಿದ್ದಂತೆ, ತಂದೆ ಕೆಲಸಕ್ಕೆ ಕೈ ಜೋಡಿಸುತ್ತಾಳೆ. ಯಮುನಾ ನದಿಯಲ್ಲಿ ಪ್ರಯಾಣಿಕರನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಸಾಗಿಸುತ್ತಿರುತ್ತಾಳೆ. ಹೀಗೆ ಕಾಲ ಸಾಗುತ್ತಿದ್ದಾಗ, ಒಮ್ಮೆ ಪರಾಶರ ಮಹರ್ಷಿಗಳು ಎದುರಾಗಿ ದೋಣಿ ಹತ್ತುತ್ತಾರೆ. ದೋಣಿಯು ನದಿಯ ಮಧ್ಯಭಾಗಕ್ಕೆ ತಲುಪಿದಾಗ ಮಹರ್ಷಿಯು ಸತ್ಯವತಿಗೆ “ನೋಡು ನಿನ್ನ ಮೇಲೆ ನನಗೆ ಮೋಹ ಹುಟ್ಟಿದೆ. ನಿನ್ನಿಂದ ನನಗೆ ಒಬ್ಬ ಮಗ ಬೇಕು” ಎಂದು ಹೇಳುತ್ತಾನೆ. ಇದನ್ನು ಕೇಳಿದ ಸತ್ಯವತಿಗೆ ಸಹಜವಾಗಿ ನಾಚಿಕೆಯಾಗುತ್ತದೆ. ಆಗ ಮಹರ್ಷಿ, ಯಾರಿಗೂ ಕಾಣದಂತೆ ಒಂದು ಮಂಜಿನ ಆವರಣವನ್ನು ಸೃಷ್ಟಿ ಮಾಡುತ್ತಾನೆ. ಅದರೊಳಗೆ ಇಬ್ಬರೂ ಕೂಡಿ, ಒಬ್ಬ ಮಗನನ್ನು ಪಡೆಯುತ್ತಾರೆ. ಆ ಮಗುವೇ ವೇದವ್ಯಾಸ. ಈ ವ್ಯಾಸರಿಗೆ ಕೃಷ್ಣದ್ವೈಪಾಯನ ಮತ್ತು ಬಾದರಾಯಣ ಎಂಬ ಹೆಸರೂ ಸಹ ಇದೆ.

ಹೀಗೆ ಪಡೆದ ಮಗ, ಆ ಕ್ಷಣದಲ್ಲೇ ಬೆಳೆದು ಹೊರಟು ಹೋಗುತ್ತಾನೆ. ಈ ಪರಾಶರ ಮಹರ್ಷಿ ಸತ್ಯವತಿಗೆ “ನಿನ್ನ ಕನ್ಯತ್ವ ಸ್ಥಿರವಾಗಿರಲಿ ಮತ್ತು ನಿನ್ನ ದೇಹದ ಮೀನಿನ ವಾಸನೆ ನಾಶವಾಗಿ, ಸುವಾಸನೆ ಹೊರಹೊಮ್ಮಲಿ” ಎಂದು ವರ ಕೊಡುತ್ತಾನೆ. ಇದಾದ ಕೆಲವು ದಿನಗಳ ನಂತರ ಹಸ್ತಿನಾವತಿ ಮಹಾರಾಜ ಶಂತನು, ಯಮುನಾ ನದಿಯ ತೀರದ ಬಳಿ ನಿಂತಾಗ, ವಿಶಿಷ್ಟವಾದ ಗಂಧ ಈತನನ್ನು ಆಕರ್ಷಿಸುತ್ತದೆ. ಗಂಧವನ್ನು ಹುಡುಕಲು ಮುಂದಾದಾಗ ಸತ್ಯವತಿಯನ್ನು ನೋಡಿ ಮೆಚ್ಚುತ್ತಾನೆ. ಈ ಆಕರ್ಷಣೆ ಮುಂದುವರಿದು, ಅನಂತರ ದೇವವ್ರತನ (ಭೀಷ್ಮ) ತ್ಯಾಗದಿಂದ ಶಂತನು ಮತ್ತು ಸತ್ಯವತಿಯ ವಿವಾಹ ನಡೆಯುತ್ತದೆ.

