ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಧೃತರಾಷ್ಟ್ರ, ಮಹಾಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಪಾತ್ರ. ಆದರೆ ತಾನು ಕಾಣಿಸಿಕೊಳ್ಳುತಾನೆಯೇ ಹೊರತು, ಬೇರೆ ಏನನ್ನೂ ಕಾಣಲಾರನು. ಏಕೆಂದರೆ ಈತ ಹುಟ್ಟು ಕುರುಡ. ಈತನ ತಾಯಿಯಾದ ಅಂಬಿಕೆ, ನಿಯೋಗದ ಸಮಯದಲ್ಲಿ ವೇದವ್ಯಾಸರನ್ನು ಕಂಡು, ಭಯಪಟ್ಟು, ಕಣ್ಣು ಮುಚ್ಚಿಕೊಂಡಳು. ಪರಿಣಾಮವಾಗಿ ಧೃತರಾಷ್ಟ್ರ ಕುರುಡನಾಗಿ ಜನಿಸಿದ. ಹಸ್ತಿನಾವತಿಯ ಚಕ್ರವರ್ತಿ ಪೀಠಕ್ಕೆ ಉತ್ತರಾಧಿಕಾರಿಯಾಗಿ ಹಂಬಲಿಸಿ ಪಡೆದ ಮಗು, ಕುರುಡನಾಗಿದ್ದರಿಂದ ಸಿಂಹಾಸನಕ್ಕೆ ಅರ್ಹನಾಗಲಿಲ್ಲ. ಅನಂತರ ಹುಟ್ಟಿದ ಪಾಂಡು, ಮಧ್ಯಮ ಅರ್ಹತೆಯಿಂದ ಅರಸನಾದ.

ಧೃತರಾಷ್ಟ್ರ ಕುರುಡನಾದರೂ ಬುದ್ಧಿ ಹೀನನಲ್ಲ. ಮಾತ್ರವಲ್ಲದೇ, ಧೃತರಾಷ್ಟ್ರವೆಂದರೆ, ರಾಷ್ಟ್ರವನ್ನು ಎತ್ತಿಹಿಡಿಯುವವನು ಎಂಬರ್ಥ ಬರುತ್ತದೆ. ದುರದೃಷ್ಟವಶಾತ್, ಈತನ ಮಕ್ಕಳು ಕೂಡ ರಾಷ್ಟ್ರವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಲಿಲ್ಲ. ಸ್ವತಃ ಧೃತರಾಷ್ಟ್ರನಿಗೂ ಆ ಕೆಲಸ ಮಾಡಲಾಗಲಿಲ್ಲ. ಆದರೆ ಈತನ ಬುದ್ಧಿವಂತಿಕೆ ಬಳಕೆಗೆ ಬಂದದ್ದು, ತನ್ನ ಮಕ್ಕಳ ಅಭ್ಯುದಯಕ್ಕೆ ಹಾಗೂ ಅವರ ಪ್ರಯೋಜನಕ್ಕೆ ಮಾತ್ರ. ಧೃತರಾಷ್ಟ್ರನ ನಂತರ, ಹಸ್ತಿನಾವತಿಯ ಸಿಂಹಾಸನ ಪಾಂಡುವಿನ ವಶವಾಯಿತು. ತದನಂತರ ಪಾಂಡು, ಅರಣ್ಯಕ್ಕೆ ತೆರಳಿ ಮರಣ ಹೊಂದಿದ. ಆ ಸಮಯದಲ್ಲಿ ಮತ್ತೆ ಉತ್ತರಾಧಿಕಾರಿಯ ಪ್ರಶ್ನೆ ಎದುರಾಯಿತು. ಆಗ ಧೃತರಾಷ್ಟ್ರನನ್ನೇ ಸಿಂಹಾನದಲ್ಲಿ ಕೂರಿಸಿ, ರಾಜ್ಯದ ಉಸ್ತುವಾರಿಯನ್ನು ಭೀಷ್ಮನು ವಹಿಸಿಕೊಳ್ಳುತ್ತಾನೆ.

