ದಶರಥನ ಚಾರಿತ್ರಿಕ ವ್ಯಕ್ತಿತ್ವ

ರಾಮಾಯಣದಲ್ಲಿ ಪ್ರಧಾನ ಪಾತ್ರವಹಿಸಿದಾತ ದಶರಥ. ಈತನ ಜೀವನಾವಧಿಯೇ ಒಂದು ವಿಶೇಷತೆ. 60,000 ವರ್ಷ ಒಂದು ಸಾಮ್ರಾಜ್ಯವನ್ನು ಆಳಿದ ಚಕ್ರವರ್ತಿ. ಸೂರ್ಯವಂಶದ ಪ್ರಭಾವಿ ಅರಸ ಅಜ ಮಹಾರಾಜನ ಮಗನಾದ ದಶರಥನಿಗೆ ಬಹುಕಾಲ ಮಕ್ಕಳಿರಲಿಲ್ಲ. ಕೋಸಲದ ಭಾನುಮಂತನ ಮಗಳು ‘ಕೌಸಲ್ಯೆ’, ಮಗಧದ ‘ಸುಮಿತ್ರೆ’ ಮತ್ತು ಕೇಕೈಯಿಯ ‘ಕೈಕೇಯೆ’ ಈತನ ಮೂವರು ಪತ್ನಿಯರು. ಮಕ್ಕಳಾಗದ ಚಿಂತೆಯಲ್ಲಿದ್ದಾಗ, ಗುರುವೊಬ್ಬರು, ಪುತ್ರಕಾಮೇಷ್ಟಿ ಯಾಗ ಕೈಗೊಂಡರೆ ಮಕ್ಕಳಾಗುವುದು ಎಂದು ಸಲಹೆ ನೀಡುತ್ತಾರೆ. ದಶರಥ ಋಷಿಗಳನ್ನೆಲ್ಲಾ ಸೇರಿಸಿ, ಋಷ್ಯಶೃಂಗನ ಮೂಲಕ ಪುತ್ರಕಾಮೇಷ್ಟಿ ಯಾಗವನ್ನು ಮಾಡಿಸುತ್ತಾನೆ. ಈ ಋಷ್ಯಶೃಂಗನಿಗೆ ದಶರಥನು ತನ್ನ ಮಗಳಾದ ಶಾಂತೆಯನ್ನು ಕೊಟ್ಟು ವಿವಾಹ ಮಾಡಿರುತ್ತಾನೆ.

ಒಂದು ನೆಲೆಯಲ್ಲಿ ಗಮನಿಸಿದಾಗ ಪುತ್ರಕಾಮೇಷ್ಟಿ ಯಾಗದ ಫಲವಾಗಿ ದಶರಥನಿಗೆ ಮಕ್ಕಳಾಗಬೇಕು. ಮತ್ತೊಂದು ನೆಲೆಯಲ್ಲಿ ಯಾಗ, ಮಕ್ಕಳ ವಿಷಯಗಳು ಬೇರೆ ಎರಡು ಸಂಗತಿಗಳಿಂದ ನಿರ್ದೇಶಿಸಲ್ಪಟ್ಟಿದೆ. ಅಂದರೆ ಒಬ್ಬ ವ್ಯಕ್ತಿ ತನ್ನನ್ನೇ ನಂಬಿಕೊಂಡು, ತನ್ನಿಂದಲೇ ಸಾಧ್ಯ ಎಂಬುದು ಭಾವಿಸುವುದು ಒಂದಾದರೆ, ಇನ್ಯಾವುದೋ ಗೊತ್ತಿಲ್ಲದ ಸೂತ್ರ ಹಿಡಿದ ಕೈ ಇದನ್ನೆಲ್ಲಾ ನಿರ್ದೇಶಿಸುತ್ತಿರುತ್ತದೆ. ಇದೇ ಸಂದರ್ಭದಲ್ಲಿ ರಾವಣನಂತಹ ರಾಕ್ಷಸರ ಹಾವಳಿ ವಿಪರೀತಕ್ಕೆ ಏರಿತ್ತು. ಇದನ್ನು ತಡೆಯಲಾಗದೇ, ದೇವತೆಗಳೆಲ್ಲಾ ಒಟ್ಟುಗೂಡಿ ಮಹಾವಿಷ್ಣುವಿನಲ್ಲಿ “ಸ್ವಾಮಿ ರಾಕ್ಷಕರ ಹಾವಳಿ ಮಿತಿ ಮೀರುತ್ತಿದೆ. ಇದಕ್ಕೆ ಪರಿಹಾರವನ್ನು ನೀಡಿ” ಎಂದು ಲೋಕವನ್ನು ರಕ್ಷಿಸಲು ಭಿನ್ನವಿಸಿಕೊಳ್ಳುತ್ತಾರೆ.  ಆಗ ಮಹಾವಿಷ್ಣು “ನಾನು, ದಶರಥ ಮತ್ತು ಕೌಸಲ್ಯೆ ದಂಪತಿಗಳಿಗೆ ರಾಮನಾಗಿ ಹುಟ್ಟುತ್ತೇನೆ” ಎಂದು ಹೇಳುತ್ತಾನೆ.

