ಹಸಿ ಹಸಿ ವಾಸ್ತವ ಸಂಗತಿಗಳೇ ಸಿನಿಮಾಗಳ ಶಕ್ತಿ: ‘ಇನ್ ದಿಸ್ ವರ್ಲ್ಡ್’ ವಿಶ್ಲೇಷಣೆ

‘ಇನ್ ದಿಸ್ ವರ್ಲ್ಡ್’, 2002ರಲ್ಲಿ ಬಿಡುಗಡೆಯಾದ ಸಿನಿಮಾ. ಬ್ರಿಟಿಷ್ ಫಿಲ್ಮ್ ಮೇಕರ್ ಮೈಕೆಲ್ ವಿಂಟರ್ಬಾಟಮ್ ಈ ಚಿತ್ರದ ನಿರ್ದೇಶಕ. ಈತ ಸಾಂಪ್ರದಾಯಿಕ (Conventional) ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದರೂ, ಸಿನಿಮಾ ಭಾಷೆಗೆ ಹೊಸ ಹುರುಪನ್ನು ಕೊಡುತ್ತಿದ್ದನು. ಸಿನಿಮಾವನ್ನು ವೀಕ್ಷಿಸುವಾಗ, ಕಾಲದಿಂದ ಕಾಲಕ್ಕೆ ಕಟ್ಟುವ ಕ್ರಮ, ತಾತ್ವಿಕ ಚಿಂತನೆ ಮತ್ತು ಸಂವಿಧಾನ ಬದಲಾಗುತ್ತಿರುವುದನ್ನು ಸದಾ ಗಮನಿಸುತ್ತಿರಬೇಕು. ಏಕೆಂದರೆ ಸಿನಿಮಾ ಭಾಷೆಯಲ್ಲಿ ಒಳ ಸಂವಾದಗಳು ನಡೆಯುತ್ತಿರುತ್ತದೆ. ಈ ಸಂವಾದಕ್ಕೆ ಬಹಳ ಜನರು ಪ್ರತಿಕ್ರಿಯಿಸುತ್ತಾರೆ. ಈ ತರಹದ ಪ್ರತಿಕ್ರಿಯೆ ಮೂಲಕ ಮೂಡಿಬಂದ ಚಿತ್ರವೇ ‘ಇನ್ ದಿಸ್ ವರ್ಲ್ಡ್’.

60-70ರ ದಶಕದಲ್ಲಿ ಚಿಂತನೆಯೊಂದು ಆರಂಭವಾಯಿತು. ನಿರ್ದೇಶಕನಾದವನು, ಒಂದೊಳ್ಳೆಯ ಕೊಠಡಿಯಲ್ಲಿ ಕುಳಿತು ತನ್ನ ಪ್ರಜ್ಞೆಗೆ ತಕ್ಕಂತೆ ಕಥೆಯನ್ನು ಕಲ್ಪಿಸಿಕೊಳ್ಳಬಾರದು. ಭಯೋತ್ಪಾದಕರು, ಮೂಲ ನಿವಾಸಿಗಳು ಹಾಗೂ ಬಡತನದ ಚಿತ್ರಣ ಕುರಿತು “ಹೀಗಿರಬಹುದು” ಎಂದು ತನ್ನಿಷ್ಟದಂತೆಯೇ ಕಲ್ಪಿಸಿಕೊಂಡು, ಅದಕ್ಕೆ ಅನುಗುಣವಾಗಿ ಸಿನಿಮಾ ಮಾಡಬಾರದು. ಆಯಾ ಪ್ರದೇಶಕ್ಕೆ ತೆರಳಿ, ಅಲ್ಲಿನ ಜನಜೀವನ ಇದ್ದಂತೆ ನೋಡಬೇಕು. ಹಸಿ-ಹಸಿ ವಾಸ್ತವವನ್ನು ಹುಡುಕುವುದಕ್ಕೆ ಪ್ರಯತ್ನಿಸಬೇಕು. ಇವು ನವ ವಾಸ್ತವಿಕತೆ (Neo-realism) ಚಳವಳಿಯ ಮೊದಲನೇ ಹಂತ.

