ಸಾಕ್ಷ್ಯ ಚಿತ್ರಕ್ಕೆ, ಕಥಾ ಚಿತ್ರದ ಲೇಪನ: ದ ಸ್ಟೋರಿ ಆಫ್ ದ ವೀಪಿಂಗ್ ಕ್ಯಾಮಲ್

‘ದ ಸ್ಟೋರಿ ಆಫ್ ದ ವೀಪಿಂಗ್ ಕ್ಯಾಮಲ್‘ ಮಂಗೋಲಿಯಾ ದೇಶದ ಸಿನಿಮಾ. ಇದರ ನಿರ್ದೇಶಕಿ ಬೆಂಬಾಸುರೆನ್ ದಾವಾ.  2003ರಲ್ಲಿ ಈ ಸಿನಿಮಾ ತೆರೆಕಂಡಿತು. ಈ ಚಿತ್ರಕ್ಕೆ ಕೆಲವು ಕಡೆ ಶ್ರೇಷ್ಠ ಸಾಕ್ಷ್ಯಚಿತ್ರ ಎಂದು, ಮತ್ತೊಂದು ಕಡೆ ಶ್ರೇಷ್ಠ ಕಲಾಚಿತ್ರ ಎಂದು ಪ್ರಶಸ್ತಿಗಳು ಲಭಿಸಿವೆ. ಈ ಒಂದೇ ಸಿನಿಮಾ ಸಾಕ್ಷ್ಯ ಚಿತ್ರ ಮತ್ತು ಕಲಾ ಚಿತ್ರ ಎಂದು ಹೆಸರು ಪಡೆದಿರುವುದು ವೈಶಿಷ್ಟ್ಯ. ಬೆಂಬಾಸುರೆನ್ ದಾವಾ ಹುಟ್ಟಿದ್ದು ಮಂಗೋಲಿಯಾದಲ್ಲಿ, ಬೆಳೆದಿದ್ದು ಹಾಗೂ ಫಿಲ್ಮ್ ಮೇಕಿಂಗ್ ಕಲಿತಿದ್ದು ಜರ್ಮನಿಯಲ್ಲಿ.

ಬೆಂಬಾಸುರೆನ್ ದಾವಾ ಮತ್ತು ಸಿನಿಮಾಟೋಗ್ರಫರ್ ಲುಯಿಂಗ್ ಫಲೋರ್ನಿ, ಮಂಗೋಲಿಯಾದಲ್ಲಿ ಬುಡಕಟ್ಟು ಜನಾಂಗದವರಿಗೆ ಒಂಟೆಯ ಬಗ್ಗೆ ಕಥೆಗಳು ಹಾಗೂ ಕಲ್ಪನೆಗಳು ಇವೆ ಎಂದು ತಿಳಿದು ಅಲ್ಲಿಗೆ ತೆರಳುತ್ತಾರೆ. ಅಲ್ಲೊಂದು ಊರಿನಲ್ಲಿ ಒಂದು ಕುಟುಂಬದ ಬಗ್ಗೆ ಚಿತ್ರೀಕರಣ ಮಾಡುತ್ತಾರೆ. ನಂತರ ಅದೇ ದೃಶ್ಯಗಳನ್ನು ಇಟ್ಟುಕೊಂಡು ಕಥೆ ಕಟ್ಟುತ್ತಾರೆ. ಈ ರೀತಿಯ ಸಿನಿಮಾ ಕಟ್ಟುವ ಕ್ರಮ ಬಹಳ ವಿಶಿಷ್ಟ.  ಇವರು ಕಥೆಯನ್ನಿಟ್ಟುಕೊಂಡು, ನಂತರ ಚಿತ್ರೀಕರಣಕ್ಕೆ ಸ್ಥಳಗಳನ್ನು ಹುಡುಕುವುದಿಲ್ಲ. ಬದಲಾಗಿ ನೇರವಾಗಿ ಸ್ಥಳಕ್ಕೆ ಹೊರಟು, ಅಲ್ಲೊಂದು ಮನೆಯನ್ನು ಆರಿಸಿಕೊಂಡು, ಅವರ ಜೊತೆಯಲ್ಲಿದ್ದು, ಸಿಕ್ಕ ಸಹಜ ದೃಶ್ಯಗಳನ್ನಿಟ್ಟುಕೊಂಡೇ ಸಿನಿಮಾ ನಿರ್ಮಾಣ ಮಾಡುತ್ತಾರೆ.