ಹಸ್ತಿನಾವತಿಯ ಅರಮನೆಯಲ್ಲಿ ಸತ್ಯವತಿಯು, ಚಿತ್ರಾಂಗದ ಮತ್ತು ವಿಚಿತ್ರವೀರ್ಯ ಎಂಬ ಗಂಡು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಚಂದ್ರವಂಶದಲ್ಲಿ ಹುಟ್ಟಿದ ಈ ಮಕ್ಕಳು ಹಸ್ತಿನಾವತಿ ಮನೆತನದ ಉತ್ತರಾಧಿಕಾರಿಗಳಾಗುತ್ತಾರೆ. ಆದರೆ ಅಕಾಲದಲ್ಲಿ ಚಿತ್ರಾಂಗದ ತೀರಿಹೋಗುತ್ತಾನೆ. ವಿಚಿತ್ರವೀರ್ಯ ಪಟ್ಟವೇರಿ ಆಳುವ ಸಮಯದಲ್ಲಿ ಒಂದು ರೋಗಕ್ಕೆ ತುತ್ತಾಗಿ, ಈತನೂ ಸಾಯುತ್ತಾನೆ.

ವಿಚಿತ್ರವೀರ್ಯನಿಗೆ ಅಂಬಿಕೆ ಮತ್ತು ಅಂಬಾಲಿಕೆ ಎನ್ನುವ ಇಬ್ಬರು ಪತ್ನಿಯರು. ಇವರಿಗೆ ಗರ್ಭಧಾರಣೆಯಾಗಿರುವುದಿಲ್ಲ. ಹಾಗಾದರೆ ಕುಲವನ್ನು ಉಳಿಸುವುದೇ ಹೇಗೆ ಎಂಬುದನ್ನು ಸತ್ಯವತಿ ಚಿಂತಿಸುತ್ತಾಳೆ. ಏಕೆಂದರೆ ಕುಲವನ್ನು ಉಳಿಸುವುದು ಕೂಡ ಒಂದು ಧರ್ಮ. ಆ ಸಂದರ್ಭದಲ್ಲಿ ಒಂದು ಉಪಾಯ ಮಾಡಿ, ‘ಯೋಗ್ಯನಾದವನಿಂದ, ನಿಯೋಗದ ಮೂಲಕ ಮಕ್ಕಳನ್ನು ಪಡೆಯಬಹುದು’ ಎಂಬ ಪ್ರಾಚೀನ ಶಾಸ್ತ್ರವನ್ನು ಗಮನಕ್ಕೆ ತೆಗೆದುಕೊಳ್ಳುತ್ತಾಳೆ. ಈ ವಿಷಯವನ್ನು ಭೀಷ್ಮನ ಬಳಿ ಪ್ರಸ್ತಾಪಿಸಿದಾಗ, ಈತ ಒಪ್ಪುವುದಿಲ್ಲ. ಆಗ ತನ್ನ ಮತ್ತೊಬ್ಬ ಮಗನಾದ ವೇದವ್ಯಾಸರನ್ನು ಕರೆದು, “ಚಂದ್ರವಂಶವನ್ನು ಉಳಿಸಲು ಸತ್ಸಂತಾನವಾಗಬೇಕು” ಎಂದು ಕೇಳಿಕೊಂಡಾಗ, ವ್ಯಾಸರು ಒಪ್ಪಿಗೆ ಸೂಚಿಸುತ್ತಾರೆ. ಅನಂತರ ಅಂಬಿಕೆ ಮತ್ತು ಅಂಬಾಲಿಕೆ ಮೂಲಕ ಇಬ್ಬರು ಮಕ್ಕಳನ್ನು ಪಡೆಯಲಾಗುತ್ತದೆ.

