ಈ ಲೋಕದಲ್ಲಿ ಶ್ರೇಷ್ಠ ವ್ಯಕ್ತಿತ್ವ ಹೊಂದಿದವರಾರು ? ವಾಲ್ಮೀಕಿಗೆ ಸಿಕ್ಕ ಉತ್ತರವೇನು ?

ರಾಮಾಯಣದ ಕರ್ತೃ ವಾಲ್ಮೀಕಿಯಲ್ಲಿ ಎರಡು ರೀತಿಯ ವ್ಯಕ್ತಿತ್ವವಿದೆ. ಒಂದು ರಾಮಾಯಣ ಕಾವ್ಯವನ್ನು ಬರೆದ ಕವಿಯಾಗಿ, ಮತ್ತೊಂದು ಆ ಕಾವ್ಯದಲ್ಲಿ ತಾನೇ ಒಂದು ಪಾತ್ರವಾಗಿರುವುದು. ಒಬ್ಬ ಕವಿ ಒಂದು ಕಾವ್ಯವನ್ನು ಸೃಷ್ಟಿ ಮಾಡುವುದಲ್ಲದೇ, ಪಾತ್ರವಾಗಿ ಅದರ ಭಾಗವಾಗಿರುವುದು ವಿಶೇಷ. ವಾಲ್ಮೀಕಿ ಮೂಲತಃ ಬೇಡ. ದರೋಡೆ ಮಾಡುತ್ತಾ ಜೀವನ ಸಾಗಿಸುತ್ತಿದ್ದ. ಈತನಿಗೆ ರತ್ನಾಕರ, ರುಕ್ಷಾ ಎಂಬ ಹೆಸರುಗಳು ಕೂಡ ಇದ್ದವು. ಕ್ರೂರಿಯಾಗಿದ್ದ ಈತ ವಾಲ್ಮೀಕಿಯಾದದ್ದೇ ಒಂದು ಸ್ವಾರಸ್ಯವಾದ ಕಥೆ.

ಒಂದು ದಿನ ರತ್ನಾಕರ ದರೋಡೆ ಮಾಡುವ ಸಂದರ್ಭದಲ್ಲಿ ಸಪ್ತ ಋಷಿಗಳು ಎದುರಾಗುತ್ತಾರೆ. “ನಿಮ್ಮಲ್ಲಿರುವ ವಸ್ತುಗಳನ್ನು ಕೊಡಿ, ಇಲ್ಲದಿದ್ದರೆ ಪ್ರಾಣ ತೆಗೆಯುತ್ತೇನೆ” ಎಂದು ಹೆದರಿಸುತ್ತಾನೆ. ಆಗ ಋಷಿಗಳು “ದರೋಡೆ ಪಾಪದ ಕೆಲಸ ಅಲ್ಲವೇ? ಈ ಪಾಪದ ಪರಿಣಾಮ, ನಿನ್ನ ಮೇಲೆ ಆಗುವುದಿಲ್ಲವೇ? ನೀನು ಯಾರಿಗಾಗಿ ಹೀಗೆ ಮಾಡುತ್ತಿರುವೆ?” ಎಂದು ಪ್ರಶ್ನಿಸುತ್ತಾರೆ. ಆಗ ರತ್ನಾಕರ “ನನ್ನ ಸಂಸಾರಕ್ಕಾಗಿ ಮಾಡುತ್ತಿದ್ದೇನೆ” ಎನ್ನುವಾಗ “ಈ ಪಾಪವನ್ನು ಯಾರು ಹೊರುತ್ತಾರೆ?” ಎಂದು ಸಪ್ತ ಋಷಿಗಳು ಮತ್ತೊಮ್ಮೆ ಕೇಳಿದಾಗ “ಸಂಸಾರದವರು ಹೊರುತ್ತಾರೆ” ಎಂದು ರತ್ನಾಕರ ಉತ್ತರಿಸುತ್ತಾನೆ. ಆಗ ಋಷಿಗಳು “ನಿನ್ನ ಸಂಸಾರದವರು ಪಾಪವನ್ನು ಹೊರುವುದಿಲ್ಲ, ಅನುಮಾನವಿದ್ದರೇ ವಿಚಾರಿಸು” ಎಂದು ಹೇಳಿ ಹೊರಡುತ್ತಾರೆ.

