ಕಾಯಿಲೆ ಬರುವುದು ಎಲ್ಲಿಂದ? ಜಪಾನೀಸ್ ಸಿನೆಮಾ ‘ರೆಡ್ ಬಿಯರ್ಡ್’ ವಿಶ್ಲೇಷಣೆ

ರೆಡ್ ಬಿಯರ್ಡ್ 1965ರಲ್ಲಿ ತೆರೆಕಂಡ ಜಪಾನೀಸ್ ಚಿತ್ರ. ಈ ಸಿನಿಮಾ ನಿರ್ದೇಶಿಸಿದವರು ಅಕಿರಾ ಕುರೋಸಾವ. ಕುರೋಸಾವ ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು, ರಾಶೋಮೊನ್, ಸೆವೆನ್ ಸಮುರಾಯ್, ಇಕಿರು ಮುಂತಾದ ಸಿನಿಮಾಗಳು. ರೆಡ್ ಬಿಯರ್ಡ್ ಸಿನಿಮಾದಲ್ಲಿ ವಿವಿಧ ಆಯಾಮಗಳಿವೆ, ಪ್ರಾಸಂಗಿಕವಾದ ನಿರ್ಮಾಣವಿದೆ. ಭಾವನಾತ್ಮಕ ಚಿಂತನೆಗೆ ಎಳೆದುಕೊಂಡು ಹೋಗುವ ಶೈಲಿಯಿದೆ.

ರೆಡ್ ಬಿಯರ್ಡ್ ಸಿನಿಮಾದಲ್ಲಿ ಮಧ್ಯಕಾಲದಲ್ಲಿ ನಡೆಯುವ ಕಥೆಯನ್ನು ಚಿತ್ರಿಸಲಾಗಿದೆ. ಆಸ್ಪತ್ರೆಯೊಂದರಲ್ಲಿದ್ದ ವೈದ್ಯನಿಗೆ ರೆಡ್ ಬಿಯರ್ಡ್ ಅನ್ನುವ ಹೆಸರಿತ್ತು. ಈತನಿಗೆ ಕೆಂಪು ಗಡ್ಡ ಇರುವ ಕಾರಣಕ್ಕಾಗಿಯೇ ಆ ರೀತಿ ಕರೆಯಲಾಗುತಿತ್ತು. ಇವನ ಆಸ್ಪತ್ರೆಗೆ ಯಸುಮೊಟೊ ಅನ್ನುವ ವ್ಯಕ್ತಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಆತನ ಅಪ್ಪ ಕೂಡ ಡಾಕ್ಟರ್. ಹೀಗಾಗಿ ಮಗನನ್ನು ರೆಡ್ ಬಿಯರ್ಡ್ ಬಳಿಗೆ ಕೆಲಸಕ್ಕಾಗಿ ಕಳುಹಿಸುತ್ತಾನೆ. ಯಸುಮೊಟೊ ನಾಗಾಸಾಕಿಯಲ್ಲಿ ಡಚ್ ಮೆಡಿಸನ್ ಸಿಸ್ಟಮ್ ಬಗ್ಗೆ ಶಿಕ್ಷಣ ಪಡೆದಿರುತ್ತಾನೆ. ಅವನಿಗೆ ಸಾಂಪ್ರದಾಯಕ ವೈದ್ಯ ಪದ್ಧತಿಯ ಬಗ್ಗೆ ನಂಬಿಕೆ ಮತ್ತು ಪ್ರೀತಿ ಇರುವುದಿಲ್ಲ. ಅವನ ಗುಣವೇ ಒರಟು. ಆದರೆ ರೆಡ್ ಬಿಯರ್ಡ್ ಅಷ್ಟೇ ಹಠವಾದಿ, ಛಲಗಾರ ಮತ್ತು ಶಿಸ್ತುಬದ್ಧ ಡಾಕ್ಟರ್. ಸಿನಿಮಾದ ಈ ಗುರು ಶಿಷ್ಯ ಸಂಬಂಧವನ್ನು ಎಪಿಸೋಡಿಕ್ ಆಗಿ ಚಿತ್ರೀಕರಿಸಲಾಗಿದೆ.

