ಸುಮಿತ್ರೆಯ ತ್ಯಾಗದ ಗುಣ

ರಾಮಾಯಣದ ಪಾತ್ರಗಳಲ್ಲಿ ಗಮನಾರ್ಹವಾಗಿದ್ದರೂ, ಗಮನಕ್ಕೆ ಬಾರದಿದ್ದ ಪಾತ್ರ ಸುಮಿತ್ರೆ. ಈಕೆ ದಶರಥ ಮಹಾರಾಜನ ಮೂರು ಪತ್ನಿಯರಲ್ಲಿ ಒಬ್ಬಳು. ಮಗದ ದೇಶದ ಶೂರರಾಜನ ಮಗಳು. ಭ್ರಾತೃ ಪ್ರೇಮಕ್ಕೆ, ಭ್ರಾತೃ ಸೇವೆಗೆ ಪ್ರಸಿದ್ಧನಾದ ಲಕ್ಷ್ಮಣನ ತಾಯಿ. ಈ ಸುಮಿತ್ರೆಯ ಪಾತ್ರ, ಬೆಳಕಿನಲ್ಲಿ ಹೆಚ್ಚು ಬಾರದೆ, ಹಿನ್ನಲೆಯಲ್ಲಿದ್ದು, ಇಡೀ ರಾಮಾಯಣವನ್ನು ಪ್ರಭಾವಿಸಿದ ಪಾತ್ರ. ವಿಶೇಷವೆಂದರೆ ಈಕೆ ನಿರ್ಲಕ್ಷಿತಳು. ಏಕೆಂದರೆ ದಶರಥನ ಪಟ್ಟದ ರಾಣಿ ಕೈಕೇಯಿಗೆ ಅಂತಃಪುರದಲ್ಲಿ ಹಾಗೂ ರಾಜಸಭೆಯಲ್ಲಿ ರಾಜನ ಮುಖೇನ ವಿಶೇಷವಾದ ಗೌರವ ಪ್ರಾಪ್ತಿಯಾಗಿತ್ತು. ಕಿರಿಯ ರಾಣಿಯಾಗಿದ್ದ ಕೈಕೇಯಿ ಸುಂದರಿಯಾಗಿದ್ದು, ದಶರಥನಿಗೆ ಹತ್ತಿರವಾಗಿದ್ದು ಪ್ರೀತಿ ಪಾತ್ರಳಾಗಿದ್ದಳು.

ಸುಮಿತ್ರೆ, ಹಿರಿಯ ರಾಣಿಯ ಪಟ್ಟವೂ ಸಿಕ್ಕಿರಲಿಲ್ಲ ಹಾಗೂ ಪ್ರೀತಿಯ ರಾಣಿಯೂ ಆಗಿರಲಿಲ್ಲ. ಒಂದು ರೀತಿ ಎಲ್ಲವೂ ಇದ್ದು, ಏನು ಇಲ್ಲದಂತೆ ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಯಜ್ಞಪುರುಷ ತಂದ ಪಾಯಸವನ್ನು ಸ್ವೀಕರಿಸಿದ ನಂತರ, ಸುಮಿತ್ರೆಗೆ ಲಕ್ಷ್ಮಣ ಮತ್ತು ಶತ್ರುಘ್ನ ಎಂಬ ಮಕ್ಕಳು ಹುಟ್ಟಿದರು. ಆದರೆ ಒಬ್ಬ ಮಗನನ್ನು ಆಕೆ ರಾಮನಿಗೆ ಬಿಟ್ಟುಕೊಟ್ಟಳು. ಮತ್ತೊಬ್ಬ ಮಗನನ್ನು ಭರತನಿಗೆ ಬಿಟ್ಟುಕೊಟ್ಟಳು. ರಾಮನ ನೆರಳಿನಂತೆ, ಲಕ್ಷ್ಮಣ ಜೊತೆಗಿದ್ದನು. ಎರಡನೇ ಮಗ ಶತ್ರುಘ್ನ ಕೂಡ, ಭರತ ಹೋದ ದಾರಿಯಲ್ಲಿಯೇ ಸಾಗಿದನು.