ಮನೆಗೆ ಬಂದ ರತ್ನಾಕರ ಹೆಂಡತಿ ಮಕ್ಕಳಿಗೆ “ನಾನು ನಿಮಗಾಗಿ ಪಾತಕದ ಕೆಲಸ ಮಾಡುತ್ತಿದ್ದೇನೆ. ಇದರ ಪಾಪ ನನ್ನ ಮೇಲೆ ಮಾತ್ರ ಇರುವುದೋ? ಅಥವಾ ನೀವೂ ಹಂಚಿಕೊಳ್ಳುತ್ತೀರೋ?” ಎಂದು ಗದರಿಸಿ ಕೇಳಿದಾಗ, ಮನೆಯವರು “ಇಲ್ಲ ಇಲ್ಲ. ನೀವು ತಂದಿದ್ದನ್ನು ಮಾತ್ರ ಹಂಚಿಕೊಳ್ಳುತ್ತೇವೆ. ನಿಮ್ಮ ಪಾಪ ನಮಗೆ ಸಂಬಂಧ ಇರುವುದಿಲ್ಲ” ಎಂದು ಪ್ರತಿಕ್ರಿಯಿಸುತ್ತಾರೆ. ತಕ್ಷಣ ರತ್ನಾಕರನ ಮನಸ್ಸು ಪರಿವರ್ತನೆಯಾಗಿ, ನೇರವಾಗಿ ಸಪ್ತಋಷಿಗಳ ಬಳಿ ತೆರಳುತ್ತಾನೆ. ಆಗ ಋಷಿಗಳು “ರಾಮ ಮಂತ್ರವನ್ನು ಜಪಿಸು ರತ್ನಾಕರ. ಇದರಿಂದ ನಿನ್ನ ಬಾಳು ಬೆಳಕಾಗುತ್ತದೆ” ಎಂದು ಹೇಳಿ ರಾಮ ಮಂತ್ರವನ್ನು ಉಪದೇಶ ಮಾಡುತ್ತಾರೆ.

ಋಷಿಗಳ ಸಮ್ಮುಖದಲ್ಲೆ ರತ್ನಾಕರ ರಾಮ ಮಂತ್ರವನ್ನು ಪಠಿಸಲು ಆರಂಭಿಸುತ್ತಾನೆ. ಹಲವು ಕಾಲಗಳ ನಂತರ, ಸಪ್ತಋಷಿಗಳು ಮತ್ತೊಮ್ಮೆ ಅದೇ ಸ್ಥಳಕ್ಕೆ ಬಂದಾಗ, ರತ್ನಾಕರ ಮಂತ್ರ ಪಠಿಸಲು ಆರಂಭಿಸಿದ ಸ್ಥಳದಲ್ಲಿ ಒಂದು ಹುತ್ತ ಬೆಳೆದಿರುವುದನ್ನು ಗಮನಿಸುತ್ತಾರೆ. ಜ್ಞಾನಿಗಳಾದ ಋಷಿಗಳು ಹುತ್ತವನ್ನು ಕರಗಿಸಿದಾಗ, ಅದರೊಳಗಿನಿಂದ ರತ್ನಾಕರ ಹೊರಗೆ ಬರುತ್ತಾನೆ. ಶ್ರದ್ಧೆಯಿಂದ ರಾಮ ಮಂತ್ರವನ್ನು ಜಪಿಸುತ್ತಿದ್ದವನು, ಜ್ಞಾನಿಯಾಗಿ ಪರಿವರ್ತನೆಯಾಗಿರುತ್ತಾನೆ. ವಾಲ್ಮೀಕಿ ಎಂದರೆ ‘ಹುತ್ತ’, ಹುತ್ತದಿಂದ ಹೊರಗೆ ಬಂದವನಾಗಿದ್ದರಿಂದ ‘ವಾಲ್ಮೀಕಿ’ ಎಂದು ಹೆಸರುವಾಸಿಯಾಗುತ್ತಾನೆ. ದೈಹಿಕದಿಂದ ಬೌದ್ಧಿಕವಾಗಿ ದ್ವಿಜತ್ವವನ್ನು ಸಾಧಿಸುತ್ತಾನೆ.

