ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

‘ಭುವನ್ ಶೋಮ್’, 1969ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ. ಈ ಚಿತ್ರವನ್ನು ನಿರ್ದೇಶಿಸಿದವರು ಮೃಣಾಲ್ ಸೇನ್. ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾವಿದು. ಇದು ಬಿಡುಗಡೆಯಾಗುವ ಮುನ್ನ, ಮುಖ್ಯವಾಹಿನಿ ಚಿತ್ರಗಳನ್ನು ಹೊರತುಪಡಿಸಿ, ಉಳಿದ ಸಿನಿಮಾಗಳಿಗೆ ನಿರ್ಮಾಪಕರು ದೊರಕುತ್ತಿರಲಿಲ್ಲ. ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಭಾರತೀಯ ಚಿತ್ರಗಳ ಗುಣಮಟ್ಟ ಹೆಚ್ಚಿಸುವ ದೃಷ್ಟಿಕೋನ ಹೊಂದಿದ್ದರು. ಅದರಂತೆ ಇಂದಿರಾಗಾಂಧಿ ಫಿಲ್ಮ್ ಪೈನಾನ್ಸ್ ಕಾರ್ಪೋರೇಶನ್ (Film Finance Corporation) ಪ್ರಾರಂಭಿಸಿದರು. ಇದರ ಉದ್ದೇಶ, ಹೊಸ ರೀತಿಯ ಮತ್ತು ಹೊಸ ಸಂವೇದನೆಯ ಸಿನಿಮಾಗಳಿಗೆ ಹಣದ ವ್ಯವಸ್ಥೆ ಮಾಡಿಕೊಡುವುದು. ಹೀಗೆ ನಿರ್ಮಾಣವಾದ ಮೊದಲ ಮೂರು ಚಿತ್ರಗಳಲ್ಲೊಂದು ‘ಭುವನ್ ಶೋಮ್’.

ಭುವನ್ ಶೋಮ್ ಎನ್ನುವ ವ್ಯಕ್ತಿ, ನಿಯಮಾವಳಿಗಳನ್ನು ಪಾಲಿಸುವ ನಿಷ್ಠಾವಂತ ರೈಲ್ವೆ ಅಧಿಕಾರಿ. ಸಹೋದ್ಯೋಗಿಗಳು ಈತನನ್ನು ಸರ್ವಾಧಿಕಾರಿ ಎಂದು ಕರೆಯುತ್ತಿರುತ್ತಾರೆ. ಒಮ್ಮೆ ಈ ಅಧಿಕಾರಿಯನ್ನು ಕೆಲಸದಿಂದ ವಜಾಗೊಳಿಸಲಾಗುತ್ತದೆ. ಇದರಿಂದ ಆತನಿಗೆ ಜೀವನದಲ್ಲಿ ಏಕತಾನತೆ (ಅಸ್ಥಿರತೆ) ಆವರಿಸಿ, ಬೇಟೆಯಾಡಲೆಂದು ಗುಜರಾತಿನ ಸೌರಾಷ್ಟ್ರಕ್ಕೆ ತೆರಳುತ್ತಾನೆ. ಈ ಸ್ಥಳದಲ್ಲಿ ಮುಗ್ದ ಮನಸ್ಸಿನ ಹಾಗೂ ಕೋಣವೊಂದನ್ನು ಸಾಕುತ್ತಿರುವ ಹುಡುಗಿಯೊಬ್ಬಳ ಪರಿಚಯವಾಗುತ್ತದೆ. ಬೇಟೆಯ ಸಮಯದಲ್ಲಿ ಈ ಕೋಣ, ಅಧಿಕಾರಿಯನ್ನು ಬೆನ್ನಟ್ಟಿಕೊಂಡು ಬಂದಾಗ ಆ ಹುಡುಗಿಯೇ ಕಾಪಾಡುತ್ತಾಳೆ.

