ಆಫ್ರಿಕಾದ ನೈಜ ಜನಜೀವನ ಮತ್ತು ವಿದೇಶಿಗರ ದೃಷ್ಟಿಕೋನ: ‘ಟಿಂಬಕ್ಟೂ’ ಸಿನಿಮಾ ವಿಶ್ಲೇಷಣೆ

‘ಟಿಂಬಕ್ಟೂ’ 2014ರಲ್ಲಿ ಬಿಡುಗಡೆಯಾದ ಆಫ್ರಿಕನ್ ಸಿನಿಮಾ. ಮಾರ್ಟನಿಯನ್ ಫಿಲ್ಮ್ ಮೇಕರ್ ಅಬ್ದುರೆಹಮಾನ್ ಸಿಸಾಕೋ ಈ ಚಿತ್ರದ ನಿರ್ದೇಶಕ. ಈ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಅರಸಿ ಬಂದಿತ್ತು. ಮಾತ್ರವಲ್ಲದೆ, ದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ನಡೆಸಿದ ಒಪಿನಿಯನ್ ಪೋಲ್ ನಲ್ಲಿ, “21ನೇ ದಶಕದಲ್ಲಿ ತಯಾರಾದ ಶ್ರೇಷ್ಠ ಸಿನಿಮಾಗಳ ಪಟ್ಟಿಯಲ್ಲಿ 12ನೇ ಸ್ಥಾನ” ಪಡೆದಿತ್ತು.

ಮಾಲಿಯ ಸಹಾರಾ ಮರುಭೂಮಿಯ ಅಂಚಿನಲ್ಲಿ ಟಿಂಬಕ್ಟೂ ಎಂಬ ಸ್ಥಳವಿದೆ. ಭಾರತದಲ್ಲಿ ನಳಂದ ಇರುವಂತೆ ಇರುವ ಪ್ರದೇಶ. ಒಂದು ಕಾಲದಲ್ಲಿ ವಿದ್ಯೆ ಮತ್ತು ವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿದ ಟಿಂಬಕ್ಟೂ, ಇಂದು ಅಧೋಗತಿಗೆ ಇಳಿದಿದೆ. ಆಫ್ರಿಕಾದಲ್ಲಿ ಸಬ್ ಸಹಾರಾ ಮತ್ತು ನಾರ್ಥನ್ ಆಫ್ರಿಕಾ ಎಂಬ ಎರಡು ಪ್ರದೇಶವಿದೆ. ಇದರ ಪಕ್ಕದಲ್ಲೇ ಆರ್ಥಿಕತೆಯಲ್ಲಿ ಮುನ್ನಡೆ ಸಾಧಿಸಿದ ಈಜಿಪ್ಟ್ ಮತ್ತು ಆಲ್ಜೀರಿಯಾ ದೇಶಗಳಿವೆ. ಆದರೆ ಟಿಂಬಕ್ಟೂ, ಸರಿಯಾದ ಅನುಕೂಲವಿಲ್ಲದ ಪ್ರದೇಶವಾಗಿದ್ದರಿಂದ, ಸಿಸಾಕೋ ಈ ಪ್ರದೇಶವನ್ನು ಕಥಾ ಕೇಂದ್ರವಾಗಿ ಬಳಸಿದ್ದಾನೆ.

