ಅಡೂರ್ ಗೋಪಾಲಕೃಷ್ಣನ್ ನಿರ್ದೇಶನದ ಮಲಯಾಳಂ ಚಿತ್ರ ‘ಮುಖಾಮುಖಮ್’ ಹಲವು ಕಾರಣಗಳಿಂದಾಗಿ ಬಹುಮುಖ್ಯವಾದಂತ ಸಿನಿಮಾ. ಗೋಪಾಲಕೃಷ್ಣನ್ ಅವರು ತಮ್ಮ ಮೊದಲ ಸಿನಿಮಾ ಸ್ವಯಂವರಂ, ಎರಡನೆ ಸಿನಿಮಾ ಕೋಡಿಯಾಟ್ಟಮ್ ಹೊರತುಪಡಿಸಿದರೆ ಉಳಿದೆಲ್ಲಾ ಸಿನಿಮಾಗಳಲ್ಲಿ ನಮ್ಮ ಜಗತ್ತಿನಲ್ಲಿರುವ ಎರಡು ಇರುವಿಕೆಯ ಬಗ್ಗೆ ಮಾತನಾಡುತ್ತಾರೆ. ಡ್ಯುಯಲ್ ರಿಯಾಲಿಸಮ್ ಅಂದರೇ “ಇದು ವಾಸ್ತವವೋ-ಅದು ವಾಸ್ತವವೋ, ಇದು ಸತ್ಯವೋ-ಅದು ಸತ್ಯವೋ” ಎನ್ನುವ ರೀತಿಯಲ್ಲಿ ಅವರ ಚಿತ್ರಗಳಿರುತ್ತವೆ. ಗಮನಿಸಬೇಕಾದ ಅಂಶವೆಂದರೇ ಅವರು ತಮ್ಮ ಚಿತ್ರದಲ್ಲಿ ಇದೇ ಸತ್ಯ-ಅದೇ ಸತ್ಯ ಎಂದು ಹೇಳುವುದಿಲ್ಲ. ಅದರ ಬದಲಾಗಿ ಸತ್ಯವನ್ನು ಎರಡು ರೀತಿಯಲ್ಲಿ ವ್ಯಾಖ್ಯಾನಿಸಬಹುದು ಎಂದು ಎಲ್ಲಾ ಸಿನಿಮಾಗಳಲ್ಲಿಯೂ ತೋರಿಸುತ್ತಾರೆ.
ಭಾರತದಲ್ಲಿ ಸಾಮಾನ್ಯವಾಗಿ ಒಂದು ಕತೆಯನ್ನಿಟ್ಟುಕೊಂಡು ಚಿತ್ರಕಥೆ ರೂಪಿಸುವುದು ಪ್ರತಿಯೊಬ್ಬರೂ ಪಾಲಿಸುವ ಕ್ರಮ. ಸತ್ಯಜಿತ್ ರೇ ಅವರಿಂದ ಹಿಡಿದು, ಇವತ್ತಿನ ಎಲ್ಲಾ ಪ್ರಮುಖ ನಿರ್ದೇಶಕರು ಅದನ್ನೇ ಅನುಸರಿಸುತ್ತಿದ್ದಾರೆ. ಆದರೆ ಒಂದು ವಿಚಾರವನ್ನು ಇಟ್ಟುಕೊಂಡು, ಅದನ್ನು ಚಿತ್ರ ರೂಪದಲ್ಲಿ ಹೇಳುವುದು ಬಹಳ ಕಷ್ಟ. ಅಡೂರ್ ಗೋಪಾಲಕೃಷ್ಣನ್ ಅವರು, ಪದೇ ಪದೇ ತಮ್ಮ ಅನೇಕ ಸಿನಿಮಾಗಳಲ್ಲಿ ಈ ರೀತಿಯ ಕಥಾ ಸಂವಿಧಾನವನ್ನಾ ಇಟ್ಟುಕೊಳ್ಳುತ್ತಾರೆ. ಮುಖಾಮುಖಮ್ ಕೂಡ ಮಾದರಿಯ ಚಿತ್ರ. ಅದನ್ನು ಎರಡು ರೀತಿಯಲ್ಲಿ ವ್ಯಾಖ್ಯಾನಿಸಬಹುದು. 