ರಾಮನಂತೆ ಅರಣ್ಯವಾಸಿಯಾದ ಭರತ 

ದಶರಥನ ಎರಡನೇ ಮಗ ಭರತ. ಈತನ ತಾಯಿ ಕೈಕೇಯಿ. ಅನೇಕರು ಭಾರತ, ಭರತವರ್ಷ ಹಾಗೂ ಭರತಖಂಡ ಎನ್ನುವಾಗ, ರಾಮಾಯಣದ ಭರತ ಎಂದು ಭಾವಿಸಿದ್ದಾರೆ. ಆದರೆ ಇದು ತಪ್ಪು ಗ್ರಹಿಕೆ. ಭರತಖಂಡಕ್ಕೆ ಹೆಸರು ಬರುವ ಭರತ ಹಾಗೂ ರಾಮನ ಸಹೋದರ ಭರತ ಇಬ್ಬರೂ ಭಿನ್ನ ವ್ಯಕ್ತಿಗಳು. ರಾಮಾಯಣದ ಭರತನಿಗೆ ಯೋಗ್ಯತೆಯೇನೂ ಕಡಿಮೆಯಿರಲಿಲ್ಲ. ಈತನು ಕೂಡ ಅಗ್ನಿ ದೇವರು ಕೊಟ್ಟ ಪಾಯಸದಿಂದಲೇ ಹುಟ್ಟಿದವನು. ಈ ಭರತನಿಗೆ ರಾಮನ ನಂತರ ರಾಜನಾಗುವ ಅರ್ಹತೆಯಿತ್ತು. ಆದರೆ ಎಂದಿಗೂ ಅಧಿಕಾರವನ್ನು ಬಯಸಲಿಲ್ಲ.

ದಶರಥನು ಪಟ್ಟದ ಕುರಿತು ಚಿಂತಿಸುವಾಗ ಭರತ ಅಯೋಧ್ಯೆಯಲ್ಲಿರಲಿಲ್ಲ. ಆ ವೇಳೆಯಲ್ಲಿ ಭರತ ಮತ್ತು ಶತ್ರುಘ್ನರು ಹೆಚ್ಚಿನ ಅಭ್ಯಾಸಕ್ಕಾಗಿ ತಮ್ಮ ಅಜ್ಜನ ಮನೆಯಾದ ಕೈಕೆ ದೇಶದಲ್ಲಿದ್ದರು. ಅದೇ ಸಮಯದಲ್ಲಿ ರಾಮ ಮತ್ತು ಲಕ್ಷ್ಮಣರು ಅಯೋಧ್ಯೆಯಲ್ಲಿದ್ದರು. ಒಂದು ದಿನ ದಶರಥನು ಪಟ್ಟದ ಬಗ್ಗೆ ಯೋಚಿಸಿ, ಪ್ರಜೆಗಳ ಬಳಿ ಈ ವಿಷಯನ್ನು ಪ್ರಸ್ತಾಪಿಸುತ್ತಾನೆ. ಜನತೆಯೂ ಆ ತೀರ್ಮಾನವನ್ನು ಒಪ್ಪಿರುತ್ತಾರೆ. ಆದರೆ ಆ ವೇಳೆ ಕೈಕೇಯಿ, ದಶರಥನ ಬಳಿ ಎರಡು ವರವನ್ನು ಕೇಳುತ್ತಾಳೆ. ಒಂದು ಭರತನಿಗೆ ಪಟ್ಟಾಭಿಷೇಕವಾಗಬೇಕು, ಮತ್ತೊಂದು ರಾಮ 14 ವರ್ಷ ಕಾಡಿಗೆ ಹೋಗಬೇಕು. ಅಸಹಾಯಕನಾದ ದಶರಥನು ವಿಧಿಯಿಲ್ಲದೆ ಈ ವರವನ್ನು ನೀಡಬೇಕಾಗುತ್ತದೆ. ಪರಿಣಾಮವಾಗಿ ರಾಮ ಮತ್ತು ಲಕ್ಷ್ಮಣ ಕಾಡಿಗೆ ತೆರಳುತ್ತಾರೆ. ಇದೇ ದುಃಖದಿಂದ ದಶರಥ ಪ್ರಾಣತ್ಯಾಗವನ್ನು ಮಾಡುತ್ತಾನೆ.