ಟಿಂಬಕ್ಟೂ ಜನಸಂಖ್ಯೆ ಕೇವಲ 50,000. ಆದರೆ ಇಲ್ಲಿನ ಸಮಸ್ಯೆಗಳು ಅಗಾಧ. ಫ್ರೆಂಚ್ ವಸಾಹತುಶಾಹಿ ಸ್ಥಳೀಯರನ್ನು ಬಹಳ ದುರ್ಬಲರನ್ನಾಗಿಸಿದೆ. ಇದರ ಜೊತೆಗೆ ಜಿಹಾದಿಗಳ ಸಮಸ್ಯೆಯೂ ಕಾಡುತ್ತಿದೆ. ಈ ರೀತಿಯ ಸಮಸ್ಯೆಯನ್ನು ಬಳಸಿಕೊಂಡು ಸಿಸಾಕೋ ಸಿನಿಮಾ ನಿರ್ದೇಶಿಸಿದ್ದಾರೆ. ಇವರು ಸಿನಿಮಾ ನಿರ್ದೇಶನಕ್ಕೂ ಮುನ್ನವೇ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದರು. ಇವರ ‘ಬೊಮ್ಯಾಕೋ’ ಸಿನಿಮಾವನ್ನು ಲ್ಯಾಂಡ್ ಮಾರ್ಕ್ ಚಿತ್ರವೆಂದೇ ಪ್ರೇಕ್ಷಕರು ಪರಿಗಣಿಸಿದ್ದಾರೆ. ಪ್ರತಿಭಟನೆಯ ಸ್ವರೂಪದ ಚಿತ್ರಗಳಿಗೆ ಸಿಸಾಕೋ ಹೆಚ್ಚು ಖ್ಯಾತರಾಗಿದ್ದರು.

ಆಫ್ರಿಕಾ ನಾಗರೀಕತೆಯ ಕುರಿತು ಯೂರೋಪ್ ಮತ್ತು ಪಾಶ್ಚಿಮಾತ್ಯ ದೇಶಗಳ ಆಧಾರಿತವಾಗಿಯೇ ಹೆಚ್ಚಿನ ದಾಖಲೆಗಳಿವೆ. ಆಫ್ರಿಕಾದ ಜನತೆ ಅನಾಗರೀಕರು, ಕ್ರೂರರು ಮತ್ತು ಸಭ್ಯತೆಯಿಲ್ಲದಿರುವ ಎಂದೇ ಬಿಂಬಿಸಲಾಗಿದೆ. ಈ ಸ್ವರೂಪದಲ್ಲೇ ಹಾಲಿವುಡ್ ನಿಂದ ಸಾಲು ಸಾಲಾಗಿ ಸಿನಿಮಾಗಳು ಬರುತ್ತಿದ್ದವು. ಇದಕ್ಕೆ ಪ್ರತಿಯಾಗಿ ಹೊಸ ಸಂಸ್ಕೃತಿಯನ್ನು ತೋರಿಸುವುದಕ್ಕಾಗಿ ಹುಟ್ಟಿಕೊಂಡ ಆಫ್ರಿಕನ್ ಸಿನಿಮಾವೇ ಟಿಂಬಕ್ಟೂ.

ಓಸ್ಮಾನ್ ಸೆಂಬೇನ್ ಎಂಬುವವರು ಖ್ಯಾತ ಲೇಖಕ ಮತ್ತು ಚಿತ್ರ ನಿರ್ದೇಶಕರಾಗಿದ್ದರು. ಅನೇಕ ಚಿತ್ರ ನಿರ್ಮಾಪಕರೊಂದಿಗೆ ಕೈಜೋಡಿಸಿ ಆಫ್ರಿಕಾದ ನೈಜ ಚಿತ್ರಣವನ್ನು ಜಗದಗಲಕ್ಕೆ ಪಸರಿಸಿದ್ದರು. ಈ ಮಾದರಿಯ ಚಿತ್ರ ನಿರ್ದೇಶಕರಲ್ಲಿ ಅಬ್ದುರೆಹಮಾನ್ ಸಿಸಾಕೋ ಕೂಡ ಒಬ್ಬರು.

