ಸಂಗೀತ ಸಪ್ತಸ್ವರಗಳ ಸಾಂಗತ್ಯ. ಆದರೆ ಅದು ಕೇವಲ ಆ ಸ್ವರಗಳ ಅನುಕ್ರಮಣಿಕೆಯ ಪ್ರಸ್ತಾರ ಮತ್ತು ಪ್ರಸ್ತುತಿ ಅಲ್ಲ. ಹಲವು ರಾಗಗಳು ಇರುವಂತೆ ಹಲವು ಭಾವಗಳು ಇವೆ. ಆ ರಾಗಗಳ ಪ್ರಸ್ತುತಿಗೆ ಮನೋಧರ್ಮ ಅಗತ್ಯ. ಸಂಗೀತ ವಿಸ್ತರಣ ಕಂಡುಕೊಂಡು ಕಲೆಯಾಗಿ ಅರಳುವುದು ಈ ಮನೋಧರ್ಮದಲ್ಲೇ.
ಹೀಗೆ ಸಂಗೀತಕ್ಕೆ ತಮ್ಮ ಇಡೀ ಜೀವನ ತೆತ್ತವರಲ್ಲಿ ಒಂದೊಂದು ಬಗೆಯ ಮನೋಧರ್ಮ ಗುರುತಿಸಬಹುದು. ಒಬ್ಬರು ಮತ್ತೊಬ್ಬರಿಗಿಂತ ಭಿನ್ನ. ಎಲ್ಲಕ್ಕೂ ಶಾಸ್ತ್ರೀಯ ಸಂಗೀತ ಮೂಲ ಮತ್ತು ಅಡಿಪಾಯ. ಕೆಲವರು ಶಾಸ್ತ್ರೀಯ ಪ್ರಸ್ತುತಿಗೇ ತಮ್ಮನ್ನು ಸೀಮಿತ ಮಾಡಿಕೊಂಡುಬಿಡುತ್ತಾರೆ. ಮತ್ತೆ ಕೆಲವರು ಬೇರೆಬೇರೆ ಭಾವಗಳ ಪ್ರಸ್ತುತಿಗೆ ತಮ್ಮನ್ನು ಅಣಿಮಾಡಿಕೊಳ್ಳುತ್ತಾರೆ. ಸಿನಿಮಾ ಸಂಗೀತ ಹಲವು ಭಾವಗಳನ್ನು ಒಳಗೊಂಡಿರುವ ಮಿಶ್ರಣ. ಅಲ್ಲಿ ಪ್ರೇಮದ ತೀವ್ರ ಯಾಚನೆ, ದುಃಖದ ಅಭಿವ್ಯಕ್ತಿ ಜೊತೆಗೆ ಯೌವನದ ಹುರುಪು ಕಾಣಿಸಲೂ ಅವಕಾಶಗಳಿವೆ.
ಈ ನೆಲೆಯಲ್ಲಿ ಕೆಲವರು ಮೆಲೋಡಿಗಳಲ್ಲಿ ತಮ್ಮ ಪಾರಮ್ಯ ಮೆರೆದರು. ಮತ್ತೆ ಕೆಲವರು ದುಃಖದ ಛಾಯೆ ಕೇಳಿಸಲು ಮಂದ್ರಕ್ಕೆ ಇಳಿದರು. ಬಪ್ಪಿ ಲಹಿರಿ ಡಿಸ್ಕೊ ಬೀಟ್ ಕೇಳಿಸುವುದರ ಮೂಲಕ ಹಿಂದಿ ಸಿನಿಮಾ ರಂಗದಲ್ಲಿ ಹೊಸ ಶಕೆ ಆರಂಭಿಸಿದರು. ಎಂಬತ್ತು ತೊಂಬತ್ತರ ದಶಕದಲ್ಲಿ ಬಪ್ಪಿ ಲಹಿರಿಯವರ ಸಂಗೀತಕ್ಕೆ ಕಿವಿಗೊಡದವರೇ ಇಲ್ಲ. ಕಿವಿಗೊಡುವುದು ಮಾತ್ರ ಅಲ್ಲ ಡಿಸ್ಕೊನ ಲಯಕ್ಕೆ ಹೆಜ್ಜೆ ಕದಲಿಸಲು ಬಾರದವರೂ ಎದ್ದು ಹೆಜ್ಜೆ ಕದಲಿಸಲು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುತ್ತ ಕುಳಿತರ ಸಂಖ್ಯೆ ದೊಡ್ಡದಿದೆ. ಇಲ್ಲಿ ಗ್ರೇಸ್ ಜೋನ್ಸ್ ಮಾತು ಉಲ್ಲೇಖನೀಯ. ‘ Disco was like the celebration of music through dance and my God! When you heard the music sometimes it was like, if you don’t getup and dance, you aren’t human’
ಡಿಸ್ಕೊ ಬಗೆಗೆ ಈ ಬಗೆಯ ಕ್ರೇಜ್ ಹುಟ್ಟುಹಾಕಿದ್ದು ಬಪ್ಪಿ ಲಹಿರಿ. ಎಂಬತ್ತರ ದಶಕದ ಆರಂಭದಲ್ಲಿ ಮಿಥುನ್ ಚಕ್ರವರ್ತಿ ಅಭಿನಯದ ‘ಡಿಸ್ಕೊ ಡ್ಯಾನ್ಸರ್’ ಚಿತ್ರಕ್ಕೆ ಬಪ್ಪಿ ಲಹಿರಿ ಸಂಗೀತ ಸಂಯೋಜಿಸಿದ ‘ I am a disco dancer’ ಹಾಡು ಮೂಡಿಸಿದ ಸಂಚಲನ ಅಂತಿಂಥದ್ದಲ್ಲ. ಅದು ಮಿಥುನ್ ಚಕ್ರವರ್ತಿಯವರ ಜೀವನಕ್ಕೆ ತಿರುವು ನೀಡಿತು. ಬಪ್ಪಿ ಲಹಿರಿ ಸಂಗೀತದ ಝಲಕು ಸೃಷ್ಟಿಸಿದ ಮೋಡಿ ಕಂಡೇ ಆರ್.ಡಿ ಬರ್ಮನ್ ‘ ಎ ಕಹಾಂಸೆ ಆಗಯೇ ಎ ತೂಫಾನ್..?’ ಎಂದು ಕೇಳಿದ್ದರು.
ಹೌದು ಬಪ್ಪಿ ಲಹಿರಿ ಡಿಸ್ಕೊ ಸಂಗೀತದ ತೂಫಾನ್. ಆದರೆ ಈ ತೂಫಾನ್ ಈಚೆಗೆ ಸ್ತಬ್ಧವಾಯಿತು. ಐದು ದಶಕಗಳ ಕಾಲ ಸಂಗೀತದಲ್ಲಿ- ಅದರಲ್ಲೂ ಡಿಸ್ಕೊ ಪ್ರಕಾರದ ಸಂಗೀತದಲ್ಲಿ ತಮ್ಮ ಛಾಪು ಕಾಣಿಸಿ ‘ ಡಿಸ್ಕೊ ಕಿಂಗ್’ ಅನಿಸಿಕೊಂಡವರು ಬಪ್ಪಿ ಲಹಿರಿ. ಆದರೆ ಕಾಲದಲ್ಲಿ ಎಲ್ಲವೂ ಲೀನವಾಗುವ ನಿಯಮವೊಂದಿರುವ ಕಾರಣ ಬಪ್ಪಿ ಎಂಬ ಡಿಸ್ಕೊ ತೂಫಾನ್ ತನ್ನ ಅಬ್ಬರ ಮುಗಿಸಿ ಲೀನವಾಗಿದೆ.
ಬಪ್ಪಿ ದಾ ( ದಾದ) ಸಂಗೀತದಲ್ಲಿ ತಾವು ಗುರುತಿಸಿಕೊಳ್ಳುವುದರ ಜೊತೆಗೇ ಒಬ್ಬ ಹೀರೋನನ್ನು ಮುನ್ನೆಲೆಗೆ ತಂದರು. ಸಂಗೀತಕ್ಕೆ ಅಂಥ ಶಕ್ತಗುಣವಿದೆ. ಮತ್ತು ಅದು ಸಂಗೀತ ಸಂಯೋಜಕನ ಮನೋಧರ್ಮವನ್ನು ಅವಲಂಬಿಸಿರುತ್ತದೆ.