ರಾಮ ಹುಟ್ಟುವುದಕ್ಕೆ ಒಂದು ಹಿನ್ನಲೆ ಇದೆ. ರಾವಣ ಬ್ರಹ್ಮದೇವನಿಂದ, ತನಗೆ ಮನುಷ್ಯರನ್ನು ಬಿಟ್ಟು ಬೇರೆ ಯಾವ ಜೀವಿಯಿಂದಲೂ ಮರಣ ಬಾರದಿರಲಿ ಎಂಬ ವರವನ್ನು ಪಡೆದಿರುತ್ತಾನೆ. ಹೀಗಾಗಿ ವಿಷ್ಣು ಮನುಷ್ಯನಾಗಿ ಜನಿಸುತ್ತಾನೆ. ಮತ್ತೊಂದು ಹಿನ್ನಲೆಯಲ್ಲಿ ದಶರಥನ ಹಿಂದಿನ ತಲೆಮಾರುಗಳ ಅನರಣ್ಯ ಎಂಬ ಅರಸ, ರಾವಣನಿಗೆ “ನನ್ನ ವಂಶದಲ್ಲಿ ಹುಟ್ಟುವ ರಾಮನಿಂದಲೇ ನಿನ್ನ ಮರಣವಾಗಲಿ” ಎಂದು ಶಾಪ ಕೊಟ್ಟಿದ್ದ. ಇಂತಹ ಹಿನ್ನಲೆಗಳನ್ನು ಗ್ರಹಿಸಿ, ದಶರಥ ಪುತ್ರಕಾಮೇಷ್ಟಿ ಯಾಗ ಮಾಡಿಸಿ, ಮಕ್ಕಳನ್ನು ಪಡೆಯುವ ಅನಿವಾರ್ಯಕ್ಕೆ ಮತ್ತೊಂದು ಮುನಿಯ ಶಾಪವೂ ಕೂಡ ಎದುರಾಗುತ್ತದೆ.  

ಒಮ್ಮೆ ರಾತ್ರಿ ವೇಳೆಯಲ್ಲಿ ದಶರಥ ಬೇಟೆಗೆ ಹೋಗಿರುತ್ತಾನೆ. ಸರಾಯು ಎಂಬ ನದಿ ತೀರದಲ್ಲಿ ಆಯುಧ ಹಿಡಿದುಕೊಂಡು ಕುಳಿತಿರುವಾಗ, ದೂರದಲ್ಲಿ ಗುಳುಗುಳು ಎಂಬ ಶಬ್ದ ಕೇಳಿಸುತ್ತದೆ. “ಇದು ಆನೆಯ ಶಬ್ದ, ಬಹುಶಃ ನೀರು ಕುಡಿಯುತ್ತಿರಬಹುದು” ಎಂದು ಊಹಿಸಿ, ಬಾಣ ಪ್ರಯೋಗ ಮಾಡುತ್ತಾನೆ. ದುರದೃಷ್ಟವಶಾತ್ ಒಬ್ಬ ತಪಸ್ವಿ ಯುವಕ ತಾನು ತಂದಿದ್ದ ಬಿಂದಿಗೆಗೆ ನೀರು ತುಂಬುವ ಕಾರ್ಯದಲ್ಲಿ ನಿರತನಾಗಿದ್ದ, ದಶರಥನಿಗೆ ಗಜಭ್ರಾಂತಿ ಹುಟ್ಟಿದ್ದರಿಂದ ಬಾಣ ಬಿಟ್ಟಿರುತ್ತಾನೆ. ಈ ಬಾಣದ ಹೊಡೆತದಿಂದ ಈ ತಪಸ್ವಿ ಮರಣ ಸ್ಥಿತಿಯಲ್ಲಿರುತ್ತಾನೆ. ಅನಂತರ ಕೂಲಂಕುಶವಾಗಿ ವಿಚಾರಸಿದಾಗ, ಈ ಯುವ ತಪಸ್ವಿ ತನ್ನ ವೃದ್ಧ ತಂದೆತಾಯಿಯನ್ನು ಕರೆದುಕೊಂಡು ಬರುತ್ತಾ, ಅವರಿಗೆ ಕುಡಿಯಲು ನೀರು ಕೊಡಲು ನದಿಯ ಬಳಿ ಬಂದಿರುವ ವಿಚಾರ ತಿಳಿಯುತ್ತದೆ. 