2014ರಲ್ಲಿ ಜಿಹಾದಿಗಳು ಟಿಂಬಕ್ಟೂ ದೇಶವನ್ನು ಆಕ್ರಮಿಸಿಕೊಳ್ಳುತ್ತಾರೆ. ಆವರೆಗೂ ಫ್ರೆಂಚ್ ವಸಾಹತುಶಾಹಿಗಳ ಸಮಸ್ಯೆಯಿಂದ ದಿಕ್ಕೆಟ್ಟಿದ್ದ ಸ್ಥಳೀಯರು, ಜಿಹಾದಿಗಳು ಬಂದ ನಂತರ ಮಗದೊಂದು ಸಮಸ್ಯೆಯನ್ನು ಎದುರಿಸುತ್ತಾರೆ. ಬಹುಮುಖ್ಯವಾಗಿ ಇಸ್ಲಾಂ ಧರ್ಮವನ್ನು ನಂಬುವವರು ಜಿಹಾದಿಗಳನ್ನು ಒಪ್ಪುವುದಿಲ್ಲ. ಹಲವೆಡೆ ಇಸ್ಲಾಮಿಗಳೆಲ್ಲರೂ ಜಿಹಾದಿಗಳು ಎಂಬ ತಪ್ಪು ತಿಳುವಳಿಕೆಯಿದೆ. ಆದರೆ ಟಿಂಬಕ್ಟೂವಿನಲ್ಲಿ ಜಿಹಾದಿಗಳೇ ಇಸ್ಲಾಂ ಜನರಿಗೆ ತೊಂದರೆ ನೀಡುವುದು ಮಾತ್ರ ವಿಪರ್ಯಾಸವಾಗಿತ್ತು. ಹೀಗಾಗಿ ಸಾರ್ವಜನಿಕರೆಲ್ಲರೂ ಜಿಹಾದಿಗಳನ್ನು ವಿರೋಧಿಸಲು ಪ್ರಾರಂಭಿಸಿದರು. ದುರಂತವೆಂದರೇ ಜಿಹಾದಿಗಳಿಗೆ ದೈಹಿಕ ಶಕ್ತಿಯ ಜೊತೆ ಶಸ್ತ್ರಗಳ ಶಕ್ತಿಯೂ ಹೆಚ್ಚಿತ್ತು. ಅದಾಗ್ಯೂ ಸತತ ಎರಡು ವರ್ಷಗಳ ಹೋರಾಟದ ನಂತರ ಟಿಂಬಕ್ಟೂ ಜನರು, ಫ್ರೆಂಚರ ಸಹಾಯ ಪಡೆದು ಜಿಹಾದಿ ಸಂಘಟನೆಯನ್ನು ನಿರ್ನಾಮ ಮಾಡಿದರು. ಇದು ಒಟ್ಟಾರೆ ಮಾಲಿಯ ಕಥೆ.

ಮನೋಜ್ಞವಾದ ಹಾಗೂ ಪರಿಣಾಮಕಾರಿಯಾದಂತಹ ಛಾಯಾಗ್ರಾಹಣ ಇರುವ ಈ ಸಿನಿಮಾದ ಕಥೆಯು ಬಹಳ ಸರಳ. ಟಿಂಬಕ್ಟೂವಿನಲ್ಲಿದ್ದ ಕಡಾನೆ ಎಂಬಾತನ ಕುಟುಂಬ, ಊರ ಹೊರಗೆ ಮರಳುಗಾಡಿನ ಟೆಂಟಿನಲ್ಲಿ ವಾಸಮಾಡುತ್ತಿರುತ್ತಾರೆ. ಈ ಕಡಾನೆಗೆ ಹೆಂಡತಿ ಮತ್ತು 14 ವರ್ಷದ ಸುಂದರವಾದ ಮಗಳಿದ್ದಳು. ದನಗಳನ್ನು ಸಾಕಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು.