ಹೀಗೆ ಡಿಸ್ಕೊ ಸಂಗೀತ ಹಲವು ಹೀರೊಗಳಿಗೆ ಒಂದು ಗಟ್ಟಿ ಇಮೇಜ್ ದೊರಕಿಸಿಕೊಟ್ಟ ಕೆಲವು ಉದಾಹರಣೆಗಳು ಇವೆ. 1981ರಲ್ಲಿ ತೆರೆಕಂಡ ‘ ಗೀತ’ ಕನ್ನಡ ಚಿತ್ರ ಶಂಕರ್ ನಾಗ್ ಅವರಿಗೆ ಒಂದು ಇಮೇಜ್ ಸೃಷ್ಟಿಸಿಕೊಟ್ಟಿತು. ಆ ಚಿತ್ರದಲ್ಲಿನ ‘ ಹಾಡು ಸಂತೋಷಕ್ಕೆ ಕುಣಿದು ಕುಣಿದು ತಾಳಕ್ಕೆ ಕುಣಿದು…’ ಹಾಡು ಇಂದಿಗೂ ಜನಪ್ರಿಯ. ಶಂಕರ್ ನಾಗ್ ಎಂದ ಕೂಡಲೇ ಮೊದಲಿಗೆ ನೆನಪಿಗೆ ಬರುವುದು ಇದೇ ಹಾಡು. ಸಂಗೀತ ಸಂಯೋಜಿಸಿದ್ದು ಇಳಯರಾಜ. ಹಾಗೇ ರವಿಚಂದ್ರನ್ ಅವರ ಕೈಗೆ ಗಿಟಾರ್ ಕೊಟ್ಟು ಡಿಸ್ಕೊ ಸಂಗೀತಕ್ಕೆ ಕುಣಿಸಿ ಒಂದು ಇಮೇಜ್ ಸೃಷ್ಟಿಸಿದವರು ಹಂಸಲೇಖ. ‘ ಯಾವುದೋ ಈ ಬೊಂಬೆಯಾವುದೋ’ ಹಾಡನ್ನು ನೆನಪಿಸಿಕೊಳ್ಳಬಹುದು. ಹಾಗೇ ವಿನೋದ್ ರಾಜ್ ಅವರ ‘ ಡಾನ್ಸ್ ಡಾನ್ಸ್ ರಾಜ ಡಾನ್ಸ್..’ ಹಾಡು ಅವರಿಗೆ ಒಂದು ಭೂಮಿಕೆ ಸೃಷ್ಟಿಸಿಕೊಟ್ಟಿತು.
1981ರಲ್ಲಿ ಕನ್ನಡದ ‘ ಗೀತಾ’ ಚಿತ್ರ ತೆರೆಕಂಡರೆ 1982ರಲ್ಲಿ ತೆರೆಕಂಡದ್ದು ಹಿಂದಿಯ ‘ ಡಿಸ್ಕೊ ಡಾನ್ಸರ್’. ಮಿಥುನ್ ಚಕ್ರವರ್ತಿಯವರ ಇಮೇಜ್ ರಷ್ಯಾದಂತ ಪ್ರಚಾರ ಪಡೆಯಿತು. ಇದು ಸೃಷ್ಟಿಸಿದ ರಭಸ ಕಂಡೇ ಬಪ್ಪಿ ದಾ ಅವರನ್ನು ಆರ್.ಡಿ ಬರ್ಮನ್ ‘ ತೂಫಾನ್’ ಎಂದದ್ದು ಇರಬೇಕು.
ಒಂದು ಹಾಡು ಈ ಪರಿ ಮಾಯೆ ಮತ್ತು ಮೋಡಿ ಹೇಗೆ ಸೃಷ್ಟಿಸಿತು ಎಂದು ಹಲವರು ಹುಬ್ಬೇರಿಸಿದ್ದಿದೆ. ಸಂಗೀತಕ್ಕೆ ಇರುವ ಗುಣವೇ ಅಂಥದ್ದು. ಅದು ಕಟ್ಟಿಕೊಡುವ ಆನಂದವನ್ನು ಪದಗಳಲ್ಲಿ ಹಿಡಿದಿಡಲು ಆಗುವುದಿಲ್ಲ. ವಿಕ್ಟರ್ ಹ್ಯೂಗೊ ಹೇಳಿದ್ದು ಇದನ್ನೇ- Music expresses that which cannot be put into words and that which cannot remain silent’
ಆದರೆ ಭಾರತೀಯ ಸಂದರ್ಭದಲ್ಲಿ ಕೆಲವರು ಡಿಸ್ಕೊ ಬಗ್ಗೆ ಇದೆಂಥ ಮೈಕುಣಿಸುವ ಸಂಗೀತ ಎಂದು ರೊಳ್ಳೆ ತೆಗೆದರು. ಜೊತೆಗೆ ಇಂಥ ಮಾತುಗಳನ್ನು ಎದುರುಗೊಳ್ಳಬೇಕಾದ ಬಗೆಗೂ ಒಂದು ಮಾತು ಚಾಲ್ತಿಗೆ ಬಂತು. ಅದು ಫ್ರಾಂಕ್ ಝಾಪಾರ ಮಾತು- ‘A wise man once said, never discuss philosophy or politics in a disco environment’.
