ಯುಗವನ್ನು ಪ್ರಭಾವಿಸಿದ ವೇದವ್ಯಾಸ

ವೇದವ್ಯಾಸರು ವಾಲ್ಮೀಕಿಯಂತೆ ಮಹಾಕಾವ್ಯ ಬರೆಯುವುದರ ಜೊತೆಜೊತೆಗೆ, ತಾನು ಒಂದು ಪಾತ್ರವಾಗಿ ಕಾಣಿಸಿಕೊಳ್ಳುತ್ತಾರೆ. ವ್ಯಾಸ ಎಂದರೆ ವಿಭಾಗ ಎಂದರ್ಥ. ವೇದಗಳನ್ನು ವಿಭಾಗ ಮಾಡಿ ಅಧ್ಯಯನ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದರಿಂದ ವೇದವ್ಯಾಸ ಅಂತಲೂ ಕರೆಯುತ್ತಾರೆ. ಈ ವ್ಯಾಸ ಎನ್ನುವುದು ಒಬ್ಬ ವ್ಯಕ್ತಿಯ ಹೆಸರಲ್ಲ. ಅದೊಂದು ಇಂದ್ರ ಪದವಿಯ ಮಾದರಿ. ಅಂದರೆ ಇಂದ್ರ ಪದವಿ ಶಾಶ್ವತ. ಆದರೆ ವ್ಯಕ್ತಿ ಬದಲಾಗುತ್ತಿರುತ್ತಾರೆ. ಹೀಗಾಗಿ ಈ ವ್ಯಾಸತ್ವ ಎನ್ನವುದು ಮಹಾಯುಗಕ್ಕೆ ಬದಲಾಗುವ ಒಂದು ಪದವಿ.

ಮಹಾಭಾರತ ಕರ್ತೃ ವ್ಯಾಸರ ಹುಟ್ಟು, ಪಾತ್ರ ಹಾಗೂ ನಾಮಾಂತರಗಳು ಸ್ವಾರಸ್ಯಕರವಾಗಿದೆ. ಈ ವ್ಯಾಸರಿಗೆ ಬಾದರಾಯಣ, ಕೃಷ್ಣದ್ವೈಪಾಯನ ಹಾಗೂ ಕೃಷ್ಣ ಎಂಬ ಹೆಸರುಗಳಿವೆ. ಬದರಿ ವೃಕ್ಷಗಳು ತುಂಬಿದ ವನದಲ್ಲಿ ತಪಸ್ಸು ಮಾಡಿದ್ದರಿಂದ ‘ಬಾದರಾಯಣ’, ದೇಹ ಕಪ್ಪಾಗಿದ್ದರಿಂದ ‘ಕೃಷ್ಣ’ ಹಾಗೂ ಯಮುನಾ ಮಧ್ಯದಲ್ಲಿನ ದ್ವೀಪದಲ್ಲಿ ಪರಾಶರ ಮಹರ್ಷಿ ಮತ್ತು ಸತ್ಯವತಿ ಮಗನಾಗಿ ಹುಟ್ಟಿದ್ದರಿಂದ ‘ಕೃಷ್ಣದ್ವೈಪಾಯನ’ ಎಂದು ಕರೆಯಲಾಯಿತು.