ಏತಕ್ಕಾಗಿ ತನ್ನ ಮಕ್ಕಳನ್ನು ಹೀಗೆ ಬಿಟ್ಟುಕೊಟ್ಟಳು ಎಂದು ಯೋಚಿಸಿದರೆ, ನಮ್ಮ ಊಹಾ ಪ್ರಪಂಚಕ್ಕೆ ಮತ್ತೊಂದು ಚಿತ್ರ ಕಾಣುತ್ತದೆ. ಅದೇನೆಂದರೆ, ದಶರಥನ ಪುತ್ರಕಾಮೇಷ್ಟಿಯಾಗದಲ್ಲಿ ದೊರೆತ ಪಾಯಸ, ಹೇಗೆ ಹಂಚಲ್ಪಟ್ಟಿತ್ತು ಎಂಬುದನ್ನು ಗಮನಿಸಬೇಕು. ಈ ಯಾಗದಲ್ಲಿ ಬಂದ ಯಜ್ಞಪುರುಷ “ಈ ಪಾಯಸವನ್ನು ನಿನ್ನ ರಾಣಿಯರಿಗೆ ಕೊಡು” ಎಂದು ದಶರಥನಿಗೆ ಕೊಟ್ಟ. ದಶರಥ, ತನ್ನ ಹಿರಿಯ ರಾಣಿಯಾದ ಕೌಸಲ್ಯಳಿಗೆ ಪಾಯಸದ ಅರ್ಧಭಾಗವನ್ನು ಕೊಟ್ಟ. ಉಳಿದ ಅರ್ಧ ಭಾಗವನ್ನು, ಮತ್ತೆ ಎರಡು ಭಾಗ ಮಾಡಿ, ಸುಮಿತ್ರೆಗೆ ಮತ್ತು ಅನಂತರ ಉಳಿದ ಭಾಗವನ್ನು ಕೈಕೇಯಿ ಕೊಟ್ಟ. ಹೀಗಾಗಿ ರಾಮನ ಜೊತೆ ಲಕ್ಷ್ಮಣ ಮತ್ತು ಭರತನ ಜೊತೆ ಶತ್ರುಘ್ನ ಹೋಗಿರಬಹುದೆಂದು ನಾವು ಊಹಿಸಬಹುದು.

ಇದಲ್ಲದೇ, ಇವರ ನಡುವಿನ ಅವಿಭಾಜ್ಯ ಸಂಬಂಧ ರೂಪುಗೊಳ್ಳುವುದಕ್ಕೆ ಸುಮಿತ್ರೆಯು ಪ್ರಸವಿಸಿ ನೀಡಿದ ಇಬ್ಬರು ಮಕ್ಕಳು ಕೂಡ ಕಾರಣವಿದ್ದರಬೇಕು ಹಾಗೂ ಮೂಲದ್ರವ್ಯವಾದ ಪಾಯಸವೂ ಕಾರಣವಿದ್ದಿರಬಹುದು. ತಾಯಿ, ತನ್ನ ಮಕ್ಕಳನ್ನು ಹೇಗೆ ಬೆಳೆಸುತ್ತಾಳೆ ಎಂಬುದರ ಮೇಲೆ, ಆ ಮಕ್ಕಳ ಶೀಲ, ಸ್ವಭಾವ, ಸಂಸ್ಕಾರ ಹೇಗೆ ರೂಪುಗೊಳ್ಳುವುದು ಎನ್ನುವುದರ ಮೇಲೆ, ಆಕೆಯ ತಾಯ್ತನ ನಿಂತಿರುತ್ತದೆ.

