ಸಿನಿಮಾ ಜಗತ್ತಿನ ಕ್ರೌರ್ಯಗಳು: ‘ದ ವರ್ಜಿನ್ ಸ್ಟ್ರಿಂಗ್ಸ್’ ವಿಶ್ಲೇಷಣೆ

ಜಗತ್ತಿನ ಶ್ರೇಷ್ಠ ನಿರ್ದೇಶಕರುಗಳಲ್ಲಿ ಒಬ್ಬರಾದ ಇಂಗ್ಮಾರ್ ಬರ್ಗ್ಮನ್ 1960ರಲ್ಲಿ ‘ದ ವರ್ಜಿನ್ ಸ್ಟ್ರಿಂಗ್ಸ್’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬರ್ಗ್ಮನ್ ಎಂದಾಕ್ಷಣ ವೈಲ್ಡ್ ಸ್ಟ್ರಾಬರೀಸ್, ದ ಸೆವೆಂತ್ ಸೀಲ್,  ಕ್ರೀಸ್ ಅಂಡ್ ವಿಸ್ಪರ್ಸ್ ಅಥವಾ ಪರ್ಸೋನಾ ಸಿನಿಮಾಗಳು ತಕ್ಷಣ ನೆನಪಿಗೆ ಬರುತ್ತದೆ. ದ ವರ್ಜಿನ್ ಸ್ಟ್ರಿಂಗ್ಸ್ ಈ ಎಲ್ಲಾ ಸಿನಿಮಾಗಳಿಗಿಂತ ವಿಶಿಷ್ವವಾದದು.

ಹಿಂಸೆ, ಕ್ರೌರ್ಯ, ದೌರ್ಜನ್ಯಗಳು ಸಿನಿಮಾಗಳಲ್ಲಿ ಸಮಸ್ಯೆಯನ್ನು ಸೃಷ್ಟಿ ಮಾಡುವ ಒಂದು ಅಂಶ. ಇದನ್ನೇ ವೈಭವೀಕರಿಸಿ ಜನರನ್ನು ಸೆಳೆಯುವ ಪ್ರಯತ್ನವನ್ನು ಫಿಲ್ಮ್ ಮೇಕರ್ಸ್ ನಿರಂತರವಾಗಿ ಮಾಡುತ್ತಿರುತ್ತಾರೆ. ಇನ್ನು ಕೆಲವು ಚಿತ್ರ ನಿರ್ಮಾಪಕರು, ಹಿಂಸೆ, ಕ್ರೌರ್ಯ ಎನ್ನುವುದು ದೈಹಿಕ ಹಿಂಸೆ ಎಂದು ಪರಿಗಣಿಸಿ ಅದನ್ನು ತಮ್ಮ ಚಿತ್ರದಲ್ಲಿ ಅಳವಡಿಸಿಕೊಳ್ಳವುದಿಲ್ಲ. ಆದರೆ ಇಂಗ್ಮಾರ್ ಬರ್ಗ್ಮನ್, ದ ವರ್ಜಿನ್ ಸ್ಟ್ರಿಂಗ್ಸ್ ಸಿನಿಮಾದಲ್ಲಿ ವಿಶಿಷ್ಟ ಶೈಲಿಯ ಕ್ರೌರ್ಯವನ್ನು ಬಿಚ್ಚಿಡುತ್ತಾರೆ.  

ದ ವರ್ಜಿನ್ ಸ್ಟ್ರಿಂಗ್ಸ್ ಸಿನಿಮಾ 16ನೇ ಶತಮಾನದ ಬ್ಯಾಲೆಟ್ ಇತಿಹಾಸವುಳ್ಳ ಚಿತ್ರ. ಸಾಮಾನ್ಯವಾಗಿ ಸಿನಿಮಾಗಳಿಗೆ ನಿರ್ದೇಶಕರೇ ಚಿತ್ರಕಥೆಗಳನ್ನು ಬರೆಯುವುದು ವಾಡಿಕೆ. ಆದರೆ ಈ ಸಿನಿಮಾದಲ್ಲಿ ಉಲ್ಲಾ ಇಸ್ಸಕ್ಸನ್ ಎನ್ನುವ ಲೇಖಕಿಯಿಂದ ಬರ್ಗ್ಮನ್, ಚಿತ್ರಕಥೆಯನ್ನು ಬರೆಸುತ್ತಾರೆ. ಇಸ್ಸಕ್ಸನ್ ಅವರು ಜಾನಪದ ಮತ್ತು ಬ್ಯಾಲೆಟ್ ಗಳ ಬಗ್ಗೆ ಸಂಶೋಧನೆ ಮಾಡಿ, ಅದರ ಬಗ್ಗೆ ಅಪಾರ ಪಾಂಡಿತ್ಯವನ್ನು ಗಳಿಸಿಕೊಂಡಿರುವ ಲೇಖಕಿಯಾದ್ದರಿಂದ ಚಿತ್ರಕಥೆಯನ್ನು ಅದ್ಭುತವಾಗಿ ನಿರೂಪಿಸಿದ್ದಾರೆ.

