ಬದುಕಿನ ಸುಖ-ದುಃಖದ ಹುಡುಕಾಟ: ‘ಬಾಯ್’ ಸಿನಿಮಾದ ಒಳಹು

ಜಪಾನೀಸ್ ಸಿನಿಮಾ ‘ಬಾಯ್’ 1969ರಲ್ಲಿ ಬಿಡುಗಡೆಯಾಯಿತು. ಇದನ್ನು ನಿರ್ದೇಶಿಸಿದವರು ನಗೀಶಾ ಓಶಿಮಾ. ಒಂದು ಕಾಲದಲ್ಲಿ ಜಪಾನಿನಲ್ಲಿ, ಅತಿ ಹೆಚ್ಚು ಸಿನಿಮಾಗಳು ನಿರ್ಮಾಣವಾಗುತ್ತಿದ್ದವು. ಇಲ್ಲಿನ ತ್ರಿವಳಿ ನಿರ್ದೇಶಕರಾದ ಅಕಿರಾ ಕುರೋಸಾವ, ಕೆಂಝಿ ಮಿಸೊಗುಚಿ ಮತ್ತು ಯಸಿಜಿರೋ ಓಝೂವಿನ ನಂತರ ಬಂದ ನಗೀಶಾ ಓಶಿಮಾ, ಬಹಳ ಮುಖ್ಯವಾದ ನಿರ್ದೇಶಕರೆಂದೇ ಪ್ರಸಿದ್ಧಿ ಪಡೆದಿದ್ದಾರೆ.  ಈ ಮೂವರ ಚಿತ್ರಗಳನ್ನು ಪೂರ್ಣವಾಗಿ ಪ್ರತಿಭಟಿಸಿ, ಅದಕ್ಕಿಂತ ಭಿನ್ನವಾದ ಶೈಲಿಯ ಸಿನಿಮಾಗಳನ್ನು ನೀಡಿರುವುದು ನಗೀಶಾ ವಿಶೇಷತೆ. ಹೀಗಾಗಿ ‘ಬಾಯ್’ ಸಿನಿಮಾ ನೂತನ ಜಪಾನಿಸ್ ಸಿನಿಮಾಗಳ ಮಾದರಿ ಎಂದೇ ಪರಿಗಣಿಸಬಹುದು.

ಬಾಯ್ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ, ಫ್ರೆಂಚ್ ಸಿನಿಮಾಗಳು ಜಾಗತಿಕ ಮನ್ನಣೆ ಗಳಿಸಿದ್ದವು. ಈ ಅಲೆಯು ಜಗತ್ಪ್ರಸಿದ್ಧವಾದಂತೆ, ಜಪಾನ್ ದೇಶಕ್ಕೂ ಕಾಲಿಟ್ಟಿತು. ಹಳೆಯ ಕಾಲದ ಸಿನಿಮಾ ಸಂಪ್ರದಾಯಗಳನ್ನು ಪ್ರಶ್ನೆ ಮಾಡಿ, ವಿನೂತನ ಸಂಪ್ರದಾಯವನ್ನು ಜಾರಿಗೆ ತರುವುದು ನಗೀಶಾ ಓಶಿಮಾ ತರಹದ ನಿರ್ದೇಶಕರ ಆದ್ಯತೆಯಾಗಿತ್ತು. ಈ ಮೂಲಕ ಸಿನಿಮಾದ ವ್ಯಾಕರಣ ಹಾಗೂ ನುಡಿಗಟ್ಟು ಎಲ್ಲವೂ ಬದಲಾದವು. ಕುರೋಸಾವನ ಮಾನವತಾವಾದ ಶೈಲಿಯನ್ನೂ “ಬೋಗಸ್ ಮತ್ತು ಸುಳ್ಳು” ಎಂದು ಓಶಿಮಾ ತಿರಸ್ಕೃತ ಮಾಡುತ್ತಾನೆ. ಏಕೆಂದರೆ “ವಾಸ್ತವವನ್ನು ಒಂದು ಚೌಕಟ್ಟಿನಲ್ಲಿಟ್ಟರೆ, ಅದು ಅಪನಂಬಿಕೆಯ ಹಾದಿಗೆ ತಿರುಗುತ್ತದೆ. ಇದು ಸಿನಿಮಾ ಕಟ್ಟುವ ಕ್ರಮವಲ್ಲ” ಎಂದು ವಾದಿಸುತ್ತಾನೆ. ಹೊರಗಡೆ ಜಗತ್ತು ಕಠಿಣ ಎಂಬುದು ಓಶಿಮಾನ ನಂಬಿಕೆ. “ಗ್ರಾಹಕ ಸಮಾಜವು, ಹೊಸ ರೀತಿಯ ಜೀವನ ಕ್ರಮವನ್ನು ಹೇಗೆ ನೋಡಬೇಕೆಂದು ಕಲಿಸಿದೆ. ಅದಕ್ಕೆ ನೇರವಾಗಿ ಮುಖಾಮುಖಿಯಾಗಬೇಕು” ಎಂಬುದು ಹೊಸ ನಿರ್ದೇಶಕರ ನಂಬಿಕೆಯೂ ಆಗಿತ್ತು.   

