ಜನ ಮನೋಧರ್ಮವೇ ರಾಮನ ವ್ಯಕ್ತಿತ್ವ

ರಾಮನೆಂದರೇ ಕೇವಲ ವ್ಯಕ್ತಿ ಹಾಗೂ ಪಾತ್ರವಲ್ಲ. ನಮ್ಮನ್ನು ಪ್ರಭಾವಿಸಿ, ಪ್ರಕಾಶವಾಗಿ ಕಾಡುವ ಶಕ್ತಿ. ರಾಮಾಯಣದ ಕಥನದ ಉದ್ದಕ್ಕೂ ಕಾಣಿಸಿಕೊಂಡು, ಹೇಳಿದಷ್ಟೂ ಮುಗಿಯದ ವಿಸ್ತಾರವಾದ ಪಾತ್ರ. ರಾಮನನ್ನು ಎರಡು ಕಾರಣದಿಂದ ವಿಶೇಷವಾಗಿ ಗುರುತಿಸಬೇಕು. ಒಂದು ಜೀವನದ ಆದರ್ಶ, ಮತ್ತೊಂದು, ರಾಮ ತನ್ನ ಬಗ್ಗೆ ತಾನು ತಿಳಿದುಕೊಂಡಿರುವ ವ್ಯಕ್ತಿತ್ವ. ಇವೆರಡನ್ನೂ ತಿಳಿದುಕೊಳ್ಳುವ ಮುನ್ನ, ರಾಮನ ಜನ್ಮದ ಹಿನ್ನಲೆ ತಿಳಿದುಕೊಳ್ಳುವುದು ಒಳಿತು.

ಹಲವು ತಲೆಮಾರುಗಳ ಹಿಂದೆ ರಾವಣ, ಅಯೋಧ್ಯೆ ಮೇಲೆ ಆಕ್ರಮಣ ಮಾಡಿ, ಅನರಣ್ಯ ಎನ್ನುವ ರಾಜನನ್ನು ಹತ್ಯೆಗೈದಿದ್ದ. ಅನರಣ್ಯ ಸಾಯುವ ಸಮಯದಲ್ಲಿ ಪ್ರಬಲ ಪರಾಕ್ರಮಿ ರಾವಣನನ್ನು ಎದುರಿಸಿ ಗೆಲ್ಲಲಾಗದೆ “ನನ್ನ ವಂಶದಲ್ಲಿ ಜನಿಸುವ ರಾಮನಿಂದ ನಿನಗೆ ಮರಣ” ಎಂದು ಶಾಪ ಕೊಟ್ಟನು. ಮತ್ತೊಂದು ಪ್ರಸಂಗದಲ್ಲಿ, ರಾವಣನನ್ನು ಕೊಲ್ಲುವಂತೆ ವಿಷ್ಣುವಿನ ಮೊರೆಹೋದ ದೇವತೆಗಳು, ರಾಮನ ಅವತಾರದಿಂದ ಜನಿಸಲು ಪ್ರಾರ್ಥನೆ ಮಾಡುತ್ತಾರೆ. ಇದಲ್ಲದೆ ಋಷಿ ದಾಂಪತ್ಯ ವಿಚ್ಛೇದನವಾಗಿ, ಮತ್ತೆ ಒಂದಾಗುವ ಸನ್ನಿವೇಶ ರಾಮನ ಜನನದಿಂದ ಸಾಧ್ಯವಾಯಿತು. ಅಂದರೆ ಗೌತಮ ಮಹರ್ಷಿಯು ಅಹಲ್ಯೆಗೆ “ನೀನು ಕಲ್ಲಾಗಿ ಬಿದ್ದಿರು” ಎಂದು ಶಾಪ ಕೊಟ್ಟಿದ್ದ. ರಾಮನ ಪಾದಸ್ಪರ್ಶದಿಂದಲೇ ಅಹಲ್ಯೆಗೆ ಮುಕ್ತಿ ಸಿಗುವುದು ಎಂಬ ಪರಿಹಾರವನ್ನೂ ಸೂಚಿಸಲಾಗಿತ್ತು. ಹೀಗೆ ಬೇರೆ ಬೇರೆ ಶಕ್ತಿಗಳು, ವ್ಯಕ್ತಿಗಳು ಹಾಗೂ ಸನ್ನಿವೇಶಗಳು ರಾಮನ ಆರ್ವಿಭಾವಕ್ಕಾಗಿ ತಪಸ್ಸನ್ನು ಮಾಡುತ್ತಿದ್ದವು.

ಕಿಷ್ಕಿಂದೆಯಲ್ಲಿ ಸುಗ್ರೀವ, ತನ್ನ ಅಣ್ಣನಾದ ವಾಲಿ ಮಾಡಿದ ಅನ್ಯಾಯಕ್ಕೆ ಪ್ರತಿಕಾರ ತೀರಿಸಲಾಗದೆ, ನ್ಯಾಯ ಕೊಡಿಸುವ ಹಾಗೂ ಧರ್ಮದಂಡವನ್ನು ಹಿಡಿದ ಒಬ್ಬ ಬಲಿಷ್ಠನಿಗಾಗಿ ಕಾಯುತ್ತಿದ್ದ. ಮತ್ತೊಂದು ಕಡೆ ಬಹುಕಾಲದಿಂದ ಶಬರಿ ಮೋಕ್ಷವನ್ನು ಪಡೆಯಲು, ತನ್ನ ಆರಾಧ್ಯ ಮೂರ್ತಿ ರಾಮನಿಗಾಗಿ ಕಾದಿದ್ದಳು. ಹೀಗೆ ಇಡೀ ಪ್ರಪಂಚದಲ್ಲಿ ಬಹುಮಂದಿ ರಾಮನ ಆರ್ವಿಭಾವಕ್ಕಾಗಿ ಕಾಯುತ್ತಿದ್ದರು.

 “ಧರ್ಮೋ ಹಿ ಪರಮೋ ಲೋಕೇ” ಎನ್ನುವುದು ರಾಮನ ಆಧಾರ ವಾಕ್ಯ. ಅಂದರೆ ಧರ್ಮವು ಜೀವನದಲ್ಲಿ ಅತ್ಯಂತ ಶ್ರೇಷ್ಠವಾದುದು ಎಂಬ ಮಾತು. ಹೀಗೆ ಧರ್ಮವನ್ನು ಅವಲಂಬಿಸಿ, ಧರ್ಮವನ್ನು ಆಧರಿಸಿ ರಾಮನ ಬದುಕು ರೂಪುಗೊಂಡಿತು. ಮಾತ್ರವಲ್ಲದೆ ರಾಮನ ಬದುಕಿನ ಜೊತೆಯಲ್ಲಿ, ಲೋಕದ ಬದುಕು ಕೂಡ ಆಧರಿಸಿದೆ. ತನ್ನ ಸಂಬಂಧಗಳು, ಆಪ್ತರು, ಪ್ರಜೆಗಳು, ಸ್ನೇಹಿತರು ಹಾಗೂ ವಿರೋಧಿಗಳನ್ನೆಲ್ಲಾ ರಾಮನು ಧರ್ಮದ ದೃಷ್ಟಿಯಿಂದ ನೋಡುತ್ತಿದ್ದ.

ತತ್ವಪ್ರಧಾನವಾಗಿ ನೋಡುವ ದೃಷ್ಟಿಯ ನಿರ್ಲಿಪ್ತತೆ, ರಾಮನಲ್ಲಿ ಕಾಣಬಹುದು. ಹೀಗಾಗಿ ತನ್ನ ಜೀವನದ ಅವಿಭಾಜ್ಯ ಅಂಗವಾಗಿದ್ದ ಸೀತೆ ಹಾಗೂ ಲಕ್ಷಣನ ಸಂಬಂಧವನ್ನೂ ಕೂಡ ಧರ್ಮದ ನೆಲೆಯಿಂದ ಕಡಿದುಕೊಂಡನು. ಒಂದು ಆದರ್ಶವನ್ನಿಟ್ಟುಕೊಂಡು ಬಾಳಿದವನು ಶ್ರೀರಾಮ. ಲಂಕೆಯಲ್ಲಿ ದೇವತೆಗಳೆಲ್ಲರೂ “ಸೀತೆ ಪರಿಶುದ್ಧಳು” ಎಂದು ರಾಮನಿಗೆ ಹೇಳುತ್ತಾರೆ. “ಆತ್ಮಾನಂ ಮಾನುಷಂ ಮನ್ಯೆ” ಅಂದರೆ, ದಶರಥನ ಮಗನಾದ ರಾಮ ಮನುಷ್ಯನೆಂದು, ನನ್ನ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ಉಳಿದದ್ದು ನೀವು ಹೇಳಿ” ಎಂದು ದೇವತೆಗಳಿಗೆ ರಾಮ ಸೂಚಿಸುತ್ತಾನೆ.  

ರಾವಣನ್ನು ಕೊಲ್ಲುವುದಕ್ಕಾಗಿಯೇ ರಾಮ ಜನ್ಮತಾಳಿದ. ಆದರೆ ರಾವಣನನ್ನು ಕೊಲ್ಲುವಾಗ, ತನ್ನ ಮೂಲ ಸ್ವರೂಪದ ಬಗ್ಗೆ ರಾಮನಿಗೆ ನೆನಪಿರುವುದಿಲ್ಲ. ಅಲ್ಲದೇ, ರಾವಣನನ್ನು ಕೊಲ್ಲಬೇಕಾದರೆ ರಾಮ ಪೂರ್ಣ ಮನುಷ್ಯನಾಗಿ ಇರಬೇಕಾಗಿತ್ತು. ಸಹಜವಾಗಿ ಪ್ರತಿಯೊಬ್ಬರೂ ದೈವತ್ವಕ್ಕೆ ಏರಬೇಕೆಂದು ಭಾವಿಸುತ್ತೇವೆ. ಆದರೆ ರಾಮಾಯಣದಲ್ಲಿ ದೈವತ್ವವೇ, ಪೂರ್ತಿ ಮನುಷ್ಯನಾಗುವುದಕ್ಕೆ ಶ್ರಮಿಸುತ್ತಿತ್ತು. ಅಂತೆಯೇ ಮನುಷ್ಯರಂತೆ ಸಹಜವಾಗಿ ಬಾಳುತ್ತಿರಬೇಕು. ರಾಮನು ಕಣ್ಣಿರಿಟ್ಟಿದ್ದಾನೆ, ಸಿಟ್ಟಾಗಿದ್ದಾನೆ ಮತ್ತು ಸಂತೋಷವನ್ನು ಒಳಗೊಂಡು ಎಲ್ಲವನ್ನೂ ಅನುಭವಿಸಿದ್ದಾನೆ.

ಜೀವನದ ಕೊನೆ ಹಂತದಲ್ಲಿ ರಾಮನ ಸ್ವಗತದ ವಾಕ್ಯವಾಗಿ ಯಕ್ಷಗಾನದಲ್ಲಿ ಒಂದು ಪದ್ಯವಿದೆ.

ನೋವು ನಲಿವಿನಿಂದ ಕೂಡಿದ ಜೀವನವ ಕಂಡಾಯ್ತು

ಇನ್ನು ಉಳಿದು ಯಾವ ಫಲವಿದೆ?

ನೀತಿಯೊಂದೇ ದೇವನೆನಿಸಿತು

ಎನ್ನನು ಜಗದೊಳಿಂದು

ರಾಮನು ತನ್ನನು ತಾನು ಮನುಷ್ಯ ಎಂದು ತಿಳಿದುಕೊಂಡಿದ್ದರೂ, ಜಗತ್ತು ಅತನನ್ನು ದೇವರು ಎಂದಿತು. ರಾಮ ಅನುಸರಿಸುತ್ತಿದ್ದ ನೀತಿಯೇ ಜಗತ್ತಿಗೆ ದೈವವಾಯಿತು. ನಾವು ವ್ಯಕ್ತಿತ್ವಕ್ಕೆ ಚಾರಿತ್ರ್ಯ ಎಂದು ಕರೆಯುತ್ತೇವೆ. ಅಂತೆಯೇ ಈ ಚಾರಿತ್ರ್ಯವನ್ನು ಶುದ್ಧವಾಗಿ ಉಳಿಸಿಕೊಂಡವನು ಶ್ರೀರಾಮ. ಈತನಿಗೆ ಯಾವುದೇ ಸ್ವಾರ್ಥ ಸಾಧನೆಯ ಉದ್ದೇಶವಿರಲಿಲ್ಲ. ಹೀಗಾಗಿ ಪ್ರಜಾಭಿಪ್ರಾಯಕ್ಕೆ ಬಹಳ ಬೆಲೆ ಕೊಟ್ಟು, ಮಾತಿಗೆ ಮೌಲ್ಯ ಕೊಡುವುದಲ್ಲದೆ, ತನ್ನ ಬದುಕಿನಲ್ಲಿ ಬಿಡಬಾರದಂತಹ ಅವಕಾಶಗಳನ್ನೆಲ್ಲಾ ಕೈಚೆಲ್ಲಿ ಬದುಕಿದ.

ಇಲ್ಲಿ ಸೂಕ್ಷವಾಗಿ ಗಮನಿಸಬೇಕಾದನ ಸಂಗತಿಯೆಂದರೆ, ರಾಮ ತಾನು ಏನಾಗಬೇಕೆಂಬುದನ್ನು ಸ್ವಯಂನಿರ್ಣಯ ಮಾಡಿರಲಿಲ್ಲ. ಇಂತಹದೇ ‘ರಾಮ’ ಬೇಕು ಎಂಬುದನ್ನು ಬಯಸಿದ್ದು ಜಗತ್ತು. ಈ ಜನಮಾನಸ ಬಯಸಿ ಬಯಸಿ, ತನಗೆ ಬೇಕಾದ ಒಬ್ಬ ವ್ಯಕ್ತಿಯನ್ನು ಪಡೆಯಲು ಸಾಧ್ಯವಾಯಿತು. ಒಂದು ಸನ್ನಿವೇಶದಲ್ಲಿ ದಶರಥ ತನ್ನ ಪ್ರಜೆಗಳಿಗೆ “ನಾಳೆ ರಾಮನಿಗೆ ಅಧಿಕಾರವನ್ನು ಕೊಡುತ್ತೇನೆ” ಎಂದಾಗ ಎಲ್ಲರೂ “ಆಯಿತು. ಸಂತೋಷ” ಎಂದಾಗ ದಶರಥ “ಏಕೆ ಅಧಿಕಾರ ಕೊಡಬೇಕು” ಎಂದು ಮತ್ತೊಮ್ಮೆ ಪ್ರಶ್ನಿಸುತ್ತಾನೆ. ಆಗ ಪ್ರಜೆಗಳೆಲ್ಲಾ ರಾಮನ ವ್ಯಕ್ತಿತ್ವ, ಯೋಗ್ಯತೆ ಹಾಗೂ ಗುಣವಿಶೇಷಗಳನ್ನು ವಿಸ್ತಾರವಾಗಿ ವಿವರಿಸುತ್ತಾರೆ.

ಪ್ರಜೆಗಳ ವರ್ಣನೆಯಲ್ಲಿ ಚಿತ್ರಿಸಲ್ಪಟ್ಟ ರಾಮನ ಗುಣಗಳು, ಸ್ವಯಂ ರಾಮನಲ್ಲಿಯೇ ಇತ್ತು. ಲೋಕ ಒಂದು ವ್ಯಕ್ತಿತ್ವವನ್ನು ನಿರೀಕ್ಷೆ ಮಾಡುತ್ತಿದ್ದಾಗ, ಆ ಎತ್ತರಕ್ಕೆ ಮುಟ್ಟಬೇಕಾದ ಅನಿವಾರ್ಯತೆಯನ್ನು ನಮಗೆ ನಾವು ಹೇರಿಕೊಳ್ಳಬೇಕಾಗುತ್ತದೆ. ಹೀಗಾಗಿ ರಾಮ, ಆ ಎತ್ತರವನ್ನು ಏರಲು ಬಳಸಿದ್ದು ಧರ್ಮವೆಂಬ ಏಣಿಯನ್ನು, ನೀತಿಯೆಂಬ ದಾರಿಯನ್ನು. ಈ ಹಾದಿಯನ್ನು ಅನುಸರಿಸಿ ಬಂದಿದ್ದರಿಂದ, ಪ್ರಜೆಗಳು ಬಯಸಿದ ರಾಮ ಸಿದ್ಧನಾದ. ಹೀಗಾಗಿ ಯುಗ ಯುಗಗಳಲ್ಲಿ ವಿರಳವಾಗಿ ಕಾಣುವ, ಒಂದು ವಿಶಿಷ್ಟ ವ್ಯಕ್ತಿತ್ವ ರಾಮನಾಗಿ ನಮಗೆ ಕಂಡಿದೆ.

ಸೀತೆಯನ್ನು ಪರಿತ್ಯಾಗ ಮಾಡಿದಾಗ ರಾಮನ ಮೇಲೆ ಪ್ರತಿಯೊಬ್ಬರಿಗೂ ಅಸಮಾಧಾನವಾಗುತ್ತದೆ. ಆದರೆ ಸೀತೆ ಸಿಟ್ಟಾಗುವುದಿಲ್ಲ. “ಕರುಣಾಳು ರಾಘವನಲ್ಲಿ ತಪ್ಪಿಲ್ಲ. ರಾಮನ ಧರ್ಮವನ್ನು ರಕ್ಷಿಸುವುದು ನನ್ನದೂ ಹೊಣೆ” ಎನ್ನುತ್ತಾಳೆ. “ನಮಗೆ ದೇಹದಲ್ಲಿ ಗಾಯವಾದಾಗ, ಸಹಾಯಕ್ಕಾಗಿ ಕೈ ಬಳಸುವ ಹಾಗೆ ರಾಮನ ವ್ಯಕ್ತಿತ್ವದಲ್ಲಿ ಧರ್ಮವನ್ನು ಉಳಿಸುವುದಕ್ಕೆ, ಅದರ ಪರಿಪೂರ್ಣತೆಗಾಗಿ ಶ್ರಮಿಸುವುದು ನನ್ನ ಹೊಣೆ” ಎಂದು ಸೀತೆ ಹೇಳುತ್ತಾಳೆ.

ರಾಮನನ್ನು ಅವಲಂಬಿಸಿದ್ದವರು, ಆತನನ್ನು ದೂಷಿಸಲಿಲ್ಲ. ಲೋಕದಲ್ಲಿ ಆದರ್ಶವಾಗಿ ರೂಪುಗೊಳ್ಳುವುದಕ್ಕೆ ಎಲ್ಲರೂ ತಮ್ಮ ತಮ್ಮ ದೇಣಿಗೆಯನ್ನು ಕೊಟ್ಟಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ರಾಮ, ಎಷ್ಟು ಧರ್ಮನಿಷ್ಠುರನೆಂದರೆ, ವನವಾಸಕ್ಕೆ ಹೋಗುವ ಸಂದರ್ಭದಲ್ಲಿ ರಾಮನಿಗೆ ದಶರಥನು, “ನಿನ್ನನ್ನು ಬಿಟ್ಟು ನಾನು ಬದುಕುವುದಿಲ್ಲ. ನೀನು ಹೋಗುವುದು ದಿಟವಾದರೂ, ಒಂದು ಹೊತ್ತು ನನ್ನ ಜೊತೆಯಲ್ಲಿ ಕುಳಿತು, ಒಂದು ತುತ್ತು ಉಂಡು ಹೋಗು” ಎನ್ನುತ್ತಾನೆ. ಆಗ ರಾಮ “ಇಲ್ಲ ತಂದೆ. ನಾನು ಹಾಗೆ ನಿಲ್ಲಬಾರದು. ಏಕೆಂದರೆ, ಈಗ ವನವಾಸಕ್ಕೆ ಹೋಗಲು ನನ್ನ ಮನಸ್ಸು ಸಿದ್ಧವಾಗಿದೆ. ಒಂದು ವೇಳೆ ನಾನು ನಿಂತರೆ, ನಾಳೆ ನನ್ನ ಬುದ್ಧಿ ಹೇಗೆ ಬದಲಾಗುತ್ತದೆಯೋ ಯಾರಿಗೆ ಗೊತ್ತು? ಮನುಷ್ಯನ ಬುದ್ಧಿ ಕ್ಷಣಿಕವಾದದ್ದು, ಚಂಚಲವಾದದ್ದು. ಈಗ ಇದ್ದ ಸ್ಥಿರತೆ, ಅನಂತರ ಇಲ್ಲವಾಗಬಹುದು. ಆದಕಾರಣ ನಾನು ಹೊರಡುತ್ತೇನೆ” ಎಂದು ಊಟವನ್ನೂ ಕೂಡ ಮಾಡದೆ ಹೊರಟು ಬಿಡುತ್ತಾನೆ. ದೇಶ, ಲೋಕ, ಜನಮನೋಧರ್ಮ ಬಯಸಿದ ರೀತಿಯಲ್ಲಿ, ಅರಳಿದ ವಿಧಾನದಲ್ಲಿ ನಾವು ರಾಮನ ವ್ಯಕ್ತಿತ್ವವನ್ನು ಗುರುತಿಸುವುದಕ್ಕೆ ಸಾಧ್ಯ.

