ಕಥಾ ಚಿತ್ರದಲ್ಲಿ ಸಾಕ್ಷ್ಯ ಚಿತ್ರದ ಪರಂಪರೆ: ದ ಬ್ಯಾಟಲ್ ಆಫ್ ಅಲ್ಜಿಯರ್ಸ್

ಇಟಾಲಿಯನ್, ಅಲ್ಜೀರಿಯನ್ ಸಹಭಾಗಿತ್ವದಲ್ಲಿ ನಿರ್ಮಾಣವಾದ ಸಿನಿಮಾ ‘ದ ಬ್ಯಾಟಲ್ ಆಫ್ ಅಲ್ಜಿಯರ್ಸ್’. ಸಿನಿಮಾರಂಗದ ಇತಿಹಾಸದಲ್ಲೇ ಇದು ಬಹಳ ಮುಖ್ಯ ಚಿತ್ರ ಎಂದು ಪರಿಗಣಿಸಲ್ಪಟ್ಟಿದೆ.  ಇಟಲಿಯ ಖ್ಯಾತ ನಿರ್ದೇಶಕರಾದ ಗಿಲ್ಲೋ ಪಾಂಟಿಕೊರ್ವೋ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. “ಅಲ್ಜೀರಿಯಾ ದೇಶದ ಸ್ವಾತಂತ್ರ್ಯ ಸಂಗ್ರಾಮದ ಕುರಿತಾದ ಸಿನಿಮಾವೊಂದನ್ನು ನಿರ್ದೇಶಿಸಿ” ಎಂದು ಒಮ್ಮೆ ಇಟಲಿಯನ್ ಸರ್ಕಾರ ಗಿಲ್ಲೋ ಪಾಂಟಿಕೊರ್ವೋ ಅವರಲ್ಲಿ ಮನವಿ ಸಲ್ಲಿಸುತ್ತದೆ. ಇದಕ್ಕೆ ಒಪ್ಪಿಗೆ ಸೂಚಿಸಿದ ಪಾಂಟಿಕೊರ್ವೋ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ.

ಕ್ರಾಂತಿಗಳ ಕುರಿತಾಗಿಯೇ ಹೆಚ್ಚಿನ ಸಿನಿಮಾ ನಿರ್ದೇಶಿಸಿದ್ದಾರೆ ಎಂಬ ಪ್ರಖ್ಯಾತಿ ಗಿಲ್ಲೋ ಪಾಂಟಿಕೊರ್ವೋಗಿದೆ. ಇವರ ಆಲೋಚನೆಯಲ್ಲಿ ಮೂಡಿಬಂದ 22 ಸಿನಿಮಾಗಳಲ್ಲಿ ಬಹುತೇಕ, ಬೇರೆ ಬೇರೆ ದೇಶಗಳ ಕ್ರಾಂತಿಗಳನ್ನು ಪ್ರತಿನಿಧಿಸುತ್ತದೆ. ದ ಬ್ಯಾಟಲ್ ಆಫ್ ಅಲ್ಜಿಯರ್ಸ್, ಕ್ವಿಮಾಡಾ ಮತ್ತು ಓಗ್ರೋ ಗಿಲ್ಲೋ ಅವರ ಜನಪ್ರಿಯ ಮೂರು ಚಿತ್ರಗಳು. ‘ದ ಬ್ಯಾಟಲ್ ಆಫ್ ಅಲ್ಜಿಯರ್ಸ್’ ಸಿನಿಮಾ ಅದ್ಭುತವಾದ ಸಂವೇದನೆಯನ್ನು ಸೃಷ್ಟಿ ಮಾಡಿತ್ತು. ಬಹುದೊಡ್ಡ ಚಿಂತಕರೆನಿಸಿಕೊಂಡಿದ್ದ ಎಡ್ವರ್ಡ್ ಸೈಡ್ ಈ ಸಿನಿಮಾ ನೋಡಿ, “ಚಿತ್ರವನ್ನು ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ. ಅತ್ಯಂತ ಶ್ರೇಷ್ಠ ಸಿನಿಮಾವಿದು” ಎಂದು ಕೊಂಡಾಡುತ್ತಾರೆ. ಅದೇ ರೀತಿ ಅಮೇರಿಕಾದ ಖ್ಯಾತ ನಿರ್ದೇಶಕ ಸ್ಟಾನ್ಲೀ ಕುಬ್ರಿಕ್ ಅವರು, “ಸಿನಿಮಾದ ಶಕ್ತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ಹಾಗೂ ಸಿನಿಮಾದ ಸಾಧನೆಯನ್ನು ಅರಿಯಬೇಕಾದರೆ ದ ಬ್ಯಾಟಲ್ ಆಫ್ ಅಲ್ಜಿಯರ್ಸ್ ಚಿತ್ರವನ್ನು ನೋಡಬೇಕು” ಎಂದು ಪ್ರಶಂಸಿದ್ದಾರೆ.