ಮಧ್ಯಕಾಲಿನ ಸ್ವೀಡೆನ್ ನ ಕುಟುಂಬ ಕುರಿತಾದ ಕಥೆಯೇ ‘ದ ವರ್ಜಿನ್ ಸ್ಟ್ರಿಂಗ್ಸ್’. ಕುಟುಂಬದಲ್ಲಿದ್ದವರು ಅಪ್ಪ, ಅಮ್ಮ, ಮಗಳು ಹಾಗೂ ಕೆಲಸದ ಹುಡುಗಿ. ಅಪ್ಪನ ಹೆಸರು ಟೋರೋ, ಮಗಳು ಕರೀನ್ ಹಾಗೂ ಕೆಲಸದವಳು ಇಂಗೇರಿ.

ಕರೀನ್ ಹುಟ್ಟುಹಬ್ಬದ ದಿನ ಮನೆಯ ಹಿರಿಯರು ಆಕೆಗೆ ಒಂದು ಕ್ಯಾಂಡಲ್ ಕೊಟ್ಟು, ಇದನ್ನು ಚರ್ಚ್ ಗೆ ಕೊಟ್ಟು ಬಾ ಎಂದು ಕಳುಹಿಸುತ್ತಾರೆ. ಜೊತೆಗೆ ಇಂಗೇರಿಯೂ ಹೋಗುತ್ತಾಳೆ. ಆದರೆ ಅತೀ ಸೌಂದರ್ಯವತಿಯಾದ ಕರೀನ್ ಕಂಡರೆ ಇಂಗೇರಿಗೆ ಸಿಟ್ಟು-ಸಿಡುಕು. ಮದುವೆಯ ಮುನ್ನವೇ ಇಂಗೇರಿ ಗರ್ಭಿಣಿಯಾಗಿದ್ದರಿಂದ, ಅನೇಕ ಮಾದರಿಯ ಅವಮಾನಗಳನ್ನು ಎದುರಿಸುತ್ತಿರುತ್ತಾಳೆ.

ದಾರಿಯಲ್ಲಿ ಸಾಗುತ್ತಿದ್ದಾಗ ಇವರಿಗೆ ಕುರಿಕಾಯುವ ಮಂದಿ ಎದುರಾಗುತ್ತಾರೆ. ಅವರು ಕರೀನಳನ್ನು ಕಂಡು ಊಟ, ತಿಂಡಿಯನ್ನು ಕೊಟ್ಟು ಉಪಚರಿಸುತ್ತಾರೆ. ಆಕೆ ತಿಂದು ಮುಗಿಸಿದ ಮರುಕ್ಷಣವೇ ಕುರಿಕಾಯುವ ಮಂದಿಯಲ್ಲೊಬ್ಬ ಆಕೆಯನ್ನು ಬಲತ್ಕರಿಸಿ ಕೊಲ್ಲುತ್ತಾನೆ. ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದರೂ ಜೊತೆಯಲ್ಲೇ ಇದ್ದ ಇಂಗೇರಿ ತಡೆಯಲು ಮುಂದಾಗುವುದಿಲ್ಲ.

ಇತ್ತ ಕಡೆ ಕತ್ತಲಾದರೂ ಮಗಳು ಬರಲಿಲ್ಲವೆಂದು ಕರೀನ್ ಪೋಷಕರು ಆತಂಕದಿಂದ ಕಾಯುತ್ತಿದ್ದರು. ಅರ್ಧರಾತ್ರಿಯ ಸಮಯದಲ್ಲಿ ಕುರಿಕಾಯುವ 3 ಮಂದಿ ಇವರ ಮನೆಯ ಬಳಿ ಬಂದು “ಈ ರಾತ್ರಿ ಇಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಡಿ” ಎಂದು ಕೇಳಿಕೊಳ್ಳುತ್ತಾರೆ. ಅವರಿಗೂ ತಾವು ಕೊಲೆಮಾಡಿದ ಹುಡುಗಿಯ ಮನೆಯಿದು ಎಂದು ತಿಳಿದಿರುವುದಿಲ್ಲ. ಮನೆಯವರು ಆ ರಾತ್ರಿ ಅಲ್ಲಿ ತಂಗಲು ಒಪ್ಪಿಗೆ ಸೂಚಿಸಿದ ಕೂಡಲೇ “ನಮ್ಮ ಬಳಿ ಬೆಲೆ ಬಾಳುವ ವಸ್ತುಗಳಿವೆ. ಖರೀದಿಸುತ್ತೀರಾ?” ಎಂದು ಕೇಳುತ್ತಾರೆ, ಮಾತ್ರವಲ್ಲ ಕರೀನ್ ಹಾಕಿಕೊಂಡಿದ್ದ ಉಡುಪುಗಳನ್ನು ತೋರಿಸುತ್ತಾರೆ. ಇದನ್ನು ಕಂಡು ದಿಗ್ಭ್ರಾಂತರಾದ ಕರೀನ್ ಪೋಷಕರು, ಏನೋ ಅನಾಹುತ ಆಗಿದೆ ಎಂದು ಊಹಿಸುತ್ತಾರೆ, ಜೊತೆಗೆ ಇಂಗೇರಿ ಎಲ್ಲಿ ಹೋದಳು ಎಂಬ ಬಗ್ಗೆಯೂ ಆಲೋಚಿಸುತ್ತಾರೆ. ಆದರೆ ಇಂಗೇರಿ ಮೊದಲೇ ಬಂದು ಮನೆಯಲ್ಲಿ ಅವಿತುಕೊಂಡಿರುವುದು ಇವರ ಗಮನಕ್ಕೆ ಬಂದಿರುವುದಿಲ್ಲ.

ಕರೀನ್ ಪೋಷಕರು ಕುರಿಕಾಯುವ ಜನರಿಗೆ ಕೊಟ್ಟಿಗೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಟ್ಟು, ಹೊರಗಡೆಯಿಂದ ಬೀಗ ಜಡಿಯುತ್ತಾರೆ. ನಂತರ ಅವಿತುಕೊಂಡಿದ್ದ ಇಂಗೇರಿಯನ್ನು ಪತ್ತೆಹಚ್ಚಿ ಪ್ರಶ್ನಿಸಿದಾಗ, ಆಕೆ ನಡೆದ ಘಟನೆಯನ್ನೆಲ್ಲಾ ವಿವರವಾಗಿ ತಿಳಿಸುತ್ತಾಳೆ. ಮಗಳ ಹತ್ಯೆಯ ಸುದ್ದಿ ತಿಳಿದ ತಕ್ಷಣ, ಕರೀನ್ ಅಪ್ಪ ಟೋರೋ ಕೆಂಡಮಂಡಲವಾಗಿ, ಬೆಳಗಾಗುವ ಹೊತ್ತಿಗೆ ಕುರಿಕಾಯುವ ಜನರನ್ನು ಹತ್ಯೆಮಾಡಿಬಿಡುತ್ತಾನೆ. ಕೊಂದ ಪಾಪಕ್ಕೆ ಪ್ರಾಯಶ್ಚಿತವಾಗಿ ಪ್ರಾರ್ಥನೆ ಸಲ್ಲಿಸಲು ಚರ್ಚಿಗೆ ಹೋಗುವಾಗ, ದಾರಿ ಮಧ್ಯದಲ್ಲಿ ಕರೀನ್ ಮೃತದೇಹ ದೊರಕುತ್ತದೆ. ಟೋರೋ ಕೂಡಲೇ ಮಗಳ ದೇಹವನ್ನು ಎತ್ತಿಕೊಂಡಾಗ ಆ ಸ್ಥಳದಲ್ಲಿ ನೀರುವ ಚಿಮ್ಮುತ್ತದೆ. ಅದೇ ‘ದ ವರ್ಜಿನ್ ಸ್ಟ್ರಿಂಗ್’.

ಈ ಸಿನಿಮಾ ನೋಡುತ್ತಿದ್ದಂತೆ ನಮಗೆ ಅಡುಗೂಲಜ್ಜಿ ಕಥೆ ನೆನಪಾಗಬಹುದು. ವಿಶೇಷವೆಂದರೇ ಉಪಮೆಗಳು ಅಥವಾ ಮೆಟಾಫರ್ ಗಳು ಈ ಚಿತ್ರದದಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಇಂಗ್ಮಾರ್ ಬರ್ಗ್ಮನ್ನಿನ ವೈಶಿಷ್ಟ್ಯವೇ ಇದು. ಆತನ ಎಲ್ಲಾ ಸಿನಿಮಾಗಳಲ್ಲೂ ಮೆಟಾಫರ್ ಗಳು,  ಪ್ರಯಾಣದ ಕಥೆಗಳು ತಪ್ಪದೇ ಇರುತ್ತದೆ. ಪ್ರತೀ ಚಿತ್ರದಲ್ಲೂ ನಟರು ನಡೆದು ಸಾಗುವ ಸಂದರ್ಭದಲ್ಲಿ, ಕುದುರೆ ಅಥವಾ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಅವರ ಇಡೀ ಜೀವನವನ್ನು ಪುನರಾವಲೋಕನ ಮಾಡಿಕೊಳ್ಳುತ್ತಾರೆ. ನಾವು ಎಲ್ಲಿ ಎಡವಿದ್ದೇವೆ? ಸರಿಯಾದ ಜೀವನವನ್ನು ಕಂಡುಕೊಂಡಿದ್ದೇವೆಯೇ? ಅಥವಾ ನಮ್ಮ ಜೀವನ ಸಾರ್ಥಕವೇ? ಎಂಬುದನ್ನು ಯೋಚಿಸುತ್ತಿರುತ್ತಾರೆ. ಇದೇ ಮೆಟಾಫರ್ ಅನ್ನು ‘ದ ವರ್ಜಿನ್ ಸ್ಟ್ರಿಂಗ್ಸ್’ ಸಿನಿಮಾದಲ್ಲೂ ಬಳಸಲಾಗಿದೆ.