ನಗೀಶಾ ಓಶಿಮಾ ಆರಂಭದಲ್ಲಿ ಎಡಪಂಥೀಯ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು, ಕಮ್ಯೂನಿಸ್ಟ್ ವ್ಯಕ್ತಿತ್ವವುಳ್ಳವನಾಗಿದ್ದನು. ಆದರೆ ಬಹಳ ಬೇಗ ಇದರಿಂದ ಬೇಸತ್ತು ಹೊರಬಂದ. ಅದೇ ಸಮಯದಲ್ಲಿ ರಾಷ್ಟ್ರೀಯ ಪರಿಕಲ್ಪನೆಗಳ ವಿಷಯಗಳು ಜಪಾನಿನಲ್ಲಿ ತಲೆ ಎತ್ತುತ್ತಿದ್ದವು. ಆದರೆ ಇದರ ಬಗ್ಗೆಯೂ ಇವನಿಗೆ ಹೇವರಿಕೆ ಇತ್ತು. ಈ ಎರಡೂ ಸಿದ್ದಂತಗಳಿಂದ ದೂರವಾಗಿ, ಬೇರೆ ರೀತಿಯಲ್ಲಿ ಬದುಕನ್ನು ನೋಡಲು ನಿರ್ಧರಿಸಿದ್ದ.

ಪ್ರೇಕ್ಷಕನ್ನು ಹಿಡಿದಿಟ್ಟುಕೊಳ್ಳಲು, ಸಿನಿಮಾಗಳಲ್ಲಿ ಭಾವನಾತ್ಮಕ ಸನ್ನಿವೇಶಗಳನ್ನು ಸೃಷ್ಟಿಸಲಾಗುತ್ತದೆ. ಆದರೆ ನಗೀಶಾ ಓಶಿಮಾ, “ಈ ಕ್ರಮವೂ ತಪ್ಪು” ಎಂದು ವಾದಿಸುತ್ತಾನೆ. “ಭಾವನಾತ್ಮಕತೆಯೇ ಸಿನಿಮಾ ಉದ್ದೇಶವಾಗಬಾರದು, ಆ ಭಾವನೆಗಳ ಹಿಂದಿನ ಚಿಂತನೆ ಪ್ರೇಕ್ಷಕನನ್ನು ಮುಟ್ಟಬೇಕು. ಹಾಗಾಗಿ ಪ್ರೇಕ್ಷಕರು, ದೂರದಲ್ಲಿ ನಿಂತು ಸಿನಿಮಾಗಳನ್ನು ನೋಡುವ ಕ್ರಮವನ್ನು ಸೃಷ್ಟಿಸಬೇಕು” ಎಂದು ಹೇಳುತ್ತಾನೆ. ಅಲ್ಲದೇ, ಬ್ರೆಕ್ಟ್ ಮತ್ತು ಗೋಡಾರ್ಡ್ ಚಿಂತನೆಗಳನ್ನೂ (Godard and Brecht) ಅಳವಡಿಸಿಕೊಂಡಿದ್ದಾನೆ.

