ಅಧಿತಿ ದೇವಿ-ದಶರಥನ ಪತ್ನಿ-ರಾಮನ ತಾಯಿ: ಕೌಸಲ್ಯೆಯೆಂಬ ಸುಗರ್ಭ

ಕೌಸಲ್ಯೆ, ಕೋಸಲ ರಾಜ್ಯದ ಭಾನುಮಂತನ ಮಗಳು. ಈಕೆಗೆ ಮತ್ತೊಂದು ಹೆಸರು ಇರುವುದು ಅಥವಾ ಇಲ್ಲದಿರುವ ಬಗ್ಗೆ ಪುರಾಣದಲ್ಲಿ ಮಾಹಿತಿ ಇಲ್ಲ. ದಶರಥನ ಮೊದಲ ಪತ್ನಿ ಈಕೆ. ಇಬ್ಬರಿಬ್ಬರ ಸಂಬಂಧ ಕೇವಲ ರಾಮಾಯಣದಲ್ಲಿ ಮಾತ್ರವಲ್ಲದೇ, ಪೂರ್ವದಲ್ಲಿಯೂ ಇತ್ತು. ಕಶ್ಯಪ ಮತ್ತು ಅಧಿತಿ ದಂಪತಿಗಳೇ, ಈ ದಶರಥ ಮತ್ತು ಕೌಸಲ್ಯೆ. ಈ ದಾಂಪತ್ಯದ ಫಲವಾಗಿ ಶ್ರೀ ರಾಮ ಜನ್ಮತಾಳಿದ. ಅನಂತರ ರಾಮಾಯಣ ಕಥಾನಕ ಬೆಳೆಯಿತು.

ದಶರಥನಿಗೆ ಕೈಕೇಯಿ ಮೇಲಿದ್ದಷ್ಟು ಪ್ರೀತಿ, ಕೌಸಲ್ಯೆ ಮೇಲಿರಲಿಲ್ಲ. ಕೈಕೇಯಿಯ ಯಾವುದೇ ಬಯಕೆಯನ್ನೂ ಈಡೇರಿಸುವುದಕ್ಕೆ ಸದಾ ಸಿದ್ಧನಾಗಿದ್ದ. ಆದರೆ ಕೌಸಲ್ಯೆ ಮೇಲೆ ಬಹಳ ವಿಶ್ವಾಸವಿಟ್ಟಿದ್ದು ಸೋಜಿಗ. ಕೈಕೇಯಿ ಕೇಳಿದ ವರದ ಪರಿಣಾಮದಿಂದ ರಾಮನು ವನವಾಸವನ್ನು ಸ್ವೀಕರಿಸಿ, ಹೊರಡುತ್ತಾನೆ. ಈ ಘಟನೆಯಿಂದ ದುಃಖಿತನಾದ ದಶರಥ ಬೀದಿಯ ಧೂಳಿನಲ್ಲಿ ಹೊರಳಾಡುತ್ತಾನೆ. ಅನಂತರ ಅರಮನೆಯ ಒಳಗೆ ಪ್ರವೇಶಿಸಿ, ಸೇವಕರಿಗೆ “ನನ್ನನ್ನು ಕೌಸಲ್ಯೆ ಅರಮನೆಗೆ ಕರೆದುಕೊಂಡು ಹೋಗಿ” ಎಂದು ಹೇಳುತ್ತಾನೆ. ನಮ್ಮ ಹೃದಯಕ್ಕೆ ಆಪ್ತರಾಗಿರುವವರು ಹಾಗೂ ಅತ್ಯಂತ ವಿಶ್ವಾಸಕ್ಕೆ ಪಾತ್ರರಾದವರು ಕೊನೆಗಾಲದಲ್ಲಿ ನಮ್ಮ ಜೊತೆಯಲ್ಲಿರಲಿ ಎಂಬ ಭಾವನೆ ಸಹಜವಾಗಿ ಮೂಡುತ್ತದೆ. ಅಂತೆಯೇ ಕೌಸಲ್ಯೆ ಕುರಿತಾಗಿ ದಶರಥನಿಗೆ ಈ ರೀತಿಯ ಭಾವ ಹಾಗೂ ವಿಶೇಷವಾದ ಗೌರವವಿತ್ತು.

