ಕಾಫಿ ಎಂದರೇ ಯಾರಿಗೆ ಇಷ್ಟ ಇಲ್ಲ ಹೇಳಿ ? ಪ್ರತಿಯೊಬ್ಬರು ಕಾಫಿ, ಟೀ ಸೇರಿದಂತೆ ಇತರ ಪಾನೀಯಗಳ ದಾಸರಾಗಿಯೇ ಇರುತ್ತಾರೆ. ಅದರಲ್ಲೂ ಮೈಕೊರೆಯುವ ಚಳಿಯಲ್ಲಿ ಬೆಚ್ಚಗಿನ ಕಾಫಿ, ಟೀ ಸಿಕ್ಕರಂತೂ ಸ್ವರ್ಗಕ್ಕೆ ಮೂರೇ ಗೇಣು ಎಂಬ ಅನುಭವವಾಗುತ್ತದೆ. ಇಷ್ಠೆಲ್ಲಾ ಪೀಠಿಕೆ ಯಾಕೆ ಅಂದರೆ ಜಗತ್ತಿನ ಗಮನ ಸೆಳೆದ ಅದೊಂದು ಕಾಫಿಯ ವಿವರಣೆ ನೀಡಲು..
ಹೌದು ! ಇಲ್ಲಿ ಹೇಳ ಹೊರಟಿರುವುದು ಸಿವೆಟ್ ಕಾಫಿಯ ಬಗ್ಗೆ ಅರ್ಥಾತ್ ಕೋಪಿ ಲುವಾಕ್. ಬ್ಲ್ಯಾಕ್ ಕಾಫಿ, ಐರೀಶ್ ಕಾಫಿ, ಕ್ಯಾಪಚೀನೋ ಎಂದು ಮುಂತಾಗಿ ಕೇಳಿರುವ ನಾವು ಸಿವೆಟ್ ಕಾಫಿ, ಅದರ ಹಿನ್ನಲೆ, ಅದರ ಅನಾಹುತಗಳ ಬಗ್ಗೆ ತಿಳಿಯುವುದು ಅವಶ್ಯಕ.
ಏನಿದು ಸಿವೆಟ್ ಕಾಫಿ: ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಅದರಲ್ಲೂ ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುವ ಒಂದು ಪ್ರಾಣಿಯೆಂದರೆ ಕಾಡುಬೆಕ್ಕು ಅಥವಾ ಪುನುಗು ಬೆಕ್ಕು. ಥೇಟ್ ಸಾಕು ಬೆಕ್ಕಿನಂತೆ ಕಂಡುಬರುವ ಈ ಪ್ರಾಣಿಗೆ ಕಾಫಿ ಹಣ್ಣುಗಳೆಂದರೇ ಪಂಚಪ್ರಾಣ. ಕಾಫಿ ಬೆಳೆ ಹಣ್ಣಾಗುವ ಸಂದರ್ಭದಲ್ಲಿ ಅಂದರೆ ಡಿಸೆಂಬರ್ ನಿಂದ ಮಾರ್ಚ್ ವರೆಗೂ ಇದು ಹೆಚ್ಚಾಗಿ ಕಂಡುಬರುತ್ತದೆ. ಈ ಹಣ್ಣಾದ ಕಾಫಿ ಬೀಜವನ್ನು ಸೇವಿಸುವ ಬೆಕ್ಕುಗಳು ಹಾಕುವ ಹಿಕ್ಕೆಯೇ (ಮಲ) ಈ ಸಿವೆಟ್ ಕಾಫಿಗೆ ಮೂಲ.

ಪುನುಗು ಬೆಕ್ಕು ಮಲ ವಿಸರ್ಜಿಸಿದ ಬಳಿಕ ಅದರಲ್ಲಿರುವ ಬೀಜಗಳನ್ನು ಹೆಕ್ಕಿ ಸಂಸ್ಕರಿಸಲಾಗುತ್ತದೆ. ಒಂದಕ್ಕೊಂದು ಅಂಟಿಕೊಂಡಿರುವ ಬೀಜಗಳನ್ನು ಬೇರ್ಪಡಿಸಿ ಹುಡಿಯಾಗಿ ಬದಲಾಯಿಸಲಾಗುತ್ತದೆ. ಇದರಿಂದ ತಯಾರಿಸುವ ಕಾಫಿಯೇ ಸಿವೆಟ್ ಅಥವಾ ಲುವಾಕ್ ಕಾಫಿ.