ಆಸ್ಪತ್ರೆಯಲ್ಲಿರುವ ಹಲವು ರೋಗಿಗಳ ಕಥೆಯ ಮೂಲಕ, ಯಸುಮೊಟೊವಿನ ಒರಟುತನವನ್ನು ರೆಡ್ ಬಿಯರ್ಡ್ ಹೇಗೆ ಕಡಿಮೆ ಮಾಡುತ್ತಾನೆ ಅನ್ನುವುದು ಸಿನಿಮಾದ ವಸ್ತು. ಯಸೊಮೊಟೊ ತಾನು ಹೊಸ ರೀತಿಯ ವೈದ್ಯಕೀಯ ಶಿಕ್ಷಣ ಪಡೆದಿದ್ದರಿಂದ, ಆತನಿಗೆ ಎಂತಹ ಕಾಯಿಲೆಯನ್ನಾದರೂ ಗುಣಪಡಿಸಬಲ್ಲೇ ಅನ್ನುವ ನಂಬಿಕೆ ಮತ್ತು ಹಠವೂ ಇರುತ್ತದೆ. ಇದನ್ನು ಗಮನಿಸಿದ ರೆಡ್ ಬಿಯರ್ಡ್ “ಎಲ್ಲಾ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಮನುಷ್ಯನಿಗೆ ಇರುವುದಿಲ್ಲ. ಏಕೆಂದರೆ ಕಾಯಿಲೆ ಬರುವುದು ಸಮಾಜದಿಂದ, ಸಮಾಜದಲ್ಲಿರುವ ಬಡತನ ಮತ್ತು ಅಲ್ಲಿರುವ ಕೆಲವು ಮೂಲಸೌಕರ್ಯಗಳ ಸಮಸ್ಯೆಗಳಿಂದಾಗಿ ವ್ಯಕ್ತಿ ರೋಗಿಯಾಗುತ್ತಾನೆ ಹೊರತು, ಮನುಷ್ಯ ಮೂಲತಃ ರೋಗಿ ಅಲ್ಲ. ಜೊತೆಗೆ ರೋಗಿಯಲ್ಲಿ ಒಬ್ಬ ಆಡಳಿತಗಾರ, ಒಬ್ಬ ರಾಜಕಾರಣಿಯನ್ನು ಕಾಣಬಹುದು. ನೀನು ಅದನ್ನು ಗುಣಪಡಿಸುತ್ತೇನೆ ಎಂದು ತಿಳಿದುಕೊಂಡರೆ, ಅದು ನಿನ್ನ ಮೌಢ್ಯ. ಹೊರ ರೋಗ ಮತ್ತು ಒಳರೋಗ ಎಂಬುದು ಬೇರೆ ಬೇರೆ ಇರುತ್ತದೆ” ಎಂದು ಹೇಳುತ್ತಾನೆ.

ಆದರೆ ಈ ಮಾತನ್ನ ಯಸುಮೊಟೊ ಒಪ್ಪದೆ ಕೋಪಿಸಿಕೊಂಡು ಅಲ್ಲಿಂದ ಹೊರಟು ಹೋಗುತ್ತಾನೆ. ತದನಂತರ ರೆಡ್ ಬಿಯರ್ಡ್, ರೋಗಿಗಳ ಒಂದೊಂದು ಕಥೆಗಳ ಮೂಲಕ ಅವನ ತಿಳುವಳಿಕೆಯನ್ನು ವಿಸ್ತಾರ ಮಾಡುತ್ತಾನೆ. ಆಸ್ಪತ್ರೆಯಲ್ಲಿ ಒಬ್ಬ ಗಂಡಸು ಮತ್ತು ನಾಲ್ಕು ಮಂದಿ ಹೆಂಗಸರು ಇರುತ್ತಾರೆ. ಆ ಹೆಂಗಸರ ವಿಭಿನ್ನವಾದ ಮನುಷ್ಯ ಸಂಬಂಧಗಳನ್ನು, ಗಂಡು ಹೆಣ್ಣಿನ ಸಂಬಂಧಗಳನ್ನು ಕುರೋಸಾವ ನಮ್ಮ ಮುಂದೆ ತೆರೆದಿಡುತ್ತಾನೆ.

