ಗುಡ್ಡಗಾಡು ಜನರ ‘ರಂಗ್ ರೇಡಿಯೋ’

ಭಾರತದಲ್ಲಿ ಡಿಜಿಟಲ್ ವ್ಯವಸ್ಥೆ ವೇಗ ಪಡೆದುಕೊಳ್ಳುತ್ತಿದ್ದರೂ, ದೇಶದ ಸಾಕಷ್ಟು ಹಳ್ಳಿಗಳಲ್ಲಿ ಇಂದಿಗೂ ಮೊಬೈಲ್ ಹಾಗೂ ಇಂಟರ್ನೆಟ್ ಸಂಪರ್ಕಗಳಿಲ್ಲ. ಬಹುತೇಕ ಹಳ್ಳಿಗಳಿಗೆ, ತನ್ನ ತಾಲೂಕಿನಲ್ಲಿ ಏನಾಗುತ್ತಿದೆ ಎಂಬ ಮಾಹಿತಿಗಳು ಸಹ ತಕ್ಷಣಕ್ಕೆ ದೊರಕುತ್ತಿಲ್ಲ. ಇಲ್ಲಿರುವ ಜನರು ತಮ್ಮ ಆತ್ಮೀಯರಿಗೆ ವಿಷಯಗಳನ್ನು ತಲುಪಿಸಬೇಕಾದರೆ ದೂರದ ತಾಲೂಕಿನ ಒಂದು ಕೇಂದ್ರಕ್ಕೆ ತೆರಳಿ, ಮಾಹಿತಿಯನ್ನು ತಿಳಿಸುವ ಪರಿಸ್ಥಿತಿ ಇವತ್ತಿಗೂ ಇದೆ.

ಇಂತಹ ಹಳ್ಳಿಗಳಿಗೆ ಸಂಪರ್ಕ ಸಂವಹನ ಸೌಲಭ್ಯವನ್ನು ಒದಗಿಸಬೇಕೆಂದು ತುಮಕೂರು ಜಿಲ್ಲೆಯ ಗಿರೀಶ್ ಕುಮಾರ್ ಅವರು ಸ್ಥಳೀಯ ವೈಫೈ ನೆಟ್ ವರ್ಕ್ ಮೂಲಕ ರೇಡಿಯೋ ಸ್ಟೇಷನ್ ಅನ್ನು ನಿರ್ಮಾಣ ಮಾಡುತ್ತಿದ್ದಾರೆ. ದಕ್ಷಿಣ ಭಾರತದಿಂದ ಹಿಡಿದು, ಉತ್ತರ ಭಾರತದವರೆಗೂ ಇಂತಹ ಸೇವೆಯನ್ನು ಕಲ್ಪಿಸಲು ಹೆಜ್ಜೆಯನ್ನಿಟ್ಟಿದ್ದಾರೆ.

ಇವರು ದಶಕದ ಹಿಂದೆ ಕನ್ನಡದ ಸುದ್ದಿ ವಾಹಿಯಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದರು. ಮುಖ್ಯವಾಹಿನಿಯ ಮಾಧ್ಯಮಗಳೆಲ್ಲವೂ ಅತಿ ಹೆಚ್ಚು ನಗರದ ವಿಷಯಗಳನ್ನೇ ಹೇಳುತ್ತಾರೆ ವಿನಃ, ಕುಗ್ರಾಮದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ತಿಳಿಸುತ್ತಿಲ್ಲವೆಂದು, ಮಾಧ್ಯಮದಿಂದ ಹೊರಬಂದು ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದರು.