ಬಳಿಕ ವಸಿಷ್ಠರು ದೂತರ ಬಳಿ ಭರತನನ್ನು ಅಯೋಧ್ಯೆಗೆ ಕರೆತರುವಂತೆ ಹೇಳುತ್ತಾರೆ. ರಾಮಾಯಣದಲ್ಲಿ ಭರತನ ಸರಿಯಾದ ಚಿತ್ರಣ ಸಿಗುವುದು ಈ ಭಾಗದಲ್ಲಿ. ಭರತ ಅತ್ಯಂತ ಆತಂಕದಿಂದ, ದುಃಸ್ವಪ್ನಗಳನ್ನು ಕಂಡು, ದುರ್ನಿಮಿತ್ತಗಳನ್ನು ಕಂಡು, ಭೀತನಾಗಿ ಅಯೋಧ್ಯೆಗೆ ಬರುತ್ತಾನೆ. ಆ ವೇಳೆ ರಾಮ ಲಕ್ಷಣರು ಅರಣ್ಯಕ್ಕೆ ತೆರಳಿರುತ್ತಾರೆ. ತಂದೆ ದಶರಥ ತೀರಿಹೋಗಿರುತ್ತಾನೆ. ಇದಕ್ಕೆ ಕಾರಣ ತನ್ನ ತಾಯಿ ಕೈಕೇಯಿ ಕೇಳಿದ ವರವೆಂದು ಅರಿತು ಭರತ ಆಕ್ರೋಶಭರಿತನಾಗುತ್ತಾನೆ.

ಏಕೆಂದರೆ ಭರತನು ತನ್ನ ಅಣ್ಣನಾದ ರಾಮನ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ. “ತನ್ನ ಸಹೋದರನನ್ನು ಕಾಡಿಗೆ ಕಳುಹಿಸಿ, ತಾನು ಸಿಂಹಾಸನವೇರುವುದೇ?” ಎಂದು ಯೋಚಿಸಿ, ಕ್ರೋಧದಿಂದ ತನ್ನ ತಾಯಿಯ ತಲೆಯನ್ನು ಕಡಿಯುತ್ತೇನೆಂದು ಹೊರಡಲು ಸಿದ್ಧನಾಗುತ್ತಾನೆ. ಆ ವೇಳೆ ವಸಿಷ್ಠರು ತಡೆದು, ದಶರಥ ದೇಹಕ್ಕೆ ಅಂತ್ಯ ಸಂಸ್ಕಾರ ಮಾಡಿಸುತ್ತಾರೆ. ಅನಂತರ “ಭರತ, ನೀನು ಪಟ್ಟವೇರಬೇಕು” ಎಂದಾಗ, “ಆಗುವುದಿಲ್ಲ. ನಾನು ಕಾಡಿಗೆ ಹೋಗುತ್ತೇನೆ. ರಾಮನಿದ್ದಲ್ಲೇ ನಾನು ಇರುತ್ತೇನೆ. ಅಣ್ಣನನ್ನು ಒಪ್ಪಿಸಿ, ಕರೆದುಕೊಂಡು ಬರುತ್ತೇನೆ” ಎಂದು ಹೊರಡುತ್ತಾನೆ.