ಸಿನಿಮಾದ ಆರಂಭದಲ್ಲಿ ಜಿಹಾದಿಗಳು, ಟ್ರಕ್ಕಿನಲ್ಲಿ ಬಂದೂಕು ತುಂಬಿಕೊಂಡು “ನೀವು ನಮ್ಮ ನಿಬಂಧನೆಗಳನ್ನು ಪಾಲಿಸಲೇಬೇಕು” ಎಂದು ಸಾರ್ವಜನಿಕರಿಗೆ ಎಚ್ಚರಿಸುತ್ತಿರುತ್ತಾರೆ. ಟಿಂಬಕ್ಟೂ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಣ ಮಾಡುವಂತಿಲ್ಲ, ಹೆಂಗಸರು ಪರಪುರುಷರ ಸಂಗ ಮಾಡಬಾರದು, ಸದಾ ಮುಖವನ್ನು ಮುಚ್ಚಿಕೊಂಡಿರಬೇಕು, ಯುವಕರು ಫುಟ್ ಬಾಲ್ ಆಡಬಾರದು, ಮದ್ಯಪಾನ ಮತ್ತು ಸಿಗರೇಟ್ ಸೇದುವಂತಿಲ್ಲ ಮುಂತಾದ ನಿಬಂಧನೆಗಳಿರುತ್ತವೆ. ಟಿಂಬಕ್ಟೂ ತಮ್ಮದೇ ಪ್ರಪಂಚವೆಂಬಂತೆ ವ್ಯವಹರಿಸುವ ಜಿಹಾದಿಗಳು, ಸುತ್ತಮುತ್ತ ಓಡಾಡುವ ಜಿಂಕೆಗಳನ್ನು ಹತ್ಯೆ ಮಾಡಿ ಕೊಂಡೊಯ್ಯುತ್ತಿರುತ್ತಾರೆ.  

ಕಡಾನೆ ಕುಟುಂಬವು ಅನಾಥ ಹುಡುಗನೊಬ್ಬನನ್ನು ಸಲಹುತ್ತಿರುತ್ತಾರೆ. ಇವರದ್ದು ನಾಲ್ಕು ಜನರಿರುವ ಕುಟುಂಬ. ಮೊಬೈಲ್ ಬಳಸುತ್ತಿದ್ದರೂ, ನೆಟ್ ವರ್ಕ್ ಗಾಗಿ ದೂರದ ಪ್ರದೇಶಕ್ಕೆ ತೆರಳಬೇಕಿತ್ತು. ಇವರು ಹೆಮ್ಮೆಯಿಂದ ಸಾಕುತ್ತಿದ್ದ ಹಸುವಿನ ಹೆಸರು ಜಿಪಿಎಸ್. ಒಮ್ಮೆ ಈ ಹಸು ಓಡಾಡುತ್ತಾ, ಕೆರೆಯೊಂದರ ಬಳಿ ಹೋಗಿ ಮೀನುಗಾರನ ಬಲೆಯನ್ನು ಕಡಿದುಬಿಡುತ್ತದೆ. ಇದರಿಂದ ಕೆರಳಿದ ಮೀನುಗಾರ ಹಸುವನ್ನು ಹತ್ಯೆಗೈಯುತ್ತಾನೆ. ಇದೇ ಕಾರಣದಿಂದ ಕಡಾನೆ ಮತ್ತು ಮೀನುಗಾರನ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತೆರಳುತ್ತದೆ. ಮಾತ್ರವಲ್ಲ ಕಡಾನೆ ಜೇಬಲ್ಲಿದ್ದ ಬಂದೂಕು ಅಚಾನಕ್ಕಾಗಿ ಫೈರ್ ಆಗಿ ಮೀನುಗಾರನನ್ನು ಬಲಿ ತೆಗೆದುಕೊಳ್ಳುತ್ತದೆ. ಈ ಘಟನೆ ನಂತರ ಕಡಾನೆಯನ್ನು ಪೊಲೀಸರು ಬಂಧಿಸುತ್ತಾರೆ.

ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರು “ನಾನು ತಪ್ಪು ಮಾಡಿರುವುದು ನಿಜ” ಎಂದು ಕಡಾನೆ ಒಪ್ಪಿಕೊಳ್ಳುತ್ತಾನೆ. ಹೀಗಾಗಿ “ಮೀನುಗಾರನ ಹೆಂಡತಿ ನಿನ್ನನ್ನು ಕ್ಷಮಿಸಿದರೆ ನೀನು ಹೋಗಬಹುದು” ಎಂದು ನ್ಯಾಯಾಧೀಶರು ತೀರ್ಪು ನೀಡುತ್ತಾರೆ. ಆದರೆ ಇತ್ತಕಡೆ “ನನ್ನ ಗಂಡನ ಸಾವಿಗಾಗಿ, ಕಡಾನೆ 40 ದನಗಳನ್ನು ಪರಿಹಾರವಾಗಿ ಕೊಡಬೇಕು” ಎಂದು ಮೀನುಗಾರನ ಹೆಂಡತಿ ಬೇಡಿಕೆಯಿಡುತ್ತಾಳೆ. ಕಡಾನೆಯ ಬಳಿ ಕೇವಲ 14 ಹಸುಗಳು ಮಾತ್ರವಿದ್ದರೂ ಅನಾಥ ಹುಡುಗ ಇಸಾನ್, ತನ್ನ ಪೋಷಕನನ್ನು ಕಾಪಾಡಲು ಎಲ್ಲಿಂದಲೋ 40 ಹಸುಗಳನ್ನು ತರುತ್ತಾನೆ. ಆದರೆ ಅಷ್ಟೊತ್ತಿಗೆ ನ್ಯಾಯಾಲಯ ಕೊಟ್ಟ ಗಡುವು ಮುಗಿದಿದ್ದರಿಂದ, ಕಡಾನೆಯನ್ನು ನೇಣಿಗೇರಿಸಿ ಎಂಬ ತೀರ್ಪು ಹೊರಬರುತ್ತದೆ. ಕುಟುಂಬದವರು ಕಡಾನೆಯನ್ನು ಉಳಿಸಲು ಶತಪ್ರಯತ್ನ ಪಟ್ಟರೂ ಆ ವೇಳೆಗಾಗಲೆ ಜಿಹಾದಿಗಳು ಹತ್ಯೆಗೈದಿರುತ್ತಾರೆ. ಮಗಳು ತಂದೆಯನ್ನು ರಕ್ಷಿಸಲು ಓಡಿ ಬರುವಲ್ಲಿಗೆ ಸಿನಿಮಾ ಮುಕ್ತಾಯವಾಗುತ್ತದೆ.

ಬಹಳ ಸರಳವಾದ ಕಥಾನಕವಾದರೂ ಇಂದಿನ ನ್ಯಾಯ ಪದ್ಧತಿ, ಜೀವನ ಕ್ರಮ ಎರಡೂ ಹಾಳಾಗುತ್ತಿದೆ ಎಂಬುದನ್ನು ನಿರ್ದೇಶಕ ಸಿಸಾಕೋ ಒತ್ತಿ ಹೇಳುತ್ತಾರೆ. ಫ್ರೆಂಚ್ ದೇಶದಿಂದ ಆಮದಾದ ಜೀವನಕ್ರಮ ಒಂದೆಡೆಯಾದರೇ, ಜಿಹಾದಿಗಳು ಹೇರುತ್ತಿರುವ ಜೀವನಕ್ರಮ ಮತ್ತೊಂದು ಭಾಗ. ಸಿನಿಮಾ ಕಟ್ಟುವ ಕ್ರಮದಲ್ಲಿ ಅನೇಕ ಸಣ್ಣ ಸಣ್ಣ ಉಪಕಥೆಗಳನ್ನು ಸಿಸಾಕೋ ಸೇರಿಸುತ್ತಾರೆ. ಹೀಗಾಗಿ ಈ ಸಿನಿಮಾ ‘ಕಡಾನೆ’ ಕಥೆಯಾದರೂ, ಜಿಹಾದಿಗಳು ಯಾವ ಯಾವ ರೀತಿಯಲ್ಲಿ ನಿಯಮಗಳನ್ನು ಹೇರುತ್ತಾರೆ ಎಂಬುದನ್ನು ಅದ್ಬುತವಾಗಿ ನಿರೂಪಿಸಲಾಗಿದೆ.

