ಶಂತನು, ಚಂದ್ರವಂಶದ ಪ್ರತೀಪ ಮಹಾರಾಜನ ಮಗ. ಈತನ ಹೆಸರಿಗೆ ‘ಕ್ಷಮಿಸುವ ಗುಣ’ ಇರುವವನು ಎಂಬ ಶಾಬ್ದಿಕ ಅರ್ಥವಿದೆ. ಶಂತನುವಿಗಿದ್ದ ವಿಶೇಷ ಶಕ್ತಿಯಿಂದಾಗಿ ವೃದ್ಧರನ್ನು ಮುಟ್ಟಿದ ಕೂಡಲೇ ಅವರು ಯೌವ್ವನವನ್ನು ಪಡೆಯುತ್ತಿದ್ದರು ಮತ್ತು ರೋಗವಿದ್ದವರು ಗುಣಮುಖರಾಗುತ್ತಿದ್ದರು. ಆಶ್ಚರ್ಯಕರ ಸಂಗತಿಯೆಂದರೇ ಶಂತನು ಹುಟ್ಟುವ ಮೊದಲೇ, ಆತನ ಹಿನ್ನಲೆ ಸಿದ್ಧವಾಗಿತ್ತು. ಪ್ರಾಚೀನ ಕಾಲದ ಒಂದು ಕಥನದ ಪ್ರಕಾರ, ಒಂದು ದಿನ ಸೂರ್ಯವಂಶದ ಮಹಾಭೀಷ ಎನ್ನುವ ಅರಸ, ಬ್ರಹ್ಮಸಭೆಗೆ ಭೇಟಿ ನೀಡುತ್ತಾನೆ. ನದಿಯ ಸ್ತ್ರೀ ರೂಪವಾದ ಗಂಗೆಯೂ ಆ ಸಭೆಯಲ್ಲಿದ್ದಳು. ಇವರಿಬ್ಬರೂ ಪರಸ್ಪರ ಮೋಹಕ್ಕೆ ಒಳಗಾಗುತ್ತಾರೆ. ಇದನ್ನು ಕಂಡ ಬ್ರಹ್ಮದೇವ ಕೋಪಗೊಂಡು, “ನೀವಿಬ್ಬರೂ ಭೂಮಿಯಲ್ಲಿ ಜನಿಸಿ” ಎಂದು ಶಾಪಕೊಟ್ಟರು. ಬ್ರಹ್ಮನ ಶಾಪದಿಂದ, ಮಹಾಭೀಷ ಮತ್ತು ಗಂಗೆ ಭೂಮಿಯಲ್ಲಿ ಹುಟ್ಟಿದರು.
ಪುರಾಣದ ಹೆಚ್ಚಿನ ಘಟನೆಗಳು, ಕಥನಗಳು, ಮತ್ತೊಂದು ಕಥನದ ಜೊತೆ ಸಮ್ಮಿಳಿತವಾಗಿರುತ್ತದೆ. ಒಂದು ದಿನ ಎಂಟು ಮಂದಿ ವಸುಗಳು (ದೇವತೆಗಳಲ್ಲಿ ಒಂದು ವರ್ಗ) ವಸಿಷ್ಠರ ಹೋಮವನ್ನು ಸೆಳೆಯುವುದಕ್ಕೆ ಮುಂದಾಗುತ್ತಾರೆ. ಇದನ್ನು ಅರಿತ ವಸಿಷ್ಠರು “ನೀವು ಭೂಮಿಯಲ್ಲಿ ಹುಟ್ಟಿ” ಎಂದು ಶಾಪ ಕೊಡುತ್ತಾರೆ. ಮನುಷ್ಯನಿಗೆ ಭೂಮಿ ಸುಖದ ತಾಣ. ಆದರೆ ದೇವತೆಗಳಿಗೆ ಭೂಮಿಯಲ್ಲಿ ಹುಟ್ಟುವುದೇ ಒಂದು ಶಾಪ.