ಭಾರತದ ಸಿನಿಮಾಗಳ ಕಥೆಗೆ ಆರಂಭ, ಮಧ್ಯೆ ಮತ್ತು ಅಂತ್ಯ ಎಂಬ ಮಾದರಿ ಮಾತ್ರವಿದೆ. ಆದರೆ ಯಾವುದೋ ಒಂದು ಗೊತ್ತಿಲ್ಲದಿರುವ ಸ್ಥಳಕ್ಕೆ ಹೋಗಿ, ಅಲ್ಲಿಯೇ ಇದ್ದು, ಅವರ ಜೀವನದ ಬಗ್ಗೆ ಚಿತ್ರೀಕರಣ ಮಾಡುವುದು ವಿಶಿಷ್ಟ ಹಾಗೂ ಈ ಶೈಲಿ ಅನುಕರಣನೀಯ.

ಒಂದು ಮಂಗೋಲಿಯನ್ ಕುಟುಂಬ. ಆ ಕುಟುಂಬದಲ್ಲಿ, ಅಪ್ಪ, ಅಮ್ಮ, ಅಜ್ಜ, ಅಜ್ಜಿ ಮಕ್ಕಳು ಇರುತ್ತಾರೆ. ಮೂಲತಃ ಇವರು ಕುರಿಕಾಯುವ ಜನ. ಇವರ ಮನೆಯಲ್ಲಿ ಒಂಟೆಗಳಿರುತ್ತವೆ. ಒಂದು ಒಂಟೆ ಗರ್ಭ ಧರಿಸಿದ ಬಳಿಕ ಮರಿ ಹಾಕುತ್ತದೆ. ಬಿಳಿ ಬಣ್ಣದಿಂದ ಕೂಡಿದ್ದ ಮರಿ ಒಂಟೆಗೆ ಎರಡು ಡುಬ್ಬಗಳಿರುತ್ತದೆ. ಆದರೆ ಅಮ್ಮ ಒಂಟೆ, ಬಿಳಿ ಬಣ್ಣದ ಮರಿ ತನ್ನದಲ್ಲ ಎಂದು ಭಾವಿಸಿ, ಮರಿಯನ್ನು ಒಪ್ಪಿಕೊಳ್ಳದೆ, ಹಾಲು ಸಹ ಕೊಡುವುದಿಲ್ಲ. ಹತ್ತಿರಕ್ಕೆ ಕರೆದುಕೊಂಡು ಹೋದರೆ ಒದಿಯುತ್ತಲಿರುತ್ತದೆ. ಹೀಗಾಗಿ ಯಾರೋ ಒಬ್ಬರು ಈ ಕುಟುಂಬದವರಿಗೆ “ದೂರದ ಊರಿನಲ್ಲಿ ಒಬ್ಬ ಸಂಗೀತ ಮಾಂತ್ರಿಕನಿದ್ದಾನೆ. ಅವನನ್ನು ಕರೆದುಕೊಂಡು ಬಂದರೆ ಬಹುಶಃ ಸರಿಯಾಗಬಹುದು” ಎಂದು ಹೇಳಿದ್ದರಿಂದ ಕೂಡಲೇ ಕುಟುಂಬದವರು ಸಂಗೀತಗಾರನನ್ನು ಕರೆದುಕೊಂಡು ಬರುತ್ತಾರೆ. ಆತ ಮಂಗೋಲಿಯ ಪಿಟೀಲಿನಿಂದ ಸಂಗೀತ ನುಡಿಸುತ್ತಿರುವಾಗ ಮನೆಯ ಒಡತಿ ಅದಕ್ಕೆ ಧ್ವನಿ ಸೇರಿಸಿ ಹಾಡುತ್ತಾಳೆ. ಈ ಸಂಗೀತವನ್ನು ಕೇಳಿ, ಅಮ್ಮ ಒಂಟೆ ಅಳುತ್ತಾ, ತನ್ನ ಮರಿಯನ್ನು ಸ್ವೀಕಾರ ಮಾಡಿ, ಹಾಲನ್ನು ಕೊಡುತ್ತದೆ. ಇದು  ಸಿನಿಮಾದ ಕಥೆ.