ದ ಬ್ಯಾಟಲ್ ಆಫ್ ಅಲ್ಜಿಯರ್ಸ್ ಸಿನಿಮಾವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಮೊದಲು ಅಲ್ಜೀರಿಯಾದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ತಿಳಿದುಕೊಳ್ಳಬೇಕು. ಅಲ್ಜೀರಿಯಾ ಸುಮಾರು 150 ವರ್ಷಗಳ ಕಾಲ, ಅಂದರೆ 1839 ರಿಂದ 1964ರವರೆಗೆ ಫ್ರೆಂಚ್ ಆಡಳಿತದಲ್ಲಿತ್ತು. 1954ರಲ್ಲಿ ಅಲ್ಜೀರಿಯಾದ ಜನ, “ನಮಗೆ ಸ್ವಾತಂತ್ರ್ಯ ಬೇಕು” ಎಂದು ಹೋರಾಟಕ್ಕಿಳಿಯುತ್ತಾರೆ. ಈ ಘಟನೆಗಳ ಕುರಿತಾಗಿ ಇರುವ ಸಿನಿಮಾವೇ ‘ದ ಬ್ಯಾಟಲ್ ಆಫ್ ಅಲ್ಜಿಯರ್ಸ್’.

ಯಾವುದೇ ಒಂದು ಯುದ್ಧದ ಬಗ್ಗೆ ಹೇಳುವಾಗ ನಾಯಕರ ಹೆಸರನ್ನು ಹೇಳುತ್ತೇವೆ. ಉದಾಹರಣೆಗೆ: ನೆಪೋಲಿಯನ್, ಶಿವಾಜಿ, ಟಿಪ್ಪು ಸುಲ್ತಾನ್ ಇತ್ಯಾದಿ. ಆದರೆ ಅಲ್ಜೀರಿಯಾದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರೇ ನಾಯಕರು. ಇದರಿಂದಾಗಿ ಗಿಲ್ಲೋ ಪಾಂಟಿಕೊರ್ವೋಗೆ ಗೊಂದಲ ಕಾಡುತ್ತದೆ. “ಜನರೇ ನಾಯಕರಾಗಿರುವ ಸಂಗ್ರಾಮವನ್ನು, ಯಾವ ರೀತಿ ದಾಖಲಿಸಬೇಕು” ಎನ್ನುವ ಪ್ರಶ್ನೆ/ಆತಂಕ ಮೂಡುತ್ತದೆ.  ಕೊನೆಗೊಂದು ನಿರ್ಣಯಕ್ಕೆ ಬಂದು, ಇಲ್ಲಿ ಯಾವುದೇ ನಾಯಕ ಮತ್ತು ಪ್ರತಿನಾಯಕರು ಇರಬಾರದು. ನಾಯಕನ ವಿಚಾರವನ್ನು ಪ್ರಸ್ತಾಪಿಸಿದರೆ, ಫ್ರೆಂಚ್ ಅಥವಾ ಅಲ್ಜೀರಿಯಾದ ಪರವಲ್ಲದಿದ್ದರೂ ಯುದ್ದದ ಪರವಾಗಿಬಿಡುವ ಸಾಧ್ಯತೆಯಿದೆ. ಯುದ್ಧದಲ್ಲಿ ಯಾರೇ ಜಯ ಸಾಧಿಸಿದರೂ ಪರಿಣಾಮ ಒಂದೇ ರೀತಿಯಾಗಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿರುತ್ತಾರೆ. ಮನುಷ್ಯತ್ವ ನಾಶವಾಗಿರುತ್ತದೆ. ಹಾಗಾಗಿ ಯುದ್ಧ ಪರವಾಗಿ ನಿಲ್ಲಬಾರದು” ಎಂಬ ನಿರ್ಣಯಕ್ಕೆ ಬರುತ್ತಾರೆ.