“ತಾವು ಭೂಮಿಯಲ್ಲಿ, ಜನ್ಮತಾಳುವುದು ಎಲ್ಲಿ?” ಎಂಬ ಗೊಂದಲ ವಸುಗಳಿಗೆ ಕಾಡುತ್ತಿರುತ್ತದೆ. ಆ ವೇಳೆ ಬ್ರಹ್ಮನ ಸಭೆಯಿಂದ ಶಪಿತಳಾಗಿ ಬರುತ್ತಿದ್ದ ಗಂಗೆ ಮೇಲೆ ಅವರು ದೃಷ್ಟಿ ಬೀಳುತ್ತದೆ. ತಮ್ಮ ಗೊಂದಲಕ್ಕೆ ಪರಿಹಾರ ಸಿಕ್ಕಿತ್ತೆಂದು ಗಂಗೆಗೆ “ಅಮ್ಮ ನೀನು ನಮ್ಮ ತಾಯಿಯಾಗಿ, ಆದಷ್ಟು ಬೇಗ ನಮ್ಮ ಮೂಲ ನೆಲೆಗೆ ಹಿಂದಿರುಗಿಸು” ಎಂದು ಬೇಡಿಕೊಳ್ಳುತ್ತಾರೆ. ಗಂಗೆ ಇವರ ಮಾತಿಗೆ ಸಮ್ಮತಿಸುತ್ತಾಳೆ. ಹೀಗೆ ಎರಡು-ಮೂರು ಹಿನ್ನಲೆಗಳು, ಗಂಗೆ ಮತ್ತು ಮಹಾಭೀಷ ಭೂಮಿಯಲ್ಲಿ ದಾಂಪತ್ಯ ಜೀವನ ನಡೆಸಲು ಕಾರಣವಾಗುತ್ತದೆ.
ಶಂತನು ಧರ್ಮ ಚಕ್ರವರ್ತಿಯಾಗಿದ್ದನು. ಬಹುತೇಕ ಅರಸರು, ಶಂತನ ಧರ್ಮ ಪಾಲನೆಯನ್ನು ಕಂಡು ತಲೆಬಾಗಿ ಗೌರವಿಸುವುದಲ್ಲದೆ, ನಿಜವಾದ ಚಕ್ರವರ್ತಿ ಎಂದು ಶ್ಲಾಘಿಸುತ್ತಿದ್ದರು. ಒಂದು ದಿನ ಶಂತನು ಭೇಟೆಗಾಗಿ ಕಾಡಿಗೆ ಹೋಗುತ್ತಿರುವಾಗ, ಗಂಗೆಯನ್ನು ನೋಡಿ ಮೋಹಗೊಳ್ಳುತ್ತಾನೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಾರೆ. ಆಗ ಶಂತನು ಗಂಗೆಗೆ “ನನ್ನನ್ನು ಮದುವೆಯಾಗು” ಎಂದು ಕೇಳಿಕೊಂಡಾಗ, ಗಂಗೆ “ನಿನ್ನನ್ನು ಮದುವೆಯಾಗಬೇಕಾದರೆ ನಾನು ಮಾಡುವ ಯಾವುದೇ ಕಾರ್ಯವನ್ನು ನೀನು ಪ್ರಶ್ನಿಸುವಂತಿಲ್ಲ” ಎಂದು ನಿಬಂಧನೆ ಹಾಕುತ್ತಾಳೆ. ಪ್ರಣಯದ ಉತ್ಸಾಹದಲ್ಲಿ ಶಂತನು ಸಮ್ಮತಿಸಿ, ಅರಮನೆಗೆ ಕರೆದುಕೊಂಡು ಬರುತ್ತಾನೆ.