ಹೀಗಾಗಿ ದಶರಥ, ತನ್ನ ಜೀವನದ ಬಹುದೊಡ್ಡ ರಹಸ್ಯವನ್ನು ಕೌಸಲ್ಯೆಗೆ ಹೇಳುತ್ತಾನೆ. “ಮುನಿಯೊಬ್ಬರ ಮಗನನ್ನು ಅಚಾನಕ್ಕಾಗಿ ಕೊಂದಿದ್ದಕ್ಕೆ, ತನಗೊಂದು ಶಾಪ ಬಂತು. ಅದೇನೆಂದರೆ ನನ್ನ ಮಕ್ಕಳು ಯಾರೂ ಹತ್ತಿರವಿಲ್ಲದಿದ್ದಾಗ ನನಗೆ ಮರಣ ಎದುರಾಗುತ್ತದೆ. ಈಗ ಅಂತಹ ಸನ್ನಿವೇಶ ಸೃಷ್ಟಿಯಾಗಿದೆ. ಭರತ ಮತ್ತು ಶತ್ರುಘ್ನ ಕೈಕೇಯಿ ದೇಶದಲ್ಲಿದ್ದಾರೆ. ರಾಮ ಮತ್ತು ಲಕ್ಷ್ಮಣ ಅಯೋಧ್ಯೆ ಬಿಟ್ಟು ಕಾಡು ಸೇರಿದ್ದಾರೆ. ನಾಲ್ಕು ಮಕ್ಕಳಿದ್ದರೂ, ಹತ್ತಿರವಿಲ್ಲದ ಕಾರಣ, ತನಗೆ ಮರಣ ಸಿದ್ಧ” ಎಂದು ದುಃಖಿತನಾಗಿ ತನ್ನ ಅಂತರಂಗವನ್ನು ಬಿಚ್ಚಿ ಮಾತನಾಡುತ್ತಾನೆ. ದಶರಥನು ಅಗಾಧ ವಿಶ್ವಾಸವನ್ನು ಕೌಸಲ್ಯೆ ಮೇಲೆ ಇಟ್ಟುಕೊಂಡಿರುತ್ತಾನೆ. ಮಹಾತಾಯಿ ಕೌಸಲ್ಯೆ ಕೂಡ ಇಂತಹ ವಿಶ್ವಾಸಕ್ಕೆ ಅರ್ಹಳಾಗಿದ್ದಳು.

ದಶರಥ ಮತ್ತು ಕೌಸಲ್ಯೆ ದಂಪತಿಗಳ ವಿವಾಹಕ್ಕೂ ಮುನ್ನ, ಮತ್ತೊಂದು ಸ್ವಾರಸ್ಯವಾದ ಕಥೆ ಇದೆ. ಈ ಕಥೆ ವಾಲ್ಮೀಕಿ ರಾಮಾಯಣದಲ್ಲಿ ಸಿಗುವುದಿಲ್ಲ, ಆನಂದ ರಾಮಾಯಾಣದಲ್ಲಿದೆ. ಒಂದು ದಿನ ರಾವಣ, ಎಲ್ಲಾ ಲೋಕಗಳನ್ನು ಗೆದ್ದು ವಿಜೃಂಭಿಸುತ್ತಾ, ಬ್ರಹ್ಮನ ಬಳಿ ತೆರಳಿ “ನನ್ನನ್ನು ಕೊಲ್ಲುವವನು ಯಾರು?” ಎಂದು ಪ್ರಶ್ನಿಸುತ್ತಾನೆ. ಆಗ ಬ್ರಹ್ಮದೇವ “ನಿನ್ನನ್ನು ಕೊಲ್ಲುವವನು, ದಶರಥ ಮತ್ತು ಕೌಸಲ್ಯೆ ಮಗನಾಗಿ ಹುಟ್ಟುವ ರಾಮ” ಎಂದು ಉತ್ತರಿಸುತ್ತಾನೆ. ಶತ್ರು ಯಾರೆಂದು ತಿಳಿದ ರಾವಣ, ರಾಮನ ಹುಟ್ಟನ್ನು ಮಟ್ಟ ಹಾಕುವುದು ಹೇಗೆಂದು ಚಿಂತಿಸುತ್ತಾನೆ. “ದಶರಥ ಮತ್ತು ಕೌಸಲ್ಯೆಯನ್ನು ಕೊಂದರೆ, ರಾಮನಿಗೆ ಹುಟ್ಟುವ ಅವಕಾಶವೇ ಇರುವುದಿಲ್ಲ” ಎಂಬ ಸಂಚನ್ನು ರೂಪಿಸಿಕೊಳ್ಳುತ್ತಾನೆ.

