1973ರಲ್ಲಿ ಬಿಡುಗಡೆಯಾದ ಫ್ರೆಂಚ್ ಸಿನಿಮಾ ‘ಡೇ ಫಾರ್ ನೈಟ್’. ಇದರ ನಿರ್ದೇಶಕ ಫ್ರಾಂಕೋಯಿಸ್ ಥ್ರೂಫೋ. ಈ ಚಿತ್ರ ಬಿಡುಗಡೆಯಾದ ವರ್ಷದಲ್ಲೇ ಆಸ್ಕರ್ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಕಥಾಹಂದರ ಬಹಳ ಸರಳ. ಈ ಸಿನಿಮಾದೊಳಗೆ ತಂಡವೊಂದು ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗುತ್ತದೆ. ಆದರೆ ನೂರಾರು ತೊಂದರೆಗಳು ಎದುರಾಗುವುದರಿಂದ ಚಿತ್ರೀಕರಣ ಪೂರ್ಣಗೊಳ್ಳುವುದಿಲ್ಲ. ಇಟಾಲಿಯನ್ ನಟಿಯೊಬ್ಬಳಿಗೆ ಫ್ರೆಂಚ್ ಭಾಷೆ ಬರುವುದಿಲ್ಲ. ಪ್ರತಿಬಾರಿಯೂ ಡೈಲಾಗ್ ಹೇಳುವುದರಲ್ಲಿ ಎಡವುತ್ತಿರುತ್ತಾಳೆ. “ನೋಡಿ, ನನಗೆ ಡೈಲಾಗಿ ನೆನಪಿರುವುದಿಲ್ಲ. ಫೆಡ್ರಿಕೋ ಫೆಲ್ಲಿನಿಯಂತೆ ನಂಬರ್ ಮಾತ್ರ ಹೇಳುತ್ತೇನೆ, ಅದನ್ನು ನೀವು ಬರೆದುಕೊಳ್ಳಿ” ಎನ್ನುತ್ತಾಳೆ. ಇದನ್ನು ಕೇಳಿದ ಸಹಾಯಕ ನಿರ್ದೇಶಕನೊಬ್ಬ, “ಇಲ್ಲ. ನೀವು ಡೈಲಾಗ್ ಹೇಳಲೇಬೇಕು” ಎಂದು ಒತ್ತಾಯಿಸುತ್ತಾನೆ. ಕೊನೆಗೂ ಈಕೆಗೆ ಡೈಲಾಗ್ ಹೇಳಲು ಸಾಧ್ಯವಾಗುವುದಿಲ್ಲ.
ಚಿತ್ರಕಥೆಯ ಪ್ರಕಾರ ಬೆಕ್ಕೊಂದು ಹಾಲು ಕುಡಿಯುವ ದೃಶ್ಯವನ್ನು ಸೆರೆಯಿಡಿಯಬೇಕಾಗಿತ್ತು. ಆದರೆ ಎಷ್ಟೇ ಪ್ರಯತ್ನಿಸಿದರೂ ಬೆಕ್ಕು ಹಾಲು ಕುಡಿಯುವುದಿಲ್ಲ. ಮತ್ತೊಂದೆಡೆ ಸಹಾಯಕ ನಿರ್ದೇಶಕನೊಬ್ಬ ತನ್ನ ಗೆಳತಿ ಸದಾ ಜೊತೆಗಿರಲಿ ಎಂದು, “ಸಿನಿಮಾ ಕೆಲಸದವಳೆಂದು” ಹೇಳಿ ಕರೆತಂದಿರುತ್ತಾನೆ. ಆದರೆ ಸಾಹಸ ನಿರ್ದೇಶಕನಿಗೆ ಈ ಸಹಾಯಕ ನಿರ್ದೇಶಕನ ಗೆಳತಿಯ ಮೇಲೆ ಪ್ರೇಮಾಂಕುರವಾಗಿ ಆಕೆಯನ್ನು ಕರೆದುಕೊಂಡು ಹೋಗಿಬಿಡುತ್ತಾನೆ. ಅಂತೆಯೇ ನಟ, ನಟಿಯರ ಹಲವಾರು ಸಮಸ್ಯೆಗಳಿರುತ್ತವೆ. ಹೀಗೆ ಎದುರಾಗುವ ಯಾವ ಸಮಸ್ಯೆಗಳು ಇತ್ಯರ್ಥವಾಗದೆ, ಕೊನೆಗೆ ಚಿತ್ರೀಕರಣಕ್ಕೆ ಅಂತ್ಯ ಹಾಡಲಾಗುತ್ತದೆ. ಇದು ‘ಡೇ ಫಾರ್ ನೈಟ್’ ಸಿನಿಮಾದ ಕಥೆ.