ಸುಮಿತ್ರೆ ಹೆತ್ತು ಬೆಳೆಸಿದ ಮಗ ಲಕ್ಷ್ಮಣನು ಸಂಸ್ಕಾರವಂತ ಎನ್ನುವುದಕ್ಕೆ ರಾಮಾಯಣದಲ್ಲಿ ಒಂದು ಸನ್ನಿವೇಶ ಬರುತ್ತದೆ. ಸೀತೆ ಅಪಹರಣದ ನಂತರ, ರಾಮ-ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ತೆರಳುತ್ತಾರೆ. ಜಟಾಯುವಿನ ಮಾರ್ಗದರ್ಶನವೂ ಮುಂದುವರಿದು, ಋಷ್ಯಮುಖ ಪರ್ವತದ ಮೇಲೆ ಕುಳಿತಿದ್ದ ಸುಗ್ರೀವನನ್ನು ಕಾಣುತ್ತಾರೆ. ಹೀಗೆ ಒಮ್ಮೆ ಸುಗ್ರೀವ ಕುಳಿತ್ತಿದ್ದಾಗ ಘಟನೆಯೊಂದು ಸಂಭವಿಸುತ್ತದೆ. ಒಬ್ಬಾತ ಕನ್ಯೆಯೊಬ್ಬಳನ್ನು ಆಕಾಶದಲ್ಲಿ ಅಪಹರಿಸಿಕೊಂಡು ಹೋಗುತ್ತಿರುತ್ತಾನೆ. ಆ ಹೆಣ್ಣು ಮಗಳು, ತನ್ನ ಆಭರಣಗಳನ್ನು ತನ್ನ ಸೀರೆಸೆರಗನ್ನು ಹರಿದು, ಸುತ್ತಿ, ಋಷ್ಯಮುಖದ ಪರ್ವತದ ಮೇಲೆ ಎಸೆಯುತ್ತಾಳೆ. ಅಂದರೆ ತನ್ನನ್ನು ಹುಡುಕುತ್ತಾ ಬರುವ ರಾಮ-ಲಕ್ಷ್ಮಣರಿಗೆ ತನ್ನ ಸುಳಿವು ಸಿಗಲಿ ಎಂಬ ಕಾರಣವಿತ್ತು. ರಾವಣನಿಂದ ಅಪಹರಿಸಲ್ಪಟ್ಟ ಸೀತೆ ಹಾಕಿದ ಆಭರಣ ಗಂಟು ಇದಾಗಿತ್ತು.

ಸುಗ್ರೀವ, ಆ ಆಭರಣದ ಗಂಟನ್ನು ರಾಮನ ಮುಂದಿಟ್ಟು, “ಸ್ವಾಮಿ ಪರ್ವತದ ಮೇಲಿಂದ ಒಬ್ಬಳು ಈ ಆಭರಣವನ್ನು ಎಸೆದಳು. ಇದು ಸೀತೆಯದ್ದೇ ಎನ್ನುವುದನ್ನು ಗಮನಿಸಿ” ಎಂದು ಹೇಳುತ್ತಾನೆ. ರಾಮ, ಆಭರಣಗಳನ್ನು ಗಮನಿಸುತ್ತಾ, ಕಣ್ಣೀರು ತುಂಬಿಕೊಳ್ಳುತ್ತಾ ಲಕ್ಷ್ಮಣನಿಗೆ, “ಇದನ್ನು ನೋಡಪ್ಪ. ನಿನ್ನ ಅತ್ತಿಗೆಯ ಆಭರಣಗಳನ್ನು ನೋಡಿ ಹೌದು ಅಥವಾ ಅಲ್ಲವೇ ಎಂದು ಹೇಳು” ಎನ್ನುತ್ತಾನೆ. ಆಗ ಲಕ್ಷ್ಮಣ ಸೀತೆಯ ಆಭರಗಳನ್ನು ನೋಡುತ್ತಾ, “ನನಗೆ ಉಳಿದ ಆಭರಣಗಳ ಬಗ್ಗೆ ಏನೂ ಗೊತ್ತಿಲ್ಲ. ಕಾಲುಂಗುರ ಬಿಟ್ಟು, ಮೇಲಾದ ಆಭರಣವ ಅರಿಯೆ. ನಿತ್ಯ ಪಾದಾಭಿವಂದನ ಮಾಡುವಾಗ ನೂಪುರಗಳನ್ನು ತಿಳಿದಿದ್ದೇನೆ. ಉಳಿದದ್ದು ನನಗೆ ಗೊತ್ತಿಲ್ಲ. ನಾನು ಸೀತೆಯ ಪಾದಗಳನ್ನು ಮಾತ್ರ ನೋಡುತ್ತಿದ್ದೆ. ಹಾಗಾಗಿ ಕಾಲುಂಗುರದ ಬಗ್ಗೆ ಚೆನ್ನಾಗಿ ತಿಳಿದಿದ್ದೇನೆ” ಎಂದು ಹೇಳುತ್ತಾನೆ.