ಜೀವ ಹೋಗುತ್ತಿರುವಾಗ ಯುವ ತಪಸ್ವಿ “ದೇಹಕ್ಕೆ ಚುಚ್ಚಿಕೊಂಡಿರುವ ಬಾಣವನ್ನು ತೆಗೆ, ಹೇಗಿದ್ದರೂ ನಾನು ಸಾಯುತ್ತೇನೆ. ನನ್ನ ತಂದೆತಾಯಂದಿರಿಗೆ ಈ ವರ್ತಮಾನವನ್ನು ತಿಳಿಸು” ಎಂದು ದಶರಥನಿಗೆ ಹೇಳುತ್ತಾನೆ. ಆ ವೇಳೆ ದಶರಥ ಕಂಗೆಟ್ಟಿದ್ದ. ಮನುಷ್ಯರನ್ನು ಕೊಲ್ಲುವುದು ಈತನ ಉದ್ದೇಶವಾಗಿರುವುದಿಲ್ಲ ಅಥವಾ ಕ್ಷತ್ರಿಯನಾಗಿ ಕೊಲ್ಲುವುದಾದರೆ, ವಿರೋಧಿಗಳನ್ನು ಮಾತ್ರ ಕೊಲ್ಲಬೇಕು. ಹೀಗಾಗಿ ಯುವಕನ ದೇಹದಿಂದ ಬಾಣ ಹೊರತೆಗೆದ ತಕ್ಷಣ, ಆತ ಮರಣ ಹೊಂದುತ್ತಾನೆ.  ಅನಂತರ ದಶರಥ ವೃದ್ಧರ ಬಳಿ ತೆರಳಿದಾಗ, ಅವರು ಕುರುಡರಾಗಿರುವುದನ್ನು ಗಮನಿಸುತ್ತಾನೆ. ಹೆಜ್ಜೆಯ ಶಬ್ದವನ್ನು ಕೇಳಿದ ತಂದೆ – ತಾಯಿ “ಮಗ ಬಂದೆಯಾ” ಎಂದು ಕೇಳಿದಾಗ ದಶರಥ “ಮಗ ಬರಲಿಲ್ಲ. ಮಗನನ್ನು ಕೊಂದವನು ಬಂದಿದ್ದೇನೆ” ಎಂದು ಉತ್ತರಿಸುತ್ತಾನೆ. ಕೊನೆಗೆ ವೃದ್ಧರಿಗೆ ಸತ್ಯ ತಿಳಿದು “ನಮ್ಮ ಕೊನೆಗಾಲದಲ್ಲಿ, ನಾವು ಪುತ್ರ ಶೋಕದಿಂದ ಸಾಯುವಂತಾಯಿತಲ್ಲ. ನಿನಗೂ ನಾಳೆ ಪುತ್ರ ಶೋಕದಿಂದಲೇ ಮರಣ ಬರಲಿ” ಎಂದು ಶಾಪ ಕೊಡುತ್ತಾರೆ. ಅಂದರೆ “ಮಕ್ಕಳು ನಿನ್ನ ಜೊತೆ ಇಲ್ಲದಿದ್ದಾಗ, ನಿನಗೆ ಸಾವು ಬರಲಿ” ಎಂಬುದು.

ಗಮನಿಸಬೇಕಾದ ಸಂಗತಿಯೆಂದರೇ ದಶರಥನಿಗೆ ಮಕ್ಕಳೇ ಆಗಿರಲಿಲ್ಲ. ಆದರೆ ಶಾಪ ಫಲಿಸಬೇಕಾದರೆ ಆತನಿಗೆ ಮಕ್ಕಳಾಗಬೇಕು. ಮುಖ್ಯವಾಗಿ ಈತನ ದುಃಖವೇ ಮಕ್ಕಳು ಇಲ್ಲದಿರುವುದು. ಹಾಗಾಗಿ ಮಕ್ಕಳು ಜನಿಸಬೇಕು. ಮಕ್ಕಳು ದೂರವಿದ್ದಾಗ ಈತ ಸಾಯಬೇಕು. ಅಂದರೆ ಇದು ಶಾಪವೋ? ಅಥವಾ ವರವೋ? ಇಂತಹ ಚೋದ್ಯಗಳನ್ನು ನಾವು ಹಿನ್ನಲೆಯಾಗಿ ಭಾವಿಸಬೇಕು. ದಶರಥನಿಗೆ ಪುತ್ರಕಾಮೇಷ್ಟಿ ಮೂಲಕ ಮಕ್ಕಳಾಗುವುದು ಎಲ್ಲವೂ ಅನಿವಾರ್ಯ ಮತ್ತು ಅಗತ್ಯ. ಇದು ಕಾಲದ, ಜಗತ್ತಿನ ಒಂದು ಯುಗದ ಅಗತ್ಯವಾಗಿ ಕಾಣುತ್ತದೆ.