ಧೃತರಾಷ್ಟ್ರನಿಗೆ ಗಾಂಧಾರಿಯೊಂದಿಗೆ ವಿವಾಹವಾಯಿತು. ತನ್ನ ಪತಿ ಕುರುಡುನಾಗಿದ್ದರಿಂದ, ಪತಿವೃತೆಯಾಗಿ ತಾನೂ ಏನನ್ನೂ ನೋಡಬಾರದೆಂದು, ಗಾಂಧಾರಿಯೂ ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡು ಕುರುಡಳಾದಳು. ಈ ತಂದೆ ತಾಯಿ ಕುರುಡರಾಗಿದ್ದರಿಂದ, ಮಕ್ಕಳು ಏನಾಗಬಹುದು ಎಂಬುದಕ್ಕೆ, ನೂರು ಜನ ಕೌರವರು ಉತ್ತಮ ಉದಾಹರಣೆ. ಧೃತರಾಷ್ಟ್ರನಿಗೆ ಮದುವೆ ಮಾಡಿಸುವುದರ ಹಿಂದೆ ಒಂದು ಉದ್ದೇಶವಿತ್ತು. ಹಸ್ತಿನಾವತಿಗೆ ಉತ್ತರಾಧಿಕಾರಿಗಳಿಲ್ಲದೆ, ಸಂತಾನದ ಕೊರತೆ ಕಾಡುತ್ತಿದ್ದಾಗ, ಗಾಂಧಾರಿ ಈಶ್ವರನನ್ನು ಆರಾಧಿಸಿ, ನೂರು ಮಕ್ಕಳಾಗುವ ವರವನ್ನು ಪಡೆದಿದ್ದಳು. ಹೀಗಾಗಿ ಈಕೆಯನ್ನು ಕೊಟ್ಟು ವಿವಾಹವನ್ನು ಮಾಡಲಾಯಿತು.

ವೇದವ್ಯಾಸರು ಗಾಂಧಾರಿಗೆ ಮಂತ್ರಪಿಂಡವನ್ನು ಕೊಟ್ಟು, ‘ಪುತ್ರಶತವವರಿಸುವುದು ಕೊಳ್ಳೆಂದಿತನು ಮಂತ್ರ ಪಿಂಡಕವ’ ಎಂದು ಹೇಳುತ್ತಾನೆ. ಇವು ಕುಮಾರವ್ಯಾಸನ ಸಾಲುಗಳು. ಅಂದರೆ ಈ ಮಂತ್ರಪಿಂಡದಿಂದ ನೂರು ಮಂದಿ ಮಕ್ಕಳಾಗುತ್ತಾರೆ ಎಂಬುದು. ಇದರ ಫಲವಾಗಿ ಗಾಂಧಾರಿ ಗರ್ಭಿಣಿಯಾದಳು. ಆದರೆ ಪ್ರಸವಿಸಲಿಲ್ಲ. ಅನಂತರ ಕುಂತಿ ತಾಯಿಯಾಗಿದ್ದಾಳೆಂಬ ವರ್ತಮಾನ ಹರಡಿತು. ಆಗ ಅವಳ ಗರ್ಭಸ್ಥವಾಗಿದ್ದ ಪಿಂಡ ನೂರು ಚೂರಾಗಿ ಹೊಡೆದು ಹೋಯಿತು. ಹೀಗೆ ಒಡೆದು ಬಿದ್ದ ಪಿಂಡವನ್ನು ತುಪ್ಪದ ಬಾಂಡಲಿಯಲ್ಲಿಟ್ಟು, ಅದಕ್ಕೆ ಜೀವವನ್ನು ಕೊಡುವ ಕೆಲಸವನ್ನು ಮಾಡಲಾಯಿತು. ಒಂದೊಂದೆ ಪಿಂಡ ಶಿಶುವಾಗಿ ಕಾಣಿಸಿಕೊಂಡಿತು. ಹೀಗಾಗಿ ಧೃತರಾಷ್ಟ್ರನಿಗೆ ನೂರು ಮಂದಿ ಗಂಡು ಮಕ್ಕಳು, ಒಬ್ಬಳು ದುಶ್ಯಲ ಎಂಬ ಹೆಣ್ಣು ಕೂಡ ಹುಟ್ಟಿದಳು. ಹೀಗೆ ಸಂತಾನ ವೃದ್ಧಿಯಾಯಿತು.