ಕ್ಯಾಂಡಲ್ ಗಳನ್ನು ತೆಗೆದುಕೊಂಡು ಚರ್ಚಿಗೆ ಹೋಗುವ ಪ್ರಯಾಣದಲ್ಲಿ ಕರೀನ್ ಜೊತೆಗಾರ್ತಿಯಾಗಿ ಇಂಗೇರಿ ಇರುತ್ತಾಳೆ. ಇವಳಲ್ಲಿ ಕ್ರೌರ್ಯದ ಸ್ವರೂಪವಾದ ಮತ್ಸರ, ಹೊಟ್ಟೆಕಿಚ್ಚು ತುಂಬಿರುತ್ತದೆ. ಮುಗ್ದತೆ, ಸೌಂದರ್ಯ ಗುಣಗಳುಳ್ಳ ಹುಡುಗಿ ಕರೀನ್. ಆದರೆ ಆಂತರಿಕವಾಗಿ ಕರೀನ್ ನಲ್ಲಿಯೂ ಕೊಂಚ ನಕರಾತ್ಮಕ ಗುಣವೂ ಅಡಗಿರುತ್ತದೆ. ಪ್ರತಿದಿನವೂ ಇಂಗೇರಿಯ ಮೇಲೆ ರೇಗುತ್ತಾ, ಅವಳ ಕುರೂಪ ಗುಣ ಮತ್ತು ಬಸುರಿ ವಿಚಾರವನ್ನಿಟ್ಟುಕೊಂಡು ತೆಗಳುತ್ತಿರುತ್ತಾಳೆ. ಹೊರಮುಖದಲ್ಲಿ ಕಾಣುವ ಕ್ರೌರ್ಯ ಹಾಗೂ ಒಳ ವ್ಯಕ್ತಿತ್ವದಲ್ಲಿ ಕಾಣುವ ಕ್ರೌರ್ಯವನ್ನು ಈ ಎರಡೂ ಪಾತ್ರಗಳು ಧ್ವನಿಸುತ್ತಿರುತ್ತವೆ. ಗಮನಿಸಬೇಕಾದ ಅಂಶವೆಂದರೇ, ಈ ಪ್ರಯಾಣದಲ್ಲಿ ಇಬ್ಬರ ಪಾತ್ರಗಳು ಅದಲು-ಬದಲಾಗುತ್ತದೆ. ಕರೀನ್ ಕೊಲೆಯಾದ ತಕ್ಷಣವೇ ಇಂಗೇರಿ ತನ್ನ ತಪ್ಪುಗಳನ್ನು ತಿದ್ದಿಕೊಂಡು, ಅವುಗಳಿಗೆ ಪ್ರಾಯಶ್ಚಿತವನ್ನು ಕಂಡುಕೊಳ್ಳುತ್ತಾಳೆ. ತಾನೇ ಅತೀ ಸೌಂದರ್ಯವತಿ ಎಂದು ಅಹಂ ಇಟ್ಟುಕೊಂಡ ಕರೀನ್ ಕೊಲೆಯಾಗುತ್ತಾಳೆ. ಇಲ್ಲಿ ಪ್ರಯಾಣವೆಂಬುದು ಒಂದು ಮೆಟಾಫರ್ ಆಗಿ ಬಿಂಬಿತವಾಗುವುದು ವಿಶೇಷ.  

ಸಿನಿಮಾದ ಮತ್ತೊಂದು ಪ್ರಮುಖ ಅಂಶವೆಂದರೇ, ಕುರಿಕಾಯುವವರು ಪ್ಯಾಗನ್ ಜನಾಂಗದವರು. ಕರೀನ್ ಅವರದ್ದು ಕ್ರೈಸ್ತ ಕುಟುಂಬ. ಇಲ್ಲಿ ಪ್ಯಾಗನ್ ಜನರ ಕ್ರೌರ್ಯಕ್ಕೆ ನಿರ್ದೇಶಕ “ಊಟದ ವ್ಯವಸ್ಥೆ ಇಲ್ಲದಿರುವ ಕಾರಣದಿಂದಲೇ ಅವಳನ್ನು ಕೊಲ್ಲಲಾಗಿದೆ” ಎಂಬ ಸಮರ್ಥನೆ ಕೊಡುತ್ತಾನೆ. ಈ ಕೊಲೆಗೆ ಒಂದು ಸ್ಪೂರ್ತಿಯಿದೆ. ಆದರೆ ಕರೀನ್ ತಂದೆ ಮಾಡಿದ ಕೊಲೆಗೆ ಈ ಸ್ಪೂರ್ತಿ ಇರುವುದಿಲ್ಲ. ಏಕೆಂದರೆ ಟೋರೋ ಕೊಲೆ ಮಾಡಿದ ಪ್ರಾಯಶ್ಚಿತಕ್ಕಾಗಿ ತಕ್ಷಣವೇ ಚರ್ಚಿಗೆ ತೆರಳುತ್ತಾನೆ. ಇವೆರಡೂ ದ್ವಂದ್ವ ರೀತಿಯ ಸನ್ನಿವೇಶಗಳು. ಈ ರೀತಿಯ ದ್ವಂದ್ವಗಳನ್ನು ಮಹಾಭಾರತ ಕಥೆಯಲ್ಲೂ ಕಾಣಬಹುದು. ಒಂದು ಸಂದರ್ಭದಲ್ಲಿ ಧರ್ಮರಾಯನಿಗೆ ನರಕ ಪ್ರಾಪ್ತವಾಗುತ್ತದೆ, ಕೌರವರಿಗೆ ಸ್ವರ್ಗಸ್ಥರಾಗುತ್ತಾರೆ. ಇದನ್ನು ಯಮನಲ್ಲಿ ಪ್ರಶ್ನಿಸಿದ ಧರ್ಮರಾಯ “ಏಕೆ ನಮಗೆ ನರಕ ಪ್ರಾಪ್ತಿ ಮಾಡಿದೆ?” ಎಂದು ಕೇಳುತ್ತಾನೆ. ಆಗ ಯಮ “ಕೌರವವರ ಕ್ರೌರ್ಯದ ಹಿಂದೆ ನಂಬಿಕೆ ಇತ್ತು. ನಿಮ್ಮದು ಲಾಭದ ಉದ್ದೇಶ. ಹಾಗಾಗಿ ನೀನು ಧರ್ಮಪಾಲನೆ ಮಾಡಿದರೂ, ನಿನ್ನ ಕ್ರಿಯೆಯ ಹಿಂದೆ ದುರುದ್ದೇಶವಿತ್ತು. ಅವರ ಕ್ರಿಯೆಯ ಹಿಂದೆ ದುರುದ್ದೇಶ ಇರಲಿಲ್ಲ” ಎಂದು ಉತ್ತರಿಸುತ್ತಾನೆ. ಇಂಗ್ಮಾರ್ ಬರ್ಗ್ಮನ್ ಈ ತರಹದ ವ್ಯಾಖ್ಯಾನವನ್ನು ಕೊಡುತ್ತಾನೆ.

ಈ ಸಿನಿಮಾದಲ್ಲಿ ನನಗೆ ಬಹಳ ಮುಖ್ಯವಾಗಿರುವುದು ಕ್ರೌರ್ಯವನ್ನು ತೋರಿಸುವ ಕ್ರಮ. ಸಾಮಾನ್ಯವಾಗಿ ಬಹುತೇಕ ಸಿನಿಮಾಗಳಲ್ಲಿ ಕ್ರೌರ್ಯವನ್ನು ರೋಚಕವಾಗಿ, ವೈಭವೀಕರಿಸಿ ತೋರಿಸಲಾಗುತ್ತದೆ. ಆ ಕಾರಣಕ್ಕೆ ಕೆಲ ಗಂಭೀರ ನಿರ್ದೇಶಕರು ಕ್ರೌರ್ಯವನ್ನು, ದೈಹಿಕ ಹಿಂಸೆಯ ಸನ್ನಿವೇಶಗಳನ್ನು ತರುವುದಿಲ್ಲ. ಕೆಲವು ನಿರ್ದೇಶಕರಿಗೆ ಮಾತ್ರ ಕ್ರೌರ್ಯವನ್ನು ತೋರಿಸಿದಷ್ಟು ಜನಪ್ರಿಯತೆ ಸಿಗುತ್ತದೆ ಎಂಬ ಭಾವನೆ ಇರುತ್ತದೆ. ಆದರೆ ಸಿನಿಮಾವನ್ನು ‘ಕಲೆ’ ಎಂದು ಯೋಚನೆ ಮಾಡುತ್ತಾರೋ ಅವರು, ಕ್ರೌರ್ಯವನ್ನು ವ್ಯಾಪಾರದ ಸರಕು ಎಂದು ನಿರ್ಲಕ್ಷಿಸುತ್ತಾರೆ. ಆದರೆ ಇಂಗ್ಮಾರ್ ಬರ್ಗ್ಮನ್ ಕ್ರೌರ್ಯವನ್ನು ವಿದ್ಯುಕ್ತ ಕ್ರಿಯೆಯಾಗಿ ತೋರಿಸುತ್ತಾನೆ. ಈ ಶೈಲಿಯು, ಕಲಾತ್ಮಕ ಸಿನಿಮಾ ಮಾಡುವವರು ಒಂದು ತಂತ್ರವಾಗಿ ಪರಿಗಣಿಸಬಹುದು.  