ಮೈಕೆಲ್ ಜಾಕ್ಸನ್ ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ‘ I hate labels because it should be just music, I don’t see anything wrong with disco. Call it anything. Its music’ ಎಂದರು.
ಬಪ್ಪಿ ದಾ ಸಂಯೋಜಿಸಿದ ಒಂದು ಹಾಡು ಈ ಮಟ್ಟದ ಕ್ರೇಜ್ ಹುಟ್ಟು ಹಾಕಿತೆ ಎಂದು ಕೇಳಿಕೊಂಡರೆ ಅದಕ್ಕೆ ಉತ್ತರ ‘ ಹೌದು’ ಎಂದೇ ಹೇಳಬೇಕು. ನಾವು ಡಿಸ್ಕೊ ಸಂಗೀತವನ್ನ ಪಾಶ್ಚಾತ್ಯರಿಂದ ದೊರಕಿಸಿಕೊಂಡದ್ದು ಎಂದುಕೊಂಡಿದ್ದೇವೆ. ಅದು ನಿಜವೂ ಹೌದು. ಆದರೆ ಹಿಂದಿ ಚಿತ್ರ ‘ ಡಿಸ್ಕೊ ಡ್ಯಾನ್ಸರ್’ 1982ರಲ್ಲಿ ತೆರೆಕಂಡು ಯಶಸ್ವಿಯಾದಾಗ 1988ರಲ್ಲಿ ಅಮೇರಿಕದಲ್ಲಿ ಒಂದು ಹೊಸ ಬ್ಯಾಂಡ್ ಆರಂಭವಾಗುತ್ತದೆ. ಅದರ ಹೆಸರು ‘ ದೇವೊ’ (Devo). ಹಿಂದಿಯ ‘ ಐಯಾಂ ಎ ಡಿಸ್ಕೊ ಡ್ಯಾನ್ಸರ್’ ಹಾಡಿನಿಂದ ಸ್ಫೂರ್ತಿಗೊಂಡು ಮಾರ್ಕ್ ಮದರ್ಸ್ಬಹ್ ಹಾಗೂ ಗೆರಾಲ್ಡ್ ಕೆಸಾಲೆ ಎಂಬಿಬ್ಬರು ‘ ಡಿಸ್ಕೊ ಡ್ಯಾನ್ಸರ್’ ಎಂದು ಹಾಡು ಬರೆಯುತ್ತಾರೆ. ಬ್ಯಾಂಡ್ ಅದನ್ನು ಹಾಡಲು ಆರಂಭಿಸುತ್ತದೆ. ಈ ಕಾರಣಕ್ಕೆ ಬಪ್ಪಿ ದಾ ನಿಜಕ್ಕೂ ತೂಫಾನ್ ಇದ್ದಂತೆ.
ಅವರು ಕೇವಲ ‘ ಐಯಾಂ ಎ ಡಿಸ್ಕೊ ಡಾನ್ಸರ್’ ಹಾಡು ಮಾತ್ರ ಸೃಜಿಸಲಿಲ್ಲ. ‘ ರಾತ್ ಬಾಕಿ ಬಾತ್ ಬಾಕಿ’ ; ಯಾರ್ ಬಿನಾ ಚೆ ಕಹಾಂ ಹೆ’ ಮುಂತಾದ ಹಾಡುಗಳು ಅವರ ಖಾತೆಯಲ್ಲಿವೆ.