ಮತ್ತೊಂದು ಘಟನೆ ವಾಲ್ಮೀಕಿ ಜೀವನದ ಪಥವನ್ನೇ ಬದಲಾಯಿಸಿಬಿಡುತ್ತದೆ. ಆಶ್ರಮಕ್ಕೆ ನಾರದ ಮರ್ಹಷಿಗಳು ಪ್ರವೇಶಿಸುವಾಗ ವಾಲ್ಮೀಕಿಯು ನಾರದರಿಗೆ, “ಸ್ವಾಮಿ ಲೋಕದಲ್ಲಿ ಅತ್ಯಂತ ಒಳ್ಳೆಯ ಗುಣಗಳುಳ್ಳ ಶ್ರೇಷ್ಠ ವ್ಯಕ್ತಿತ್ವ ಯಾರದ್ದು ?” ಎಂದು ಪ್ರಶ್ನಿಸುತ್ತಾನೆ. ಆಗ ನಾರದರು ರಾಮನ ಕಥೆಯನ್ನು ವಾಲ್ಮೀಕಿಗೆ ವಿವರಿಸುತ್ತಾರೆ. ಹೀಗೆ ನಾರದರಿಂದ ರಾಮನ ಕಥೆಯನ್ನು ಕೇಳಿದ ವಾಲ್ಮೀಕಿ ಮನನ ಮಾಡಿಕೊಳ್ಳುತ್ತಾ, ಸ್ನಾನ ಮಾಡುವುದಕ್ಕೆ ತಮಸಾ ಎನ್ನುವ ನದಿಯ ಕಡೆಗೆ ತೆರಳುತ್ತಾನೆ.

ವಾಲ್ಮೀಕಿಯು ನದಿ ತೀರದ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿರುವಾಗ, ಪ್ರಣಯ ಸಲ್ಲಾಪದಲ್ಲಿ ಮಗ್ನವಾಗಿದ್ದ ಎರಡು ಕ್ರೌಂಚ ಪಕ್ಷಿಗಳನ್ನು ಗಮನಿಸುತ್ತಾನೆ. ಕವಿ ಚಿಂತನೆಯುಳ್ಳ ವಾಲ್ಮೀಕಿಗೆ ಆನಂದವಾಗುತ್ತದೆ. ಅದೇ ಸಂದರ್ಭದಲ್ಲಿ ಬೇಡನೊಬ್ಬ ಗಂಡು ಪಕ್ಷಿಯನ್ನು ಕೊಂದಿದ್ದರಿಂದ, ಹೆಣ್ಣು ಪಕ್ಷಿ ನೋವಿನಲ್ಲಿ ನರಳಾಡುತ್ತಿರುತ್ತದೆ. ಇದನ್ನು ಗಮನಿಸಿದ ವಾಲ್ಮೀಕಿ ಆ ಬೇಡನಿಗೆ, “ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಸ್ಸಮಾ” ಎಂದು ಶಾಪಕೊಡುತ್ತಾನೆ. ತಕ್ಷಣಕ್ಕೆ “ತಾನು ತಪಸ್ವಿ, ಋಷಿ” ಎಂದು ಮನವರಿಕೆಯಾಗಿ “ಏತಕ್ಕಾಗಿ ಬೇಡನಿಗೆ ಶಾಪ ಕೊಟ್ಟೆ” ಎಂದು ದುಃಖಿತನಾಗಿ ಆಶ್ರಮಕ್ಕೆ ಹಿಂದಿರುಗುತ್ತಾನೆ.  

ಅದೇ ಸಂದರ್ಭದಲ್ಲಿ ಆಶ್ರಮಕ್ಕೆ ಬ್ರಹ್ಮದೇವ ಪ್ರವೇಶಿಸಿ “ವಾಲ್ಮೀಕಿ, ನಿನ್ನ ದುಃಖ ಮತ್ತು ಶಾಪ ಅಂತರ್ಸಂಬಂಧವಾಗಿದೆ, ನಿನ್ನ ಶೋಕ ಶ್ಲೋಕ ರೂಪದಲ್ಲಿ ಬಂದಿದೆ. ನೀನು ಅದನ್ನೇ ವಿಸ್ತರಿಸಿ ರಾಮನ ಕಥೆಯನ್ನು ಕಾವ್ಯವಾಗಿ ಬರೆಯಬೇಕು” ಎಂದು ನುಡಿಯುತ್ತಾನೆ. ಈ ಘಟನೆಯ ನಂತರ ವಾಲ್ಮೀಕಿ ರಾಮಾಯಣ ಕಥನವನ್ನು ಬರೆಯುವುದಕ್ಕೆ ತೊಡಗುತ್ತಾನೆ.