ಈ ಸಿನಿಮಾದಲ್ಲಿ ಘರ್ಷಣೆ ಇರುವುದು ಮನುಷ್ಯ-ಮನುಷ್ಯ ನಡುವೆ ಅಲ್ಲ. ಬದಲಾಗಿ ಪ್ರಾಣಿ-ಪ್ರಾಣಿ ನಡುವೆ ಇದೆ. ಇದು ಹೇಗೆ ಎಂಬುದೇ ಸಿನಿಮಾದ ಸ್ವಾರಸ್ಯ. ಸಿನಿಮಾದ ಕಥೆ ಕಟ್ಟುವ ಕ್ರಮ ಬಹಳ ಅದ್ಭುತವಾಗಿದೆ. ನಿರ್ದೇಶಕಿ ಈ ಸಿನಿಮಾವನ್ನು ದಂತಕಥೆ ರೂಪದಲ್ಲಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಬರುವ ಅನೇಕ ಅಂಶಗಳು ನಮಗೆ ಪುರಾಣದಲ್ಲಿ ಕೇಳಿರುವಂತೆ ಭಾಸವಾಗುತ್ತದೆ. ಅಂದರೆ ಮಂಗೋಲಿಯನ್ ಅವರ ನಂಬಿಕೆ ಜಗತ್ತನ್ನು ಈಕೆ ನಿರ್ದೇಶಕಿ ದಾಖಲಿಸುತ್ತಾಳೆ. ಈ ಸಂಪ್ರದಾಯವನ್ನು ಪ್ರಶ್ನೆ ಮಾಡುವುದಾಗಲಿ ಅಥವಾ ವ್ಯಾಖ್ಯಾನ ಮಾಡುವುದು ಕೂಡ ಸಾಧ್ಯವಿಲ್ಲ.  

ಎರಡು ಡುಬ್ಬದ ಒಂಟೆ ಯಾವಾಗಲೂ ಮುಖ ಎತ್ತಿಕೊಂಡೇ ಇರುತ್ತದೆ. ಅದರ ಕಥೆಯನ್ನು ಕುಟುಂಬದ ಅಜ್ಜ ಬಹಳ ಸ್ವಾರಸ್ಯವಾಗಿ ಹೇಳುತ್ತಾನೆ. ಈ ಒಂಟೆಗೆ ಒಂದು ಕಾಲದಲ್ಲಿ ಕೊಂಬಿತ್ತು. ಜಿಂಕೆಯೊಂದು ಅದನ್ನು ನೋಡಿ “ನಿನ್ನ ಕೊಂಬು ನೋಡುವುದಕ್ಕೆ ಚೆನ್ನಾಗಿದೆ. ನನಗೂ ನಿನ್ನ ಕೊಂಬನ್ನು ಕೊಡು. ನಾನೂ ನಾಲ್ಕು ದಿನ ಇಟ್ಟುಕೊಳುತ್ತೇನೆ.” ಎಂದು ಹೇಳುತ್ತದೆ. ಈ ಮಾತನ್ನು ನಂಬಿ ಒಂಟೆ ಕೂಡಲೇ ತನ್ನ ಕೊಂಬನ್ನು ಕೊಡುತ್ತದೆ. ಆದರೆ ಕೊಂಬು ತೆಗೆದುಕೊಂಡು ಹೋದ ಜಿಂಕೆ ವಾಪಸ್ಸು ಬರುವುದಿಲ್ಲ.  ಹೀಗಾಗಿ ಒಂಟೆಯು, ಜಿಂಕೆ ಎಂದಾದರೂ ವಾಪಸ್ಸು ಬರಬಹುದು ಎಂದು ತಲೆ ಮೇಲೆತ್ತಿ ನೋಡುತ್ತಾ ನಿಂತಿರುತ್ತದೆ ಎಂದು ಅಜ್ಜ ಕಥೆ ಹೇಳುತ್ತಾನೆ.

