ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ಕೈಕೇಯಿಯು ದಶರಥನ ಮೂರನೇ ಮಡದಿ, ರಾಮನ ವನವಾಸಕ್ಕೆ ಕಾರಣಳಾದವಳು ಹಾಗೂ ಭರತನ ತಾಯಿ. ಈಕೆಯ ಪಾತ್ರವು ಒಟ್ಟು ರಾಮಾಯಣದ ಮತ್ತು ರಾಮನ ವ್ಯಕ್ತಿತ್ವ ವಿಕಾಸದಲ್ಲಿ, ಹೇಗೆಲ್ಲಾ ಪ್ರಧಾನ ಭಾಗವನ್ನು ವಹಿಸಿತ್ತು ಎಂಬುದನ್ನು ಗಮನಿಸಬೇಕು. ಕೈಕೇಯಿ ಹುಟ್ಟಿದ್ದು ಕೈಕೇಯ ಎಂಬ ದೇಶದಲ್ಲಿ. ಈಕೆಯ ತಂದೆ ಅಶ್ವಪತಿ. ಒಂದು ಕಾಲದಲ್ಲಿ ದಶರಥನು ಅಶ್ವಪತಿಗೆ, “ಕೈಕೇಯಿ ಹೊಟ್ಟೆಯಲ್ಲಿ ಜನಿಸಿದ ಮಗನಿಗೆ ಸಿಂಹಾಸನದ ಅಧಿಕಾರವನ್ನು ಕೊಡುತ್ತೇನೆ” ಎಂಬ ಮಾತನ್ನು ಕೊಟ್ಟಿದ್ದ. ಆದರೆ ಕೈಕೇಯಿ ಈ ವರವನ್ನು ಬಳಸಿಕೊಂಡಳೇ? ಎಂದು ಪ್ರಶ್ನಿಸಿದರೆ, ಈಕೆ ಬಳಸಿಕೊಳ್ಳಲಿಲ್ಲ. ಏಕೆಂದರೆ ಇಬ್ಬರಿಗೂ ವಯಸ್ಸಾಗಿತ್ತು. ದಶರಥ ತನ್ನ ತೀರಾ ವೃದ್ಧಾಪ್ಯದಲ್ಲಿ ಪುತ್ರಕಾಮೇಷ್ಟಿ ಯಾಗದ ಮೂಲಕ ಮಕ್ಕಳನ್ನು ಪಡೆದ.

ಕೈಕೇಯಿ, ಭರತನಿಗೆ ಪಟ್ಟಾಭಿಷೇಕ ಮಾಡುವ ಮತ್ತು ರಾಮನನ್ನು ವನವಾಸಕ್ಕೆ ಕಳುಹಿಸುವ ಎರಡು ವರಗಳನ್ನು ಕೇಳಿದಳು. ಈ ವರಗಳಿಗೆ ಹಿನ್ನಲೆಯಾಗಿ, ರಾಮಾಯಣದ ಪೂರ್ವದಲ್ಲಿ, ದಶರಥ ಒಂದು ಬದ್ಧತೆಗೆ ಒಳಗಾಗಿ ಕೈಕೇಯಿಗೆ ಈ ವರಗಳನ್ನು ಕೊಡುತ್ತಾನೆ. ಈ ವರಗಳ ಸ್ವಾರಸ್ಯವೆಂದರೆ, ಕೈಕೇಯಿ ದಶರಥನ ಜೊತೆಯಲ್ಲಿ ದೇವಲೋಕಕ್ಕೆ ಹೋಗುತ್ತಾಳೆ. ತಿಮಿಧ್ವಜ ಅಥವಾ ಶಂಬರನೆಂಬ ರಾಕ್ಷಸನನ್ನು ಕೊಂದು, ದೇವತೆಗಳಿಗೆ ಸಹಾಯ ಮಾಡಬೇಕೆಂದು ಇವರಿಬ್ಬರೂ ಹೋಗುತ್ತಾರೆ. ಆ ಕಾಲದಲ್ಲಿ ದಶರಥ ಪರಾಕ್ರಮಿಯಾಗಿದ್ದ. ಮೊದಲೇ ರಾಕ್ಷಸರು ಮಾಯಾವಿಗಳು. ಯುದ್ಧ ಮಾಡುವಾಗ ಶಂಬ ರಾಕ್ಷಸ, ತಾನು ಹತ್ತಾರು ರೂಪ ಧರಿಸಿ, ಹತ್ತು ದಿಕ್ಕುಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ದಶರಥ ಹತ್ತೂ ದಿಕ್ಕುಗಳಲ್ಲಿ ತನ್ನ ರಥವನ್ನು ನಡೆಸಿ ರಾಕ್ಷಸನನ್ನು ಎದುರಿಸುತ್ತಾನೆ. ಹೀಗಾಗಿ ಅವನಿಗೆ ದಶರಥ ಎನ್ನುವುದು ಅನ್ವರ್ಥನಾಮವಾಗಿ ಬಂದಿತೆಂಬ ಗ್ರಹಿಕೆಯಿದೆ.