ಒಂದು ದಿನ ರಾವಣ ತನ್ನ ಪುಷ್ಪಕ ವಿಮಾನದಿಂದ ದಶರಥನನ್ನು ಹುಡುಕಲು ಪ್ರಯಾಣ ಮಾಡುತ್ತಾನೆ. ದಶರಥನು ನೌಕೆಯನ್ನೇರಿ, ತನ್ನ ಮಂತ್ರಿ ಸುಮಂತ ಹಾಗೂ ಸೇನಾಧಿಪತಿಗಳ ಜೊತೆ ನದಿಯಲ್ಲಿ ವಿಹರಿಸುತ್ತಿದ್ದ. ಇವರನ್ನು ಕಂಡ ತಕ್ಷಣ ರಾವಣ ಯುದ್ಧ ಮಾಡಲು ಮುಂದಾಗಿ, ಆ ನೌಕೆಯನ್ನೇ ಇಬ್ಭಾಗ ಮಾಡುತ್ತಾನೆ. ತದನಂತರ ನೌಕೆ ಮುಳುಗಿದಾಗ, ದಶರಥ ಪ್ರಾಣಬಿಟ್ಟ ಎಂಬ ಸಂತೋಷದಿಂದ ಕೌಸಲ್ಯೆಯನ್ನು ಹುಡುಕಲು ಮುಂದಾಗುತ್ತಾನೆ.

ಕೋಸಲ ರಾಜ್ಯಕ್ಕೆ ಕಾಲಿಟ್ಟ ರಾವಣ, ಭಾನುಮಂತನ ಮೇಲೆ ಆಕ್ರಮಣ ಮಾಡಿ, ಕೌಸಲ್ಯೆಯನ್ನು ಸೆರೆಹಿಡಿಯುತ್ತಾನೆ. ಇವಳನ್ನು ಒಂದು ಭದ್ರವಾದ ಪೆಟ್ಟಿಗೆಯಲ್ಲಿಟ್ಟು, ಪಾರಾಗದ ಹಾಗೆ ಒಂದು ಮೊಸಳೆ ವಶಕ್ಕೆ ಕೊಟ್ಟು, ನೆಮ್ಮದಿಯಾಗಿ ಹಿಂತಿರುಗುತ್ತಾನೆ. ಇತ್ತ ನದಿಯಲ್ಲಿ ಮುಳುಗಿದ ದಶರಥ ಮತ್ತು ಸುಮಂತರು, ಒಡೆದ ನೌಕೆಯ ಹಲಗೆಯನ್ನು ಹಿಡಿದುಕೊಂಡು, ನದಿಯ ತೀರವನ್ನು ಸೇರುತ್ತಾರೆ.