ಕರೀನ್ ತಂದೆ ಮೂರು ಜನ ಕುರಿಕಾಯುವ ಜನರನ್ನು ಕೊಲ್ಲುವ ಸನ್ನಿವೇಶವನ್ನು ಚಿತ್ರಿಸಿದ ಕ್ರಮ ಬಹಳ ಅದ್ಭುತವಾಗಿದೆ. ಈ ದೃಶ್ಯವನ್ನು ನೋಡಿದ ಹಲವರು “ಈ ಸನ್ನಿವೇಶ ಬಹಳ ಭೀಕರವಾಗಿದೆ” ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಸಿನಿಮಾದಲ್ಲಿ ನೈಜವಾದ ಕ್ರೌರ್ಯವನ್ನು ಇಂಗ್ಮಾರ್ ಬರ್ಗ್ಮನ್ ತೋರಿಸುವುದಿಲ್ಲ. ಅದರ ಬದಲಾಗಿ ಕ್ಷಣಾರ್ಧದಲ್ಲೇ ಕೊಲ್ಲುವ ರೀತಿಯಲ್ಲಿ ದೃಶ್ಯಗಳನ್ನು ತೆಗೆಯಲಾಗುತ್ತದೆ.

ಅಸಹನೆಗಳ ಮೂಲಕವೇ ದೃಶ್ಯವನ್ನು ಕಟ್ಟಿಕೊಡುವುದು ಬರ್ಗ್ಮನ್ ಚತುರತೆ. ಇಂಗೇರಿ ಕೊಲೆಯ ವಿಚಾರವನ್ನು ತಿಳಿಸಿದ ತಕ್ಷಣ, ಟೋರೋ ಹೆಂಡತಿ ಬಳಿ ಹೋಗಿ “ಕೊಟ್ಟಿಗೆಗೆ ಬೀಗ ಹಾಕು” ಎನ್ನುತ್ತಾನೆ, ಇಂಗೇರಿಗೆ “ಚಾಕು ಸಿದ್ಧಮಾಡು” ಎನ್ನುತ್ತಾನೆ. ನಂತರ ಒಂದು ಕತ್ತಿ ಕೈಗೆತ್ತಿಕೊಂಡು ಮರವೊಂದರ ರೆಂಬೆ, ಕೊಂಬೆಗಳನ್ನು ಕತ್ತರಿಸುತ್ತಾನೆ. ಈತ ಮರವನ್ನು ಕತ್ತರಿಸುವ ಶೈಲಿ ವಿಭಿನ್ನವಾಗಿದೆ. ವಾಸ್ತವ ನೆಲೆಯಿಂದ, ಅವಾಸ್ತವ ನೆಲೆಗೆ ಈ ದೃಶ್ಯ ಸಾಗುತ್ತದೆ. ಬೃಹತ್ ಮರವೊಂದನ್ನು ತಾನೊಬ್ಬನೆ ಕತ್ತರಿಸಿ ತಳ್ಳುತ್ತಾನೆ. ನಂತರ ಕೊಂಬೆಯಲ್ಲಿದ್ದ ಎಲೆಕಡ್ಡಿಗಳನ್ನು ಕತ್ತರಿಸಿ ತನ್ನ ದೇಹಕ್ಕೆ ಅದರಿಂದಲೇ ಹೊಡೆದುಕೊಳ್ಳುತ್ತಾನೆ. ದೇಹವೆಲ್ಲಾ ಕೆಂಪಾದ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತಾನೆ. ಬಳಿಕ ಕೊಟ್ಟಿಗೆಯ ಬಾಗಿಲ ಬಳಿಗೆ ತೆರಳಿ ಬೆಳಗಾಗುವುದನ್ನೇ ಕಾಯುತ್ತಾ ನಿಲ್ಲುತ್ತಾನೆ. ವಾಸ್ತವವಾಗಿ ಈ ಎಲ್ಲಾ ಪ್ರಕ್ರಿಯೆಗಳನ್ನು ಒಬ್ಬ ಸಾಮಾನ್ಯ ಮನುಷ್ಯ ಮಾಡಲು ಸಾಧ್ಯವಿಲ್ಲ. ಆದರೆ ಇದನ್ನು ವಿದ್ಯುಕ್ತ ಕ್ರಿಯೆಯಾಗಿ ತೋರಿಸಿದಾಗ ಪ್ರೇಕ್ಷಕ ಒಪ್ಪಿಕೊಳ್ಳುತ್ತಾನೆ.

