ಪಾಂಡು, ಮಹಾಭಾರತದ ಪ್ರಾರಂಭಿಕ ಹಂತದಲ್ಲಿ ಬರುವ ಪಾತ್ರಗಳಲ್ಲೊಂದು. ಈತ, ಚಂದ್ರವಂಶದ ರಾಜಕುಮಾರ ಹಾಗೂ ಐವರು ಪಾಂಡವರ ತಂದೆ. ಈತನ ಹಿನ್ನಲೆಯಲ್ಲಿ ಸ್ವಾರಸ್ಯವಾದ ಸಂಗತಿಗಳಿವೆ. ಪಾಂಡು ಎಂದರೆ ಬಿಳಿಚು ಅಥವಾ ಬೆಳ್ಳಗಿನ ಬಣ್ಣದವನು. ಅಂದರೆ ಕೂದಲು ಸೇರಿದಂತೆ ಸರ್ವಾಂಗವೂ ಬೆಳ್ಳಗಿತ್ತು. ಈ ರೀತಿಯಾಗಿದ್ದು ಏಕೆಂದರೆ, ಪಾಂಡುವಿನ ತಾಯಿ ಅಂಬಾಲಿಕೆ, ವೇದವ್ಯಾಸರನ್ನು ನಿಯೋಗದ ಕಾರಣಕ್ಕೆ ಸಮೀಪಿಸುವಾಗ ಭಯಗೊಳ್ಳುತ್ತಾಳೆ. ಪ್ರತಿನಿತ್ಯ ರಾಜವಂಶಸ್ಥರನ್ನು ಹಾಗೂ ಸುಂದರ ಪುರುಷರನ್ನು ನೋಡುತ್ತಿದ್ದವಳು, ಆ ದಿನ ವೇದವ್ಯಾಸರ ಜಡೆ, ಕೆಂಪು ಕಣ್ಣು ಹಾಗೂ ವಿಚಿತ್ರ ದೇಹವನ್ನು ನೋಡಿ ಹೆದರಿದ್ದಳು. ಈ ಕಾರಣದಿಂದ ಆಕೆಯ ದೇಹ ಬಿಳಿಚಿಕೊಂಡಿದ್ದರಿಂದ, ಮಗ ಕೂಡ ಬೆಳ್ಳಗೆ, ರೋಗಿಯಾಗಿ ಜನಿಸಿದನೆಂದು ಪುರಾಣದಲ್ಲಿ ಹೇಳಲಾಗಿದೆ. ಪಾಂಡು, ಬೆಳ್ಳಗಿನ ದೇಹ ಹೊಂದಿದ್ದರೂ, ರೋಗಿಯಾಗಿರಲಿಲ್ಲ ಪರಾಕ್ರಮಿಯಾಗಿದ್ದ.
ಸಿಂಹಾಸನದ ಉತ್ತರಾಧಿಕಾರಿಗಾಗಿ ನಡೆದ ನಿಯೋಗದಲ್ಲಿ, ಕುರುಡನಾದ ಧೃತರಾಷ್ಟ್ರ ಅಂಗವಿಕಲತೆಯ ಕಾರಣಕ್ಕಾಗಿ ಅರ್ಹನಾಗಲಿಲ್ಲ. ಪಾಂಡು ತನ್ನ ಬಣ್ಣದ ಕಾರಣಕ್ಕೆ ಪೂರ್ಣ ಅರ್ಹನಲ್ಲವೆಂದು ನಿರ್ಧರಿಸಲಾಯಿತು. ಅನಂತರ ಜನಿಸಿದ ವಿದುರನು ದಾಸಿ ಪುತ್ರನೆಂದು ಅಧಿಕಾರ ಸಿಗಲಿಲ್ಲ. ಹೀಗಾಗಿ ಉತ್ತಮ ಅರ್ಹತೆಯಿಲ್ಲದೆ, ಮಧ್ಯಮ ಅರ್ಹತೆ ಹೊಂದಿರುವನು ಎಂಬ ಕಾರಣಕ್ಕೆ ಪಾಂಡು ಸಿಂಹಾಸನದ ಒಡೆಯನಾದ.