ಮಾನೀಷಾದ ಯಕ್ಷಗಾನ ಪ್ರಸಂಗದಲ್ಲಿ ವಾಲ್ಮೀಕಿ ತುಮುಲವನ್ನು, ಒಬ್ಬ ಕವಿ ಈ ರೀತಿ ಹೇಳುತ್ತಾನೆ;

“ಪೇಳಲೇನ ವಾಕ್ಯ

ತಾಳಿ ಕವಿತೆಯ ರೂಪ

ಹೊರಹೊಮ್ಮಿತೈ ಮುಖದಿ”

ವಾಲ್ಮೀಕಿಯ ಶೋಕ ಹೇಗೆ ಶಾಪ ವಾಕ್ಯವಾಗಿ ಬಂತು ಎಂಬುದನ್ನು ಈ ಪದ್ಯ ಹೇಳುತ್ತದೆ.

ಮನುಷ್ಯನ ವ್ಯಕ್ತಿತ್ವದ ಒಳಗಿನ ಭಾವಗಳು ಕಲಾತ್ಮಕವಾಗಿ, ಕಾವ್ಯಾತ್ಮಕವಾಗಿ ಅಭಿವ್ಯಕ್ತವಾದಾಗ, ಅದೊಂದು ಅಸಾಧ್ಯವಾದ ಕೃತಿಯಾಗಿ, ಜನರಿಗೆ ಹಾಗೂ ರಸಪ್ರಜ್ಞೆಯಿದ್ದವರಿಗೆ ದೊರಕುತ್ತದೆ. ಇದನ್ನು ಸಾಂಕೇತಿಕವಾಗಿ ವಾಲ್ಮೀಕಿ ಜೀವನದಲ್ಲಿ ಗುರುತಿಸಬಹುದು. ಹೀಗೆ ಶೋಕ, ದುಃಖ ಮತ್ತು ಕರುಣೆ ಸ್ಥಾಯಿ ಭಾವವಾಗಿ ಉಳಿದಿದ್ದರಿಂದ ರಾಮಾಯಣದ ಉದ್ದಕ್ಕೂ ಕರುಣೆ ಎಂಬುದು ರಸದ ಪ್ರಭಾವಾಗಿಯೇ ಬಂದಿದೆ. ಕ್ರೌರ್ಯದ ಒಡಲಿನಿಂದ, ದುಃಖ, ಕರುಣೆ ಹಾಗೂ ಶೋಕದ ಬೀಜ ಮೊಳಕೆ ಒಡೆದು, ಅದು ಕಾವ್ಯವಾಗಿ ವಿಸ್ತರಿಸಿಕೊಂಡಿರುವುದು ವಿಶಿಷ್ಟ ಸನ್ನಿವೇಶ.