ಟೋರೋ ಕುರಿಕಾಯುವವರನ್ನು ಕೊಲೆ ಮಾಡಲು, ಮಾಡಿಕೊಳ್ಳುವ ಪೂರ್ವಸಿದ್ಧತೆ ಪ್ರೇಕ್ಷಕನಿಗೆ ಉದ್ವೇಗ ತರುವಂತಿದೆ. ಬೆಳಕಾದ ತಕ್ಷಣದ ಕುರಿಕಾಯುವ ಜನರು, ಟೋರೋನ ಭಯಾನಕ ರೂಪವನ್ನು ಕಂಡು ಗಾಬರಿಯಾಗುತ್ತಾರೆ. ಒಬ್ಬನಂತೂ ಅಲ್ಲಿಂದ ತಪ್ಪಿಸಿಕೊಂಡು ಓಡಲು  ಪ್ರಯತ್ನಿಸುತ್ತಾನೆ. ಆದರೆ ಅಟ್ಟಿಸಿಕೊಂಡು ಹೋಗುವ ಟೋರೋ, ಆತನಿಗೆ ಚಾಕುವಿನಿಂದ ಇರಿಯುತ್ತಾನೆ. ಮತ್ತೊಬ್ಬಾತ ಗವಾಕ್ಷ ಮೂಲಕ ಓಡಿಹೋಗಲು ಪ್ರಯತ್ನಿಸುತ್ತಿರುವಾಗ ಕೆಳಗೆಳೆದು ಸಾಯಿಸುತ್ತಾನೆ. ಸಣ್ಣ ಹುಡುಗನಾಗಿದ್ದ ಮೂರನೇಯವನನ್ನು ಗೋಡೆಗೆ ಎಸೆದು ಸಾಯಿಸುತ್ತಾನೆ. ಇಲ್ಲಿ ಕೊಲ್ಲುವ ದೃಶ್ಯಗಳಲ್ಲಿ ಕ್ರಿಯೆ ಇದೆಯೇ ಹೊರತು, ಆ ಕ್ರಿಯೆಯನ್ನು ಹಿಗ್ಗಿಸಿಲ್ಲ ಅಥವಾ ಬಿಲ್ಡಪ್ ಮೂಲಕ ತೋರಿಸಿಲ್ಲ. ಈ ರೀತಿಯ ಕ್ರಮದಿಂದ ಹಿಂಸೆಯನ್ನು ಸಿನಿಮಾದಲ್ಲಿ ಕಲಾತ್ಮಕವಾಗಿ ವಿದ್ಯುಕ್ತ ಕ್ರಿಯೆಯ ಮೂಲಕ  ಹೇಗೆ ತರಬಹುದು ಎಂಬುದನ್ನು ತಿಳಿದುಕೊಳ್ಳಬಹುದು.  

ಕ್ರೌರ್ಯವನ್ನು ಸಂಯಮದಿಂದಲೂ, ಅತಿರೇಕವಾಗಿಯೂ ಚಿತ್ರದಲ್ಲಿ ತೋರಿಸಬಹುದು. ಆದರೆ ಇತ್ತೀಚಿನ ಸಿನಿಮಾಗಳಲ್ಲಿ ಕ್ರೌರ್ಯವನ್ನು ರಂಜನೀಯವನ್ನಾಗಿಸಿದ್ದಾರೆ. ಮಾತ್ರವಲ್ಲ ಅನುಕರಣೀಯ ಎನ್ನುವಂತೆ ಚಿತ್ರಿಸಲಾಗುತ್ತದೆ.  