ಈ ಎಲ್ಲಾ ಹಿನ್ನಲೆಯಿರುವುದರಿಂದ ದಶರಥನು ಪುತ್ರಕಾಮೇಷ್ಟಿ ಯಾಗವನ್ನು ಮಾಡಿಸುತ್ತಾನೆ. ಈ ಸಮಯದಲ್ಲಿ ಯಜ್ಞಕುಂಡದಿಂದೊಬ್ಬ ಯಜ್ಞಪುರುಷ ಬಂದು ಪಾಯಸ ತುಂಬಿರುವಸ  ಪಾತ್ರೆಯನ್ನು ದಶರಥನಿಗೆ ನೀಡಿ “ಈ ಪಾಯಸವನ್ನು ನಿನ್ನ ಹೆಂಡತಿಯರಿಗೆ ಕೊಡು” ಎಂದು ಹೇಳುತ್ತಾನೆ. ಈ ಪಾಯಸದ ಹಂಚಿಕೆಯಲ್ಲಿ ಬೇರೆ ಬೇರೆ ಕಥನಗಳಿವೆ. ವಾಲ್ಮೀಕಿ ರಾಮಾಯಣದಲ್ಲಿ ದಶರಥ, ಪಾಯಸ ಇರುವ ಪಾತ್ರೆಯನ್ನು ಸ್ವೀಕರಿಸಿ ಎರಡು ಭಾಗ ಮಾಡುತ್ತಾನೆ. ಒಂದು ಭಾಗವನ್ನು ಕೌಸಲ್ಯೆಗೆ ಕೊಡುತ್ತಾನೆ. ಉಳಿದ ಒಂದು ಭಾಗವನ್ನು ಮತ್ತೆರಡು ವಿಭಾಗ ಮಾಡಿ ಸುಮಿತ್ರೆಗೆ ಮತ್ತು ಕೈಕೇಯಿಗೆ ಕೊಡುತ್ತಾನೆ. ಮತ್ತೊಂದು ಕಥೆಯಲ್ಲಿ ಎರಡು ಭಾಗ ಮಾಡಿದ ಪಾಯಸವನ್ನು ಹಿರಿಯ ರಾಣಿಗೆ ಮತ್ತು ಕಿರಿಯ ರಾಣಿಗೆ ನೀಡಿ, ಅನಂತರ ಈ ಇಬ್ಬರು ಕುಡಿದು, ಉಳಿದ ಪಾಲನ್ನು ಸುಮಿತ್ರೆಗೆ ಕೊಟ್ಟರು ಎಂಬುದು ಕಥೆ.

ಮೂವರು ಪತ್ನಿಯರು ಪಾಯಸವನ್ನು ಸೇವಿಸಿದ ನಂತರದ ದಿನಗಳಲ್ಲಿ ನಾಲ್ಕು ಮಕ್ಕಳು ಹುಟ್ಟುತ್ತಾರೆ. ಕೌಸಲ್ಯೆಗೆ ರಾಮ, ಕೈಕೇಯಿಗೆ ಭರತ ಮತ್ತು ಸುಮಿತ್ರೆಗೆ ಲಕ್ಷ್ಮಣ ಹಾಗೂ ಶತ್ರುಘ್ನ. ಅನಂತರ ಈ ರಾಣಿಯರೊಂದಿಗೆ ಮಕ್ಕಳು ಅನ್ಯೋನ್ಯವಾಗಿ ಬೆಳೆಯುತ್ತಾರೆ. ದಶರಥನಿಗೆ ರಾಮನ ಮೇಲೆ ವಿಪರೀತವಾದ ಪ್ರೀತಿ. ಈ ಪ್ರೀತಿಯನ್ನು ಯಕ್ಷಗಾನದ ಕವಿ ಪಾರ್ತಿಸುಬ್ಬನ ಪ್ರಸಂಗದ ಒಂದು ಸನ್ನಿವೇಶದಲ್ಲಿ ಈ ರೀತಿ ಹೇಳಲಾಗಿದೆ, ಮಕ್ಕಳೆಲ್ಲಾ ಆಟವಾಡುತ್ತಿರುವುದನ್ನು ದಶರಥ ನೋಡಿ, ರಾಮನನ್ನು ಅದ್ಭುತವಾಗಿ ಮಾತನಾಡಿಸುತ್ತಾನೆ. ಅನಂತರ ಭರತನ ಬಳಿಗೆ ತೆರಳಿ, ಶತ್ರುಘ್ನನನ್ನು “ಇವನ್ಯಾರು?” ಎಂದು ಕೇಳುತ್ತಾನೆ. ಅಂದರೆ ತಂದೆಯಾದರೂ, ತನ್ನ ಉಳಿದ ಮಕ್ಕಳ ಕಡೆಗೆ ಲಕ್ಷ್ಯವನ್ನು ನೀಡಿರಲಿಲ್ಲ. ರಾಮಾಭಿಮಾನ ಎಂಬುದು ಬಹಳ ವಿಶೇಷವಾಗಿತ್ತು.