ಚಿತ್ರದಲ್ಲಿ ತಾತ್ವಿಕ ಆಯಾಮಗಳು ಇರಬೇಕಲ್ಲವೇ ? ಈ ತರಹದ ಸಮಸ್ಯೆಗಳನ್ನು ತರುವುದು ಎಷ್ಟು ಮುಖ್ಯ? ಎಂಬ ಪ್ರಶ್ನೆಗಳು ಮೂಡುವುದು ಸಹಜ. ಫೆಡ್ರಿಕೋ ಫೆಲಿನಿ ನಿರ್ದೇಶನದ ‘ಏಯ್ಟ್ ಅಂಡ್ ಹಾಫ್ (8 ½). ಚಿತ್ರದಲ್ಲಿ ಕಲೆ, ಸೃಜನಾತ್ಮಕತೆ ಮತ್ತು ಸ್ಫೂರ್ತಿ ಎಂದರೇನು? ಎಂಬ ಹಲವಾರು ಪ್ರಶ್ನೆಗಳನ್ನು ಎತ್ತಲಾಗುತ್ತದೆ. ಡೇ ಫಾರ್ ನೈಟ್’ ಚಿತ್ರ ವಿಮರ್ಶಿಸುವಾಗ ಏಯ್ಟ್ ಅಂಡ್ ಹಾಫ್ ಸಿನಿಮಾವೂ ನೆನಪಾಗುತ್ತದೆ.
‘ಡೇ ಫಾರ್ ನೈಟ್’ ಸಿನಿಮಾ ವೀಕ್ಷಿಸಿದ ನಿರ್ದೇಶಕ ಜಾನ್ ಲುಕ್ ಗೊದಾರ್ದ್, “ಇದೊಂದು ಕೆಟ್ಟ ಸಿನಿಮಾ. ಇದನ್ನು ಏತಕ್ಕಾಗಿ ನಿರ್ದೇಶನ ಮಾಡಿದೆ? ನಾನು ಮಾಡುವ ಸಿನಿಮಾದ ವಿರುದ್ಧವಾಗಿದೆ ಇದು” ಎಂದು ಫ್ರಾಂಕೋಯಿಸ್ ಥ್ರೂಫೋಗೆ ಸಿಟ್ಟಾಗಿ ಪ್ರತಿಕ್ರಿಯಿಸುತ್ತಾನೆ. ಆ ವೇಳೆ ಥ್ರೂಫೋ ಯಾವುದೇ ಮಾತನ್ನು ಹೇಳದೆ ಮೌನವಾಗುತ್ತಾನೆ. ಫ್ರಾಂಕೋಯಿಸ್ ಥ್ರೂಫೋ ನಿಧನರಾದಾಗ ಗೊದಾರ್ದ್, “ನಾನು ನೀಡಿದ ಹೇಳಿಕೆ ನಿಜಕ್ಕೂ ತಪ್ಪು. ಥ್ರೂಫೋ ಮಾಡಿದ್ದೇ ಸರಿ” ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ.