ಇಲ್ಲಿ ಸಂತಾನ ವೃದ್ಧಿಯಾದರೂ, ಸದ್ಭುದ್ಧಿ ಮಾತ್ರ ವೃದ್ಧಿಯಾಗಲಿಲ್ಲ. ಪಾಂಡವರ ಕುರಿತು ಮತ್ಸರ, ವಿರೋಧ ಮುಂತಾದವುಗಳು ಬೆಳೆಯಿತು. ಇದಕ್ಕೆ ಪೂರಕವಾಗಿ ಗಾಂಧಾರಿಯ ಅಣ್ಣ ಶಕುನಿ, ತನ್ನ ತಂಗಿ ಮನೆಯಲ್ಲೇ ಇದ್ದು, ಕೌರವರಿಗೆ ದುರ್ಮಂತ್ರಗಳನ್ನು ಬೋಧಿಸಲು ಆರಂಭಿಸಿದ. ಇಲ್ಲಿ ಧೃತರಾಷ್ಟ್ರ ಮಾಡಿದ ಅಪರಾಧವೆಂದರೆ, ಒಳ್ಳೆಯ ಮಾತುಗಳನ್ನಾಡುವವರು ಹಾಗೂ ತನ್ನ ಮಕ್ಕಳ ನಡವಳಿಕೆ ತಪ್ಪು ಎಂದು ಹೇಳುವವರನ್ನು ದೂರ ಮಾಡುತ್ತಿದ್ದ. ಮಕ್ಕಳು ಮಾಡಿದ್ದೆಲ್ಲವನ್ನೂ ಸರಿ ಎಂದು ಒಪ್ಪಿಕೊಳ್ಳುತ್ತಿದ್ದ. ಅಂದರೆ ಒಬ್ಬ ತಂದೆ ಕುರುಡನಾಗಿ ಮಾಡಬಾರದ್ದನ್ನು, ಧೃತರಾಷ್ಟ್ರ ಮಾಡಿದ. ಎಷ್ಟೋ ತಂದೆಯರು ಕಣ್ಣಿದ್ದು ಹೀಗೆ ಮಾಡಿ ಕುರುಡರಾಗುತ್ತಾರೆ. ಆದರೆ ಧೃತರಾಷ್ಟ್ರ ಹೀಗೆ ವ್ಯವಹರಿಸಿದ್ದರಿಂದ, ಈತನ ಬದುಕಿನಲ್ಲಿಯೂ ಸಂಕಟ ಬಂದಿತು. ಅಲ್ಲದೇ, ಮಕ್ಕಳ ಬದುಕಿನಲ್ಲೂ ಸುಖವನ್ನು ತರಲಿಲ್ಲ. ನಂತರ ಮಕ್ಕಳು ಬೆಳೆದರು, ಪರಸ್ಪರ ಯುದ್ಧ ಆರಂಭವಾಯಿತು. ಯಾರೂ ಕಾಣದ ಘನಘೋರವನ್ನು ಧೃತರಾಷ್ಟ್ರ ನೋಡಿದ. ಅಂದರೆ ತನ್ನ ಮಕ್ಕಳ ಸಾವನ್ನು ಕಣ್ಣಾರೆ ಕಂಡ.

ಮಗನಾದ ದುರ್ಯೊಧನ, ಸ್ವತಃ ತಂದೆಗೆ ಒಂದು ಸಂದರ್ಭದಲ್ಲಿ “ರಾಯ, ಬರಿದೆ ಹಡೆದು ಕೆಡಿಸಿದೆ ತಾಯಿಯ ಯವ್ವನವ”. ಅಂದರೆ ತನ್ನ ತಾಯಿಯ ಯೌವ್ವನವನ್ನು ಹಾಳು ಮಾಡಿದ್ದೀಯ ಎಂದು ಎದುರು ಮಾತನಾಡುತ್ತಾನೆ. ಧೃತರಾಷ್ಟ್ರ, ಮಗನ ಮೋಹದಿಂದ ಸಾಕಷ್ಟು ದುರ್ಬಲನಾಗಿದ್ದರಿಂದಲೇ, ಈ ಘಟನೆ ಎದುರಾಯಿತೇ? ಅಥವಾ ತನಗೆ ದೃಷ್ಟಿಯಿಲ್ಲವೆಂಬ ಕೊರತೆಯಿಂದ, ಬಲಹೀನನ್ನಾಗಿ ಮಾಡಿತೋ? ಎಂಬುದನ್ನು ಗಮನಿಸಬೇಕು.