ಓಶಿಮಾನ ಸಿನಿಮಾಗಳು, ಪ್ರೇಕ್ಷಕನನ್ನು ಭಾವನೆಯಲ್ಲಿ ಮುಳುಗಿಸದೆ, ಚಿತ್ರದ ದೃಶ್ಯಗಳ ಬಗ್ಗೆ ಚರ್ಚೆ ಹಾಗೂ ಪ್ರಶ್ನೆಗಳನ್ನು ಮೂಡುವಂತೆ ಪ್ರೇರೆಪಿಸುತ್ತದೆ. ಸಿನಿಮಾದ ಯಶಸ್ಸಿನಲ್ಲಿ, ಪ್ರೇಕ್ಷಕನ ಬೌದ್ಧಿಕ ಬೆಳವಣಿಗೆಯೂ ಅಗತ್ಯ ಎನ್ನುವುದು ಈತನ ಉದ್ದೇಶ. ಭಾವನಾತ್ಮಕ ಪ್ರತಿಕ್ರಿಯೆಗಳು ಕೇವಲ ರೇಚಕವೆಂದು ನಿರ್ಲಕ್ಷಿಸುತ್ತಾನೆ. ಈತನ ಹಿಂದಿನ ಚಿತ್ರಗಳಾದ ಡೆತ್ ಬೈ ಹ್ಯಾಂಗಿಂಗ್ (1968), ಶಿಂಜುಕು ಥೀಫ್ (1969) ಮುಂತಾದ ರಾಜಕೀಯ ಸಿನಿಮಾಗಳಲ್ಲಿ, ಸುಲಭವಾಗಿ ಗ್ರಹಿಸುವಂತಹ ಕಥೆಗಳಿದ್ದವು. ಆದರೆ ಕಥೆ ನೇರವಾಗಿ ಪ್ರೇಕ್ಷಕನ ಜೊತೆಗೆ ತಾದ್ಯಾತ್ಮ ಹೊಂದಲು ಅಸಾಧ್ಯವಾಗುತ್ತಿತ್ತು.

ಓಶಿಮಾ ನಿರ್ದೇಶಿಸಿದ ‘ಬಾಯ್’, ಬಹಳ ಭಿನ್ನವಾದ ಸಿನಿಮಾ. ಕುಟುಂಬವೊಂದರಲ್ಲಿ ಅಪ್ಪ, ಅಮ್ಮ(ಮಲತಾಯಿ) ಮತ್ತು ಮಗ ಇರುತ್ತಾರೆ. ಆದರೆ ಯಾರಿಗೂ ಹೆಸರಿರುವುದಿಲ್ಲ. ಮಗನನ್ನು ಮಾತ್ರ ಕಿಡ್ಡು ಎಂದು ಕರೆಯಲಾಗುತ್ತಿರುತ್ತದೆ. ಈ ಕಿಡ್ಡು ಅಪ್ಪನ ಮಗನೇ ಹೊರತು ಅಮ್ಮನ ಮಗನಲ್ಲ. ಮಲತಾಯಿಗೂ ಒಬ್ಬ ಪುಟ್ಟ ಮಗನಿರುತ್ತಾನೆ. ಈ ಕಿಡ್ಡು ಮತ್ತು ಪುಟ್ಟ ಮಗು ಬಹಳ ಅನ್ಯೋನ್ಯವಾಗಿದ್ದರೂ, ಅಪ್ಪ-ಅಮ್ಮನ ನಡುವೆ ಯಾವುದೇ ಹೊಂದಾಣಿಕೆ ಇರಲಿಲ್ಲ. ಸೈನಿಕನಾಗಿದ್ದ ಅಪ್ಪನು ದೇಹಕ್ಕೆ ಪೆಟ್ಟಾಗಿದ್ದರಿಂದ ಮನೆಗೆ ಬಂದಿರುತ್ತಾನೆ. ಹೀಗಾಗಿ ಯಾವುದೇ ವೃತ್ತಿಯಲ್ಲೂ ತೊಡಗಿಸಿಕೊಂಡಿರುವುದಿಲ್ಲ.