ಈ ಕಥೆ ಸಿನಿಮಾದಲ್ಲಿ ಒಂದು ಚೌಕಟ್ಟನ್ನು ಕೊಡುತ್ತದೆ. ಅಂದರೆ ನಮ್ಮ ಕಾರ್ಯಕಾರಣ ಜಗತ್ತಿನ ವ್ಯಾಖ್ಯಾನಗಳನ್ನು ಮೀರಿದ ಕಥೆಯ ಸ್ವರೂಪ ಇದರಲ್ಲಿದೆ. ನಮ್ಮ ದೈನಂದಿನ ಜಗತ್ತಿನಲ್ಲಿ ಎಲ್ಲದ್ದಕ್ಕೂ ಕಾರಣ ಹುಡುಕುತ್ತೇವೆ. ಎಲ್ಲದಕ್ಕೂ ಒಂದು ಸಮರ್ಥನೆಯನ್ನು ಹುಡುಕುತ್ತೇವೆ. ಆದರೆ ಈ ಸಿನಿಮಾದಲ್ಲಿ ಇರುವುದು ನಂಬಿಕೆಯ ಜಗತ್ತು. ಅಂತೆಯೇ ಸಿನಿಮಾದ ಮಧ್ಯೆದಲ್ಲಿ ಮತ್ತೊಂದು ಕಥೆ ಬರುತ್ತದೆ. ಅಜ್ಜ ಮತ್ತೊಮ್ಮೆ ಮೊಮ್ಮಕ್ಕಳಿಗೆ ಒಂದು ಕಥೆಯನ್ನು ಹೇಳುತ್ತಾನೆ. ಈ ಒಂಟೆ ದೇವರ ಹತ್ತಿರ ಹೋಗಿ, “ನೋಡು ದೇವರೇ, ಎಲ್ಲಾ ರಾಶಿ ಚಕ್ರಕ್ಕೂ ಒಂದೊಂದು ಪ್ರಾಣಿ ಹೆಸರು ಕೊಟ್ಟಿದ್ದೀಯಾ. ನನಗೆ ಒಂದೂ ಕೊಟ್ಟಿಲ್ಲವಲ್ಲ. ನನಗೂ ಒಂದು ಕೊಡು” ಎಂದು ಕೇಳುತ್ತದೆ. ಆಗ ದೇವರು “ನೀನು ಹೇಳುವುದು ನಿಜ. ನಿನ್ನನ್ನು ರಾಶಿ ಚಕ್ರಕ್ಕೆ ಸೇರಿಸಿಲ್ಲ. ಆದರೆ ಎಲ್ಲಾ ಪ್ರಾಣಿಗಳ ಒಂದೊಂದು ಭಾಗವನ್ನು ನಿನಗೆ ಕೊಡುತ್ತೀನಿ. ಹಾಗಾಗಿ ಎಲ್ಲಾ ರಾಶಿ ಚಕ್ರದಲ್ಲಿ ನೀನು ಇರುತ್ತೀಯಾ.” ಎಂದು ಹೇಳುತ್ತಾನೆ.

ಸಿನಿಮಾದ ಬಹಳ ಸುಂದರವಾದ ಅಂಶ ಕಥೆಯ ಕೊನೆಯ ಭಾಗದಲ್ಲಿ ಬರುತ್ತದೆ. ಒಂಟೆ ಸಂಗೀತವನ್ನು ಕೇಳಿ ಅಳುವುದೆಂದರೆ, ಪ್ರಾಣಿ ಜಗತ್ತಿನಲ್ಲಿ ಮನುಷ್ಯ ಸಂವೇದನೆ ಹುಡುಕುವ ಪ್ರಯತ್ನ ಮಾಡುವುದು. ಪ್ರಾಣಿ ಅಳುತ್ತದೆಯೋ ಅಥವಾ ಮನುಷ್ಯ ನಿಜವಾಗಿ ಅಳುತ್ತಾನೋ ಗೊತ್ತಿಲ್ಲ. ಆದರೆ ಹಾಡನ್ನು ಕೇಳಿ ಒಂಟೆ ಬದಲಾಗುತ್ತದೆ.