ಕೆಲವು ಕಥೆಗಳಲ್ಲಿ ಈತನಿಗೆ ದಶರಥ ಎಂಬ ಹೆಸರು ಬರುವುದಕ್ಕಿಂದ ಮುಂಚೆ ನೇಮಿ ಎಂಬ ಹೆಸರಿತ್ತು, ಯುದ್ಧದ ನಂತರ ದಶರಥ ಎಂಬ ಪ್ರಸಿದ್ಧಿ ಬಂದಿತು ಎಂದು ಹೇಳಲಾಗುತ್ತದೆ. ಮತ್ತೊಂದು ಕಡೆ ದಶರಥ ಎಂಬ ನಾಮಕಿಂತವಿತ್ತು, ಯುದ್ಧದಿಂದ ಅದನ್ನು ಸಾರ್ಥಕಪಡಿಸಿಕೊಂಡ ಎಂದೂ ಹೇಳಲಾಗುತ್ತದೆ. ಇವೆರಡಕ್ಕೂ ಕಾರಣಳಾದವಳು ಕೈಕೇಯಿ. ಯುದ್ಧ ನಡೆಯುವಾಗ ಒಂದು ಹಂತದಲ್ಲಿ ದಶರಥನಿಗೆ ಆಯಾಸವಾಗುತ್ತದೆ. ಆ ವೇಳೆ ದಶರಥನ ರಥವನ್ನು ಬಹುದೂರಕ್ಕೆ ಕೊಂಡ್ಯೋಯ್ದು, ಅವನ ಪ್ರಾಣವನ್ನು ಉಳಿಸುತ್ತಾಳೆ. ಈ ಪ್ರಾಣ ರಕ್ಷಣೆಯನ್ನು ಮಾಡಿದಳು ಎಂಬ ಸಂತೋಷಕ್ಕೆ ದಶರಥ “ನಿನಗೆ ಎರಡು ವರವನ್ನು ಕೊಡುತ್ತೇನೆ. ಬೇಕಾದುದ್ದನ್ನು ಕೇಳು” ಎನ್ನುತ್ತಾನೆ.  ಆಗ ಕೈಕೇಯಿ “ಈಗ ನನಗೆ ವರದ ಅಗತ್ಯವಿಲ್ಲ. ಒಂದು ವೇಳೆ ಬೇಕಾದರೆ, ಮುಂದೆ ಎಂದಾದರೂ ಆ ವರಗಳನ್ನು ಪಡೆಯುತ್ತೇನೆ” ಎಂದು ಹೇಳುತ್ತಾಳೆ. ಅಂದರೆ ಇಲ್ಲಿ ವರಗಳು ಮೀಸಲಾಗಿಡಲ್ಪಟ್ಟವು.

ತದನಂತರ ಈ ಎರಡು ವರಗಳನ್ನು ಬಹುಶಃ ಕೈಕೇಯಿ ಮರೆತಿರಬಹುದು. ಏಕೆಂದರೆ ದಶರಥ ಮತ್ತು ಕೈಕೇಯಿಯ ಪರಸ್ಪರ ಸಂಬಂಧ ತುಂಬಾ ಹಾರ್ದಿಕವಾಗಿದ್ದರಿಂದ, ಇಂತಹ ನಿರ್ಬಂಧಗಳಿರುವುದಿಲ್ಲ. ವರಗಳನ್ನು ಪಡೆಯುವ ಅನಿವಾರ್ಯತೆಯೂ ಬಂದಿರುವುದಿಲ್ಲ. ಈ ಘಟನೆಗಳೆಲ್ಲಾ ನಡೆದ ನಂತರ ರಾಮಾದಿಗಳ ಜನನವಾಯಿತು. ದಶರಥ ನಾಲ್ಕು ಮಂದಿ ಮಕ್ಕಳನ್ನು ಪಡೆದು, ಹಿರಿಯವನಿಗೆ ಪಟ್ಟವನ್ನು ಕೊಡುತ್ತೇನೆ ಎನ್ನುವ ಕಾಲಕ್ಕೆ, ಈ ವರಗಳ ಪ್ರಸ್ತಾಪ ಬರುತ್ತದೆ. ಮಂಥರೆ ಎನ್ನುವ ದಾಸಿ, ರಾಮನಿಗೆ ಪಟ್ಟಾಭಿಷೇಕವಾಗುತ್ತದೆ ಎಂಬುದನ್ನು ತಿಳಿದು, ಅದನ್ನು ತಪ್ಪಿಸಿ, ಭರತನಿಗೆ ಸಿಗಬೇಕೆಂದು ಕೈಕೇಯಿಯನ್ನು ಪ್ರಚೋದಿಸುತ್ತಾಳೆ. ಇಲ್ಲಿ ಗಮನಿಸಬೇಕಾದದ್ದು, ಕೈಕೇಯಿಗೆ ಖಳನಾಯಕಿ ಪಟ್ಟವನ್ನು ಕೊಟ್ಟಿದ್ದೇವೆ. ಆದರೆ ಪ್ರಮುಖವಾಗಿ, ಮಂಥರೆ ಈ ಪ್ರಕರಣದಲ್ಲಿ ಕೈ ಹಾಕುವುದಿಲ್ಲವೋ, ಅಲ್ಲಿಯವರೆಗೆ ಕೈಕೇಯಿ ಪೂರ್ಣ ಪ್ರಮಾಣದ ಮಮತಾಮಯಿ ಆಗಿದ್ದಳು. ಅಲ್ಲದೇ, ರಾಮನನ್ನೂ ವಾತ್ಸಲ್ಯದಿಂದ ಕಾಣುತ್ತಿದ್ದಳು.