ಅಲ್ಜೀರಿಯಾದ ಮುಸ್ಲಿಂಮರಿಗೆ ಫ್ರೆಂಚರ ತುಳಿತದಿಂದ ಮುಕ್ತಿ ದೊರಕಬೇಕಿತ್ತು. ಆದರೆ ಯಾವುದೇ ಸ್ವಾತಂತ್ರ್ಯವಿರದಿದ್ದರೂ ಫ್ರೆಂಚರಿಗೆ ಅಲ್ಜೀರಿಯಾ ಜನರನ್ನು ಆಕ್ರಮಿಸಿಕೊಳ್ಳುವ ಗುರಿಯಿತ್ತು. ಹೀಗಾಗಿ ತಾನು ಕ್ರೌರ್ಯವನ್ನೂ ಬೆಂಬಲಿಸಬಾರದು ಎಂದು ಗಿಲ್ಲೋ ಪಾಂಟಿಕೊರ್ವೋ ನಿರ್ಧರಿಸಿದ್ದರು. ಯಾವುದೇ ನಾಯಕರನ್ನು ತೋರಿಸದೆ, ಜನರಿಂದಲೇ ಸಂಗ್ರಾಮ ಹೇಗೆ ಸೃಷ್ಟಿಯಾಯಿತು ಎಂಬುದರ ವಿವರವನ್ನು ಸಮತೋಲನದಿಂದ ತಮ್ಮ ಚಿತ್ರದಲ್ಲಿ ರೂಪಿಸುತ್ತಾರೆ.  

ಭಾರತ ಮತ್ತು ಅಲ್ಜೀರಿಯಾ ಸ್ವಾತಂತ್ರ್ಯ ಸಂಗ್ರಾಮದ ವ್ಯತ್ಯಾಸವೇನೆಂದರೇ, ಭಾರತದಲ್ಲಿ ಶಾಂತಿಯುತ ಮಾದರಿಯ ಹೋರಾಟ ನಡೆಯುತ್ತಿತ್ತು. ಆದರೆ ಅಲ್ಜೀರಿಯಾದಲ್ಲಿ ಮುಸ್ಲಿಂ ಜನರು ಗೆರಿಲ್ಲಾ ಪ್ರಕಾರದ ಯುದ್ಧತಂತ್ರವನ್ನು ಅಳವಡಿಸಿಕೊಂಡಿದ್ದರು. ಗೆರಿಲ್ಲಾ ವಾರ್ ಫೇರ್ ನಲ್ಲಿ  ವೈರಿ ಯಾರು ಎಂಬುದೇ ಅರಿವಿಗೆ ಬರುವುದಿಲ್ಲ.  ಸಹಚರನೇ ಬಾಂಬ್ ಅಥವಾ ಗನ್ ಮೂಲಕ ಕೊಲ್ಲುವ ಸಾಧ್ಯತೆಯಿರುತ್ತದೆ. ಇಂತಹ ಯುದ್ದ ಮಾದರಿಯನ್ನು ಅಲ್ಜಿರಿಯನ್ ಮಂದಿ ರೂಢಿಸಿಕೊಂಡು ಫ್ರೆಂಚ್ ಜನರನ್ನು ನಿರಂತರವಾಗಿ ಹತ್ಯೆಗೈಯುತ್ತಾರೆ. ಅಲ್ಜಿರಿಯನ್ ಮುಸ್ಲಿಂರ ಈ ತೆರನಾದ ದಾಳಿಯನ್ನು ಕಂಡು ಫ್ರೆಂಚ್ ಜನರೂ ಕೂಡ ಕೈಕಟ್ಟಿ ಕೂರುತ್ತಿರಲಿಲ್ಲ. ತಾವೇನು ಕಮ್ಮಿಯಿಲ್ಲವೆಂದು ಅಲ್ಜೀರಿಯಾದ ಕಾಲೋನಿಗೆ ಲಗ್ಗೆಯಿಟ್ಟು ಸಿಕ್ಕಸಿಕ್ಕವರನ್ನೆಲ್ಲಾ ಕೊಲ್ಲುತ್ತಿದ್ದರು. ಈ ಎರಡೂ ವಿಷಯಗಳನ್ನು ಗ್ರಹಿಸಿದ ಗಿಲ್ಲೋ ಪಾಂಟಿಕೊರ್ವೋ, ಹೊಸ ರೀತಿಯಲ್ಲಿ ಸಿನಿಮಾ ಕಟ್ಟುವ ಕ್ರಮದ ಬಗ್ಗೆ ಆಲೋಚಿಸುತ್ತಾರೆ.  ಕೊನೆಗೆ ಸಾಕ್ಷ್ಯಚಿತ್ರ ಮಾದರಿಯಲ್ಲಿ ಫಿಲ್ಮ್ ಮೇಕಿಂಗ್ ಮಾಡುವುದಕ್ಕೆ ಮುಂದಾಗುತ್ತಾರೆ.