ಈ ಕೃಷ್ಣದ್ವೈಪಾಯನ ಮಹಾಜ್ಞಾನಿ. ಹುಟ್ಟಿದ ಕೂಡಲೇ ಪ್ರೌಢತೆ ಪಡೆದು, ಶಿಷ್ಯರಿಗೆ ಉಪದೇಶ ಮಾಡುತ್ತಾ, ಮಹಾಋಷಿ, ಬ್ರಹ್ಮಋಷಿ ಎಂದು ಕರೆಸಿಕೊಂಡಿದ್ದಾರೆ. ಇವರು ‘ಜಯ’ ಎಂಬ ಮಹಾಕಾವ್ಯ ಬರೆದರು. ಮಹಾಭಾರತ ಕಾವ್ಯದ ಮೂಲ ಹೆಸರೇ ಜಯ. ಈ ಕಾವ್ಯವು ರೂಢಿಯಿಂದ ಬಂದ ಕಥೆ. ಇದನ್ನು ಸ್ವತಃ ಬರೆಯಲು ಸಾಧ್ಯವಿಲ್ಲವಾದ್ದರಿಂದ, ತಾನು ಹೇಳುತ್ತಾ, ಮತ್ತೊಬ್ಬರು ಬರೆಯಬೇಕು ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. ಆದರೆ ಬರೆಯವ ಲಿಪಿಕಾರನು ಯಾರು? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಕುಮಾರವ್ಯಾಸ ಹೇಳಿದ ಹಾಗೆ, “ವೀರನಾರಾಯಣನೇ ಕವಿ, ಲಿಪಿಕಾರ ಕುಮಾರವ್ಯಾಸ” ಎನ್ನುವಂತೆ, ಮಹಾಭಾರತದ ರಚನೆಗೆ ಗಜಮುಖ ಸಿದ್ಧನಾಗುತ್ತಾನೆ. ಆದರೆ ಗಣಪತಿ ವ್ಯಾಸರಿಗೆ ನಿಬಂಧನೆ ಸೂಚಿಸಿ, “ನಾನು ಬರೆಯುವುದಕ್ಕೆ ಸಿದ್ಧ. ಆದರೆ ನೀನು ಎಲ್ಲಿಯೂ ನಿಲ್ಲಿಸಬಾರದು. ನಿರಂತರವಾಗಿ ಹೇಳುತ್ತಿರಬೇಕು” ಎಂದು ಹೇಳಿದಾಗ, ವ್ಯಾಸರು “ಸರಿ” ಎಂದು ಒಪ್ಪುತ್ತಾರೆ.

ಗಣಪತಿಯ ಬರವಣಿಗೆ ವೇಗ ಅಸಾಧ್ಯವಾದದ್ದು. ಹೇಳಿದ ತಕ್ಷಣ ಬರೆಯುವ ಸಾಮರ್ಥ್ಯವಿತ್ತು. ವ್ಯಾಸರು ಕೂಡ ಶ್ಲೋಕವನ್ನು ಛಂದಬದ್ಧವಾಗಿ ಅಷ್ಟೇ ವೇಗವಾಗಿ ಹೇಳಬೇಕು. ಜೊತೆಗೆ ಮುಂದಿನ ಕಥೆಯನ್ನು ಶ್ಲೋಕವಾಗಿ ಹೇಳುವುದಕ್ಕೆ ಸಮಯ ಬೇಕಾಗಿತ್ತು. ಹೀಗಾಗಿ ಉಪಾಯವೊಂದನ್ನು ಹೂಡಿ ಗಣಪತಿಗೆ, “ಈ ಕಾವ್ಯವನ್ನು, ಸುಮ್ಮನೆ ಬರೆಯುವಂತಿಲ್ಲ, ಅರ್ಥೈಸಿಕೊಂಡು ಬರೆಯಬೇಕು” ಎಂಬ ನಿಬಂಧನೆ ಹಾಕಿದ್ದರು. ಆ ವೇಳೆ ಕೆಲವೊಂದು ಜಟಿಲ ಶ್ಲೋಕಗಳನ್ನು ಹೇಳುತ್ತಿದ್ದರು. ಗಣಪತಿ ಅದನ್ನು ಯೋಚಿಸಿ, ಅರ್ಥೈಸಿಕೊಂಡು ಬರೆಯಬೇಕಾದರೆ ಸಮಯ ತೆಗೆದುಕೊಳ್ಳುತ್ತಿದ್ದ. ಆ ಸಮಯದೊಳಗೆ ಮುಂದಿನ ಕಥೆಗೆ ಬೇಕಾದ ಕಥೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು. ಇದು ಸ್ವಾರಸ್ಯಕರವಾದ ಕಥೆ. ಏಕೆಂದರೆ ಕವಿಗಳ ಬಗ್ಗೆ, ಮಹತ್ವಪೂರ್ಣ ವ್ಯಕ್ತಿಗಳ ಬಗ್ಗೆ ಇಂತಹ ಕಥನಗಳು ಹುಟ್ಟುವುದು ಆಶ್ಚರ್ಯವೇನಲ್ಲ.