-ರಾಧಾಕೃಷ್ಣ ಕಲ್ಚಾರ್ ವಿಟ್ಲ  

0 Comments

Submit a Comment

Your email address will not be published. Required fields are marked *

Related Articles

Related

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ಯಾವ ಮಗನ ಅಭ್ಯುದಯಕ್ಕಾಗಿ ಕೈಕೇಯಿ ವರವನ್ನು ವಿನಿಯೋಗಿಸಿದ್ದಳೋ, ಆ ಅಭ್ಯುದಯದ ಸಂತೋಷ ಭರತನಿಗೂ ಆಗಲಿಲ್ಲ ಹಾಗೂ ಇದರ ಆನಂದವನ್ನು ತಾಯಿಯೂ ಅನುಭವಿಸಲಿಲ್ಲ. ಇಲ್ಲಿ ವರಗಳೇ ವಿಚಿತ್ರವಾಯಿತು. ಪ್ರಾಣ ಉಳಿಸಬೇಕಾಗಿದ್ದ ವರವನ್ನು ವಿನಿಯೋಗಿಸಿ, ಪ್ರಾಣವನ್ನು ತೆಗೆಯಬೇಕಾಯಿತು. ಸಂತೋಷ ಕೊಡಬೇಕಾಗಿದ್ದಕ್ಕಾಗಿ ವಿನಿಯೋಗಿಸಿದ್ದು, ದುಃಖಕ್ಕೆ ಕಾರಣವಾಯಿತು.

read more
ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಧೃತರಾಷ್ಟ್ರ ಕುರುಡನಾದರೂ ಬುದ್ಧಿ ಹೀನನಲ್ಲ. ಮಾತ್ರವಲ್ಲದೇ, ಧೃತರಾಷ್ಟ್ರವೆಂದರೆ, ರಾಷ್ಟ್ರವನ್ನು ಎತ್ತಿಹಿಡಿಯುವವನು ಎಂಬರ್ಥ ಬರುತ್ತದೆ. ದುರದೃಷ್ಟವಶಾತ್, ಈತನ ಮಕ್ಕಳು ಕೂಡ ರಾಷ್ಟ್ರವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಲಿಲ್ಲ. ಸ್ವತಃ ಧೃತರಾಷ್ಟ್ರನಿಗೂ ಆ ಕೆಲಸ ಮಾಡಲಾಗಲಿಲ್ಲ. ಆದರೆ ಈತನ ಬುದ್ಧಿವಂತಿಕೆ ಬಳಕೆಗೆ ಬಂದದ್ದು, ತನ್ನ ಮಕ್ಕಳ ಅಭ್ಯುದಯಕ್ಕೆ ಹಾಗೂ ಅವರ ಪ್ರಯೋಜನಕ್ಕೆ ಮಾತ್ರ.

read more
ರಾಮನಂತೆ ಅರಣ್ಯವಾಸಿಯಾದ ಭರತ 

ರಾಮನಂತೆ ಅರಣ್ಯವಾಸಿಯಾದ ಭರತ 

ಭರತನು ಸಿಂಹಾಸನವೇರಿ ರಾಜ್ಯವನ್ನು ಆಳಬಹುದಿತ್ತು. ಆದರೆ ಈತನ ಮನಸ್ಸು ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ರಾಮನ ಪ್ರೀತಿ, ಅಭಿಮಾನಗಳು ಆತನಿಗೆ ಶಕ್ತಿಯಾಗಿದ್ದವು. ರಾಮನೇ ರಾಜನಾಗಬೇಕೆಂದು ಬಯಸಿ, ಅಣ್ಣನನ್ನು ಹುಡುಕುತ್ತಾ ಚಿತ್ರಕೂಟದಲ್ಲಿ ಭೇಟಿಯಾಗುತ್ತಾನೆ. ಇದೊಂದು ಅಣ್ಣ-ತಮ್ಮಂದಿರ ಮಿಲನದ ಭೇಟಿ. ಭರತ, ದಶರಥನ ಮರಣವಾರ್ತೆಯನ್ನು ಹೇಳಿ, ದುಃಖಿಸಿ ಕಣ್ಣೀರಿಡುತ್ತಿರುವಾಗ, ರಾಮ ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ರಾಮ ಮಾಡಬೇಕಾದ ಕಾರ್ಯಗಳನ್ನು ತಾನು ನೇರವೇರಿಸಿದ ಸಂಗತಿಗಳನ್ನು ಹೇಳುತ್ತಾನೆ.

read more