ಒಂದು ಹೆಣ್ಣನ್ನು ತಾಯಿಯಾಗಿ ನೋಡುವ ಗುಣ ಲಕ್ಷ್ಮಣನಲ್ಲಿತ್ತು. ಆದರೆ ಈ ಸಂಸ್ಕಾರವನ್ನು ಕಲಿಸಿಕೊಟ್ಟವಳು ಸುಮಿತ್ರೆ. ಲಕ್ಷ್ಮಣನಂತಹ ಸುಸಂಸ್ಕೃತ ಮಗನನ್ನು ಪ್ರಪಂಚಕ್ಕೆ ಬೆಳೆಸಿಕೊಟ್ಟಳು ಈಕೆ. ಈ ಕಾರಣಕ್ಕಾಗಿ ಸುಮಿತ್ರೆ ಮಹಾತಾಯಿಯಾಗಿ ಕಾಣುತ್ತಾಳೆ.

ಮತ್ತೊಂದು ವಿಶೇಷವೆಂದರೆ, ರಾಮ ಮತ್ತು ಸೀತೆ ವನವಾಸಕ್ಕೆ ಹೋಗುವುದಕ್ಕೆ ಸಿದ್ಧರಾಗಿರುತ್ತಾರೆ. ಆಗ ಲಕ್ಷ್ಮಣ “ನಾನೂ ಬರುತ್ತೇನೆ” ಎನ್ನುತ್ತಾನೆ. ಆ ವೇಳೆ ರಾಮ “ನಿನಗೆ ವನವಾಸವಿಲ್ಲ. ನೀನು ಏತಕ್ಕೆ ಬರುತ್ತಿಯಾ?” ಎಂದು ಲಕ್ಷ್ಮಣನನ್ನು ಕೇಳುತ್ತಾನೆ. “ಅಣ್ಣ, ನಾನು ನಿಮ್ಮ ಸಂಗಡ ಬರುತ್ತೇನೆ” ಎಂದಾಗ ರಾಮ ”ನಿನ್ನ ತಾಯಿಯ ಅನುಮತಿಯನ್ನು ತೆಗೆದುಕೊಂಡು ಬಾ” ಎಂದು ಕಳುಹಿಸುತ್ತಾನೆ. ಆಗ ಲಕ್ಷ್ಮಣ ತನ್ನ ತಾಯಿಯ ಬಳಿ ಹೋಗಿ ಕೇಳಿದಾಗ, ಸುಮಿತ್ರೆ ಬೇಡವೆನ್ನುವುದಿಲ್ಲ. ಆದರೆ ಅರಣ್ಯದಲ್ಲಿ ಹೇಗಿರಬೇಕೆಂದು ಮಗನಿಗೆ ತಿಳಿಸುತ್ತಾಳೆ. “ಅಡವಿಯನ್ನು ಅಯೋಧ್ಯೆ ಎಂದು ತಿಳಿ. ರಾಮನನ್ನೇ ದಶರಥ ಎಂದು ತಿಳಿ. ಸೀತೆಯನ್ನು ನಾನು ಎಂದು ತಿಳಿ. ಮಗು ಲಕ್ಷ್ಮಣ ಸುಖವಾಗಿ ಹೋಗಿ ಬಾ” ಎನ್ನುತ್ತಾಳೆ.