ಜಾನ್ ಮಾರ್ಟಿನ್ ಹೊರತುಪಡಿಸಿದರೆ ಈ ಸಿನಿಮಾದಲ್ಲಿ ಅಭಿನಯಿಸಿದವರೆಲ್ಲ ವೃತ್ತಿಪರರಲ್ಲ. ಬದಲಾಗಿ ಅಲ್ಜೀರಿಯಾದ ಸಂಗ್ರಾಮದಲ್ಲಿ ಭಾಗವಹಿಸಿದ ಯೋಧರನ್ನೆ ಕರೆಸಿ, ಗಿಲ್ಲೋ ಪಾಂಟಿಕೊರ್ವೋ ನಟನೆಯನ್ನು ಮಾಡಿಸಿದ್ದಾರೆ.  ಹೀಗಾಗಿ ಪ್ರೇಕ್ಷಕನಿಗೆ, ನಿಜವಾದ ಘಟನೆಯನ್ನು ಸೆರೆಹಿಡಿದು ಸಿನಿಮಾ ಮಾಡಿದ್ದಾರೆ ಎನ್ನುವಂತೆ ಭಾಸವಾಗುತ್ತದೆ. ಸಿನಿಮಾದ ಪ್ರತಿಯೊಂದು ದೃಶ್ಯಗಳು ನೈಜವಾಗಿವೆ. ಇದರಿಂದಾಗಿಯೇ ಸಮಸ್ಯೆಯೊಂದು ಉದ್ಭವವಾಗಿ “Not a single scene in the film is documented footage” ಎಂದು ಟೈಟಲ್ ಹಾಕುವ ಸಂದರ್ಭ ಪಾಂಟಿಕೊರ್ವೋ ಅವರಿಗೆ ಎದುರಾಗುತ್ತದೆ.

ಈ ರೀತಿಯ ಸಿನಿಮಾ ಕಟ್ಟು ಕ್ರಮ ಭಾರೀ ಜನಪ್ರಿಯವಾಯಿತಲ್ಲದೆ, ವ್ಯಾಪಕ ಮನ್ನಣೆಯನ್ನೂ ಪಡೆಯಿತು. ಆ ವರ್ಷದ ‘Venice’ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲೂ ‘ದ ಬ್ಯಾಟಲ್ ಆಫ್ ಅಲ್ಜಿಯರ್ಸ್’ ಪ್ರದರ್ಶನ ಕಂಡಿತು. ಅಲ್ಲದೇ, ಹಲವಾರು ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂಡು, ಚಿತ್ರಕಥೆ ಮತ್ತು ನಿರ್ದೇಶನ ವಿಭಾಗದಲ್ಲಿ ಆಸ್ಕರ್ ಗೆ ಭಾಜನವಾಯಿತು. ಒಂದೇ ವರ್ಷದಲ್ಲಿ ಮೂರು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಸಿನಿಮಾ ಎಂಬ ಹೆಗ್ಗಳಿಕೆ ಇಂದಿಗೂ ಈ ಚಿತ್ರದ ಹೆಸರಿನಲ್ಲಿದೆ.

