ಸಿನಿಮಾದಲ್ಲಿನ ಹೊಸತನಕ್ಕೆ ಭಾಷ್ಯ ಬರೆದ ಅಕಿರಾ ಕುರೋಸಾವ

ಸತ್ಯಜಿತ್ ರೇ ಅವರ ಚಲನಚಿತ್ರಗಳನ್ನು ನೋಡಿಲ್ಲ ಎಂದರೆ ಸೂರ್ಯ ಮತ್ತು ಚಂದ್ರನನ್ನು ನೋಡದೆ ಜಗತ್ತಿನಲ್ಲಿ ಬದುಕಿರುವುದು ಎಂದರ್ಥ – ಹೀಗೆಂದವರು ಅತ್ಯಂತ ಪ್ರಭಾವಶಾಲಿ ಹಾಗೂ ಶ್ರೇಷ್ಠ ಸಿನಿಮಾ ನಿರ್ದೇಶಕರಲ್ಲಿ ಒಬ್ಬರಾದ ಅಕಿರಾ ಕುರೋಸಾವ.

2ನೇ ಮಹಾಯುದ್ದದ ಕಾಲದಿಂದ 19ನೇ ಶತಮಾನದ ಕೊನೆಯವರೆಗೂ ವೃತ್ತಿಜೀವನ ನಡೆಸಿದ ಕುರೋಸಾವ ನಿರ್ದೇಶಕ, ನಿರ್ಮಾಪಕ, ಚಿತ್ರಕಥಾ ಲೇಖಕರಾಗಿದ್ದರು. ರಾಶೋಮನ್(1950), ಇಕಿರು(1952), ಸವೆನ್ ಸಮುರಾಯ್(1954), ಥ್ರೋನ್ ಆಫ್ ಬ್ಲಡ್(1957), ಕಾಗೆಮುಶಾ(1980), ರಾನ್( 1985) ಮುಂತಾದವು ಇವರ ಜನಪ್ರಿಯ ಚಿತ್ರಗಳು. ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಮೊದಲ ಜಪಾನೀಸ್ ನಿರ್ದೇಶಕ ಎಂಬ ಗರಿಮೆಗೆ ಪಾತ್ರರಾಗಿದ್ದರು.

ಕುರೋಸಾವ ಬಾಲ್ಯದಲ್ಲೇ ಕಲೆಯತ್ತ ಆಕರ್ಷಿತರಾಗಿದ್ದರು. 2ನೇ ತರಗತಿಯಲ್ಲಿ ಶಾಲೆಯನ್ನು ತೊರೆದು, ಕಲಾ ಶಾಲೆಗೆ ಸೇರಿ ವೆಸ್ಟರ್ನ್ ಸ್ಟೈಲ್ ಪೇಂಟಿಂಗ್ ನಲ್ಲಿ ತೊಡಗಿಕೊಂಡರು. ಮಾತ್ರವಲ್ಲದೆ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಆದರೆ ಪ್ರಸಿದ್ಧ ಪೇಂಟರ್ ಆಗಬೇಕೆಂಬ ತನ್ನ ಕನಸನ್ನು ಬದಿಗೊತ್ತಿ 1936ರಲ್ಲಿ ಸಹಾಯಕ ನಿರ್ದೇಶಕರಾಗಿ ಪಿಸಿಎಲ್ ಸಿನಿಮಾ ಸ್ಟುಡಿಯೋದಲ್ಲಿ ಕಾರ್ಯನಿರ್ವಹಿಸಲಾರಂಭಿಸಿದರು. ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಜಪಾನಿನ ಪ್ರಮುಖ ನಿರ್ದೇಶಕರಾಗಿ ಗುರುತಿಸಕೊಂಡಿದ್ದ ಯಮಮಟೋ ಕಜಿರೋ ಅವರ ಸಹಾಯಕರಾಗಿದ್ದರು. ಈ ಸಮಯದಲ್ಲಿ ಕುರೋಸಾವ ಅಪ್ರತಿಮ ಚಿತ್ರಕಥೆಗಾರರಾಗಿ ಗುರುತಿಸಿಕೊಂಡರೂ, ಅವರ ಕಥೆಗಳು ಸಿನಿಮಾವಾಗಿ ಪರಿವರ್ತಿತವಾಗಲಿಲ್ಲ. ಬದಲಾಗಿ ಕೆಲವೊಂದು ನಿಯಕಾಲಿಕೆಯಲ್ಲಿ ಪ್ರಕಟವಾಗಿದ್ದವು. ಕಥೆಯಲ್ಲಿನ ಹೊಸತನ ಮತ್ತು ಪ್ರಸ್ತುತ ಪಡಿಸುವ ರೀತಿಯಿಂದ ಅನೇಕ ಪ್ರಶಸ್ತಿಗಳು ಅರಸಿ ಬಂದಿದ್ದವು.