1956ರಿಂದ 1965ರವರೆಗೆ ಕೇರಳದಲ್ಲಿ ತುಂಬಾ ತಲ್ಲಣ ಇದ್ದಂತಹ ಕಾಲ. ಆಗಷ್ಟೇ ಕಮ್ಯೂನಿಸ್ಟ್ ಸರ್ಕಾರ ರಚನೆಗೊಂಡಿತ್ತು. ಕೆಲವೇ ವರ್ಷಗಳಲ್ಲಿ ಆ ಸರ್ಕಾರದ ವಿಸರ್ಜನೆಯಾಗಿ, ಬೇರೆ ಸರ್ಕಾರ ಅಧಿಕಾರಕ್ಕೆ ಬಂತು. ಅದರ ಬಳಿಕ ಮತ್ತೆ ಕಮ್ಯೂನಿಸ್ಟ್ ಸರ್ಕಾರ ಆಡಳಿತ ನಡೆಸಲು ಆರಂಭಿಸಿತು.
ಆ ಕಾಲದಲ್ಲಿ ನಡೆಯುವಂತಹ ಒಂದು ಕತೆ ಮುಖಾಮುಖಮ್ ಸಿನಿಮಾದ ಕಥಾವಸ್ತು. ಶ್ರೀಧರನ್ ಎನ್ನುವಾತ ಕಥಾ ನಾಯಕ. ಆದರೆ ನಾವು ನಿರೀಕ್ಷೆ ಮಾಡುವಂತಹ ಯಾವುದೇ ಗುಣವೂ ಆತನಲ್ಲಿ ಇರುವುದಿಲ್ಲ. ಸಿನಿಮಾದ ಆರಂಭದಲ್ಲಿ ಇವನು ಕಾರ್ಮಿಕರ ಪರ ಹೋರಾಟ ಮಾಡುತ್ತಿರುತ್ತಾನೆ. ಬಳಿಕ ಅದರ ಮುಂಚೂಣಿ ನಾಯಕನಾಗಿರುತ್ತಾನೆ. ನಾವು ಶ್ರೀಧರನನ್ನು ಸುಮ್ಮನೆ ನೋಡುತ್ತಿರುತ್ತೇವೆ ಹೊರತು, ಅವನು ಯಾರು? ಅವನು ಎಂತಹ ಸಾಧಕ ಎಂದು ಗೊತ್ತಾಗುವುದೇ ಅಲ್ಲಿನವರು ಹೇಳುವ ಕತೆಗಳಿಂದ. “ಯಾರು ಈ ಶ್ರೀಧರನ್ ?, ಶ್ರೀಧರನ್ ಬಹಳ ವರ್ಚಸ್ಸಿನ ಮುಖಂಡ, ದೊಡ್ಡ ಲೀಡರ್” ಎಂದು ಉಳಿದವರು ಹೇಳುವಲ್ಲಿಂದ ಈ ಚಿತ್ರ ಆರಂಭವಾಗುತ್ತದೆ. ಅವನು ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡು, ಕಾರ್ಮಿಕರ ಹೋರಾಟದ ನಾಯಕನಾಗಿರುತ್ತಾನೆ. “ಈ ಶ್ರೀಧರನ್, ಬಹಳ ದೊಡ್ಡ ನಾಯಕ, ಅವನೊಬ್ಬ ಯಶಸ್ವಿ ಮಾರ್ಕ್ಸಿಸ್ಟ್” ಎಂದು ಒಬ್ಬರು ಹೇಳಿದರೆ, ಸಂದರ್ಶನದಲ್ಲಿ ಮತ್ತೊಬ್ಬರು “ಇವನು ಅಷ್ಟು ಸಮರ್ಥ ಮತ್ತು ಇಷ್ಟು ಸಮರ್ಥ” ಎಂದು ಹೇಳುತ್ತಿರುತ್ತಾರೆ.