ಜಿಹಾದಿಗಳ ನಿಂಬಂಧನೆ ಪ್ರಕಾರ, ಹೆಂಗಸರು ಪೂರ್ಣವಾಗಿ ದೇಹವನ್ನು ಮುಚ್ಚಿಕೊಂಡಿರಬೇಕು. ಒಮ್ಮೆ ಮೀನು ಮಾರುವ ಹೆಂಗಸೊಬ್ಬಳ ಬಳಿಗೆ ತೆರಳಿದ ಜಿಹಾದಿ, “ಕೈಗೆ ಏತಕೆ ಗ್ಲೌಸ್ ಹಾಕಿಕೊಂಡಿಲ್ಲ?” ಎಂದು ಗದರಿಸುತ್ತಾನೆ. ಗ್ಲೌಸ್ ಹಾಕಿಕೊಂಡರೆ, ಮೀನು ಮಾರುವುದಾದರೂ ಹೇಗೆ? ಎಂದು ಆಕೆ ಪ್ರತಿಭಟಿಸುತ್ತಾಳೆ. ಮತ್ತೊಂದು ದೃಶ್ಯದಲ್ಲಿ ಖ್ಯಾತ ಸಂಗೀತಗಾರ್ತಿಯೊಬ್ಬಳು ಹಾಡುವಾಗ, ಆಕೆಯನ್ನು ಬಂಧಿಸಿ, 40 ಚಡಿ ಏಟುಗಳ ಶಿಕ್ಷೆಯನ್ನು ಕೊಡುತ್ತಾರೆ. ಮಗದೊಂದು ನಿಂಬಂಧನೆ ಪ್ರಕಾರ, ಟಿಂಬಕ್ಟೂವಿನಲ್ಲಿ ಫುಟ್ ಬಾಲ್ ಆಡುವಂತಿಲ್ಲ. ಫುಟ್ ಬಾಲ್ ಆಡುತ್ತಿರುವವರನ್ನು ಕರೆದುಕೊಂಡು ಬಂದು 50 ಚಡಿ ಏಟಿನ ಶಿಕ್ಷೆಯನ್ನು ಕೊಡುತ್ತಾರೆ. ಇದರಿಂದ ಕುಪಿತರಾದ ಊರಿನ ಜನರು ಉಪಾಯವೊಂದನ್ನು ಹೂಡಿ, ಚೆಂಡನ್ನು ಬಳಸದೆ ಆಟ ಆಡಲು ಮುಂದಾಗುತ್ತಾರೆ. ಚೆಂಡನ್ನು ಒದೆಯುವಂತೆ ಮೈಮ್ ಮಾಡಿ ಪ್ರತಿಭಟನೆಯನ್ನು ಮುಂದುವರಿಸುತ್ತಾರೆ. ನಾಲ್ಕನೇ ಉಪಕಥೆಯಲ್ಲಿ ಜಿಹಾದಿಯೊಬ್ಬ, ಸುಂದರವಾದ ಹುಡುಗಿಗೆ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಾನೆ. ಆದರೆ ಹುಡುಗಿ ಒಪ್ಪುವುದಿಲ್ಲ. ಹಠ ಸಾಧಿಸಿದ ಜಿಹಾದಿ, ಒಬ್ಬ ಅಯೋಗ್ಯನ ಜೊತೆ ಆಕೆಯ ಮದುವೆ ಮಾಡಿಸುತ್ತಾನೆ.