ಕೌಸಲ್ಯೆಯನ್ನು ರಕ್ಷಿಸುವ ಹೊಣೆಹೊತ್ತಿದ್ದ ಮೊಸಳೆಯು ತನ್ನ ಶತ್ರುವಿನ ಜೊತೆ ಹೊಡೆದಾಡಲು, ಪೆಟ್ಟಿಗೆಯನ್ನು ನದಿಯ ದಡದಲ್ಲೆ ಬಿಟ್ಟು ಹೊರಡುತ್ತದೆ. ನದಿ ತೀರಕ್ಕೆ ಬಂದಿದ್ದ ದಶರಥನು ಪೆಟ್ಟಿಗೆಯನ್ನು ಕಂಡು ಒಡೆದು ನೋಡಿದಾಗ, ಕೌಸಲ್ಯೆ ಎದ್ದು ಬರುತ್ತಾಳೆ. ಆ ವೇಳೆ ಇಬ್ಬರೂ ಪರಸ್ಪರ ಮೆಚ್ಚಿ ವಿವಾಹವಾಗುತ್ತಾರೆ. ಮತ್ತೊಂದು ಕಡೆ ರಾವಣ, “ಶತ್ರುವಿನ ವಿನಾಶವಾಯಿತು. ನಾನು ಗೆದ್ದಿದ್ದೇನೆ“ ಎಂಬ ಸಂಭ್ರಮದಿಂದ ಬ್ರಹ್ಮನ ಬಳಿ ತೆರಳಿ ಅಟ್ಟಹಾಸ ಮಾಡುತ್ತಾನೆ. ಆಗ ಬ್ರಹ್ಮದೇವ “ನೀನು ತಿಳಿದಂತೆ ಏನೂ ನಡೆದಿಲ್ಲ. ನೀನು ಶತ್ರುಗಳನ್ನು ಕೊಂದಿದ್ದೇನೆ ಎಂದು ಭಾವಿಸಿರುವೆ. ಆದರೆ ನಿನ್ನ ಶತ್ರುಗಳು ನಾಶವಾಗಿಲ್ಲ. ನಾಳೆ ದಶರಥ ಮತ್ತು ಕೌಸಲ್ಯೆಗೆ ಹುಟ್ಟುವ ರಾಮ ನಿನ್ನನ್ನು ಕೊಲ್ಲುವುದು ನಿರ್ಣಯವಾಗಿದೆ. ಈಗಾಗಲೇ ಇವರಿಬ್ಬರು ಮದುವೆಯಾಗಿದ್ದಾರೆ” ಎಂದು ಹೇಳುತ್ತಾನೆ. ಹೀಗೆ ರಾವಣನ ಪತಾಕೆಯೂ ಅಡಿಮೇಲಾಗುವಂತೆ, ದಶರಥ ಮತ್ತು ಕೌಸಲ್ಯೆಯ ಮದುವೆ ನಡೆಯುತ್ತದೆ. ರಾಮಾಯಣಕ್ಕೆ ಬೇಕಾದ ಎಲ್ಲಾ ಸಂದರ್ಭ ಹಾಗೂ ಸನ್ನಿವೇಶಗಳೂ ಅನುಕೂಲವಾಗಿ ಸಿದ್ಧವಾಗುತ್ತದೆ. ಇದಿಷ್ಟು ವಿವಾಹದ ಕುರಿತು ಇರುವ ವಿಶೇಷ ಕಥಾನಕ.