ಸಿನಿಮಾದ ಮೊದಲ ಭಾಗ, ಹೇಳಿಕೆಗಳ ಮೂಲಕವೇ ಅನಾವರಣಗೊಳ್ಳುತ್ತಾ ಹೋಗುತ್ತದೆ. ಅಲ್ಲಿಯವರೆಗೆ ಶ್ರೀಧರನ್ ಹೆಚ್ಚು ಮಾತನಾಡುವುದಿಲ್ಲ. ಕೇವಲ ಹೋರಾಟದಲ್ಲಿ ಅಥವಾ ಇನ್ನಿತರ ಪ್ರತಿಭಟನೆಯಲ್ಲಿ ಭಾಗವಹಿಸಿರುತ್ತಾನೆ. ಉಳಿದ ವೇಳೆಯಲ್ಲಿ ಟೀ ಕುಡಿಯುತ್ತಾ ಸಮಯ ಕಳೆಯುತ್ತಿರುತ್ತಾನೆ. ನಂತರ ದಿಢೀರ್ ಆಗಿ ನಾಪತ್ತೆಯಾಗುವ ಶ್ರೀಧರನ್ ಹತ್ತು ವರ್ಷ ಕಾಣಿಸಿಕೊಳ್ಳುವುದೇ ಇಲ್ಲ. ತುಂಬಾ ಜನರು ಆತ ಸತ್ತುಹೋದ, ಭೂಗತ ಆದ ಎಂದೇ ಭಾವಿಸುತ್ತಾರೆ. ಏಕೆಂದರೆ ಆ ಸಮಯದಲ್ಲಿ, ಕೇರಳದಲ್ಲಿ ತುಂಬ ಜನ ನಾಯಕರು ಭೂಗತರಾಗಿರುತ್ತಾರೆ. ಆದರೇ ಹತ್ತು ವರ್ಷಗಳ ನಂತರ ಕಾಣಿಸಿಕೊಳ್ಳುವ ಶ್ರೀಧರನ್, ತಾನಿನ್ನೂ ಸತ್ತಿಲ್ಲ ಎನ್ನುವ ಮೂಲಕ ಕತೆ ಮುಂದುವರೆಯುತ್ತದೆ.
ಶ್ರೀಧರನ್ ಭೂಗತ ಆಗುವ ಮೊದಲು ಮದುವೆಯಾಗಿದ್ದ. ಆತನಿಗೆ ಒಬ್ಬ ಮಗ ಕೂಡ ಇರುತ್ತಾನೆ. ಮಗನಿಗೆ ಅಪ್ಪನ ಬಗ್ಗೆ ಬಹಳ ಕನಸುಗಳಿರುತ್ತದೆ. “ನಿಮ್ಮಪ್ಪ ದೊಡ್ಡ ಲೀಡರ್“ ಅನ್ನೋದನ್ನ ತುಂಬಾ ಜನ ಹೇಳೋದನ್ನ ಕೇಳಿ ಅವನು ಅಂತಹ ಲೀಡರ್ ಅನ್ನು ಕಲ್ಪಿಸಿಕೊಂಡು ಕಾಯುತ್ತಿರುತ್ತಾನೆ. ಆದರೆ ವಾಪಸ್ಸು ಬರುವ ಶ್ರೀಧರನ್ ಕ್ರಿಯಾಶೀಲನಾಗಿರುವುದಿಲ್ಲ. ಕೇವಲ ಕುಡಿತದಲ್ಲೇ ಕಾಲ ಕಳೆಯುತ್ತಿರುತ್ತಾನೆ. ಇದರಿಂದ ಅವನನ್ನು ನೋಡಲು ಬರುತ್ತಿದ್ದ ಪ್ರತಿಯೊಬ್ಬರಿಗೂ ಭ್ರಮನಿರಸನವಾಗುತ್ತದೆ.