ಮೊದಲನೇಯ ಚಿತ್ರಣದಲ್ಲಿ ಮನೋರೋಗಿ ಹುಡುಗಿ ಕಾಣಸಿಗುತ್ತಾಳೆ. ಆಕೆ ಶ್ರೀಮಂತನ ಮಗಳು, ಬಹಳ ಸುಂದರವಾದ ಚೆಲುವೆ. ಆದರೆ ಅಪರಿಚಿತರನ್ನು ಓಲೈಸಿಕೊಂಡು, ಅಪ್ಪಿಕೊಂಡು ನಂತರ ಅವರನ್ನು ತನ್ನ ಹೇರ್ ಪಿನ್ ನಿಂದ ಚುಚ್ಚಿ ಸಾಯಿಸುವುದು ಆಕೆಯ ಹವ್ಯಾಸವಾಗಿರುತ್ತದೆ. ನಾಲ್ಕೈದು ಜನರನ್ನು ಸಾಯಿಸಿದ್ದರಿಂದ ಅವಳ ಅಪ್ಪನಿಗೆ ಮಗಳ ನಡವಳಿಕೆಯನ್ನು ಸಹಿಸಲಾಗದೆ ಆಸ್ಪತ್ರೆಗೆ ಸೇರಿಸುತ್ತಾನೆ. ಈ ಹುಡುಗಿಯನ್ನು  ಗುಣಪಡಿಸುತ್ತೇನೆ ಎಂಬ ಹಠತೊಟ್ಟ ಯಸೊಮೊಟೊನನ್ನೆ ಆಕೆ ಕೊಲ್ಲುವುದಕ್ಕೆ ಮುಂದಾದಾಗ ರೆಡ್ ಬಿಯರ್ಡ್ ಬಂದು ಉಳಿಸುತ್ತಾನೆ. “ಯಾರಿಗಾದರೂ ಮನೋರೋಗವಿದ್ದರೆ ಅದಕ್ಕೆ ಇಡೀ ವ್ಯವಸ್ಥೆಯೂ ಕಾರಣವಾಗಿರುತ್ತದೆ. ಅದರ ಬಗ್ಗೆಯೂ ತಿಳಿದುಕೊಳ್ಳಬೇಕು. ಈಕೆಯ ಮೇಲೆ ಸಣ್ಣವಳಿದ್ದಾಗಲೇ ಲೈಂಗಿಕ ಅತ್ಯಾಚಾರವಾಗಿದೆ. ಇದನ್ನೆಲ್ಲಾ ಪರಿಗಣಿಸದೇ ಗುಣ ಪಡಿಸುತ್ತೇನೆ ಎಂದು ಹೊರಟರೇ ತಪ್ಪಾಗುತ್ತದೆ” ಎಂದು ರೆಡ್ ಬಿಯರ್ಡ್ ವಿವರಿಸುತ್ತಾನೆ.