ಆದರೆ ಲಕ್ಷ್ಮಣನಿಗೆ ಅಯೋಧ್ಯೆಯನ್ನು ಬಿಟ್ಟು ಹೋಗುವುದಕ್ಕೆ ಕೊಂಚ ಬೇಸರವಾಗುತ್ತದೆ. ಏಕೆಂದರೆ ತಾನು ಹುಟ್ಟಿದ ಊರು, ನಗರ, ಪ್ರಜೆಗಳು ಬಹು ಆಪ್ತವಾಗಿದ್ದವು. ಹೀಗಾಗಿ ಇದನ್ನರಿತ ಸುಮಿತ್ರೆ, ಮಗನಿಗೆ “ನೀನು ಅಯೋಧ್ಯೆಯನ್ನು ಕಾಡೆಂದು, ಕಾಡನ್ನು ಅಯೋಧ್ಯೆ ಎಂದು ತಿಳಿದರೆ, ಅಯೋಧ್ಯೆ ಕೊಡಬಹುದಾದ ಸುಖ ಸಂತೋಷವನ್ನು ಕಾಡು ಕೊಡುತ್ತದೆ. ದಶರಥನನ್ನು ಬಿಟ್ಟು ಹೋಗಬೇಕಲ್ಲ ಎಂದು ಚಿಂತಿಸಿದರೆ, ನೀನು ಬಿಟ್ಟು ಹೋಗುತ್ತಿಲ್ಲ. ಏಕೆಂದರೆ, ರಾಮನನ್ನೆ ದಶರಥ, ನನ್ನ ತಂದೆ ಎಂದು ಭಾವಿಸು. ತಾಯಿಯನ್ನು ಬಿಟ್ಟು ಹೋಗುತ್ತಿದ್ದೆನಲ್ಲಾ ಎಂದು ಚಿಂತಿಸಬೇಡ, ಸೀತೆಯನ್ನು ನಾನೆಂದು ತಿಳಿ” ಎಂದು, ವಿಭಿನ್ನ ದೃಷ್ಟಿಕೋನವನ್ನು ರೂಪಿಸುತ್ತಾ, “ಹೋಗಿ ಬಾ ಮಗನೆ” ಎನ್ನುತ್ತಾ ಆರ್ಶೀವಾದವನ್ನು ಮಾಡುತ್ತಾಳೆ.

ಲಕ್ಷ್ಮಣ ವನವಾಸಕ್ಕೆ ಹೋಗಬೇಕಾಗಿರುವುದಿಲ್ಲ. 14 ವರ್ಷ ಮಗನನ್ನು ಬಿಟ್ಟು ಇರುವುದು ಪ್ರಿಯವಾದದ್ದಲ್ಲ. ಆದರೆ ರಾಮ ಲಕ್ಷ್ಮಣರು ಜೊತೆಯಾಗಿದ್ದವರು. ಅವಿನಾಭಾವ ಸಂಬಂಧವುಳ್ಳವರು. ರಾಮ ಸೀತೆಯನ್ನು ಅನುಸರಿಸಿ ಹೋಗಬೇಕಾದದ್ದು ಲಕ್ಷ್ಮಣನಿಗೆ ಪ್ರಿಯವಾದದ್ದು. ಆದ್ದರಿಂದ ಸುಮಿತ್ರೆ ತಡೆಯುವುದಿಲ್ಲ. ಇದು ಈಕೆಯ ತಾಯ್ತನ ಹಾಗೂ ಪ್ರಪಂಚಕ್ಕೆ ಲಕ್ಷ್ಮಣನನ್ನು ಕೊಟ್ಟ ಬಗೆ.

ಇದೇ ಲಕ್ಷ್ಮಣ 12 ವರುಷ ನಿದ್ರೆ, ಆಹಾರ ಹಾಗೂ ಮೈಥುನಾದಿಗಳನ್ನೆಲ್ಲಾ ಬಿಟ್ಟು ವ್ರತದ ರೀತಿಯಲ್ಲಿ ಬದುಕಿದ. ಈ ಕಾರಣದಿಂದಾಗಿ ಇಂದ್ರಜಿತ್ ಎನ್ನುವ ರಾಕ್ಷಸನನ್ನು ಕೊಲ್ಲುವುದಕ್ಕೆ ಸಾಧ್ಯವಾಯಿತು. ಅದೆಷ್ಟೋ ಕಾಲದ ನಂತರ ಅಗಸ್ತ್ಯದ ಋಷಿಮುನಿಗಳು “ರಾವಣನನ್ನು ಕೊಲ್ಲುವುದು ದೊಡ್ಡ ಸಾಹಸವಲ್ಲ. ಇಂದ್ರಜಿತ್ ನನ್ನು ಕೊಲ್ಲುವುದು ದೊಡ್ಡದ್ದು” ಎಂದು ಹೇಳುತ್ತಾರೆ. ಇಂತಹ ವ್ರತನಿಷ್ಠನಾದ ಮಗನನ್ನು ಸಜ್ಜುಗೊಳಿಸಿ, ರಾಮನ ಜೊತೆ ಕಳುಹಿಸಿಕೊಟ್ಟವಳು ಸುಮಿತ್ರೆ.