ವಾಲ್ಮೀಕಿ, ತನ್ನ ಕಾವ್ಯವಾದ ರಾಮಾಯಣದಲ್ಲಿ ತಾನೂ ಪಾತ್ರವಾಗಿ ಪಾಲ್ಗೊಂಡಿದ್ದಾನೆ. ರಾಮ, ಸೀತೆಯನ್ನು ಪರಿತ್ಯಾಗ ಮಾಡಿದ ನಂತರ, ಸೀತೆಯು ವಾಲ್ಮೀಕಿ ಆಶ್ರಮವನ್ನು ಸೇರುತ್ತಾಳೆ. ತುಂಬು ಗರ್ಭಿಣಿಯಾಗಿದ್ದ ಸೀತೆ ದುಃಖಿಸುತ್ತಿರುವಾಗ, ಕವಿಗೆ ಈಕೆ ಯಾರೆಂಬುದು ಗೊತ್ತಿರುವುದಿಲ್ಲ. ವಾಲ್ಮೀಕಿ “ಯಾರಮ್ಮ ನೀನು?” ಎಂದು ಪ್ರಶ್ನಿಸಿದಾಗ, ಸೀತೆಯು “ನಾನು ರಾಮನ ಪತ್ನಿ” ಎಂದು ಉತ್ತರಿಸುತ್ತಾಳೆ. ತಾನು ಸೃಷ್ಟಿಸಿದ ಕಾಲ್ಪನಿಕ ಪಾತ್ರ, ಮೂರ್ತ ರೂಪದಿಂದ ಎದುರು ಬಂದಾಗ, ಕವಿಗೆ ಹೇಗಾಗಬಹುದು ? ಮಾತ್ರವಲ್ಲ, ತಾನು ಸೃಷ್ಟಿಸಿದ ರಾಮ ಎಂಬ ಪಾತ್ರ, ಪತ್ನಿಯನ್ನು ಕಾಡಿಗೆ ಬಿಡುವ ಕ್ರೌರ್ಯವನ್ನು ತೋರಿಸುತ್ತದೆ ಎಂದರೆ, ಕವಿಯ ಅಂತರಂಗ ಯಾವ ತುಮುಲವನ್ನು, ಸಂಘರ್ಷವನ್ನು ಎದುರಿಸಿರಬಹುದು? ಈ ಸನ್ನಿವೇಶವನ್ನು ವಾಲ್ಮೀಕಿ ಬರೆಯುವುದಿಲ್ಲ. ಆದರೆ ನಾವು ಊಹಿಸುವ ಹಾಗೂ ತರ್ಕಿಸುವ ಒಂದು ಸನ್ನಿವೇಶ. ಇದು ವಾಲ್ಮೀಕಿ ಬದುಕಿನಲ್ಲಿ ರಾಮಾಯಣದ ಪಾತ್ರವಾಗಿ ನಾವು ಕಾಣುವ ಒಂದು ವಿಶಿಷ್ಟತೆ.

ವಾಲ್ಮೀಕಿಯು ಸೀತೆಯನ್ನು ಆಶ್ರಮದಲ್ಲಿ ಪೋಷಿಸಿ, ಆಕೆಯ ಮಕ್ಕಳಿಗೆ ಲವ ಕುಶ ಎಂಬ ಹೆಸರನ್ನು ಇಡುತ್ತಾನೆ. ಮಕ್ಕಳಿಗೆ ಸಂಸ್ಕಾರ ಕಲಿಸುವುದರ ಜೊತೆಗೆ, ವಿದ್ಯೆಯನ್ನು ಉಪದೇಶ ಮಾಡುತ್ತಾ, ರಾಮಾಯಣವನ್ನು ಒಂದು ಕಾವ್ಯವಾಗಿ ಕಲಿಸುತ್ತಾನೆ. ನಂತರ ಸೀತೆಯನ್ನು, ಲವಕುಶರನ್ನು ವಾಲ್ಮೀಕಿಯೇ ರಾಮನ ಬಳಿ ಕರೆದುಕೊಂಡು ಹೋಗುತ್ತಾನೆ. ತಂದೆಯ ಸಮ್ಮುಖದಲ್ಲಿ, ರಾಮನ ಕಥೆಯನ್ನು ಲವ ಕುಶರಿಂದಲೇ ಹಾಡಿಸುತ್ತಾನೆ. ರಾಮನ ಕಥೆಯನ್ನು ಕವಿಯ (ವಾಲ್ಮೀಕಿ) ಸಮ್ಮುಖದಲ್ಲೇ ಹಾಡಿದ್ದೂ ಮತ್ತೊಂದು ವೈಶಿಷ್ಟ್ಯ. ಆ ವೇಳೆ, ಮಕ್ಕಳಿಗೆ ತಮ್ಮ ತಂದೆ ರಾಮ ಎಂದು ಗೊತ್ತಿರುವುದಿಲ್ಲ, ರಾಮನಿಗೆ ಲವಕುಶರು ತನ್ನ ಮಕ್ಕಳು ಎಂದು ಗೊತ್ತಿರುವುದಿಲ್ಲ.

