ಮಾದಪ್ಪನ ಬೆಟ್ಟದಲ್ಲಿ ಕುತೂಹಲಕಾರಿ ಪುಟ್ಟಿ

ಮಾರ್ಚ್ 06 ರಂದು ನಾನು ಮಾದಪ್ಪನ ಬೆಟ್ಟಕ್ಕೆ ತೆರಳಿದ್ದೆ. ಅಲ್ಲಿ ನನಗೆ ಕುತೂಹಲಕಾರಿಯಾಗಿ ಕಂಡದ್ದು ತೇಜಶ್ರೀ ಎನ್ನುವ ಪುಟ್ಟ ಹುಡುಗಿ. ನಾನು ಬಸ್ ಇಳಿದು ನಾಲ್ಕು ಹೆಜ್ಜೆ ಇಡುತ್ತಿದ್ದಂತೆ, ಈ ಹುಡುಗಿ “ಅಣ್ಣ ಪೂಜೆಗೆ ಹೂ, ಹಣ್ಣು, ಕಾಯಿಯನ್ನು ನಮ್ಮ ಅಂಗಡಿಯಲ್ಲಿ ತಗೋಳಿ. ಚಪ್ಪಲಿ ಅಲ್ಲೇ ಬಿಡಿ, ಕೈಕಾಲು ತೊಳೆದುಕೊಳ್ಳಿ, ನಿಮ್ಮ ಬ್ಯಾಗ್ ಅನ್ನು ನಮ್ಮ ಅಂಗಡಿಯಲ್ಲೇ ಇಡಬಹುದು” ಎಂದು ಹೇಳಿದಳು.

ಈ ಮೊದಲು ಹೂ, ಹಣ್ಣು ಕಾಯಿಯ ವಿಷಯವನ್ನು ನಾನು ಯೋಚಿಸಿಯೇ ಇರಲಿಲ್ಲ. ಹೆಜ್ಜೆ ಹಾಕುತ್ತಾ ಈ ಹುಡುಗಿ ತನ್ನ ಮುಗ್ದತೆಯಿಂದ ಮಾತನ್ನು ಮುಂದುವರಿಸಿದಳು. ” ಅಣ್ಣ ನಿಮ್ದು ಯಾವೂರು? ಎಷ್ಟು ಗಂಟೆಗೆ ಬಸ್ ಹತ್ತಿದ್ರಿ? ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಳು, ನಾನು “ಮೈಸೂರಿನಿಂದ ಬಂದೆ. ಮತ್ತೆ ಇಲ್ಲಿಂದ ಬೆಂಗಳೂರಿಗೆ ಹೋಗ್ತೀನಿ” ಎಂದು ಉತ್ತರಿಸಿದೆ.

ಮಾದಪ್ಪನ ಬೆಟ್ಟದಲ್ಲಿ ವಾಸವಿರುವ ಈ ಹುಡುಗಿ, ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬಹುಶಃ ಈ ಹುಡುಗಿ ದಿನಕ್ಕೆ ಸಾವಿರಕ್ಕೂ ಹೆಚ್ಚು ಹೆಜ್ಜೆಗಳನ್ನು ಇಡಬಹುದು. ಬಸ್ ನಿಂದ ಇಳಿದ ಜನರನ್ನು ಮಾತನಾಡಿಸಿ, ಪೂಜೆ ಸಾಮಾಗ್ರಿಗೆ ಜನರು ಒಪ್ಪಿದರೆ, ತಮ್ಮ ಅಂಗಡಿಗೆ ಕರೆದೊಯ್ಯುತ್ತಾಳೆ. ಇದು ವ್ಯಾಪಾರ ಮಾಡುವವರ ಸಹಜ ಲಕ್ಷಣವಾಗಿದ್ದರೂ, ಈಕೆಯ ಶ್ರಮ ಮತ್ತು ಶ್ರದ್ಧೆಯನ್ನು ಮೆಚ್ಚಲೇಬೇಕು. ಬಸ್ ನಿಲ್ದಾಣದಿಂದ ಇವರ ಅಂಗಡಿಗೆ ಸುಮಾರು 400 ಮೀಟರ್ ಅಂತರವಿದೆ.

ಪ್ರಮುಖವಾಗಿ ಏನೆಂದರೆ, ಕಾಲಿಗೆ ಚಪ್ಪಲಿ ಹಾಕದೆ, ಸುಡು ಬಿಸಿಲಿನಲ್ಲಿ ತೇಜಶ್ರೀ ಬರೀ ಕಾಲಿನಲ್ಲಿ ತನ್ನ ಸಾವಿರ ಹೆಜ್ಜೆಗಳನ್ನು ಇಡುತ್ತಾಳೆ. ಒಪ್ಪಿದ ಜನರು ರೂ. 20ರಿಂದ ರೂ.200ವರೆಗೂ ಸಾಮಾಗ್ರಿಗಳನ್ನು ಖರೀದಿಸಬಹುದು. ಅಥವಾ 400 ಮೀಟರ್ ನಡೆದುಕೊಂಡು ಬಂದ ಜನ, ಖರೀದಿ ಮಾಡದೇ ವಾಪಸ್ಸಾಗಬಹುದು. ಆದರೆ ಈಕೆ ನಂಬಿರುವುದು ತನ್ನ ಹೆಜ್ಜೆಯನ್ನು.