ಈಗಾಗಲೇ ಉಲ್ಲೇಖಿಸಿದಂತೆ ಕುಮಾರವ್ಯಾಸನ ಬಗ್ಗೆಯೂ ಒಂದು ಕಥೆ ಇದೆ. ಈತ ನದಿಯಲ್ಲಿ ಸ್ನಾನ ಮಾಡಿ, ಒದ್ದೆಯಾದ ಬಟ್ಟೆ ಒಣಗುವವರೆಗೂ ಮಾತ್ರ ಕಾವ್ಯ ಬರೆಯುತ್ತಿದ್ದ. ಅಂದರೆ ಬಟ್ಟೆ ಒಣಗಿದ ತಕ್ಷಣ ಕಾವ್ಯ ಸ್ಫೂರ್ತಿ ಬತ್ತಿಹೋಗುತ್ತಿತ್ತು. ಇಂತಹ ಅನೇಕ ದಂತಕಥೆಗಳಿವೆ.

ವ್ಯಾಸರು ಕೂಡ ಮಹಾಭಾರತದ ಪಾತ್ರವಾಗಿ, ಅಲ್ಲಿನ ಬೆಳವಣಿಗೆಗೆ ಕೊಡುಗೆ ಕೊಡುವವರಾಗಿ ಕೂಡ ಕಾಣಿಸಿಕೊಳ್ಳುತ್ತಾರೆ. ಒಂದು ಉಲ್ಲೇಖದಲ್ಲಿ ಗಾಂಧಾರಿಗೆ ವ್ಯಾಸರಾಯರು ಒಂದು ಮಂತ್ರ ಪಿಂಡವನ್ನು ಕೊಟ್ಟು, “ಇದನ್ನು ನೀನು ತೆಗೆದುಕೋ. ಇದರಿಂದ ನಿನಗೆ 100 ಮಂದಿ ಮಕ್ಕಳು ಹುಟ್ಟುತ್ತಾರೆ” ಎಂದು ಹೇಳುತ್ತಾರೆ. ಅನಂತರ ಕುರುವಂಶ ಬೆಳೆಯುತ್ತದೆ. ಅಂತೆಯೇ ಅಲ್ಲಲ್ಲಿ ವ್ಯಾಸರ ಪ್ರವೇಶವಾಗುತ್ತದೆ. ಪಾಂಡವರ ಮುಂದಿನ ಜೀವನದ ಬೆಳವಣಿಗೆಗೆ, ಅಭಿವೃದ್ಧಿಗೆ ಹಾಗೂ ಅವರ ಕಲ್ಯಾಣಕ್ಕೆ ಬೇಕಾದ ಎಲ್ಲವನ್ನೂ, ಆಯಾ ಕಾಲಘಟ್ಟದಲ್ಲಿ ಬಂದು ಒದಗಿಸಿಕೊಡುತ್ತಾರೆ.

ಒಂದು ಸಂದರ್ಭದಲ್ಲಿ ಪಾಂಡವರು ಮತ್ತು ಕೌರವರ ನಡುವಿನ ವಿವಾದ ವಿಪರೀತಕ್ಕೆ ಹೋಗಿ, ಯುದ್ಧದ ಸಮಯ ಸಮೀಪಿಸುತ್ತದೆ. ಕೌರವವರ ತಂದೆ ಕುರುಡ ಧೃತರಾಷ್ಟ್ರನಿಗೆ ವ್ಯಾಸರು “ಈ ಯುದ್ಧವನ್ನು ನೋಡುವ ಇಚ್ಛೆ ನಿನಗಿದ್ದರೆ, ದಿವ್ಯದೃಷ್ಟಿಯನ್ನು ಕೊಡುತ್ತೇನೆ. ಆ ಮೂಲಕ ರಣರಂಗ ಸನ್ನಿವೇಶಗಳನ್ನು ನೀನು ನೋಡಬಹುದು” ಎಂದಾಗ ಧೃತರಾಷ್ಟ್ರ “ನಾನು ನೋಡುವುದು ಬೇಡ. ಕೇಳಿದರೆ ಸಾಕು” ಎಂದು ಹೇಳುತ್ತಾನೆ. ಆಗ ಒಬ್ಬ ವರದಿಗಾರನನ್ನು ಸಿದ್ಧ ಮಾಡಿ, ಆತನಿಗೆ ವ್ಯಾಸರು ದಿವ್ಯದೃಷ್ಟಿಯನ್ನು ಕೊಡುತ್ತಾರೆ. ಆ ವರದಿಗಾರ ತನ್ನ ಕಣ್ಣೆದುರಲ್ಲಿ ನಡೆಯುತ್ತಿರುವುದನ್ನು ಧೃತರಾಷ್ಟ್ರನಿಗೆ ಹೇಳುತ್ತಾನೆ. ಇದು ವ್ಯಾಸರಿಗಿರುವ ಸಾಮರ್ಥ್ಯ. ಹೀಗೆ ವ್ಯಾಸರು ಕವಿಯಾಗಿ ಹಾಗೂ ಶಾಸ್ತ್ರಕಾರರಾಗಿ ಪ್ರಸಿದ್ಧರಾದರು.