ಇಂಥ ಬಪ್ಪಿ ದಾ ಅವರಿಗೆ ಸಂಗೀತದ ಕುಟುಂಬದ ಹಿನ್ನೆಲೆ ಇತ್ತು. ತಂದೆ ಹಾಗೂ ತಾಯಿ ಇಬ್ಬರೂ ಶಾಸ್ತ್ರೀಯ ಸಂಗೀತ ಹಾಡುತ್ತಿದ್ದವರು. ಖ್ಯಾತ ಗಾಯಕ ಕಿಶೋರ್ ಕುಮಾರ್ ಬಪ್ಪಿ ದಾ ಅವರ ಸೋದರ ಮಾವ. ಈ ಎಲ್ಲರ ಮತ್ತು ಎಲ್ಲದರ ದಟ್ಟ ಪ್ರಭಾವದಿಂದ ಇರಬೇಕು ಬಪ್ಪಿ ದಾ ಅವರಿಗೆ ಸಂಗೀತ ಬೇಗ ಮೈಗೂಡಲು ಆರಂಭಿಸಿತು. ಮೂರನೇ ವಯಸ್ಸಿಗೇ ಅವರು ತಬಲಾ ಕಲಿಯಲು ಆರಂಭಿಸಿದರು. ಹತ್ತೊಂಬತ್ತನೇ ವಯಸ್ಸಿಗೆ ಮುಂಬೈಗೆ ಬಂದು ಸಂಗೀತದ ಕೆಲಸ ಆರಂಭಿಸಿದರು. 1973ರಲ್ಲಿ ಹಿಂದಿ ಸಿನಿಮಾವೊಂದಕ್ಕೆ ಸಂಗೀತ ಸಂಯೋಜಿಸುವ ಅವಕಾಶ ದೊರೆಯಿತು. ‘ ತೂಹಿ ಮೇರಾ ಚಂದಾ’ ಹಾಡನ್ನು ಮುಖೇಶ್ ಹಾಡಿದರು. 1974ರಲ್ಲಿ ಬಂಗಾಳಿ ಸಿನಿಮಾ ‘ ದಾದು’ ಗೆ ಸಂಗೀತ ಸಂಯೋಜಿಸಿದಾಗ ಲತಾ ಮಂಗೇಶ್ಕರ್ ಹಾಡಿದರು. ಆದರೆ ಎಂಬತ್ತರ ದಶಕದ ಆರಂಭದಲ್ಲಿ ತೂಫಾನ್ ತನ್ನ ರಭಸ ಆರಂಭಿಸಿತ್ತು.
‘ ಕಾಲೇಜು ದಿನಗಳಲ್ಲಿ ನೀವೇನಾದರೂ ಡ್ಯಾನ್ಸರ್ ಆಗಿದ್ದಿರಾ..? ನಿಮ್ಮ ಹಾಡುಗಳು ನಿಜಕ್ಕೂ ಡಾನ್ಸ್ ಮಾಡಲು ಪ್ರೇರೇಪಿಸುತ್ತವೆ. ಇದು ಹೇಗೆ ಸಾಧ್ಯವಾಯಿತು?’ ಎನ್ನುವ ಪ್ರಶ್ನೆಗೆ ಬಪ್ಪಿ ದಾ ಉತ್ತರ- ‘ ಇಲ್ಲ ನಾನು ತಬಲ ವಾದಕನಾಗಿದ್ದೆ. ಆದರೆ 1979ರಲ್ಲಿ ಅಮೇರಿಕದಲ್ಲಿ ನಾನು ಕೆಲವು ಪ್ರದರ್ಶನಗಳನ್ನು ನೀಡಲು ಹೋಗಿದ್ದೆ. ನನಗೆ ಆ ಹೊತ್ತು ‘ ಡಿಸ್ಕೊಥೆಕ್’ ಅಂದರೆ ಏನು ಅಂತ ತಿಳಿದಿರಲಿಲ್ಲ. ನಂತರ ನನಗೆ ಅದನ್ನು ಪರಿಚಯಿಸಿದರು. ನಾನು