ಈ ಮೇಲಿನ ಹಂತಗಳೂ ಮುಗಿದ ಮೇಲೆ, ಹೊಸ ಚಿಂತನೆಯುಳ್ಳ ನಿರ್ದೇಶಕರು “ನಾವು ನಿಜವನ್ನು ಹಸಿ-ಹಸಿಯಾಗಿ ಹಿಡಿಯಬೇಕು” ಎಂದು ತೀರ್ಮಾನಿಸಿದರು. ಈ ರೀತಿಯ ನಿರ್ಧಾರದಿಂದಲೇ ಮೈಕೆಲ್ ವಿಂಟರ್ಬಾಟಮ್ ‘ಇನ್ ದಿಸ್ ವರ್ಲ್ಡ್’ ಸಿನಿಮಾ ನಿರ್ಮಾಣಕ್ಕೆ ಮುಂದಾಗುತ್ತಾನೆ. ಈ ಚಿತ್ರದಲ್ಲಿ ಮೊದಲು ತೆರೆದುಕೊಳ್ಳುವುದು ವಲಸೆಗಾರರ ಸಮಸ್ಯೆ. ವಿವಿಧ ದೇಶಗಳ ಜನರು ಯುರೋಪಿಗೆ ವಲಸೆ ಹೋಗುತ್ತಿದ್ದರು. ಇದು ಕ್ರಮೇಣ ಅತಿ ದೊಡ್ಡ ಸಮಸ್ಯೆಯಾಗಿ ರೂಪುಗೊಂಡು, ಯುರೋಪ್ ಜನರಿಗೆ, ಈ ವಲಸಿಗರನ್ನು ಸಹಿಸಿಕೊಳ್ಳಲಾಗುತ್ತಿರಲಿಲ್ಲ.

ಮೈಕೆಲ್ ವಿಂಟರ್ಬಾಟಮ್ ಮೊದಲಿಗೆ, ಜನರು ಏತಕ್ಕಾಗಿ ವಲಸೆ ಬರುತ್ತಾರೆ? ಎಂದು ಹುಡುಕಾಟ ಆರಂಭಿಸುತ್ತಾನೆ. “ವಲಸೆಗಾರರ ಮೂಲಕ ಸಮಸ್ಯೆಯನ್ನು ನೋಡಬೇಕೇ ಹೊರತು, ಯುರೋಪ್ ಜನರ ದೃಷ್ಟಿಕೋನದಿಂದ ಸಮಸ್ಯೆಯನ್ನು ಹುಡುಕಬಾರದು” ಎಂದು ನಿರ್ಧರಿಸುತ್ತಾನೆ. ಪ್ರೇಕ್ಷಕನೇ ವಲಸೆಗಾರರ ದೃಷ್ಟಿಕೋನದಿಂದ ಸಿನಿಮಾ ಅರ್ಥೈಸಿಕೊಳ್ಳಲಿ ಎಂಬ ಉದ್ದೇಶ ಆತನದ್ದು.  

‘ಇನ್ ದಿಸ್ ವರ್ಲ್ಡ್’ ಸಿನಿಮಾಕ್ಕಾಗಿ ಆಯ್ಕೆ ಮಾಡಿಕೊಂಡ ಪ್ರದೇಶ ಆಫ್ಘಾನಿಸ್ತಾನ. ಇಲ್ಲಿನ 53000 ಜನರು ಪಾಕಿಸ್ತಾನದಲ್ಲಿ ಬೀಡುಬಿಟ್ಟಿದ್ದರು. ಈ ವಲಸಿಗರು ಸಿಕ್ಕರೆ, ಪಾಕಿಸ್ತಾನದವರು ಹೊರಗೆ ಹಾಕುತ್ತಿರುತ್ತಾರೆ. ಹೀಗೆ ಹೊರ ಬಂದ ವಲಸಿಗರು ವಾಯುವ್ಯ ಗಡಿಭಾಗದಿಂದ (northwest frontier) ಬೇರೆ ಬೇರೆ ದೇಶಗಳ ಮೂಲಕ ಹಾದು, ಇಂಗ್ಲೆಂಡಿನಲ್ಲಿ ನೆಲೆಗೊಳ್ಳುತ್ತಾರೆ. ಹೀಗೆ ಪ್ರಯಾಣ ಬೆಳೆಸಿದ ಒಬ್ಬ ಹುಡುಗನ ಮೂಲಕ ಮೈಕೆಲ್ ವಿಂಟರ್ಬಾಟಮ್, ಆತನ ಪ್ರಯಾಣದ ವಿವರವನ್ನು ಪಡೆದುಕೊಳ್ಳುತ್ತಾನೆ. ಯಾವುದೇ ಸ್ವಂತ ಕಥೆಯನ್ನು ಕಟ್ಟದೆ, ಹುಡುಗ ಹೇಳಿದ ಘಟನೆಯನ್ನೇ ಆಧರಿಸಿ, Docu-fiction ಮಾದರಿಯಲ್ಲಿ ಸಿನಿಮಾ ನಿರ್ಮಿಸುತ್ತಾನೆ. ಆದರೆ ಕಾದಂಬರಿ (fiction) ಸ್ವರೂಪವನ್ನು ಬಿಂಬಿಸುವುದಿಲ್ಲ.