ಈ ಸಿನಿಮಾವು ಪ್ರೇಕ್ಷಕರನ್ನು ಬೇರೊಂದು ರೀತಿಯಲ್ಲಿ ಕಥೆಯನ್ನು ನೋಡುವುದಕ್ಕೆ ಪ್ರೇರೆಪಿಸುತ್ತದೆ. ಒಂಟೆಗೆ ಹಾಡನ್ನು ಹೇಳಿ ಮನವೊಲಿಸುವುದು ಆಚರಣೆಯಂತೆ ಕಂಡರೂ, ಈ ದೃಶ್ಯಗಳು ಜನಾಂಗೀಯ ಅಧ್ಯಯನದಂತೆ, ಕಥಾನಕ ಚಿತ್ರದಂತೆ, ಜೊತೆಗೆ ಪ್ರಾಣಿ ಮತ್ತು ಮನುಷ್ಯ ನಡುವಿನ ಸಂಬಂಧವೂ ಇರುವಂತೆ ಸಿನಿಮಾ ನಿರ್ಮಾಣ ಮಾಡಲಾಗಿದೆ. ಒಂದು ಕಡೆ ಪ್ರಾಣಿ ಜಗತ್ತಿನಲ್ಲಿ ಅಮ್ಮ ಮತ್ತು ಮರಿಯ ಸಂಬಂಧದಲ್ಲಿ ಹೊಂದಾಣಿಕೆ ಇಲ್ಲವೆಂಬ ಚಿತ್ರಣವನ್ನು ತೋರಿಸುವ ಕ್ರಮ. ಮತ್ತೊಂದು ಕಡೆ ಕೂಡು ಕುಟುಂಬದಲ್ಲಿ ಅಜ್ಜ, ಅಜ್ಜಿ, ಮಗ, ಸೊಸೆ, ಮೊಮ್ಮಕ್ಕಳ ಆತ್ಮೀಯ ಸಂಬಂಧವನ್ನು ಪ್ರಾಣಿ ಜಗತ್ತಿನ ಬದಿಗಿಟ್ಟು ಸಿನಿಮಾ ಕಟ್ಟುವ ಕ್ರಮ. ಅನಂತರ ಪ್ರಕೃತಿ ಮತ್ತು ಮನುಷ್ಯ ನಡುವಿನ ಸಂಬಂಧದ ಬಗ್ಗೆಯೂ ಚಿತ್ರೀಕರಿಸಿರುವ ಕ್ರಮವೂ ಅದ್ಭುತವಾಗಿದೆ. ಇಲ್ಲಿನ ಜನರ ನೆಲೆ ಮರಳುಗಾಡಿನಲ್ಲಿರುವುದರಿಂದ ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಯಾವ ರೀತಿಯ ರಕ್ಷಣೆಯನ್ನು ಪಡೆದುಕೊಳ್ಳುತ್ತಾರೆ ಎಂಬ ದೃಶ್ಯಗಳನ್ನು ಸಹ ಸೆರೆಹಿಡಿದಿರುವುದು ಸೋಜಿಗ.

ಸಂಗೀತ ಮಾಂತ್ರಿಕನನ್ನು ಕರೆದುಕೊಂಡು ಬರಲು ಕುಟುಂಬದ ಇಬ್ಬರು ಮಕ್ಕಳು ಹೋಗುತ್ತಾರೆ. ನಗರಕ್ಕೆ ತೆರಳಿದಾಗ ಅಲ್ಲೊಂದು ಮಾಲ್ ನೋಡಿ ಆಶ್ಚರ್ಯಚಕಿತರಾಗುತ್ತಾರೆ. ಟಿ.ವಿ ಬಗ್ಗೆ ಆಕರ್ಷಣೆಗೊಳ್ಳುತ್ತಾರೆ. ನಂತರ ವಾಪಸ್ ಮನೆಗೆ ಬಂದು ಟಿ.ವಿ ಬೇಕೆಂದು ಗಲಾಟೆ ಮಾಡುತ್ತಾರೆ. ಅದಕ್ಕೆ ಮಕ್ಕಳ ಅಪ್ಪ “20 ಕುರಿಗಳನ್ನು ಮಾರಿದರೆ ಟಿ.ವಿ ಕೊಂಡಕೊಳ್ಳಬಹುದು. ಆದರೆ ಟಿ.ವಿ ಬಳಸಲು ಕರೆಂಟ್ ತರುವುದು ಹೇಗೆ ?” ಎಂದು ಗದರಿಸುತ್ತಾನೆ. ಆಗ ಅಜ್ಜ ಅದ್ಭುತವಾದ ಒಂದು ಮಾತನ್ನು ಹೇಳುತ್ತಾನೆ, “ಟಿ.ವಿ ಬೇಡ ಮಕ್ಕಳೆ, ಏಕೆಂದರೆ ಟಿ.ವಿಯಲ್ಲಿ ನೋಡುವುದು ನಿಜವಲ್ಲ. ಅದು ಕನ್ನಡಿಯಲ್ಲಿ ಕಾಣುವ ಬಿಂಬಗಳು ಮಾತ್ರ” ಎಂದು ಹೇಳಿ ಮಕ್ಕಳನ್ನು ಸಮಾಧಾನಪಡಿಸುತ್ತಾನೆ.