ಧೃತರಾಷ್ಟ್ರ ಬಲಹೀನನಲ್ಲ, ಅಂಗಸಾಧನೆ ಮಾಡಿದ ಶಕ್ತಿಶಾಲಿ. ಇದು ಗೊತ್ತಾಗುವುದು ಮಹಾಭಾರತ ಯುದ್ಧದ ನಂತರ. ಧೃತರಾಷ್ಟ್ರ ಮತ್ತು ಗಾಂಧಾರಿಯನ್ನು ಕಾಣಲು ಕೃಷ್ಣ, ಪಾಂಡವರನ್ನು ಕರೆದುಕೊಂಡು ಹೋಗುತ್ತಾನೆ. ಧೃತರಾಷ್ಟ್ರನಿಗೆ, ಭೀಮನನ್ನು ಕೊಲ್ಲುವಷ್ಟು ಸಿಟ್ಟಿರುವ ಸುಳಿವು ಕೃಷ್ಣನಿಗೆ ಗೊತ್ತಿತ್ತು. ಪಾಂಡವರು ಧೃತರಾಷ್ಟ್ರನನ್ನು ಕಂಡ ತಕ್ಷಣ, ಒಬ್ಬೊಬ್ಬರಾಗಿ ಅಪ್ಪಿಕೊಳ್ಳುತ್ತಾರೆ. ಆದರೆ ಭೀಮನನ್ನು ಮಾತ್ರ ಕೃಷ್ಣ ಹತ್ತಿರಕ್ಕೆ ಬಿಡದೆ, ಭೀಮನಂತಿರುವ ಲೋಹದ ದೇಹವನ್ನು ಹತ್ತಿರಕ್ಕೆ ಬಿಡುತ್ತಾನೆ. ತನ್ನ ನೂರು ಮಕ್ಕಳನ್ನು ಕೊಂದಿದ್ದಕ್ಕೆ ಸಿಟ್ಟಾಗಿದ್ದ ಧೃತರಾಷ್ಟ್ರ, ತನ್ನ ಶಕ್ತಿ ಮೀರಿ ಅಪ್ಪಿಕೊಳ್ಳುತ್ತಾನೆ. ಆಗ ಭೀಮನ ಲೋಹ ಪುಡಿ ಪುಡಿಯಾಗುತ್ತದೆ.

ಧೃತರಾಷ್ಟ್ರನಲ್ಲಿ ಇದ್ದದ್ದು ಎರಡು ಬಲ. ಒಂದು ಮಾನಸಿಕ ಬಲ ಅಥವಾ ಪ್ರತಿರೋಧ. ತನ್ನ ಮಕ್ಕಳನ್ನು ಕೊಂದಿದ್ದಕ್ಕೆ ಪ್ರತಿಕಾರ ತೀರಿಸಿಕೊಳ್ಳಬೇಕೆಂಬ ಸಿಟ್ಟು. ಮತ್ತೊಂದು ದೇಹಬಲ. ಲೋಹದ ವಿಗ್ರಹವನ್ನು ಪುಡಿಪುಡಿ ಮಾಡಬೇಕಾದರೆ, ದೇಹದಲ್ಲಿ ಎಷ್ಟ್ರರಮಟ್ಟಿಗೆ ಶಕ್ತಿ ಇದ್ದಿತು? ಇಂತಹ ಶಕ್ತಿಯುಳ್ಳವನು ನಿಜವಾಗಿಯೂ ರಾಷ್ಟ್ರವನ್ನು ಧೃತಿಯಿಂದ ಧಾರಣ ಮಾಡಿದ್ದರೆ, ಬಹುಶಃ ಪ್ರಪಂಚಕ್ಕೆ ಒಳ್ಳೆಯದಾಗುವ ಸಾಧ್ಯತೆಯಿತ್ತು. ಆದರೆ ಹೀಗಾಗದೆ, ಪುತ್ರ ವ್ಯಾಮೋಹದಿಂದ ಧೃತರಾಷ್ಟ್ರನನ್ನು ಮತ್ತು ಈತನ ಮಕ್ಕಳನ್ನು ಕೆಡಿಸಿತು.

