ಸಕಲ ಪ್ರತಿಭೆ ನಿಪುಣೆ ಅಮೃತಾ

ಸಮಾಜದಲ್ಲಿ ಒಂದೊಳ್ಳೆ ಗೌರವ ಸಿಗಬೇಕಾದರೆ ಏನನ್ನಾದರೂ ಸಾಧಿಸಬೇಕು ಎನ್ನುವ ಮಾತಿದೆ. ಬಾಲ್ಯದಲ್ಲೇ ಮಕ್ಕಳಿಗೆ ಪ್ರತಿಭೆಯ ಸಾಮರ್ಥ್ಯ ಹೆಚ್ಚುವಂತೆ ತಂದೆ ತಾಯಿ ಅವಕಾಶ ನೀಡಬೇಕು, ಪ್ರೋತ್ಸಾಹಿಸುತ್ತಿರಬೇಕು. ಮಕ್ಕಳು ಪ್ರತಿಭೆಯ ಜೊತೆಗೆ ಬೆಳೆಯುತ್ತಿದ್ದರೆ, ಒಂದೊಳ್ಳೆ ಬದುಕಿನ ಹಾದಿಯನ್ನು ಕಂಡುಕೊಳ್ಳುವುದಂತೂ ನಿಶ್ಚಿತ.

ಬೆಂಗಳೂರಿನ ಅಮೃತಹಳ್ಳಿಯಲ್ಲಿ ವಾಸವಿರುವ ಒಂಬತ್ತನೇ ತರಗತಿಯ ಅಮೃತ ಬಿ.ಇ ತನ್ನ ಬಾಲ್ಯದಿಂದಲೇ ಪ್ರತಿಭೆಗಳ ಜೊತೆಗೆ ಬೆಳೆಯುತ್ತಿದ್ದಾರೆ. ಚಿತ್ರಕಲೆ, ಟೇಕ್ವಾಂಡೊ (ಕರಾಟೆ) ಮತ್ತು ಭರತನಾಟ್ಯ ಕಲೆಯಿಂದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಸಣ್ಣ ವಯಸ್ಸಿನಲ್ಲೇ ಯೂನಿವರ್ಸಲ್ ಅಚೀವರ್ಸ್ – ಬುಕ್ಸ್ ಆಫ್ ರೆಕಾರ್ಡ್ಸ್, ಫ್ಯೂಚರ್ ಕಲಾಮ್ಸ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್ಸ್: ನ್ಯಾಷನಲ್ ರೆಕಾರ್ಡ್ಸ್ ನಲ್ಲಿ ಅಮೃತ ಬಿ,ಇ ಹೆಸರು ದಾಖಲಾಗಿರುವುದು ಅಚ್ಚರಿ.

ಈಕೆಯ ಕಲೆಯನ್ನು ಕಂಡವರ ಮನ ಸೋಲಲೇ ಬೇಕು. ಎಂತಹ ಅದ್ಭುತ ಚಿತ್ರಕಲೆಗಳನ್ನು ಬಿಡಿಸುತ್ತಾರೆ ಎಂದರೆ, ಕೇವಲ ಮೂರು ನಿಮಿಷದಲ್ಲೇ ಅಬ್ದುಲ್ ಕಲಾಂ, ಸರ್ ಎಂ ವಿಶ್ವೇಶರಯ್ಯ, ಮದರ್ ತೆರೇಸಾ, ಗೌತಮ ಬುದ್ಧ, ಮಹಾವೀರ, ಸ್ವಾಮಿ ವಿವೇಕಾನಂದ, ಗಾಂಧೀಜಿ, ಕುವೆಂಪು, ದ.ರಾ.ಬೇಂದ್ರೆ, ಕಣ್ತುಂಬಿ ಕೊಳ್ಳುವ ವನಸೌಂದರ್ಯ, ಪ್ರಾಣಿ, ಪಕ್ಷಿಗಳು, ದೇವರ ಚಿತ್ರಗಳು ಹಾಗೂ ಭರತನಾಟ್ಯ ಸೇರಿದಂತೆ ಒಟ್ಟು 2.5 ಸಾವಿರಕ್ಕೂ ಅಧಿಕ ಚಿತ್ರಕಲೆಗಳು ಈಕೆಯ ಕೈಯಿಂದ ಮೂಡಿಬಂದಿದೆ.

ಮಕ್ಕಳಿಗೆ ಬಾಲ್ಯದಿಂದಲೇ ಏನಾದರೂ ಕಲೆಗಳನ್ನು ಕಲಿಸಬೇಕೆನ್ನುವುದು ಹಲವು ಪೋಷಕರ ಕನಸಿರುತ್ತದೆ. ಅಂತೆಯೇ ಅಮೃತಾ ಅವರ ಪೋಷಕರಿಗೂ ಇತ್ತು. ಈಕೆಯ ಚಿತ್ರಕಲೆ ತರಬೇತಿ 3ನೇ ತರಗತಿಯಲ್ಲೇ ಪ್ರಾರಂಭವಾಯಿತು. ಅಮೃತಾ ಅವರ ಚಿತ್ರಕಲೆ ಆಸಕ್ತಿಯನ್ನು ವೃದ್ಧಿಸಲು ಸರಿಯಾದ ಒಬ್ಬ ಮಾರ್ಗದರ್ಶಕ ಸಿಗಲಿಲ್ಲ. ಹಲವು ಶಿಕ್ಷಕರು ಸಣ್ಣ ಸಮಯದಲ್ಲಿ ಸಿಕ್ಕಿ, ವಿಭಿನ್ನವಾಗಿ ತರಬೇತಿ ನೀಡುತ್ತಿದ್ದಾಗ ಕಲೆಯು ಒಂದೊಳ್ಳೆ ಸ್ವರೂಪಕ್ಕೆ ಬರುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಸತತ ಸ್ವಯಂ ಪ್ರಯತ್ನದಿಂದ, ಪೋಷಕರ ಬೆಂಬಲದಿಂದ ಈಗ ಯಾವುದೇ ಕಲೆಯನ್ನು ನಿಮಿಷಾರ್ಧಲ್ಲಿ ಬಿಡಿಸುವ ಕೌಶಲ್ಯ ಈಕೆಗಿದೆ.

ಚಿತ್ರಕಲೆ ಸ್ಪರ್ಧೆಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಅಲ್ಟಿಮೆಟ್ ಆರ್ಟ್ ಹಬ್ ಪುಣೆ ವತಿಯಿಂದ 5 ಚಿನ್ನದ ಪದಕಗಳು ಈಕೆಗೆ ಸೇರಿದೆ. ನೋಯಿಡಾದ ಸೋಲಾನ (ಹೆಚ್.ಪಿ) ಟಾಪ್ 50 ಇಂಟರ್ ನ್ಯಾಷನಲ್ ಆರ್ಟಿಸ್ಟ್ ಭಾಗವಹಿಸಿ 13ನೇ ಸ್ಪರ್ಧಿಯಾಗಿ ಆಯ್ಕೆಯಾಗಿದ್ದರು. ರಾಷ್ಟ್ರಿಯ ಮಟ್ಟದಲ್ಲಿ 2 ಚಿನ್ನ, 2 ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ರಾಜ್ಯಮಟ್ಟದಲ್ಲಿ 3 ಬೆಳ್ಳಿ ಪದಕ ಜೊತೆಗೆ, ಬಾಲ ಕಲಾ ರತ್ನ ಅವಾರ್ಡ್, ಕರ್ನಾಟಕ ವಿಕಾಸ ರತ್ನ ನ್ಯಾಷನಲ್ ಅವಾರ್ಡ್ 2019, ಅಭಿನಂದನಾ ಅವಾರ್ಡ್, ರಾಜೀವ್ ಗಾಂಧಿ ಸದ್ಭಾವನ ನ್ಯಾಷನಲ್ ಅವಾರ್ಡ್, ಸ್ವಾಮಿ ವಿವೇಕಾನಂದ ನ್ಯಾಷನಲ್ ಅವಾರ್ಡ್ 2020 ಹಾಗೂ ಬೆಸ್ಟ್ ಪೇಂಟಿಂಗ್ ಗಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹುಬ್ಬಳ್ಳಿ 2020 ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಹೆಣ್ಣು ಮಕ್ಕಳು ಸ್ವತಃ ತಾವೇ ತಮ್ಮನ್ನು ಕಾಪಾಡಿಕೊಳ್ಳುವುದನ್ನು ಕಲಿತುಕೊಂಡಿರಬೇಕೆಂದು ಚಿತ್ರಕಲೆ ತರಬೇತಿಯ ಜೊತೆಗೆ ಟೇಕ್ವಾಂಡೊ (ಕರಾಟೆ) ಕಲೆಯನ್ನೂ ಸಹ ಕರಗತ ಮಾಡಿಕೊಂಡಿದ್ದಾರೆ. ಕರಾಟೆಯಿಂದ ಶಿಸ್ತನ್ನೂ ಪಾಲಿಸುವುದನ್ನು ಕಲಿಯಬಹುದು ಎಂಬುದು ಅಮೃತಾ ಅವರ ನಂಬಿಕೆ. ಟೇಕ್ವಾಂಡೊನ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಮಂಗೋಲಿಯಾದಲ್ಲಿ ಕಂಚಿನ ಪದಕ, ನೇಪಾಳದಲ್ಲಿ ಚಿನ್ನದ ಪದಕ ಮತ್ತು ಬೆಂಗಳೂರಿನಲ್ಲಿ ಚಿನ್ನದ ಪದಕವನ್ನು ಬಾಚಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಗುಜರಾತ್, ಗೋವಾದಲ್ಲಿನ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, ದೆಹಲಿ, ಕೇರಳದಲ್ಲಿ ಚಿನ್ನದ ಪದಕ, ಛತ್ತಿಸಘಡದಲ್ಲಿ ಬೆಳ್ಳಿ ಪದಕ ಹಾಗೂ ಮೈಸೂರಿನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ ಮತ್ತು ಏಳು ಬಾರಿ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿ ಒಟ್ಟು 10 ಚಿನ್ನ, 8 ಬೆಳ್ಳಿ ಹಾಗೂ 8 ಕಂಚಿನ ಪದಕಗಳನ್ನು ಪಡೆದಿದ್ದಾರೆ. 