ಈ ಸಮಯ ಬಳಸಿಕೊಂಡು ಭರತನು ಸಿಂಹಾಸನವೇರಿ ರಾಜ್ಯವನ್ನು ಆಳಬಹುದಿತ್ತು. ಆದರೆ ಈತನ ಮನಸ್ಸು ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ರಾಮನ ಪ್ರೀತಿ, ಅಭಿಮಾನಗಳು ಆತನಿಗೆ ಶಕ್ತಿಯಾಗಿದ್ದವು. ರಾಮನೇ ರಾಜನಾಗಬೇಕೆಂದು ಬಯಸಿ, ಅಣ್ಣನನ್ನು ಹುಡುಕುತ್ತಾ ಚಿತ್ರಕೂಟದಲ್ಲಿ ಭೇಟಿಯಾಗುತ್ತಾನೆ. ಇದೊಂದು ಅಣ್ಣ-ತಮ್ಮಂದಿರ ಮಿಲನದ ಭೇಟಿ. ಭರತ, ದಶರಥನ ಮರಣವಾರ್ತೆಯನ್ನು ಹೇಳಿ, ದುಃಖಿಸಿ ಕಣ್ಣೀರಿಡುತ್ತಿರುವಾಗ, ರಾಮ ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ರಾಮ ಮಾಡಬೇಕಾದ ಕಾರ್ಯಗಳನ್ನು ತಾನು ನೇರವೇರಿಸಿದ ಸಂಗತಿಗಳನ್ನು ಹೇಳುತ್ತಾನೆ.

ಭರತನನ್ನು ಸಮಾಧಾನಿಸುತ್ತ ರಾಮ, “ನೀನು ರಾಜ್ಯವಾಳು ಭರತ” ಎಂದಾಗ “ಆಗುವುದಿಲ್ಲ ಅಣ್ಣ. ನೀನು ನನ್ನ ಜೊತೆ ಬಾ. ನನಗೆ ರಾಜನಾಗುವ ಅರ್ಹತೆಯಿದ್ದರೂ, ನಾನು ಅದನ್ನು ಬಯಸುವುದಿಲ್ಲ” ಎಂದು ಕರೆಯುತ್ತಾನೆ. ಆಗ ರಾಮನು “ಕೇಳು ಭರತ, ನಿನ್ನ ಅಮ್ಮ ಕೈಕೇಯಿ ನಿನಗಾಗಿ ಅಧಿಕಾರ ಕೊಟ್ಟಿದ್ದಾಳೆ” ಎಂದಾಗ, “ಇಲ್ಲ ನನಗೆ ಬೇಡ” ಎನ್ನುತ್ತಾನೆ.

ಗಮನಿಸಬೇಕಾದ ಅಂಶವೆಂದರೆ ತಾಯಿಯು ತನ್ನ ಮಗನಿಗಾಗಿ ವರವನ್ನು ಕೇಳಿದ್ದಾಳೆ. ಆದರೆ ಮಗನಿಗೆ ಆ ವರ ಬೇಕಾಗಿರುವುದಿಲ್ಲ. ಯಾವುದು ಬೇಡವೊ, ಅದನ್ನು ವರವೆಂದು ಗ್ರಹಿಸಬಹುದೆ ? ಅಲ್ಲದೇ, ರಾಮ ಕಾಡಿಗೆ ಹೋಗಿರುವುದು ಯಾರಿಗೂ ಪ್ರಿಯವಲ್ಲ. ಕೆಲ ಸಮಯದ ಬಳಿಕ ಕೈಕೇಯಿಗೂ ತನ್ನ ತಪ್ಪಿನ ಅರಿವಾಗುತ್ತದೆ. “ಮಂಥರೆಯ ಮಾತನ್ನು ಕೇಳಿ, ತಪ್ಪು ಮಾಡಿದೆ” ಎಂದು ಚಿಂತಿಸುತ್ತಾಳೆ. “ರಾಮ, ಅಯೋಧ್ಯೆಗೆ ಬಾ” ಎಂದು ಬೇಡಿಕೊಳ್ಳುತ್ತಾಳೆ. ಆದರೆ ರಾಮ ಒಪ್ಪುವುದಿಲ್ಲ.