ಇಂದು ಕಥಾಚಿತ್ರಗಳಿಗೆ ಮನ್ನಣೆ ಸಿಗುತ್ತಿರುವುದು ಅದಕ್ಕೆ ಸಾಕ್ಷ್ಯಚಿತ್ರದ ಸ್ವರೂಪ ಬಂದಾಗ. ಕನ್ನಡದ ‘ತಿಥಿ’ ಸಿನಿಮಾಕ್ಕೆ ಬಹುದೊಡ್ಡ ಮನ್ನಣೆ ಸಿಕ್ಕಿದ್ದು, ಸಾಕ್ಷ್ಯ ಚಿತ್ರದ ಗುಣಮಟ್ಟವಿದೆ ಎಂಬ ಕಾರಣಕ್ಕೆ. ಈ ತರಹದ ಗುಣಮಟ್ಟ ಚಿತ್ರವನ್ನು ನಿರ್ಮಾಣ ಮಾಡುವುದಕ್ಕೆ ಅನೇಕರು ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಸಾಕ್ಷ್ಯ ಚಿತ್ರಕ್ಕೂ, ಕಥಾ ಚಿತ್ರದ ಲೇಪನ ಕೊಡುವ ಪ್ರಯತ್ನವೂ ನಡೆಯುತ್ತಿದೆ. ಮಣಿಕೌಲ್ ಅವರ ಸಿನಿಮಾಗಳು, ಕಥಾ ಚಿತ್ರವೋ? ಸಾಕ್ಷ್ಯಚಿತ್ರವೋ? ಎಂದು ತಿಳಿಯುವುದಿಲ್ಲ. ಎರಡನ್ನೂ ಸಮೀಕರಿಸಿ ಸಿನಿಮಾಗಳನ್ನು ನಿರ್ಮಾಣ ಮಾಡುವುದು ಇವರ ಕ್ರಮ.

ಅಮೆರಿಕದ ಫಿಲ್ಮ್ ಮೇಕರ್ ರಾಬರ್ಡ್ ಈ ತರಹದ ಸಿನಿಮಾಗಳಿಗೆ ನಾಂದಿ ಹಾಡುತ್ತಾನೆ. ಫ್ರೆಂಚ್ ಸರ್ಕಾರವು 1920ರಲ್ಲಿ ಪ್ಲಹರ್ಟಿಗೆ ಹಣಕೊಟ್ಟು, ನಾರ್ಥ್ ಪೋಲೆಗೆ ತೆರಳಿ ಅಲ್ಲಿನ ವಿಷಯಗಳ ದಾಖಲಿಕರಣಕ್ಕೆ ಸೂಚಿಸುತ್ತದೆ. ಪರಿಶೋಧಕನಾಗಿದ್ದ ರಾಬರ್ಡ್ ಪ್ಲಹರ್ಟಿ ನಾರ್ಥ್ ಪೋಲೆಯ ಜನರ ಜೀವನ ಶೈಲಿ ಗಮನಿಸಿ ಆಕರ್ಷಣೆಗೊಳ್ಳುತ್ತಾನೆ. ನಾಗರೀಕ ಸಮಾಜದ ಸಂಪರ್ಕ ಇಲ್ಲದೆ, ಸುಂದರವಾದ ಜೀವನವನ್ನು ಕಟ್ಟಿಕೊಂಡ ರೀತಿಗೆ ಎಂದು ಆಶ್ಚರ್ಯಗೊಳ್ಳುತ್ತಾನೆ. ಕೊನೆಗೆ ಫ್ರೆಂಚ್ ಸರ್ಕಾರವನ್ನು ಒಪ್ಪಿಸಿ, ಅಲ್ಲಿನ ಜನಜೀವನದ ಬಗ್ಗೆ ಸಿನಿಮಾ ತಯಾರಿಸುತ್ತಾನೆ. ಆ ಸಿನಿಮಾದ ಹೆಸರು ‘ನಾನುಕ್ ಆಫ್ ದ ನಾರ್ಥ್’. ಅನಂತರ ಮ್ಯಾನ್ ಆಫ್ ಅರಾನ್ (1934), ಮೋನಾ (1926), ಲೂಸಿಯಾನಾ ಸ್ಟೋರಿ (1948) ಸಿನಿಮಾಗಳನ್ನು ನಿರ್ಮಿಸುತ್ತಾನೆ. ಬೆಂಬಾಸುರೆನ್ ದಾವಾ ಈ ರೀತಿಯ ಪರಂಪರೆಯ ಬಗ್ಗೆ ಮಾಡಿದ ಚಿತ್ರ ‘ದ ಸ್ಟೋರಿ ಆಫ್ ದ ವೀಪಿಂಗ್ ಕ್ಯಾಮಲ್. ಹೀಗಾಗಿ ಇದೊಂದು ವಿಶಿಷ್ಟ ಸಿನಿಮಾ ಪರಂಪರೆ. ಆದರೆ ಈ ರೀತಿಯ ಪರಂಪರೆ ಭಾರತದಲ್ಲಿ ಇನ್ನೂ ಮೂಡಿಬಂದಿಲ್ಲ.