ಅಪ್ಪನು ಒಮ್ಮೆ ತನ್ನ ಹೆಂಡತಿ ಮತ್ತು ಮಗನಾದ ಕಿಡ್ಡುವನ್ನು ರಸ್ತೆಯ ಮೇಲೆ ಬಿಡುತ್ತಾನೆ. ಆ ವೇಳೆ ವಾಹನ ಅಡ್ಡಬಂದಿದ್ದರಿಂದ ಮಲತಾಯಿಯೂ ತಪ್ಪಿಸಿಕೊಳ್ಳುವಂತೆ ನಟಿಸಿದರೂ ಬಲವಾಗಿ ಪೆಟ್ಟಾಗುತ್ತದೆ. ವಾಹನ ಚಾಲಕರಿಂದ ಪರಿಹಾರ ಹಣವನ್ನು ಪಡೆದು ಜೀವನ ಸಾಗಿಸುವುದು ಇವರ ದಿನಚರಿಯಾಗಿತ್ತು. ನಂತರ ಮಗನಿಗೂ ತರಬೇತಿ ನೀಡಲಾಗುತ್ತದೆ. ಈ ಕುಟುಂಬಕ್ಕೆ ಸ್ವಂತ ಮನೆ ಇರುವುದಿಲ್ಲ. ತಮ್ಮ ಕುತಂತ್ರ ತಿಳಿದು ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ ಎಂಬ ಭಯದಿಂದ ನಿರಂತರವಾಗಿ ಊರಿಂದ ಊರಿಗೆ ಅಲೆಯುತ್ತಿರುತ್ತಾರೆ. ಒಂದು ರೀತಿಯಲ್ಲಿ ಈ ಸಿನಿಮಾದಲ್ಲಿರುವ ಪಾತ್ರಗಳಿಗೆ ಹೆಸರು, ವಿಳಾಸ, ವೃತ್ತಿ ಯಾವುದೂ ಇರುವುದಿಲ್ಲ. ಇಲ್ಲಗಳ ನಡುವೆ ಬದುಕನ್ನು ಕಟ್ಟಿಕೊಳ್ಳುವ ಸಿನಿಮಾವಿದು.

ಓಶಿಮಾ, ಈ ಸಿನಿಮಾದ ಮೂಲಕ ಜಪಾನಿನ ಸಾಮಾಜಿಕ, ರಾಜಕೀಯ ಪರಿಸರದ ಕುರಿತು ಕಟುವಾದ ಟೀಕೆಯನ್ನು ಮಾಡುತ್ತಾನೆ. ಚಿತ್ರದಲ್ಲಿ ಅಪ್ಪನನ್ನು ಮಾಜಿ ಸೈನಿಕನಾಗಿ ಮತ್ತು ದೈಹಿಕವಾಗಿ ಅಸಮರ್ಥನೆಂದು ತೋರಿಸುವುದರ ಮೂಲಕ, ಅಲ್ಲಿನ ರಾಜಕೀಯ ವ್ಯವಸ್ಥೆ ಯಾವ ರೀತಿ ಸೈನಿಕರನ್ನು ನಿಷ್ಪ್ರಯೋಜಕರನ್ನಾಗಿ ಮಾಡುತ್ತಿದೆ ಎಂಬುದನ್ನು ಹೇಳುತ್ತಾನೆ. ಎರಡನೇಯದಾಗಿ ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಯ ಬಗ್ಗೆ ಟೀಕೆ ಮಾಡುತ್ತಾನೆ. ಈ ಸಿನಿಮಾದ ರೂಪಕವೇ ಕೆಂಪು ಬಣ್ಣ. ಸಿನಿಮಾದ ಬಹುತೇಕ ಕಡೆ ಬಿಳಿ ಬಣ್ಣದ ವಿರುದ್ಧವಾಗಿ ಕೆಂಪು ಬಣ್ಣ ತೋರಿಸಲಾಗಿದೆ. ಸಾಮಾನ್ಯವಾಗಿ ಈ ಬಣ್ಣಗಳನ್ನು ಸೂಚಿಸಿದಾಗಲೇ, ಇದು ಜಪಾನಿನ ಧ್ವಜ ಎಂಬುದು ಅರಿವಿಗೆ ಬರುತ್ತದೆ.

ಸಿನಿಮಾದ ಆರಂಭದಲ್ಲೆ ಧ್ವಜದ ಹಿಂದೆ ಹುಡುಗನೊಬ್ಬ ನಿಂತಿರುತ್ತಾನೆ. ಶೀರ್ಷಿಕೆ ಕೂಡ ಆ ಹುಡುಗನ ಮುಖದ ಮೇಲೆಯೇ ಕೆಂಪು ಬಣ್ಣದ ಅಕ್ಷರ ಮೂಲಕ ಬರುವುದನ್ನು ಕಾಣಬಹುದು. ಅಂದರೆ ಈ ಕೆಂಪು ಬಣ್ಣದ ಮೂಲಕ ಜಪಾನಿನ ಪ್ರಭುತ್ವ, ಆಡಳಿತ ಕ್ರಮ ಮತ್ತು ದರ್ಪವನ್ನು ಬಿಚ್ಚಿಡುತ್ತಿರುತ್ತಾನೆ. ಜನರೆಲ್ಲರೂ ಸಂಯಮಶೀಲತೆ ಹಾಗೂ ಸಹನಾಶೀಲತೆಯಿಂದ ದೂರ ಉಳಿದು, ಹಣ ಸಿಗುವ ಕಡೆ ಜೈಕಾರ ಹಾಕುತ್ತಿರುತ್ತಾರೆ.