ಕೌಸಲ್ಯೆ ಕುರಿತು ಉಲ್ಲೇಖಿಸುವ ಪ್ರಮುಖ ವ್ಯಾಖ್ಯಾನವೆಂದರೆ, ವಿಶ್ವಾಮಿತ್ರರು ರಾಮನಿಗೆ ಹೇಳುವ ಮಾತಿನಲ್ಲಿ. ಸಿದ್ಧಾಶ್ರಮದಲ್ಲಿ ತನ್ನ ಯಾಗವನ್ನು ರಕ್ಷಿಸುವ ಸಲುವಾಗಿ ವಿಶ್ವಾಮಿತ್ರರು, ದಶರಥನ ಅನುಮತಿಯನ್ನು ಪಡೆದು ರಾಮ ಮತ್ತು ಲಕ್ಷ್ಮಣರನ್ನು ಕರೆದುಕೊಂಡು ಹೋಗುತ್ತಾರೆ. ಬೆಳಗಿನ ವೇಳೆ ದಾರಿಯಲ್ಲಿ ಸಾಗುತ್ತಿರುವಾಗ, ವಿಶ್ವಾಮಿತ್ರರು ರಾಮನನ್ನು ಎಬ್ಬಿಸುತ್ತಾರೆ. ಹೇಗೆಂದರೆ ‘ಕೌಸಲ್ಯ ಸುಪ್ರಜಾ ರಾಮ ಪೂರ್ವಾಸಂಧ್ಯಾ ಪ್ರವರ್ತತೇ’ ಎಂಬ ಶ್ಲೋಕದ ಮೂಲಕ. ಇಲ್ಲಿ ‘ಕೌಸಲ್ಯ ಸುಪ್ರಜಾ ರಾಮ’ ಎಂದರೆ, ಕೌಸಲ್ಯೆ ಹೊಟ್ಟೆಯಲ್ಲಿ ಹುಟ್ಟಿದ ಒಳ್ಳೆಯ ಮಗುವೇ ಎಂಬರ್ಥ. ಮತ್ತು ‘ಕೋಸಲವೆಂಬ ದೇಶದ ಮಗುವಾಗಿ ಹುಟ್ಟಿದವನು ಅಥವಾ ಕೋಸಲ ದೇಶಕ್ಕೆ ಸುಪ್ರಜನಾಗಿ ಹುಟ್ಟಿದವನು’ ಎಂಬ ವ್ಯಾಪಕ ಅರ್ಥವೂ ಇದೆ. ರಾಮನಿಗಿಂತ ದೊಡ್ಡ ಸುಪ್ರಜೆ ದೇಶದಲ್ಲಿ ಮತ್ಯಾರಿದ್ದಾರೆ?

ಹೀಗೆ ವಿಶೇಷವಾದ ಮತ್ತು ಯೋಗ್ಯವಂತನಾದ ರಾಮನ ವ್ಯಕ್ತಿತ್ವವನ್ನು ನಮಗೆ ಕೊಟ್ಟ ಕೌಸಲ್ಯೆ ಗರ್ಭವು ನಿಜಕ್ಕೂ ಸುಗರ್ಭವೇ ಹೌದು ಹಾಗೂ ಕೌಸಲ್ಯವೇ ಹೌದು. ಕೋಸಲವೆಂಬ ನಾಡು ಬೇರೆಯಲ್ಲ, ಕೌಸಲ್ಯೆ ಬೇರೆಯಲ್ಲ. ಆ ಕಾರಣಕ್ಕೆ ಒಂದು ನಾಡು ಪಡೆಯಬಹುದಾದ ಒಬ್ಬ ಪುಣ್ಯ ಪುರುಷನನ್ನು ಮಗುವಾಗಿ ಪಡೆಯುವುದಕ್ಕೆ ಕೌಸಲ್ಯೆಗೆ ಸಾಧ್ಯವಾಯಿತು. ಹೀಗೆ ಕೌಸಲ್ಯೆ ಕೇವಲ ರಾಮನ ತಾಯಿಯಾಗದೇ, ದಶರಥನ ಪತ್ನಿ ಮಾತ್ರವಲ್ಲದೇ, ಪೂರ್ವದ ಅಧಿತಿ ದೇವಿಯಾಗಿ ಕೂಡ ಕಾಣಿಸಿಕೊಂಡವಳು.