ಇವತ್ತಿನ ಡಿಜಿಟಲ್ ಕಾಲದಲ್ಲಿ, ಒಂದು ಕುಟುಂಬದ ಜೊತೆಗಿದ್ದು, ಅಲ್ಲಿನ ಆಗುಹೋಗುಗಳನ್ನು ಕ್ಯಾಮೆರಾದಲ್ಲಿ ದಾಖಲಿಸುತ್ತಾ, ಕಲಬೆರೆಕೆಯಿಲ್ಲದ ಜೀವನ ಶೈಲಿಯನ್ನು ತೋರಿಸಬಹುದು. ಈ ರೀತಿಯಾಗಿ ಕಥೆಯನ್ನು ಕಟ್ಟುವ ಸಿನಿಮಾಗಳಿಗೆ, ಹೇಳುವ ಸತ್ಯಗಳಿಗೆ ವಿಶಿಷ್ಟವಾದ ಛಾಯೆ ಇರುತ್ತದೆ. ಈ ತರಹದ ಛಾಯೆಯನ್ನು ಹಿಡಿಯುವ ಪ್ರಯತ್ನ ಭಾರತದಲ್ಲಿನ್ನೂ ಆಗಿಲ್ಲ. ಬೆಂಗಳೂರಿನಲ್ಲಿ ಕುಳಿತುಕೊಂಡು ಕಥೆಯೊಂದನ್ನು ಬರೆದು, ಈ ರೀತಿ ಇದ್ದಿರಬಹುದು ಎಂದು ಊಹಿಸಿಕೊಂಡು, ಆ ನಂತರ ಆ ಸ್ಥಳಕ್ಕೆ ತೆರಳಿ ನಿಜವೆಂಬಂತೆ ಸಿನಿಮಾ ಮಾಡುತ್ತಾರೆ. ಆದರೆ ಈ ಚಿತ್ರ ಹಾಗಲ್ಲ. ಗೊತ್ತಿಲ್ಲದ ಸ್ಥಳಕ್ಕೆ ಹೋಗಿ, ಗೊತ್ತಿಲ್ಲದಿರುವ ಪ್ರಪಂಪಚವನ್ನು ಕಂಡು, ಹಾಗೆ ದಾಖಲಿಸಿ, ಅದನ್ನು ವಾಪಸ್ಸು ತಂದು ಕಥೆ ಕಟ್ಟುವುದು ಬಹಳ ವಿಶಿಷ್ಟವಾದ ಕ್ರಮ.

ಬೆಂಬಾಸುರೆನ್ ದಾವಾ ಇದೇ ಮಾದರಿಯ ಒಂದೆರಡು ಸಿನಿಮಾಗಳನ್ನು ಮಾಡಿದ್ದಾರೆ. ಕೇವ್ ಆಫ್ ದ ಯೆಲ್ಲೋ ಡಾಗ್ (2005) ಕೂಡ ಇದೇ ಶೈಲಿಯಲ್ಲಿದೆ. ಹೊಸ ರೀತಿಯ ಪ್ರಯತ್ನ ಹಾಗೂ ಹೊಸ ರೀತಿಯ ಸಿನಿಮಾ ಕಟ್ಟುವ ಕ್ರಮವನ್ನು ಸಾಧ್ಯಗೊಳಿಸಿರುವುದಕ್ಕಾಗಿ ಈ ಚಿತ್ರವು ಮಹತ್ವವೆನಿಸಿದೆ.

-ಗಿರೀಶ್ ಕಾಸರವಳ್ಳಿ

0 Comments

Submit a Comment

Your email address will not be published. Required fields are marked *

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more