ಕುಂತಿ ಮತ್ತು ಗಾಂಧಾರಿಗೆ ಯುದ್ಧದಲ್ಲಿ ಸತ್ತ, ತಮ್ಮ ಯೋಧರನ್ನು ಹಾಗೂ ಬಂಧು-ಬಳಗದವರನ್ನು ನೋಡಬೇಕೆನ್ನುವ ಹಂಬಲ. ಆಗ ವ್ಯಾಸರು ಒಂದು ದಿನ, ಗಂಗಾ ನದಿಯ ತೀರದಲ್ಲಿ ಸತ್ತಿರುವ ಬಂಧುಗಳನ್ನು ಕರೆಯುತ್ತಾರೆ. ಅವರೆಲ್ಲರೂ ಒಂದು ದಿನ ಮಾತ್ರ ಕುಂತಿ ಮತ್ತು ಗಾಂಧಾರಿಯ ಜೊತೆಗಿದ್ದು, ನಂತರ ಕಣ್ಮರೆಯಾಗುತ್ತಾರೆ. ಇದು ವ್ಯಾಸರ ಮತ್ತೊಂದು ವಿಶಿಷ್ಟ ಶಕ್ತಿ.

ವೇದವ್ಯಾಸರ ಕುರಿತಾಗಿ ಉಲ್ಲೇಖಿಸಬೇಕಾದ ಮತ್ತೊಂದು ಸಂಗತಿಯಿದೆ. ಪಾಂಡವರು ಕಾಡಿನಲ್ಲಿ ಜನಿಸಿದವರು. ಋಷಿಗಳ ಮೂಲಕ ಇವರು ಅರಮನೆಗೆ ಬರುತ್ತಾರೆ. ಆ ವೇಳೆಯಲ್ಲಿ ಒಂದೇ ಅರಮನೆಯಲ್ಲಿ ಕೌರವರು ಮತ್ತು ಪಾಂಡವರು ಜೊತೆಯಾಗಿ ಇರಬೇಕಾಗುತ್ತದೆ. ಆಗ ವ್ಯಾಸರು ತನ್ನ ತಾಯಿ ಸತ್ಯವತಿಗೆ “ಅಮ್ಮ ನೀನು ಇನ್ಮುಂದೆ ಅರಮನೆಯಲ್ಲಿ ಇರಬಾರದು. ಏಕೆಂದರೆ ಕಾಲ, ನಾಳೆಯಿಂದ ನಾಳೆಗೆ, ನಾಳೆಯಿಂದ ನಾಡಿದ್ದಿಗೆ ಕೆಡುವುದು. ಈಗಿದ್ದ ಹಾಗೆ ಇರುವುದಿಲ್ಲ. ಮುಂದೆ ಧೃತರಾಷ್ಟ್ರನ ಮಕ್ಕಳಿಗೂ, ಪಾಂಡುವಿನ ಮಕ್ಕಳಿಗೂ ಯುದ್ಧವಾಗುತ್ತದೆ. ಈ ಯುದ್ಧದ ಸನ್ನಿವೇಶವನ್ನು ನೀನು ನೋಡುವುದು ಬೇಡ. ಹಾಗಾಗಿ ನೀನು ಅರಮನೆಯನ್ನು ಬಿಟ್ಟು ಹೊರಡು” ಎಂದು ದಾರ್ಶಿನಿಕ ಮಾತನ್ನು ಹೇಳುತ್ತಾರೆ. ಆಗ ಸತ್ಯವತಿ ತನ್ನ ಸೊಸೆಯಂದಿರಾದ ಅಂಬಿಕೆ ಮತ್ತು ಅಂಬಾಲಿಕೆಯರನ್ನು ಕರೆದುಕೊಂಡು ವಾನಪ್ರಸ್ಥಕ್ಕೆ ತೆರಳುತ್ತಾಳೆ. ಹೀಗೆ ವ್ಯಾಸರಿಗೆ, ಯುದ್ಧವನ್ನು ಯಾರು ನೋಡಬೇಕು ಮತ್ತು ಯಾರು ನೋಡಬಾರದು ಎನ್ನುವ ದಾರ್ಶನಿಕ ದೂರದೃಷ್ಟಿ ಇತ್ತು.