ಗಿರೀಶ್ ಕುಮಾರ್

ತುಮಕೂರಿನ ದುರ್ಗದಹಳ್ಳಿ, ಮಧುಗಿರಿ ಸೇರಿದಂತೆ ಸುತ್ತಮುತ್ತಲಿನ ಹಲವು ಹಳ್ಳಿಗಳಲ್ಲಿ, ಸರ್ಕಾರಿ ಶಾಲೆಯ ಮಕ್ಕಳಿಗೆ ಇವರು, ರೇಡಿಯೋವನ್ನು ನಿರ್ಮಾಣ ಮಾಡಿ, ಹೇಗೆ ಬಳಸಬೇಕೆಂದು ಹೇಳಿಕೊಟ್ಟಿದ್ದಾರೆ. ಅಲ್ಲಿನ ಮಕ್ಕಳು ತನ್ನೂರಿನ ವನಸೌಂದರ್ಯದ ಬಗ್ಗೆ, ಆಹಾರ ಪದ್ದತಿಯ ಬಗ್ಗೆ, ಹಬ್ಬ-ಜಾತ್ರೆಗಳಲ್ಲಿ ನಡೆಯುವ ವೈವಿಧ್ಯತೆ, ನಾಟಕ, ಹಾಡು ಹಾಗೂ ಶಾಲೆಯಲ್ಲಿ ಕಲಿತ ಪಾಠವು ಸೇರಿದಂತೆ ಹಲವು ಸಂಗತಿಗಳನ್ನು ಮಕ್ಕಳು ನಮ್ಮೂರ ರೇಡಿಯೋದಲ್ಲಿ ಮಾತನಾಡುತ್ತಿದ್ದಾರೆ. ಈ ಪ್ರಯತ್ನ ಯಶಸ್ವಿಯೂ ಆಗಿದೆ.

ಇಂತಹದ್ದೇ ರೀತಿ ಸಂಪರ್ಕವನ್ನು ಕಲ್ಪಿಸಲು ದೇಶದ ತುತ್ತತುದಿಯ ಹಿಮಾಲಯಕ್ಕೆ ಇವರು ತೆರಳಿದ್ದಾರೆ. ಭಾರತ ಮತ್ತು ನೇಪಾಳದ ಗಡಿಯಲ್ಲಿರುವ ದಾರ್ಜುಲಾ ಬ್ಲಾಕ್ ನ ನಯಾಬಸ್ತಿ (ಉತ್ತರಖಂಡ ಜಿಲ್ಲೆಗೆ ಸೇರುವ ಪ್ರದೇಶ) ಎಂಬ ಗ್ರಾಮವನ್ನು ಕೇಂದ್ರವಾಗಿರಿಸಿಕೊಂಡು ತಮ್ಮ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಹಳ್ಳಿಯಲ್ಲಿ ಬಹುತೇಕ ಸಮಯ ಭೂ ಕಂಪನ ಹಾಗೂ ಅತೀವೃಷ್ಠಿಗಳಂತಹ ಪ್ರಕೃತಿ ವಿಕೋಪಗಳು ಎದುರಾಗುತ್ತಲೇ ಇರುತ್ತದೆ. ಈ ಗುಡ್ಡಗಾಡಿನ ಪ್ರದೇಶದಲ್ಲಿ 20ರಿಂದ 30 ಮನೆಗಳಷ್ಟೇ ಇರುವುದು. ಯಾವುದೇ ವಿಷಯಗಳನ್ನು ತಲುಪಿಸುವುದು ಇಲ್ಲಿ ಕಷ್ಟಸಾಧ್ಯ.

ನಯಾಬಸ್ತಿಯ ಜೊತೆಗೆ, 3-5 ಕಿ.ಮೀ ಅಂತರದಲ್ಲಿರುವ ತಲ್ಲನೆಯ ಬಸ್ತಿ, ಮಲ್ಲನೆಯ ಬಸ್ತಿ ಹಾಗೂ ಚಾರ್ಚುಮ್  ಗ್ರಾಮಗಳನ್ನು ರೇಡಿಯೋ ತರಬೇತಿಗಾಗಿ ಸಂಪರ್ಕ ಜೋಡಣೆ ಮಾಡಲಾಗಿದೆ. ಇಲ್ಲಿ ವಾಸ ಮಾಡುತ್ತಿರುವವರು ರಾಜಿ ಬುಡಕಟ್ಟು ಜನಾಂಗದವರು. ಇವರ ಪ್ರಾದೇಶಿಕ ಭಾಷೆ ರಂಗ್. ಈ ಭಾಷೆಗೆ ಲಿಪಿ ಇಲ್ಲ. ಹೀಗಾಗಿ ಇವರ ಭಾಷೆಯನ್ನು ಹೆಚ್ಚು ಹೆಚ್ಚು ಮಾತನಾಡಿಸಿ, ಪ್ರಾದೇಶಿಕ ಭಾಷೆಯನ್ನು ಉಳಿಸುವುದು ಇವರ ಯೋಜನೆ ಮುಖ್ಯ ಉದ್ದೇಶವಾಗಿದ್ದು, ನೂತನ ರೇಡಿಯೋ ಸ್ವೇಷನ್ ಗೆ ‘ರಂಗ್ ರೇಡಿಯೋ’ ಎಂದು ಹೆಸರಿಡಲಾಗಿದೆ.  