ಆತನ ಬೇಟೆಯಾಡುವ ಉದ್ದೇಶವನ್ನು ತಿಳಿದ ಹುಡುಗಿಯು “ಈ ತೆರನಾದ ಕೋಟು, ಪ್ಯಾಂಟು, ಹ್ಯಾಟ್ ಹಾಕಿಕೊಂಡು, ಬೇಟೆಗಾಗಿ ಬಂದರೆ ಯಾವ ಪ್ರಾಣಿಯೂ ಸಿಗುವುದಿಲ್ಲ. ನಿಮ್ಮನ್ನು ಈ ವೇಷದಲ್ಲಿ ಪ್ರಾಣಿಗಳು ನೋಡಿದರೆ, ಅಪರಿಚಿತ ಎಂದು ಭಾವಿಸುತ್ತವೆ” ಎಂದು ಹೇಳುತ್ತಾಳೆ. ಮಾತ್ರವಲ್ಲ ಈತನ ವ್ಯಕ್ತಿತ್ವವನ್ನು ಹಂತ ಹಂತವಾಗಿ ಬದಲಾಯಿಸುತ್ತಾಳೆ. ಅವನಿಗೆ ಸೌರಾಷ್ಟ್ರದ ಉಡುಪು, ಪೇಟ, ಜುಬ್ಬವನ್ನು ಕೊಟ್ಟು, ಅಲ್ಲಿನ ಪ್ರಕೃತಿಗೆ ತಕ್ಕಂತೆ ಆತನ ನಡವಳಿಕೆಯನ್ನು ತಿದ್ದುತ್ತಾಳೆ. ಈಕೆಯ ಒಡನಾಟನಿಂದ ಅಧಿಕಾರಿಯು ತನ್ನ ಕ್ರೂರತನದ ಬಗ್ಗೆ ಚಿಂತಿಸುತ್ತಾ ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ. ತದನಂತರ ತನ್ನ ವೃತ್ತಿಗೆ ಮರಳಿ, ಅನುಕಂಪ ಇರುವ ಅಧಿಕಾರಿಯಾಗಿ ಬದಲಾಗುತ್ತಾನೆ.

ಈ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಕೆಲ ಆಕ್ಷೇಪಣೆಗಳು ಎದುರಾಗುತ್ತವೆ. ನಿರ್ದೇಶಕ ಸತ್ಯಜಿತ್ ರಾಯ್ ಕೂಡ “what is so great about the film” ಎಂದು ಕಟುವಾಗಿ ಟೀಕೆ ಮಾಡಿದ್ದರು. ಈ ಸಿನಿಮಾದ ಕಥಾಹಂದರದಲ್ಲಿ ಹೊಸತನ ಕಾಣುವುದಿಲ್ಲ. ಆದರೆ ಇದು ಮಂಡಿಸುವ ಕ್ರಮದಲ್ಲಿ ಹೊಸತನವಿದೆ. ಭಾರತೀಯ ಸಿನಿಮಾ ರಂಗದಲ್ಲಿ ಕಥಾಹಂದರವನ್ನು ಕಟ್ಟಬೇಕಾದರೆ, ಗುರುತಿಸಲು ಸಾಧ್ಯವಾಗುವ ಪಾತ್ರಗಳು, ಭಾವನಾತ್ಮಕತೆ, ಅಪ್ಯಾಯಮಾನವಾದ ಸಂಗೀತ ಮತ್ತು ಏಕಾಗ್ರತೆಗೆ ಭಂಗವಾಗದಂತೆ ಕಥಾನಕದ ಹರಿವು ಇರಬೇಕು ಎನ್ನುವ ನಿಯಮವಿತ್ತು. ಇವೆಲ್ಲವನ್ನೂ ಪೂರ್ಣವಾಗಿ ಛಿದ್ರಗೊಳಿಸಿ, ವಿಭಿನ್ನ ರೀತಿಯಲ್ಲಿ ನಿರ್ಮಾಣ ಮಾಡಿದ ಸಿನಿಮಾ ‘ಭುವನ್ ಶೋಮ್’.   