ಒಂದು ಕಡೆ ವಿದುರ, “ದುರ್ಯೋಧನನಿಗೆ ದುರ್ಬುದ್ಧಿ ಇದೆ. ಎಚ್ಚರಿಕೆಯಿಂದಿರು” ಎಂದಾಗ, ತನ್ನ ಮಗನನ್ನು ಬೈಯುತ್ತಿದ್ದಾನಲ್ಲ ಎಂದು ಧೃತರಾಷ್ಟ್ರ ಸಿಟ್ಟಾಗುತ್ತಾನೆ. ಇದರಿಂದ ಬೇಸತ್ತ ವಿದುರ, ಪಾಂಡವರಿದ್ದ ಕಡೆಗೆ ತೆರಳುತ್ತಾನೆ. ನಂತರ ನಾಲ್ಕೈದು ದಿನ ಕಳೆದ ಮೇಲೆ ನೊಂದ ಧೃತರಾಷ್ಟ್ರ, ವಿದುರನನ್ನು ಕರೆತರಲು, ಜನರನ್ನು ಕಳುಹಿಸುತ್ತಾನೆ. ಇದೇ ರೀತಿ ಇವರಿಬ್ಬರ ಜಗಳ ಹಾಗೂ ಹೊಂದಾಣಿಕೆಗಳು ಆಗುತ್ತಿದ್ದಂತೆ, ಧೃತರಾಷ್ಟ್ರ ಯಾವುದರಲ್ಲಿಯೂ ಸ್ಥಿರವಾಗಿ ನಿಲ್ಲಲಿಲ್ಲ.

ಒಂದು ಸಂದರ್ಭದಲ್ಲಿ ಧರ್ಮರಾಯನ ಬಳಿ ತೆರಳಿ ಧೃತರಾಷ್ಟ್ರ “ನನ್ನ ಮಗನಿಗೂ ಸಿಂಹಾಸನದಲ್ಲಿ ಅವಕಾಶವಿದೆಯೇ?” ಎಂದು ಕೇಳಿಕೊಳ್ಳುತ್ತಾನೆ. ಪಾಂಡವರು ಅಪರಾಧಿಗಳಲ್ಲ, ತನ್ನವರೇ ಅಪರಾಧಿಗಳು ಎಂದು ಗೊತ್ತಿದ್ದರೂ, ಸಭಾ ಮಧ್ಯದಲ್ಲಿ ನಿಂತು ದ್ರೌಪದಿಗೆ “ಧರ್ಮ ನಿಮ್ಮದು ತಾಯೇ, ದುಷ್ಕರ್ಮ ನಮ್ಮದು. ನನ್ನ ಮಕ್ಕಳನ್ನು ಕ್ಷಮಿಸಮ್ಮ. ಎಲ್ಲವನ್ನು ಮರೆತುಬಿಡು” ಎನ್ನುತ್ತಾನೆ. ಇದು ಧೃತರಾಷ್ಟ್ರನ ಒಂದು ಬಗೆಯ ಧೋರಣೆ.

ಮತ್ತೊಂದು ಕಡೆಯಲ್ಲಿ ಧೃತರಾಷ್ಟ್ರ, ಪಾಂಡವರನ್ನು ದ್ಯೂತಕ್ಕೆ ಕರೆಯುವುದಕ್ಕೂ ಒಪ್ಪುತ್ತಾನೆ ಹಾಗೂ ಅರಗಿನಾಲಯದಲ್ಲಿ ಪಾಂಡವರನ್ನು ಸುಡುವುದಕ್ಕೂ ಒಪ್ಪುತ್ತಾನೆ. ದುರ್ಯೋಧನನ ಮತವನ್ನು ಒಪ್ಪಿ ವ್ಯವಹರಿಸುತ್ತಾನೆ. ಧರ್ಮದ ಬಗ್ಗೆ ಅರಿವಿದ್ದರೂ, ಅದನ್ನು ಪಾಲಿಸುವ ವಿಧಾನ ಮಾತ್ರ ಗೊತ್ತಿಲ್ಲ. ಸಹಜವಾಗಿ ದುರ್ಯೋಧನನಲ್ಲಿಯೂ ಈ ತರಹದ ಗುಣವಿಲ್ಲ. ಅಂದರೆ ಧೃತರಾಷ್ಟ್ರನ ಕುರುಡುತನವೆಂಬುದು ಒಂದು ಸಾಂಕೇತಿಕ. ಸರಿಯಾದದ್ದನ್ನು ಕಾಣದೇ ಇರುವ ಬುದ್ಧಿಕುರುಡತನವೂ ಹೌದು. ಧರ್ಮ ಮತ್ತು ಅಧರ್ಮದ ಬಗ್ಗೆ ಯೋಚನೆ ಮಾಡುವುದಕ್ಕಾಗದ ವಿವೇಚನಾರಹಿತ ಸ್ಥಿತಿಯೂ ಹೌದು. ಇದರಿಂದಾಗಿ ಈತನ ದೈಹಿಕ ಕುರುಡತನಕ್ಕಿಂತ ಹೆಚ್ಚಾಗಿ, ಪುತ್ರ ವ್ಯಾಮೋಹದ ಬುದ್ಧಿಕುರುಡತವೇ ವಿನಾಶಕ್ಕೆ ಕಾರಣವಾಯಿತು.