ಚಿಕ್ಕ ಚಿಕ್ಕ ನೆಟ್ ವರ್ಕ್ ಗಳಿಂದ ರೇಡಿಯೋವನ್ನು ಹೇಗೆ ನಿರ್ಮಾಣ ಮಾಡಿಕೊಳ್ಳಬಹುದೆಂದು, ಗಿರೀಶ್ ಅವರು ಗ್ರಾಮಸ್ಥರಿಗೆ ಪ್ರಾಯೋಗಿಕ ಹಂತದಲ್ಲಿ ತರಬೇತಿ ನೀಡುತ್ತಿದ್ದಾರೆ. ಇಲ್ಲಿನ ಜನರು ಮಂಜು ಕವಿಯುವ ಸಮಯದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಗುಡ್ಡದ ಕೆಳಗಿನ ಪ್ರದೇಶಕ್ಕೆ ವಲಸೆ ಹೋಗುತ್ತಾರೆ. ಈ ಕಾರಣದಿಂದಾಗಿ ಇವರಿಗೆ ಒಂದು ರೇಡಿಯೋ ಸ್ಟೇಷನ್ ಅನ್ನು ರೂಪಿಸಿದರೆ, ಸದಾ ಇವರ ನಡುವಿನ ವಿಚಾರಗಳನ್ನು ಹಂಚಿಕೊಳ್ಳಬಹುದು. ದಿನನಿತ್ಯದ ಆಗುಹೋಗುಗಳು, ಸಂತಸದ ವಿಚಾರ, ಆಹಾರ ಮತ್ತು ನೀರಿನ ಲಭ್ಯತೆ ಕುರಿತು ಮಾಹಿತಿ ನೀಡಲು ಸಾಧ್ಯವಾಗುತ್ತದೆ.

ಇವತ್ತಿನ ಕೋವಿಡ್ ಸಂಕಷ್ಟದಲ್ಲಿ ಆರೋಗ್ಯ ಮಾಹಿತಿಗಳನ್ನು ಕಲೆ ಹಾಕುವುದು ಈ ಗುಡ್ಡಗಾಡು ಪ್ರದೇಶದಲ್ಲಿ ಸುಲಭದ ಮಾತಲ್ಲ. ಹೀಗಾಗಿ ಸ್ಥಳೀಯ ಆಶಾ ಕಾರ್ಯಕರ್ತರಿಗೂ ತರಬೇತಿ ನೀಡಿದರೆ, ಸುಲಭವಾಗಿ ಧ್ವನಿ ಮುಖಾಂತರ ಮಾಹಿತಿಯನ್ನು ಪಡೆದು ಸರ್ಕಾರಕ್ಕೆ ತಲುಪಿಸಬೇಕೆಂಬ ಪ್ರಯತ್ನವನ್ನೂ ಗಿರೀಶ್ ಮಾಡುತ್ತಿದ್ದಾರೆ. ಪ್ರಮುಖವಾಗಿ ತಂತ್ರಜ್ಞಾನದ ಕಲಿಕೆಯಲ್ಲಿ ಹೆಣ್ಣು ಮಕ್ಕಳು ಹೆಚ್ಚು ಭಾಗವಹಿಸಬೇಕು ಎಂಬುದು ಈ ಯೋಜನೆಯ ಮತ್ತೊಂದು ಉದ್ದೇಶ.  ಈ  ನಯಾಬಸ್ತಿ ಯೋಜನೆಯಲ್ಲಿ  ಅತಿಹೆಚ್ಚು ಹೆಣ್ಣುಮಕ್ಕಳು ಭಾಗವಹಿಸುತ್ತಿರುವುದರಿಂದ, ರೇಡಿಯೋ ನಿರ್ಮಾಣ ಕಲಿಕೆಯ ಜೊತೆಗೆ, ಗಿರೀಶ್ ಅವರು ಹಣ ಸಂಪಾದನೆಯ ದಾರಿಯನ್ನೂ ಸಹ ತೋರಿಸಿಕೊಟ್ಟಿರುವುದು ವೈಶಿಷ್ಟ್ಯ.