ಅಮೃತಾ ಅವರ ನೃತ್ಯ ಆಸಕ್ತಿಯಿಂದಾಗಿ ಭರತನಾಟ್ಯವನ್ನೂ ಸಹ ಕಲಿತಿದ್ದಾರೆ. ಇದರಲ್ಲಿ ಜ್ಯೂನಿಯರ್ ಪರೀಕ್ಷೆ ಮುಗಿಸಿ, ಅನೇಕ ಕಡೆ ನೃತ್ಯ ಪ್ರದರ್ಶನ ಮಾಡಿ ಶಭಾಶ್ ಗಿರಿ ಪಡೆದುಕೊಂಡಿದ್ದಾರೆ. ಈ ಭರತನಾಟ್ಯ ಕಲೆಯಲ್ಲಿ ಇನ್ನಷ್ಟು ಹಲವು ಆಯಾಮಗಳನ್ನು ತಿಳಿದುಕೊಂಡು ಕಲಿಯುವ ಆಸಕ್ತಿ ಈಕೆಗೆ ಬಹಳಷ್ಟಿದೆ.  

ಬಡತನ ಕುಟುಂಬದಿಂದ ಬಂದು, ಶ್ರಮಪಟ್ಟಿ ವಿಶ್ವವಿಖ್ಯಾತರಾದ ಅಬ್ದುಲ್ ಕಲಾಂ ಅವರು ಈಕೆಗೆ ಸ್ಪೂರ್ತಿ. ಅವರಂತೆಯೇ ತನ್ನ ಹೆಸರು ಕೂಡ ಜಗತ್ತಿಗೆ ತಿಳಿಯಬೇಕೆಂಬ ಕನಸಿದೆ. ಹಾಗೆಯೇ ಶ್ರಮಿಸುತ್ತಿದ್ದಾರೆ.

ಶಿಕ್ಷಣಾಭ್ಯಾಸ, ಚಿತ್ರಕಲೆ, ಕರಾಟೆ, ಭರತನಾಟ್ಯ ಜೊತೆಗೆ ಯೋಗ, ಜಿಮ್ ನ್ಯಾಸ್ಟಿಕ್ ನಂತಹ ಕಲೆಗಳನ್ನು ಕಲಿಯುವ ಕನಸು ಅಮೃತಾಗೆ ಇದೆ. ಅಲ್ಲದೆ, America’s got Talent ನಲ್ಲಿ ಭಾಗಿಯಾಗುವುದಕ್ಕಾಗಿ ಶ್ರಮ ಪಡುತ್ತಿದ್ದಾರೆ.

ಇಲ್ಲಿ ಅಮೃತಾ ಅವರ ವಿಶೇಷತೆ ಏನಂದರೆ, ತಾನು ಬರೆದಿರುವ ಚಿತ್ರಕಲೆಗಳನ್ನು ಪ್ರದರ್ಶನಕ್ಕಿಟ್ಟು ಮಾರಾಟ ಮಾಡಿ, ಅದರಿಂದ ಬರುವ ಹಣವನ್ನು ದಿವ್ಯಾಂಗ ಜನರಿಗೆ (Disabled People) ನೀಡಬೇಕೆನ್ನುವುದು ಈಕೆಯ ಅಗಾಧ ಆಶಯ. 

