ಮಹಾಭಾರತದ ಕಥನಕ್ಕೆ ಅಡಿಪಾಯವಾಗಿ ಹಾಗೂ ಒಂದು ಪಂಚಾಗದ ಕಲ್ಲಾಗಿ ನಿಂತದ್ದು ಭೀಷ್ಮ ಎಂಬ ಪಾತ್ರ. ದೇವವ್ರತ ಎಂಬುದು ಭೀಷ್ಮನ ಮೊದಲ ಹೆಸರು. ಕವಿ ಪಂಪನು ಭೀಷ್ಮನ ಪಾತ್ರವನ್ನು ಔನತ್ಯದ ಅಥವಾ ಎತ್ತರದ ಸಂಕೇತವಾಗಿ ಗುರುತಿಸಿದ್ದಾನೆ. “ಅತ್ಯುನ್ನತಿಯೊಳ್ ಅಮರಸಿಂಧೋದ್ಭವಂ”, ಇವನಿಂದಾಗಿ ಭಾರತಂ ಲೋಕ ಪೂಜ್ಯಂ” ಎಂದು ಪಂಪನು ವಿವರಿಸುತ್ತಾನೆ. ಅಂದರೆ ಇಲ್ಲಿ ಅತ್ಯುನ್ನತಿ ಎಂದರೆ ತ್ಯಾಗ, ಧರ್ಮಾನುಸರಣೆ, ತತ್ವವನ್ನು ಒಪ್ಪಿ ನಡೆಯುವುದು, ಸತ್ಯನಿಷ್ಠೆ, ಮೌಲ್ಯ ಹಾಗೂ ಆದರ್ಶದ ಮೂಲಕ ಜೀವಿಸುವುದು ಎಂದರ್ಥ.
ಭೀಷ್ಮನು ಶಾಪಕ್ಕೆ ಒಳಗಾಗಿದ್ದ. ಈತನನ್ನು ಎರಡು ನೆಲೆಯಿಂದ ಗ್ರಹಿಸಬೇಕು. ಒಂದು ನೆಲೆಯಲ್ಲಿ ವಸುಗಳಲ್ಲಿ ಒಬ್ಬನಾಗಿದ್ದು, ಶಾಪ ಪಡೆದು ದೇವವ್ರತನಾಗಿ ಜನಿಸಿದ. ಮತ್ತೊಂದು ನೆಲೆಯಲ್ಲಿ ಮನುಷ್ಯನಾಗಿಯೂ ಭೀಷ್ಮ ಶಪಿತನಾಗಿದ್ದ. ಯೋಗ್ಯತೆ ಹಾಗೂ ಗುಣವಿಶೇಷಗಳಿದ್ದೂ ಅದಕ್ಕೆ ಪಡೆಯಬೇಕಾದ ಪುರಸ್ಕಾರ ದೊರೆತಿರಲಿಲ್ಲ. ಮಹಾಭಾರತದಲ್ಲಿ ಭೀಷ್ಮ ಎತ್ತರದ ವ್ಯಕ್ತಿಯಾಗಿದ್ದರೂ ಅಷ್ಟೊಂದು ಅಧಿಕಾರ, ಸಂಪತ್ತು ಅಥವಾ ಯಾವುದೇ ಮನ್ನಣೆಯನ್ನೂ ಪಡೆಯಲಿಲ್ಲ. ತ್ಯಾಗವೇ ಈತನಲ್ಲಿ ಇದ್ದ ಮೂಲ ಗುಣ.