ಉತ್ತರಖಂಡದಲ್ಲಿ ಆಹಾರ ಪದ್ದತಿಯು ವಿಭಿನ್ನ. ಹೀಗಾಗಿ ಗಿರೀಶ್ ಅವರು ದಕ್ಷಿಣ ಭಾರತದ ಹೆಸರುವಾಸಿ ಇಡ್ಲಿ-ವಡೆ ಮಾಡುವುದನ್ನೂ ಹೇಳಿಕೊಟ್ಟು, ಮೊಬೈಲ್ ಕ್ಯಾಂಟಿನ್ ನಡೆಸುವುದಕ್ಕೆ ಪ್ರೇರೇಪಿಸಿದ್ದಾರೆ. ಬಹಳ ಕುತೂಹಲದಿಂದ ಇಲ್ಲಿನ ಜನರು ಇಡ್ಲಿ ಮಾಡುವುದನ್ನು ಕಲಿತುಕೊಂಡು ಕ್ಯಾಂಟಿನ್ ನಡೆಸಿ, ಸಣ್ಣ ಹಣವನ್ನು ಗಳಿಸುತ್ತಿದ್ದಾರೆ. ಹೊಸದಾಗಿ ಬರುವ ಪ್ರವಾಸಿಗರನ್ನು ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸುವುದನ್ನು ನೋಡುವುದೇ ಒಂದು ಸೋಜಿಗ. ಪ್ರವಾಸಿಗರನ್ನೂ ಸಹ ರಂಗ್ ರೇಡಿಯೋದಲ್ಲಿ ಮಾತನಾಡಿಸಿ, ಹೊಸ ಹೊಸ ಮಾಹಿತಿಗಳನ್ನು ಊರಿನ ಜನರಿಗೆ ತಿಳಿಸುತ್ತಿದ್ದಾರೆ.

ಪ್ರತಿದಿನ ಇಲ್ಲಿನ ಗ್ರಾಮಗಳಲ್ಲಿ ಏನಾದರೂ ಒಂದು ಪ್ರಕೃತಿ ವಿಕೋಪಗಳು ಎದುರಾಗುತ್ತಿರುತ್ತವೆ. ಇದರಿಂದಾಗಿ ಬಂದ ಪ್ರವಾಸಿಗರಿಗೆ ಅಡಚಣೆ ಉಂಟಾಗುವುದು ಸಾಮಾನ್ಯ. ಆದ್ದರಿಂದ ಮಳೆ ಹೆಚ್ಚಾದರೆ, ಸೇತುವೆಗಳು ಹಾಳಾದರೆ, ತಕ್ಷಣ ವಿಷಯಗಳನ್ನು ತಲುಪಿಸುವ ಪ್ರಯತ್ನ ರೇಡಿಯೋ ಮೂಲಕ ನಡೆಯುತ್ತಿದೆ.

ಇಂತಹ ಪ್ರಯತ್ನದಿಂದಾಗಿ ಸಿಕ್ಕ ಉತ್ತಮ ಫಲಿತಾಂಶವೆಂದರೆ ಕೋವಿಡ್ ಲಸಿಕೆ ಪಡೆಯುವುದು. ಕಳೆದ ಮೂರು ತಿಂಗಳಿನಿಂದ ಈ ಸ್ಥಳೀಯ ರೇಡಿಯೋ ಸ್ಟೇಷನ್ ಮೂಲಕ ಸುತ್ತಮುತ್ತಲಿನ ಪ್ರದೇಶಕ್ಕೆ ಕೋವಿಡ್ ಲಸಿಕೆಯ ಲಭ್ಯತೆ ಕುರಿತು ಹೇಳಿಲಾಗಿದ್ದು, ಜನರು ಇದರ ಉಪಯೋಗ ಪಡೆದುಕೊಳ್ಳುತ್ತಿರುವುದು ವಿಸ್ಮಯ.      