1943ರಲ್ಲಿ ನಿರ್ದೇಶಕರಾಗಿ ಭಡ್ತಿ ಪಡೆದ ಕುರೋಸಾವ ತನ್ನ ಸ್ವಂತ ಕಥೆಯನ್ನು ಆಧರಿಸಿ ‘ಸನ್ ಶಿರೋ ಸುಗತಾ’ ಎಂಬ ಚಿತ್ರ ನಿರ್ಮಿಸಿದರು.1944ರಲ್ಲಿ Ichiban utsukushiku (The Most Beautiful) ಎಂಬ ತನ್ನ ಎರಡನೇ ಸಿನಿಮಾವನ್ನು ನಿರ್ದೇಶಿಸಿದರು. ಇದು ಶಸ್ತ್ರಗಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹುಡುಗಿಯರ ಕಥೆಯಾಗಿತ್ತು. ನಂತರದ Waga seishun ni kuinashi (1946) ಜಪಾನಿನಿ ಮಿಲಿಟರಿ ವ್ಯವಸ್ಥೆಯನ್ನು ಟೀಕಿಸಿದರೆ, Yoidore tenshi (1948; Drunken Angel) ಚಲನಚಿತ್ರ ಅಕಿರಾಗೆ ಉತ್ತಮ ಹೆಸರನ್ನು ತಂದುಕೊಟ್ಟವು. ಇದರಿಂದಲೇ ಮಿಪ್ಯೂನೆ ತೊಷಿರೋ ಸ್ಟಾರ್ ನಟರಾಗಿ ಗುರುತಿಸಿಕೊಂಡರು.

ಕುರೋಸಾವ ತನ್ನ ಸಿನಿಮಾದಲ್ಲಿ ಮುಖ್ಯಪಾತ್ರ ನಿರ್ವಹಿಸುತ್ತಿದ್ದ ‘ಯಾಗುಚಿ ಯೋಕೋ’ ಎಂಬಾಕೆಯನ್ನು ವಿವಾಹವಾಗುತ್ತಾರೆ. ಇವರಿಗೆ ಇಬ್ಬರು ಮಕ್ಕಳು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ (1945ರ ಆಗಸ್ಟ್) ಜಪಾನ್ ಶರಣಾಗುವಂತೆ ಕರೆ ಬರುತ್ತದೆ. ಈ ಸಮಯದಲ್ಲಿ ಕುರೋಸಾವ Tora no o fumu otokotachi (They Who Step on the Tiger’s Tail) ಎಂಬ ಚಿತ್ರದ ಚಿತ್ರಿಕರಣದಲ್ಲಿ ನಿರತರಾಗಿದ್ದರು. ಇದು ಕಬುಕಿ ಡ್ರಾಮಾ ಕುರಿತ ವಿಡಂಬನಾ ಸಿನಿಮಾವಾಗಿತ್ತು. ಆದರೇ ಮಿತ್ರರಾಷ್ಟ್ರಗಳು ಚಿತ್ರಪ್ರದರ್ಶನವನ್ನು ಸ್ಥಗಿತಗೊಳಿಸಿದ್ದರಿಂದ, ಈ ಅದ್ಬುತ ಹಾಸ್ಯ ಸಿನಿಮಾ 1952ರಲ್ಲಿ ತೆರೆ ಕಂಡಿತ್ತು.  

ಅಕಿರಾ ಕುರೋಸಾವ ಒಂದು ಅಥವಾ ಎರಡು ