ಆತ್ಮರಹಸ್ಯ ವಿದ್ಯೆ ಪರಿಣಿತ ವಿದುರ

ಅರ್ಹತೆಯಿದ್ದು ಅಧಿಕಾರಕ್ಕೆ ಬರಲಾಗದೆ,  ದುರದೃಷ್ಟಶಾಲಿಗಳಿಗೆ ಸಂಕೇತವಾಗಿರುವ ಪಾತ್ರ ಮಹಾಭಾರತದ ವಿದುರ. ಈತ ಧೃತರಾಷ್ಟ್ರ ಮತ್ತು ಪಾಂಡುವಿಗೆ ತಮ್ಮನಾಗಿ ಹುಟ್ಟಿದವನು. ವಿದುರನಿಗೆ ನಿಯೋಗದಲ್ಲಿ ತಂದೆಯ ಸ್ಥಾನದಲ್ಲಿರುವವರು ವೇದವ್ಯಾಸರು. ದಾಸಿಗೆ ಬಸಿರಾದ ಕಾರಣದಿಂದ, ಈತನನ್ನು ದಾಸಿಯ ಪುತ್ರ ಎಂಬ ತೆಗಳಿಕೆಗೂ ಪಾತ್ರವಾಗಿದ್ದನು.

ವಿದುರ ಮಹಾಜ್ಞಾನಿ. ಒಂದು ಸಂದರ್ಭದಲ್ಲಿ ಧೃತರಾಷ್ಟ್ರ “ನನಗೆ ಆತ್ಮವಿದ್ಯೆಯನ್ನು ಹೇಳು” ಎಂದು ಕೇಳುತ್ತಾನೆ. ಆತ್ಮವಿದ್ಯೆ ಅಥವಾ ಆತ್ಮರಹಸ್ಯ ಎನ್ನುವುದು ಬಹಳ ಗೌಪ್ಯವಾದದ್ದು. ಈ ವಿದ್ಯೆಯನ್ನು ಸಾಮಾನ್ಯರು ತಿಳಿದುಕೊಳ್ಳುವುದು ಕಷ್ಟ. ಇದನ್ನು ವಿದುರ ಜೀರ್ಣಿಸಿಕೊಂಡಿದ್ದ. ಈ ತರಹದ ಎತ್ತರದ ಜ್ಞಾನ ಮಟ್ಟವನ್ನು ಗಳಿಸಿಕೊಂಡವನಾದರೂ, ದುರಾದೃಷ್ಟವೆಂಬುದು ಹುಟ್ಟಿನಿಂದಲೇ ಹಿಂಬಾಲಿಸಿತ್ತು ಅಥವಾ ಒಂದು ನಾಡನ್ನು ಹಿಂಬಾಲಿಸಿತ್ತು. ಏಕೆಂದರೆ, ಅರ್ಹತೆಯಿದ್ದವರು ಅಧಿಕಾರಕ್ಕೆ ಬರಲಿಲ್ಲವೆಂದರೆ ಅದು, ಕೇವಲ ಅವರ ನಷ್ಟಮಾತ್ರವಲ್ಲ ನಾಡಿನ ನಷ್ಟವೂ ಹೌದು ತಾನೇ ?

ವಿದುರ ಸಿಂಹಾಸನದಿಂದ ವಂಚಿತಗೊಂಡಿದ್ದರೂ, ಹಸ್ತಿನಾವತಿ ಅರಮನೆಯಲ್ಲಿಯೇ ಇದ್ದ. ಇಬ್ಬರು ರಾಜಕುಮಾರರ ತಮ್ಮನಾಗಿ, ಅಲ್ಲಿನ ಸ್ಥಾನಮಾನವನ್ನು ಪಡೆದಿದ್ದ. ಅಲ್ಲದೇ ಭೀಷ್ಮನ ಪೂರ್ಣ ಕೃಪೆಗೆ ಪಾತ್ರನಾಗಿದ್ದ. ವಿದುರನ ವಿಶೇಷವಾದ ಯೋಗ್ಯತೆಯೆಂದರೆ, ತಪ್ಪನ್ನು ತಪ್ಪು ಎಂದು, ಸರಿಯನ್ನು ಸರಿ ಎಂದು ಹೇಳುವ ನೈತಿಕ ಧೈರ್ಯವಿತ್ತು. ಮಹಾಭಾರತದ ಕಾಲದಲ್ಲಿ ಭೀಷ್ಮ ಮತ್ತು ದ್ರೋಣರು ತೋರದಿದ್ದ ಧೈರ್ಯವನ್ನು, ವಿದುರ ತೋರಿಸಿದ ಸಂದರ್ಭಗಳಿವೆ. ಉದಾಹರಣೆಗೆ – ಕೌರವರು ದ್ರೌಪದಿಯ ವಸ್ತ್ರಾಪಹರಣ ಮಾಡುತ್ತಾರೆ. ಆ ವೇಳೆ ದ್ರೋಣ, ಕೃಪ, ಅಶ್ವತ್ಥಾಮ ಹಾಗೂ ಭೀಷ್ಮರು ಮಾತನಾಡದೆ ಅಸಹಾಯಕರಾಗಿ ನಿಲ್ಲುತ್ತಾರೆ. ಅಲ್ಲದೇ ಪಾಂಡವರು ಸಹ ಮಾತನಾಡುವುದಿಲ್ಲ. ಆಗ ವಿದುರ ಮಾತ್ರ, ಕೌರವರಿಗೆ “ಇದು ಸರಿಯಲ್ಲ. ನೀವು ಮಾಡುತ್ತಿರುವುದು ತಪ್ಪು. ಇದರಿಂದ ಹಾನಿಯಾಗುತ್ತದೆ. ಇಂತಹ ದುಸ್ಸಾಹಸಕ್ಕೆ ಮುಂದಾಗಬೇಡಿ” ಎನ್ನುತ್ತಾನೆ.

ಒಂದು ಸಭೆಯನ್ನು ಅಥವಾ ಸಮೂಹವನ್ನು ಒಂದು ಸಮಾಜವನ್ನು ಎದುರಿಸಿ, ಅಸತ್ಯ, ಅನ್ಯಾಯ, ಅಧರ್ಮದ ಅಮಲಿನ ಪರಾಕಾಷ್ಠೆಯಲ್ಲಿರುವ ಒಂದು ಗುಂಪನ್ನು ಉದ್ದೇಶಿಸಿ, ನೀವು ಮಾಡುತ್ತಿರುವುದು ತಪ್ಪು ಎಂದು ಹೇಳಬೇಕಾದರೆ, ಕೇವಲ ಧೈರ್ಯಸಾಲದು, ನೈತಿಕ ಸ್ಥೈರ್ಯ ಬೇಕಾಗುತ್ತದೆ. ಅದನ್ನು ತೋರಿಸಿದವನು ವಿದುರ. ಆದ್ದರಿಂದ ಈತನಲ್ಲಿ ಪಾಂಡವರು ಪೂರ್ಣ ವಿಶ್ವಾಸವನ್ನಿಟ್ಟಿದ್ದರು. ಹೀಗಾಗಿ ಪಾಂಡವರು ಕಾಡಿಗೆ ಹೋಗುವಾಗ ಕುಂತಿಯನ್ನು ವಿದುರನ ಮನೆಯಲ್ಲಿ ಬಿಡುತ್ತಾರೆ. ಪಾಂಡವರು, ವಾರಣಾವತದಲ್ಲಿನ ಅರಗಿನ ಮನೆಯಲ್ಲಿ ಸಾಯಬೇಕು ಎಂದು ಕೌರವರು ಬೆಂಕಿ ಹಚ್ಚುವುದಾಗಿ ಸಂಚು ಮಾಡುತ್ತಾರೆ. ಇದನ್ನರಿತ ವಿದುರ, ಪಾಂಡವರಿಗೆ “ಜೋಪಾನವಾಗಿರಿ. ಅಗ್ನಿಯಿಂದ ರಕ್ಷಿಸಿಕೊಳ್ಳಿ” ಎಂಬ ರಹಸ್ಯವನ್ನು ಹೇಳುತ್ತಾನೆ. ಈ ತರಹದ ಸೂಚನೆಗಳನ್ನು ಕೊಟ್ಟು, ಪಾಂಡವರು ಜೀವ ಸಹಿತ ಉಳಿಯುವುದಕ್ಕೆ ಈತನ ಕೊಡುಗೆ ಇದೆ.

ಇಡೀ ಮಹಾಭಾರತದ ಉದ್ದಕ್ಕೂ ಎಲ್ಲಾ ಘಟನೆಗಳಿಗೂ ಸಾಕ್ಷಿಪುರುಷ ವಿದುರ. ವಂಶದ ಏಳಿಗೆಯನ್ನು ಹಾಗೂ ದೇಶದ ಕ್ಷೇಮವನ್ನು ಲಕ್ಷಿಸಿಯೇ ವ್ಯವಹಾರ ಮಾಡುತ್ತಿದ್ದ. ಮಹಾಭಾರತದ ಬಹುತೇಕ ಕಡೆ ಪಾಂಡವರಿಗಾಗುವ ಅನ್ಯಾಯವನ್ನು ತಡೆಯುತ್ತಾನೆ. ಕೌರವರಿಗೆ ಒಳ್ಳೆಯ ದಾರಿಯನ್ನು ತೋರಿಸುತ್ತಾ, ಸಲಹೆ ಸೂಚನೆಗಳನ್ನು ಕೊಡುತ್ತಾನೆ. ಅಲ್ಲದೇ, ಧೃತರಾಷ್ಟ್ರನನ್ನು ತಿದ್ದುವುದಕ್ಕೆ ಪ್ರಯತ್ನಿಸುತ್ತಾನೆ. ಆದರೆ ಇವೆಲ್ಲವೂ ಎಲ್ಲಿಯೂ ಪ್ರಯೋಜನಕ್ಕೆ ಬಾರದಾಯಿತು. ಆದರೆ ವಿದುರನ ಜೀವನದ ಸಾರ್ಥಕತೆ ಕಂಡುಬರುವುದು, ಸಂಧಾನಕ್ಕೆ ಬಂದ ಕೃಷ್ಣನಿಂದ. ಯಾರ ಮನೆಯಲ್ಲೂ ಉಳಿಯದೆ ಕೃಷ್ಣ, ನೇರವಾಗಿ ವಿದುರನ ಮನೆಗೆ ತೆರಳಿ ಭೋಜವನ್ನು ಸ್ವೀಕರಿಸುತ್ತಾನೆ.

ಆ ಕಾಲದಲ್ಲಿ ಜಗತ್ತು, ಕೃಷ್ಣನನ್ನು ಶ್ರೇಷ್ಠ ಮುತ್ಸದ್ಧಿಯೆಂದು ಗುರುತಿಸಿತ್ತು. ಅಲ್ಲದೇ ಭೂಮಿಗಿಳಿದು ಬಂದ ಭಗವಂತ ಎಂದು ಆರಾಧಿಸುತ್ತಿತ್ತು. ಇಂತಹ ಅತ್ಯುನ್ನತ ಮಟ್ಟದಲ್ಲಿದ್ದ ಕೃಷ್ಣ, ತಿರಸ್ಕಾರ, ಉಪೇಕ್ಷೆ ಹಾಗೂ ದಾಸಿಪುತ್ರ ಎಂಬ ತೆಗಳಿಕೆ ಪಾತ್ರನಾಗಿದ್ದ ವಿದುರನ ಮನೆಗೆ ಹೋಗುತ್ತಾನೆ. ಒಂದು ಭಗವಂತನ ಔದಾರ್ಯ, ಮತ್ತೊಂದು ವಿದುರನ ಭಕ್ತಿಯ ಸಾರ್ಥಕತೆ. ಇಡೀ ಮಹಾಭಾರತದ ಎಲ್ಲಕ್ಕೂ ಸಾಕ್ಷಿಯಾದ ಒಂದು ಪ್ರಜ್ಞೆಯಾಗಿ ವಿದುರನನ್ನು ಗುರುತಿಸುವುದಕ್ಕೆ ಆಸ್ಪದವಿದೆ.

ಈ ವಿದುರ ಯಾರೆನ್ನುವುದಕ್ಕೆ ಒಂದು ಹಿನ್ನಲೆಯ ಕಥೆಯಿದೆ. ಬಹಳ ಹಿಂದೆ ಒಬ್ಬ ಋಷಿಯ ಆಶ್ರಮದಲ್ಲಿ ಕಳ್ಳರು ಬಂದು ಅವಿತುಕೊಂಡಿರುತ್ತಾರೆ. ರಾಜಭಟರು ಹುಡುಕುತ್ತಾ ಬಂದು “ಇಲ್ಲಿ ಕಳ್ಳಿರಿದ್ದಾರೆಯೇ” ಎಂದು ಕೇಳಿದಾಗ, ಋಷಿ ಮಾತನಾಡದೆ ತಪ್ಪಸ್ಸಿನಲ್ಲಿ ಕುಳಿತುಕೊಂಡಿರುತ್ತಾರೆ. ಆಶ್ರಮದಲ್ಲಿ ಹುಡುಕಿದಾಗ ಕಳ್ಳರು ಸಿಗುತ್ತಾರೆ. ಈ ಋಷಿ ಕೂಡ ಕಳ್ಳರೊಂದಿಗೆ ಶಾಮಿಲಾಗಿದ್ದಾರೆಂದು ಭಟರು ಕರೆದುಕೊಂಡು ಹೋಗುತ್ತಾರೆ. ರಾಜ, ಕಳ್ಳರನ್ನು ನೋಡಿದ ಕೂಡಲೇ, ಅವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದ. ಮಹಾ ತಪಸ್ವಿಯಾದ ಋಷಿ ಕೂಡ ಶೂಲಕ್ಕೇರಬೇಕಾಯಿತು. ಅಂದರೆ ಶೂಲದ ಮೊನಚಾದ ಭಾಗದ ಮೇಲೆ ವ್ಯಕ್ತಿಯನ್ನು ಕುಳ್ಳಿರಿಸುವುದು. ದೇಹದ ಭಾಗ ಕೊರೆಯುತ್ತಾ, ಕೊರೆಯುತ್ತಾ ಪ್ರಾಣ ತೆಗೆಯುವ ವಿಧಾನ. ಶಿಕ್ಷೆಯಿಂದ ಕಳ್ಳರೆಲ್ಲಾ ಸತ್ತರು. ಆದರೆ ಯೋಗನಿಷ್ಠನಾದ ಕಾರಣ, ಋಷಿಗೆ ಏನೂ ಆಗುವುದಿಲ್ಲ. ರಾತ್ರಿ ರಾಜಭಟರು ಬಂದು ನೋಡಿದಾಗ, ಋಷಿ ಸತ್ತಿರುವುದಿಲ್ಲ. ಭಟರು ಭಯಗೊಂಡು ಓಡಿ, ರಾಜನನ್ನು ಕರೆದುಕೊಂಡು ಬರುತ್ತಾರೆ. ಆಗ ರಾಜ “ಮಹಾತ್ಮ ನಿನ್ನ ಮಹಿಮೆ ಗೊತ್ತಿಲ್ಲದೆ ನಾನು ಹೀಗೆ ಮಾಡಿದೆ. ದಯವಿಟ್ಟು ಕ್ಷಮಿಸು” ಎಂದು ಹೇಳಿ, ಶೂಲದಿಂದ ಇಳಿಸುತ್ತಾನೆ.

ಶೂಲ ಕೀಳುವುದಕ್ಕೆ ಪ್ರಯತ್ನಿಸಿದರೆ, ಶೂಲ ಬರುವುದಿಲ್ಲ. ಆಗ ಋಷಿ “ಶೂಲ ಎಲ್ಲಿಯವರೆಗೆ ನನ್ನ ದೇಹದೊಳಗೆ ತಲುಪಿತ್ತೋ, ಅದರ ಭಾಗವನ್ನು ತುಂಡು ಮಾಡಿ ತೆಗೆದುಬಿಡಿ” ಎನ್ನುತ್ತಾನೆ. ಆಗ ಉಳಿದ ಶೂಲದ ಭಾಗವನ್ನಿಟ್ಟುಕೊಂಡು, ಋಷಿ ತನ್ನ ಜೀವನ ಪರ್ಯಂತ ಓಡಾಡುತ್ತಾನೆ. ಹೀಗಾಗಿ ಈತನಿಗೆ ‘ಆಣಿ ಮಾಂಡವ್ಯ’ ಎಂದು ಹೆಸರು ಲಭಿಸುತ್ತದೆ.

ಈ ಎಲ್ಲಾ ಘಟನೆಗಳು ನಡೆದ ನಂತರ ಋಷಿ ತೀರಿಹೋಗುತ್ತಾನೆ. ಆಗ ದೂತರು ಈತನನ್ನು ಯಮನ ಬಳಿ ಕರೆದುಕೊಂಡರು ಹೋಗುತ್ತಾರೆ. ಆಗ ಋಷಿ “ಏತಕ್ಕಾಗಿ ಇಲ್ಲಿಗೆ ಕರೆದುಕೊಂಡು ಬಂದಿರಿ? ಮತ್ತು ನನಗೆ ಶೂಲದ ಭಾಗವನ್ನು ಇಟ್ಟುಕೊಂಡು ತಿರುಗುವ ಪರಿಸ್ಥಿತಿ ಏಕೆ ಬಂದಿತು?” ಎಂದು ಪ್ರಶ್ನಿಸಿದಾಗ, ಯಮ “ನೋಡಪ್ಪ, ನೀನು ಚಿಕ್ಕವನಿದ್ದಾಗ, ಕೀಟಗಳನ್ನು ಹಿಂಸಿಸುತ್ತಿದ್ದೆ. ಹೀಗಾಗಿ ಈ ಶಿಕ್ಷೆ ನೀನು ಅನುಭವಿಸಬೇಕಾಯಿತು” ಎಂದು ಹೇಳುತ್ತಾನೆ. ಆಗ ಋಷಿಗೆ ಸಿಟ್ಟು ಬಂದು “ಹನ್ನೆರಡು ವರ್ಷಕ್ಕಿಂತ ಕೆಳಗಿರುವ ಮಗುವಿನ ಬುದ್ಧಿ ಬೆಳೆದಿರುವುದಿಲ್ಲ. ಅದು ಮಾಡಿದನ್ನು ನಿಮ್ಮ ಕೆಲಸದ ಪಟ್ಟಿಗೆ ಸೇರಿಸಬಾರದು. ವಿವೇಚನೆಯಿಂದ ವ್ಯವಹರಿಸಬೇಕಾದ ಯಮಧರ್ಮನೇ, ಧರ್ಮವನ್ನು ಬಹಳ ನಿಷ್ಪಕ್ಷಪಾತವಾಗಿ ನೋಡಬೇಕಾದವನು ನೀನೇ ಹೀಗೆ ಮಾಡಿದ್ದೀಯಾ ಎಂದರೆ, ನಿನಗೆ ಕಷ್ಟ-ಸುಖದ ಅರಿವಿಲ್ಲ. ನೀನು ಮನುಷ್ಯನಾಗಿ ಹುಟ್ಟು” ಎಂದು ಶಾಪ ಕೊಡುತ್ತಾನೆ. ಈ ಋಷಿ ಶಾಪದ ಫಲವಾಗಿ ಯಮ, ವಿದುರನಾಗಿ ಹುಟ್ಟುತ್ತಾನೆ ಎಂಬ ಹಿನ್ನಲೆ ಕಥೆ. ಹೀಗಾಗಿ ಯಮನಿಗೆ ಧರ್ಮಗಳ ಬಗ್ಗೆ ಬಹಳ ವಿವೇಚನೆ ಬಂದಿತು. ಇದೇ ವಿದುರನಲ್ಲಿಯೂ ಕಾಣಿಸಿಕೊಂಡಿರಬಹುದು. ಮಾತ್ರವಲ್ಲದೆ, ವಿದುರ ಯಮಾಂಶ ಸಂಭೂತ. ಅಲ್ಲದೇ, ಧರ್ಮರಾಯನೂ ಯಮಾಂಶ ಸಂಭೂತನಾಗಿದ್ದ ಕಾರಣ, ಬಹುಶಃ ಇವರಿಬ್ಬರಲ್ಲೂ ಒಂದು ಆಪ್ತತೆ ಸೇರಿಕೊಂಡಿರಬಹುದು.

ಕೊನೆಯಲ್ಲಿ ವಿದುರ, ಧೃತರಾಷ್ಟ್ರ ಮತ್ತು ಗಾಂಧಾರಿ ಜೊತೆಗೆ ಕಾಡಿಗೆ ಹೋಗಿ, ಧರ್ಮರಾಯನ ದೃಷ್ಟಿಯಲ್ಲಿ ದೃಷ್ಟಿ ಬೆರೆಸಿ, ತನ್ನ ಅಂತರಂಗದ ಸತ್ವವನ್ನು ಧರ್ಮರಾಯನಲ್ಲಿ ನಿಕ್ಷೇಪಗೊಳಿಸಿ ಸತ್ತುಹೋಗುತ್ತಾನೆ. ಇದು ಆಗಲೇ ಹೇಳಿದಂತೆ ಪೂರ್ವ ಸಂಬಂಧವನ್ನು ಧೃಡೀಕರಿಸುತ್ತದೆ. ಹೀಗೆ ತನಗೆ ಏನನ್ನೂ ಮಾಡಿಕೊಳ್ಳದೆ, ಉಳಿದವರ ಕ್ಷೇಮಕ್ಕಾಗಿ ಹಂಬಲಿಸಿ, ಅರ್ಹತೆಯಿದ್ದು ಅಧಿಕಾರ ವಂಚಿತನಾಗಿ ಒಂದು ವಿಶಿಷ್ಟ ವ್ಯಕ್ತಿತ್ವವಾಗಿ ಮಹಾಭಾರತದ ವಿದುರನಿದ್ದಾನೆ.

ವಿದುರನ ವಿಶೇಷವೆಂದರೆ, ಕಣ್ಣಿಲ್ಲದ ಧೃತರಾಷ್ಟ್ರನಿಗೆ, ಈತನ ಮಕ್ಕಳೇ ಕಣ್ಣಾಗಿರಬೇಕಾಗಿತ್ತು. ಆದರೆ ತಮ್ಮನ ಸ್ಥಾನದಲ್ಲಿದ್ದ ವಿದುರ, ಧೃತರಾಷ್ಟ್ರನಿಗೆ ಕಣ್ಣಾಗಿ ನಿಂತು, ಆಧಾರಸ್ತಂಬವಾಗಿ ನಡೆದುಕೊಂಡಿದ್ದನು. ಅನೇಕ ಬಾರಿ ಧೃತರಾಷ್ಟ್ರನು ಕೂಡ ವಿದುರನನ್ನು ಖಂಡಿಸುತ್ತಿದ್ದ. ಏಕೆಂದರೆ ತನ್ನ ಮಕ್ಕಳನ್ನು ವಿರೋಧಿಸುವವರನ್ನೆಲ್ಲಾ ಖಂಡಿಸುತ್ತಿದ್ದ. ಇದ್ಯಾವುದನ್ನು ವಿದುರ ಶಾಶ್ವತವಾಗಿ ಮನಸ್ಸಿನಲ್ಲಿಟ್ಟುಕೊಳ್ಳದೆ, ಧೃತರಾಷ್ಟ್ರನಿಗೆ ಹೊರಗಿನ ಕಣ್ಣಾಗಿ, ಹೊರಗಿನ ಆಧಾರವಾಗಿ ಜೀವನದುದ್ದಕ್ಕೂ ನಿಂತ ವ್ಯಕ್ತಿ. ಹೀಗಿದ್ದೂ ಒಂದು ಸಂದರ್ಭದಲ್ಲಿ ವಿದುರ ಬಿಟ್ಟು ಹೋಗುತ್ತಾನೆ. ಅಂದರೆ ಪಾಂಡವರು ಮತ್ತು ಕೌರವರ ನಡುವಿನ ಯುದ್ಧವನ್ನು ನೋಡಲಾಗದೆ, ತೀರ್ಥಾಟನೆಗೆ ಹೊರಡುತ್ತಾನೆ. ಇದನ್ನು ಬಿಟ್ಟರೆ, ಧೃತರಾಷ್ಟ್ರನ ಜೀವನದುದ್ದಕ್ಕೂ ಕಣ್ಣಾಗಿದ್ದವನು ವಿದುರ.

-ರಾಧಾಕೃಷ್ಣ ಕಲ್ಚಾರ್ ವಿಟ್ಲ

0 Comments

Submit a Comment

Your email address will not be published.

Related Articles

Related

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ಯಾವ ಮಗನ ಅಭ್ಯುದಯಕ್ಕಾಗಿ ಕೈಕೇಯಿ ವರವನ್ನು ವಿನಿಯೋಗಿಸಿದ್ದಳೋ, ಆ ಅಭ್ಯುದಯದ ಸಂತೋಷ ಭರತನಿಗೂ ಆಗಲಿಲ್ಲ ಹಾಗೂ ಇದರ ಆನಂದವನ್ನು ತಾಯಿಯೂ ಅನುಭವಿಸಲಿಲ್ಲ. ಇಲ್ಲಿ ವರಗಳೇ ವಿಚಿತ್ರವಾಯಿತು. ಪ್ರಾಣ ಉಳಿಸಬೇಕಾಗಿದ್ದ ವರವನ್ನು ವಿನಿಯೋಗಿಸಿ, ಪ್ರಾಣವನ್ನು ತೆಗೆಯಬೇಕಾಯಿತು. ಸಂತೋಷ ಕೊಡಬೇಕಾಗಿದ್ದಕ್ಕಾಗಿ ವಿನಿಯೋಗಿಸಿದ್ದು, ದುಃಖಕ್ಕೆ ಕಾರಣವಾಯಿತು.

read more
ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಧೃತರಾಷ್ಟ್ರ ಕುರುಡನಾದರೂ ಬುದ್ಧಿ ಹೀನನಲ್ಲ. ಮಾತ್ರವಲ್ಲದೇ, ಧೃತರಾಷ್ಟ್ರವೆಂದರೆ, ರಾಷ್ಟ್ರವನ್ನು ಎತ್ತಿಹಿಡಿಯುವವನು ಎಂಬರ್ಥ ಬರುತ್ತದೆ. ದುರದೃಷ್ಟವಶಾತ್, ಈತನ ಮಕ್ಕಳು ಕೂಡ ರಾಷ್ಟ್ರವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಲಿಲ್ಲ. ಸ್ವತಃ ಧೃತರಾಷ್ಟ್ರನಿಗೂ ಆ ಕೆಲಸ ಮಾಡಲಾಗಲಿಲ್ಲ. ಆದರೆ ಈತನ ಬುದ್ಧಿವಂತಿಕೆ ಬಳಕೆಗೆ ಬಂದದ್ದು, ತನ್ನ ಮಕ್ಕಳ ಅಭ್ಯುದಯಕ್ಕೆ ಹಾಗೂ ಅವರ ಪ್ರಯೋಜನಕ್ಕೆ ಮಾತ್ರ.

read more
ರಾಮನಂತೆ ಅರಣ್ಯವಾಸಿಯಾದ ಭರತ 

ರಾಮನಂತೆ ಅರಣ್ಯವಾಸಿಯಾದ ಭರತ 

ಭರತನು ಸಿಂಹಾಸನವೇರಿ ರಾಜ್ಯವನ್ನು ಆಳಬಹುದಿತ್ತು. ಆದರೆ ಈತನ ಮನಸ್ಸು ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ರಾಮನ ಪ್ರೀತಿ, ಅಭಿಮಾನಗಳು ಆತನಿಗೆ ಶಕ್ತಿಯಾಗಿದ್ದವು. ರಾಮನೇ ರಾಜನಾಗಬೇಕೆಂದು ಬಯಸಿ, ಅಣ್ಣನನ್ನು ಹುಡುಕುತ್ತಾ ಚಿತ್ರಕೂಟದಲ್ಲಿ ಭೇಟಿಯಾಗುತ್ತಾನೆ. ಇದೊಂದು ಅಣ್ಣ-ತಮ್ಮಂದಿರ ಮಿಲನದ ಭೇಟಿ. ಭರತ, ದಶರಥನ ಮರಣವಾರ್ತೆಯನ್ನು ಹೇಳಿ, ದುಃಖಿಸಿ ಕಣ್ಣೀರಿಡುತ್ತಿರುವಾಗ, ರಾಮ ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ರಾಮ ಮಾಡಬೇಕಾದ ಕಾರ್ಯಗಳನ್ನು ತಾನು ನೇರವೇರಿಸಿದ ಸಂಗತಿಗಳನ್ನು ಹೇಳುತ್ತಾನೆ.

read more