ಹಸ್ತಿನಾವತಿಯ ಚಕ್ರವರ್ತಿಯಾದ ನಂತರ ಪಾಂಡುವಿನ ವಿವಾಹ ನೆರವೇರುತ್ತದೆ. ಈತನ ಪತ್ನಿಯರಲ್ಲಿ ಒಬ್ಬಳು ಕುಂತಿ ಭೋಜನ ಸಾಕು ಮಗಳು ಕುಂತಿ ಅಥವಾ ಪೃಥೆ. ಇವಳು ಯಾದವರ ಶೂರ ರಾಜನ ಮಗಳು. ಮತ್ತೊಬ್ಬಳು ಮದ್ರಾ ದೇಶದ ಮಾದ್ರಿ. ಈಕೆ ಶಲ್ಯನ ತಂಗಿ. ಹೀಗೆ ವಿವಾಹವಾದ ನಂತರ ಪಾಂಡು ರಾಜ್ಯವನ್ನಾಳುತ್ತಾ, ದಿಗ್ವಿಜಯವನ್ನು ಸಾಧಿಸಿದ್ದ. ಚಕ್ರವತ್ರಿಯಾಗಿ ರಾಜ್ಯಭಾರ ನಡೆಸಿದ. ಇದಾದ ನಂತರ ಪಾಂಡುವಿನ ಜೀವನದಲ್ಲಿ ದುರಂತವೊಂದು ನಡೆಯಿತು. ಒಮ್ಮೆ ಬೇಟೆಗೆ ಹೋಗುವಾಗ, ಅರಣ್ಯದಲ್ಲಿ ಎರಡು ಜಿಂಕೆಗಳು ವಿಲಾಸದಲ್ಲಿದ್ದ ಸಂದರ್ಭದಲ್ಲಿ, ಪಾಂಡು ಬಾಣ ಹೊಡೆದನು. ಜಿಂಕೆಗಳು ಸಾಯುವ ಮಟ್ಟಕ್ಕೆ ತಲುಪಿದವು. ಆದರೆ ನಿಜವಾಗಿ ಪ್ರಾಣಬಿಟ್ಟಿದ್ದು ಮುನಿದಂಪತಿಗಳು. ಇದನ್ನು ನೋಡಿದ ಪಾಂಡು ಆಶ್ಚರ್ಯಗೊಂಡು, “ಏಕೆ ಹೀಗಾಯಿತು?” ಎಂದು ಚಿಂತಿಸಿದ.
ಕಿಂದಮ ಎನ್ನುವ ಋಷಿ, ತನ್ನ ಪತ್ನಿಯೊಂದಿಗೆ ಕೂಡಲು, ನಿಜವಾದ ರೂಪದಲ್ಲಿ ನಾಚಿಕೆಯಾಗಿ, ಜಿಂಕೆಯ ರೂಪದಲ್ಲಿ ವಿಲಾಸದಲ್ಲಿ ಮಗ್ನನಾಗಿದ್ದ. ಈ ಸಂದರ್ಭದಲ್ಲಿ ಪಾಂಡುವಿನ ಬಾಣ ಋಷಿಗೆ ಘಾತಿಸಿತು. ಇದರಿಂದ ಕೋಪಗೊಂಡ ಕಿಂದಮ ಋಷಿ, ಪಾಂಡುವಿಗೆ “ನೀನು ನಮ್ಮನ್ನು ಹೀಗೆ ಘಾತಿಸಿದ್ದು ದೊಡ್ಡ ಪಾತಕ. ಮುಂದೆ ನೀನು ನಿನ್ನ ಪತ್ನಿಯನ್ನು ಕೂಡಿದಾಗ ನಿನಗೆ ಮರಣ ಬರಲಿ” ಎಂದು ಶಾಪ ಕೊಟ್ಟನು. ಆಗ ಪಾಂಡು “ನಾನು ಉದ್ದೇಶಪೂರ್ವಕವಾಗಿ ಬಾಣ ಹೊಡೆಯಲಿಲ್ಲ. ಅಲ್ಲದೇ, ನೀವು ಹೀಗೆ ಇರುತ್ತೀರಿ ಎಂದೂ ನನಗೆ ಗೊತ್ತಿರಲಿಲ್ಲ” ಎಂದಾಗ ಋಷಿ “ನಿನಗೆ ಬ್ರಹ್ಮಹತ್ಯೆ ದೋಷ ಬರುವುದಿಲ್ಲ. ಏಕೆಂದರೆ ನೀನು ತಿಳಿಯದೆ ಮಾಡಿರುವೆ ! ಆದರೂ ನೀನು ಮಾಡಿರುವುದು ತಪ್ಪು. ವಿಲಾಸದಲ್ಲಿರುವ ಯಾವ ಪ್ರಾಣಿಗಳನ್ನೂ ಕೊಲ್ಲಬಾರದು. ಆದ್ದರಿಂದ ಈ ನನ್ನ ಶಾಪ” ಎಂದು ಕೋಪೋದ್ರಿಕ್ತನಾಗುತ್ತಾನೆ. ಇದು ಪಾಂಡುವಿನ ಜೀವನದಲ್ಲೊಂದು ಭಾಷ್ಯವನ್ನೇ ಬರೆಯಿತು ಎನ್ನಬಹುದು.