ಒಂದು ಯುಗವನ್ನು ಪ್ರಭಾವಿಸಬಲ್ಲ ಬೌದ್ಧಿಕತೆ, ಪ್ರಜ್ಞೆ ಹಾಗೂ ಪ್ರಜ್ಞಾವಿಶೇಷ ವ್ಯಾಸರಲ್ಲಿತ್ತು. ಈ ಕವಿ ತನ್ನ ಕಾವ್ಯದಲ್ಲಿ ಪಾತ್ರವಾಗಿ ಬರುವಾಗ, ಅದನ್ನು ವ್ಯಕ್ತಿ ಎಂದು ಗುರುತಿಸದೇ, ಒಂದು ಪ್ರಜ್ಞಾವಿಶೇಷವಾಗಿ ಗ್ರಹಿಸಬೇಕು. ಅಂತೆಯೇ ಒಂದು ಸಮುದಾಯವನ್ನು ಉದ್ದೇಶಿಸುವ ಪ್ರಜ್ಞೆಯಾಗಿ ಹಾಗೂ ಇದಕ್ಕಿಂತ ಪ್ರತ್ಯೇಕವಾಗಿರುವ ಪ್ರಜ್ಞೆಯಾಗಿಯೂ ಗುರುತಿಸಬೇಕು. ಹೀಗೆ ವ್ಯಾಸರು ಮಹಾಭಾರತದಲ್ಲಿ ಬಹುತೇಕ ಸಂದರ್ಭದಲ್ಲಿ ಪ್ರವೇಶ ಮಾಡುತ್ತಾ, ಇಡೀ ಕಥನವನ್ನು ನಿರ್ದೇಶಿಸುವ ಕೆಲಸವನ್ನೂ ಮಾಡುತ್ತಿರುತ್ತಾರೆ.

ಮತ್ತೊಂದು ಸಂಧರ್ಭದಲ್ಲಿ ವ್ಯಾಸರು ಯುಧಿಷ್ಠಿರನಿಗೆ “ಮುಂದೆ, ನಿನ್ನಿಂದ ಒಂದು ದೊಡ್ಡ ಕಲಹ ನಡೆಯಲಿದೆ. ದಾಯಾದಿಗಳ ನಡುವೆ ಯುದ್ಧಗಳು ನಡೆಯುತ್ತದೆ” ಎಂದು ಹೇಳುತ್ತಾನೆ. ಅಂದರೆ ಮುಂದೆ ನಡೆಯುವ ಅನಿವಾರ್ಯತೆಗೆ, ಆ ಪಾತ್ರಗಳು ಕಾರಣವಾಗಿ ನಿಲ್ಲುತ್ತದೆ. ಇವೆಲ್ಲವನ್ನೂ ಗ್ರಹಿಸಿದರೆ, ವ್ಯಾಸರ ನಿರ್ಲಿಪ್ತತೆ ತಿಳಿಯುತ್ತದೆ.