ಅಮೃತಾಳಿಗೆ ಗ್ರಹಿಸುವ ಶಕ್ತಿ ಚೆನ್ನಾಗಿರುವುದರಿಂದ ಕಲಿಯುವ ಕಲೆಗಳನ್ನು ಸುಲಭವಾಗಿ ಕರಗತ ಮಾಡಿಕೊಳ್ಳುತ್ತಾಳೆ ಎನ್ನುವ ನಂಬಿಕೆ ಇವರ ಪೋಷಕರದ್ದು. ಬಾಲ್ಯದಲ್ಲಿ ಮಕ್ಕಳು ಆಟಿಕೆಗಳನ್ನು ಕೇಳುತ್ತಿದ್ದರೆ, ಅಮೃತಾ ಪುಸ್ತಕ, ಪೆನ್ಸಿಲ್, ಬಣ್ಣಗಳನ್ನು ಕೇಳುತ್ತಿದ್ದಳು. ಬಾಲ್ಯದಲ್ಲೇ ಸಾಧ್ಯವಾದಷ್ಟು ಮಾನವೀಯ ಮೌಲ್ಯಗಳ ಅರಿವನ್ನು ಮಕ್ಕಳಿಗೆ ನೀಡಬೇಕು. ಈಕೆಯ ಎಲ್ಲಾ ಒಳ್ಳೆಯ ಪ್ರಯತ್ನಕ್ಕೆ ಹೆಚ್ಚೆಚ್ಚು ಪ್ರೋತ್ಸಾಹ ನೀಡುತ್ತಿರುತ್ತೇವೆ. ಮಕ್ಕಳಿಗೆ ಆಸ್ತಿ ಮಾಡುವುದು ಬೇಡ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವ ಕನಸು ಹಾಗೂ ಅವಳ ಕಲೆಗಳಿಗೆ ಸಂಪೂರ್ಣ ನಮ್ಮ ಬೆಂಬಲವಿದೆ ಎಂದು ಹೇಳುತ್ತಾರೆ ಅಮೃತಾ ಅವರ ತಾಯಿ ಜ್ಯೋತಿ ಎಸ್.

-ಶಿವಕುಮಾರ ಎಂ ಹೊಸಹಳ್ಳಿ

0 Comments

Submit a Comment

Your email address will not be published.

Related Articles

Related

ದಿಗ್ಗಜರಿಗೆ ನೃತ್ಯ ಕಲಿಸಿದ ಅಪ್ರತಿಮ ಪ್ರತಿಭೆ ಉಡುಪಿ ಜಯರಾಂ

ದಿಗ್ಗಜರಿಗೆ ನೃತ್ಯ ಕಲಿಸಿದ ಅಪ್ರತಿಮ ಪ್ರತಿಭೆ ಉಡುಪಿ ಜಯರಾಂ

ಒಂದು ಸಿನಿಮಾ ಎಂದಾಕ್ಷಣ ನಮಗೆ ಅದರಲ್ಲಿ ಅಭಿನಯಿಸಿದ/ಅಭಿನಯಿಸುತ್ತಿರುವ ನಟ, ನಟಿ, ನಿರ್ದೇಶಕರ ರೂಪ ಕಣ್ಮುಂದೆ ಬರುತ್ತದೆ. ಆದರೆ 80,90ರ ದಶಕದ ಸಿನಿಮಾಗಳು ಪ್ರಸಾರವಾದ ಸಂದರ್ಭದಲ್ಲಿ ಸೂಕ್ಷ್ಮವಾಗಿ  ಗಮನಿಸಿದರೆ ಅಲ್ಲೊಂದು ಸಾಮಾನ್ಯ ಹೆಸರು ಪ್ರತಿಯೊಬ್ಬರ ಗಮನ ಸೆಳೆಯುತ್ತದೆ. ಅದು ಉಡುಪಿ ಜಯರಾಂ ಎಂಬ ನೃತ್ಯ ಬ್ರಹ್ಮನ ಹೆಸರು.

read more
ಗುಡ್ಡಗಾಡು ಜನರ ‘ರಂಗ್ ರೇಡಿಯೋ’

ಗುಡ್ಡಗಾಡು ಜನರ ‘ರಂಗ್ ರೇಡಿಯೋ’

ನಯಾಬಸ್ತಿಯ ಬುಡಕಟ್ಟು ಸಮುದಾಯದವರು ಮಂಜು ಕವಿಯುವ ಸಮಯದಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಗುಡ್ಡದ ಕೆಳಗಿನ ಪ್ರದೇಶಕ್ಕೆ ವಲಸೆ ಹೋಗುತ್ತಾರೆ. ಈ ಕಾರಣದಿಂದಾಗಿ ಇವರಿಗೆ ಒಂದು ರೇಡಿಯೋ ಸ್ಟೇಷನ್ ರೂಪಿಸಲಾಗಿದ್ದು, ಸದಾ ಇವರ ನಡುವಿನ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

read more