ಬಾಲ್ಯದಲ್ಲಿ ರಾಮ, ವಸಿಷ್ಠರಿಂದ ಶಾಸ್ತ್ರ ವಿದ್ಯೆಗಳನ್ನು, ತದನಂತರ ಅಸ್ತ್ರ-ಶಸ್ತ್ರಗಳ ವಿದ್ಯೆಯನ್ನು ವಿಶ್ವಾಮಿತ್ರರಿಂದ ಉಪದೇಶವನ್ನು ಪಡೆದಿದ್ದನು. ರಾಮನು ಚಕ್ರವರ್ತಿ ಹಾಗೂ ಧರ್ಮನಿಷ್ಠುರನಾಗುವುದಕ್ಕೆ ಶಾಸ್ತ್ರ ಮತ್ತು ಶಸ್ತ್ರಗಳನ್ನು ಪರಿಣಿತಿ ಹೊಂದಿದ ಉತ್ತಮ ಗುರುಗಳು ಸಿಕ್ಕಿದ್ದರು. ಆದರೆ ಮಕ್ಕಳಾದ ಲವಕುಶರಿಗೆ ಗುರುವಾಗಿ ಸಿಕ್ಕವರು ಕವಿ ಹೃದಯ ಉಳ್ಳವರು. ಒಬ್ಬ ಕವಿ ಗುರುವಾದರೆ, ಮುಂದಿನ ಅರಸೊತ್ತಿಗೆ ಹೇಗಿರಬಹುದು? ಈ ವ್ಯಾಪ್ತಿಯಿಂದ ನಾವು ಹೊರಗೆ ನಿಂತು ನೋಡುವುದಕ್ಕೆ ಸೊಗಸಾದ ಅವಕಾಶವನ್ನು ವಾಲ್ಮೀಕಿಯು, ರಾಮಾಯಣದ ಹಿನ್ನಲೆಯಲ್ಲಿ ಒದಗಿಸಿ ಕೊಟ್ಟಿದ್ದಾನೆ.

ವಾಲ್ಮೀಕಿ ವ್ಯಕ್ತಿತ್ವದ ವಿಭಿನ್ನ ಆಯಾಮಗಳಲ್ಲಿ ಮಾನಸಿಕವಾಗಿ ಅನುಭವಿಸುವ ಸಂಗತಿಗಳು ಕೂಡ ಧ್ವನಿಸುತ್ತಿವೆ ಎಂಬುದನ್ನೂ ಗ್ರಹಿಸಬೇಕು. ಕ್ರೌರ್ಯ, ದುಃಖ, ಕಾವ್ಯಾತ್ಮಕತೆ, ಜೀವಂತಿಕೆ ಹಾಗೂ ನಿತ್ಯ ಜೀವನದಲ್ಲಿ ಒಡನಾಡಬಹುದಾದ ಪಾತ್ರ ವಿಶೇಷಗಳೆಲ್ಲವೂ, ನಮ್ಮ ಬದುಕು, ರಾಮಾಯಣದ ಜೊತೆಯಲ್ಲಿ ವಾಲ್ಮೀಕಿ ಇನ್ನೊಂದು ಜೀವನ ಕಥನವನ್ನು ಕಟ್ಟಿಕೊಟ್ಟಿದ್ದಾನೆ ಎಂದು ಊಹಿಸಬೇಕಾಗುತ್ತದೆ.

ಹೀಗಾಗಿ ‘ವಾಲ್ಮೀಕಿ ಕೋಕಿಲಂ’ ಎಂದು ಸಂಬೋಧಿಸುವಷ್ಟು, ಕವಿ ಕಾವ್ಯ ಹೃದಯ ಉಳ್ಳವನು. ಋಷಿ ಜ್ಞಾನಕ್ಕಿಂತ ಹೆಚ್ಚು, ಶಾಸ್ತ್ರಕ್ಕಿಂತ ಹೆಚ್ಚು ಹಾಗೂ ಹೃದಯ ಸ್ಪಂದಿಯಾದ ಕಾವ್ಯಗುಣವನ್ನು ಹೊಂದಿದ ವಿಶಿಷ್ಯ ವ್ಯಕ್ತಿತ್ವವಾಗಿ ವಾಲ್ಮೀಕಿಯನ್ನು ಗುರುತಿಸಿಸಬಹುದು.