ಕರ್ನಾಟಕದ ಹಿಂದುಳಿದ ಗ್ರಾಮಗಳಲ್ಲಿ ಇಂತಹ ಸೃಜನಾತ್ಮಕ ಸೌಲಭ್ಯವನ್ನು ಕಲ್ಪಿಸುತ್ತಲೇ ಗಿರೀಶ್ ಕುಮಾರ್ ಅವರು ಮುನ್ನಡೆಯುತ್ತಿದ್ದಾರೆ. ಇವರ ಪ್ರಯತ್ನವನ್ನು ಕಂಡು World Bank ಮತ್ತು ಥಾಯ್ಲೆಂಡ್ ನ ADPC (Asian Disaster Preparedness Center) ನವರು ಇವರ ಪ್ರಯತ್ನಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ನಂತರ TechEmerge India Challenge ನಲ್ಲಿ ಇವರ ಯೋಜನೆ ಆಯ್ಕೆಯಾಯಿತು. ಹೊಸಹೊಸದಾಗಿ ಆವಿಷ್ಕಾರ ಮಾಡುತ್ತಿರುವವರನ್ನು ಈ ಏಜೆನ್ಸಿ ಗುರುತಿಸಿ, ಪ್ರಾಯೋಗಿಕ ಹಂತದ ಕೆಲಸಕ್ಕೆ ಬೆಂಬಲ ನೀಡುತ್ತದೆ. ಅಂತೆಯೇ ನಯಾಬಸ್ತಿಯಲ್ಲಿ ಪ್ರಾಯೋಗಿಕವಾಗಿ ಸ್ಥಳೀಯ ರೇಡಿಯೋ ಸ್ಟೇಷನ್ ಅನ್ನು ನಿರ್ಮಾಣ ಮಾಡಲು ಸಹಕಾರ ಕೊಟ್ಟಿದೆ.

ಗಿರೀಶ್ ಕುಮಾರ್ ಅವರು ತನ್ನ ಪ್ರಯತ್ನದ ಕುರಿತು ಹೇಳಿದ್ದಿಷ್ಟು. TechEmerge ಏಜೆನ್ಸಿಯ ಬಗ್ಗೆ ನನಗೆ ಯಾವ ವಿಚಾರಗಳು ಗೊತ್ತಿರಲಿಲ್ಲ. ಕುಗ್ರಾಮಗಳಲ್ಲಿ ನನ್ನ ಪ್ರಯತ್ನವನ್ನು ಮುಂದುವರೆಸುತ್ತಿದೆ. ನಂತರ ದಿನಗಳಲ್ಲಿ TechEmerge ಬಗ್ಗೆ ತಿಳಿದುಕೊಂಡು, ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದೆ. ಅರ್ಜಿಯಲ್ಲಿ ನಾನು, ಕೇವಲ ಯಂತ್ರೋಪಕರಣಗಳನ್ನು ಅಳವಡಿಸಿ, ವಾಪಾಸ್ಸಾಗುವುದಿಲ್ಲ. ಅಲ್ಲಿನ ಜನರಿಗೆ ಹೊಸದಾಗಿ ವೈಫೈ ಮೂಲಕ ರೇಡಿಯೋ ಸ್ಟೇಷನ್ ಅನ್ನು ನಿರ್ಮಾಣ ಮಾಡುವುದನ್ನೂ ಸಹ ಕಲಿಸುತ್ತೇನೆ, ಅಲ್ಲದೇ, ಅತಿ ಕಡಿಮೆ ಖರ್ಚಿನಲ್ಲಿ ಇವೆಲ್ಲವೂ ಸಾಧ್ಯ ಎಂದು ಬರೆದಿದ್ದೆ. ಹೀಗಾಗಿ ಕೆಲವು ದಿನಗಳ ನಂತರ, ನೀವು ನೂತನ ಯೋಜನೆಯೊಂದಕ್ಕೆ ಆಯ್ಕೆಯಾಗಿದ್ದೀರಾ ಎಂದು ಇ-ಮೇಲ್ ಬಂದಿತು. ನನ್ನ ಓಮಿನಿ ಕಾರಿನಲ್ಲಿ ನಮ್ಮೂರಿನ 7 ಜನರು ಹೊರಟು ಹಿಮಾಲಯಕ್ಕೆ ತೆರಳಿದೆವು.