ಹೀಗೆ ಮಕ್ಕಳು ಬೆಳೆಯುತ್ತಾರೆ, ಮದುವೆಯೂ ಆಗುತ್ತದೆ. ರಾಮನ ಪಟ್ಟಾಭಿಷೇಕ ನಿರ್ಣವಾಗುತ್ತದೆ. ಅನಂತರ ದಶರಥನ ಜೀವನದ ಮತ್ತೊಂದು ದುರಂತ ಅಧ್ಯಾಯ ಪ್ರಾರಂಭವಾಗುತ್ತದೆ. ಇವೆಲ್ಲವೂ ಮೇಲಿಂದ ಮೇಲೆ ನಮ್ಮ ಕಣ್ಣೆದುರು ಘಟಿಸುವ ಘಟನೆಯಾಗಿ ಕಂಡರೂ, ಅದನ್ನು ನಿಯಂತ್ರಿಸುವ ಶಕ್ತಿ ಇನ್ಯಾವುದೋ ರೀತಿಯಲ್ಲಿ ಮೊದಲೇ ಪ್ರಭಾವಿಸಿರುತ್ತದೆ.

ದಶರಥನು ಕೈಕೇಯಿಯನ್ನು ಮದುವೆಯಾದ ನಂತರ, ತಿಮಿಧ್ವಜ ಅಥವಾ ಶಂಭನೆಂಬ ರಾಕ್ಷಸನ ಜೊತೆಗಿನ ಯುದ್ಧದಲ್ಲಿ, ಕೈಕೇಯಿ ದಶರಥನಿಗೆ ಸಹಾಯ ಮಾಡಿರುತ್ತಾಳೆ. ಈ ಸಹಾಯವನ್ನು ಮೆಚ್ಚಿದ ದಶರಥ, ಕೈಕೇಯಿಗೆ “ನೀನು ಮಾಡಿದ ಸಹಾಯಕ್ಕೆ ನಿನಗೆ ಎರಡು ವರ ಕೊಡುತ್ತೇನೆ” ಎಂದಾಗ ಕೈಕೇಯಿಯು “ಈಗ ಬೇಡ. ಅಗತ್ಯದ ಸಮಯದಲ್ಲಿ ನಾನೇ ಆ ವರವನ್ನು ಪಡೆಯುತ್ತೇನೆ” ಎಂದು ಉತ್ತರಿಸುತ್ತಾಳೆ.

ದಶರಥನು ರಾಮನನ್ನು ಉತ್ತರಾಧಿಕಾರಿಯಾಗಿ ನೇಮಿಸಿರುವ ವಿಚಾರವನ್ನು ಪ್ರಜೆಗಳಿಗೆ ತಿಳಿಸುತ್ತಾನೆ. ಪ್ರತಿಯೊಬ್ಬರೂ ಇದನ್ನು ತಿಳಿದು ಸಂಭ್ರಮಿಸುತ್ತಾರೆ. ಕವಿಯೊಬ್ಬ ಪ್ರಜೆಗಳ ಈ ಸಂತೋಷವನ್ನು ಕುರಿತು “ಮುಂಗಾರನ್ನು ಕಂಡ ನವಿಲುಗಳಂತೆ ಕುಣಿದರು” ಎಂದು ಹೇಳಿದ್ದಾನೆ. ತನ್ನ ಅಧಿಕಾರವನ್ನು ಹಸ್ತಾಂತರ ಮಾಡುವಾಗಲೂ ದಶರಥನಿಗೆ ಸ್ವಯಂ ಸಂದೇಹವೊಂದಿತ್ತು. ಹೀಗಾಗಿ ಪ್ರಜೆಗಳ ಬಳಿ “ನನ್ನಿಂದ ನಿಮಗೆ ಏನಾದರು ಬೇಸರವಾಗಿದೆಯೇ? ರಾಮನೇ ಏತಕ್ಕಾಗಿ ಬೇಕು?” ಎಂದು ಪ್ರಶ್ನಿಸುತ್ತಾನೆ. ಆಗ ಪ್ರಜೆಗಳು ರಾಮನ ಗುಣ ವಿಶೇಷವನ್ನು ವರ್ಣಿಸಿದಾಗ ಸಂತೋಷಗೊಳ್ಳುತ್ತಾನೆ. ಆದರೆ ರಾಮನಿಗೆ ಪಟ್ಟಾಭಿಷೇಕ ಮಾಡಲು ಮುಂದಾದಾಗ, ಕೈಕೇಯಿಯು ವರವನ್ನು ಕೇಳಲು ಮುಂದಾಗುತ್ತಾಳೆ. ಅದರ ಪ್ರಕಾರ “ರಾಮ, 14 ವರ್ಷ ವನವಾಸ ಮಾಡಬೇಕು. ಭರತನಿಗೆ ಪಟ್ಟವನ್ನು ಕಟ್ಟಬೇಕು” ಎಂದು ನಿರ್ಧರಿತವಾಗುತ್ತದೆ.  