ಪಾಂಡುವಿನ ಬದುಕಿನಲ್ಲಿ ಸುಂದರವಾದ ಪತ್ನಿಯರಿದ್ದರೂ, ಅವರೊಂದಿಗೆ ಸೇರುವಂತಿರಲಿಲ್ಲ. ಕಿಂದಮ ಋಷಿ ಶಾಪದಿಂದ ಪಾಂಡು ವಿರಕ್ತನಾಗುತ್ತಾನೆ. ತನ್ನ ಸಾಮ್ರಾಜ್ಯವನ್ನು ಬಿಟ್ಟು, ಅರಣ್ಯಕ್ಕೆ ತೆರಳುತ್ತಾನೆ. ಹೊರಡುವ ವೇಳೆಯಲ್ಲಿ ಈತನ ಪತ್ನಿಯರು ಕೂಡ “ನಾವು ನಿಮ್ಮ ಜೊತೆಯಲ್ಲಿ ಬರುತ್ತೇವೆ” ಎಂದು ಹೇಳಿದಾಗ ಸಮ್ಮತಿಸುತ್ತಾನೆ. ಪಾಂಡು ತನ್ನ ಜೀವಿತಾವಧಿಯ ಕೊನೆಯ ದಿನಗಳನ್ನು ಅರಣ್ಯದಲ್ಲಿ ಕಳೆಯಬೇಕೆಂಬ ಉದ್ದೇಶವನ್ನಿಟ್ಟುಕೊಂಡಿದ್ದನು.
ಅರಣ್ಯದಲ್ಲಿ ವಾಸ ಮಾಡುತ್ತಿರುವಾಗ ಪಾಂಡು ಋಷಿಗಳ ಗುಂಪೊಂದನ್ನು ಕಾಣುತ್ತಾನೆ. “ನೀವು ಎಲ್ಲಿಗೆ ಹೊರಟಿದ್ದೀರಿ?” ಎಂದಾಗ ಋಷಿಗಳು “ದೇವಲೋಕಕ್ಕೆ ಹೊರಟಿದ್ದೇವೆ” ಎನ್ನುತ್ತಾರೆ. “ನಾನೂ ನಿಮ್ಮೊಂದಿಗೆ ದೇವಲೋಕಕ್ಕೆ ಬರುತ್ತೇನೆ ಕರೆದೊಯ್ಯಿರಿ” ಎಂದಾಗ “ಆಗುವುದಿಲ್ಲ, ನಿನಗೆ ಸಂತಾನವಿಲ್ಲ. ಅನರ್ಹ ನೀನು. ಹೀಗಾಗಿ ಬರುವಂತಿಲ್ಲ” ಎನ್ನುತ್ತಾರೆ ಋಷಿಗಳು. ಇದನ್ನು ಕೇಳಿದ ಪಾಂಡು, ಖಿನ್ನತೆಗೆ ಒಳಗಾಗುತ್ತಾನೆ. ಸಂತಾನ ಪಡೆಯುವ ಮಾರ್ಗ ಮುಚ್ಚಿದ್ದರಿಂದ, ದೇವಲೋಕದ ಮಾರ್ಗವೂ ಮುಚ್ಚುತ್ತದೆ ಎಂದು ಪಾಂಡು ಚಿಂತಿತನಾಗುತ್ತಾನೆ.