ಯಕ್ಷಗಾನದಲ್ಲಿ ಒಂದು ಪ್ರಸಿದ್ಧವಾದ ಹೇಳಿಕೆಯೊಂದಿದೆ. ಭರತ ಅಳುತ್ತಿದ್ದರೆ, ರಾಮ ನಗುತ್ತಿದ್ದರೆ, ಕೈಕೇಯಿ ತನ್ನ ಮಗನಾದ ಭರತನನ್ನು ಬಿಟ್ಟು, ನಗುತ್ತಿದ್ದ ರಾಮನನ್ನು ಎತ್ತಿಕೊಳ್ಳುತ್ತಿದ್ದಳು. ಅಷ್ಟೊಂದು ಪ್ರೀತಿಯ ತಾಯಿಯಾಗಿದ್ದ ಕೈಕೇಯಿ, ಮಂಥರೆಯಿಂದ ಪ್ರಚೋದಿಸಲ್ಪಟ್ಟು, ತನ್ನ ಎರಡು ವರಗಳನ್ನು ಕೇಳುವುದಕ್ಕೆ ಬಯಸುತ್ತಾಳೆ. ಅಲ್ಲಿಯವರೆಗೆ ದಶರಥನಿಗೆ ಮತ್ತು ಕೈಕೇಯಿಗೂ ಈ ವಾಗ್ದಾನ ನೆನಪಿರುವುದಿಲ್ಲ. ಇವರಿಬ್ಬರ ಮದುವೆ ಸಂದರ್ಭದಲ್ಲಿ ನಿನಗೆ ಹುಟ್ಟುವ ಮಗನಿಗೆ ಪಟ್ಟಾಭಿಷೇಕ ಮಾಡುತ್ತೇನೆ ಎಂಬ ವಿಚಾರ ಇಬ್ಬರೂ ಮರೆತಿದ್ದರು.  ತದನಂತರ ರಾಮನಿಗೆ ವನವಾಸ ಹಾಗೂ ಭರತನಿಗೆ ಪಟ್ಟ ಎಂಬ ಎರಡು ವರಗಳನ್ನು ಕೇಳಿದಾಗ, ರಾಮನ ಮೇಲೆ ವಿಪರೀತಿ ವ್ಯಾಮೋಹವನ್ನಿಟ್ಟಿದ್ದ ದಶರಥ, ಈ ದುಃಖವನ್ನು ತಡೆಯುವುದ್ದಕ್ಕಾಗದೆ ತೀರಿಕೊಳ್ಳುತ್ತಾನೆ.