ಓಶಿಮಾನ ಸಿನಿಮಾ ಕಟ್ಟುವ ಕ್ರಮದಲ್ಲಿ ನಯವಾದ ಕಥಾಶೈಲಿ ಇರುವುದಿಲ್ಲ. ಸುಗಮವಲ್ಲದ (abrupt) ರೀತಿಯಲ್ಲಿ ಕಟ್ಟುತ್ತಾ ಹೋಗುವುದು ಈತನ ಕ್ರಮ. ಅಂದರೆ ಅಪ್ಪ, ಅಮ್ಮ ಹಾಗೂ ಮಗನಾದ ಕಿಡ್ಡುವಿನ ನಡುವೆ ಸಂವಹನ ಇಲ್ಲದಿರುವಂತೆ ಚಿತ್ರಿಸಲಾಗಿದೆ. ಕಿಡ್ಡು ಮಾತನಾಡುವುದು ಜೊತೆಗಿದ್ದ ಪುಟ್ಟ ಮಗುವಿನ ಜೊತೆ ಮಾತ್ರ. ಆದರೆ ಆ ಮಗು ಹೆಚ್ಚು ಮಾತನಾಡಲಾರದು. ಹೀಗಾಗಿ ಕಿಡ್ಡುವಿನ ಕನಸುಗಳೇ ಆತನ ಕಥೆ. ಯಾವುದೋ ದೇವಸ್ಥಾನಕ್ಕೆ ತೆರಳಿ ಒಬ್ಬನೇ ಕಣ್ಣಾಮುಚ್ಚಾಲೆ ಆಡುವುದು ಇವನ ಹವ್ಯಾಸ. ಅಲ್ಲದೇ, ಇನ್ಯಾವುದೋ ಕಲ್ಪನೆಯಲ್ಲಿ ತೇಲಾಡುತ್ತಾ, “ತಾನೊಂದು ಭಿನ್ನ ಲೋಕದಲ್ಲಿದ್ದೇನೆ, ಏಲಿಯನ್ ಗಳ ಸಂಪರ್ಕದಲ್ಲಿರುವೆ, ನಾನೂ ಕೂಡ ಏಲಿಯನ್ ಜೀವಿ ಹಾಗೂ ಆಂಡ್ರೋಮೆಡಾ ದೇಶಕ್ಕೆ ತೆರಳಿದರೆ ಮತ್ತೊಂದು ವಿನೂತನ ಅನುಭವ ದೊರಕುವುದು” ಎಂದು ಭಾವಿಸುತ್ತಿರುತ್ತಾನೆ. ಒಂದು ಸಂಭಾಷಣೆಯಲ್ಲಿ “I wish I was an alien” ಎಂದು ಹೇಳಿದ್ದಾನೆ.  ಇಂತಹ ಅಲೋಚನಾ ಪ್ರಪಂಚದಲ್ಲೇ ತೇಲಾಡುತ್ತಿದ್ದ ಕಿಡ್ಡು, ಒಂದು ದಿನ ಅಚಾನಕ್ಕಾಗಿ ಪೊಲೀಸರ ಬಲೆಯಲ್ಲಿ ಬೀಳುತ್ತಾನೆ.  