50-60ರ ದಶಕದಲ್ಲಿ ನವ ವಾಸ್ತವಿಕತೆ (Neo-realism) ಶೈಲಿ ಸೃಷ್ಟಿಯಾಗಿ ಬಹಳ ಜನಪ್ರಿಯವಾಯಿತು. ಹೊರಗಿನ ಸಾಮಾಜಿಕ ಹಾಗೂ ರಾಜಕೀಯ ತಲ್ಲಣಗಳನ್ನು ಹಸಿ ಹಸಿಯಾಗಿ ಗ್ರಹಿಸಿ, ಅಂತೆಯೇ ಸಿನಿಮಾ ಮಾಡುವ ವಿಧಾನ. ಒಂದಷ್ಟು ನಿರ್ದೇಶಕರು ಈ ಶೈಲಿಯ ವಿರುದ್ಧ ಬಂಡಾಯವೆದ್ದರು. ಈ ಬಂಡಾಯದಿಂದ ಫ್ರೆಂಚ್ ನ್ಯೂ ವೇವ್ ಸಿನಿಮಾಗಳು (New-wave of French Cinema) ತಲೆ ಎತ್ತಿದವು. ಈ ಶೈಲಿಯನ್ನು ಬಿಂಬಿಸುವ ನಿರ್ದೇಶಕರುಗಳಲ್ಲಿ ಫ್ರಾಂಕೋಯಿಸ್ ಥ್ರೂಫೋ ಬಹಳ ಮುಖ್ಯವಾದ ನಿರ್ದೇಶಕ. ಮತ್ತೊಬ್ಬ ಗೊದಾರ್ದ್. ಇವರು Auteur Theory ಮೂಲಕ ಸಿನಿಮಾ ನಿರ್ಮಾಣ ಮಾಡಬೇಕು ಎಂದು ಪ್ರಚಾರ ಮಾಡಿದರು. ಅದೇನೆಂದರೆ, “ಪೂರ್ಣ ಸ್ವಾತಂತ್ರ್ಯದಿಂದ ನಿರ್ದೇಶಕ ಕಥೆಯನ್ನು ಬರೆಯಬೇಕು ಮತ್ತು ಸಿನಿಮಾದ ಪೂರ್ಣ ದರ್ಶನಕ್ಕೆ ನಿರ್ದೇಶಕನೇ ಹಕ್ಕುದಾರ” ಎಂಬುದು ಈ ಥಿಯರಿಯ ಪ್ರಮುಖ ಅಂಶ.
ಈ ಫ್ರೆಂಚ್ ಸಿನಿಮಾಗಳು ಹಾಲಿವುಡ್ ಸಿನಿಮಾಗಳಿಗೆ ತದ್ವಿರುದ್ಧವಾಗಿತ್ತು. ಹಾಲಿವುಡ್ ಚಿತ್ರರಂಗದಲ್ಲಿ ನಿರ್ದೇಶಕನ ಕೆಲಸ ಕೇವಲ ನಿರ್ದೇಶನ ಮಾಡುವುದು. ಚಿತ್ರಕಥೆ ಬರೆಯುವವನು ತನ್ನ ರೂಮಿನಲ್ಲಿ ಕುಳಿತು ಚಿತ್ರಕಥೆ ಬರೆಯುತ್ತಾನೆ. ಸಂಕಲನಕಾರ ಸ್ವತಂತ್ರವಾಗಿ ಕುಳಿತು ತನಗೆ ಕೊಟ್ಟ ಜವಬ್ದಾರಿಯನ್ನು ನಿರ್ವಹಿಸುತ್ತಾನೆ. ಛಾಯಗ್ರಾಹಕನೂ ತನಗೆ ಬೇಕಾದಂತೆ ಚಿತ್ರಿಕರಣ ಮಾಡುತ್ತಾನೆ. ಇವೆಲ್ಲವನ್ನೂ ಒಗ್ಗೂಡಿಸಿ ಒಂದು ಸೂತ್ರಕ್ಕೆ ಕಟ್ಟುವ ವ್ಯಕ್ತಿ ಇರಲಿಲ್ಲ. ಎಲ್ಲವೂ ತಾಂತ್ರಿಕವಾಗಿ ನಿರ್ಮಾಣವಾಗುತ್ತಿದ್ದವೇ ವಿನಃ ದರ್ಶನವಾಗಿ ಚಿತ್ರಿಸುತ್ತಿರಲಿಲ್ಲ. ಇವೆಲ್ಲವೂ ಸರಿಯಾಗಬೇಕೆಂದು Auteur Theory ಹೇಳುತ್ತದೆ. ಈ ನಿಲುವನ್ನು ಫ್ರೆಂಚ್ ನ್ಯೂ ವೇವ್ ನಿರ್ದೇಶಕರು ಪಾಲಿಸಿದರು. ಆದರೆ ಫ್ರಾಂಕೋಯಿಸ್ ಥ್ರೂಫೋ, ತಾನು ನಂಬಿದ ಈ Auteur Theory ಬಗ್ಗೆ ಪ್ರಶ್ನೆ ಮಾಡುವ ಸಿನಿಮಾವನ್ನು ನಿರ್ಮಾಣ ಮಾಡುತ್ತಾನೆ. ಅದೇ ಈ ‘ಡೇ ಫಾರ್ ನೈಟ್’.