ದಿನಕಳೆದಂತೆ ಗಂಗೆ ಮಕ್ಕಳನ್ನು ಪ್ರಸವಿಸುತ್ತಾಳೆ. ಹುಟ್ಟಿದ ಮೊದಲನೇ ಗಂಡು ಮಗುವನ್ನು ಗಂಗಾ ಪ್ರವಾಹಕ್ಕೆ ಹಾಕಿದಳು. ಇದನ್ನು ಕಂಡ ಶಂತನುವಿಗೆ ಆಶ್ಚರ್ಯವಾಗುತ್ತದೆ. ತಡೆಯಲು ಮುಂದಾದರೆ ಗಂಗೆ ಬಿಟ್ಟು ಹೋಗುವವಳು ಎಂದು ಸುಮ್ಮನಾಗುವನು. ಹೀಗೆ ಏಳು ಮಂದಿ ಗಂಡು ಮಕ್ಕಳನ್ನು ಗಂಗೆ ನೀರಿನಲ್ಲಿ ಮುಳುಗಿಸುತ್ತಾಳೆ. ತದನಂತರ ಎಂಟನೇ ಮಗುವನ್ನು ಮುಳುಗಿಸುವ ವೇಳೆಯಲ್ಲಿ ಶಂತನು ಓಡಿ ಬಂದು “ಇವನು ನನ್ನ ಮಗ. ಮುಳುಗಿಸುವುದಕ್ಕೆ ನಾನು ಬಿಡುವುದಿಲ್ಲ” ಎಂದು ಹೇಳಿ ತಡೆಯುತ್ತಾನೆ. ಆಗ ಗಂಗೆ “ಆಗಲಿ. ನಿನ್ನ ಮಗ ಉಳಿಯುತ್ತಾನೆ. ಆದರೆ ನಾನು ನಿನ್ನ ಜೊತೆ ಇರುವುದಿಲ್ಲ. ನೀನು ವಚನ ಭಂಗ ಮಾಡಿದೆ” ಎಂದು ಕೋಪಿಸಿಕೊಂಡು ಹೊರಟು ಹೋಗುತ್ತಾಳೆ. ಈ ಬದುಕುಳಿದ ಮಗುವೇ ದೇವವ್ರತ. ಅಂದರೆ ಮಹಾಭಾರತದಲ್ಲಿ ನಿರ್ಣಾಯಕ ಪಾತ್ರವಹಿಸಿದ ಭೀಷ್ಮ.
ದೇವವ್ರತ ವಯಸ್ಕನಾಗುತ್ತಿದ್ದ ಕಾಲದಲ್ಲಿ ಶಂತನುವಿನ ಜೀವನದಲ್ಲಿ ಮತ್ತೊಂದು ಪರಿವರ್ತನೆಯಾಗುತ್ತದೆ. ಒಮ್ಮೆ ಶಂತನು ಯಮುನಾ ನದಿ ಮೂಲಕ ಅರಣ್ಯಕ್ಕೆ ತೆರಳುತ್ತಿರುವಾಗ, ಒಂದು ಕಪ್ಪುಬಣ್ಣದ ಹೆಣ್ಣನ್ನು ನೋಡುತ್ತಾನೆ. ಸೌಂದರ್ಯವತಿಯಾಗಿದ್ದ ಈಕೆ ದೋಣಿ ನಡೆಸುತ್ತಿರುತ್ತಾಳೆ. ಈ ಹೆಣ್ಣಿನ ದೇಹದಿಂದ ಅದ್ಭುತವಾದ ಪರಿಮಳ ಹೊರಗೆ ಬರುತ್ತಿದ್ದರಿಂದ, ಆಕರ್ಷಣೆಗೊಂಡ ಶಂತನು ಮಾತನಾಡಿಸುವುದಕ್ಕೆ ಮುಂದಾಗುತ್ತಾನೆ. “ನೀನು ಯಾರು? ಎಲ್ಲಿಯವಳು?” ಎಂದು ಕೇಳುತ್ತಲೇ “ನನ್ನನ್ನು ಮದುವೆಯಾಗು” ಎನ್ನುತ್ತಾನೆ. ಆಗ ಈಕೆ “ನೀನು ನನ್ನನ್ನು ವಿವಾಹವಾಗಬೇಕಾದರೆ, ನನ್ನ ತಂದೆ ದಾಶರಾಜನನ್ನು ಕೇಳು” ಎಂದು ಹೇಳುತ್ತಾಳೆ. ಶಂತನು ವಿವಾಹ ವಿಷಯವನ್ನು ಪ್ರಸ್ತಾಪಿಸಿದಾಗ, ಅಂಬಿಗರ ದೊರೆ ದಾಶರಾಜ ಒಂದು ನಿಬಂಧನೆ ಹಾಕುತ್ತಾನೆ. “ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳಿಗೆ ನಿನ್ನ ಸಿಂಹಾಸನ ಕೊಡುವುದಾದರೆ ಮಾತ್ರ ನಿನಗೆ ವಿವಾಹ ಮಾಡಿಕೊಡುತ್ತೇನೆ” ಎಂದಾಗ ಶಂತನು ಒಂದು ಹೆಜ್ಜೆ ಹಿಂದೆ ಸರಿಯುತ್ತಾನೆ. ಒಬ್ಬ ವ್ಯಕ್ತಿಯಲ್ಲಿ ಇರುವಂತಹ ಭಾವೋನ್ಮಾದಕ್ಕೆ, ವಿವೇಕ ಎಂಬುದು ತಡೆವೊಡ್ಡಿದರೆ ಹೇಗಿರುತ್ತದೆ ?