ಶತ್ರುಘ್ನ ಕೂಡ ಭರತನನ್ನು ಅನುಸರಿಸಿದ. ಭರತನ ನಡವಳಿಕೆಯಂತೆ, ನಡೆದುಕೊಂಡ. ಕೊನೆಯಲ್ಲಿ ರಾಮಶ್ವಮೇಧವನ್ನು ನಡೆಸುವ ಕಾಲಕ್ಕೆ ಕುದುರೆಯನ್ನು ಹಿಂಬಾಲಿಸಿದ. ಲವಣಾಸುರನಂತಹ ರಾಕ್ಷಸನನ್ನು ಕೊಂದು ಹಾಕಿದ. ಹೀಗೆ ಎರಡು ಮುಖದಿಂದ ಸುಮಿತ್ರೆಯ ತಾಯ್ತನ ರಾಮಾಯಣದಲ್ಲಿ ಗೋಚರಿಸುತ್ತದೆ. ಹಾಗಾಗಿ ಈಕೆಯ ಹೆಸರು ಕೂಡ ಸಾರ್ಥಕದಂತಿದೆ. ಸು-ಮಿತ್ರ ಎಂದರೆ ಒಳ್ಳೆಯ ಸ್ನೇಹಿತೆಯಾಗಿ, ತಾಯಿಯಾಗಿ, ದಶರಥನ ಪತ್ನಿಯಾಗಿ ಮಾತ್ರವಲ್ಲದೆ, ಎಲ್ಲರೊಂದಿಗೂ ಸ್ನೇಹಭಾವದಿಂದ ಇದ್ದಿರಬೇಕು.

ಹಾಗಾಗಿ ಸುಮಿತ್ರೆಯ ಮಕ್ಕಳಾದ ಲಕ್ಷ್ಮಣ ಹಾಗೂ ಶತ್ರುಘ್ನ, ರಾಮಾಯಣದ ಪೋಷಕ ಪಾತ್ರಗಳಾಗಿದ್ದವರು. ಪೋಷಕವೆಂದರೆ ಪ್ರತ್ಯೇಕವಾಗಿ ನಿಂತಿದ್ದರು ಎಂದರ್ಥವಲ್ಲ. ರಾಮಾಯಣವನ್ನೇ ಪೋಷಿಸತಕ್ಕ ಪಾತ್ರಗಳಾಗಿ ಕಾಣುತ್ತಾರೆ. ಇಂತಹ ಮಕ್ಕಳನ್ನು ಹಡೆದ ಸುಮಿತ್ರೆ ನಿಜಕ್ಕೂ ಒಳ್ಳೆಯ ತಾಯಿ.  

-ರಾಧಾಕೃಷ್ಣ ಕಲ್ಚಾರ್ ವಿಟ್ಲ

0 Comments

Submit a Comment

Your email address will not be published.