ಚಿತ್ರಕೂಟದಲ್ಲಿ ಭರತ ರಾಮನಿಗೆ “ನಿಮ್ಮ ಸೇವೆಗಾಗಿ ಪಾದುಕೆಯನ್ನು ದಯಪಾಲಿಸಿ?” ಎಂದು ಕೇಳಿದಾಗ, ರಾಮ ಅದಕ್ಕೆ ಸಮ್ಮತಿಸುತ್ತಾನೆ. ಆ ಪಾದುಕೆಯನ್ನು ನೆತ್ತಿಯ ಮೇಲೆ ಹೊತ್ತುಕೊಂಡು ಬರುವ ಭರತನ ಚಿತ್ರಕ್ಕೆ, ಕುವೆಂಪು ತಮ್ಮ ರಾಮಾಯಣ ದರ್ಶನಂ ಕಾವ್ಯದಲ್ಲಿ ’ಪಾದುಕಾ ಕಿರೀಟ’ ಎಂಬ ಆಕರ್ಷಕವಾದ ಹೆಸರನ್ನು ಕೊಡುತ್ತಾರೆ. ಇದೊಂದು ಸುಂದರವಾದ ಹೆಸರು. ಪಾದುಕೆ ಕಿರೀಟ ಅಲ್ಲ. ಕಿರೀಟ ಪಾದುಕೆ ಅಲ್ಲ. ಆದರೆ ರಾಮನ ಪಾದುಕೆ ಭರತನ ಕಿರೀಟ. ಭರತನ ಕಿರೀಟ, ರಾಮನ ಪಾದುಕೆ. ಸರ್ವಸಮರ್ಪಣ ಭಾವದಿಂದ ರಾಮನ ಪಾದುಕೆಯನ್ನು ನೆತ್ತಿಯ ಮೇಲಿಟ್ಟುಕೊಳ್ಳುವವನು ಭರತ. ನೆತ್ತಿಯ ಮೇಲಿಟ್ಟುಕೊಳ್ಳಬೇಕಾದ ಅಧಿಕಾರ ಲಾಂಛನವಾದ ಕಿರೀಟವನ್ನು ಪಾದುಕೆಯಂತೆ ಕಾಣುವ ರಾಮ. ಇಲ್ಲಿ ಇಬ್ಬರದ್ದೂ ಭ್ರಾತೃ ಪ್ರೇಮ ಹಾಗೂ ತ್ಯಾಗದ ಮನೋಭಾವ ಎಂಬ ಅರಿವಾಗುತ್ತದೆ.  

ಭರತ ಅರಣ್ಯದಿಂದ ಹೊರಡುವಾಗ ರಾಮನಿಗೆ “ನಾನು ನಿನ್ನಂತೆ ಜಟಾವಲ್ಕಲಗಳನ್ನು ಧರಿಸಿ, ಅರಣ್ಯದಲ್ಲಿ ನೀನು ಹೇಗಿರುತ್ತಿಯೋ, ಹಾಗೆ ನಾನು ಇರುತ್ತೇನೆ. ಆದರೆ ಅಯೋಧ್ಯೆಯೊಳಗಲ್ಲ. ಹೊರಗಿನ ನಂದಿಗ್ರಾಮದಲ್ಲಿ ತಪಸ್ವಿಯಾಗಿ ಇರುತ್ತೇನೆ. ಅರಣ್ಯವಾಸಿಯಾಗಿ ಇರುತ್ತೇನೆ. 14 ವರ್ಷ ಕಳೆದರೂ ನೀನು ಬಾರದಿದ್ದರೆ, ನಾನು ಬದುಕುವುದಿಲ್ಲ” ಎಂದು ಹೇಳುತ್ತಾನೆ. ಆ ವೇಳೆ ರಾಮನೂ ಅನಿವಾರ್ಯವಾಗಿ ಒಪ್ಪಬೇಕಾಗುತ್ತದೆ. ಭರತ ಅರಣ್ಯದಿಂದ ಹೊರಡಲು ಸಿದ್ಧನಾಗುತ್ತಾನೆ.