ಇಂತಹ ಧೃತರಾಷ್ಟ್ರನಿಗೆ ಮೂರು ಸಂಧರ್ಭಗಳಲ್ಲಿ ಕಣ್ಣು ತೆರದು ನೋಡುವ ಅವಕಾಶ ಬರುತ್ತದೆ. ಕೃಷ್ಣ ಸಂಧಾನಕ್ಕೆ ಬಂದಾಗ, ಕೌರವರೆಲ್ಲರೂ ಕೂಡಿ, ಈತನನ್ನು ಕಟ್ಟಿಹಾಕಲು ಮುಂದಾದಾಗ, ಆ ವೇಳೆ ಕೃಷ್ಣ ವಿಶ್ವರೂಪವನ್ನು ತೋರಿಸುತ್ತಾನೆ. ಇಡೀ ವಿಶ್ವ ತನ್ನೊಳಗಿದೆ, ತಾನೇ ವಿಶ್ವವಾಗಿದ್ದೇನೆ ಎಂಬ ವಿರಾಟ ರೂಪದ ದರ್ಶನವನ್ನು ಮಾಡಿಸುತ್ತಾನೆ. ಈ ವಿಶ್ವರೂಪವನ್ನು ಕಾಣಲು ಧೃತರಾಷ್ಟ್ರನಿಗೂ, ಕೃಷ್ಣ ದಿವ್ಯದೃಷ್ಟಿಯನ್ನು ಕರುಣಿಸುತ್ತಾನೆ. ತದನಂತರ ಮೂಲ ಸ್ವರೂಪಕ್ಕೆ ಮರಳಿದ ಕೃಷ್ಣನನ್ನು ಕಂಡ ಧೃತರಾಷ್ಟ್ರ “ಕಂಗಳಡಗಲಿ ದೇವ ನಿಮ್ಮೀ ಯಂಗವಟ್ಟವ ಕಂಡು” ಎನ್ನುತ್ತಾನೆ. ಅಂದರೆ ನಿನ್ನ ಈ ವೈಭವವನ್ನು ಕಂಡ ಮೇಲೆ, ಮತ್ತೊಮ್ಮೆ ನಿನ್ನನ್ನು ನೋಡುವ ಅಪೇಕ್ಷೆಯೇ ನನಗೆ ಇಲ್ಲ. ನನ್ನ ಕಣ್ಣುಗಳು ಇಂಗಿಹೋಗಲಿ. ಈ ಮಕ್ಕಳ ವಿಪರೀತವನ್ನು ನೋಡುವ ಅಪೇಕ್ಷೆ ನನಗಿಲ್ಲ ಎಂಬ ಮತ್ತೊಂದು ಧೋರಣೆಯಿಂದ ಹೇಳುತ್ತಾನೆ.

ಮತ್ತೊಂದು ಸಂದರ್ಭದಲ್ಲಿ ವೇದವ್ಯಾಸರು ಧೃತರಾಷ್ಟ್ರನಿಗೆ “ಯುದ್ಧವಾಗುವ ಸಂದರ್ಭ ಹತ್ತಿರವಾಗುತ್ತಿದೆ. ನಿನ್ನವರು ಮತ್ತು ಪಾಂಡವರು ಹೊಡೆದಾಡಿಕೊಂಡು ಅವರ ರಕ್ತಪಾತವನ್ನು ನೋಡುತ್ತೀಯಾ?” ಎಂದಾಗ ಧೃತರಾಷ್ಟ್ರ “ನನಗೆ ದಿವ್ಯದೃಷ್ಟಿ ಬೇಡ. ಆದರೆ ನನಗೆ ಕೇಳಬೇಕು ಎಂಬ ಆಸೆಯಿದೆ” ಎನ್ನುತ್ತಾನೆ. ಆಗ ಸಂಜಯನಿಗೆ ಲಭಿಸಿದ ದಿವ್ಯದೃಷ್ಟಿಯ ಮೂಲಕ ಧೃತರಾಷ್ಟ್ರ ಯುದ್ಧದ ವರ್ತಮಾನವನ್ನೆಲ್ಲಾ ಕೇಳುತ್ತಾನೆ.