ತನ್ನ ಪತಿಯ ಮನಸ್ಸನ್ನರಿತ ಕುಂತಿ, “ನನ್ನಲ್ಲಿ ದೂರ್ವಾಸ ಮುನಿಯರಿಂದ ಪಡೆದ ವಿಶೇಷವಾದ ಮಂತ್ರ ಸಿದ್ಧಿಯಿದೆ” ಎಂದು ಹೇಳುತ್ತಾಳೆ. ಈ ಮಂತ್ರವನ್ನು ಪಠಿಸುತ್ತಾ ಯಾವ ದೇವತೆಯನ್ನು ನೆನೆಯುವಳೋ, ಆ ದೇವಾಂಶ ಹೊಂದಿರುವ ಮಗು ಹುಟ್ಟುವುದು. ಈ ವರವು ಕುಂತಿಗೆ ಪ್ರಾಪ್ತಿಯಾಗಿದ್ದು, ಕುಂತಿ ಭೋಜನನ ಅರಮನೆಯಲ್ಲಿ ಈಕೆ ಬೆಳೆಯುತ್ತಿರುವಾಗ. ಒಮ್ಮೆ ಅರಮನೆಗೆ ದೂರ್ವಾಸ ಮುನಿಯು ಬಂದಾಗ ಕುಂತಿ ಭೋಜನು ಭಯಪಡುತ್ತಾನೆ. ಏಕೆಂದರೆ ಮುನಿಯು ಬಹಳ ಕೋಪಿಷ್ಟ. ಇವರ ಸೇವೆಗೆ ಯಾರನ್ನು ನಿಯೋಜನೆ ಮಾಡಬೇಕು ಎಂಬ ಪ್ರಶ್ನೆ ಆತನಿಗೆ ಕಾಡುತ್ತದೆ. ಕೊನೆಗೆ ಸಣ್ಣವಳಾಗಿದ್ದ ಕುಂತಿಯನ್ನು, ಮುನಿಯ ಸೇವೆಗಾಗಿ ನಿಯೋಜಿಸಿದ. ಮಗು ತಪ್ಪು ಮಾಡಿದರೆ ಋಷಿಯು ಕೋಪಿಸಿಕೊಳ್ಳುವುದಿಲ್ಲ ಎನ್ನುವ ಭರವಸೆಯಿಂದ ಈ ಕಾರ್ಯ ಮಾಡಿದ್ದನು. ಅನಂತರ ಕುಂತಿಯ ಪರಿಚರ್ಯೆಯಿಂದ ದೂರ್ವಾಸ ಮುನಿಗೆ ಬಹಳ ಸಂತೋಷವಾಗುತ್ತದೆ. ಈ ವೇಳೆ “ತೆಗೆದುಕೋ ಮಗಳೇ” ಎಂದು ಮಂತ್ರೋಪದೇಶ ಮಾಡುತ್ತಾರೆ. ಇಷ್ಟು ಸಣ್ಣ ವಯಸ್ಸಿನ ಮಗುವಿಗೆ ಮಂತ್ರೋಪದೇಶ ಮಾಡಬೇಕೋ ಅಥವಾ ಬೇಡವೋ ಎನ್ನುವುದು ಬೇರೆಯ ಚರ್ಚೆ.
ಕುಂತಿಯು ಮುನಿಯ ಮಂತ್ರೋಪದೇಶದಿಂದ ಸಂತಾನವನ್ನು ಪಡೆಯುವ ಸಂಗತಿಯನ್ನು ಪಾಂಡುವಿನಲ್ಲಿ ಹೇಳಿದಳು. ಅನಂತರ ಯಮನನ್ನು ಆರಾಧಿಸಿ ಧರ್ಮರಾಯನನ್ನು ಪಡೆದಳು. ಆದರೆ ಧರ್ಮವೊಂದಿದ್ದರೆ, ಜೀವನ ದುರ್ಬಲವಾಗುತ್ತದೆ ಎಂದು ಚಿಂತಿಸಿದ ಕುಂತಿ, ಪರಾಕ್ರಮಿ ಬೇಕೆಂದು ಬಯಸಿದಳು. ಆಗ ಬಲಿಷ್ಠನಾಗಿದ್ದ ವಾಯುದೇವನನ್ನು ಆರಾಧಿಸಿ, ಭೀಮಸೇನನ್ನು ಪಡೆದಳು. ಧರ್ಮ ಮತ್ತು ಪರಾಕ್ರಮವೆರಡೂ ಇರಬೇಕೆಂದು, ಇಂದ್ರಾಂಶದಿಂದ ಅರ್ಜುನ ಜನಿಸಿದ. ಈ ಮೂರು ಮಕ್ಕಳು ಹುಟ್ಟಿದರೂ, ಪಾಂಡುವಿಗೆ ಸಮಾಧಾನವಾಗಲಿಲ್ಲ. ಅನಂತರ ಕುಂತಿ ಮಾದ್ರಿಗೆ ಉಪದೇಶ ಮಾಡಿದಳು. ಅಶ್ವಿನಿ ದೇವತೆಗಳ ಅನುಗ್ರಹದಿಂದ ನಕುಲ ಮತ್ತು ಸಹದೇವ ಎಂಬ ಇಬ್ಬರು ಮಕ್ಕಳನ್ನು ಪಡೆಯಲಾಯಿತು. ಈ ಐವರು ಜನಿಸಿದ್ದರಿಂದ ಪಾಂಡು, ತೃಪ್ತಿ ಹಂತವನ್ನು ಮುಟ್ಟಿದ.