ದಶರಥನಿಗೆ ಕೈಕೇಯಿ ಕೇಳಿದ ವರವನ್ನು ಕೊಡಲು ಮನಸ್ಸಿರಲಿಲ್ಲ. ಆದರೆ ಬೇರೆ ದಾರಿಯೂ ಇರಲಿಲ್ಲ. ಬಹಳ ಆರ್ಥನಾಗಿ “ಇದನ್ನು ಬಿಟ್ಟು. ಬೇರೇನಾದರೂ ವರವನ್ನು ಕೇಳು” ಎಂದು ಭಿನ್ನೈಸಿಕೊಳ್ಳುತ್ತಾನೆ.  ಆದರೆ ಕೈಕೇಯಿ ತನ್ನ ಮನಸ್ಸನ್ನು ಬದಲಾಯಿಸುವುದಿಲ್ಲ. ಅಂದರೆ ಯಾವ ಉದ್ದೇಶಕ್ಕೆ ದಶರಥ ಈ ವರ ಕೊಟ್ಟಿದ್ದಾನೋ, ಆ ಉದ್ದೇಶ ವ್ಯತಿರೇಕವಾಗಿ ಬಳಸಲ್ಪಟ್ಟಿರುತ್ತದೆ.

ಯುದ್ಧದಲ್ಲಿ ಕೈಕೇಯಿಯು ದಶರಥನ ಪ್ರಾಣವನ್ನು ಉಳಿಸಿದ್ದಳು. ಚಕ್ರವರ್ತಿಯ ಪ್ರಾಣ ಉಳಿಸಿದಳು ಎಂಬ ಕಾರಣಕ್ಕೆ ಪುರಸ್ಕಾರವಾಗಿ ವರವನ್ನು ದಶರಥನು ನೀಡಿದ್ದ. ಆದರೆ ಈ ವರವೇ ಆತನಿಗೆ ಶಾಪವಾಯಿತು. ಮುನಿಯ ಶಾಪ ಮತ್ತು ರಾಮನ ಮೇಲಿನ ಅಪರಿಮಿತವಾದ ಪ್ರೀತಿ. ಇವೆರಡೂ ದಶರಥನ ಮರಣಕ್ಕೆ ಕಾರಣವಾದ ಸಂಗತಿಗಳು.

ಕೈಕೇಯಿ ವರ ಕೇಳಿದ್ದರಿಂದ ರಾಮ ಮತ್ತು ಲಕ್ಷ್ಮಣ ವನವಾಸಕ್ಕೆ ತೆರಳಿದರು. ಭರತ ಮತ್ತು ಶತ್ರುಘ್ನರು ಕೈಕೇಯಿಯ ದೇಶದಲ್ಲಿರುತ್ತಾರೆ. ಹೀಗಾಗಿ ಯಾವ ಮಕ್ಕಳು ದಶರಥನ ಬಳಿಯಿರಲಿಲ್ಲ. ಮುನಿ ಶಾಪದಿಂದ, ಪುತ್ರಶೋಕದಿಂದ ಮರಣ ಬರಲೇಬೇಕು. ಹೀಗೆ ಯಾವುದು ಚಕ್ರವರ್ತಿಯಾದ ದಶರಥನನ್ನು ಉಳಿಸುವುದಕ್ಕಾಗಿ ಮಾಡಿದ ಪ್ರಯತ್ನಕ್ಕೆ ಸಿಕ್ಕಿದ ವರವೋ, ಅದೇ ಅವನ ಮರಣಕ್ಕೂ ಕಾರಣವಾಯಿತು. ನಮ್ಮ ಜೀವನದ ಅನೇಕ ವಿಸಂಗತಿಗಳಲ್ಲಿ ಇಂತಹದ್ದೂ ಇವೆ. ದಶರಥ, ಸುಧೀರ್ಘವಾಗಿ ಬದುಕಿ, ಮಕ್ಕಳಿಗಾಗಿ ಹಂಬಲಿಸಿ, ಶಾಪವನ್ನೇ ವರವನ್ನಾಗಿಸಿಕೊಂಡು ನಾಲ್ಕು ಮಕ್ಕಳನ್ನು ಪಡೆದು, ಚಾರಿತ್ರಿಕವಾಗಿ ಒಂದು ವ್ಯಕ್ತಿತ್ವವನ್ನು ಸ್ಥಾಪಿಸಿ, ತಾನು ಕೊಟ್ಟ ವರದ ಕಾರಣಕ್ಕೆ ಮರಣ ಹೊಂದುವ ಸನ್ನಿವೇಶ ಎದುರಾಗುತ್ತದೆ.