Related Articles

Related

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ರಾಮನ ವ್ಯಕ್ತಿತ್ವ ವಿಕಾಸದಲ್ಲಿ ಕೈಕೇಯಿಯ ಪಾತ್ರ

ಯಾವ ಮಗನ ಅಭ್ಯುದಯಕ್ಕಾಗಿ ಕೈಕೇಯಿ ವರವನ್ನು ವಿನಿಯೋಗಿಸಿದ್ದಳೋ, ಆ ಅಭ್ಯುದಯದ ಸಂತೋಷ ಭರತನಿಗೂ ಆಗಲಿಲ್ಲ ಹಾಗೂ ಇದರ ಆನಂದವನ್ನು ತಾಯಿಯೂ ಅನುಭವಿಸಲಿಲ್ಲ. ಇಲ್ಲಿ ವರಗಳೇ ವಿಚಿತ್ರವಾಯಿತು. ಪ್ರಾಣ ಉಳಿಸಬೇಕಾಗಿದ್ದ ವರವನ್ನು ವಿನಿಯೋಗಿಸಿ, ಪ್ರಾಣವನ್ನು ತೆಗೆಯಬೇಕಾಯಿತು. ಸಂತೋಷ ಕೊಡಬೇಕಾಗಿದ್ದಕ್ಕಾಗಿ ವಿನಿಯೋಗಿಸಿದ್ದು, ದುಃಖಕ್ಕೆ ಕಾರಣವಾಯಿತು.

read more
ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಅಂಧ ಧೃತರಾಷ್ಟ್ರನ ಮಂದ ಬುದ್ಧಿ

ಧೃತರಾಷ್ಟ್ರ ಕುರುಡನಾದರೂ ಬುದ್ಧಿ ಹೀನನಲ್ಲ. ಮಾತ್ರವಲ್ಲದೇ, ಧೃತರಾಷ್ಟ್ರವೆಂದರೆ, ರಾಷ್ಟ್ರವನ್ನು ಎತ್ತಿಹಿಡಿಯುವವನು ಎಂಬರ್ಥ ಬರುತ್ತದೆ. ದುರದೃಷ್ಟವಶಾತ್, ಈತನ ಮಕ್ಕಳು ಕೂಡ ರಾಷ್ಟ್ರವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಲಿಲ್ಲ. ಸ್ವತಃ ಧೃತರಾಷ್ಟ್ರನಿಗೂ ಆ ಕೆಲಸ ಮಾಡಲಾಗಲಿಲ್ಲ. ಆದರೆ ಈತನ ಬುದ್ಧಿವಂತಿಕೆ ಬಳಕೆಗೆ ಬಂದದ್ದು, ತನ್ನ ಮಕ್ಕಳ ಅಭ್ಯುದಯಕ್ಕೆ ಹಾಗೂ ಅವರ ಪ್ರಯೋಜನಕ್ಕೆ ಮಾತ್ರ.

read more
ರಾಮನಂತೆ ಅರಣ್ಯವಾಸಿಯಾದ ಭರತ 

ರಾಮನಂತೆ ಅರಣ್ಯವಾಸಿಯಾದ ಭರತ 

ಭರತನು ಸಿಂಹಾಸನವೇರಿ ರಾಜ್ಯವನ್ನು ಆಳಬಹುದಿತ್ತು. ಆದರೆ ಈತನ ಮನಸ್ಸು ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ರಾಮನ ಪ್ರೀತಿ, ಅಭಿಮಾನಗಳು ಆತನಿಗೆ ಶಕ್ತಿಯಾಗಿದ್ದವು. ರಾಮನೇ ರಾಜನಾಗಬೇಕೆಂದು ಬಯಸಿ, ಅಣ್ಣನನ್ನು ಹುಡುಕುತ್ತಾ ಚಿತ್ರಕೂಟದಲ್ಲಿ ಭೇಟಿಯಾಗುತ್ತಾನೆ. ಇದೊಂದು ಅಣ್ಣ-ತಮ್ಮಂದಿರ ಮಿಲನದ ಭೇಟಿ. ಭರತ, ದಶರಥನ ಮರಣವಾರ್ತೆಯನ್ನು ಹೇಳಿ, ದುಃಖಿಸಿ ಕಣ್ಣೀರಿಡುತ್ತಿರುವಾಗ, ರಾಮ ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ರಾಮ ಮಾಡಬೇಕಾದ ಕಾರ್ಯಗಳನ್ನು ತಾನು ನೇರವೇರಿಸಿದ ಸಂಗತಿಗಳನ್ನು ಹೇಳುತ್ತಾನೆ.

read more