ಇಲ್ಲಿನ ವಿಸಂಗತಿಯೆಂದರೆ, ಚಕ್ರವರ್ತಿಯನ್ನು ರಕ್ಷಿಸಿದ್ದಕ್ಕಾಗಿ ಎರಡು ವರಗಳನ್ನು ಪಡೆದ ಕೈಕೇಯಿ, ಪರೋಕ್ಷವಾಗಿ ಪ್ರಾಣವನ್ನು ಕಳೆಯುವುದಕ್ಕಾಗಿ ಬಳಸಲ್ಪಟ್ಟಳು. ಮತ್ತೊಂದು ಈ ವರವನ್ನು ಕೇಳಿದ ಕಾರಣವೇನೆಂದರೆ, ಪೂರ್ಣ ನಿಬಂಧನೆ ಪ್ರಕಾರ ಭರತನಿಗೆ ಪಟ್ಟವಾಗಬೇಕಿತ್ತು. ಕೈಕೇಯದಲ್ಲಿ ಅಶ್ವಪತಿ ಮಹಾರಾಜನಿಗೆ ದಶರಥ ಕೊಟ್ಟ ಮಾತಿನ ಪ್ರಕಾರ, ಪಟ್ಟಾಭಿಷೇಕ ಭರತನಿಗೆ ಆಗಬೇಕಿತ್ತು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಕೈಕೇಯಿ ಏತಕ್ಕಾಗಿ ಪೂರ್ವ ಷರತ್ತನ್ನು ಬಳಸಿಲಿಲ್ಲ? ಇಲ್ಲೊಂದು ಸೂಕ್ಷ್ಮವನ್ನು ಗಮನಿಸಬೇಕು. ಕೈಕೇಯಿ ತಾನಾಗಿ, ಪ್ರಾಕೃತವಾಗಿ ಮಗುವನ್ನು ಪಡೆಯಲಿಲ್ಲ. ಕಾಲ ಕಳೆದ ನಂತರ, ದಶರಥ ಯಜ್ಞ ಮೂಲಕ ಪಡೆದದ್ದು. ಇಲ್ಲಿ ಕತೃತ್ವ ದಶರಥನದ್ದೇ ಹೊರತು, ಮೂರು ಜನ  ಮಡದಿಯರು ಸಹಜವಾಗಿ ತಾಯಂದಿರಾಗಲಿಲ್ಲ. ಹೀಗಾಗಿ ಕೈಕೇಯಿ ಬಸಿರಿನಲ್ಲಿ ಹುಟ್ಟಿದ ಮಗನಿಗೆ ಸಿಂಹಾಸನವನ್ನು ಕೊಡುತ್ತೇನೆ ಎನ್ನುವ ಮಾತಿಗೆ ಅಥವಾ ನಿರ್ಬಂಧಕ್ಕೆ ಪ್ರಾಶಸ್ತ್ಯವೇ ಉಳಿಯಲಿಲ್ಲ. ಇದನ್ನು ಕೈಕೇಯಿ ಗ್ರಹಿಸಿರಬೇಕು ಹಾಗೂ ದಶರಥನೂ ತಿಳಿದಿರಬೇಕು ಎಂದೆನಿಸುತ್ತದೆ. ಆದಕಾರಣ ಇವರಿಬ್ಬರು ಈ ವಿಷಯ ಕುರಿತು ಮಾತನಾಡಿರುವುದಿಲ್ಲ.

ಇಲ್ಲಿ ಮತ್ತೊಂದು ಸೂಕ್ಷ್ಮವೆಂದರೆ, ಕಥೆಯಿಂದ ಹೊರಗೆ ಗಮನಿಸುವುದಾದರೆ, ಯಾವ ತಾಯಿಯಾದರೂ, ತನ್ನ ಮಗನ ಕ್ಷೇಮಕ್ಕಾಗಿಯೇ ದುಡಿಯುವುದು ಅಥವಾ ಅದಕ್ಕಾಗಿ ಪರಿಶ್ರಮಿಸುವುದು ಸಹಜವಾದದ್ದು. ಇಲ್ಲಿ ತಾನು ಅತ್ಯಂತ ಪ್ರೀತಿಸುತ್ತಿದ್ದ ರಾಮನ ವಿರೋಧವಾಗಿ ವರಗಳನ್ನು ಬಳಸಿಕೊಂಡಳು. ಅಂದರೆ, ದಶರಥ ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿದ ನಂತರ, ಯಾವ ವರಗಳನ್ನು ಕೊಡುವ ಪರಿಸ್ಥಿಯಲ್ಲಿರಲಿಲ್ಲ. ಏಕೆಂದರೆ  ವರಗಳನ್ನು ಕೊಡುವ ಅಧಿಕಾರವನ್ನು ಕಳೆದುಕೊಂಡಿರುತ್ತಾನೆ. ಇದೊಂದು ರೀತಿಯಲ್ಲಿ ಋಣಭಾರವಾಗಿ ದಶರಥ ಹೆಗಲ ಮೇಲೆ ಉಳಿದಿರುತ್ತದೆ.  ಮತ್ತೊಂದು ಇವನು ವರವನ್ನ ಕೊಡದಿದ್ದರೆ, ಕೊಡುತ್ತೇನೆ ಎನ್ನುವ ಮಾತು ಸುಳ್ಳಾಗುತ್ತದೆ. ಹೀಗಾಗಿ ದಶರಥನ ಮಾತನ್ನು ಸುಳ್ಳಾಗಿಸಬಾರದು ಎನ್ನುವ ನೆಲೆಯಿಂದ, ಕೈಕೇಯಿಯ ಹಠವೂ ಒಂದು ಕಾರಣ.