ಮೃಣಾಲ್ ಸೇನ್, ಈ ಸಿನಿಮಾದಲ್ಲಿ ಗುಣಲಕ್ಷಣ (Characterization), ವ್ಯಂಗ್ಯ (Caricature) ಮತ್ತು ವಿಡಂಬನೆಗೆ (Parody) ಹೆಚ್ಚು ಒತ್ತು ಕೊಟ್ಟಿದ್ದಾರೆ. ಚಿತ್ರದ ಪ್ರಧಾನ ಪಾತ್ರವನ್ನೇ ವ್ಯಂಗ್ಯದ ಮೂಲಕ ತೋರಿಸಲಾಗಿದೆ. ಸಿನಿಮಾ ರಂಗದಲ್ಲಿ ಪ್ರಧಾನ ಪಾತ್ರಕ್ಕೆ ಹೆಚ್ಚು ಗೌರವ ಮತ್ತು ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ. ಆದರೆ ಈ ಸಿನಿಮಾದಲ್ಲಿ ಕರ್ತೃ, ತನ್ನ ಸೃಷ್ಟಿಯ ಬಗ್ಗೆ ವ್ಯಂಗ್ಯ ಭಾವನೆ ಇಟ್ಟುಕೊಂಡಿರುತ್ತಾನೆ. ಈ ಶೈಲಿಯಿಂದ ಪ್ರೇಕ್ಷಕ ವಿಭಿನ್ನ ರೀತಿಯಲ್ಲಿ ಸಿನಿಮಾವನ್ನು ಗ್ರಹಿಸಬಹುದು.

ಕುತೂಹಲವೆಂದರೆ ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

ವಿವೇಕಾನಂದ, ರವೀಂದ್ರನಾಥ್ ಟ್ಯಾಗೋರ್, ಸತ್ಯಜಿತ್ ರಾಯ್, ಪಂಡಿತ್ ರವಿಶಂಕರ್ ಅವರ ಮಾತೃಭೂಮಿಯಾದ ಕಲ್ಕತ್ತಾದಲ್ಲಿ, ಈ ಭುವನ್ ಶೋಮ್ ಹುಟ್ಟಿದ್ದು ಹಾಗೂ ಬೆಳೆದಿದ್ದು ಎಂದು ಸಿನಿಮಾದ ಆರಂಭದಲ್ಲಿ ಹೇಳಲಾಗಿದೆ. ತದನಂತರ ಕಲ್ಕತ್ತಾದ ನಕ್ಸಲೈಟ್, ಕೊಲೆ, ಗಲಭೆಗಳಂತಹ ಗಂಭೀರ ಸ್ಥಿತಿಯನ್ನು ಚಿತ್ರಿಸಲಾಗಿದೆ. ಹ್ಯಾಂಡೆಲ್ಡ್ ಕ್ಯಾಮೆರಾ ಬಳಸಿ ರೈಲು, ಎಮ್ಮೆಗಳು ಮತ್ತು ಇತ್ಯಾದಿ ಸನ್ನಿವೇಶಗಳನ್ನು ಸೆರೆಹಿಡಿದಿದ್ದಾರೆ.