ಸಾಮಾನ್ಯವಾಗಿ ಕಾದಂಬರಿ ಆಧಾರಿತ ಸಿನಿಮಾಗಳ ವ್ಯಾಕರಣವೆಂದರೆ, ಪಾತ್ರದ ಸುತ್ತ ಕಥೆ ನಡೆಯುತ್ತದೆ. ಆರಂಭ, ಅಂತ್ಯ ಹಾಗೂ ಪಾತ್ರದಾರಿಯ ಚಲನವಲನಗಳಿಗಿರುವ ಕಾರ್ಯಕಾರಣ ಸಂಬಂಧಗಳನ್ನು ಹುಡುಕುವ ವಿಧಾನ. ಈ ಸ್ವರೂಪದಿಂದ ದೂರ ಉಳಿದು, ವಿಭಿನ್ನವಾಗಿ ನಿರ್ಮಾಣವಾದ ಸಿನಿಮಾ ‘ಇನ್ ದಿಸ್ ವರ್ಲ್ಡ್’.

ಆಫ್ಘಾನಿಸ್ತಾನದ ಇಬ್ಬರು ಹುಡುಗರ ಕಥೆಯಿಂದ ಸಿನಿಮಾ ಪ್ರಾರಂಭವಾಗುತ್ತದೆ. ಒಬ್ಬಾತನ ಹೆಸರು ಜಮಾಲ್, ಮತ್ತೊಬ್ಬ ಇನಾಯತ್. ಜಮಾಲ್ ಪೋಷಕರಿಗೆ “ತನ್ನ ಮಗ ಆಫ್ಘಾನಿಸ್ತಾನದಲ್ಲೇ ಇದ್ದರೆ, ನಮ್ಮಂತೆಯೇ ಆಗಿಬಿಡುತ್ತಾನೆ. ಹೇಗಾದರೂ ಮಾಡಿ ಇಂಗ್ಲೆಂಡಿಗೆ ಕಳುಹಿಸಬೇಕು” ಎಂದು ಚಿಂತಿಸುತ್ತಿರುತ್ತಾರೆ. ಆದರೆ ಒಬ್ಬನನ್ನು ಕಳುಹಿಸುವುದು ಅಪಾಯವೆಂದು ತಿಳಿದು, ತಮ್ಮ ಸಂಬಂಧದ ಹುಡುಗ ಇನಾಯತನನ್ನು ಜೊತೆಯಲ್ಲಿ ಹೋಗಲು ತಿಳಿಸುತ್ತಾರೆ. ಪೋಷಕರು ಇಬ್ಬರ ಖರ್ಚಿಗೂ ಒಂದಷ್ಟು ಡಾಲರ್ ವ್ಯವಸ್ಥೆ ಮಾಡಿ ಕಳುಹಿಸುತ್ತಾರೆ. ಇವರ ಪ್ರಯಾಣವನ್ನೇ ಕ್ಯಾಮೆರಾ ಹಿಂಬಾಲಿಸುತ್ತದೆ. ಈ ಸಿನಿಮಾದ ಚಿತ್ರೀಕರಣದಲ್ಲಿ ಸುಸಜ್ಜಿತವಾದ ವ್ಯವಸ್ಥೆ ಇದ್ದರೂ,  ಸಿನಿಮಾ ನೋಡುವ ಪ್ರೇಕ್ಷಕನಿಗೆ ಇದು ಸುಸಜ್ಜಿತವಲ್ಲದ ಸಿನಿಮಾ ಎಂದು ಭಾಸವಾಗುತ್ತದೆ.