ಮೊದಲನೇ ಮಗು ಧೃತರಾಷ್ಟ್ರ ಹುಟ್ಟು ಕುರುಡ. ಈ ಕುರುಡುತನ ಹೇಗೆ ಬಂತೆದರೆ, ವೇದವ್ಯಾಸರು ಸಮೀಪಿಸುವ ಸಮಯದಲ್ಲಿ ಅಂಬಿಕೆಯು ವ್ಯಾಸರ ಆಕೃತಿಯನ್ನು ನೋಡಲಾರದೆ ಹೆದರಿಕೆಯಿಂದ ಕಣ್ಣುಗಳನ್ನು ಮುಚ್ಚಿಕೊಂಡಳು. ಹೀಗಾಗಿ ಅವಳ ಮಗ ಧೃತರಾಷ್ಟ್ರ ಹುಟ್ಟು ಅಂಧನಾಗಿ ಜನಿಸಿದನು. ಅಂತೆಯೇ ಅಂಬಾಲಿಕೆಯು ತನ್ನ ಕಣ್ಣುಗಳನ್ನು ತೆರೆದುಕೊಂಡೇ ಇದ್ದರೂ ಕೂಡ, ಮುನಿಯ ರೂಪವನ್ನು ನೋಡಿ ಬಿಳಿಚಿಕೊಂಡಳು. ಆದುದರಿಂದ ಪಾಂಡುವೂ ಕೂಡ ರೋಗಿಯಾಗಿಯೇ ಜನಿಸಿದನು. ಈ ಎರಡೂ ಸಂತಾನ ಪೂರ್ಣ ಅರ್ಹತೆಯಿಂದ ಆಗಿಲಿಲ್ಲ.

ಅನಂತರ ಸತ್ಯವತಿ, ಮತ್ತೆ ಸಂತಾನಕ್ಕಾಗಿ ದೊಡ್ಡ ಸೊಸೆಗೆ ಒತ್ತಾಯಿಸುತ್ತಾಳೆ. ಆದರೆ ಈ ಸೊಸೆ ತಾನು ಒಪ್ಪದೆ, ಒಬ್ಬಳು ದಾಸಿಯನ್ನು ಕರೆದು ವ್ಯಾಸರ ಬಳಿಗೆ ಕಳುಹಿಸುತ್ತಾಳೆ. ಆ ದಾಸಿಯ ಮೂಲಕ ಹುಟ್ಟಿದ ಮಗುವೇ ಮಹಾಜ್ಞಾನಿ ವಿದುರ. ಈ ಮೂವರು ಮಕ್ಕಳಿಂದ ಕುಲ ಉದ್ಧಾರವಾಗಬೇಕೆಂದು ಸತ್ಯವತಿ ಅಪೇಕ್ಷಿಸುತ್ತಾಳೆ. ಆದರೆ ಧೃತರಾಷ್ಟ್ರ ಕುರುಡನಾಗಿದ್ದರಿಂದ ಅರ್ಹತೆ ಇರುವುದಿಲ್ಲ. ಅಕಾಲದಲ್ಲಿ ಪಾಂಡುವೂ ಮರಣವಾಗುತ್ತಾನೆ. ಆಗ ಬೇರೆ ಮಾರ್ಗವಿಲ್ಲದೆ, ಧೃತರಾಷ್ಟ್ರನೇ ಹಸ್ತಿನಾಪುರವನ್ನು ಆಳುತ್ತಾನೆ. ಇದು ಕಥೆಯ ಒಂದು ಮುಖ.