ಸಾಕ್ಷ್ಯಚಿತ್ರ ಮತ್ತು ನ್ಯೂಸ್ ರೀಲ್ ಅಂಶಗಳನ್ನು ಕಥಾಚಿತ್ರದೊಳಗೆ ತಂದಿರುವುದು ಸಿನಿಮಾದ ಹೆಗ್ಗಳಿಕೆ. Mixed Media Presentations ಶೈಲಿಯಾದ ಇನ್ಸ್ಟಾಲೇಷನ್, ಪೇಂಟಿಂಗ್ ಮತ್ತು ವಾಟರ್ ಕಲರ್ ಬಳಸಿಕೊಂಡು ದೃಶ್ಯಗಳನ್ನು ಕಟ್ಟಿಕೊಡಲಾಗಿದೆ. ಹೀಗೆ ಚಿತ್ರಿಸುವ ಮೂಲಕ ಪ್ರೇಕ್ಷಕ ವಿಭಿನ್ನ ರೀತಿಯಲ್ಲಿ ಸಿನಿಮಾವನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಭುವನ್ ಶೋಮ್ ಕಥೆ ನಿರೂಪಣೆ ಮಾಡುತ್ತಿದ್ದರೂ, ಭಾರತದ ಕೈಗಾರೀಕರಣ ಮತ್ತು ಗ್ರಾಮದ ನಡುವಿನ ವ್ಯತ್ಯಾಸವನ್ನೂ ಸಹ ತೋರಿಸಲಾಗಿದೆ. ಇದು ಮೃಣಾಲ್ ಸೇನ್ ಅವರ ರಾಜಕೀಯ ಪ್ರಜ್ಞೆ ಎಂದಿಗೂ ಜಾಗೃತವಾಗಿರುತ್ತದೆ ಎಂಬುದಕ್ಕೆ ಸಾಕ್ಷಿ.

ಈ ಭುವನ್ ಶೋಮ್ ವ್ಯಕ್ತಿಯು ಶಿಸ್ತಿನ ಅಧಿಕಾರಿಯಾಗಿದ್ದರಿಂದ, ರೈಲು ಸರಿಯಾದ ಸಮಯಕ್ಕೆ ಹೊರಡಬೇಕು ಎಂದು ಆದೇಶ ಹೊರಡಿಸಿರುತ್ತಾನೆ. ಈ ಚಿತ್ರಕಥೆ ಒಂದು ಭಾಗವಾದರೆ, ಬೇಟೆಗಾಗಿ ಹೊರಡುವುದು ಮತ್ತೊಂದು ಭಾಗ. ಬೇಟೆಯಾಡುವ ಸಂದರ್ಭದಲ್ಲಿ ಪ್ರಾಣಿಗಳು ಸರಿಯಾದ ಸಮಯಕ್ಕೆ ಸಿಗುವುದಿಲ್ಲ. ಹೀಗಾಗಿ ಬೇಟೆಗಾಗಿ ಕಾಯುವುದು ನಿರರ್ಥಕವಲ್ಲ. ಆದರೆ ರೈಲಿಗಾಗಿ ಕಾಯುವುದು ನಿರರ್ಥಕ ಎಂದು, ಕಾಲ ನಿರ್ಣಯದ ಪ್ರಾಮುಖ್ಯತೆಯನ್ನು ಹೇಳಲಾಗಿದೆ. ಬೇಟೆಗೆ ಸಹಾಯ ಮಾಡುವ ಹುಡುಗಿಯಾಗಿ, ಸುಹಾಸಿನಿ ಮೂಲ್ಯೆ ಅವರು ಬಹಳ ಅದ್ಭುತವಾಗಿ ನಟಿಸಿದ್ದಾರೆ. ಇವರ ಪಾತ್ರದ ಮುಗ್ದತೆ ಮತ್ತು ಪ್ರೀತಿ ಮನೋಜ್ಞವಾಗಿ ಮೂಡಿಬಂದಿದೆ. ಅಧಿಕಾರಿಯಾಗಿ ಉತ್ಪಲ್ ದತ್ ಅಭಿನಯಿಸಿದ್ದಾರೆ.