ದೇವವ್ರತನು ಭೀಷ್ಮನಾಗುವುದರ ಹಿಂದೆ ರೋಚಕವಾದ ಕಥೆಯಿದೆ. ದೇವವ್ರತನ ತಂದೆ ಶಂತನು, ದಾಶರಾಜನ ಮಗಳು ಸತ್ಯವತಿಯನ್ನು ಮದುವೆಯಾಗಬೇಕೆಂದು ಬಯಸುತ್ತಾನೆ. ಆದರೆ ದಾಶರಾಜ “ಸತ್ಯವತಿಯ ಮಕ್ಕಳಿಗೆ ಮಾತ್ರ ಸಿಂಹಾಸನ ಕೊಡಬೇಕು” ಎಂಬ ನಿಬಂಧನೆಗಳನ್ನು ಹಾಕುತ್ತಾನೆ. ಇದಕ್ಕೆ ಶಂತನು ಒಪ್ಪುವುದಿಲ್ಲ. ಆಗ ದೇವವ್ರತನು ದಾಶರಾಜ ಬಳಿ ಹೋಗಿ “ನಾನು ಸಿಂಹಾಸನದ ಅಧಿಕಾರವನ್ನು ಸತ್ಯವತಿಯ ಮಕ್ಕಳಿಗೆ ಕೊಡುತ್ತೇನೆ” ಎಂದು ಹೇಳುತ್ತಾನೆ. ಆದರೆ ತೃಪ್ತನಾಗದ ದಾಶರಾಜ “ನಾಳೆಯ ದಿನ ಸತ್ಯವತಿ ಮಕ್ಕಳಿಗೆ, ನಿನ್ನ ಮಕ್ಕಳು ಪ್ರತಿಸ್ಫರ್ಧಿಗಳಾದರೆ ಏನು ಮಾಡುವುದು? ಆ ವೇಳೆ ಕಂಟಕ ಎದುರಾಗುವುದಿಲ್ಲವೇ?” ಎಂದು ಪ್ರಶ್ನಿಸುತ್ತಾನೆ. ಆಗ ದೇವವ್ರತ “ನನ್ನ ಆಜೀವ ಪರ್ಯಂತ ಬ್ರಹ್ಮಚಾರಿಯಾಗಿಯೇ ಇರುತ್ತೇನೆ” ಎಂದು ಪ್ರತಿಜ್ಞೆ ಮಾಡುತ್ತಾನೆ. ಇದು ಸುಲಭ ಸಾಧ್ಯವಲ್ಲದ ನಿರ್ಣಯ. ಈ ಪ್ರತಿಜ್ಞೆಯನ್ನು ಕಂಡ ದೇವಲೋಕದ ದೇವತೆಗಳಿಗೆ ಆನಂದವಾಗುತ್ತದೆ. ಹೀಗಾಗಿ ಇವರು ‘ಭೀಷ್ಮ’ ಎಂಬ ಹೆಸರನ್ನೂ ನೀಡಿದರು. ಭೀಕರ ಪ್ರತಿಜ್ಞೆ ಮಾಡಿದ್ದರಿಂದ ದೇವವ್ರತ ಭೀಷ್ಮನಾದ.
ಭೀಷ್ಮನ ತ್ಯಾಗಕ್ಕೆ ಪ್ರತಿಯಾಗಿ ತಂದೆಯಾದ ಶಂತನು ಮಹಾರಾಜ “ಮಗು, ನೀನು ಬಯಸದ ಹೊರತು ನಿನಗೆ ಮರಣ ಬಾರದಿರಲಿ” ಎಂಬ ವಿಶೇಷವಾದ ವರವನ್ನು ಕೊಡುತ್ತಾನೆ. ಭೀಷ್ಮನ ಈ ತ್ಯಾಗ ಮತ್ತು ವರ, ಒಂದರ್ಥದಲ್ಲಿ ವಿಫಲವಾಗುವುದನ್ನು ನಾವು ಕಾಣುತ್ತೇವೆ. ಹೇಗೆಂದರೆ, ಒಳ ಜಗಳಕ್ಕೆ ಮತ್ತು ಪರಸ್ಪರರ ಸ್ಫರ್ಧೆಗೆ ಕಾರಣವಾಗಬಾರದು ಹಾಗೂ ನಿಜವಾದ ಅಧಿಕಾರಿಗೆ ಹಕ್ಕು ಎಂಬ ಹೆಸರಿನ ಮೂಲಕ ತೊಂದರೆ ಕೊಡಬಾರದೆಂದು ಭೀಷ್ಮ ತನ್ನ ಜೀವನವನ್ನು ತ್ಯಾಗ ಮಾಡಿದ. ಅನಂತರ ಆ ಸಿಂಹಾಸನಕ್ಕಾಗಿ ಎರಡು ತಂಡಗಳು ಕಚ್ಚಾಡಿದವು. ಸಂಪೂರ್ಣ ಭಾರತದಲ್ಲಿ ರಕ್ತದ ಓಕುಳಿ ಹರಿಯಿತು.