ಶಂತನುವಿಗೆ ಹೆಣ್ಣಿನ ಸೌಂದರ್ಯಕ್ಕೆ ಮನಸೋತು, ಮೋಹಿಸಿ, ಅವಳನ್ನೇ ಮದುವೆಯಾಗಬೇಕೆಂಬ ಹಂಬಲವಿದ್ದರೂ, ನಿಂಬಂಧನೆ ಕೇಳಿದ ತಕ್ಷಣ ಹಿಂದೆ ಸರಿಯುತ್ತಾನೆ. ಅತ್ತ ವಿದ್ಯೆ ಹಾಗೂ ಸಂಸ್ಕಾರದಲ್ಲಿ ದೇವವ್ರತ ಅಪಾರವಾದ ಪಾಂಡಿತ್ಯ ಹೊಂದಿದ್ದ. ಇಂತಹ ಶ್ರೇಷ್ಠ ಪುತ್ರನಿರುವಾಗ, ರಾಜ್ಯದ ಉತ್ತರಾಧಿಕಾರ ಇವನಿಗಲ್ಲದೇ, ಬೇರೆಯವರಿಗೆ ಕೊಡುವುದು ಸರಿಯಲ್ಲ. ದೇವವ್ರತನೇ ಇದಕ್ಕೆ ತಕ್ಕವನು ಎಂಬ ವಿವೇಕದಿಂದ ಶಂತನು ಹಿಂದೆ ಸರಿದು ಅರಮನೆಗೆ ಬರುತ್ತಾನೆ. ಆದರೆ ಮಗನ ಮೇಲಿನ ಪ್ರೀತಿಯಿಂದ ಮತ್ತು ಆಕೆಯ ನೆನಪಿನಿಂದ ಹೊರಬರಲಾಗದೆ ಶಂತನು ಖಿನ್ನತೆಗೆ ಜಾರುತ್ತಾನೆ. ತನ್ನ ತಂದೆಯ ಈ ಪರಿಸ್ಥಿತಿಯನ್ನು ಗಮನಿಸಿದ ದೇವವ್ರತನು ದಾಶರಾಜನ ಬಳಿಗೆ ತೆರಳಿ, ತಂದೆಯ ಅಪೇಕ್ಷೆಯನ್ನು ಈಡೇರಿಸಲು, ವಿವಾಹದ ನಿಬಂಧನೆಗಳಿಗೆ ತಾನು ಸಮ್ಮತಿ ಸೂಚಿಸುತ್ತಾನೆ.