ಇಬ್ಬರೂ ಮಾತನ್ನು ಮುಂದುವರೆಸುತ್ತಿದ್ದಾಗ ನಾನು, ಶಿವರಾತ್ರಿ ಮುಗಿದು ಒಂದು ವಾರ ಕಳೆದರೂ, ಎಷ್ಟೊಂದು ಜನ ಎಂದೆ. ಅದಕ್ಕೆ ಈಕೆ, ಶಿವರಾತ್ರಿ ದಿನದಂದು ಜನರನ್ನು ಇಲ್ಲಿ ಉಳಿದುಕೊಳ್ಳುವುದಕ್ಕೆ ದೇವಸ್ಥಾನದವರು ಬಿಡಲಿಲ್ಲ. ಹೀಗಾಗಿ ಇವತ್ತು ಭಾನುವಾರ ಅಲ್ವಾ ಅಣ್ಣ. ಅದಕ್ಕೆ ಜನ ಜಾಸ್ತಿ. ನೀವು ಧರ್ಮದರ್ಶನಕ್ಕೆ ಮೂರ‌ನೇ ಗೇಟಿಗೆ ಹೋಗಿ. ಬೇಗ ಹೋಗಬೇಕಾದ್ರೆ ರೂ.250 ಕೊಟ್ಟು ಹೋಗಬಹುದು. ಧರ್ಮ ದರ್ಶನ ಯಾವಾಗಲೂ ಫ್ರೀ ಎಂದಳು. ಇಲ್ಲಿ ನಮ್ಮಿಬ್ಬರ ಮಾತು ಸಹಜವಾಗಿದ್ದರೂ, ತೇಜಶ್ರೀ ಸ್ಪಷ್ಟವಾದ ಮಾತು ನನಗೆ ಬಹಳ ಇಷ್ಟವಾಯಿತು. ಮತ್ತು ಪೂಜೆ ಸಾಮಾಗ್ರಿಗಳನ್ನು ಕೊಂಡುಕೊಳ್ಳಲೇ ಬೇಕೆಂದು ಏರು ಧ್ವನಿಯಿಂದ ಕೂಗಲಿಲ್ಲ ಹಾಗೂ ಹಿಂದೆ ಬೀಳಲಿಲ್ಲ. ನೇರವಾಗಿ, ಇದ್ದಿದ್ದನ್ನು ಇದ್ದ ಹಾಗೆ ಹೇಳುವುದು ಈಕೆಯ ನಡವಳಿಕೆ.

ಮಾತನಾಡುತ್ತಲೇ ಅಂಗಡಿಗೆ ತೆರಳಿದೆ. ಮಾದಪ್ಪನ ಬೆಟ್ಟಕ್ಕೆ ಬಂದಾಗ ಎಂದೂ ಹೂ, ಕಾಯಿ ಖರೀದಿಸಿದವನಲ್ಲ ನಾನು. ಈಕೆಯ ನೇರ ಮಾತು, ಸ್ಪಷ್ಟತೆ, ಹೆಜ್ಜೆ, ಕರ್ತವ್ಯ ನಿಷ್ಠೆಗೆ ಬೆಚ್ಚಿ- ಮೆಚ್ಚಿ ಖರೀದಿಸಿದೆ. ಇವರ ಅಂಗಡಿ ಬಹಳ ಚಿಕ್ಕದು. ದೊಡ್ಡ ಸಭಾಂಗಣದಲ್ಲಿ ಒಂದು ಪುಟ್ಟ ಟೇಬಲಿನ ಮೇಲೆ, ತೆಂಗಿನಕಾಯಿ, ಹೂ, ಕರ್ಪೂರ ಹಾಗೂ ಧೂಪ ಇಟ್ಟುಕೊಂಡಿದ್ದಾರಷ್ಟೇ. ಇವರಂತೇ ಹಲವು ಮಂದಿ ವ್ಯಾಪಾರ ಮಾಡುತ್ತಿದ್ದಾರೆ.

ತೇಜಶ್ರೀಯ ಅಮ್ಮನನ್ನು ನಾನು ಕೇಳಿದೆ, ಇಷ್ಟು ದೂರದಿಂದ ಜನರನ್ನು ಕರೆದುಕೊಂಡು ಬರಲು ನಿಮ್ಮ ಪುಟ್ಟ ಹುಡುಗಿಯನ್ನು ಕಳಿಸ್ತೀರಿ. ನಡೆದು ನಡೆದು ಆಕೆಯ ಕಾಲು ಏನಾಗಬೇಕು ಹೇಳಿ? ಎಂದೆ. ಅದಕ್ಮೆ ಅವರಮ್ಮ, ಅಣ್ಣ, ಮಗಳು ಅಷ್ಟು ದೂರ ಹೋಗಲಿಲ್ಲ ಅಂದ್ರೆ ನಮಗೆ ವ್ಯಾಪಾರಾನೇ ಆಗಲ್ಲ. ನಮ್ಮ ಜೀವನ ನಡೆಯಬೇಕಲ್ವ. ಅವಳನ್ನು ಓದಿಸಬೇಕಲ್ವ ಎಂದರು. ನಾನು ಮರು ಮಾತನಾಡದೇ ಅವರು ಕೊಟ್ಟ ಪೂಜಾ ಸಾಮಗ್ರಿಗಳನ್ನೆಲ್ಲಾ ಕೊಂಡುಕೊಂಡೆ.

ಇವರ ಮಾತೃ ಭಾಷೆ ತೆಲುಗು. ಮೂರು ತಲೆಮಾರುಗಳಿಂದ ಮಾದಪ್ಪನ ಬೆಟ್ಟದಲ್ಲೇ ವಾಸವಿದ್ದಾರೆ. ಮಾದಪ್ಪನ ಕಾವ್ಯ ಈ ತೆಲುಗು ಕುಟುಂಬದ ನಾಲಿಗೆ ಮೇಲಿ ನಲಿಯುತ್ತಿದೆ. ನಿಜಕ್ಕೂ ಬದುಕು ಎನ್ನುವುದು ಗಡಿ, ಭಾಷೆ, ಧರ್ಮ ಹಾಗೂ ಜಾತಿಗಳಿಗೂ ಮೀರಿದ್ದು. ಇಂತಹ ವೈವಿಧ್ಯತೆ ಇದ್ದರೇನೆ ನಾಡಿಗೂ ಅಂದ ದೇಶಕ್ಕೂ ಚಂದ.

ತೇಜಶ್ರೀಯ ಸಾವಿರ ಹೆಜ್ಜೆಯೇ ಇವರ ಕುಟುಂಬದ ಉಸಿರು.

– ಶಿವಕುಮಾರ ಎಂ ಹೊಸಹಳ್ಳಿ

0 Comments

Submit a Comment

Your email address will not be published. Required fields are marked *

Related Articles

Related

ಚಿತ್ರಮಂದಿರದಲ್ಲಿ ಮೂರ್ಛೆ ಹೋದ ಮಹಿಳೆಯರು

ಚಿತ್ರಮಂದಿರದಲ್ಲಿ ಮೂರ್ಛೆ ಹೋದ ಮಹಿಳೆಯರು

ಮುಂಬೈನ ಅಜಂತಾ ಸ್ಟುಡಿಯೋದಲ್ಲಿ ತಯಾರಾದ ಈ 12 ರೀಲುಗಳ (142 ನಿಮಿಷ) ಚಿತ್ರ, ಬೆಂಗಳೂರಿನ ಕೆಂಪೇಗೌಡ ರಸ್ತೆಯ ಸೆಲೆಕ್ಟ್ ಸಿನಿಮಾ ಹಾಲ್ ನಲ್ಲಿ ಪ್ರದರ್ಶನ ಕಂಡಿತ್ತು. ಗಮನಾರ್ಹ ಸಂಗತಿಯೆಂದರೆ ಭಕ್ತ ಧ್ರುವ ಚಿತ್ರವನ್ನು ವೀಕ್ಷಿಸಿದ ಕೆಲ ಪ್ರೇಕ್ಷಕರು ಸಿನಿಮಾ ಮಂದಿರದಿಂದಲೇ ಓಡಿಹೋಗಿದ್ದರು. ಕೆಲವು ಮಹಿಳೆಯರಂತೂ ಮೂರ್ಛೆಹೋಗಿದ್ದರು.

read more
ಗುಡ್ಡಗಾಡು ಜನರ ‘ರಂಗ್ ರೇಡಿಯೋ’

ಗುಡ್ಡಗಾಡು ಜನರ ‘ರಂಗ್ ರೇಡಿಯೋ’

ನಯಾಬಸ್ತಿಯ ಬುಡಕಟ್ಟು ಸಮುದಾಯದವರು ಮಂಜು ಕವಿಯುವ ಸಮಯದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಗುಡ್ಡದ ಕೆಳಗಿನ ಪ್ರದೇಶಕ್ಕೆ ವಲಸೆ ಹೋಗುತ್ತಾರೆ. ಈ ಕಾರಣದಿಂದಾಗಿ ಇವರಿಗೆ ಒಂದು ರೇಡಿಯೋ ಸ್ಟೇಷನ್ ರೂಪಿಸಲಾಗಿದ್ದು, ಸದಾ ಇವರ ನಡುವಿನ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

read more