ಚಂದ್ರವಂಶಕ್ಕೆ ಬಹಳ ದೊಡ್ಡ ಕೊಡುಗೆಯನ್ನು ಕೊಟ್ಟವರು ವ್ಯಾಸರು. ಸತ್ಯವತಿ ಮಕ್ಕಳಾದ ಚಿತ್ರಾಂಗದ ಮತ್ತು ವಿಚಿತ್ರವೀರ್ಯರಿಗೆ (ಶಂತನು ಮತ್ತು ಸತ್ಯವತಿಗೆ ಹುಟ್ಟಿದ ಮಕ್ಕಳು) ಮಕ್ಕಳಿರುವುದಿಲ್ಲ. ಹಾಗಾದರೆ ವಂಶ ಬೆಳೆಯುವುದು ಹೇಗೆ? ಎಂಬ ಪ್ರಶ್ನೆ ಮೂಡುತ್ತದೆ. ಆ ಕಾಲದ ಶಾಸ್ತ್ರ ಮತ್ತು ಧರ್ಮ, ‘ಒಬ್ಬ ಯೋಗ್ಯನಾದವನಿಂದ, ನಿಯೋಗ ಪದ್ಧತಿಯಿಂದ ಸಂತಾನ ಪಡೆಬಹುದು’ ಎಂದು ಹೇಳುತ್ತದೆ. ಅಂತೆಯೇ ಸತ್ಯವತಿ, ತನ್ನ ಮತ್ತೊಬ್ಬ ಮಗನಾದ ವ್ಯಾಸನ ಮೂಲಕ ಅಂಬಿಕೆ ಮತ್ತು ಅಂಬಾಲಿಕೆಯರಿಗೆ ಮಕ್ಕಳಾಗುವಂತೆ ಮಾಡುತ್ತಾಳೆ. ಆ ಮಕ್ಕಳೇ ಧೃತರಾಷ್ಟ್ರ, ಪಾಂಡು ಮತ್ತು ವಿದುರ. ಹೀಗೆ ಸಂತಾನ ಬೆಳೆಯಿತು.

ಮೊದಲೇ ತಿಳಿಸಿದಂತೆ ನಿರ್ಲಿಪ್ತತೆ ಎನ್ನುವುದಕ್ಕೆ ವಿಶಿಷ್ಟ ಒತ್ತು ಕೊಡಬೇಕು. ಏಕೆಂದರೆ, ಹೀಗೆ ಬೆಳೆದ ಸಂತಾನ ತನ್ನದೇ ಎಂದು ಗೊತ್ತಿದ್ದೂ, ಅದರ ಪರಿಣಾಮ ಏನಾಗುತ್ತದೆ ಎಂಬುದನ್ನೂ ತಿಳಿದಿದ್ದು, ಅದರಲ್ಲಿ ತೊಡಗಿಸಿಕೊಳ್ಳದೆ, ಪ್ರತ್ಯೇಕತೆ ಕಾಯ್ದುಕೊಂಡಿದ್ದರಿಂದ, ಪ್ರಜ್ಞಾವಿಶೇಷವಾಗಿ ಈ ವ್ಯಕ್ತಿತ್ವವನ್ನು ಗುರುತಿಸಬೇಕು.

ವ್ಯಾಸರ ವ್ಯಕ್ತಿತ್ವ, ಕಾವ್ಯ, ಬೌದ್ಧಿಕತೆ ಹಾಗೂ ಪ್ರಜ್ಞೆ ಮೇಳೈಸಿ, ಮಹಾಭಾರತದ ಜೊತೆಯಲ್ಲಿ ಒಂದು ಅವಿನಭಾವ ಸಂಬಂಧವನ್ನು ಬೆಸೆದಿರುವುದನ್ನು ಕಾಣಬಹುದು.   

-ರಾಧಾಕೃಷ್ಣ ಕಲ್ಚಾರ್ ವಿಟ್ಲ

1 Comment

  1. anant Vaidya Yellapur

    ಬಹಳವಾಗಿ ಮನಸೆಳೆಯುವ ಕವಿ+ಪಾತ್ರ. ತಾವು ಚನ್ನಾಗಿಯೇ ವಿವರಿಸಿದ್ದೀರಿ.