ಕುರುಕ್ಷೇತ್ರ ಯುದ್ಧ ಎಂಬುದು ಬಹುದೊಡ್ಡ ರಕ್ತಪಾತದ ಕಥೆ. ಅಂದರೆ ಭೀಷ್ಮನು ಯಾವುದಕ್ಕಾಗಿ ಜಗಳ ಅಥವಾ ಯುದ್ಧವಾಗಬಾರದೆಂದು ತ್ಯಾಗ ಮಾಡಿದನೋ, ಅದಕ್ಕೆ ಸಾಕ್ಷಿಯಾಗಿ ನಿಲ್ಲಬೇಕಾಯಿತು. ಮಾತ್ರವಲ್ಲ ತಾನೂ ಪಾಲ್ಗೊಳ್ಳಬೇಕಾಯಿತು. ಭೀಷ್ಮನ ತ್ಯಾಗಕ್ಕೆ ಉತ್ತರಾಧಿಕಾರಿಗಳಾಗಿ ಬಂದವರು ಯಾವ ಮೌಲ್ಯವನ್ನು ಕೊಡಲಿಲ್ಲ. ಸ್ವಾರ್ಥಿಗಳಾಗಿ, ದುರ್ಬುದ್ಧಿಯವರಾಗಿ ಹಾಗೂ ದುಷ್ಟರಾಗಿ ನೆತ್ತರನ್ನು ಹರಿಸಿದರು.
ಸಾಮಾನ್ಯರಿಗೆ ಯಾರಿಗೂ ಇಲ್ಲದ ಮರಣ ನಿಯಂತ್ರಣ ಭೀಷ್ಮನಿಗೆ ಇದ್ದದ್ದು ವಿಶೇಷ. 800 ವರ್ಷಗಳ ಕಾಲ ಈತ ಜೀವಿಸಿದ ಎಂದು ಕಥೆಗಳು ಹೇಳುತ್ತವೆ. ಇಷ್ಟು ವರ್ಷಗಳು ಜೀವಿಸಿರುವುದು ಸಂಶಯವಾಗಿದ್ದರೂ, ಸುದೀರ್ಘವಾದ ಬದುಕನ್ನು ಕಂಡಿದ್ದಾನೆ. ವರದ ಪ್ರಕಾರ ಸಾಯುವುದಕ್ಕೆ ಪ್ರಬಲವಾದ ಇಚ್ಛೆ ಹುಟ್ಟಬೇಕು. ಆಗ ಮಾತ್ರ ಮರಣ ಸಾಧ್ಯ. ಭೀಷ್ಮನ ದುರ್ದೈವಕ್ಕೆ ವರದ ಕಾರಣದಿಂದ ನೋಡಬಾರದನ್ನೆಲ್ಲಾ ನೋಡಿದ ಮತ್ತು ಸಾಕ್ಷಿಯಾಗಿ ನಿಂತ. ತನ್ನ ಮೊಮ್ಮಕ್ಕಳ ನೆತ್ತರಿನಲ್ಲೇ, ತಾನು ಕೈತೊಳೆಯಬೇಕಾದ ಅನಿವಾರ್ಯತೆ ಬಂದೊದಗಿತು. ಇದು ಒಬ್ಬನ ಜೀವನದ ದುರಂತ.