ರಾಮಾಯಣದಲ್ಲಿ ಮತ್ತೊಂದು ಕಡೆ ದಶರಥ ಕಾಣಿಸಿಕೊಳ್ಳುತ್ತಾನೆ. ಲಂಕೆಯಿಂದ ಸೀತೆ ಮರಳಿ, ಅಗ್ನಿ ಪ್ರವೇಶ ಮಾಡಿ ಹೊರಗೆ ಬಂದಾಗ, ದಶರಥ ದೇವತೆಗಳ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾನೆ. ರಾಮನಿಗೆ “ಸೀತೆ ಪವಿತ್ರಳು. ಅವಳನ್ನು ಸ್ವೀಕರಿಸುವುದರಲ್ಲಿ ತಪ್ಪಿಲ್ಲ” ಎಂದು ಮನಗಾಣಿಸಿ, ನಂತರ ದೇವಲೋಕವನ್ನು ಸೇರುತ್ತಾನೆ. ಹೀಗೆ ದಶರಥನ ಜೀವನ ಚಿತ್ರ ಎಂಬುದು ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನರಿಗೆ ಹಿನ್ನಲೆಯ ಭವ್ಯವಾದ ಪರದೆಯಾಗಿ ನಿಲ್ಲುತ್ತಾನೆ.

ಮತ್ತೊಂದು ವಿಷಯದಲ್ಲೂ ದಶರಥ ಪ್ರಸಿದ್ಧ. ರೋಹಿಣಿ ನಕ್ಷತ್ರವನ್ನು ಶನಿ ಆಕ್ರಮಿಸಿದ ಸಂದರ್ಭದಲ್ಲಿ ದಶರಥನು ಶನಿಯನ್ನು ಎದುರಿಸುತ್ತಾನೆ. ಇವನ ಪರಾಕ್ರಮಕ್ಕೆ ಶನಿ ಅಂಜಿ, ಶರಣಾಗುತ್ತಾನೆ. ಆಗ ದಶರಥ “ನೀನು ಎಂದಿಗೂ ರೋಹಿಣಿ ನಕ್ಷತ್ರದ ತಂಟೆಗೆ ಬರಬಾರದು” ಎಂದು ನಿರ್ದೇಶಿಸುತ್ತಾನೆ. ಹೀಗೆ ದಶರಥ ಒಂದು ಗ್ರಹವನ್ನೂ ನಿಯಂತ್ರಿಸುವ ಯೋಗ್ಯತೆವುಳ್ಳವನಾಗಿದ್ದನು.

ದಶರಥನಿಗೆ ದಶರಥ ಎಂಬ ಹೆಸರು ಹೇಗೆ ಬಂದಿತ್ತು ಎಂಬ ಪ್ರಶ್ನೆಗಳನ್ನು ಹಲವರು ಕೇಳುತ್ತಿರುತ್ತಾರೆ. ಈತನಿಗೆ ‘ನೇಮಿ’ ಎಂಬ ಹೆಸರೂ ಇದೆ. ದೇವಲೋಕದಲ್ಲಿ ತಿಮಿಧ್ವಜ ಎಂಬ ರಾಕ್ಷಸನ ಜೊತೆ ಯುದ್ಧವಾಗುತ್ತದೆ. ಆದರೆ ಈ ರಾಕ್ಷಸ ಮಾಯಾವಿ. 10 ರೂಪ ತಾಳಿ, 10 ದಿಕ್ಕಿನಿಂದ ಆಕ್ರಮಣ ಮಾಡುತ್ತಾನೆ. ಈ ರಾಕ್ಷಸನನ್ನು ದಶರಥ, 10 ದಿಕ್ಕುಗಳಿಂದ ಎದುರಿಸುವುದಕ್ಕಾಗಿ ತನ್ನ 10 ರಥಗಳನ್ನು ತಿರುಗಿಸಿ ಹೋರಾಟ ಮಾಡುತ್ತಾನೆ. ಹೀಗಾಗಿ ದಶರಥ ಎಂಬ ಹೆಸರು ಬಂದಿತು ಎಂಬುದು ಕಥೆ. ಹಾಗೆ ತಿರುಗುವ ಸಂದರ್ಭದಲ್ಲಿ ರಥದ ಕೀಲು ತಪ್ಪಿದಾಗ, ಕೈಕೇಯಿ ತನ್ನ ಬೆರಳು ಕೊಟ್ಟು ಕಾಪಾಡಿದಳು ಎಂಬುದು ಮತ್ತೊಂದು ಕಥೆ.

ದಶರಥ, ವೀರ ಚಕ್ರವರ್ತಿಯಾಗಿ, 60 ಸಾವಿರ ವರ್ಷ ಆಳಿದವನಾಗಿ ಲೋಕೋದ್ಧಾರಕರಾದ ನಾಲ್ಕು ಮಕ್ಕಳನ್ನು ಪಡೆದ ಕೃತಾರ್ಥತೆಯೊಂದಿಗೆ ಈ ಪಾತ್ರ ಕಾವ್ಯದಲ್ಲಿ ನಿರ್ಗಮಿಸಿದೆ. ದಶರಥನ ವ್ಯಕ್ತಿತ್ವ, ರಾಮಾಯಣದಲ್ಲಿ ಹಿನ್ನಲೆಯಾಗಿ, ಮಾತ್ರವಲ್ಲದೆ ಮುನ್ನಲೆಯಾಗಿ ಒಂದು ಸುದೀರ್ಘವಾದ ಸಾರ್ಥಕ ಜೀವನಕ್ಕೆ ಸಂಕೇತವಾಗಿ ನಮ್ಮ ಕಣ್ಣೆದುರು ಸದಾ ನಿಂತಿರುತ್ತದೆ.  