ಭರತ ಮತ್ತೆ ಕಾಣಿಸಿಕೊಳ್ಳುವುದು 14 ವರ್ಷ ಪೂರ್ಣಗೊಳಿಸಿದ ನಂತರ. ರಾಮ ಲಂಕೆಯಿಂದ ಪುಷ್ಪಕ ವಿಮಾನವನ್ನೇರಿ ಬರುವಾಗ, ಭಾರದ್ವಜರ ಆಶ್ರಮದ ಬಳಿ ನಿಲ್ಲಬೇಕಾಗುತ್ತದೆ. ಆಗ ರಾಮ ಹನುಮಂತನಿಗೆ “ಭರತನನ್ನು ಒಮ್ಮೆ ನೋಡಿಕೊಂಡು ಬಾ. ಅವನ ಮನೋಧರ್ಮ ಹಿಂದಿನಂತಿದ್ದರೆ ನಾನು ಬರುತ್ತೇನೆ. ಇಲ್ಲದಿದ್ದರೆ ನಾನು ಬರುವುದಿಲ್ಲ.” ಎಂದು ಹೇಳುತ್ತಾನೆ. “ಏಕೆಂದರೆ ಅಧಿಕಾರದ ಪ್ರಾಪ್ತಿಯಿಂದ, ಮನಸ್ಸು ಬದಲಾಗಿದ್ದರೆ, ಅಣ್ಣನಿಗೆ ಅಧಿಕಾರ ಕೊಡಬೇಕೆಂಬ ಸಣ್ಣ ಸಂಕಟವಿದ್ದರೆ, ನಾನು ಬರುವುದಿಲ್ಲ” ಎನ್ನುತ್ತಾನೆ. ಗಮನಿಸಬೇಕಾದ ವಿಷಯವೆಂದರೆ ಭರತ ನಿಜವಾದ ಭರತ!. ರಾಮನ ಬರುವಿಕೆಗಾಗಿ ಕಾಯುತ್ತಿದ್ದನೆ ಹೊರತು, ಅಧಿಕಾರ ಉಳಿಸಿಕೊಳ್ಳುವ ಯೋಚನೆಯಲ್ಲಿರಲಿಲ್ಲ. ರಾಮ ಬರುವುದು ತಡವಾಗುತ್ತದೆ ಎಂದು ಯೋಚಿಸಿ, ಅಗ್ನಿ ಪ್ರವೇಶ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದ.

ಭರತನಿಗೆ, ಅರಣ್ಯದಿಂದ ರಾಮ ಬರುತ್ತಿದ್ದಾನೆಂಬ ವರ್ತಮಾನ ಬಂದಿತು. ಈ ಸನ್ನಿವೇಶವನ್ನು ರಾಮಾಯಣದ ಪೂರ್ಣ ಚಿತ್ರ ಎನ್ನಬಹುದು. ರಾಮ, ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಹನುಮಂತ ಪ್ರತಿಯೊಬ್ಬರಿದ್ದರು.  ಇಲ್ಲಿ ನಿಜ ಪಟ್ಟಾಭಿಷೇಕದ ರಾಮಚಂದ್ರನನ್ನು ನಾವು ಕಾಣಬಹುದು.