    Reply

Submit a Comment

Your email address will not be published. Required fields are marked *

Related Articles

Related

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ಯಾವ ಮಗನ ಅಭ್ಯುದಯಕ್ಕಾಗಿ ಕೈಕೇಯಿ ವರವನ್ನು ವಿನಿಯೋಗಿಸಿದ್ದಳೋ, ಆ ಅಭ್ಯುದಯದ ಸಂತೋಷ ಭರತನಿಗೂ ಆಗಲಿಲ್ಲ ಹಾಗೂ ಇದರ ಆನಂದವನ್ನು ತಾಯಿಯೂ ಅನುಭವಿಸಲಿಲ್ಲ. ಇಲ್ಲಿ ವರಗಳೇ ವಿಚಿತ್ರವಾಯಿತು. ಪ್ರಾಣ ಉಳಿಸಬೇಕಾಗಿದ್ದ ವರವನ್ನು ವಿನಿಯೋಗಿಸಿ, ಪ್ರಾಣವನ್ನು ತೆಗೆಯಬೇಕಾಯಿತು. ಸಂತೋಷ ಕೊಡಬೇಕಾಗಿದ್ದಕ್ಕಾಗಿ ವಿನಿಯೋಗಿಸಿದ್ದು, ದುಃಖಕ್ಕೆ ಕಾರಣವಾಯಿತು.

read more
ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಧೃತರಾಷ್ಟ್ರ ಕುರುಡನಾದರೂ ಬುದ್ಧಿ ಹೀನನಲ್ಲ. ಮಾತ್ರವಲ್ಲದೇ, ಧೃತರಾಷ್ಟ್ರವೆಂದರೆ, ರಾಷ್ಟ್ರವನ್ನು ಎತ್ತಿಹಿಡಿಯುವವನು ಎಂಬರ್ಥ ಬರುತ್ತದೆ. ದುರದೃಷ್ಟವಶಾತ್, ಈತನ ಮಕ್ಕಳು ಕೂಡ ರಾಷ್ಟ್ರವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಲಿಲ್ಲ. ಸ್ವತಃ ಧೃತರಾಷ್ಟ್ರನಿಗೂ ಆ ಕೆಲಸ ಮಾಡಲಾಗಲಿಲ್ಲ. ಆದರೆ ಈತನ ಬುದ್ಧಿವಂತಿಕೆ ಬಳಕೆಗೆ ಬಂದದ್ದು, ತನ್ನ ಮಕ್ಕಳ ಅಭ್ಯುದಯಕ್ಕೆ ಹಾಗೂ ಅವರ ಪ್ರಯೋಜನಕ್ಕೆ ಮಾತ್ರ.

read more
ರಾಮನಂತೆ ಅರಣ್ಯವಾಸಿಯಾದ ಭರತ 

ರಾಮನಂತೆ ಅರಣ್ಯವಾಸಿಯಾದ ಭರತ 

ಭರತನು ಸಿಂಹಾಸನವೇರಿ ರಾಜ್ಯವನ್ನು ಆಳಬಹುದಿತ್ತು. ಆದರೆ ಈತನ ಮನಸ್ಸು ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ರಾಮನ ಪ್ರೀತಿ, ಅಭಿಮಾನಗಳು ಆತನಿಗೆ ಶಕ್ತಿಯಾಗಿದ್ದವು. ರಾಮನೇ ರಾಜನಾಗಬೇಕೆಂದು ಬಯಸಿ, ಅಣ್ಣನನ್ನು ಹುಡುಕುತ್ತಾ ಚಿತ್ರಕೂಟದಲ್ಲಿ ಭೇಟಿಯಾಗುತ್ತಾನೆ. ಇದೊಂದು ಅಣ್ಣ-ತಮ್ಮಂದಿರ ಮಿಲನದ ಭೇಟಿ. ಭರತ, ದಶರಥನ ಮರಣವಾರ್ತೆಯನ್ನು ಹೇಳಿ, ದುಃಖಿಸಿ ಕಣ್ಣೀರಿಡುತ್ತಿರುವಾಗ, ರಾಮ ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ರಾಮ ಮಾಡಬೇಕಾದ ಕಾರ್ಯಗಳನ್ನು ತಾನು ನೇರವೇರಿಸಿದ ಸಂಗತಿಗಳನ್ನು ಹೇಳುತ್ತಾನೆ.

read more