ಪೊಲೀಸಿನವರು ಹುಡುಗನೊಬ್ಬನ ಫೋಟೋ ತೋರಿಸಿ “ಈ ಫೋಟೋದಲ್ಲಿ ಇರುವವನು ನೀನೆ ತಾನೇ?” ಎಂದು ಕಿಡ್ಡುವಿನಲ್ಲಿ ಕೇಳುತ್ತಾರೆ. ಆಗ ಕಿಡ್ಡು “ಇದು ಏಲಿಯನ್ ಫೋಟೋ” ಎಂದು ಉತ್ತರಿಸುತ್ತಾನೆ. ಮನೆ, ವಿಳಾಸ ಹಾಗೂ ಸಂವಹನವಿಲ್ಲದೆ ಬದುಕುತ್ತಿದ್ದ ಕಿಡ್ಡು, ತಾನೇ ಒಂದು ಏಲಿಯನ್ ಆಗುವುದಕ್ಕೆ ಬಯಸುತ್ತಿರುತ್ತಾನೆ. ಏಕೆಂದರೆ ಸಮಾಜದಲ್ಲಿ ಬಾಳಲು ಈತನಿಗೆ ಇಷ್ಟವಿರುವುದಿಲ್ಲ.

ಈ ಸಿನಿಮಾದ ಕಥೆಯಲ್ಲಿ ಬರುವ ಕುಟುಂಬಕ್ಕೆ ಯಾವುದೇ ಗುರಿ-ಉದ್ದೇಶವಿರುವುದಿಲ್ಲ. ಒಂದು ರೀತಿ ದುರಂತದ ಕುಟುಂಬ. “ನಮ್ಮ ಬದುಕಿನ ಉದ್ದೇಶ ಎಲ್ಲಿದೆ? ಏತಕ್ಕಾಗಿ ನಾವು ಬದುಕಬೇಕು?” ಎಂಬ ಚಿಂತನೆ ಕಿಡ್ಡುವಿಗೆ ಬಹಳ ಕಾಡುತ್ತಿರುತ್ತದೆ. ಅಮ್ಮ ಹೇಳಿದ ತಕ್ಷಣ, ರಸ್ತೆಯಲ್ಲಿ ನುಗ್ಗುವುದು ಕಿಡ್ಡುವಿನ ಕೆಲಸ. ಹೀಗಾಗಿ ಇದು ತಾಯಿಯಿಂದ ಬಂದಂತಹ ನಿರ್ದೇಶನ ಹೊರತು, ಅವನದ್ದಲ್ಲ. ಈ ರೂಢಿಯಿಂದ ಬೇಸತ್ತ ಕಿಡ್ಡು, ಒಂದು ದಿನ ಮನೆ ಬಿಟ್ಟು ಓಡಿ ಹೋಗುತ್ತಾನೆ. ಆದರೆ ಎಲ್ಲಿ ಹೋಗುವುದೆಂದು ತಿಳಿಯದೆ ಹಿಂದಿರುಗಿ ಬರುತ್ತಾನೆ. ಆತ ಓಡಿ ಹೋಗುವಾಗ ಕನಸು ಮತ್ತು ವಾಸ್ತವದ ನಡುವಿನ ಸನ್ನಿವೇಶಗಳನ್ನು ಚಿತ್ರದಲ್ಲಿ ತೋರಿಸಲಾಗುತ್ತದೆ.

ಕನಸಿನ ಸ್ಥಿತಿಯಲ್ಲಿದ್ದಾಗ ನೀಲಿ ಬಣ್ಣದ ಚಿತ್ರಣ ಮತ್ತು ವಾಸ್ತವ ಸ್ಥಿತಿಗೆ ಬಂದಾಗ ಸಾಮಾನ್ಯ ಬಣ್ಣದಲ್ಲೇ ಚಿತ್ರೀಕರಿಸಲಾಗಿದೆ.  ಮನೆಗೆ ಹಿಂದಿರುಗುವುದು ಕಿಡ್ಡುವಿಗೆ ಅನಿವಾರ್ಯ. ಆದರೆ ಕೊನೆಯ ಸಲ ಓಡಿ ಹೋಗುವಾಗ, ಇವನ ತಮ್ಮನಾದ ಪುಟ್ಟ ಮಗು ಹಿಂಬಾಲಿಸುತ್ತದೆ. ಹೀಗಾಗಿ ಅತಿಹೆಚ್ಚು ಮಂಜು ಬೀಳುವ ಪ್ರದೇಶದಲ್ಲಿ ಇಬ್ಬರೂ ಕುಳಿತುಕೊಳ್ಳುತ್ತಾರೆ. “ನಮ್ಮನ್ನು ಆಂಡ್ರೋಮೆಡಾ ಪ್ರದೇಶಕ್ಕೆ ಕರೆದೊಯ್ಯಲು ಏಲಿಯನ್ಸ್ ಬರುತ್ತಾರೆ, ಅವರೊಂದಿಗೆ ನಾವು ಹೋಗುತ್ತೇವೆ” ಎಂಬ ಕಥೆಯನ್ನು ಕಿಡ್ಡು ಹೇಳುತ್ತಾ, ಕನಸನ್ನೇ ವಾಸ್ತವವನ್ನಾಗಿ ಮಾರ್ಪಾಡು ಮಾಡಿಕೊಂಡಿರುತ್ತಾನೆ.

ಈ ಸಿನಿಮಾವನ್ನು ನಗೀಶಾ ಓಶಿಮಾ ಅಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣ ಮಾಡಿದ್ದಾನೆ. ಆ ಮೂಲಕ ಸಮಾಜದ ಓರೆಕೋರೆಗಳನ್ನು ತೆರೆದಿಟ್ಟಿದ್ದಾನೆ. ಪ್ರೇಕ್ಷಕನನ್ನು ರಂಜಿಸದೆ, ಗೊಂದಲಕ್ಕೆ ತಳ್ಳುತ್ತಾನೆ. 1969ರಲ್ಲಿ ಹೊಸ ಶೈಲಿಯಲ್ಲಿ ನಿರ್ಮಾಣವಾದ ಈ ಸಿನಿಮಾ, ಇವತ್ತಿಗೂ ಬಹಳ ಮುಖ್ಯವಾಗಿ ಕಾಣುತ್ತದೆ. ಏಕೆಂದರೆ ತ್ರಿವಳಿ ನಿರ್ದೇಶಕರುಗಳಾದ ಅಕಿರಾ ಕುರೋಸಾವ, ಕೆಂಝಿ ಮಿಸೊಗುಚಿ ಮತ್ತು ಯಸಿಜಿರೋ ಓಝೂ, ಇವರುಗಳ ಸಿನಿಮಾ ಕಟ್ಟುವ ಕ್ರಮಕ್ಕೂ, ಹೊಸ ತಲೆಮಾರಿನ ನಿರ್ದೇಶಕರು ಕಟ್ಟುವ ಕ್ರಮವೂ ವಿಭಿನ್ನವಾಗಿತ್ತು. ಅಂದರೆ ಇವರಿಬ್ಬರಲ್ಲಿ ತಾಂತ್ರಿಕ ವ್ಯತ್ಯಾಸದ ಜೊತೆಗೆ, ಸಮುದಾಯ ಸಂರಚನೆಯಲ್ಲಿ ಆದಂತಹ ವ್ಯತ್ಯಾಸವನ್ನು ಕೂಡ ಕಾಣಬಹುದು.

ಭಾರತದಲ್ಲಿ ಸನಾತನ ಸಂಪ್ರದಾಯವಿರುವಂತೆ, ಜಪಾನಿನಲ್ಲೂ ಕೂಡ ಇದೇ ತರಹದ ಸಂಪ್ರದಾಯವಿದೆ. ಆ ಜನರು ಸಂಸ್ಕೃತಿಗೆ ಗೌರವ ಕೊಡುತ್ತಾರೆ. ಆದರೆ ಜಗತ್ತು ಬದಲಾದಂತೆ, ನೈತಿಕತೆ ಮತ್ತು ಮೌಲ್ಯಯುತ ವ್ಯವಸ್ಥೆ ಕೂಡ ಬದಲಾಗುತ್ತಿರುತ್ತದೆ. ಹೀಗೆ 60-70ರ ದಶಕದಲ್ಲಿ ಬದಲಾದ ವ್ಯವಸ್ಥೆ,  ಓಶಿಮಾನನ್ನು ಬಹಳ ಗೊಂದಲಕ್ಕೀಡುಮಾಡಿದ್ದವು. ಇದನ್ನೆಲ್ಲಾ ಸೂಕ್ಷ್ಮವಾಗಿ ಗ್ರಹಿಸುತ್ತಾ ಅಸಂಗತ ಶೈಲಿಯಲ್ಲಿ ಸಿನಿಮಾದ ಕಥೆಯನ್ನು ಹೇಳಲು ಪ್ರಾರಂಭಿಸುತ್ತಾನೆ. ಲಾಂಗ್ ಶಾಟ್ ಛಾಯಾಗ್ರಾಹಣ, ಶಬ್ದ ಹಾಗೂ ಸಂಕಲನದಲ್ಲಿ ವಿನೂತನ ಪ್ರಯೋಗ ಚಿತ್ರದ ವಿಶೇಷತೆ. ದೃಶ್ಯಗಳನ್ನು ಎಲ್ಲಿಯೂ ನಾಟಕೀಯವಾಗಿ ತೋರಿಸದೆ, ವಾಸ್ತವ ವಿಷಯಗಳನ್ನೇ ಇಟ್ಟುಕೊಂಡು ನಿರ್ದೇಶಿಸಲಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕನೇ ಕಥೆಯನ್ನು ಪರಾಂಬರಿಸಬೇಕು ಎನ್ನುವುದು ಓಶಿಮಾನ ನಿಲುವು.