ಚಿತ್ರಕೂಟದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣನಿದ್ದ ವೇಳೆಯಲ್ಲಿ, ಭರತನು ಸೇನೆ ಹಾಗೂ ಪ್ರಜೆಗಳೆಲ್ಲರನ್ನು ಕೂಡಿಕೊಂಡು ರಾಮನನ್ನು ಕಾಣುವುದಕ್ಕೆ ಬರುತ್ತಿರುತ್ತಾನೆ. ಇದನ್ನು ಕಂಡ ಲಕ್ಷ್ಮಣನಿಗೆ ಆಶ್ಚರ್ಯವಾಗುತ್ತದೆ. ಆ ವೇಳೆ ರಾಮನಿಗೆ “ಅಣ್ಣ, ಭರತ ವಂಚನೆ ಉದ್ದೇಶವನ್ನಿಟ್ಟುಕೊಂಡು ಸೇನೆಯ ಜೊತೆಗೆ ಬರುತ್ತಿದ್ದಾನೆ. ನಮ್ಮನ್ನು ನಾಶ ಮಾಡಬಹುದು. ಹೀಗಾಗಿ ನಾನು ಅವನನ್ನು ಹೊಡೆಯುತ್ತೇನೆ” ಎಂದಾಗ ರಾಮ, “ಸುಮ್ಮನ್ನಿರೈ, ಭರತ ಬರುವ ಧರ್ಮವನ್ನು ಅರಿಯೆ ನೀನು. ಹೆಮ್ಮೆಗಾರನಲ್ಲ ಗುಣದಿ ನಮ್ಮ ಸಹಜನು” ಎನ್ನುತ್ತಾನೆ. ಇದು ಯಕ್ಷಗಾನ ಕವಿ ಪಾರ್ತಿಸುಬ್ಬ, ಅಂದವಾದ ಒಂದು ಚಿತ್ರಣವನ್ನು ಕೊಟ್ಟಿರುವುದು. ಅಂದರೆ, ಸುಮ್ಮನಿರು ಲಕ್ಷ್ಮಣ. ಭರತ ಬರುತ್ತಿರುವ ಧರ್ಮ ನಿನಗೆ ಗೊತ್ತಿಲ್ಲ. ಇಲ್ಲಿ ಧರ್ಮವೆಂದರೆ ಸ್ವಭಾವ.

ದೂರದಲ್ಲಿ ಭರತನನ್ನು ಕಂಡ ರಾಮ, ಲಕ್ಷ್ಮಣನಿಗೆ “ಭರತನಿಗೆ ರಾಜ್ಯದ ಮೋಹವಿದ್ದರೂ, ಅದು ತಪ್ಪಲ್ಲ. ಒಂದು ವೇಳೆ ನಿನಗೆ ಅನ್ನಿಸಿದ ಹಾಗೆ, ಭರತನಿಗೆ ರಾಜ್ಯದ ಮೋಹ ಬಂದರೂ ತಪ್ಪಲ್ಲ. ಏಕೆಂದರೆ ಭರತ ಯಾರೆಂದು ತಿಳಿದಿರುವೇ? ಹೆಮ್ಮೆಗಾರನಲ್ಲ, ರಾಜ್ಯ ತನ್ನದು ಎಂದು ಭಾವಿಸುವವನಲ್ಲ. ಗರ್ವಿಷ್ಠನಲ್ಲ ನಮ್ಮ ಸಹಜನು. ಅವನು ನನ್ನ ಸೋದರ.. ನಾನು ವನವಾಸಕ್ಕೆ ಬರುವಾಗ, ನೀನು ನನ್ನೊಡನೆ ಬಂದೆಯಲ್ಲವೆ. ಆ ಭಾವದಿಂದ ಭರತನನ್ನು ನೋಡು. ನಮ್ಮ ಸಹಜನು ಭರತ. ನಮಗೆ ಮೋಸ ಮಾಡಲು ಬರುತ್ತಿದ್ದಾನೆ ಎಂದು ಯೋಚಿಸಬೇಡ. ಅವನು ನಮ್ಮ ಜೊತೆಯಾಗಿ ಹುಟ್ಟಿದವನು. ನಮ್ಮ ಹಾಗೆ ಇರತಕ್ಕವನು” ಎಂದು ಹೇಳುತ್ತಾನೆ. ಇವು ಭರತನ ವ್ಯಕ್ತಿತ್ವದ ಬಗ್ಗೆ ರಾಮನ ವಾಕ್ಯದಲ್ಲಿ ಸಿಗುವ ಚಿತ್ರಣ, ಅರ್ಥಪೂರ್ಣ ಹಾಗೂ ಸ್ವಯಂ ಪೂರ್ಣ.