ಮೊದಲು ಇವರಿಬ್ಬರು ಇರಾನಿಗೆ ಪ್ರಯಾಣಿಸುತ್ತಾರೆ. ಅಲ್ಲಿಂದ ಇರಾನಿನವರು ಈ ಹುಡುಗರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಾರೆ. ಹೀಗೆ ಮತ್ತೆ ಇರಾನ್, ಟರ್ಕಿ, ನಂತರ ಬೇರೆ ಬೇರೆ ದೇಶಗಳ ಮೂಲಕ ತೆರಳಿ ಕೊನೆಯಲ್ಲಿ ಇಂಗ್ಲೆಂಡ್ ಸೇರುತ್ತಾರೆ. ಈ ಪ್ರಕ್ರಿಯೆಯನ್ನು ನಿರ್ದೇಶಕ ಸುಮ್ಮನೆ ಹಿಂಬಾಲಿಸುತ್ತಾನೆ. “ಯಾವಾಗಲೂ ಆಯಾ ಪ್ರದೇಶದಲ್ಲಿ ನಡೆಯುವ ಘಟನೆಗಳನ್ನು ಸಿನಿಮಾದಲ್ಲಿ ಬಿತ್ತರಿಸಬೇಕೆ ವಿನಃ ಹೊರಗಿನಿಂದ ಕಥೆಗಳನ್ನು ತರಬಾರದು. ಒಳಗಿರುವ ಘಟನೆಗಳಿಗೆ ಕಥನದ ಸ್ವರೂಪವನ್ನು ಕೃತಿ ತರಬೇಕು” ಎಂಬುದು ನಿರ್ದೇಶಕನ ಕಟ್ಟುವ ಕ್ರಮ.

ಹುಡುಗರ ಪ್ರಯಾಣ ಆರಂಭವಾಗುವುದು ಕುದುರೆ ಗಾಡಿಯ ಮೂಲಕ. ಅನಂತರ ಬಸ್ಸು, ಟ್ರಕ್ಕು ಹಾಗೂ ಹಡಗಿನ ಮೂಲಕ ಪ್ರಯಾಣಿಸುತ್ತಾರೆ. ಹಡಗಿನಲ್ಲಿ ತೆರಳುವಾಗ ವಲಸೆಗಾರರೆಂದು ಕತ್ತಲೆಯ ಕಂಟೈನರ್ ಒಳಗೆ ಈ ಹುಡುಗರನ್ನು ತಳ್ಳುತ್ತಾರೆ. ಆ ಕಠಿಣ ವಾತಾವರಣದಲ್ಲಿ ಇನಾಯತ್ ಮೃತಪಡುತ್ತಾನೆ. ಕೊನೆಗೆ ಜಮಾಲ್ ಒಬ್ಬನೇ ಇಂಗ್ಲೆಂಡ್ ತಲುಪುತ್ತಾನೆ. ಬಳಿಕ ತನ್ನ ಅಪ್ಪನಿಗೆ ಫೋನ್ ಮಾಡಿ, ಇಂಗ್ಲೆಂಡಿಗೆ ಸೇರಿದ ವಿಷಯವನ್ನು ತಿಳಿಸುತ್ತಾನೆ. ಆಗ ಅಪ್ಪ “ಇಬ್ಬರೂ ಕ್ಷೇಮವಾಗಿ ತಲುಪಿದ್ರಾ?” ಎಂದು ಪ್ರಶ್ನಿಸಿದಾಗ, ಜಮಾಲ್ “ಇಲ್ಲ. ಇನಾಯತ್ ಇಸ್ ನಾಟ್ ಇನ್ ದಿಸ್ ವರ್ಲ್ಡ್” ಎನ್ನುತ್ತಾನೆ. ಇದೇ ಮಾತೇ ಸಿನಿಮಾದ ಕೇಂದ್ರ ಬಿಂದು. ನಿರ್ದೇಶಕ, ಈ ‘ನಾಟ್ ಇನ್ ದಿಸ್ ವರ್ಲ್ಡ್’ ಮಾತನ್ನು ತೆಗೆದು, ತನ್ನ ಚಿತ್ರಕ್ಕೆ ‘ಇನ್ ದಿಸ್ ವರ್ಲ್ಡ್’ ಎಂಬ ಶೀರ್ಷಿಕೆ ಕೊಟ್ಟು, ಇನಾಯತ್ ಕಥೆಯನ್ನು ಜಮಾಲ್ ಕಥೆಯನ್ನಾಗಿ ಮಾಡುತ್ತಾನೆ.