ರೈಲ್ವೆ ಇಲಾಖೆಯ ಶಿಸ್ತಿನ ಸಂವೇದನೆಗೂ ಮತ್ತು ಬೇಟೆಯ ಸಂವೇದನೆಗೂ ವ್ಯತ್ಯಾಸವಿದೆ. ಅಂದರೆ ಅಧಿಕಾರಿಯಾಗಿದ್ದ ಸಂವೇದನೆ ಮತ್ತು ಗ್ರಾಮೀಣ ಮನುಷ್ಯನ ಸಂವೇದನೆಯನ್ನು ಜೋಡಿಸುವ ಮೂಲಕ ವ್ಯಕ್ತಿತ್ವದ ವ್ಯತ್ಯಾಸವನ್ನು ಹೇಳಲಾಗಿದೆ. ಈ ವೈವಿಧ್ಯತೆಯನ್ನು ತೋರಿಸುತ್ತಾ, ಭಾರತೀಯ ಸಿನಿಮಾರಂಗಕ್ಕೆ ಹೊಸ ಕಸುವು ಮತ್ತು ದೃಷ್ಟಿಯನ್ನು ತಂದುಕೊಟ್ಟಿದೆ ಭುವನ್ ಶೋಮ್ ಸಿನಿಮಾ. ಆದರೆ ಇದು ಪೂರ್ಣ ಸಫಲಗೊಂಡ ಸಿನಿಮಾ ಎಂದು ಹೇಳಲಾಗುವುದಿಲ್ಲ. ಏಕೆಂದರೆ ನಿರ್ದೇಶಕರಾದ ಮೃಣಾಲ್ ಸೇನ್, ನಿರ್ದೇಶನದಲ್ಲಿ ಸ್ವಲ್ಪ ಮಟ್ಟಿಗೆ ಹದ ತಪ್ಪಿದ್ದಾರೆ. ವ್ಯಕ್ತಿತ್ವವನ್ನು ವ್ಯಂಗ್ಯಚಿತ್ರದ (Caricaturing) ಮೂಲಕ ತೋರಿಸುವಾಗ, ಪಾತ್ರದಲ್ಲಿ ಉಡಾಫೆ ಎದ್ದು ಕಾಣುವುದು. ಗ್ರಾಮೀಣ ಹುಡುಗಿಯ ಬಗ್ಗೆ ಕಂಡುಬರದ ಉಡಾಫೆಯ ಮನೋಭಾವ ಅಧಿಕಾರಿ ಬಗ್ಗೆ ನಿರೂಪಣೆ ಮಾಡುವಾಗ ಕಂಡು ಬರುತ್ತದೆ.  

ಸಿನಿಮಾವೊಂದನ್ನು ನಿರ್ಮಿಸುವಾಗ ಅದರ ಒಟ್ಟು ಅಂದಕ್ಕೆ ಮಹತ್ವ ಕೊಡಲಾಗುತ್ತದೆ. ಉದಾಹರಣೆ: ಸಮಗ್ರ ಶಿಲ್ಪ ಅಥವಾ ಸಾವಯವ ಶಿಲ್ಪಶೈಲಿ ಹೊಂದಿರುವ ಫ್ರೆಂಚ್ ನ್ಯೂ ವೇವ್ ಸಿನಿಮಾಗಳು. ನಿರ್ದೇಶಕ ಜಾನ್ ಲುಕ್ ಗೊದಾರ್ದ್ ಸಿನಿಮಾಗಳಲ್ಲಿ ಈ ಶೈಲಿ ಗಮನಿಸಬಹುದು. ಆದರೆ ಭುವನ್ ಶೋಮ್ ಚಿತ್ರದಲ್ಲಿ ಈ ಶೈಲಿ ಕಂಡುಬಂದಿಲ್ಲ. ಒಟ್ಟಾರೆ ಕೃತಿಯಲ್ಲಿಯೇ ಕೊಂಚ ಅಸಮತೋಲನವಿರುವುದು ಗಮನಕ್ಕೆ ಬರುತ್ತದೆ.

‘ಭುವನ್ ಶೋಮ್’ ಸಿನಿಮಾವು ಭಾರತೀಯ ಚಿತ್ರರಂಗಕ್ಕೆ ಹೊಸ ಕಸುವು ಮತ್ತು ಹೊಸ ರೀತಿಯ ಬಿಂಬನ ಕ್ರಮವನ್ನು ತಂದು ಕೊಟ್ಟಿದೆ. ಛಾಯಾಗ್ರಾಹಕ ಕೆ.ಕೆ ಮಹಾಜನ್, ಸ್ಟುಡಿಯೋ ಮಾದರಿಯ ಛಾಯಾಗ್ರಾಹಣ ಬಿಟ್ಟು, ಬೇರೊಂದು ರೀತಿಯ ಬೆಳಕಿನ ವಿನ್ಯಾಸವನ್ನ ಅಳವಡಿಸಿಕೊಳ್ಳಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ಈ ತರಹದ ಶೈಲಿಯು ‘ಕಲ್ಕತ್ತಾ 71’ (Culcutta 71-1972) ಚಿತ್ರದಲ್ಲೂ ಇದೆ.