ಮತ್ತೊಂದು ಪ್ರಮುಖ ಅಂಶವನ್ನು ನಾವು ಗುರುತಿಸಬೇಕಾಗಿರುವುದು, ಕೌಸಲ್ಯೆ ಕೇವಲ ರಾಮನಿಗೆ ಮಾತ್ರ ತಾಯಿಯಾಗಿ ಇರಲಿಲ್ಲ. ಉಳಿದ ಮೂರು ಜನ ಮಕ್ಕಳಿಗೂ ಈಕೆ ತಾಯಿಯಾಗಿ ಇದ್ದಳು. ಭರತನು ರಾಮ ಕಾಡಿಗೆ ಹೋಗಿರುವ ವರ್ತಮಾನವನ್ನು ತಿಳಿದು, ಅಯೋಧ್ಯೆಗೆ ಧಾವಿಸಿ ಬರುತ್ತಾನೆ. ತಂದೆ ದಶರಥ ತೀರಿಕೊಂಡಿದ್ದ. ಇವೆರಡೂ ದುಃಖದಿಂದ ಭರತ, “ನಾನು ಹೇಗೆ ಕೌಸಲ್ಯೆ ದೇವಿಯ ಮುಖವನ್ನು ನೋಡಲಿ? ಆಕೆಯ ಪ್ರಿಯ ಪುತ್ರ ರಾಮನನ್ನು ಕಾಡಿಗೆ ಕಳುಹಿಸಿದವನು ನಾನು, ತಂದೆ ದಶರಥನ ಮರಣಕ್ಕೆ ಕಾರಣನಾದವನೂ ನಾನು. ನನ್ನಂತವನು ಆ ಮಹಾತಾಯಿ ಮುಖವನ್ನು ಹೇಗೆ ನೋಡಲಿ? ನನ್ನನ್ನೂ ತನ್ನ ಮಗನಂತೆ ಭಾವಿಸಿ ಪಾಲಿಸಿ, ಪೋಷಿಸಿದವಳು ಕೌಸಲ್ಯೆ. ಇಂತಹ ತಾಯಿಯ ಮಗನಾದ ರಾಮನನ್ನು ದೂರ ಮಾಡಿದ ಪಾಪಿ ನಾನು. ಹೇಗೆ ನನ್ನ ದೇವಿಯ ಮುಖವನ್ನು ನೋಡಲಿ” ಎಂದು ದುಃಖಿಸುತ್ತಾನೆ.

ಭರತನ ಹೃದಯದಲ್ಲೂ ಕೂಡ, ಮಾತೃತ್ವದ ಪ್ರತೀಕವಾಗಿ ನಿಂತವಳು ಕೌಸಲ್ಯೆ. ಹೀಗಾಗಿ ನಾಡಿನ ತಾಯಿಯಾಗಿ, ಮಹಾಮಾತೆಯಾಗಿ ಕೌಸಲ್ಯೆಯನ್ನು ಕಾಣುವುದು ಒಂದು ವಿಶೇಷತೆ. ಇಂತಹ ಕೌಸಲ್ಯೆಯ ಪಾತ್ರವೂ ಕೂಡ ರಾಮನ, ದಶರಥನ, ರಾಮಾಯಣದ ಹಾಗೂ ವಾಲ್ಮೀಕಿ ಘನತೆಗೆ ತಕ್ಕಂತೆ ಒಪ್ಪವಾಗಿ, ಓರಣವಾಗಿ ರಾಮಾಯಣದಲ್ಲಿ ಕಾಣಿಸಿಕೊಂಡಿದ್ದಾಳೆ.