ಈ ಸಿನಿಮಾ ನೋಡುವ ಪ್ರೇಕ್ಷಕನಿಗೆ, “ಜಮಾಲ್ ಸಿಕ್ಕಿಹಾಕಿಕೊಳ್ಳುವವನೋ? ಅಥವಾ ತಪ್ಪಿಸಿಕೊಳ್ಳುವವನೋ? ತಪ್ಪಿಸಿಕೊಂಡರೆ ತೃಪ್ತಿ” ಎಂಬ ದ್ವಂದ್ವ ಸೃಷ್ಟಿಯಾಗುತ್ತದೆ. ಹಾಗಾಗಿ “ಇನಾಯತ್, ಜಮಾಲ್ ಹಾಗೂ ತಂದೆಯ ಆಶಯವೇ, ಪ್ರೇಕ್ಷಕನ ಆಶಯವಾಗುವಂತೆ ಮಾಡುವುದೇ ನನ್ನ ಈ ಸಿನಿಮಾದ ಶಕ್ತಿ” ಎಂದು ಮೈಕೆಲ್ ವಿಂಟರ್ಬಾಟಮ್ ಹೇಳುತ್ತಾನೆ. ಅಲ್ಲದೇ, ತಾನು ಏನನ್ನೂ ಜೋಡಿಸುತ್ತಿಲ್ಲ, ಇದ್ದಂತೆ ನಡೆಯುತ್ತಿದೆ ಎಂದು ತೋರಿಸಲು, ಸಿನಿಮಾ ವ್ಯಾಕರಣವನ್ನು ಬದಲಾಯಿಸುತ್ತಾನೆ. ಹೇಗೆಂದರೆ, ಆರಂಭದಲ್ಲಿ ಹ್ಯಾಂಡಲ್ಡ್ ಕ್ಯಾಮೆರಾ ಬಳಸಲಾಗಿದೆ. ಜಮಾಲ್ ಮತ್ತು ಇನಾಯತ್ ಹೋದ ಕಡೆಯಲ್ಲೆಲ್ಲಾ ಈ ಕ್ಯಾಮರಾ ಬಳಸಿ ಹಿಂಬಾಲಿಸುವುದು, ದೃಶ್ಯಗಳಲ್ಲಿ ಸರಿಯಾದ ಲೈಟಿಂಗ್ ಇರುವಂತೆ ಅಥವಾ ಇಲ್ಲದಿರುವಂತೆ, ಕೆಲವೊಮ್ಮೆ ಬೇಕಂತಲೇ ಬೆಳಕನ್ನು ಕ್ಯಾಮೆರಾ ಕಡೆ ಬರುವಂತೆ ಚಿತ್ರೀಕರಿಸಲಾಗಿದೆ. ಒಟ್ಟಿನಲ್ಲಿ ಪ್ರೇಕ್ಷಕನಿಗೆ “ಸುಸಜ್ಜಿತ ವ್ಯವಸ್ಥೆಯಲ್ಲದ ಚಿತ್ರೀಕರಣ” ಎಂಬ ಭಾವನೆ ಮೂಡುವಂತೆ ಸಿನಿಮಾ ಕಟ್ಟಲಾಗಿದೆ.