ಈ ಸಿನಿಮಾದ ಶಬ್ದಗಳು ಮತ್ತು ಸಂಗೀತದ ಬಗ್ಗೆ ಕೊಂಚ ಅನುಮಾನಗಳಿವೆ. ಈ ಕಾರಣಗಳಿಂದ ಒಂದು ಕಲಾಕೃತಿಯಾಗಿ ಸಿನಿಮಾ ಯಶಸ್ವಿಯಾಗದಿದ್ದರೂ, ಪರಿಣಾಮದ ದೃಷ್ಟಿಯಿಂದ ಯಶಸ್ವಿಯಾಗಿದೆ. ಈ ಚಿತ್ರಕ್ಕೆ ಗೋಲ್ಡನ್ ಲೋಟಸ್ ಪ್ರಶಸ್ತಿ, ಉತ್ಪಲ್ ದತ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಮೃಣಾಲ್ ಸೇನ್ ಅವರಿಗೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಲಭಿಸಿದೆ.

-ಗಿರೀಶ್ ಕಾಸರವಳ್ಳಿ

0 Comments

Submit a Comment

Your email address will not be published. Required fields are marked *

Related Articles

Related

Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more
ಕಲೆ ಮತ್ತು ಕಲಾವಿದರ ನಡುವಿನ ಸಂಬಂಧ ಹಳಿ ತಪ್ಪುತ್ತಿದೆಯೇ ? ‘ಡೇ ಫಾರ್ ನೈಟ್’ ವಿಶ್ಲೇಷಣೆ

ಕಲೆ ಮತ್ತು ಕಲಾವಿದರ ನಡುವಿನ ಸಂಬಂಧ ಹಳಿ ತಪ್ಪುತ್ತಿದೆಯೇ ? ‘ಡೇ ಫಾರ್ ನೈಟ್’ ವಿಶ್ಲೇಷಣೆ

‘ಡೇ ಫಾರ್ ನೈಟ್’ ಸಿನಿಮಾ ವೀಕ್ಷಿಸಿದ ನಿರ್ದೇಶಕ ಜಾನ್ ಲುಕ್ ಗೊದಾರ್ದ್, “ಇದೊಂದು ಕೆಟ್ಟ ಸಿನಿಮಾ. ಇದನ್ನು ಏತಕ್ಕಾಗಿ ನಿರ್ದೇಶನ ಮಾಡಿದೆ? ನಾನು ಮಾಡುವ ಸಿನಿಮಾದ ವಿರುದ್ಧವಾಗಿದೆ ಇದು” ಎಂದು ಫ್ರಾಂಕೋಯಿಸ್ ಥ್ರೂಫೋಗೆ ಸಿಟ್ಟಾಗಿ ಪ್ರತಿಕ್ರಿಯಿಸುತ್ತಾನೆ. ಆ ವೇಳೆ ಥ್ರೂಫೋ ಯಾವುದೇ ಮಾತನ್ನು ಹೇಳದೆ ಮೌನವಾಗುತ್ತಾನೆ. ಫ್ರಾಂಕೋಯಿಸ್ ಥ್ರೂಫೋ ನಿಧನರಾದಾಗ ಗೊದಾರ್ದ್, “ನಾನು ನೀಡಿದ ಹೇಳಿಕೆ ನಿಜಕ್ಕೂ ತಪ್ಪು. ಥ್ರೂಫೋ ಮಾಡಿದ್ದೇ ಸರಿ” ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ.

read more