ಜಿಹಾದಿಗಳ ನಿಯಮಾವಳಿಗೆ ಜನಸಾಮಾನ್ಯರಿಂದ ಪ್ರತಿರೋಧಗಳು ಎದುರಾಗುತ್ತಿರುತ್ತದೆ. ಘಟನೆಯೊಂದರಲ್ಲಿ ಸಂಗೀತಗಾರ್ತಿಯೊಬ್ಬಾಕೆ ಭಗವಂತ ಅಲ್ಲಾನನ್ನು ಹೊಗಳಿ ಹಾಡುತ್ತಿರುತ್ತಾಳೆ. ಆ ವೇಳೆ ಜಿಹಾದಿಗಳಿಗೆ ಹೊಡೆಯುವುದೋ? ಬೇಡವೋ? ಎಂಬ ಗೊಂದಲ ಮೂಡುತ್ತದೆ. ಇದೇ ವೇಳೆ “ನೀವು ಜನರನ್ನು ತಪ್ಪುದಾರಿಗೆ ಎಳೆದೊಯ್ಯುತ್ತಿದ್ದೀರಾ. ಇಸ್ಲಾಂನಲ್ಲಿ ಹೇಳಿರುವುದೇ ಬೇರೆ” ಎಂದು ಇಮಾಮ್  ಒಬ್ಬಾತ ಜಿಹಾದಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ.

ಇಲ್ಲಿ ನಿರ್ದೇಶಕ, ಟಿಂಬಕ್ಟೂವಿನ ಮರಳುಗಾಡು, ಅಲ್ಲಿನ ಜನರ ಜೀವನ ಕ್ರಮವನ್ನು ನೈಜಕಥೆಯಲ್ಲದೆ ಕೊಂಚ ಕಟ್ಟುಕಥೆ ಅಥವಾ ನೀತಿಕಥೆಯಂತೆ ಬಣ್ಣಿಸುತ್ತಾನೆ. ಪೂರ್ತಿ ಮಣ್ಣಿನಿಂದ ಕೂಡಿರುವ ಜನರ ಮನೆಗಳು ಇರುವೆ ಗೂಡಿನ ಶೈಲಿನಲ್ಲಿರುತ್ತವೆ. ಬಣ್ಣ ಬಳಿದಿರುವುದಿಲ್ಲ. ಇದರಲ್ಲೇ ಸಿನಿಮಾ ಸೌಂದರ್ಯವನ್ನು ಸೃಷ್ಟಿ ಮಾಡುತ್ತಾನೆ. ಹುಳುಗಳಂತೆ ಓಡಾಡುವ ಜನರ ನಡಿಗೆಯನ್ನು ಸಿನಿಮಾದ ಧ್ವನಿಯಾಗಿ ಬಳಸುವುದು ವಿಶೇಷ.

ಟಿಂಬಕ್ಟೂ ಸಿನಿಮಾದಲ್ಲಿ ಸಿಸಾಕೋ ಬಹಳ ಅದ್ಭುತವಾಗಿ ಕ್ರೌರ್ಯವನ್ನು ಚಿತ್ರಿಸಿದ್ದಾನೆ. ಮೀನುಗಾರನನ್ನು ಕೊಲ್ಲುವ ದೃಶ್ಯಗಳಂತೂ ಪ್ರೇಕ್ಷಕರ ನೆನಪಿನಲ್ಲಿ ಉಳಿಯುತ್ತದೆ. ಲಾಂಗ್ ಶಾಟ್ಸ್ ನಲ್ಲಿ ಚಿತ್ರೀಕರಿಸಿದ್ದರಿಂದ ಕ್ರೌರ್ಯಕ್ಕಿಂತ ಹೆಚ್ಚಾಗಿ ಕಡಾನೆ ಅಸಹಾಯಕತೆ ಎದ್ದು ಕಾಣುತ್ತದೆ. ಕಡಾನೆ ಉದ್ದೇಶ ಪೂರ್ವಕವಾಗಿ ಮೀನುಗಾರನನ್ನು ಕೊಂದಿರುವುದಿಲ್ಲ. ಇದನ್ನು ಚಿತ್ರಿಸಿದ ಕ್ರಮ ಅಮೋಘವಾಗಿದೆ. ಈ ಸನ್ನಿವೇಶಗಳಲ್ಲಿ ಶಬ್ದ, ದೃಶ್ಯ ಹಾಗೂ ಸಂಯೋಜನೆ ಅದ್ಭುತವಾದ ಮೌನವಿದೆ.

ಸಾಮಾನ್ಯವಾಗಿ ಇಸ್ಲಾಂ ದೇಶಗಳ ಬಗ್ಗೆ ಮಾತನಾಡುವ ಎಲ್ಲಾ ಯೂರೋಪಿಯನ್ ಸಿನಿಮಾಗಳಂತೆ, ಈ ಸಿನಿಮಾದಲ್ಲಿ ಏಕತಾನತೆ ಹಾಗೂ ಒಂದು ಭಾಗದ ದೃಷ್ಟಿಕೋನವಿಲ್ಲ. ಆಫ್ರಿಕಾದ ಸಿನಿಮಾ ಇತಿಹಾಸವನ್ನು ಗಮನಿಸಿದರೆ, ಫ್ರೆಂಚ್ ವಸಾಹತುಶಾಹಿ ಇರುವಷ್ಟು ಕಾಲ, ಆಫ್ರಿಕನ್ನರಿಗೆ “ನೀವು ಸಬ್ಜೆಕ್ಟ್ ಆಗಿ ಇರಬೇಕೆ ಹೊರತು, ಸಿನಿಮಾ ನಿರ್ದೇಶಿಸುವಂತಿಲ್ಲ” ಎಂಬ ನಿಯಮವನ್ನು ಹಾಕಿದ್ದರು. ಅಂದರೆ ಆಫ್ರಿಕಾದ ಯಾವ ನಾಗರೀಕನೂ ಸಿನಿಮಾ ನಿರ್ಮಿಸುವಂತಿರಲಿಲ್ಲ. ನಟನೆಗೆ ಮಾತ್ರ ಅವಕಾಶವಿತ್ತು.  ಹೀಗಾಗಿ ಸಿನಿಮಾ, ಕಥೆ ಹಾಗೂ ದೃಷ್ಟಿಕೋನ ಎಲ್ಲವನ್ನು ಹೊರ ದೇಶದವರು ಆಕ್ರಮಿಸಿಕೊಂಡಿದ್ದರು. ಈ ಕಾರಣದಿಂದ ಪ್ರತಿಭಟನೆಯಾಗಿ ಪ್ರಾರಂಭವಾದ ಚಳವಳಿಯನ್ನು ಓಸ್ಮಾನ್ ಸೆಂಬೇನ್ ಮುಂದುವರೆಸಿದರು. ನಂತರ ಅಬ್ದುರೆಹಮಾನ್ ಸಿಸಾಕೋ ಈ ಪ್ರತಿಭಟನೆಯನ್ನೇ ವಿಸ್ತರಿಸಿ, ಹೊಸ ಅರ್ಥವನ್ನು ಹಾಗೂ ಹೊಸ ಶಕ್ತಿಯನ್ನು ಟಿಂಬಕ್ಟೂ ಸಿನಿಮಾದಲ್ಲಿ ಕೊಡುತ್ತಾರೆ. ಇವೆಲ್ಲಾ ಕಾರಣದಿಂದ ಈ ಸಿನಿಮಾ ಬಹಳ ಮುಖ್ಯವಾಗುತ್ತದೆ.  

-ಗಿರೀಶ್ ಕಾಸರವಳ್ಳಿ

0 Comments

Submit a Comment

Your email address will not be published. Required fields are marked *

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more