-ರಾಧಾಕೃಷ್ಣ ಕಲ್ಚಾರ್ ವಿಟ್ಲ

0 Comments

Submit a Comment

Your email address will not be published. Required fields are marked *

Related Articles

Related

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ಯಾವ ಮಗನ ಅಭ್ಯುದಯಕ್ಕಾಗಿ ಕೈಕೇಯಿ ವರವನ್ನು ವಿನಿಯೋಗಿಸಿದ್ದಳೋ, ಆ ಅಭ್ಯುದಯದ ಸಂತೋಷ ಭರತನಿಗೂ ಆಗಲಿಲ್ಲ ಹಾಗೂ ಇದರ ಆನಂದವನ್ನು ತಾಯಿಯೂ ಅನುಭವಿಸಲಿಲ್ಲ. ಇಲ್ಲಿ ವರಗಳೇ ವಿಚಿತ್ರವಾಯಿತು. ಪ್ರಾಣ ಉಳಿಸಬೇಕಾಗಿದ್ದ ವರವನ್ನು ವಿನಿಯೋಗಿಸಿ, ಪ್ರಾಣವನ್ನು ತೆಗೆಯಬೇಕಾಯಿತು. ಸಂತೋಷ ಕೊಡಬೇಕಾಗಿದ್ದಕ್ಕಾಗಿ ವಿನಿಯೋಗಿಸಿದ್ದು, ದುಃಖಕ್ಕೆ ಕಾರಣವಾಯಿತು.

read more
ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಧೃತರಾಷ್ಟ್ರ ಕುರುಡನಾದರೂ ಬುದ್ಧಿ ಹೀನನಲ್ಲ. ಮಾತ್ರವಲ್ಲದೇ, ಧೃತರಾಷ್ಟ್ರವೆಂದರೆ, ರಾಷ್ಟ್ರವನ್ನು ಎತ್ತಿಹಿಡಿಯುವವನು ಎಂಬರ್ಥ ಬರುತ್ತದೆ. ದುರದೃಷ್ಟವಶಾತ್, ಈತನ ಮಕ್ಕಳು ಕೂಡ ರಾಷ್ಟ್ರವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಲಿಲ್ಲ. ಸ್ವತಃ ಧೃತರಾಷ್ಟ್ರನಿಗೂ ಆ ಕೆಲಸ ಮಾಡಲಾಗಲಿಲ್ಲ. ಆದರೆ ಈತನ ಬುದ್ಧಿವಂತಿಕೆ ಬಳಕೆಗೆ ಬಂದದ್ದು, ತನ್ನ ಮಕ್ಕಳ ಅಭ್ಯುದಯಕ್ಕೆ ಹಾಗೂ ಅವರ ಪ್ರಯೋಜನಕ್ಕೆ ಮಾತ್ರ.

read more
ರಾಮನಂತೆ ಅರಣ್ಯವಾಸಿಯಾದ ಭರತ 

ರಾಮನಂತೆ ಅರಣ್ಯವಾಸಿಯಾದ ಭರತ 

ಭರತನು ಸಿಂಹಾಸನವೇರಿ ರಾಜ್ಯವನ್ನು ಆಳಬಹುದಿತ್ತು. ಆದರೆ ಈತನ ಮನಸ್ಸು ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ರಾಮನ ಪ್ರೀತಿ, ಅಭಿಮಾನಗಳು ಆತನಿಗೆ ಶಕ್ತಿಯಾಗಿದ್ದವು. ರಾಮನೇ ರಾಜನಾಗಬೇಕೆಂದು ಬಯಸಿ, ಅಣ್ಣನನ್ನು ಹುಡುಕುತ್ತಾ ಚಿತ್ರಕೂಟದಲ್ಲಿ ಭೇಟಿಯಾಗುತ್ತಾನೆ. ಇದೊಂದು ಅಣ್ಣ-ತಮ್ಮಂದಿರ ಮಿಲನದ ಭೇಟಿ. ಭರತ, ದಶರಥನ ಮರಣವಾರ್ತೆಯನ್ನು ಹೇಳಿ, ದುಃಖಿಸಿ ಕಣ್ಣೀರಿಡುತ್ತಿರುವಾಗ, ರಾಮ ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ರಾಮ ಮಾಡಬೇಕಾದ ಕಾರ್ಯಗಳನ್ನು ತಾನು ನೇರವೇರಿಸಿದ ಸಂಗತಿಗಳನ್ನು ಹೇಳುತ್ತಾನೆ.

read more