ಮೂರು ತಿಂಗಳಿನಿಂದ ಮಾಡುತ್ತಿರುವ ನಿರ್ಮಾಣದ ಕೆಲಸ ಈಗ ಪೂರ್ಣಗೊಳ್ಳುವ ಹಂತದಲ್ಲಿದೆ. ಕೆಲಸ ಸಂಪೂರ್ಣ ಮುಗಿದ ನಂತರ ಈ ಯೋಜನೆಯನ್ನು ಏಜೆನ್ಸಿಗೆ ಒಪ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ಸರ್ಕಾರ ಈ ಯೋಜನೆಯನ್ನು ಯಾವ ರೀತಿ ಮುನ್ನಡೆಸಿಕೊಂಡು ಹೋಗುತ್ತದೆ ಎಂಬುದನ್ನು ಗಮನಿಸುವುದು ನನ್ನ ಕರ್ತವ್ಯ. ನಾನು ಸುಮ್ಮನೆ ಡೆಮೋ ತೋರಿಸಿ ಬರುವವನಲ್ಲ. ದಿನಕಳೆದಂತೆ ಈ ಯೋಜನೆ, ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎನ್ನುವುದನ್ನು ಸಹ ನಾನು ನೋಡಲೇಬೇಕು.

ಪ್ರಧಾನ ಮಂತ್ರಿ ಅವರ ಯೋಜನೆಯಾದ ‘ಪಿಎಂ ವಾಣಿ’ ಎಂಬ ಯೋಜನೆ 2017ರ ಮುಂಚೆಯಿಂದಲೂ ಜಾರಿಯಲ್ಲಿದೆ. ಆದರೆ ಈ ಯೋಜನೆ ಯಶಸ್ವಿಯಾಗಲಿಲ್ಲ. ಏಕೆಂದರೆ ನೆಟ್ ವರ್ಕ್ ಸಮಸ್ಯೆಗಳು ಎದುರಾದಾಗ ಇಂಜಿನಿಯರ್ ಗಳು ತಕ್ಷಣಕ್ಕೆ ಇಂತಹ ಪ್ರದೇಶಗಳಿಗೆ ಬಂದು ಸರಿಪಡಿಸುವುದು ಸುಲಭದ ಮಾತಲ್ಲ. ಹೀಗಾಗಿ ಸ್ಥಳೀಯರೇ ತರಬೇತಿ ಪಡೆದುಕೊಂಡರೆ ರೇಡಿಯೋ ನೆಟ್ ವರ್ಕ್ ಗಳನ್ನು ಸರಿ ಪಡಿಸಬಹುದು. ಈ ಕಲೆಯನ್ನು ಕಲಿತ ಗ್ರಾಮಸ್ಥರು ಮುಂದಿನ ಹಳ್ಳಿಗಳಿಗೂ ತೆರಳಿ, ಅವರೇ ನಿರ್ಮಾಣ ಮಾಡಿ ಎಂದು ಸಹ ಹೇಳುತ್ತಿದ್ದೇನೆ. ನಿರ್ಮಾಣಕ್ಕಾಗಿ ಸಣ್ಣ ಸಣ್ಣ ತಂಡಗಳನ್ನು ಊರಿನವರೇ ರೂಪಿಸಿಕೊಂಡರೆ ಈ ಪ್ರಯತ್ನ ಯಶಸ್ವಿಯಾಗುತ್ತದೆ. ಇವರ ಹಿಂದೆ ನಿಂತು ನಾನು ಬೆಂಬಲ ಕೊಟ್ಟೆ ಕೊಡುತ್ತೇನೆ. ಅಲ್ಲದೇ, ಗ್ರಾಮ ಹಾಗೂ ತಾಲೂಕು ಪಂಚಾಯಿತಿಗಳು ಸಂಪೂರ್ಣ  ಸಹಕಾರ ಮತ್ತು ಬೆಂಬಲವನ್ನು ನೀಡಿದರೆ. ಈ ಬುಡಕಟ್ಟು ಜನಾಂಗದವರು ಸಹ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ” ಎನ್ನುತ್ತಾರೆ ಗಿರೀಶ್ ಕುಮಾರ್

ತುಮಕೂರಿನ ಗಿರೀಶ್ ಕುಮಾರ್ ಅವರನ್ನು ವಿಶ್ವಮಟ್ಟದ ಸಂಸ್ಥೆಗಳು ಗುರುತಿಸಿ ಇಂತಹ ಕೆಲಸಗಳನ್ನು ನೀಡುತ್ತಿರುವುದು ಹೆಮ್ಮೆಯ ಸಂಗತಿ. ಇವರ ಪರಿಶ್ರಮ ಮೆಚ್ಚುವಂತಹದ್ದು. ಈಗಿನ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಯುವಕರಿಗೆ ಇವರ ಹಾದಿ ಎಂದಿಗೂ ಪ್ರೇರಣೆ.  