ಮತ್ತೊಂದು ಕಥೆಯಲ್ಲಿ, ಸತ್ಯವತಿಯ ಸಂತಾನಕ್ಕೆ ಸಿಂಹಾಸನ ಸಿಗಬೇಕೆಂಬುದು ದಾಶರಾಜನ ಹಂಬಲ. ಸಿಂಹಾಸನ ನಿಜಕ್ಕೂ ಲಭಿಸಿತೇ?. ಸತ್ಯವತಿ ಹೆತ್ತ ಮಕ್ಕಳು ಚಿತ್ರಾಂಗದ ಮತ್ತು ವಿಚಿತ್ರವೀರ್ಯ. ಆದರೆ ಸ್ವಯಂ ಪತ್ನಿಯರಿಂದ ವಿಚಿತ್ರವೀರ್ಯ ಮಕ್ಕಳನ್ನು ಪಡೆಯಲಾಗಲಿಲ್ಲ. ಆದರೆ ಸತ್ಯವತಿಯ ಮತ್ತೊಬ್ಬ ಮಗನಾದ ವ್ಯಾಸರ ಮೂಲಕ ನಿಯೋಗ ಮಾಡಿದ್ದರಿಂದ ವಿಚಿತ್ರವೀರ್ಯನ ಕ್ಷೇತ್ರದಲ್ಲಿ ಸಂತಾನ ಬೆಳೆಯಿತು. ಇದು ಸತ್ಯವತಿಯ ಸಂತಾನ ಹೌದೋ? ಅಥವಾ ಅಲ್ಲವೋ? ಎಂಬ ಪ್ರಶ್ನೆ ಉಂಟಾಗುತ್ತದೆ. ಅಂದರೆ ನಮ್ಮ ತರ್ಕಬದ್ಧ ಯೋಚನೆಯಿಂದ ಎಲ್ಲವೂ ಸಾಧ್ಯವಾಗುತ್ತದೆ ಅಥವಾ ಸಾಧ್ಯವಾಗುವುದಿಲ್ಲ ಎಂದು ಹೇಳಲಾಗದು. ಹೀಗಾಗಿ ಸತ್ಯವತಿ ಸಂತಾನಕ್ಕೆ ಸಿಂಹಾಸನ ಲಭಿಸಿತು ಅಥವಾ ಸಿಗಲಿಲ್ಲ ಎಂದೂ ಹೇಳಬಹುದು. ಈ ರೀತಿಯಾಗಿ ವಂಶಾಭಿವೃದ್ಧಿ ಫಲಿಸುತ್ತದೆ.

ಈ ಘಟನೆಗಳು ನಡೆದ ನಂತರ, ಪಾಂಡು ವಿರಕ್ತನಾಗಿ ಧೃತರಾಷ್ಟ್ರನಿಗೆ ಸಿಂಹಾಸನವನ್ನು ಬಿಟ್ಟು ಅರಣ್ಯ ಸೇರುತ್ತಾನೆ. ಕಾಡಿನಲ್ಲಿ ದೇವತಾ ನಿಯೋಗದ ಮೂಲಕ ಪಾಂಡು 5 ಮಕ್ಕಳನ್ನು ಪಡೆಯುತ್ತಾನೆ. ಈ ಮಕ್ಕಳೇ ಪಾಂಡವರು. ನಂತರ ಪಾಂಡು ಮರಣವಾದಾಗ, ಅರಣ್ಯದ ಋಷಿಗಳು 5 ಮಕ್ಕಳನ್ನು ಹಸ್ತಿನಾವತಿಗೆ ಕರೆದುಕೊಂಡು ಬರುತ್ತಾರೆ. ಈ ವೇಳೆಗೆ ವೇದವ್ಯಾಸರು ಪ್ರವೇಶ ಮಾಡಿ, ತನ್ನ ತಾಯಿ ಸತ್ಯವತಿಗೆ ಭವಿಷ್ಯದ ಸೂಚನೆಯನ್ನು ಕೊಡುತ್ತಾರೆ.