ಗಿಲ್ಲೋ ಪಾಂಟಿಕೊರ್ವೋ ಈ ಸಿನಿಮಾದ ಚಿತ್ರಕಥೆಗಾಗಿ ಕೆಲವೊಂದು ತಂತ್ರಗಳನ್ನು ಬಳಸುತ್ತಾರೆ. ಸಿನಿಮಾದಲ್ಲಿ ಒಂದು ಕಡೆ ಫ್ರೆಂಚ್ ಕಾಲೋನಿಯಿದ್ದರೆ, ಮತ್ತೊಂದೆಡೆ ಅಲ್ಜೀರಿಯಾ ಕಾಲೋನಿ ಇರುತ್ತದೆ. ಅಲ್ಜೀರಿಯಾ ಮಂದಿ ಗೌಪ್ಯವಾಗಿ ಯುದ್ಧ ಮಾಡುವಂತಹ ಗೆರಿಲ್ಲಾ ಪ್ರಕಾರದ ಕಾಲೋನಿಯನ್ನು ಹಾಗೂ ಫ್ರೆಂಚ್ ಜನರು ಮಿಲಿಟರಿ ಶಿಸ್ತಿನಲ್ಲಿ ದಾಳಿ ಮಾಡುವಂತಹ ಕಾಲೋನಿಯನ್ನು ರೂಪಿಸಿಕೊಂಡಿದ್ದರು. ಈ ಎರಡೂ ಜನಾಂಗದವರನ್ನು ತೋರಿಸುವಾಗ ನಿರ್ದೇಶಕ ಗಿಲ್ಲೋ ಪಾಂಟಿಕೊರ್ವೋ ಹ್ಯಾಂಡೆಡ್ ಕ್ಯಾಮೆರಾ ಬಳಸುತ್ತಾರೆ. ಇಲ್ಲಿನ ದೃಶ್ಯಗಳು ಜನರನ್ನು ಒಗ್ಗೂಡಿಸಿ ಅಥವಾ ಸಂಘಟಿಸಿ ಮಾಡಿದ್ದಲ್ಲ ಎಂದು ಸೃಜನಾತ್ಮಕವಾಗಿ ತೋರಿಸುತ್ತಾರೆ. ಒಂದೆಡೆ ಹ್ಯಾಂಡೆಡ್ ಕ್ಯಾಮೆರಾ ಹಿಡಿದುಕೊಂಡು ಗಲ್ಲಿಗಳಲ್ಲಿ ಓಡುತ್ತಿರುವ ಮತ್ತು ಇದಕ್ಕೆ ಭಿನ್ನವಾಗಿ ಮಿಲಿಟರಿ ಶಿಸ್ತಿನ ಮೂಲಕವೇ ಫ್ರೆಂಚ್ ಜನರನ್ನು ತೋರಿಸುವ ದೃಶ್ಯ ಅಮೋಘವಾಗಿ ಮೂಡಿ ಬಂದಿದೆ.  