ಅಂತೆಯೇ ಕಿಡ್ಡುವಿನ ಪಾತ್ರದ ಮೂಲಕ, ಜಪಾನಿನ ಸಮಾಜವು ಮಕ್ಕಳನ್ನು ಕಡೆಗಣಿಸುವ ಬಗೆ ಹಾಗೂ ಅಮಾನವೀಯವಾಗಿ ನಡೆಸುಕೊಳ್ಳುತ್ತಿರುವುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಮತ್ತೊಂದು ರೀತಿಯಲ್ಲಿ ಈ ಹುಡುಗನ ಮೂಲಕ ಪ್ರಪಂಚವನ್ನು ನೋಡುವುದನ್ನು ಕೂಡ ಕಾಣಬಹುದು. ಇವನ ಬದುಕಿನಲ್ಲಿ ಸುಖ-ದುಃಖದ ಹುಡುಕಾಟವೇ ಸಿನಿಮಾದ ಕೇಂದ್ರ ಬಿಂದು. ಈ ಎಳೆಯನ್ನು ‘ಬಾಯ್’ ಸಿನಿಮಾದ ಮೂಲಕ ನಿರೂಪಣೆ ಮಾಡಿರುವುದು ನಿರ್ದೇಶಕನ ಚತುರತೆ.

ನಿರ್ದೇಶಕ ನಗೀಶಾ ಓಶಿಮಾ, ಕಿಡ್ಡುವಿನ ಬದುಕಿನಲ್ಲಿ ದುರಂತ ಇದೆಯೇ? ಅಥವಾ ಏಲಿಯನ್ ಕಲ್ಪನೆಯಲ್ಲಿ ತೃಪ್ತಿ ಕಾಣುವುದು ಈತನ ಸುಖದ ಸೂಚನೆಯೇ? ಈ ತರಹದ ಪ್ರಶ್ನೆಗಳನ್ನು ಕಟ್ಟಿಕೊಡುತ್ತಾ, ಅದನ್ನು ಪ್ರೇಕ್ಷಕರ ವಿವೇಚನೆಗೆ ಬಿಡುತ್ತಾನೆ. ಬಾಯ್ ಸಿನಿಮಾದಲ್ಲಿ ಇಂತಹ ವಿಷಯಗಳನ್ನು ಪರಿಣಾಮಕಾರಿಯಾಗಿ ಮುನ್ನೆಲೆಗೆ ತರಲಾಗಿದೆ. ಸಾಂಪ್ರದಾಯಿಕ ಸಿನಿಮಾಗಳಂತೆ, ಸುಮ್ಮನೆ ಕುಳಿತು ‘ಬಾಯ್’ ಸಿನಿಮಾ ನೋಡಿದರೆ ನಿಜಕ್ಕೂ ರುಚಿಸುವುದಿಲ್ಲ. ಓಶಿಮಾನ ಯೋಚನಾಲಹರಿ, ಕಟ್ಟುವ ಕ್ರಮವನ್ನು ಸರಿಯಾಗಿ ಗಮನಿಸಿದರೆ ಮಾತ್ರ, ‘ಬಾಯ್’ ಸಿನಿಮಾದ ಹೊಸತನ ಮತ್ತು ಒಳಹು ಗೋಚರಿಸುತ್ತದೆ.

-ಗಿರೀಶ್ ಕಾಸರವಳ್ಳಿ

0 Comments

Submit a Comment

Your email address will not be published. Required fields are marked *

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more