-ರಾಧಾಕೃಷ್ಣ ಕಲ್ಚಾರ್ ವಿಟ್ಲ

0 Comments

Submit a Comment

Your email address will not be published. Required fields are marked *

Related Articles

Related

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ಯಾವ ಮಗನ ಅಭ್ಯುದಯಕ್ಕಾಗಿ ಕೈಕೇಯಿ ವರವನ್ನು ವಿನಿಯೋಗಿಸಿದ್ದಳೋ, ಆ ಅಭ್ಯುದಯದ ಸಂತೋಷ ಭರತನಿಗೂ ಆಗಲಿಲ್ಲ ಹಾಗೂ ಇದರ ಆನಂದವನ್ನು ತಾಯಿಯೂ ಅನುಭವಿಸಲಿಲ್ಲ. ಇಲ್ಲಿ ವರಗಳೇ ವಿಚಿತ್ರವಾಯಿತು. ಪ್ರಾಣ ಉಳಿಸಬೇಕಾಗಿದ್ದ ವರವನ್ನು ವಿನಿಯೋಗಿಸಿ, ಪ್ರಾಣವನ್ನು ತೆಗೆಯಬೇಕಾಯಿತು. ಸಂತೋಷ ಕೊಡಬೇಕಾಗಿದ್ದಕ್ಕಾಗಿ ವಿನಿಯೋಗಿಸಿದ್ದು, ದುಃಖಕ್ಕೆ ಕಾರಣವಾಯಿತು.

read more
ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಧೃತರಾಷ್ಟ್ರ ಕುರುಡನಾದರೂ ಬುದ್ಧಿ ಹೀನನಲ್ಲ. ಮಾತ್ರವಲ್ಲದೇ, ಧೃತರಾಷ್ಟ್ರವೆಂದರೆ, ರಾಷ್ಟ್ರವನ್ನು ಎತ್ತಿಹಿಡಿಯುವವನು ಎಂಬರ್ಥ ಬರುತ್ತದೆ. ದುರದೃಷ್ಟವಶಾತ್, ಈತನ ಮಕ್ಕಳು ಕೂಡ ರಾಷ್ಟ್ರವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಲಿಲ್ಲ. ಸ್ವತಃ ಧೃತರಾಷ್ಟ್ರನಿಗೂ ಆ ಕೆಲಸ ಮಾಡಲಾಗಲಿಲ್ಲ. ಆದರೆ ಈತನ ಬುದ್ಧಿವಂತಿಕೆ ಬಳಕೆಗೆ ಬಂದದ್ದು, ತನ್ನ ಮಕ್ಕಳ ಅಭ್ಯುದಯಕ್ಕೆ ಹಾಗೂ ಅವರ ಪ್ರಯೋಜನಕ್ಕೆ ಮಾತ್ರ.

read more
ಪರಾಕ್ರಮಿ ಪಾಂಡುವಿನ ಅರಣ್ಯರೋಧನ

ಪರಾಕ್ರಮಿ ಪಾಂಡುವಿನ ಅರಣ್ಯರೋಧನ

ಸಿಂಹಾಸನದ ಉತ್ತರಾಧಿಕಾರಿಗಾಗಿ ನಡೆದ ನಿಯೋಗದಲ್ಲಿ, ಕುರುಡನಾದ ಧೃತರಾಷ್ಟ್ರ ಅಂಗವಿಕಲತೆಯ ಕಾರಣಕ್ಕಾಗಿ ಅರ್ಹನಾಗಲಿಲ್ಲ. ಪಾಂಡು ತನ್ನ ಬಣ್ಣದ ಕಾರಣಕ್ಕೆ ಪೂರ್ಣ ಅರ್ಹನಲ್ಲವೆಂದು ನಿರ್ಧರಿಸಲಾಯಿತು. ಅನಂತರ ಜನಿಸಿದ ವಿದುರನು ದಾಸಿ ಪುತ್ರನೆಂದು ಅಧಿಕಾರ ಸಿಗಲಿಲ್ಲ. ಹೀಗಾಗಿ ಉತ್ತಮ ಅರ್ಹತೆಯಿಲ್ಲದೆ, ಮಧ್ಯಮ ಅರ್ಹತೆ ಹೊಂದಿರುವನು ಎಂಬ ಕಾರಣಕ್ಕೆ ಪಾಂಡು ಸಿಂಹಾಸನದ ಒಡೆಯನಾದ.

read more