ಹೇಳಬಾರದು ಮುಂದಣದು ದು

ಷ್ಕಾಲವಿಂದಿಗೆ ನಾಳೆ ನಾಳೆಗೆ

ನಾಳೆ ಬಿಟ್ಟಿತು ವರ್ಣಧರ್ಮಾಶ್ರಮದ ನೆಲೆಹೋಯ್ತು

ಕಾಲ ವಿಷಮವು ಕೌರವ ಕ್ಷಿತಿ

ಪಾಲ ಪಾಂಡು ಕುಮಾರರಲಿ ಕೈ

ಮೇಳವಿಸುವುದು ತಾಯೆ ಬಿಜಯಂಗೈಯಿ ನೀವೆಂದ

ಕುಮಾರವ್ಯಾಸ ಭಾರತದಲ್ಲಿ ಬರುವ ಈ ಪದ್ಯದ ಸಾರಾಂಶ, ನಾಳೆ ಕಾಲ ಕೆಡುತ್ತದೆ. ನಿನ್ನ ಸಂತಾನ ಕಚ್ಚಾಡುವುದನ್ನು ನೀನು ನೋಡಬೇಕಾಗುತ್ತದೆ. ಹಾಗಾಗಿ ನೀನು ಅರಮನೆಯಲ್ಲಿ ಇರಬಾರದು. ಇದನ್ನು ನಾನು ಹೇಳಬಾರದಾಗಿತ್ತು. ಆದರೆ ನಿನ್ನ ಕ್ಷೇಮಕ್ಕಾಗಿ ಹೇಳುತ್ತಿದ್ದೇನೆ. ಕಾಲ ಕೆಡುವ ಮೊದಲು ನೀನು ಅರಮನೆ ಬಿಟ್ಟು ಹೊರಡು ಎಂದು ವ್ಯಾಸರು ಹೇಳುತ್ತಾರೆ. ಸತ್ಯವತಿಗೆ ತನ್ನ ಮಕ್ಕಳ ಕಾದಾಟವನ್ನು ನೋಡುವ ಅವಕಾಶ ಅಥವಾ ಸನ್ನಿವೇಶ ಒದಗದಂತೆ ವ್ಯಾಸರು ಸೂಚಿಸುತ್ತಾರೆ. ಅನಂತರ ಸತ್ಯವತಿ, ತನ್ನ ಇಬ್ಬರು ಸೊಸೆಯಂದಿರನ್ನೂ ಕರೆದುಕೊಂಡು ಅರಣ್ಯಕ್ಕೆ ತೆರಳಿ ವಾನಪ್ರಸ್ಥವನ್ನು ಸ್ವೀಕರಿಸುತ್ತಾಳೆ. ಪಾಂಡವರಲ್ಲಿ ಮತ್ತು ಕೌರವರಲ್ಲಿ ಯುದ್ಧವಾಗುವುದು ಎಂಬುದನ್ನು ವೇದವ್ಯಾಸರು ಭವಿಷ್ಯವಾಣಿಯಾಗಿ ಹೇಳಿದರೇ? ಅಥವಾ ತಾರ್ಕಿಕವಾಗಿ ಯೋಚಿಸಿ ಹೇಳಿದರೆ? ಎಂಬ ಪ್ರಶ್ನೆ ಕಾಡುತ್ತದೆ.

ತಾರ್ಕಿಕವಾಗಿ ಏನಾದರೂ ಹೇಳಿದ್ದರೆ, ಪಾಂಡವರು ಮತ್ತು ಕೌರವರ ನಡುವೆ ವೈಮನಸ್ಸು ಬೆಳೆಯುತ್ತಿದೆ ಎಂಬ ಸೂಚನೆಯನ್ನು ಗ್ರಹಿಸಿ ಹೇಳಿರಬೇಕು. ಭವಿಷ್ಯವಾಣಿಯಾಗಿ ಹೇಳಿದ್ದರೆ, ಯಾರನ್ನೂ ಆರೋಪಿಸಲಾಗುವುದಿಲ್ಲ. ಹಾಗಾಗಿ ಕುರುಕ್ಷೇತ್ರ ಎಂಬ ಯುದ್ಧ ಪೂರ್ವ ನಿರ್ಣಯವಾದದ್ದು ಮತ್ತು ಮನುಷ್ಯರ ಕೈ ಮೀರಿದ್ದು ಎಂದೂ ಕೂಡ ಗ್ರಹಿಸಬಹುದು.

ಈ ರೀತಿ ಸತ್ಯವತಿಯ ಇಡೀ ಪಾತ್ರ, ಮಹಾಭಾರತ ಕಥನದ ಪೂರ್ವಭಾಗವನ್ನು ಆಕ್ರಮಿಸಿಕೊಂಡು, ಯಾವುದು ಸತ್ಸಂತಾನವಾಗಿ ಚಂದ್ರವಂಶದ ಪರಂಪರೆಯನ್ನು ಬೆಳಗಿಸಬೇಕಿತ್ತೋ, ಆ ವಂಶಕ್ಕೆ ಸಾಕಷ್ಟು ದೇಣಿಗೆಯನ್ನು ಕೊಟ್ಟ ಅಥವಾ ದೀಪ ಬೆಳಗಲು ಎಣ್ಣೆಯಂತೆ ಇದ್ದವಳು ಸತ್ಯವತಿ. 