ಶ್ರೀಧರನ್ ವಿಪರೀತ ಅನ್ನುವಷ್ಟು ಸಾಲ ಮಾಡಿಕೊಂಡು, ಕುಡಿತಕ್ಕೆ ಅದನ್ನು ಸುರಿಯುತ್ತಿದ್ದ. ಈ ರೀತಿಯ ಗುಣವನ್ನು ನಿರೀಕ್ಷೆ ಮಾಡಿರದ ಊರಿನ ಜನರು ಆತನನ್ನು ವ್ಯಂಗ್ಯ ಮಾಡಲಾರಂಭಿಸುತ್ತಾರೆ. ಶ್ರೀಧರನ್ ಹೆಸರಿನಲ್ಲಿ ಈ ಮೊದಲು ಊರ ಜನ ಒಂದು ಕಟ್ಟಡವನ್ನು ಕಟ್ಟಿಸಿದ್ದರು. ಈಗ ಆತ ಅಲ್ಲೆ ಕುಡಿದು ಮಲಗುತ್ತಿರುತ್ತಿದ್ದ. ಇದರಿಂದ ಅನುಮಾನಕ್ಕೀಡಾದ ಜನರು ಈತ ಶ್ರೀಧರನ್ ಹೌದೇ? ಅಲ್ಲವೇ ? ಎಂದು ಮಾತನಾಡಿಕೊಳ್ಳುತ್ತಾರೆ. ಶ್ರೀಧರನಿಗೆ ಹಿಂಬಾಲಕನಾಗಿದ್ದ ಸುಧಾಕರನ್ ಕೂಡ ಕಡೆಗೆ ತನ್ನ ಗುರುವನ್ನು ದ್ವೇಷಿಸಲು ಆರಂಭಿಸುತ್ತಾನೆ. ಕೊನೆಗೆ ಈತನ ಕುಡಿತದಿಂದ ರೋಸಿ ಹೋದ ಜನರು “ನಮ್ಮ ಇಡೀ ಉದ್ದೇಶಕ್ಕೆ ಧಕ್ಕೆ ತರುತ್ತಿದ್ದಾನೆ” ಎಂದು ಸಿಟ್ಟಾಗುತ್ತಾರೆ. ಕೆಲವೇ ದಿನಗಳಲ್ಲಿ ಶ್ರೀಧರನ್ ಕೊಲೆಯಾಗುತ್ತಾನೆ. ಆದರೆ ಕೊಲೆ ಮಾಡಿದ್ದು ಯಾರು ? ಎಂಬುದು ಚಿತ್ರದಲ್ಲಿ ಕಡೆಗೂ ಗೊತ್ತಾಗುವುದಿಲ್ಲ. ಎಲ್ಲರೂ ಒಂದು ಫೋಟೋ ಹಿಡಿದು, ಜೈಕಾರ ಹಾಕಿಕೊಂಡು ಮೆರವಣಿಗೆ ಮಾಡಿ, ಶ್ರೀಧರನನ್ನು ಐಕಾನ್ ಮಾಡಿಬಿಡುತ್ತಾರೆ. ಅಲ್ಲಿಗೆ ಈ ಸಿನಿಮಾ ಮುಕ್ತಾಯವಾಗುತ್ತೆ.
ಈ ಸಿನಿಮಾದ ಸ್ವಾರಸ್ಯವೆನೆಂದರೆ ಇದನ್ನು ಎರಡು ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಒಂದು ಮಾರ್ಕ್ಸಿಸ್ಟ್ ಲೀಡರ್, ಈ ಮಾರ್ಕ್ಸಿಸಂ-ಮಾರ್ಕ್ಸಿಸ್ಟ್ ಲೀಡರ್ ಮೂಲಕ ಕೇರಳದಲ್ಲಿ ಆಗ ನಡೆಯುತ್ತಿರುವಂತಹ ಎಲ್ಲಾ ರಾಜಕೀಯ ಸನ್ನಿವೇಶಗಳನ್ನು ಉಪಮೆಯವಾಗಿ ಸಿನಿಮಾದಲ್ಲಿ ನೋಡಬಹುದು. ಕಮ್ಯೂನಿಸ್ಟ್ ಪಕ್ಷ ಇಬ್ಬಾಗವಾಯಿತು, ಐಡಿಯಾಲಿಸಂ ಹಿನ್ನೆಲೆಗೆ ಸರಿಯಿತು. ಅಲ್ಲಿನ ಜನ ಎಲ್ಲಿಯ ಮಾರ್ಕ್ಸ್? ಎಲ್ಲಿಯ ಇವತ್ತಿನ ಕಮ್ಯೂನಿಸಂ ಎಂದು ಮಾತನಾಡುತ್ತಾ ಹೋಗುತ್ತಾರೆ. ಈ ರೀತಿಯ ವ್ಯಾಖ್ಯಾನಕ್ಕೆ ಸಿನಿಮಾ ಪ್ರತಿಯೊಬ್ಬರನ್ನೂ ದೂಡುತ್ತದೆ. ಸಿನಿಮಾ ನೋಡಿದ ತುಂಬಾ ಜನರು ಆ ವ್ಯಾಖ್ಯಾನವನ್ನು ಇಟ್ಟುಕೊಂಡು, ಇದೊಂದು anti-communist movement ಎನ್ನುತ್ತಾರೆ. ಇನ್ನು ಕೆಲವರು ರಿಯಾಕ್ಷನರಿ ಸಿನಿಮಾ ಎಂದು ತಿರಸ್ಕರಿಸುತ್ತಾ ಹೋಗುತ್ತಾರೆ.
ಮುಖಾಮುಖಮ್ ಚಿತ್ರವೂ ಮುಖ ಮತ್ತು ಮುಖವಾಡದ ಬಗ್ಗೆ ಮಾತನಾಡುತ್ತಿರುವ ಒಂದು ಸಿನಿಮಾ. ಪ್ರತಿಯೊಬ್ಬರಿಗೂ ಒಂದು ಮುಖ ಇರುತ್ತದೆ. ಹಾಗೆಯೇ ಮುಖವಾಡ ಕೂಡ ಇರುತ್ತೆ. ಮುಖವಾಡ ಯಾವಾಗ ಹೊರಗಡೆ ಬರುವುದು-ಮುಖ ಯಾವಾಗ ಮುನ್ನೆಲೆಗೆ ಬರುವುದು ಎಂಬುದು ನಮಗೆ ಸ್ವತಃ ಗೊತ್ತಿರುವುದಿಲ್ಲ. ನಮ್ಮದೇ ಮುಖ, ಮುಖವಾಡ ಆಗಿದ್ದರೂ ಕೂಡ ತಿಳಿಯುವುದಿಲ್ಲ. ಈ ಶ್ರೀಧರನ್, ನಿಜವಾಗಿಯೂ ಕಮ್ಯೂನಿಸ್ಟ್ ನಾಯಕನೇ ? ಅಥವಾ ಬಲಿಪಶುವೇ ? ಎಂದು ಹುಡುಕಿದರೆ ಇಡೀ ಸಿನಿಮಾವನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಬಹುದು.
ಪ್ರತಿಯೊಂದು ಚಳುವಳಿಯ ಮುಂದಾಳತ್ವಕ್ಕೆ ಒಬ್ಬ ವ್ಯಕ್ತಿಯ ಅವಶ್ಯಕತೆಯಿರುತ್ತದೆ. ಹೀಗಾಗಿಯೇ ಶ್ರೀಧರನನ್ನು ತಂದಿರಲೂಬಹುದು (?). ಹಾಗಾದರೇ ನಿಜವಾದ ಶ್ರೀಧರನ ಗುಣ ಸಹಜವಾಗಿತ್ತೇ ? ಪರಿಸ್ಥಿತಿಯ ಸುಳಿಗೆ ಸಿಲುಕಿ ಹಾಗೆ ವರ್ತಿಸುತಿದ್ದನೇ ? ಆತ ಎಲ್ಲದರಿಂದ ವಿಮುಖನಾಗುವುದಕ್ಕೆ ಅವನದಲ್ಲದ ವ್ಯಕ್ತಿತ್ವ ಕಾರಣವಾಗಿರಬಹುದೇ ? ಹೀಗೆ ಪ್ರಶ್ನಿಸುತ್ತಾ ತೆರಳಿದರೇ ರಾಜಕೀಯ ಬಿಟ್ಟು ತಾತ್ವಿಕ ವ್ಯಾಖ್ಯಾನ ನೀಡಬಹುದು. ಅಂದರೆ ಮುಖ ಎಲ್ಲಿ? ಮುಖವಾಡ ಎಲ್ಲಿ? ವ್ಯಕ್ತಿತ್ವ ಎಲ್ಲಿ? ಎಂದು ಗಮನಿಸಿದಾಗ ಈ ಸಿನಿಮಾ ಒಂದು ಸಂಕೀರ್ಣ ಕತೆಯನ್ನು ಹೇಳುತ್ತದೆ ಎಂಬುದು ಪ್ರತಿಯೊಬ್ಬರಿಗೂ ಭಾಸವಾಗುತ್ತದೆ.
ಸಿನಿಮಾದ ಮೊದಲ ಭಾಗದಲ್ಲಿ ಕಾಣುವ ಶ್ರೀಧರನಿಗೂ, ಎರಡನೇ ಭಾಗದಲ್ಲಿ ಬರುವ ಶ್ರೀಧರನಿಗೂ ಹೊಂದಾಣಿಕೆಯೇ ಇರುವುದಿಲ್ಲ. ಯಾವ ಕಾರಣಕ್ಕಾಗಿ ಆತನನ್ನು ಕೊಲೆ ಮಾಡಲಾಗುತ್ತದೆ ಎಂಬುದು ಅಸ್ಪಷ್ಟ. ಜನರ ನಿರೀಕ್ಷೆಗೆ ತಕ್ಕಂತೆ ಆತ ವರ್ತಿಸಲಿಲ್ಲ ಎಂಬ ಕಾರಣವೇ ? ಅಥವಾ ಶ್ರೀಧರನನ್ನು ಶ್ರೀಧರನನ್ನಾಗಿ ನೋಡಲು ನಮ್ಮಿಂದ ಸಾಧ್ಯವಿಲ್ಲ ಎಂಬ ಕಾರಣವೇ ? ಒಬ್ಬ ವ್ಯಕ್ತಿಗೆ, ವ್ಯಕ್ತಿಯಾಗಿ ಉಳಿಯುವುದಕ್ಕೆ ಅರ್ಹತೆಯೇ ಇಲ್ಲವೇ? ಇನ್ನೊಬ್ಬರ ದೃಷ್ಟಿಗೆ ಅನುಗುಣವಾಗಿಯೇ ಬದುಕಬೇಕೆ? ಈ ತೆರನಾದ ಹಲವು ತಾತ್ವಿಕ ಪ್ರಶ್ನೆಗಳನ್ನೆತ್ತುವ ಮುಖಾಮುಖಮ್ ಬಹಳ ಮಹತ್ವದ ಸಿನಿಮಾವಾಗಿ ಗುರುತಿಸಲ್ಪಟ್ಟಿದೆ.
ಚಿತ್ರಕಟ್ಟುವ ಕ್ರಮದಲ್ಲೂ ಕೂಡ ಈ ಸಿನಿಮಾ ಬಹಳ ವಿಭಿನ್ನವಾದಂತಹ ಸಂರಚನೆಯನ್ನು ಹೊಂದಿದೆ. ಮೊದಲ ಹತ್ತು ವರ್ಷ ಅಂದರೇ 1956 ಭಾಗವನ್ನು ಪ್ರತಿಯೊಬ್ಬರೂ ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಆ ಗ್ರಹಿಕೆಯಲ್ಲಿ ಶ್ರೀಧರ ಇರುತ್ತಾನೆಯೇ ಹೊರತು ಶ್ರೀಧರನ್ ಅಲ್ಲ. ಹೀಗಾಗಿ ಬಹಳ ಸುಸಂಬದ್ಧವಾಗಿ, ಕತೆಯ ಚೌಕಟ್ಟಿನ ಅಗತ್ಯವೇನಿದೆಯೋ, ಅದರ ಪ್ರಕಾರ ಇಲ್ಲಿ ನಿರ್ದೇಶಕರು ಕತೆ ಕಟ್ಟುತ್ತಾ ಹೋಗುತ್ತಾರೆ. ಎರಡನೆ ಭಾಗದಲ್ಲಿ ಹತ್ತು ವರ್ಷದ ಬಳಿಕ ಬರುವ ಶ್ರೀಧರನನ್ನು, ಸದಾ ಮಲಗಿರುವ, ಏನೂ ಕೆಲಸ ಮಾಡದ, ಪ್ರತಿದಿನ ದುಡ್ಡು ಕದ್ದು ಹೆಂಡ ಕುಡಿಯುವ ಶ್ರೀಧರನನ್ನು ಆಡೂರು ಗೋಪಾಲಕೃಷ್ಣನ್ ಚಿತ್ರಿಸುತ್ತಾರೆ. ಇದನ್ನು ರೂಪಿಸಿರುವ ಸಂವಿಧಾನ ವಿಸ್ಮಯವೇ ಸರಿ. ಮಂದಗತಿಯಿಂದ ಸಾಗುವ ಸಿನಿಮಾದ ನಿರೂಪಣೆಯಿಂದ, ನಾಯಕ ಪಾತ್ರಧಾರಿಯ ಆಲಕ್ಷ್ಯ ಜೀವನ ಪ್ರೇಕ್ಷಕನ ಅನುಭವಕ್ಕೆ ಬರುತ್ತದೆ. ಸ್ವತಃ ತಾನೇ ಎದ್ದು ಹೋಗಿ ನಾಯಕನಿಗೆ ಬುದ್ದಿವಾದ ಹೇಳಬೇಕು ಎನ್ನುವಷ್ಟರ ಮಟ್ಟಿಗೆ ಪ್ರೇಕ್ಷಕನಿಗೆ ಇರಿಸುಮುರುಸಾಗುತ್ತದೆ. ಅಷ್ಟರ ಮಟ್ಟಿಗೆ ನಾಯಕ ಪಾತ್ರಧಾರಿಯ ನಿಷ್ಕ್ರಿಯತೆಯನ್ನು ನಿರ್ದೇಶಕರು ಚಿತ್ರದಲ್ಲಿ ತೋರಿಸುತ್ತಾರೆ.
ಒಂದು ಕಡೆಯಲ್ಲಿ ಶ್ರೀಧರನ್ ಯಾಕೀಗೆ ವರ್ತಿಸುತ್ತಿದ್ದಾನೆಂದು ಪ್ರೇಕ್ಷಕರು ಪ್ರಶ್ನೆ ಮಾಡಿಕೊಳ್ಳಲಾರಂಭಿಸುತ್ತಾರೆ. ಆತನನ್ನು ದೊಡ್ಡ ಮನುಷ್ಯನನ್ನಾಗಿ ಕಂಡುಕೊಂಡಿದ್ದೆ ಇದಕ್ಕೆ ಕಾರಣವೇ ? ಹಾಗಾದರೆ ತಪ್ಪು ಯಾರದ್ದು? ಎಂದು ಆಲೋಚಿಸುವ ಪ್ರೇಕ್ಷಕ ಆತ್ಮಾವಲೋಕನದ ಹಾದಿಯಲ್ಲಿ ನಡೆಯುತ್ತಾನೆ. ಹೀಗಾಗಿ ಸಿನಿಮಾದ ದಾರ್ಶನಿಕ ಸ್ವರೂಪ ಬಹಳ ಮಹತ್ವ ಪಡೆದಿದೆ. ಮುಖಾಮುಖಮ್ ಅಂದರೆ, ಆ ಮುಖ ಅಥವಾ ಈ ಮುಖ ಅಂತಾನೂ ಆಗಿರುವ ಸಾಧ್ಯತೆಯಿದೆ. ಸಿನಿಮಾ ನೋಡುವಾಗ ಈ ರೀತಿಯ ಚಿಂತನೆ ಬಾರದಿದ್ದರೇ, ಪ್ರೇಕ್ಷಕ ಬಹಳ ನಿಧಾನವಾಗಿ ಹೋಗುವ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿ ಹೊರಡುವ ಸಾಧ್ಯತೆಯಿದೆ. ಒಂದು ದೃಶ್ಯದಲ್ಲಂತೂ ಶ್ರೀಧರ, ಎದ್ದು ನಡೆದು ಬರುವ ಪರಿಯನ್ನು ಕಂಡರೇ, ಪ್ರಾಯಶಃ ನಿಜ ಜೀವನದಲ್ಲಿ ಯಾರೋಬ್ಬರೂ ಇಷ್ಟು ಸ್ಲೋ ಆಗಿ ನಡೆಯುವುದಿಲ್ಲ ಎಂದು ಭಾಸವಾಗುತ್ತದೆ.
ಶ್ರೀಧರ ನಿಧಾನವಾಗಿ ನಡೆದು ಬರುವ ಹಾದಿಯಲ್ಲಿ ಭಕ್ತಾದಿಗಳು ಸೇರಿರುತ್ತಾರೆ. ಹತ್ತು ವರ್ಷಗಳ ನಂತರ ಬಂದಿದ್ದರಿಂದ ಯಾರೂ ಕೂಡ ಇತನನ್ನು ಮಾತನಾಡಿಸುವುದಿಲ್ಲ. ಸುಮ್ಮನೆ ಆತನ ವರ್ತನೆಯನ್ನೇ ಗಮನಿಸುತ್ತಿರುತ್ತಾರೆ. ಕೊನೆಗೆ ಶ್ರೀಧರ ಒಬ್ಬಾತನ ಜೇಬಿನಲ್ಲಿರುವ 50 ರೂಪಾಯಿ ತೆಗೆದುಕೊಂಡು, ಇದನ್ನು ನಾನು ಇಟ್ಟುಕೊಳ್ಳುತ್ತೇನೆ, ವಾಪಸ್ಸು ಕೊಡುವುದಿಲ್ಲ, ನನಗೆ ದುಡ್ಡಿನ ಅವಶ್ಯಕತೆಯಿದೆ ಎಂದು ಹೇಳುತ್ತಾನೆ. ಲುಯಿಸ್ ಬುನುವೆಲ್ ಹೇಳುವ “The pace of the film is the political statement of the filmmaker” ಎಂಬ ಮಾತಿಗೆ ಮುಖಾಮುಖಮ್ ಸಿನಿಮಾ ಉತ್ತಮ ಉದಾಹರಣೆ. ನಿಧಾನವಾಗಿ ಸಾಗುವ ಚಿತ್ರವನ್ನು ನೋಡಲಸಾಧ್ಯವಾದರೂ, ಅಡೂರ್ ಗೋಪಾಲಕೃಷ್ಣ ಚಿತ್ರದಲ್ಲಿ ಅಳವಡಿಸಿರುವ ರಾಜಕೀಯ ಅಂಶಗಳು ಜನರನ್ನು ಆಶ್ಚರ್ಯಕ್ಕೀಡುಮಾಡುತ್ತದೆ. ಈ ಕಾರಣದಿಂದಲೇ ಮುಖಾಮುಖಮ್ ಸಿನಿಮಾ ನನಗೆ ಬಹಳ ಮೆಚ್ಚುಗೆಯಾಗಿದೆ.
– ಗಿರೀಶ್ ಕಾಸರವಳ್ಳಿ


![Blogging the Reel World – GRAN TORINO [2008]](https://chitrayana.com/wp-content/uploads/2023/02/Gran-Torino-e1676009947450.png)

![Blogging the Reel World – NO MAN’S LAND [2001]](https://chitrayana.com/wp-content/uploads/2023/01/NO-MANS-LAND-MYSTIC-RIVER-e1673936905514.png)
0 Comments