ಇಂತಹದೇ ಕಥೆ ಎರಡನೇ ರೋಗಿಯದ್ದು. ಆಸ್ಪತ್ರೆಯ ಹಿಂದೆಯಿದ್ದ ಒಂದು ತೊರೆಯಲ್ಲಿ ಹೆಣವೊಂದು ಸಿಗುತ್ತದೆ. ಯಾರೇ ಏನೇ ಕೇಳಿದರೂ ಆ ರೋಗಿ ಹೇಳುವುದಿಷ್ಟೇ, “ಅದು ನನ್ನ ಹೆಂಡತಿ ಹೆಣ. ನಾನು ಇಲ್ಲಿಯೇ ಸಮಾಧಿ ಮಾಡಿದ್ದೆ” ಎನ್ನುತ್ತಾನೆ. ಕಾರಣವೇನೆಂದರೇ ಆತನೊಂದಿಗೆ ನಿಶ್ಚಯವಾಗಿದ್ದ ಹುಡುಗಿಗೆ ಕಾರಣಾಂತರಗಳಿಂದ ಬೇರೊಬ್ಬನ ಜೊತೆ ಮದುವೆಯಾಗುತ್ತದೆ. ಅವಳ ಸಂಸಾರದಲ್ಲಿ ನೆಮ್ಮದಿ ಇರುವುದಿಲ್ಲ. ಕೊನೆಗೆ ಅವಳು ಇವನಲ್ಲಿಗೆ ವಾಪಾಸು ಬಂದಾಗ ಆತ ಕೋಪಿಸಿಕೊಳ್ಳುತ್ತಾನೆ. ಇಬ್ಬರು ಅಪ್ಪಿಕೊಂಡ ಸಂದರ್ಭದಲ್ಲಿ ತನಗೇ ತಾನೆ ಚೂರಿಯಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇದೊಂದು ಅಸ್ವಸ್ಥ ಮನಸ್ಥಿತಿ ಅಥವಾ ಅಸ್ವಸ್ಥ ದೈಹಿಕ ಸ್ಥಿತಿಯಲ್ಲ. ಇದು ಅಸ್ವಸ್ಥ ಸಾಮಾಜಿಕ ಪರಿಸ್ಥಿತಿ.

ಮತ್ತೊಂದು ಕಥೆ ಒಟಾಯೊ ಎನ್ನುವ ಹುಡುಗಿಗೆ ಸಂಬಂಧಿಸಿದ್ದು. ಇದು ರೆಡ್ ಬಿಯರ್ಡ್ ಸಿನಿಮಾದಲ್ಲೇ ಬಹಳ ಸುಂದರವಾಗಿ, ಬಹಳ ಸೂಕ್ಷ್ಮವಾಗಿ ಮತ್ತು ಹಲವು ರೀತಿಯ ಮಾನವ ಸಂಬಂಧಗಳ ಬಗ್ಗೆ ವ್ಯಾಖ್ಯಾನ ಮಾಡುವ ಒಂದು ಕಥೆ. ಒಟಾಯೊ ಎನ್ನುವವಳು ವೇಶ್ಯವಾಟಿಕೆಯಲ್ಲಿ ಸಿಕ್ಕಿಹಾಕಿಕೊಂಡ 12 ವರ್ಷದ ಹುಡುಗಿ. ಆಕೆ ಇರುವ ಸ್ಥಳಕ್ಕೆ ಒಮ್ಮೆ ರೆಡ್ ಬಿಯರ್ಡ್ ಯಸೊಮೊಟೊನನ್ನು ಕರೆದುಕೊಂಡು ಹೋಗಿರುತ್ತಾನೆ. ಅಲ್ಲಿನ ಹೆಣ್ಣು ಮಕ್ಕಳ ಪರಿಸ್ಥಿತಿ ವಿಭಿನ್ನವಾಗಿರುತ್ತದೆ. ರೆಡ್ ಬಿಯರ್ಡ್ ಅಲ್ಲಿನ ಉಸ್ತುವಾರಿ ಹೆಂಗಸಿನ ಹತ್ತಿರ ಮಾತನಾಡುತ್ತಾ “ನೀವು ಈ ಹೆಣ್ಣು ಮಕ್ಕಳಿಗೆ ಚಿಕಿತ್ಸೆ ಕೊಡಲೇಬೇಕು. ಇವರೆಲ್ಲರೂ ಒಂದೊಂದು ಸಮಸ್ಯೆಗಳಲ್ಲಿ ಬಳಲುತ್ತಿದ್ದಾರೆ” ಎಂದು ಹೇಳುತ್ತಾನೆ. ಆದರೆ ಆ ಹೆಂಗಸು ಇದಕ್ಕೆ ಒಪ್ಪುವುದಿಲ್ಲ. ರೌಡಿಗಳನ್ನು ಬಿಟ್ಟು ಇವನನ್ನು ಹೊಡೆಸುತ್ತಾಳೆ. ರೆಡ್ ಬಿಯರ್ಡ್ ಎಲ್ಲರ ಜೊತೆಗೆ ಹೊಡೆದಾಡಿ, ಆ ಒಟಾಯೊ ಎನ್ನುವ ಹುಡುಗಿಯನ್ನು ಕರೆದುಕೊಂಡು ಬರುತ್ತಾನೆ.