-ರಾಧಾಕೃಷ್ಣ ಕಲ್ಚಾರ್ ವಿಟ್ಲ

0 Comments

Submit a Comment

Your email address will not be published. Required fields are marked *

Related Articles

Related

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ಯಾವ ಮಗನ ಅಭ್ಯುದಯಕ್ಕಾಗಿ ಕೈಕೇಯಿ ವರವನ್ನು ವಿನಿಯೋಗಿಸಿದ್ದಳೋ, ಆ ಅಭ್ಯುದಯದ ಸಂತೋಷ ಭರತನಿಗೂ ಆಗಲಿಲ್ಲ ಹಾಗೂ ಇದರ ಆನಂದವನ್ನು ತಾಯಿಯೂ ಅನುಭವಿಸಲಿಲ್ಲ. ಇಲ್ಲಿ ವರಗಳೇ ವಿಚಿತ್ರವಾಯಿತು. ಪ್ರಾಣ ಉಳಿಸಬೇಕಾಗಿದ್ದ ವರವನ್ನು ವಿನಿಯೋಗಿಸಿ, ಪ್ರಾಣವನ್ನು ತೆಗೆಯಬೇಕಾಯಿತು. ಸಂತೋಷ ಕೊಡಬೇಕಾಗಿದ್ದಕ್ಕಾಗಿ ವಿನಿಯೋಗಿಸಿದ್ದು, ದುಃಖಕ್ಕೆ ಕಾರಣವಾಯಿತು.

read more
ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಧೃತರಾಷ್ಟ್ರ ಕುರುಡನಾದರೂ ಬುದ್ಧಿ ಹೀನನಲ್ಲ. ಮಾತ್ರವಲ್ಲದೇ, ಧೃತರಾಷ್ಟ್ರವೆಂದರೆ, ರಾಷ್ಟ್ರವನ್ನು ಎತ್ತಿಹಿಡಿಯುವವನು ಎಂಬರ್ಥ ಬರುತ್ತದೆ. ದುರದೃಷ್ಟವಶಾತ್, ಈತನ ಮಕ್ಕಳು ಕೂಡ ರಾಷ್ಟ್ರವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಲಿಲ್ಲ. ಸ್ವತಃ ಧೃತರಾಷ್ಟ್ರನಿಗೂ ಆ ಕೆಲಸ ಮಾಡಲಾಗಲಿಲ್ಲ. ಆದರೆ ಈತನ ಬುದ್ಧಿವಂತಿಕೆ ಬಳಕೆಗೆ ಬಂದದ್ದು, ತನ್ನ ಮಕ್ಕಳ ಅಭ್ಯುದಯಕ್ಕೆ ಹಾಗೂ ಅವರ ಪ್ರಯೋಜನಕ್ಕೆ ಮಾತ್ರ.

read more
ರಾಮನಂತೆ ಅರಣ್ಯವಾಸಿಯಾದ ಭರತ 

ರಾಮನಂತೆ ಅರಣ್ಯವಾಸಿಯಾದ ಭರತ 

ಭರತನು ಸಿಂಹಾಸನವೇರಿ ರಾಜ್ಯವನ್ನು ಆಳಬಹುದಿತ್ತು. ಆದರೆ ಈತನ ಮನಸ್ಸು ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ರಾಮನ ಪ್ರೀತಿ, ಅಭಿಮಾನಗಳು ಆತನಿಗೆ ಶಕ್ತಿಯಾಗಿದ್ದವು. ರಾಮನೇ ರಾಜನಾಗಬೇಕೆಂದು ಬಯಸಿ, ಅಣ್ಣನನ್ನು ಹುಡುಕುತ್ತಾ ಚಿತ್ರಕೂಟದಲ್ಲಿ ಭೇಟಿಯಾಗುತ್ತಾನೆ. ಇದೊಂದು ಅಣ್ಣ-ತಮ್ಮಂದಿರ ಮಿಲನದ ಭೇಟಿ. ಭರತ, ದಶರಥನ ಮರಣವಾರ್ತೆಯನ್ನು ಹೇಳಿ, ದುಃಖಿಸಿ ಕಣ್ಣೀರಿಡುತ್ತಿರುವಾಗ, ರಾಮ ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ರಾಮ ಮಾಡಬೇಕಾದ ಕಾರ್ಯಗಳನ್ನು ತಾನು ನೇರವೇರಿಸಿದ ಸಂಗತಿಗಳನ್ನು ಹೇಳುತ್ತಾನೆ.

read more