ಇದೆಲ್ಲಾ ಸಂಗತಿಗಳು ನಡೆದ ನಂತರ ಕೈಕೇಯಿ ಸುಖವಾಗಿದ್ದಳೇ? ಎಂಬ ಪ್ರಶ್ನೆ ಮೂಡುತ್ತದೆ. ಭರತ ದೂರದ ಕೈಕೇಯಿ ದೇಶದಲ್ಲಿದ್ದ. ವಸಿಷ್ಠರಿಂದ ರಾಮನ ವನವಾಸ ಹಾಗೂ ದಶರಥನ ಅವಸಾನ ಇವೆರಡು ವರ್ತಮಾನವನ್ನು ಕೇಳಿ ಅಯೋಧ್ಯೆಗೆ ಬಂದಾಗ, ಈ ಪ್ರಕರಣದ ವಿಸ್ತಾರ ಗೊತ್ತಾಗುತ್ತದೆ. ತಾಯಿ ತನಗೆ ಸಿಂಹಾಸನವನ್ನು ಕೊಡುವುದಕ್ಕಾಗಿ ಇಷ್ಟೆಲ್ಲಾ ಮಾಡಿದ್ದಾಳೆ ಎಂಬುದು ಗೋಚರವಾಗುತ್ತದೆ. ಯಾವ ಮಕ್ಕಳಾದರೂ ಅಧಿಕಾರ ಬರುತ್ತದೆಂದರೆ ಸಂತೋಷ ಪಡುವರು ಹಾಗೂ ತಾಯಿಯನ್ನು ಅಭಿನಂದಿಸುವರು. ಅಲ್ಲದೇ ತಾಯಿಯೂ ಇದೇ ತರಹದ ಅಭಿವಂದನೆ ಬಯಸುವುದು ಸಹಜ. ಆದರೆ ತನ್ನ ತಂದೆಯ ಮರಣಕ್ಕೂ ಹಾಗೂ ರಾಮನ ವನವಾಸಕ್ಕೂ ಈ ನನ್ನ ತಾಯಿ ಕೇಳಿದ ವರಗಳೇ ಕಾರಣವಾಯಿತಲ್ಲ ಎಂಬ ಸಂಕಟದಿಂದ ತಾಯಿಯನ್ನು ಕೊಲ್ಲುವುದಕ್ಕೆ ಹೊರಡುತ್ತಾನೆ. ಅನಂತರ ವಸಿಷ್ಠ ಮರ್ಹಷಿಗಳು ಭರತನನ್ನು ತಡೆಯುತ್ತಾರೆ.

ಯಾವ ಮಗನ ಅಭ್ಯುದಯಕ್ಕಾಗಿ ಕೈಕೇಯಿ ವರವನ್ನು ವಿನಿಯೋಗಿಸಿದ್ದಳೋ, ಆ ಅಭ್ಯುದಯದ ಸಂತೋಷ ಭರತನಿಗೂ ಆಗಲಿಲ್ಲ ಹಾಗೂ ಇದರ ಆನಂದವನ್ನು ತಾಯಿಯೂ ಅನುಭವಿಸಲಿಲ್ಲ. ಇಲ್ಲಿ ವರಗಳೇ ವಿಚಿತ್ರವಾಯಿತು. ಪ್ರಾಣ ಉಳಿಸಬೇಕಾಗಿದ್ದ ವರವನ್ನು ವಿನಿಯೋಗಿಸಿ, ಪ್ರಾಣವನ್ನು ತೆಗೆಯಬೇಕಾಯಿತು. ಸಂತೋಷ ಕೊಡಬೇಕಾಗಿದ್ದಕ್ಕಾಗಿ ವಿನಿಯೋಗಿಸಿದ್ದು, ದುಃಖಕ್ಕೆ ಕಾರಣವಾಯಿತು. ಇಲ್ಲಿ ಭರತ ಕೂಡ ವರದ ಪ್ರಯೋಜನವನ್ನು ಪಡೆಯಲಿಲ್ಲ. ಇಲ್ಲಿ ಆದದ್ದು, ಯಾವುದೇ ಸಂಬಂಧವಿಲ್ಲದ ರಾಮ ಕಾಡಿಗೆ ತೆರಳಿದ್ದು. ಅನಂತರ ಅಣ್ಣನ ಹುಡುಕಾಟಕ್ಕಾಗಿ ಭರತ ಅರಣ್ಯದ ಚಿತ್ರಕೂಟಕ್ಕೆ ಹೋಗುತ್ತಾನೆ. ರಾಮನನ್ನು ಅಯೋಧ್ಯೆಗೆ ಕರೆದುಕೊಂಡು ಬರುತ್ತೇನೆ, ರಾಜನಾಗಿ ಮಾಡುತ್ತೇನೆ ಎಂಬ ಯೋಚನೆಯನ್ನು ಇಟ್ಟುಕೊಂಡಿರುತ್ತಾನೆ. ಆ ವೇಳೆ ಕೈಕೇಯಿಯೂ ಭರತನ ಜೊತೆಯಲ್ಲಿ ತೆರಳುತ್ತಾಳೆ.  ರಾಮನನ್ನು ಅಯೋಧ್ಯೆಗೆ ಹಿಂದಿರುಗಿ ಕರೆಯುವ ಮನಸ್ಸನ್ನು ಮಾಡುತ್ತಾಳೆ. ಪ್ರಮುಖವಾಗಿ ಕೆಲವೇ ದಿನಗಳಲ್ಲಿ ಇಂತಹ ಸಾಕಷ್ಟು ವ್ಯತ್ಯಾಸಗಳು ನಡೆಯಿತು.