ಇಲ್ಲಿ ನಿರ್ದೇಶಕನ ನೋಟವೇ ಒಟ್ಟಾರೆ ಸಿನಿಮಾದ ನೋಟವಾಗಿ ಗುರುತಿಸಲ್ಪಡುತ್ತದೆ. ಆದರೆ ನಿರ್ವಹಣೆ ಸಂದರ್ಭದಲ್ಲಾಗುವ ತೊಂದರೆಗಳಿಂದ, ಆ ನೋಟಗಳು ದಾರಿತಪ್ಪುತ್ತವೆ. ಪ್ರಮುಖವಾಗಿ ನಿರ್ಮಾಪಕನೇ ಕಥೆಯನ್ನು ಬದಲಾಯಿಸುತ್ತಾನೆ. ನಟರು ಡೈಲಾಗ್ ಗಳನ್ನು ಸರಿಯಾಗಿ ಹೇಳದೆ, ತಮ್ಮದೇ ಕತೆಯನ್ನು ಕಟ್ಟುತ್ತಾರೆ. ಬೆಕ್ಕು ಕೂಡ ಹಾಲು ಕುಡಿಯವುದಿಲ್ಲ. ಇದನ್ನು ಕೂಲಂಕುಶವಾಗಿ ಗ್ರಹಿಸಿದ ಥ್ರೂಪೋ “ತೊಂದರೆಗಳು ಹೀಗೆ ಎದುರಾಗುತ್ತಿದ್ದರೆ, ನಾನು Auteur Theory ಪಾಲಿಸಲು ಸಾಧ್ಯವೇ?” ಎನ್ನುವ ಭಾವನೆಗೆ ಬರುತ್ತಾನೆ.
ವಾಲ್ಟರ್ ಬೆಂಜಮಿನ್ ಎಂಬಾತ ‘Art In The Age Of Mechanical Reproduction’ ಎಂಬ ಲೇಖನ ಬರೆದಿದ್ದಾನೆ. ಈ ಲೇಖನದಲ್ಲಿ ನಮ್ಮ ಸಮಕಾಲಿನ ಕಲೆಯ ಬಗ್ಗೆ, ಹೊಸ ಚಿಂತನೆ, ಆಲೋಚನೆ ಮತ್ತು ಒಳನೋಟದ ಕುರಿತು ಬರೆಯಲಾಗಿದೆ. “ಸೃಜನಾತ್ಮಕ ಕಲೆಯನ್ನು ಸೃಷ್ಟಿಸಿದವನೇ, ಆ ಕಲೆಯ ಪೂರ್ಣ ಜವಾಬ್ದಾರಿ ಹೊಂದಿರುತ್ತಾನೆ” ಎಂದು ವಾಲ್ಟರ್ ಹೇಳುತ್ತಾನೆ. ಆದರೆ ಇವತ್ತಿನ ಯಾಂತ್ರಿಕ ಕಾಲಘಟ್ಟದಲ್ಲಿ, ಸೃಷ್ಟಿಯಾದ ಸೃಜನಾತ್ಮಕ ಕಲೆಯೂ, ಅನಂತರ ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ. ತದನಂತರ ಉದ್ಯಮಿಯೊಬ್ಬನ ಪ್ರವೇಶವಾಗಿ, ತನ್ನ ಹಿತಾಸಕ್ತಿಯನುಸಾರ ಉತ್ಪಾದಿಸಲು ಒತ್ತಡ ಹೇರುತ್ತಾನೆ. ಇಲ್ಲಿ ಸೃಷ್ಟಿಕಾರನಿಗಿಂತ, ಉದ್ಯಮಿಯ ಹಿತಾಸಕ್ತಿಯೇ ಪ್ರಮುಖವಾಗುವುದು. ಇದರಿಂದ ಕಲಾವಿದ ಹಾಗೂ ಕಲೆಗೆ ಇದ್ದ ನೇರವಾದ ಸಂಬಂಧ ಹಳಿ ತಪ್ಪುತ್ತಿರುವುದು ದುರಂತ. ಕಲಾವಿದ ಕಲೆಯನ್ನು ಸೃಷ್ಟಿ ಮಾಡಿದ ನಂತರ, ಇದರ ಮಧ್ಯೆ ದಲ್ಲಾಳಿ, ವಿತರಕ, ನಿರ್ಮಾಪಕರು ಪ್ರವೇಶ ಮಾಡುತ್ತಾರೆ. ಆಗ ಕಲೆ ಅಮಾನವೀಯವಾಗುತ್ತದೆ. ಇದು ನಿಜಕ್ಕೂ ನೋವಿನ ಸಂಗತಿ.
ಫ್ರಾಂಕೋಯಿಸ್ ಥ್ರೂಫೋಗೆ “ತನ್ನ ಸಿನಿಮಾ ಕೂಡ, ಉದ್ಯಮಿಯ ಕೈ ಸೇರುತ್ತಿದೆಯೇ ?” ಎಂಬ ಭಾವನೆ ಮೂಡಿರಬಹುದು. ಏಕೆಂದರೆ ಗೊದಾರ್ದ್ ಸಂಪೂರ್ಣವಾಗಿ ವೈಯಕ್ತಿಕ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದ. ಆದರೆ ಥ್ರೂಫೋ, ಕೇವಲ ಒಂದೆರಡು ವೈಯಕ್ತಿಕ ಸಿನಿಮಾಗಳನ್ನು ಮಾತ್ರ ನಿರ್ದೇಶಿಸಿರಬಹುದು. ಈತನ ಮೊದಲ ಸಿನಿಮಾ ‘ದ 400 ಬ್ಲೌವ್ಸ್’ (The 400 Blows- 1959) ತೀರಾ ವೈಯಕ್ತಿಕ ಸಿನಿಮಾ. ತದನಂತರ ಬೇರೆ ಬೇರೆ ಒತ್ತಡಗಳು ಎದುರಾದಾಗ ಸಿನಿಮಾ ಶೈಲಿಯನ್ನು ಬದಲಾಯಿಸುತ್ತಾನೆ. ಈ ಒತ್ತಡಗಳನ್ನೆಲ್ಲಾ ಒಗ್ಗೂಡಿಸಿ ‘ಡೇ ಫಾರ್ ನೈಟ್’ ಸಿನಿಮಾದಲ್ಲಿ ವ್ಯಾಖ್ಯಾನ ಮಾಡಿದ್ದಾನೆ ಮತ್ತು ವ್ಯಾಖ್ಯಾನಿಸಿದ್ದಾನೆ.