ಈ ಸ್ಥಿತಿ ಹಾಗೂ ದುಃಖದಲ್ಲಿದ್ದರೂ ಭೀಷ್ಮನಿಗೆ ತಾನು ಸಾಯಬೇಕು ಎಂದು ಪ್ರಬಲವಾಗಿ ಇಚ್ಛೆ ಹುಟ್ಟದ ಕಾರಣ ಬದುಕುಳಿದ. ಆತನ ಅಂತರಂಗದಲ್ಲಿ ಬಹಳ ತುಮುಲಗಳಿದ್ದವು. ಕಾಶಿರಾಜನ ಮಗಳು ಅಂಬೆಯನ್ನು ಹಸ್ತಿನಾವತಿಯಲ್ಲಿ ಕರೆತಂದಾಗಿನಿಂದ, ಭೀಷ್ಮನ ವ್ಯವಹಾರಗಳನ್ನೆಲ್ಲಾ ಉಳಿದವರು ಪ್ರಶ್ನಿಸುತ್ತಿರುತ್ತಿದ್ದರು. ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವ ಅನಿವಾರ್ಯತೆಗೆ ಈತ ಸಿಲುಕಿದ. ದುರಂತ ಎಂದರೆ ಭೀಷ್ಮ ಯಾರನ್ನೂ “ನೀನು ಏಕೆ ಹೀಗೆ ಮಾಡಿದೆ?” ಎಂದು ಪ್ರಶ್ನಿಸುವುದಕ್ಕೆ ಆಗಲೇ ಇಲ್ಲ. ಕಣ್ಣೆದುರಲ್ಲೇ ಕೌರವರು ಪಾಂಡವರಿಗೆ ವಿಷ ಕೊಡುತ್ತಾರೆ ಹಾಗೂ ಮನೆಗೆ ಬೆಂಕಿ ಹಚ್ಚುತ್ತಾರೆ. ಆದರೆ ಇದನ್ನು ಏಕೆ ಎಂದು ಕೇಳುವ ಅಧಿಕಾರ ಭೀಷ್ಮನಿಗೆ ಇಲ್ಲ. ಏಕೆಂದರೆ ಧೃತರಾಷ್ಟ ಕೌರವರ ತಂದೆ.
ಭೀಷ್ಮ ಶರಶಯ್ಯೆಯ ಮೇಲೆ ಮಲಗಿದಾಗ, ಅಂಬೆ ಶಿಖಂಡಿಯಾಗಿ ಬಂದಿದ್ದಾಳೆ ಎಂಬ ಭಾವವೋ? ಅಥವಾ ನಿಜವಾದ ಸಂಭವವೋ? ಎಂಬುದನ್ನು ಸರಿಯಾಗಿ ಅರಿಯದೆ ಆಯುಧವನ್ನು ಬಿಟ್ಟು ಮಲಗಿಬಿಡುತ್ತಾನೆ. ಆದರೆ ಮಲಗಿದರೂ ಸಾಯುವುದಿಲ್ಲ. ಉತ್ತರಾಯಣವನ್ನು ಕಾಯುತ್ತಿರುತ್ತಾನೆ. “ಇಂತಹ ಜೀವನದಲ್ಲಿ ತಾನು ವಿಫಲನಾದೆ” ಎಂಬ ನೋವು ಅವನಿಗೆ ಕಾಡಿದ್ದರೆ ಆಶ್ಚರ್ಯವೇನಿಲ್ಲ.
ತ್ಯಾಗ ಮತ್ತು ಮೌಲ್ಯದ ಹಿನ್ನಲೆಯಿದ್ದರೂ, ಕುರುವಂಶದ ಸಭೆಯಲ್ಲಿ ವಸ್ತ್ರಾಪಹರಣ ನಡೆಯುವಾಗಲೂ ಭೀಷ್ಮನು ನೋಡುತ್ತಾ ಕುಳಿತಿದ್ದ. ಅಂದು ಭೀಷ್ಮನಿಗೆ ಯಾವುದು ತಪ್ಪು ಅಥವಾ ಸರಿ ಎಂದು ಹೇಳುವುದು ಕಷ್ಟವಾಗಿತ್ತು. “ಧರ್ಮಾಸ್ಯೆ ಮುಖಾ ಭಿನ್ನಾನಿ” ಎನ್ನುತ್ತಾನೆ. ಅಂದರೆ ಧರ್ಮಕ್ಕೆ ಅನೇಕ ಮುಖವಿದೆ ಎಂಬುದು.