ಕೈಕೇಯ ಜೀವನ ಒಂದರ್ಥದಲ್ಲಿ ಚುಕ್ಕಾಣಿಯೇ ಇಲ್ಲದ ನಾವೆಯ ಹಾಗೆ ಕಾಣಿಸುತ್ತದೆ. ಯಾರೋ ಎಳೆದಂತೆ, ಯಾರೋ ದೂಡಿದಂತೆ ಸಾಗುತ್ತದೆ. ಮತ್ತೊಂದು ರೀತಿಯಲ್ಲಿ ನೋಡಿದರೆ, ಈ ಪ್ರಕರಣದಲ್ಲಿ ಕೈಕೇಯಿಗೆ ಒಂದು ನಿರ್ದಿಷ್ಟ ಉದ್ದೇಶವಿತ್ತು ಎಂದೆನಿಸುತ್ತದೆ. ಇಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ರಾಮ ಕೇವಲ ದಶರಥನ ಮಗನಾಗಿ, ಅಯೋಧ್ಯೆಯ ರಾಜನಾಗಿ ಮಾತ್ರ ಇರಬೇಕಾದವನಲ್ಲ. ಈತನ ಹುಟ್ಟಿನ ಉದ್ದೇಶ ಹಾಗೂ ಹಿನ್ನಲೆ ಬೇರೆಯೇ ಇತ್ತು. ಅಂದರೆ ರಾವಣಾದಿಗಳ ವಧೆಯಾಗಬೇಕಿತ್ತು ಹಾಗೂ ಲೋಕ ಕ್ಷೇಮವಾಗಬೇಕಾಗಿತ್ತು. ರಾಮ ತನ್ನ ಹುಟ್ಟಿನ ಬಳಿಕ, ತಾನೊಂದು ಆದರ್ಶದ ವ್ಯಕ್ತಿಯಾಗಿ ಪ್ರಪಂಚದಲ್ಲಿ ಸ್ಥಾಪನೆಯಾಗಬೇಕಿತ್ತು. ಹೀಗೆ ಆಗಬೇಕಾದರೆ, ಅಯೋಧ್ಯೆಯಿಂದ ಹೊರಡಲೇ ಬೇಕಾಯಿತು. ಇದಕ್ಕೆ ಕೈಕೇಯ ಉದ್ದೇಶವು ಮಾರ್ಗವಾಯಿತು. ಹೀಗಾಗಿ ಯಾರೂ ಈಕೆಯ ಕುರಿತು ಅನುಕಂಪ ತೋರಿಸಲಿಲ್ಲ, ಒಳ್ಳೆಯ ಕೆಲಸ ಮಾಡಿದಳೆಂದು ಮೆಚ್ಚಲಿಲ್ಲ. ಆದರೆ ಕೈಕೇಯಿ ಮಾಡಿದ ಕೆಲಸದಿಂದ, ರಾಮನ ವ್ಯಕ್ತಿತ್ವ ಹೆಚ್ಚೆಚ್ಚು ವಿಶಾಲವಾಗಿ ಹಾಗೂ ವಿಸ್ತಾರವಾಗಿ ಪ್ರಪಂಚ ವ್ಯಾಪಿಯಾಗಿ ಬೆಳೆಯುವುದಕ್ಕೆ ಒಂದು ಕಾರಣವಾಯಿತು. ಇವೆಲ್ಲವನ್ನೂ ಗಮನಿಸಿದರೆ, ಕೈಕೇಯಿಗೆ ಒಂದು ನಿರ್ದಿಷ್ಟ ಉದ್ದೇಶವಿತ್ತೆಂದು ತಿಳಿಯುತ್ತದೆ.