ಮಕ್ಕಳು ಬೆಳೆಯುತ್ತಿರುವಾಗ ಒಂದು ದಿನ ಪಾಂಡು, ಮಾದ್ರಿಯ ಜೊತೆ ಕೂಡುವುದಕ್ಕೆ ಮುಂದಾಗುತ್ತಾನೆ. ಆದರೆ ಮುನಿಯ ಶಾಪದಿಂದ ಪಾಂಡು ಮರಣ ಹೊಂದುತ್ತಾನೆ. ಒಂದರ್ಥದಲ್ಲಿ ಪಾಂಡು, ತನಗೊದಗಿದ ಶಾಪವನ್ನು ವರವಾಗಿ ಬಳಸಿಕೊಂಡ ಎಂದೆನಿಸುತ್ತದೆ. ಅಂದರೆ ಪತ್ನಿಯನ್ನು ಕೂಡುವುದಕ್ಕೆ ಧಾರ್ಮಿಕ ಕಾರಣಗಳಿರಲಿಲ್ಲ. ಆದರೆ ದೈಹಿಕ ಸುಖವನ್ನು ಬಯಸಿದನೇ? ಪ್ರಾಣ ಹೋಗುವ ವಿಷಯ ಗೊತ್ತಿದ್ದರೂ, ದೈಹಿಕ ಸುಖದ ಅನುಭವ ಹೇಗಾಗುತ್ತದೆ? ಪಾಂಡು ಉದ್ದೇಶಪೂರ್ವಕವಾಗಿಯೇ, ತನ್ನ ದೇಹಾಂತ್ಯವನ್ನು ಮಾಡಿಕೊಳ್ಳುವುದಕ್ಕೆ ಒಂದು ಪ್ರಯತ್ನವನ್ನು ಮಾಡಿದ ಎಂಬುದನ್ನ ನಾವು ಗಮನಿಸಬೇಕು. ಹೀಗಾಗಿ ಇದನ್ನು ಶಾಪ ಎಂದು ಹೇಳಲಾಗದು.
ಈ ರೀತಿಯಾಗಿ ಪಾಂಡು ಎಂಬ ವ್ಯಕ್ತಿತ್ವ, ಚಕ್ರವರ್ತಿಯಾಗಿ ಹಸ್ತಿನಾವತಿಯನ್ನು ಆಳಬೇಕಾದವನು, ವಿರಕ್ತನಾಗಿ ಮಕ್ಕಳನ್ನು ಪಡೆದ. ಅನಂತರ ಪ್ರಾಣಬಿಟ್ಟ. ಆದರೆ ಪಾಂಡುವಿನ ಉತ್ತರಾಧಿಕಾರಿಗಳಾದ ಪಾಂಡವರು, ಲೋಕ ಮೆಚ್ಚುವ ಕೀರ್ತಿಯನ್ನು ಸಂಪಾದಿಸಿದರು. ಹೆಮ್ಮ ಪಡುವಂತಹ ಸಾಧನೆ ಮಾಡಿದರು.