ಇದು ಜಗತ್ತಿನ ಅತ್ಯಂತ ದುಬಾರಿ ಕಾಫಿ ಪಾನೀಯ: ಅಸಾಮಾನ್ಯ ರೀತಿಯಲ್ಲಿ ಈ ಪಾನೀಯವನ್ನು ತಯಾರಿಸುವುದರಿಂದ ಇದೊಂದು ದುಬಾರಿ ಕಾಫಿಯಾಗಿ ಪರಿಗಣಿಸಲ್ಪಟ್ಟಿದೆ. ಅಮೆರಿಕಾದಲ್ಲಿ ಈ ಒಂದು ಕಪ್ ಸಿವೆಟ್ ಕಾಫಿಯ ಬೆಲೆ 80 ಡಾಲರ್. ಭಾರತದಲ್ಲಿ ಒಂದು ಕೇಜಿ ಸಿವೆಟ್ ಕಾಫಿ ಹುಡಿ 10 ರಿಂದ 20 ಸಾವಿರದವರೆಗೂ ಮಾರಾಟವಾಗುತ್ತಿದೆ.(ವಿದೇಶದಲ್ಲಿ 220 ರಿಂದ 1,100 ಡಾಲರ್) ಇಂಡೋನೇಶಿಯನ್ ಐಸ್ ಲ್ಯಾಂಡ್, ಸುಮಾತ್ರ, ಜಾವ, ಬಾಲಿ, ತೈಮೂರ್, ಫಿಲಿಫೈನ್ಸ್, ಬ್ರೆಜಿಲ್ ಮುಂತಾದ ಕಡೆ ಸಿವೇಟ್ ಕಾಫಿಗೆ ಹೆಚ್ಚಿನ ಬೇಡಿಕೆಯಿದೆ. ಭಾರತದಲ್ಲೂ ಸಿವೆಟ್ ಕಾಫಿಯನ್ನು ಸಂಗ್ರಹಿಸಲಾಗುತ್ತಿದ್ದು, ಇದು ರುಚಿಕರ ಮತ್ತು ಪರಿಮಳಭರಿತವಾಗಿರುವುದರಿಂದ ಬೇಡಿಕೆ ಹೆಚ್ಚು. ಕೊಡಗಿನ ಸಿವೆಟ್ ಕಾಫಿಯನ್ನು ಬ್ರೆಜಿಲ್, ಕೆನಾಡ, ಯುರೋಪ್ ಗೂ ರಫ್ತು ಮಾಡಲಾಗುತ್ತದೆ.

ಸಿವೆಟ್ ಕಾಫಿ ಆರೋಗ್ಯಕ್ಕೆ ರಾಮಬಾಣ ಎನ್ನುವುದು ಕೆಲವರ ವಾದ. ಕಾಡುಬೆಕ್ಕುಗಳ ಹೊಟ್ಟೆಯಲ್ಲಿ ಕಾಫಿ ಬೇಳೆ ಕೆಲವು ಗಂಟೆಗಳ ಕಾಲ ಇರುವುದರಿಂದ ಅದರಲ್ಲಿ ಔಷಧೀಯ ಗುಣ ಬೆಳೆಯುತ್ತದೆ ಎನ್ನಲಾಗಿದೆ. ಆದರೆ ಇವಕ್ಕೆ ಯಾವುದೇ ಪುರಾವೆಗಳಿಲ್ಲ.
ಅಪಾಯವೇನು ?: ಆಹಾರ ಸರಪಳಿ ಕ್ರಿಯೆಯಲ್ಲಿ ಕಾಡು ಬೆಕ್ಕು ಮಹತ್ವದ ಪಾತ್ರವಹಿಸುತ್ತದೆ. ಕ್ರಿಮಿ-ಕೀಟಗಳು, ಕಾಫಿ, ಮಾವಿನ ಕಾಯಿ ತಿಂದು ಬದುಕುವ ಇವನ್ನು ಚಿರತೆ, ಹಾವು, ಮೊಸಳೆ ಮುಂತಾದವು ಆಹಾರದ ಭಾಗವಾಗಿಸಿಕೊಂಡಿದೆ. ವಿದೇಶಗಳಲ್ಲಿ ಸಿವೆಟ್ ಕಾಫಿಗಾಗಿಯೇ ಕಾಡುಬೆಕ್ಕುಗಳನ್ನು ಹಿಡಿದು ಸಾಕಲಾಗುತ್ತದೆ. ಹೀಗಾಗಿ ಕಾಡುಬೆಕ್ಕು ಆದಾಯದ ಮೂಲವಾಗಿ ಬದಲಾಗಿದೆ. ಇವನ್ನು ಹಿಡಿದು ಸಣ್ಣ ಬೋನಿನಲ್ಲಿ ಕೂಡಿಹಾಕಿ ಕಾಫಿಹಣ್ಣನ್ನು ಆಹಾರವಾಗಿ ನೀಡಲಾಗುತ್ತದೆ. ಬಳಿಕ ಅದರ ತ್ಯಾಜ್ಯವನ್ನು ಸಂಗ್ರಹಿಸಿ ಕಾಫಿ ಬೇಳೆಯನ್ನು ಎಚ್ಚರಿಕೆಯಿಂದ ಬೇರ್ಪಡಿಸಲಾಗುತ್ತದೆ. ಆದರೆ ಬಂಧಿಖಾನೆಯಲ್ಲಿರುವ ಇವುಗಳು ಹೆಚ್ಚಾಗಿ ಪರಿತಪಿಸಿ ಮರಣ ಹೊಂದುವ ಸಾಧ್ಯತೆಯೂ ಇದೆ. ಕಡಿಮೆ ಪ್ರಮಾಣದ ಏಕಮಾತ್ರ ಆಹಾರ ಮತ್ತು ಶುಚಿತ್ವ ರಹಿತ ವಾತಾವರಣದಿಂದ ಹಲವು ಬೆಕ್ಕುಗಳು ಪ್ರಾಣತ್ಯೆಜಿಸಿವೆ. ಹಲವೆಡೆ ಕಾಡುಬೆಕ್ಕಿನ ಸಂತತಿಯು ಅವನತಿಯ ಅಂಚಿಗೆ ತಲುಪಿವೆ.