-ಶಿವಕುಮಾರ ಎಂ ಹೊಸಹಳ್ಳಿ 

4 Comments

  1. Sukruthi

    Feels proud to be a kannadiga, thank you for sharing such a detailed a report…

    Reply
  2. Rashmi

    Good job, improvement of our village people lifestyles. Congratulations.

    Reply
  3. Manjula PV

    Mr.Girish, in this Era of digital world, there are many places in India as well as other countries where people are living with out having of any wordly knowledge of what’s going on around them because of network issue. You have faced many challenges and overcome many obstacles to complete this project though the way was rocky and filled with difficulties you have done it very well. Congratulations for your fabulous Radio Project, I wish the Government of India to recognize your Radio 📻 Project and come forward to help you for your future ongoing project and you deserve every bit of it Aim for the stars and I am sure it will be yours. This is worthy, noble and amazing project hope to help and develop the poor country or people. I pray for you and wishing you the best of luck.

    Reply
  4. Rajesh k

    Very good information, And good job Mr. Girish kumar

    Reply

Submit a Comment

Your email address will not be published.

Related Articles

Related

ಮಾದಪ್ಪನ ಬೆಟ್ಟದಲ್ಲಿ ಕುತೂಹಲಕಾರಿ ಪುಟ್ಟಿ

ಮಾದಪ್ಪನ ಬೆಟ್ಟದಲ್ಲಿ ಕುತೂಹಲಕಾರಿ ಪುಟ್ಟಿ

ಮಾದಪ್ಪನ ಬೆಟ್ಟದಲ್ಲಿ ವಾಸವಿರುವ ತೇಜಶ್ರೀ ಎನ್ನುವ ಪುಟ್ಟ ಹುಡುಗಿ, ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬಹುಶಃ ಈ ಹುಡುಗಿ ದಿನಕ್ಕೆ ಸಾವಿರಕ್ಕೂ ಹೆಚ್ಚು ಹೆಜ್ಜೆಗಳನ್ನು ಇಡಬಹುದು. ಬಸ್ ನಿಂದ ಇಳಿದ ಜನರನ್ನು ಮಾತನಾಡಿಸಿ, ಪೂಜೆ ಸಾಮಾಗ್ರಿಗೆ ಜನರು ಒಪ್ಪಿದರೆ, ತಮ್ಮ ಅಂಗಡಿಗೆ ಕರೆದೊಯ್ಯುತ್ತಾಳೆ. ಇದು ವ್ಯಾಪಾರ ಮಾಡುವವರ ಸಹಜ ಲಕ್ಷಣವಾಗಿದ್ದರೂ, ಈಕೆಯ ಶ್ರಮ ಮತ್ತು ಶ್ರದ್ಧೆಯನ್ನು ಮೆಚ್ಚಲೇಬೇಕು.

read more
ಚಿತ್ರಮಂದಿರದಲ್ಲಿ ಮೂರ್ಛೆ ಹೋದ ಮಹಿಳೆಯರು

ಚಿತ್ರಮಂದಿರದಲ್ಲಿ ಮೂರ್ಛೆ ಹೋದ ಮಹಿಳೆಯರು

ಮುಂಬೈನ ಅಜಂತಾ ಸ್ಟುಡಿಯೋದಲ್ಲಿ ತಯಾರಾದ ಈ 12 ರೀಲುಗಳ (142 ನಿಮಿಷ) ಚಿತ್ರ, ಬೆಂಗಳೂರಿನ ಕೆಂಪೇಗೌಡ ರಸ್ತೆಯ ಸೆಲೆಕ್ಟ್ ಸಿನಿಮಾ ಹಾಲ್ ನಲ್ಲಿ ಪ್ರದರ್ಶನ ಕಂಡಿತ್ತು. ಗಮನಾರ್ಹ ಸಂಗತಿಯೆಂದರೆ ಭಕ್ತ ಧ್ರುವ ಚಿತ್ರವನ್ನು ವೀಕ್ಷಿಸಿದ ಕೆಲ ಪ್ರೇಕ್ಷಕರು ಸಿನಿಮಾ ಮಂದಿರದಿಂದಲೇ ಓಡಿಹೋಗಿದ್ದರು. ಕೆಲವು ಮಹಿಳೆಯರಂತೂ ಮೂರ್ಛೆಹೋಗಿದ್ದರು.

read more