ಭರತ, ತಾನೆಷ್ಟು ಭ್ರಾತೃಪ್ರೇಮಿಯೆಂದು ಚಿತ್ರಕೂಟದಲ್ಲಿ ತೋರಿಸುತ್ತಾನೆ. ರಾಮನ ಪಾದುಕೆಯನ್ನು ಹೊತ್ತು ಅಯೋಧ್ಯೆಗೆ ಬರುತ್ತಾನೆ. ತಾನೂ ರಾಮನಂತೆ ಜಟಾವಲ್ಕಗಳನ್ನು ಧರಿಸಿ, 14 ವರ್ಷ ಅಯೋಧ್ಯೆಯಲ್ಲಿ ಸನ್ಯಾಸಿಯಂತೆ ಬದುಕುತ್ತಾನೆ. ಹೀಗೆ ಭರತನ ವ್ಯಕ್ತಿತ್ವ ಕೂಡ ಅನಾವರಣಗೊಳ್ಳುವುದಕ್ಕೆ ಕೈಕೇಯಿಯ ಈ ಪ್ರಕರಣ ಒಂದು ಹಿನ್ನಲೆಯಾಗಿದೆ. ಹೀಗಾಗಿ ಕೈಕೇಯಿ ಖಳನಾಯಕಿಯೂ ಅಲ್ಲ ಅಥವಾ ನಾಯಕಿಯೂ ಅಲ್ಲ.

ಕೈಕೇಯಿ, ರಾಮನನ್ನು ಹಿಂದಿರುಗಿ ಕರೆಯುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಾಳೆ. ಆದರೆ ರಾಮ ಬರುವುದಿಲ್ಲ. ಮೇಲ್ನೋಟಕ್ಕೆ ನೋಡಿದರೆ, ಒಟ್ಟು ಕೈಕೇಯಿಯ ಜೀವನ, ನಿಷ್ಪ್ರಯೋಜಕವಾಗಿ ಕಾಣುತ್ತದೆ. ಏಕೆಂದರೆ ಈಕೆ ಉದ್ದೇಶಿಸಿದ ಯಾವ ಕಾರ್ಯಗಳು ನಡೆಯಲಿಲ್ಲ. ಕೊನೆಗಾಲಕ್ಕೆ ದಶರಥ ಕೂಡ, ತನ್ನ ಪ್ರೀತಿ ಪಾತ್ರಳಾದ ಕೈಕೇಯಿ ಅಂತಃಪುರವನ್ನು ಬಿಟ್ಟು, “ನಿನ್ನ ಮುಖವನ್ನು ನಾನು ನೋಡುವುದಿಲ್ಲ. ನೀನು ಪಿಶಾಚಿ” ಎಂದು ಬೈದು, ಕೌಸಲ್ಯಳ ಅಂತಃಪುರಕ್ಕೆ ಹೋಗುತ್ತಾನೆ. ಇಲ್ಲಿ ಪತಿಯ ಪ್ರೀತಿಯಿಂದಲು ವಂಚಿತಳಾದಳು, ಮಕ್ಕಳು ತಿರಸ್ಕಾರದಿಂದ ಕಂಡರು ಹಾಗೂ ಅಯೋಧ್ಯೆಯ ಪ್ರಜೆಗಳೆಲ್ಲಾ ಕೈಕೇಯಿಯನ್ನು ನಿಂದಿಸಿದರು. ಇಷ್ಟಾದ ಮೇಲೂ ರಾಮನನ್ನು ಕರೆದಾಗಲೂ, ರಾಮ ಒಪ್ಪಿ ಬರಲಿಲ್ಲ.

ಆದರೆ ಕೈಕೇಯಿಯ ಜೀವನದಲ್ಲಿ ಸಾರ್ಥಕತೆಯನ್ನು ತಿಳಿಯಬೇಕಾದರೆ, ನಾವು ಕಾವ್ಯದ ಹೊರಗಡೆಯಿಂದ ನೋಡಬೇಕು. ಅಂದರೆ ರಾಮನ ವ್ಯಕ್ತಿತ್ವವನ್ನು ಬೆಳಗಿಸುವುದಕ್ಕೆ ಕೈಕೇಯಿ ಕೂಡ ಬೆಳಕಿನ ದೀಪವಾಗಿ, ರಾಮ ಜಗತ್ತಿನಲ್ಲಿ ಕಾಣಿಸುವುದಕ್ಕೆ ದುಡಿದಳು ಎಂಬ ಭಾವವನ್ನಿಟ್ಟುಕೊಂಡು ನೋಡಿದರೆ, ಕೈಕೇಯಿಯ ವ್ಯಕ್ತಿತ್ವಕ್ಕೆ ಬೇರೆಯ ಆಯಾಮವೊಂದು ಬರುತ್ತದೆ. ಹೀಗೆ ರಾಮಾಯಣದಲ್ಲಿ ಎರಡು ಕೋನಗಳಿಂದ ನೋಡಬಹುದಾದ ಒಂದು ಪಾತ್ರ ಹಾಗೂ ವಿಶಿಷ್ಟ ವ್ಯಕ್ತಿತ್ವ ಕೈಕೇಯಿಯದ್ದು.