ಮತ್ತೊಂದು ಅಂಶವೆಂದರೇ ಸಿವೆಟ್ ಕಾಫಿ ಮಾದರಿಯಲ್ಲೇ ಇರುವ ನಕಲಿ ಕಾಫಿಯನ್ನು ಕೂಡ ಮಾರಾಟ ಮಾಡಲಾಗುತ್ತಿದೆ. ಕೊಂಡುಕೊಳ್ಳುವವರಿಗೆ ಯಾವುದು ಅಸಲಿ/ನಕಲಿ ಎಂದು ತಿಳಿಯಲು ಗೊಂದಲಗಳಾಗುವುದು ಸಹಜ. ಇದಕ್ಕಾಗಿ ಯಾವುದೇ ಸರ್ಟಿಫಿಕೆಟ್ ಗಳನ್ನು ಇನ್ನೂ ಒದಗಿಸಲಾಗಿಲ್ಲ.
ಸಿವೆಟ್ ಕಾಫಿಯ ಹಿನ್ನಲೆ: ಈ ಕಾಫಿ ಇಂಡೋನೇಶಿಯಾದಲ್ಲಿ ಮೊದಲ ಬಾರಿಗೆ ಆರಂಭವಾಯಿತು. ಡಚ್ ವಸಹಾತುಶಾಹಿಗಳು ಯೆಮೆನ್ ನಿಂದ ಕಾಫಿ ತರಿಸಿಕೊಂಡು ಉತ್ಪಾದನೆಯನ್ನು ಆರಂಭಿಸಿದರು. 19ನೇ ಶತಮಾನದಲ್ಲಿ ಅಲ್ಲಿನ ಕಾರ್ಮಿಕರು ಸಿವೆಟ್ ಕಾಫಿಯನ್ನು ಹೆಕ್ಕಿ ಹುಡಿ ಮಾಡಿ ಪಾನೀಯವಾಗಿ ಸೇವಿಸಲು ಆರಂಭಿಸಿದರು.

ಇಂದು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಸಿವೆಟ್ ಕಾಫಿ ಜನಪ್ರಿಯವಾಗಿದೆ. ಸಿರಿವಂತರ ಪಾಲಿಗೆ ಸುಲಭವಾಗಿ ಕೈಗೆಟುಕುವ ಇವು ಬಡವರ ಪಾಲಿಗೆ ಮರೀಚಿಕೆಯಾಗಿದೆ. ಹಲವೆಡೆ ಸಿವೆಟ್ ಕಾಫಿ ತಯಾರಿಸುವ ಸಂಸ್ಥೆಗಳು ಹುಟ್ಟಿಕೊಂಡಿದ್ದು ಉದ್ಯಮವಾಗಿ ಬದಲಾಗಿದೆ. ಅದಾಗ್ಯೂ ಕೇವಲ ಪಾನೀಯಕ್ಕಾಗಿ ಕೆಲವೆಡೆ ಕಾಡುಪ್ರಾಣಿಗಳನ್ನು ಹಿಡಿದು ಬೋನಿನಲ್ಲಿ ಕೂಡಿಹಾಕಿ ಹಿಂಸಿಸುತ್ತಿರುವುದು ಶೋಚನೀಯ.
- ಮಿಥುನ್ ಮೊಗೇರ
0 Comments