ಈ ಸಿನಿಮಾದೊಳಗೆ ಚಿತ್ರಿಕರಿಸಲಾದ ಸಿನಿಮಾದ ಹೆಸರು ‘ಮೀಟ್ ಪಮೇಲಾ’. ಶೂಟಿಂಗ್ ಸಮಯದಲ್ಲಿ ಅನೇಕ ತೊಂದರೆಗಳು ಎದುರಾಗುತ್ತವೆ. ಮಲಗಿದ್ದಾಗ ನಿರ್ದೇಶಕನಿಗೆ ವಿಚಿತ್ರ ಕನಸುಗಳು ಬೀಳುತ್ತಿರುತ್ತವೆ. ಆ ಕನಸಿನಲ್ಲಿ ನಿರ್ದೇಶಕ ಚಿಕ್ಕ ಪ್ರಾಯದ ಹುಡುಗನಾಗಿರುತ್ತಾನೆ. ಮಾತ್ರವಲ್ಲ ‘ಸಿಟಿಜನ್ ಕೇನ್’ (Citizen Kane-1941) ಸಿನಿಮಾದ ಪೋಸ್ಟರ್ ಗಳನ್ನು ಕದಿಯುತ್ತಿರುತ್ತಾನೆ. ಕಾರಣವೇನೆಂದರೆ ಈ ತರಹದ ನಿರ್ದೇಶಕರಿಗೆ ಆರ್ಸನ್ ವೆಲ್ಸ್ ನ ‘ಸಿಟಿಜನ್ ಕೇನ್’ ಸಿನಮಾವೇ ಮಾದರಿ. ನಿರ್ಮಾಣ ಮಾಡಿದರೆ ಇಂತಹ ಸಿನಿಮಾವೇ ಮಾಡಬೇಕೆಂಬುದು ಅನೇಕರ ಉಮೇದು. ‘ಮೀಟ್ ಪಮೇಲ್’ ಸಿನಿಮಾವನ್ನು ‘ಸಿಟಿಜನ್ ಕೇನ್’ ಸಿನಿಮಾದಂತೆ ನಿರ್ದೇಶಿಸಲಾಗುವುದಿಲ್ಲ. “ಇವತ್ತಿನ ಸಿನಿಮಾಗಳಲ್ಲಿ ವೈಯಕ್ತಿಕ ಅಭಿವ್ಯಕ್ತಿಗಳಿಲ್ಲ. ಅಮಾನವೀಯ, ಯಾಂತ್ರಿಕ ಹಾಗೂ ಮಾರುಕಟ್ಟೆಗೆ ಪ್ರೇರಿತವಾಗುವ ಸಿನಿಮಾಗಳು ನಿರ್ಮಾಣವಾಗುತ್ತಿವೆ” ಎಂದು ಫ್ರಾಂಕೋಯಿಸ್ ಥ್ರೂಫೋ ‘ಡೇ ಫಾರ್ ನೈಟ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಾನೆ.
‘ಡೇ ಫಾರ್ ನೈಟ್’ ಸಿನಿಮಾದ ಶೀರ್ಷಿಕೆಯೇ ಬಹಳ ಆಕರ್ಷಣೀಯ. ಇದು ಸಿನಿಮಾ ಪರಿಭಾಷೆಯ ಒಂದು ಶಬ್ದ. ಹಗಲಿನ ವೇಳೆ ಸೂರ್ಯನ ಬೆಳಕಿನ ಮೂಲಕ ಸುಲಭವಾಗಿ ಚಿತ್ರೀಕರಣ ಮಾಡಬಹುದು. ಆದರೆ ರಾತ್ರಿ ವೇಳೆ ಕಣ್ಣು ಸೂಕ್ಷ್ಮವಾಗಿರುವಷ್ಟು, ಕ್ಯಾಮೆರಾ ಸೂಕ್ಷ್ಮವಾಗಿರುವುದಿಲ್ಲ. ಅದಕ್ಕಾಗಿ ಕೃತಕ ಬೆಳಕನ್ನಿಟ್ಟುಕೊಂಡು ಚಿತ್ರೀಕರಣ ಮಾಡಬೇಕು. ಕತ್ತಲೆಯನ್ನು ಕೂಡ ಬೆಳಕಿನ ಮೂಲಕ ವ್ಯಾಖ್ಯಾನಿಸಬೇಕು. ಆದರೆ ವಿಶಾಲವಾದ ಬಯಲು, ದಟ್ಟಕಾಡು, ಪರ್ವತ ಪ್ರದೇಶ, ವಿಸ್ತಾರವಾದ ಸಮುದ್ರದ ರಾತ್ರಿಯ ದೃಶ್ಯಗಳನ್ನು ತೋರಿಸುವುದು ಹೇಗೆ?. ಅದಕ್ಕಾಗಿ ಉಪಾಯವೊಂದನ್ನು ಮಾಡಲಾಗುತ್ತದೆ. ಚಿತ್ರಿಕರಣ ಮಾಡುವಾಗ ಕ್ಯಾಮೆರಾಗಳಿಗೆ ಒಂದು ಫಿಲ್ಟರ್ ಹಾಕಲಾಗುತ್ತದೆ. ಈ ನೀಲಿ ಫಿಲ್ಟರ್, ಹಗಲನ್ನು ರಾತ್ರಿಯಂತೆ ಚಿತ್ರಿಸುತ್ತದೆ. ಈ ತಾಂತ್ರಿಕತೆಗೆ ‘ಡೇ ಫಾರ್ ನೈಟ್’ ಎಂದು ಹೆಸರು. Auteur Theory ಹಾಗೂ ಹಸಿ ಹಸಿ ವಾಸ್ತವದ ಮೂಲಕ ಚಿತ್ರಿಸುವ ಸಿನಿಮಾಗಳಲ್ಲಿ ಈ ಫಿಲ್ಟರ್ ಬಳಸಿದರೆ, ವಾಸ್ತವತೆ ಅಥವಾ ನೈಜತೆಯ ಕಥೆಯಾಗುವುದೇ? ಎಂಬ ವಾದಗಳು ಎದುರಾಗುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿ ಫ್ರಾಂಕೋಯಿಸ್ ಥ್ರೂಫೋ ತನ್ನ ಸಿನಿಮಾಗೆ ‘ಡೇ ಫಾರ್ ನೈಟ್’ ಎಂದು ಹೆಸರನ್ನು ಇಟ್ಟಿರಬಹುದು.
ತಾಂತ್ರಿಕ ಜನ್ಯವಾದ ಸಿನಿಮಾಗಳಲ್ಲಿ ಈ ತರಹದ ಅನೇಕ ಪ್ರಶ್ನೆಗಳನ್ನು ನಾವು ಆಗಾಗ ಕೇಳಿಕೊಳ್ಳುತ್ತಿರುತ್ತೇವೆ. ವಾಸ್ತವವನ್ನು, ವಾಸ್ತವಕ್ಕೆ ಹೇಗೆ ಸಮೀಪವಾಗಿ ಹಿಡಿದುಕೊಳ್ಳಬೇಕು ಎನ್ನುವುದು ನಿರ್ದೇಶಕನ ದೊಡ್ಡ ಸಮಸ್ಯೆ. ಈ ಸಮಸ್ಯೆ ಕುರಿತು ಮಾಡಿದ ಸಿನಿಮಾವೇ ‘ಡೇ ಫಾರ್ ನೈಟ್’. ಫೆಲಿನಿಯ ಕಲೆ ಮತ್ತು ಮನುಷ್ಯನ ಜೀವನ ಎಂದರೇನು? ಎನ್ನುವ ಪ್ರಶ್ನೆ ಸಿನಿಮಾ ಸೌಂದರ್ಯಕ್ಕೆ ಸಂಬಂಧಪಟ್ಟ ಪ್ರಶ್ನೆ. ಅಂತೆಯೇ ಫ್ರಾಂಕೋಯಿಸ್ ಥ್ರೂಫೋ ಎತ್ತಿದ ಪ್ರಶ್ನೆಗಳನ್ನು ನಾವು ಮನಸಾರೆ ಮನಗಾಣಿಸಿಕೊಂಡರೆ ನಮಗೂ ಹಲವಾರು ಸಮಸ್ಯೆಗಳು ಮತ್ತು ಉತ್ತರಗಳು ಸಿಗಬಹುದು. ಹೀಗಾಗಿ ಇದು ಬಹಳ ಮುಖ್ಯ ಸಿನಿಮಾ.
-ಗಿರೀಶ್ ಕಾಸರವಳ್ಳಿ
0 Comments