-ರಾಧಾಕೃಷ್ಣ ಕಲ್ಚಾರ್ ವಿಟ್ಲ  

0 Comments

Submit a Comment

Your email address will not be published. Required fields are marked *

Related Articles

Related

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ಯಾವ ಮಗನ ಅಭ್ಯುದಯಕ್ಕಾಗಿ ಕೈಕೇಯಿ ವರವನ್ನು ವಿನಿಯೋಗಿಸಿದ್ದಳೋ, ಆ ಅಭ್ಯುದಯದ ಸಂತೋಷ ಭರತನಿಗೂ ಆಗಲಿಲ್ಲ ಹಾಗೂ ಇದರ ಆನಂದವನ್ನು ತಾಯಿಯೂ ಅನುಭವಿಸಲಿಲ್ಲ. ಇಲ್ಲಿ ವರಗಳೇ ವಿಚಿತ್ರವಾಯಿತು. ಪ್ರಾಣ ಉಳಿಸಬೇಕಾಗಿದ್ದ ವರವನ್ನು ವಿನಿಯೋಗಿಸಿ, ಪ್ರಾಣವನ್ನು ತೆಗೆಯಬೇಕಾಯಿತು. ಸಂತೋಷ ಕೊಡಬೇಕಾಗಿದ್ದಕ್ಕಾಗಿ ವಿನಿಯೋಗಿಸಿದ್ದು, ದುಃಖಕ್ಕೆ ಕಾರಣವಾಯಿತು.

read more
ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಧೃತರಾಷ್ಟ್ರ ಕುರುಡನಾದರೂ ಬುದ್ಧಿ ಹೀನನಲ್ಲ. ಮಾತ್ರವಲ್ಲದೇ, ಧೃತರಾಷ್ಟ್ರವೆಂದರೆ, ರಾಷ್ಟ್ರವನ್ನು ಎತ್ತಿಹಿಡಿಯುವವನು ಎಂಬರ್ಥ ಬರುತ್ತದೆ. ದುರದೃಷ್ಟವಶಾತ್, ಈತನ ಮಕ್ಕಳು ಕೂಡ ರಾಷ್ಟ್ರವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಲಿಲ್ಲ. ಸ್ವತಃ ಧೃತರಾಷ್ಟ್ರನಿಗೂ ಆ ಕೆಲಸ ಮಾಡಲಾಗಲಿಲ್ಲ. ಆದರೆ ಈತನ ಬುದ್ಧಿವಂತಿಕೆ ಬಳಕೆಗೆ ಬಂದದ್ದು, ತನ್ನ ಮಕ್ಕಳ ಅಭ್ಯುದಯಕ್ಕೆ ಹಾಗೂ ಅವರ ಪ್ರಯೋಜನಕ್ಕೆ ಮಾತ್ರ.

read more
ರಾಮನಂತೆ ಅರಣ್ಯವಾಸಿಯಾದ ಭರತ 

ರಾಮನಂತೆ ಅರಣ್ಯವಾಸಿಯಾದ ಭರತ 

ಭರತನು ಸಿಂಹಾಸನವೇರಿ ರಾಜ್ಯವನ್ನು ಆಳಬಹುದಿತ್ತು. ಆದರೆ ಈತನ ಮನಸ್ಸು ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ರಾಮನ ಪ್ರೀತಿ, ಅಭಿಮಾನಗಳು ಆತನಿಗೆ ಶಕ್ತಿಯಾಗಿದ್ದವು. ರಾಮನೇ ರಾಜನಾಗಬೇಕೆಂದು ಬಯಸಿ, ಅಣ್ಣನನ್ನು ಹುಡುಕುತ್ತಾ ಚಿತ್ರಕೂಟದಲ್ಲಿ ಭೇಟಿಯಾಗುತ್ತಾನೆ. ಇದೊಂದು ಅಣ್ಣ-ತಮ್ಮಂದಿರ ಮಿಲನದ ಭೇಟಿ. ಭರತ, ದಶರಥನ ಮರಣವಾರ್ತೆಯನ್ನು ಹೇಳಿ, ದುಃಖಿಸಿ ಕಣ್ಣೀರಿಡುತ್ತಿರುವಾಗ, ರಾಮ ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ರಾಮ ಮಾಡಬೇಕಾದ ಕಾರ್ಯಗಳನ್ನು ತಾನು ನೇರವೇರಿಸಿದ ಸಂಗತಿಗಳನ್ನು ಹೇಳುತ್ತಾನೆ.

read more