ಈ ಪ್ರಕ್ರಿಯೆಯಲ್ಲಿ ಇವರಿಬ್ಬರೂ, ಇರಾನಿನವರಂತೆ ಕಾಣಲು ಬಟ್ಟೆ ಬದಲಾಯಿಸುತ್ತಾರೆ. ತಾವು ಮಾತನಾಡುವ ಭಾಷೆಯಲ್ಲಿ ಎಚ್ಚರವಿರಬೇಕು ಎಂಬುದನ್ನು ಅರಿತುಕೊಳ್ಳುತ್ತಾರೆ. ಇಲ್ಲಿ ಗಮನಿಸಬೇಕಾದದ್ದು, ಇವರ ಗುರುತು, ಬಟ್ಟೆ, ಭಾಷೆ, ದೇಶ ಎಲ್ಲವೂ ಬದಲಾಗುತ್ತದೆ. ಹೀಗೆ ಬದಲಾವಣೆ ಮಾಡುತ್ತಿರುವಾಗ, ಪ್ರೇಕ್ಷಕನಿಗೆ “ಈ ಹುಡುಗರಲ್ಲಿ ಜಮಾಲ್ ಯಾರು? ಇನಾಯತ್ ಯಾರು? ಈ ವಲಸೆ ಪ್ರಕ್ರಿಯೆಯಲ್ಲಿ ತಮ್ಮ ಗುರುತನ್ನು ಕಳೆದುಕೊಳ್ಳುವುದು ನೋವಿನ ಸಂಗತಿಯಲ್ಲವೇ? ಅಥವಾ ಈ ಬದಲಾವಣೆಯಿಂದ ಮನೋಸ್ಥೈರ್ಯ ಹೆಚ್ಚಾಗುತ್ತದೆಯೇ?” ಎಂಬ ಪ್ರಶ್ನೆಗಳು ಹುಟ್ಟುತ್ತದೆ. ಈ ಹುಡುಗರು ಇರಾನಿನಲ್ಲಿ ಒಂದು ಮನೆಯಲ್ಲಿ ಉಳಿದುಕೊಂಡಿರುತ್ತಾರೆ. ಆ ಮನೆಯವರಿಗೆ, ಜಮಾಲ್ ಮತ್ತು ಇನಾಯತ್ ಕಂಡರೆ ಅಗಾಧ ಪ್ರೀತಿ. ಎಲ್ಲಾ ಸೌಕರ್ಯದಿಂದ ನೋಡಿಕೊಂಡು, ಇವರು ವಲಸೆಗಾರರು ಎಂದು ಗೊತ್ತಾಗದಂತೆ ಮುಂದಿನ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುತ್ತಾರೆ. ನಂತರ ಟರ್ಕಿಯಲ್ಲೂ ಇದೇ ರೀತಿ ಸೌಕರ್ಯ ಸಿಗುತ್ತದೆ.

ಸಿನಿಮಾದ ಒಟ್ಟಾರೆ ಪ್ರಕ್ರಿಯೆಯಲ್ಲಿ ಆಯಾ ದೇಶಗಳ ಸಾಮಾನ್ಯ ನಾಗರೀಕರಿಗೆ ಈ ಹುಡುಗರನ್ನು ಕಂಡರೆ ಅನುಕಂಪ ಹಾಗೂ ಸಹಾನುಭೂತಿ. ಆದರೆ ಪ್ರಭುತ್ವ ಇವರನ್ನು ಶತ್ರುಗಳಂತೆ ನೋಡುತ್ತದೆ. ಸರ್ಕಾರ ನೋಡುವ ಕ್ರಮ ಮತ್ತು ನಾಗರೀಕರು ನೋಡುವ ಕ್ರಮದಲ್ಲಿರುವ ವ್ಯತ್ಯಾಸವನ್ನು ಸಿನಿಮಾದಲ್ಲಿ ಗಮನಿಸಬಹುದು.

ಕೆಲವೊಮ್ಮೆ ಬಹಳ ಸುಂದರವಾದ ಕಥೆಯನ್ನು ಒಂದು ಚೌಕಟ್ಟಿನೊಳಗೆ ಸೇರಿಸುವಾಗಲೇ, ಹೊರಗಿನ ವಾಸ್ತವಕ್ಕಿಂತ ಭಿನ್ನವಾದ ವಾಸ್ತವವನ್ನು ಕಟ್ಟಿಕೊಡಲಾಗುತ್ತದೆ. ಪ್ರೇಕ್ಷಕ, ಸಿನಿಮಾ ವಾಸ್ತವ ನಿಜವೆಂದು, ಹೊರಗಿನ ವಾಸ್ತವ ಅಸಹ್ಯವೆಂದು ಭಾವಿಸುತ್ತಾನೆ. ಅಂದರೆ ಈ ಪ್ರಕ್ರಿಯೆಯಲ್ಲಿ ಸಣ್ಣದಾದ ರಾಜಕೀಯವನ್ನು ಮಾಡಲಾಗುತ್ತದೆ. “ಇದು ಸುಂದರ, ಅದು ಅಸಹ್ಯ ಎಂದು ಕಥೆ ಕಟ್ಟುವ ಸಿನಿಮಾಗಳು ಸುಳ್ಳು” ಎಂದು ಮೈಕೆಲ್ ವಿಂಟರ್ಬಾಟಮ್ ವಾದಿಸುತ್ತಾನೆ. “ಹೊರಗಿನ ವಾಸ್ತವವನ್ನು ನಾವು ಬಿಟ್ಟ ಕಣ್ಣಿನಿಂದ ಸರಿಯಾಗಿ ನೋಡಿ, ಇದು ನಮ್ಮ ಕಥೆ ಎಂದು ಒಪ್ಪಿಕೊಳ್ಳಬೇಕು. ಈ ವಸ್ತುಸ್ಥಿತಿಯನ್ನೇ ಸಿನಿಮಾದಲ್ಲಿ ತೋರಿಸಬೇಕು” ಎಂದು ಹೇಳುತ್ತಾನೆ.

ಜಮಾಲ್ ಮತ್ತು ಇನಾಯತ್, ಟರ್ಕಿ ದೇಶವನ್ನು ಅಮಾವಾಸ್ಯೆ ರಾತ್ರಿಯಲ್ಲಿ ದಾಟಬೇಕಾಗುತ್ತದೆ. ಆ ಕತ್ತಲಿನ ಸನ್ನಿವೇಶವನ್ನು ಇನ್ಫ್ರಾ ರೆಡ್ (Infra-red) ಕ್ಯಾಮೆರಾ ಬಳಸಿ ಶೂಟ್ ಮಾಡಲಾಗಿದೆ. ಆ ದೃಶ್ಯಗಳು ಯಾವ ಬಗೆಯಲ್ಲೂ ಆಹ್ಲಾದಕರವಾಗಿ ಕಾಣುವುದಿಲ್ಲ. ಕಣ್ಣುಗಳಲ್ಲಿ ಬಲ್ಬ್ ಇರುವ ಭೂತಗಳಂತೆ ಕಾಣುವ ಸನ್ನಿವೇಶವನ್ನು ತೋರಿಸಲಾಗಿದೆ. ಪ್ರೇಕ್ಷಕನಿಗೆ ಈ ದೃಶ್ಯಗಳು ನೈಜವಾಗಿರುವಂತೆ ಭಾಸವಾಗುತ್ತದೆ. ಸುಸಜ್ಜಿತವಾದ ಲೈಟಿಂಗ್ ಬಳಸಿ ಚಿತ್ರೀಕರಿಸಿದರೆ, ವಾಸ್ತವತೆಯನ್ನು ತೋರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಪ್ರಕ್ರಿಯೆ ಬಹಳ ಅದ್ಭುತವಾಗಿ ಮೂಡಿಬಂದಿದೆ.