ಇಂಗ್ಮಾರ್ ಬರ್ಗ್ಮನ್ ಈ ಮಾದರಿಯ ಶೈಲಿಯನ್ನೂ ತನ್ನ ಇತರೆ ಸಿನಿಮಾಗಳಲ್ಲಿ ಅಳವಡಿಸಿಕೊಂಡಿಲ್ಲ. ವೈಲ್ಡ್ ಸ್ಟ್ರಾಬರೀಸ್ ಅಥವಾ ಪರ್ಸೋನಾ ಸಿನಿಮಾಗಳ ಅಭಿನಯ ಶೈಲಿಯನ್ನು ‘ದ ವರ್ಜಿನ್ ಸ್ಟ್ರಿಂಗ್ಸ್’ನಲ್ಲಿ ನಕಲು ಮಾಡಿಲ್ಲ. ಕಥೆ ಮತ್ತು ಕಥಾಹಂದರದ ಅವಾಸ್ತವ ಅಥವಾ ಸಾಮಾಜಿಕ ಹಂತವನ್ನು ಮೀರಿ ನಿರ್ಮಾಣ ಮಾಡಿದಂತಹ ಸಿನಿಮಾವಿದು. ಅದ್ಭುತ ಸಂಕಲನ, ಲೈಟಿಂಗ್ ಮತ್ತು ಸುಂದರವಾದ ಛಾಯಗ್ರಹಣಗಳ ಮೂಲಕ ಈ ಚಿತ್ರ ಕಟ್ಟಿಕೊಡಲಾಗಿದೆ. ಅಲ್ಲದೇ, ಗವಾಕ್ಷಿಯನ್ನು ತೆಗೆಯುತ್ತಾ ಬೆಳಕಾಗುವ ದೃಶ್ಯವನ್ನು ಕಲಾತ್ಮಕವಾಗಿ ತೋರಿಸಲಾಗಿದೆ. ಈ ರೀತಿಯ ಶೈಲೀಕರಣದಿಂದ ಕಥಾ ಸಂವಿಧಾನಕ್ಕೆ ಒಂದು ರೀತಿ ಸಾವಯವ ಸೌಂದರ್ಯ ಬರುತ್ತದೆ.

ಅಕಿರಾ ಕುರೋಸಾವಾ ನಿರ್ದೇಶನದ ಸಂಜೂರೊ ಸಿನಿಮಾದ ಆಕ್ಷನ್ ಸನ್ನಿವೇಶವೊಂದರಲ್ಲಿ, ಒಬ್ಬ ವ್ಯಕ್ತಿ ಬಹಳ ಕಾಲ ಕತ್ತಿಯನ್ನು ಕೈಯಲ್ಲಿ ಹಿಡಿದುಕೊಂಡು, ನಂತರ ತಕ್ಷಣದಲ್ಲೇ ಚುಚ್ಚಿಬಿಡುತ್ತಾನೆ. ದ ಗುಡ್, ದ ಬ್ಯಾಡ್ ಅಂಡ್ ದ ಹಗ್ಲಿ ಸಿನಿಮಾದಲ್ಲಿರುವ ಶೂಟ್ ಮಾಡುವ ದೃಶ್ಯಕ್ಕೆ 6-7 ನಿಮಿಷಗಳ ಕಾಲ ಬಿಲ್ಡಪ್ ಕೊಡಲಾಗುತ್ತದೆ. ನಂತರ ಕ್ಷಣಾರ್ಧದಲ್ಲೇ ಶೂಟ್ ಮಾಡಿ, ಎದುರಾಳಿಯನ್ನು ತಕ್ಷಣದಲ್ಲೇ ಕೆಳಗುರುಳಿಸಲಾಗುತ್ತದೆ. ಈ ಸಿನಿಮಾಗಳನ್ನು ನೋಡಿ ಪ್ರತಿಕ್ರಿಯಿಸಿದ ಇಂಗ್ಮಾರ್ ಬರ್ಗ್ಮನ್, “ನಾನು ಕುರೋಸಾವನ ಹ್ಯಾಂಗ್ ಓವರ್ ನಿಂದಲೇ ‘ದ ವರ್ಜಿನ್ ಸ್ಟ್ರಿಂಗ್ಸ್’ ಸಿನಿಮಾ ನಿರ್ದೇಶನ ಮಾಡಿದ್ದು” ಎಂದು ಹೇಳುತ್ತಾನೆ. ಇಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿರುವುದೇನೆಂದರೇ ಸಿನಿಮಾ ಕಟ್ಟುವ ಕ್ರಮ ಮತ್ತು ಸಮಗ್ರ ಶಿಲ್ಪವನ್ನು ಮಾತ್ರ. ಹೀಗಾಗಿ ಈ ಸಿನಿಮಾದಲ್ಲಿ ನೋಟ ಮತ್ತು ಸಂವಿಧಾನ ಬಹಳ ಅದ್ಭುತವಾಗಿ ಮೂಡಿಬಂದಿದೆ.

-ಗಿರೀಶ್ ಕಾಸರವಳ್ಳಿ

0 Comments

Submit a Comment

Your email address will not be published. Required fields are marked *

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more