ಈ ಸಿನಿಮಾ ಕಟ್ಟುವ ಕ್ರಮದಲ್ಲೂ ಒಂದು ಸ್ವಾರಸ್ಯವಿದೆ. ಇದೊಂದು ಸಾಕ್ಷ್ಯ ಚಿತ್ರವೆಂದು ತೋರಿಸುವುದಕ್ಕಾಗಿ ಕೆಲವು ಕಡೆ ಉದ್ದೇಶಪೂರ್ವಕವಾಗಿಯೇ ನಕ್ಷೆ ರೂಪಿಸಲಾಗಿದೆ. ಒಂದು ದೃಶ್ಯದ ಉದಾಹರಣೆ ನೀಡುವುದಾದರೇ,  Peace Keeping Force ಯೋಧರು ಹಂಚುತ್ತಿದ್ದ ಊಟವನ್ನು ಅರಬ್ಬರು ಸೇರಿದಂತೆ ಪ್ರತಿಯೊಬ್ಬರೂ ತೆಗೆದುಕೊಳ್ಳುತ್ತಿರುತ್ತಾರೆ. ಇದೊಂದು ಪೂರ್ವಸಿದ್ಧತೆಯ ಸನ್ನಿವೇಶ. ಈ ಸಮಯದಲ್ಲಿ ನಿರ್ದೇಶಕ ತನ್ನ ಬುದ್ದಿಮತ್ತೆಯನ್ನು ಉಪಯೋಗಿಸಿ ಅಲ್ಲಿದ್ದ ಮಕ್ಕಳಿಗೆ “ಕ್ಯಾಮೆರಾ ನೋಡಿ” ಎಂದು ಹೇಳುತ್ತಾರೆ. ಸಿನಿಮಾ ನೋಡುತ್ತಿದ್ದ ಪ್ರೇಕ್ಷಕನಿಗೆ ಇದೊಂದು ನೈಜ ದೃಶ್ಯ ಎಂದು ಭಾಸವಾಗುತ್ತದೆ. ಆದರೆ ಈ ರೀತಿಯ ತಂತ್ರವನ್ನು ಬಳಸಿ ನಿರ್ದೇಶಕ ಗಿಲ್ಲೋ ಪಾಂಟಿಕೊರ್ವೋ ಪ್ರೇಕ್ಷಕನ ಮನದಲ್ಲಿ ನೈಜತೆಯ ಭಾವನೆಯನ್ನು ಮೂಡಿಸಿದ್ದರು.  ಸಿನಿಮಾದ ಕೊನೆಯ ಭಾಗದಲ್ಲಿ ಅಲ್ಜೀರಿಯಾಗೆ ಸ್ವಾತಂತ್ರ್ಯ ದೊರಕಿದ ನಂತರ (1964)  ಫ್ರೆಂಚ್ ನವರು ಹೊರಟು ಹೋಗುತ್ತಾರೆ.

ಅಲ್ಜೀರಿಯಾದ ಕ್ರಾಂತಿಯ ಕುರಿತಾಗಿ ಅಲ್ಲಿನ ನಾಯಕರೊಬ್ಬರು ಒಂದು ಪುಸ್ತಕ ಬರೆದಿದ್ದಾರೆ.  ಈ ಪುಸ್ತಕವೇ ದ ಬ್ಯಾಟಲ್ ಆಫ್ ಅಲ್ಜಿಯರ್ಸ್ ಸಿನಿಮಾದ ಆಧಾರ. ಯುದ್ಧಗಳು ಮುಗಿದ ಬಳಿಕ ಪುಸ್ತಕವನ್ನು ಬರೆದ ಈ ನಾಯಕ, ನಂತರ ಅಲ್ಜೀರಿಯಾದ ಮಂತ್ರಿಯಾಗಿ ಸಿನಿಮಾ ನಿರ್ಮಾಣಕ್ಕೂ ಸಹಾಯ ಮಾಡುತ್ತಾರೆ. ಗಮನಿಸಿ, ಸಹಾಯ ಮಾಡಿದ ನಾಯಕನ ಪರವಾಗಿಯೇ ಸಿನಿಮಾ ನಿರ್ಮಾಣವಾಗಬೇಕಲ್ಲವೇ? ಆದರೆ ಗಿಲ್ಲೋ ಪಾಂಟಿಕೊರ್ವೋ, ಅಲ್ಜೀರಿಯಾ ಅಥವಾ ಫ್ರೆಂಚ್ ಪರವಾಗಿ ಈ ಸಿನಿಮಾ ಇರಬಾರದು ಎಂದು ನಿರ್ಧರಿಸುತ್ತಾರೆ. ಮಾತ್ರವಲ್ಲದೆ ಮನುಷ್ಯ ಕ್ರೂರಿಯಾಗುವ ರೀತಿ ಮತ್ತು ಅದೇ ಸಮಯದಲ್ಲಿ ಮನುಷ್ಯ ಏಕೆ ಸಾಯಬಾರದು? ಎಂಬುದರ ವಿವರಣೆಯನ್ನು ಒಟ್ಟಿಗೆ ಹೇಳುತ್ತಾರೆ. ಹೀಗಾಗಿ ಇದೊಂದು ಬಹಳ ಮಹತ್ವದ ಸಿನಿಮಾವಾಗಿ ರೂಪುಗೊಂಡಿದೆ. ಈ ಚಿತ್ರ ಕೇವಲ ನೋಟದಿಂದಲ್ಲ, ಕಟ್ಟುವ ಕ್ರಮದಿಂದಲೂ ಮುಖ್ಯವಾಗುತ್ತದೆ.