ನಿರ್ದೇಶಕ ಗೊಡಾರ್ಡ್ (Jean-Luc Godard), ಬ್ರಿಟಿಷ್ ಸಿನಿಮಾಗಳ ಶಬ್ದದ ಕುರಿತು ಒಂದು ಮಾತನ್ನು ಹೇಳುತ್ತಾನೆ. “ಸಿನಿಮಾಗಳಲ್ಲಿ ಶಬ್ದವನ್ನು ನಯಗೊಳಿಸುವ ಕ್ರಮ ಸರಿಯಾದುದ್ದಲ್ಲ” ಎಂದು ವಾದಿಸುತ್ತಾನೆ. ನಮ್ಮ ವಾಸ್ತವ ಜಗತ್ತಿನಲ್ಲಿ, ಕಾರಿನ ಶಬ್ದ, ವ್ಯಕ್ತಿ ಕೂಗುವುದು, ದೇವಸ್ಥಾನ ಹಾಗೂ ಮಸೀದಿಗಳ ಘಂಟೆ-ನಾದಗಳು ಮತ್ತು ಇತ್ಯಾದಿ ಶಬ್ದಗಳು ಒಟ್ಟೊಟ್ಟಿಗೆ ಕೇಳಿ ಬರುತ್ತಿರುತ್ತವೆ. ಇದರ ಮಧ್ಯೆ ನಾವು ಮಾತನಾಡುತ್ತಿರುತ್ತೇವೆ. ಆದರೆ ನಮ್ಮ ಕಿವಿ ನಮಗೆ ಬೇಕಾದನ್ನು ಮಾತ್ರ ಆಯ್ಕೆ ಮಾಡಿಕೊಂಡಿರುತ್ತದೆ. ಅಂತೆಯೇ ಬೇಡವಾದದ್ದನ್ನು ತೆಗೆದು, ಬೇಕಾದನ್ನು ಮಾತ್ರ ಕೊಟ್ಟರೆ, ಸಿನಿಮಾದಲ್ಲಿ ಕೃತಕತೆಯನ್ನು ತರಲಾಗುವುದಿಲ್ಲ ಎಂಬ ವಾದವಿದೆ. ಈ ವಾದ ಮತ್ತಷ್ಟು ವಿಸ್ತಾರವಾಗಿ ‘ಇನ್ ದಿಸ್ ವರ್ಲ್ಡ್’ ಸಿನಿಮಾದಲ್ಲಿ ಹೆಚ್ಚಾಗಿ ಪ್ರಯೋಗ ಮಾಡಲಾಗಿದೆ. ಇದನ್ನು ನಾವು ಒಪ್ಪಬಹುದು ಅಥವಾ ಇಲ್ಲದಿರಬಹುದು, ಆದರೆ ಈ ತರಹದ ಪ್ರಯೋಗದಿಂದ ತಾತ್ವಿಕ ಚಿಂತನೆ, ಸಿನಿಮಾ ಭಾಷೆ ಮತ್ತು ಗ್ರಹಿಕೆ ಬದಲು ಮಾಡುತ್ತಿರುತ್ತದೆ.

ಮೈಕೆಲ್ ವಿಂಟರ್ಬಾಟಮ್, ಸಿನಿಮಾ ಭಾಷೆಗೆ ಬರೆದ ಹೊಸ ಭಾಷ್ಯ, ಹೊಸ ರೀತಿಯ ಕಟ್ಟುವ ಕ್ರಮಕ್ಕೆ ವ್ಯಾಪಕವಾದ ಮನ್ನಣೆ ದೊರಕಿತು. ಬರ್ಲಿನ್ ನಲ್ಲಿ ಗೋಲ್ಡನ್ ಬೇರ್ ಪ್ರಶಸ್ತಿ (Golden Bear Award) ಕೂಡ ದೊರೆತಿದೆ. ಅಲ್ಲದೇ ಈತನ ದ ರೋಡ್ ಟು ಗ್ವಾಂಟನಮೊ (The Road To Guantanamo) ಚಿತ್ರಕ್ಕೂ ಕೂಡ ಬರ್ಲಿನ್ ನಲ್ಲಿ ಇದೇ ಪುರಸ್ಕಾರ ಕೊಡಲಾಗಿದೆ. ಸಿನಿಮಾ ಭಾಷೆಯನ್ನು ಬದಲಾಯಿಸಿ, ಪ್ರೇಕ್ಷಕನ ಸಿನಿಮಾ ಗ್ರಹಿಕೆಯನ್ನು ತಿದ್ದಿದ್ದು ‘ಇನ್ ದಿಸ್ ವರ್ಲ್ಡ್’ ಸಿನಿಮಾ.  

-ಗಿರೀಶ್ ಕಾಸರವಳ್ಳಿ

0 Comments

Submit a Comment

Your email address will not be published. Required fields are marked *

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more