ಭಾರತಕ್ಕೆ ವಾಪಸಾದಾಗ ‘ ಸುರಕ್ಷಾ’ ಎನ್ನುವ ಸಿನಿಮಾಗೆ ಸಂಗೀತ ಸಂಯೋಜಿಸಲು ಒಪ್ಪಿಕೊಂಡೆ. ಅಮೆರಿಕದಲ್ಲಿದ್ದಾಗ ‘ಡಿಸ್ಕೊಥೆಕ್’ ಬಗ್ಗೆ ಅಲ್ಲಿನ ಜನರ ಜೊತೆ ಮಾತು ಸಾಗಿಸಿದ್ದೆನಲ್ಲ..ಅದು ನನ್ನ ಕಿವಿಯಲ್ಲಿನ್ನೂ ರಿಂಗಣಿಸುತ್ತಲೇ ಇತ್ತು. ಅಲ್ಲಿಂದ ಡಿಸ್ಕೊ ಸಂಗೀತ ಆರಂಭವಾಯಿತು’
ಹೀಗೆ ಆರಂಭವಾದ ಬಪ್ಪಿ ದಾ ಅವರ ಡಿಸ್ಕೊ ಸಂಗೀತದ ಮೂಲ ಸೆಳವು ಇದ್ದದ್ದು ಎಲ್ವಿಸ್ ಪ್ರಿಸ್ಲೆ ಅವರ ಗಾಯನ ಹಾಗು ನೃತ್ಯದಲ್ಲಿ. ಎಲ್ಲಕ್ಕೂ ಮಿಗಿಲಾಗಿ ಪ್ರಿಸ್ಲೆ ಅವರಿಗೆ ಚಿನ್ನಾಭರಣಗಳ ಬಗೆಗೆ ಭಾರೀ ಕ್ರೇಜ್ ಇತ್ತಂತೆ. ಪ್ರಿಸ್ಲೆ ಅವರ ಡಿಸ್ಕೊ ಬೀಟ್ ಗಳು ಹಾಗೂ ಅವರಿಗಿದ್ದ ಚಿನ್ನಾಭರಣಗಳ ಮೇಲಿನ ಪ್ರೀತಿ ಬಪ್ಪಿ ದಾ ಅವರಲ್ಲೂ ಬೆಳೆಯಿತು. ಮುಂದೊಂದು ದಿನ ತಾನೂ ಆ ಮಟ್ಟಕ್ಕೆ ಬೆಳೆದದ್ದಾದರೆ ಅವರಂತೆಯೇ ಚಿನ್ನದ ಒಡವೆಗಳನ್ನ ಧರಿಸುತ್ತೇನೆ ಅಂದುಕೊಂಡಿದ್ದರಂತೆ. ಕಡೆಗೆ ಅದು ಹಾಗೆಯೇ ಆಯಿತು. ಎಷ್ಟರ ಮಟ್ಟಿಗೆ ಅಂದರೆ ಒಮ್ಮೆ ಬಪ್ಪಿ ದಾ ಅವರು ಚಳಿಗೆ ಕೋಟ್ ಪೂರಾ ಕವರ್ ಮಾಡಿಕೊಂಡಾಗ ಒಬ್ಬ ಬಪ್ಪಿ ದಾ ಅವರನ್ನ ಗುರುತೇ ಹಿಡಿಯಲಿಲ್ಲವಂತೆ. ಬಪ್ಪಿ ದಾ ಅಂದರೆ ಕೊರಳು ಮತ್ತು ಕೈಬೆರಳುಗಳ ತುಂಬ ಚಿನ್ನದ ಆಭರಣ ತುಂಬಿರಬೇಕು, ಹಾಗೂ ತಡರಾತ್ರಿ ಆರಂಭವಾಗುವ ಪಾರ್ಟಿಗಳಿಗೂ ದಾ ಕೂಲಿಂಗ್ ಗ್ಲಾಸ್ ಹಾಕಿಕೊಂಡೇ ಹೋಗುತ್ತಿದ್ದರಂತೆ. ಇದೆಲ್ಲ ಸಾಧ್ಯವಾದದ್ದು ಅವರೊಳಗಿದ್ದ ಡಿಸ್ಕೊ ಎಂಬ ತೂಫಾನ್ ನಿಂದ.