ಕುರುಕ್ಷೇತ್ರ ಯುದ್ಧ ಮುಗಿದ ನಂತರ, ಗಾಂಧಾರಿ ಮತ್ತು ಕುಂತಿ ಅಳಿದುಹೋದ ಬಂಧುಗಳನ್ನು ನೋಡಬೇಕೆಂದು ಬಯಸುತ್ತಾರೆ. ಈ ವೇಳೆ ಧೃತರಾಷ್ಟ್ರನಿಗೂ ದೃಷ್ಟಿ ಬರುತ್ತದೆ. ಸತ್ತು ಹೋಗಿದ್ದ, ಯೋಧರು, ಗಂಗಾನದಿಯಿಂದ ಎದ್ದು ಬಂದು, ಒಂದು ದಿನ ಇವರೊಂದಿಗಿದ್ದು, ಮಾರನೇ ದಿನ ಕಾಣದೆ ಮರೆಯಾಗುತ್ತಾರೆ.

ಹೀಗಾಗಿ ಕುರುಡನಾಗಿದ್ದ ಧೃತರಾಷ್ಟ್ರ, ಮನೆಯಲ್ಲಿಯೂ ನೆಮ್ಮದಿಯಾಗಿರಲು ಸಾಧ್ಯವಾಗಲಿಲ್ಲ. ಕೌರವರು ಅಳಿದ ನಂತರ, ಪಾಂಡವರ ಜೊತೆಯಲ್ಲಿದ್ದಾಗಲೂ ಭೀಮನಿಂದ ಕಟುಮಾತುಗಳನ್ನು ಕೇಳಬೇಕಾಗುತ್ತದೆ. ಸಾಮಾನ್ಯವಾಗಿ ಕೂಡುಕುಟುಂಬದಲ್ಲಿ ವೃದ್ಧರಿಗೆ ತರುಣರು ಎದರು ಮಾತನಾಡುವಂತೆ ಭೀಮ ಛೇಡಿಸುತ್ತಾನೆ. ಕೊನೆಗೆ ವಿರಕ್ತನಾಗಿ, ಗಾಂಧಾರಿ ಮತ್ತು ಕುಂತಿಯನ್ನು ಕರೆದುಕೊಂಡು ವಾನಪ್ರಸ್ಥಕ್ಕೆ ತೆರಳುತ್ತಾನೆ. ಅನಂತರ ಕಾಳ್ಗಿಚ್ಚಿಗೆ ಸಿಕ್ಕಿ ತನ್ನ ದೇಹಾಂತ್ಯವನ್ನು ಮಾಡಿಕೊಳ್ಳುತ್ತಾರೆ. ಧೃತರಾಷ್ಟ್ರ, ರಾಷ್ಟ್ರವನ್ನು ಕಾಪಾಡಬೇಕಾದ ಬುದ್ಧಿ ಹಾಗೂ ಶಕ್ತಿ ಹೊಂದಿದವನು. ಆದರೆ ಬುದ್ಧಿಕುರುಡನಾಗಿ ಮತ್ತು ಶಕ್ತಿಹೀನನಾಗಿ ಧೃತರಾಷ್ಟ್ರನಲ್ಲದವನಾಗಿ ಬದುಕಿದ. ಅಲ್ಲದೇ ಈತನ ಮಕ್ಕಳೂ ಕೂಡ ರಾಷ್ಟ್ರವನ್ನು ಎತ್ತಿಹಿಡಿಯಲಿಲ್ಲ. ಇದೊಂದು ಜೀವನದ ದುರಂತದ ಕಥೆಯಾಗಿಯೂ ಕಾಣುತ್ತದೆ.  

ರಾಧಾಕೃಷ್ಣ ಕಲ್ಚಾರ್ ವಿಟ್ಲ

0 Comments

Submit a Comment

Your email address will not be published.