ಕಥಾಚಿತ್ರದ ಪರಂಪರೆಯೊಂದಿಗೆ, ಒಂದು ರೀತಿಯ ಸಾಕ್ಷ್ಯ ಚಿತ್ರದ ಪರಂಪರೆಯನ್ನು ಸೇರಿಸುವ ಶೈಲಿಯನ್ನು ಇತ್ತೀಚೆಗೆ ಬಹಳಷ್ಟಿದೆ. ಈ ಚತುರತೆಯನ್ನು ಬಹಳ ಸಫಲವಾಗಿ ಬಳಸಿದ ಕೆಲವೇ ಸಿನಿಮಾಗಳಲ್ಲಿ ‘ದ ಬ್ಯಾಟಲ್ ಆಫ್ ಅಲ್ಜಿಯರ್ಸ್’ ಕೂಡ ಒಂದು. ಈ ಚಿತ್ರದ ಛಾಯಾಗ್ರಹಣ ಅದ್ಭುತವಾಗಿದೆ. ಉದ್ದೇಶ ಪೂರ್ವಕವಾಗಿ ಕಪ್ಪು-ಬಿಳುಪು ಬಣ್ಣಗಳನ್ನು ಬಳಸಲಾಗಿದೆ. ಏಕೆಂದರೆ ಅವತ್ತಿನ ಸಂದರ್ಭ, ಡಾಕ್ಯುಮೆಂಟ್ರಿ ಲುಕ್ ಹಾಗೂ ನೈಜ ಸನ್ನಿವೇಶದಂತೆ ದೃಶ್ಯ ತೋರಿಸಲು ಮತ್ತು ಭಾವನೆ ತುಂಬಲು ಈ ತಂತ್ರ ಅಳವಡಿಸಿಕೊಳ್ಳಲಾಗಿದೆ.

ಎನ್ನಿಯೋ ಮಾರಿಕೋನೇ ಈ ಸಿನಿಮಾದ ಸಂಗೀತ ನಿರ್ದೇಶಕ. ಬಹಳ ಮನೋಜ್ಞವಾದ ಸಂಗೀತ ನೀಡಿರುವುದು ಇವರ ಹೆಗ್ಗಳಿಕೆ. ಕೊನೆಯ ಭಾಗದಲ್ಲಿ ಅಲ್ಜೀರಿಯಾದ ಹೆಂಗಳೆಯರೆಲ್ಲಾ ಪ್ರತಿಭಟನೆಗೆ ದಾಂಗುಡಿಯಿಟ್ಟಾಗ ಬರುವ ಸಂಗೀತ ಬಹಳ ಅದ್ಭುತವಾಗಿದೆ. ಸಂಗೀತಕ್ಕೆ ಅಲ್ಜೀರಿಯಾದ ಡ್ರಮ್ಸ್ ಬಳಸಿಕೊಂಡಿದ್ದರಿಂದ, ಸಿನಿಮಾ ನೋಡಿದ ನಂತರವೂ ಅದರ ನಾದ ಕಿವಿಯಲ್ಲಿ ಗುಂಯ್ ಗುಡುತ್ತಿರುತ್ತದೆ. ಸಮನ್ವಯತೆಯ ದೃಷ್ಟಿಯಿಂದ ಶಬ್ದ, ದೃಶ್ಯ, ಸಂಗೀತ, ಸಂಕಲನ ಅಮೋಘವಾಗಿದೆ. ತಂತ್ರಗಳ ಸಾಮರಸ್ಯ, ಕಥೆಯೊಂದಿಗೆ ಹುಟ್ಟಿಕೊಳ್ಳುವ ನಂಟಿನಿಂದ ಸಿನಿಮಾ ಒಂದು ವಿಶಿಷ್ಟ ಅನುಭವವನ್ನು ಹುಟ್ಟುಹಾಕುತ್ತದೆ.

-ಗಿರೀಶ್ ಕಾಸರವಳ್ಳಿ

0 Comments

Submit a Comment

Your email address will not be published. Required fields are marked *

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more