ಆನಂತರ ಒಟಾಯೊಗೆ ಈ ರೆಡ್ ಬಿಯರ್ಡ್ ನ ಆಸ್ಪತ್ರೆಯಲ್ಲಿ ಹೊಂದಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ಯಾವುದೇ ಗಂಡಸರನ್ನೂ ನೋಡಿದರೂ ಅನುಮಾನಿಸಿ ಹೊಡೆಯುತ್ತಿರುತ್ತಾಳೆ. ಅಂತಹ ಒಟಾಯೊಳನ್ನು ಪ್ರೀತಿಯಿಂದ ಒಲಿಸಿಕೊಂಡ ರೆಡ್ ಬಿಯರ್ಡ್, ಅವಳನ್ನು ಸಾಮಾನ್ಯ ಮನುಷ್ಯಳನ್ನಾಗಿ ಮಾಡುತ್ತಾನೆ. ಆಸ್ಪತ್ರೆಯಲ್ಲಿರುವವರು  ಕೂಡ ಈಕೆಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಇದನ್ನೆಲ್ಲಾ ಗಮನಿಸುತ್ತಿದ್ದ ಯಸೊಮೊಟೆಗೆ, ರೆಡ್ ಬಿಯರ್ಡ್ ಹೇಳುವುದರಲ್ಲಿ ಅರ್ಥವಿದೆ ಎಂದನಿಸಲು ಆರಂಭವಾಗುತ್ತದೆ. ಮನುಷ್ಯನ ಪ್ರೀತಿಯಿಂದ ಮಾತ್ರ ಇಂತಹ ಖಾಯಿಲೆ ಗುಣವಾಗುವುದು. ಔಷಧಿಯಿಂದ ಅಲ್ಲ ಎಂಬುದನ್ನು ಅರಿತುಕೊಳ್ಳುತ್ತಾನೆ.

ಈ ಸಿನಿಮಾದಲ್ಲಿ ಕಂಡುಬರುವ ಮತ್ತೊಂದು ದೃಶ್ಯದಲ್ಲಿ, ಔಷಧಿ ಕೊಡುವಂತಹ ಪಿಂಗಾಣಿ ಪಾತ್ರೆ ಹೊಡೆದು ಹೋಗುತ್ತದೆ. ರೆಡ್ ಬಿಯರ್ಡ್ ಗೆ ಇದನ್ನು ಕಂಡು ಬಹಳ ಬೇಸರವಾಗುತ್ತದೆ. ಕೆಲವು ದಿನಗಳ ನಂತರ ಆಸ್ಪತ್ರೆಯಿಂದ ದಿಢೀರ್ ಆಗಿ ಕಾಣೆಯಾಗುವ ಒಟಾಯೊ, ಬೀದಿಬದಿಯಲ್ಲಿ ನಿಂತು ಭಿಕ್ಷೆ ಬೇಡುತ್ತಿರುತ್ತಾಳೆ. ಅಲ್ಲಿ ಸಂಗ್ರಹವಾದ ಹಣದಿಂದ ಅದೇ ತರಹದ ಒಂದು ಪಿಂಗಾಣಿ ಪಾತ್ರೆಯನ್ನು ಕೊಂಡುಕೊಂಡು ಬರುತ್ತಾಳೆ. ಆದರೆ ದಾರಿ ಮಧ್ಯದಲ್ಲಿ ಯಸುಮೊಟೊನನ್ನು ಕಂಡು ಹೆದರಿ, ಕೈಯಲ್ಲಿದ್ದ ಪಿಂಗಾಣಿ ಪಾತ್ರೆಯನ್ನು ಬಿಟ್ಟುಬಿಡುತ್ತಾಳೆ. ಆ ಪಾತ್ರೆ ಕೂಡ ಒಡೆದು ಹೋಗುತ್ತದೆ. ಈ ರೀತಿ 12 ವರ್ಷದ ಮಗು ರೋಗದಿಂದ ಹೊರಬಂದು, ಸಾಮಾನ್ಯ ಸ್ಥಿತಿಗೆ ಬರುವಂತೆ ಚಿಕಿತ್ಸೆ ಕೊಡುವ ಪ್ರಕ್ರಿಯೆ ಅದ್ಭುತವಾಗಿದೆ.