ಹೀಗೆ ತನ್ನ ಜೀವನದ ವೈಫಲ್ಯಗಳನ್ನು ಎಣಿಸುತ್ತಾ, ತಾನು ಉಂಡು-ಕಂಡ ನೋವು ಹಾಗೂ ಸಂಕಟಗಳನ್ನು ಭಾವಿಸಿಕೊಳ್ಳುತ್ತಾ ಬಾಣದ ಹಾಸಿಗೆ ಮೇಲೆ ಮಲಗಿರುತ್ತಾನೆ. ಬಹುಶಃ ಜೀವನದಲ್ಲಿ ಆದರ್ಶಕ್ಕಾಗಿ, ತತ್ವಕ್ಕಾಗಿ ಹಾಗೂ ಸತ್ಯಕ್ಕಾಗಿ ದುಡಿದವರೆಲ್ಲಾ ತಮ್ಮ ಬದುಕಿನಲ್ಲಿ ಬಾಣದ ಮುಳ್ಳಿನ ಮೇಲೆ ಮಲಗಬೇಕಾಗುತ್ತದೆ. ಈ ತರಹದ ದುರಂತವನ್ನು ವ್ಯಾಸರು ಭೀಷ್ಮನ ಮೂಲಕ ಹೇಳಿರಬಹುದು. ಹೀಗೆ ಮಲಗಿದ ಭೀಷ್ಮನ ಬದುಕು ವಿಫಲವೇ? ಎಂದು ಕೇಳಿಕೊಂಡರೆ, ಅತ್ಯಂತ ಆನಂದಮಯವಾದ ಸ್ಥಿತಿಯನ್ನು ಮುಟ್ಟುವುದೇ ಜೀವನದ ಲಕ್ಷ್ಯ ಎಂಬ ನಿರ್ಧಾರಕ್ಕೆ ಬರಬಹುದೇ?
ಮುಳ್ಳಿನ ಹಾಸಿಗೆ ಮೇಲೆ ಮಲಗಿದ್ದವನ ಕಡೆಗೆ, ಕೃಷ್ಣ ಧರ್ಮರಾಯನನ್ನು ಕರೆದುಕೊಂಡು ಬಂದು, ಭೀಷ್ಮನಿಗೆ ರಾಜಧರ್ಮದ ಉಪದೇಶವನ್ನು ಮಾಡಿಸುತ್ತಾನೆ. ಕೃಷ್ಣನು ಭೀಷ್ಮನನ್ನು ಕ್ಷಮಿಸಿ, ಗೌರವಿಸಿ, ಒಪ್ಪಿಕೊಳ್ಳುತ್ತಾನೆ. ಹೀಗಾಗಿ ದೇವರು ಸ್ವೀಕರಿಸಿದ ಎಂಬ ನೆಲೆಯಿಂದ ಭೀಷ್ಮನ ಜೀವಕ್ಕೂ ಒಂದರ್ಥದಲ್ಲಿ ಸಾರ್ಥಕತೆ ಬಂದಿದೆ ಎಂದು ಗ್ರಹಿಸಬೇಕಾಗುತ್ತದೆ. ಇದು ಭೀಷ್ಮನ ಕುರಿತಾದ ಒಂದು ಭಾವ ಹಾಗೂ ಚಿಂತಿಸಬಹುದಾದ ಕೋನ.
-ರಾಧಾಕೃಷ್ಣ ಕಲ್ಚಾರ್ ವಿಟ್ಲ





0 Comments