ತಂದೆಯ ಮನೋಧರ್ಮ, ವಿವೇಕ ಹಾಗೂ ತನ್ನ ಕುರಿತು ಇದ್ದ ಮೋಹವನ್ನು ದೇವವ್ರತ ಗ್ರಹಿಸಿದ್ದರಿಂದ, ಅಪ್ಪನಂತೆ ತ್ಯಾಗ ಮಾಡಲು ನಿರ್ಧರಿಸಿದ್ದ. ತಂದೆಗೆ ತಕ್ಕ ಮಗನಾಗಿ, ಬ್ರಹ್ಮಚಾರಿಯಾಗಲು ನಿರ್ಧರಿಸುತ್ತಾನೆ. ಮಾತ್ರವಲ್ಲ ಸಿಂಹಾಸನವನ್ನೂ ಬಿಡುತ್ತೇನೆಂದು ಪ್ರತಿಜ್ಞೆ ಮಾಡುತ್ತಾನೆ. ಈ ಸಂದರ್ಭದಲ್ಲಿ ಭೀಷ್ಮ ಎಂದು ಖ್ಯಾತಿಗಳಿಸಿ, ದಾಶರಾಜನ ಮಗಳಾದ ಸತ್ಯವತಿಯನ್ನು ಕರೆತಂದು ತಂದೆಗೆ ಮದುವೆ ಮಾಡಿಸುತ್ತಾನೆ. ಆಕೆಯಿಂದ ಶಂತನುವಿಗೆ ಇಬ್ಬರು ಮಕ್ಕಳು ಜನಿಸುತ್ತಾರೆ. ಕಾಲಕ್ರಮೇಣ ಶಂತನು ವಿಧಿವಶನಾಗಿ, ಮಹಾಭೀಷ ಪಡೆದ ಶಾಪವೂ ಇತ್ಯರ್ಥವಾಗುತ್ತದೆ. ಆದರೆ ಶಂತನು ಕೈಗೊಂಡ ಅನೇಕ ಕಾರ್ಯಗಳು, ಇಡೀ ಮಹಾಭಾರತದ ಅನೇಕ ಕಡೆ ಫಲವನ್ನು ಕೊಡುತ್ತದೆ.
ಶಂತನು ತನ್ನ ಮಗನಾದ ದೇವವ್ರತನಿಗೆ ಒಂದು ವರವನ್ನು ನೀಡಿದ್ದ. “ನನಗಾಗಿ ನೀನು ಇಷ್ಟು ತ್ಯಾಗ ಮಾಡಿರುವುದು ಸಂತೋಷ ತಂದಿದೆ. ನೀನು ಬಯಸದ ಹೊರತು ಮರಣವು ನಿನ್ನನ್ನು ಸಮೀಪಿಸದೇ ಇರಲಿ” ಎಂದು ವರ ಕೊಡುತ್ತಾನೆ. ಒಂದು ರೀತಿಯ ಚಿರಂಜೀವಿತ್ವವಾದ ಈ ವರವೂ ದೇವವ್ರತನಿಗೆ, ಮಹಾಭಾರತದಲ್ಲಿ ಯಾವ ರೀತಿಯಲ್ಲಿ ಫಲಿತಾಂಶ ಕೊಟ್ಟಿದೆ, ಹಾಗೂ ಪರಿಣಾಮವನ್ನು ಉಂಟು ಮಾಡಿದೆ ಎಂಬುದು ತಿಳಿದ ವಿಚಾರ.
ಶಂತನುವಿಗೆ ಧಾರ್ಮಿಕವಾದ ಹಾಗೂ ಚಕ್ರವರ್ತಿಯಾಗಿ ಹಿನ್ನಲೆ ಇದ್ದರೂ, ಮಹಾಭಾರತ ಕಥನದಲ್ಲಿ ಪಾತ್ರವಾಗಿ ಬಹುಕಾಲವಿರುವುದಿಲ್ಲ. ಆದರೆ ಹೆಚ್ಚಾಗಿ ಪ್ರಭಾವಿಸಿದ್ದಾನೆ. ಹೀಗಾಗಿ ಶಂತನು ನಮ್ಮ ನೆನಪಿನಲ್ಲಿ ಉಳಿಯುತ್ತಾನೆ.
– ರಾಧಾಕೃಷ್ಣ ಕಲ್ಚಾರ್
ಇದೇ ಓದಿಗಿಂತ ಹೆಚ್ಚಿನ ಮಾಹಿತಿ ಇಲ್ಲೇ ಮಾತಿನಲ್ಲಿದೆ – ಗಂಗೆ ಪ್ರತೀಪನ ತೊಡೆಯೇರಿ ಕುಳಿತು ವಿವಾಹಾಪೇಕ್ಷೆಯನ್ನಿಡುತ್ತಾಳೆ!! ಫಲಿತಾಂಶ ತಿಳಿಯಲು ಕೇಳಿ ನೋಡಿ 🙂