-ರಾಧಾಕೃಷ್ಣ ಕಲ್ಚಾರ್ ವಿಟ್ಲ

0 Comments

Submit a Comment

Your email address will not be published. Required fields are marked *

Related Articles

Related

ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಧೃತರಾಷ್ಟ್ರ ಕುರುಡನಾದರೂ ಬುದ್ಧಿ ಹೀನನಲ್ಲ. ಮಾತ್ರವಲ್ಲದೇ, ಧೃತರಾಷ್ಟ್ರವೆಂದರೆ, ರಾಷ್ಟ್ರವನ್ನು ಎತ್ತಿಹಿಡಿಯುವವನು ಎಂಬರ್ಥ ಬರುತ್ತದೆ. ದುರದೃಷ್ಟವಶಾತ್, ಈತನ ಮಕ್ಕಳು ಕೂಡ ರಾಷ್ಟ್ರವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಲಿಲ್ಲ. ಸ್ವತಃ ಧೃತರಾಷ್ಟ್ರನಿಗೂ ಆ ಕೆಲಸ ಮಾಡಲಾಗಲಿಲ್ಲ. ಆದರೆ ಈತನ ಬುದ್ಧಿವಂತಿಕೆ ಬಳಕೆಗೆ ಬಂದದ್ದು, ತನ್ನ ಮಕ್ಕಳ ಅಭ್ಯುದಯಕ್ಕೆ ಹಾಗೂ ಅವರ ಪ್ರಯೋಜನಕ್ಕೆ ಮಾತ್ರ.

read more
ರಾಮನಂತೆ ಅರಣ್ಯವಾಸಿಯಾದ ಭರತ 

ರಾಮನಂತೆ ಅರಣ್ಯವಾಸಿಯಾದ ಭರತ 

ಭರತನು ಸಿಂಹಾಸನವೇರಿ ರಾಜ್ಯವನ್ನು ಆಳಬಹುದಿತ್ತು. ಆದರೆ ಈತನ ಮನಸ್ಸು ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ರಾಮನ ಪ್ರೀತಿ, ಅಭಿಮಾನಗಳು ಆತನಿಗೆ ಶಕ್ತಿಯಾಗಿದ್ದವು. ರಾಮನೇ ರಾಜನಾಗಬೇಕೆಂದು ಬಯಸಿ, ಅಣ್ಣನನ್ನು ಹುಡುಕುತ್ತಾ ಚಿತ್ರಕೂಟದಲ್ಲಿ ಭೇಟಿಯಾಗುತ್ತಾನೆ. ಇದೊಂದು ಅಣ್ಣ-ತಮ್ಮಂದಿರ ಮಿಲನದ ಭೇಟಿ. ಭರತ, ದಶರಥನ ಮರಣವಾರ್ತೆಯನ್ನು ಹೇಳಿ, ದುಃಖಿಸಿ ಕಣ್ಣೀರಿಡುತ್ತಿರುವಾಗ, ರಾಮ ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ರಾಮ ಮಾಡಬೇಕಾದ ಕಾರ್ಯಗಳನ್ನು ತಾನು ನೇರವೇರಿಸಿದ ಸಂಗತಿಗಳನ್ನು ಹೇಳುತ್ತಾನೆ.

read more
ಪರಾಕ್ರಮಿ ಪಾಂಡುವಿನ ಅರಣ್ಯರೋಧನ

ಪರಾಕ್ರಮಿ ಪಾಂಡುವಿನ ಅರಣ್ಯರೋಧನ

ಸಿಂಹಾಸನದ ಉತ್ತರಾಧಿಕಾರಿಗಾಗಿ ನಡೆದ ನಿಯೋಗದಲ್ಲಿ, ಕುರುಡನಾದ ಧೃತರಾಷ್ಟ್ರ ಅಂಗವಿಕಲತೆಯ ಕಾರಣಕ್ಕಾಗಿ ಅರ್ಹನಾಗಲಿಲ್ಲ. ಪಾಂಡು ತನ್ನ ಬಣ್ಣದ ಕಾರಣಕ್ಕೆ ಪೂರ್ಣ ಅರ್ಹನಲ್ಲವೆಂದು ನಿರ್ಧರಿಸಲಾಯಿತು. ಅನಂತರ ಜನಿಸಿದ ವಿದುರನು ದಾಸಿ ಪುತ್ರನೆಂದು ಅಧಿಕಾರ ಸಿಗಲಿಲ್ಲ. ಹೀಗಾಗಿ ಉತ್ತಮ ಅರ್ಹತೆಯಿಲ್ಲದೆ, ಮಧ್ಯಮ ಅರ್ಹತೆ ಹೊಂದಿರುವನು ಎಂಬ ಕಾರಣಕ್ಕೆ ಪಾಂಡು ಸಿಂಹಾಸನದ ಒಡೆಯನಾದ.

read more