ಪಾಂಡು ಮರಣ ಹೊಂದಿದ ನಂತರ, ಸ್ವರ್ಗದಲ್ಲಿ ಘನತೆಯ ಸ್ಥಾನಮಾನ ಲಭಿಸಲಿಲ್ಲ ಎನ್ನುವ ಕೊರತೆ ಎದುರಾಯಿತು. ಇಂದ್ರ ಸಭೆಯಲ್ಲಿ ಪೂರ್ವ ಮಹಾರಾಜರು ಕುಳಿತುಕೊಳ್ಳುವ ಸ್ಥಳದಲ್ಲಿ ಪಾಂಡುವಿಗೆ ಜಾಗ ಸಿಗಲಿಲ್ಲ. ನಾರದರು ಈ ಸನ್ನಿವೇಶವನ್ನು ನೋಡಿ, ಧರ್ಮರಾಯನಲ್ಲಿಗೆ ಬಂದು “ನೋಡಪ್ಪ ನಿಮ್ಮ ತಂದೆ ಸ್ವರ್ಗದಲ್ಲಿ ಸ್ಥಾನಹೀನನಾಗಿದ್ದಾನೆ. ಅದನ್ನು ಪಡೆಯಬೇಕಾದರೆ, ನೀವು ರಾಜಸೂಯ ಯಜ್ಞವನ್ನು ಮಾಡಬೇಕು” ಎಂದು ಹೇಳುತ್ತಾನೆ. ಅಂತೆಯೇ ಪಾಂಡವರು ಈ ಯಾಗವನ್ನು ಮಾಡಿ ಪ್ರಸಿದ್ಧಿಗಳಿಸುತ್ತಾರೆ. ಧರ್ಮರಾಯ, ಚಕ್ರವರ್ತಿ ಎನಿಸಿಕೊಂಡ. ಸ್ವರ್ಗದಲ್ಲಿ ಪಾಂಡುವಿಗೂ ಸುಸ್ಥಿತಿ ಬಂದಿತು ಎಂದು ಪುರಾಣದಲ್ಲಿ ಹೇಳಲಾಗಿದೆ.
ಹೀಗೆ ಬೇರೆ ಬೇರೆ ನೆಲೆಗಳಿಂದ ಪಾಂಡುವಿನ ಜೀವನಾವಲೋಕವನ್ನು ಗಮನಿಸಿದರೆ ವಿಶಿಷ್ಟತೆ ಕಾಣುತ್ತದೆ. ಅಂದರೆ ವಂಶವನ್ನು ಬೆಳೆಸಬೇಕೆನ್ನುವ ಹಂಬಲವಿರುವವನಿಗೆ, ಸಂತಾನವೇ ಪರಮಗುರಿಯಾಗಿರುತ್ತದೆ. ಮಕ್ಕಳಾದ ನಂತರ ಆ ವ್ಯಕ್ತಿ ಬದುಕಬೇಕಾಗಿರುವುದಿಲ್ಲ. ಈ ನೆಲೆಯಿಂದ ನೋಡಿದಾಗ ಪಾಂಡವರು ಅಥವಾ ಇಡೀ ಮಹಾಭಾರತದಲ್ಲಿ ಅನೇಕರ ಹುಟ್ಟು, ಸಾವು, ಜೀವನ ಮತ್ತು ಸಾಧನೆ ಎಲ್ಲವೂ ಪೂರ್ವಕಲ್ಪಿತ ಸೂತ್ರಗಳಿಂದ ನಿರ್ದೇಶಿತವಾದಂತೆ ಕಾಣುತ್ತದೆ. ಅಲ್ಲದೇ ಅವರೇ ಸ್ವಯಂ ಪ್ರಯತ್ನಿಸಿದಂತೆಯೂ ಕಾಣುವುದು ಆಶ್ಚರ್ಯ. ಪಾಂಡುವಿನ ಮರಣ, ಪೂರ್ವ ನಿರ್ಧರಿತವೋ? ಅಥವಾ ಪೂರ್ವ ಸೂತ್ರಕ್ಕೆ ಆಧರಿತವೋ? ಅಥವಾ ಸ್ವಯಂ ನಿರ್ಣಯಿಸಿ, ಆತನೇ ಮಾಡಿಕೊಂಡನೋ? ಅಂದರೆ ಬೇಟೆಯ ಮೃಗವಾಗಿ ಹೊಡೆದವನು, ತಾನೇ ಒಂದು ಕಾಮನೆಯ ಬೇಟೆಯ ಮೃಗವಾಗಿ ಪ್ರಾಣಬಿಟ್ಟನೋ? ಅಥವಾ ತಾನೇ ಬೇಕಂತಲೇ ತನ್ನ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಂಡನೋ? ಎಂಬುದು, ಪಾಂಡುವಿನ ಜೀವನದಲ್ಲಿ ಪ್ರಶ್ನೆಯಾಗಿಯೇ ಉಳಿಯುತ್ತದೆ.
-ರಾಧಾಕೃಷ್ಣ ಕಲ್ಚಾರ್ ವಿಟ್ಲ
0 Comments