-ರಾಧಾಕೃಷ್ಣ ಕಲ್ಚಾರ್

0 Comments

Submit a Comment

Your email address will not be published. Required fields are marked *

Related Articles

Related

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ಯಾವ ಮಗನ ಅಭ್ಯುದಯಕ್ಕಾಗಿ ಕೈಕೇಯಿ ವರವನ್ನು ವಿನಿಯೋಗಿಸಿದ್ದಳೋ, ಆ ಅಭ್ಯುದಯದ ಸಂತೋಷ ಭರತನಿಗೂ ಆಗಲಿಲ್ಲ ಹಾಗೂ ಇದರ ಆನಂದವನ್ನು ತಾಯಿಯೂ ಅನುಭವಿಸಲಿಲ್ಲ. ಇಲ್ಲಿ ವರಗಳೇ ವಿಚಿತ್ರವಾಯಿತು. ಪ್ರಾಣ ಉಳಿಸಬೇಕಾಗಿದ್ದ ವರವನ್ನು ವಿನಿಯೋಗಿಸಿ, ಪ್ರಾಣವನ್ನು ತೆಗೆಯಬೇಕಾಯಿತು. ಸಂತೋಷ ಕೊಡಬೇಕಾಗಿದ್ದಕ್ಕಾಗಿ ವಿನಿಯೋಗಿಸಿದ್ದು, ದುಃಖಕ್ಕೆ ಕಾರಣವಾಯಿತು.

read more
ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಧೃತರಾಷ್ಟ್ರ ಕುರುಡನಾದರೂ ಬುದ್ಧಿ ಹೀನನಲ್ಲ. ಮಾತ್ರವಲ್ಲದೇ, ಧೃತರಾಷ್ಟ್ರವೆಂದರೆ, ರಾಷ್ಟ್ರವನ್ನು ಎತ್ತಿಹಿಡಿಯುವವನು ಎಂಬರ್ಥ ಬರುತ್ತದೆ. ದುರದೃಷ್ಟವಶಾತ್, ಈತನ ಮಕ್ಕಳು ಕೂಡ ರಾಷ್ಟ್ರವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಲಿಲ್ಲ. ಸ್ವತಃ ಧೃತರಾಷ್ಟ್ರನಿಗೂ ಆ ಕೆಲಸ ಮಾಡಲಾಗಲಿಲ್ಲ. ಆದರೆ ಈತನ ಬುದ್ಧಿವಂತಿಕೆ ಬಳಕೆಗೆ ಬಂದದ್ದು, ತನ್ನ ಮಕ್ಕಳ ಅಭ್ಯುದಯಕ್ಕೆ ಹಾಗೂ ಅವರ ಪ್ರಯೋಜನಕ್ಕೆ ಮಾತ್ರ.

read more
ರಾಮನಂತೆ ಅರಣ್ಯವಾಸಿಯಾದ ಭರತ 

ರಾಮನಂತೆ ಅರಣ್ಯವಾಸಿಯಾದ ಭರತ 

ಭರತನು ಸಿಂಹಾಸನವೇರಿ ರಾಜ್ಯವನ್ನು ಆಳಬಹುದಿತ್ತು. ಆದರೆ ಈತನ ಮನಸ್ಸು ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ರಾಮನ ಪ್ರೀತಿ, ಅಭಿಮಾನಗಳು ಆತನಿಗೆ ಶಕ್ತಿಯಾಗಿದ್ದವು. ರಾಮನೇ ರಾಜನಾಗಬೇಕೆಂದು ಬಯಸಿ, ಅಣ್ಣನನ್ನು ಹುಡುಕುತ್ತಾ ಚಿತ್ರಕೂಟದಲ್ಲಿ ಭೇಟಿಯಾಗುತ್ತಾನೆ. ಇದೊಂದು ಅಣ್ಣ-ತಮ್ಮಂದಿರ ಮಿಲನದ ಭೇಟಿ. ಭರತ, ದಶರಥನ ಮರಣವಾರ್ತೆಯನ್ನು ಹೇಳಿ, ದುಃಖಿಸಿ ಕಣ್ಣೀರಿಡುತ್ತಿರುವಾಗ, ರಾಮ ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ರಾಮ ಮಾಡಬೇಕಾದ ಕಾರ್ಯಗಳನ್ನು ತಾನು ನೇರವೇರಿಸಿದ ಸಂಗತಿಗಳನ್ನು ಹೇಳುತ್ತಾನೆ.

read more