ಮತ್ತೊಂದು ಕಥೆಯಲ್ಲಿ ಕುಟುಂಬವೊಂದು, “ಈ ಜೀವನ ಇರುವುದು ಬದುಕುವುದಕ್ಕಾಗಿ ಅಲ್ಲ” ಎಂದು ನಿರ್ಧರಿಸಿ, ವಿಷ ಕುಡಿದು ಪ್ರಾಣ ತ್ಯಜಿಸುತ್ತಾರೆ. ಆದರೆ ಆ ಕುಟುಂಬದ ಚೋಬು ಎನ್ನುವ ಹುಡುಗನನ್ನು ಉಳಿಸಿಕೊಳ್ಳುವ ಕ್ರಮ ಬಹಳ ಅದ್ಭುತವಾಗಿ ಚಿತ್ರದಲ್ಲಿ ಮೂಡಿಬಂದಿದೆ. ಬದುಕುಳಿದ ಚೋಬು ಮತ್ತು  ಒಟಾಯೊಗೆ ಗೆಳೆತನ ಬೆಳೆಯುತ್ತದೆ. ಈ ತೆರನಾದ ಬೇರೆ ಬೇರೆ ಕಥೆಗಳಿಗೆ ಮತ್ತು ಉಪಕಥೆಗಳಿಗೆ ಅರ್ಥವನ್ನು ಕೊಡುತ್ತಾ ಹೋಗುತ್ತಾರೆ ಕುರೋಸಾವ.

ಈ ಸಿನಿಮಾ ಕೇವಲ ವೈದ್ಯ ಮತ್ತು ಆತನ ಶಿಷ್ಯನ ಕಥೆ ಅಲ್ಲದೇ, ಇಡೀ ಸಮಾಜದ ಜನರನ್ನು ನೋಡುವ ಕ್ರಮ ಹಾಗೂ ವೈದ್ಯ ಪದ್ಧತಿಯ ರೀತಿಯನ್ನು ವ್ಯಾಖ್ಯಾನಿಸುತ್ತದೆ. ರೆಡ್ ಬಿಯರ್ಡ್ ಪಾತ್ರ ಮಾಡಿರುವ ತುಶಿರೋ ಮಿಫ್ಯುನೆ ಅಮೋಘವಾಗಿ ನಟಿಸಿದ್ದಾರೆ. ಇದರಲ್ಲಿ ಕುರೋಸಾವ ತನ್ನ ಎಲ್ಲಾ ಸಿನಿಮಾಗಳ ಭಾಷೆ ಮತ್ತು ಎಲ್ಲಾ ಪರಿಕರಗಳನ್ನು ಬಳಸಿರುವುದನ್ನು ನೋಡಬಹುದು. ಸಿನಿಮಾ ಎಂದಿಗೂ ಅನುಭವಯುತ ಮತ್ತು ವೈಚಾರಿಕವಾಗಿ ಇರಬೇಕು. ಅನುಭವವಾಗಬೇಕಾದರೆ ಸಿನಿಮಾದ ವ್ಯಾಕರಣವನ್ನು ಅದ್ಬುತವಾಗಿ ವರ್ಣಿಸಬೇಕು. ಕುರೋಸಾವ ಈ ಪ್ರಯತ್ನದಲ್ಲಿ ಯಶಸ್ಸು ಗಳಿಸಿದ್ದಾರೆ.

– ಗಿರೀಶ್ ಕಾಸರವಳ್ಳಿ

0 Comments

Submit a Comment

Your email address will not be published. Required fields are marked *

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more