ಹೀಗೇ ಕಾಲ ಸರಿಯುತ್ತ ರೀಮಿಕ್ಸ್ ಕಾಲವೂ ಆರಂಭವಾಯಿತು. ‘ ರೀಮಿಕ್ಸ್ ಬಗ್ಗೆ ನಿಮ್ಮ ನಿಲುವು ಏನು? ಅವು ಹೊಸ ಬಾಟಲಿನಲ್ಲಿ ಹಳೆ ವೈನ್ ತುಂಬಿಸಿದ ಹಾಗೆ ಒಂದು ರೀತಿ ಖಿಚಡಿ ರೀತಿ ಅನಿಸೋದೊಲ್ಲವೆ?’ ಎಂದು ಪ್ರಶ್ನಿಸಿದಾಗ ಅವರು – ‘ ರೀಮಿಕ್ಸ್ ಜನಕ್ಕೆ ಇಷ್ಟವಾಗುತ್ತದೆ. ಅವು ಒಂದು ರೀತಿ ಸ್ಟೈಲ್ ಸ್ಟೇಟ್ಮೆಂಟ್ ಆಗಿವೆ. ನಾನು ಅದನ್ನ ಖಿಚಡಿ ಅಂತ ಕರೆಯೋದಿಲ್ಲ. ರೀಮಿಕ್ಸ್ ಗಳು ಇಂದಿನ ಟ್ಯೂನ್ ಗಳಿಗೆ ಹೋಲಿಸಿದರೆ ಹಳೆಯ ಸಂಗೀತ ಹೆಚ್ಚಿಗೆ ಚೆನ್ನಾಗಿದೆ ಹಾಗೂ ಅದಕ್ಕಿರುವ ರೀಕಾಲ್ ವ್ಯಾಲ್ಯೂನ ತಿಳಿಸುತ್ತದೆ’ ಎಂದಿದ್ದರು.
ಇಂಥ ಚಿಂತನೆಗಳನ್ನು ಒಳಗೊಂಡಿದ್ದ ಬಪ್ಪಿ ದಾ ಅವರನ್ನು ಕೋವಿಡ್ ಅವರಿಸಿಕೊಂಡಿತು. ಅಲ್ಲಿಂದಾಚೆಗೆ ಚಿನ್ನಕ್ಕೆ ಮುಸುಕು ಹೊದಿಸಿದಂತೆ ಆಯಿತು. ಕಾಂತಿ ಮಂಕಾಯಿತು. ಚಿನ್ನವನ್ನು ಶೋ ಆಫ್ ಗೆ ಹಾಕಿಕೊಳ್ಳುತ್ತಾರೆ ಎಂದು ಯಾರು ಏನು ಅಂದುಕೊಂಡರೂ ಬಪ್ಪಿ ದಾ ಅವರಿಗೆ ಚಿನ್ನ ಎನ್ನುವುದು ಲಕ್ ಫ್ಯಾಕ್ಟರ್ ಆಗಿತ್ತು. ಹಿಂದಿಯ ‘ ಡರ್ಟಿ ಪಿಚ್ಚರ್’ ಚಿತ್ರದಲ್ಲಿ ಅವರ ‘ ಉಲಾಲಾಲ ಉಲಾಲ..’ ಹಾಡು ಮತ್ತೆ ಮ್ಯಾಜಿಕ್ ಆರಂಭಿಸಿತ್ತು. ನಟ ಶಾರುಖ್ ಖಾನ್ ಬಂದು ತಮ್ಮ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರೊಮೋಷನ್ ಗಾಗಿ ಹಾಡು ಕೇಳಿದಾಗ ಬಪ್ಪಿ ದಾ ಸಂಯೋಜಿಸಿಕೊಟ್ಟಿದ್ದರು.
ಇಲ್ಲಿ ಎಲ್ಲಕ್ಕೂ ಆರಂಭ ಇರುವಂತೆ ಅಂತ್ಯವೂ ಇರುತ್ತದೆ. ಚಂಡಮಾರುತದ ರಭಸ ಇನ್ನು ಮುಂದೆ ಇರಲಾರದು. ಆದರೆ ಅದು ಉಂಟು ಮಾಡಿದ ಮಧುರ ಕಲ್ಲೋಲ ಮತ್ತು ರಭಸದ ಅನುಭವ ನೆನಪಿನಲ್ಲಿ ಉಳಿಯುತ್ತದೆ. ಬಪ್ಪಿ ದಾ ನಿರ್ಗಮನದ ಈ ಹೊತ್ತು ಅಂಥದ್ದೊಂದು ಭಾವನೆ ಆವರಿಸಿಕೊಳ್ಳುತ್ತಿದೆ.
- ಎನ್.ಸಿ ಮಹೇಶ್


![Blogging the Reel World – GRAN TORINO [2008]](https://chitrayana.com/wp-content/uploads/2023/02/Gran-Torino-e1676009947450.png)

![Blogging the Reel World – NO MAN’S LAND [2001]](https://chitrayana.com/wp-content/uploads/2023/01/NO-MANS-LAND-MYSTIC-RIVER-e1673936905514.png)
0 Comments