Related Articles

Related

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ಯಾವ ಮಗನ ಅಭ್ಯುದಯಕ್ಕಾಗಿ ಕೈಕೇಯಿ ವರವನ್ನು ವಿನಿಯೋಗಿಸಿದ್ದಳೋ, ಆ ಅಭ್ಯುದಯದ ಸಂತೋಷ ಭರತನಿಗೂ ಆಗಲಿಲ್ಲ ಹಾಗೂ ಇದರ ಆನಂದವನ್ನು ತಾಯಿಯೂ ಅನುಭವಿಸಲಿಲ್ಲ. ಇಲ್ಲಿ ವರಗಳೇ ವಿಚಿತ್ರವಾಯಿತು. ಪ್ರಾಣ ಉಳಿಸಬೇಕಾಗಿದ್ದ ವರವನ್ನು ವಿನಿಯೋಗಿಸಿ, ಪ್ರಾಣವನ್ನು ತೆಗೆಯಬೇಕಾಯಿತು. ಸಂತೋಷ ಕೊಡಬೇಕಾಗಿದ್ದಕ್ಕಾಗಿ ವಿನಿಯೋಗಿಸಿದ್ದು, ದುಃಖಕ್ಕೆ ಕಾರಣವಾಯಿತು.

read more
ರಾಮನಂತೆ ಅರಣ್ಯವಾಸಿಯಾದ ಭರತ 

ರಾಮನಂತೆ ಅರಣ್ಯವಾಸಿಯಾದ ಭರತ 

ಭರತನು ಸಿಂಹಾಸನವೇರಿ ರಾಜ್ಯವನ್ನು ಆಳಬಹುದಿತ್ತು. ಆದರೆ ಈತನ ಮನಸ್ಸು ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ರಾಮನ ಪ್ರೀತಿ, ಅಭಿಮಾನಗಳು ಆತನಿಗೆ ಶಕ್ತಿಯಾಗಿದ್ದವು. ರಾಮನೇ ರಾಜನಾಗಬೇಕೆಂದು ಬಯಸಿ, ಅಣ್ಣನನ್ನು ಹುಡುಕುತ್ತಾ ಚಿತ್ರಕೂಟದಲ್ಲಿ ಭೇಟಿಯಾಗುತ್ತಾನೆ. ಇದೊಂದು ಅಣ್ಣ-ತಮ್ಮಂದಿರ ಮಿಲನದ ಭೇಟಿ. ಭರತ, ದಶರಥನ ಮರಣವಾರ್ತೆಯನ್ನು ಹೇಳಿ, ದುಃಖಿಸಿ ಕಣ್ಣೀರಿಡುತ್ತಿರುವಾಗ, ರಾಮ ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ರಾಮ ಮಾಡಬೇಕಾದ ಕಾರ್ಯಗಳನ್ನು ತಾನು ನೇರವೇರಿಸಿದ ಸಂಗತಿಗಳನ್ನು ಹೇಳುತ್ತಾನೆ.

read more
ಪರಾಕ್ರಮಿ ಪಾಂಡುವಿನ ಅರಣ್ಯರೋಧನ

ಪರಾಕ್ರಮಿ ಪಾಂಡುವಿನ ಅರಣ್ಯರೋಧನ

ಸಿಂಹಾಸನದ ಉತ್ತರಾಧಿಕಾರಿಗಾಗಿ ನಡೆದ ನಿಯೋಗದಲ್ಲಿ, ಕುರುಡನಾದ ಧೃತರಾಷ್ಟ್ರ ಅಂಗವಿಕಲತೆಯ ಕಾರಣಕ್ಕಾಗಿ ಅರ್ಹನಾಗಲಿಲ್ಲ. ಪಾಂಡು ತನ್ನ ಬಣ್ಣದ ಕಾರಣಕ್ಕೆ ಪೂರ್ಣ ಅರ್ಹನಲ್ಲವೆಂದು ನಿರ್ಧರಿಸಲಾಯಿತು. ಅನಂತರ ಜನಿಸಿದ ವಿದುರನು ದಾಸಿ ಪುತ್ರನೆಂದು ಅಧಿಕಾರ ಸಿಗಲಿಲ್ಲ. ಹೀಗಾಗಿ ಉತ್ತಮ ಅರ್ಹತೆಯಿಲ್ಲದೆ, ಮಧ್ಯಮ ಅರ್ಹತೆ ಹೊಂದಿರುವನು ಎಂಬ ಕಾರಣಕ್ಕೆ ಪಾಂಡು ಸಿಂಹಾಸನದ ಒಡೆಯನಾದ.

read more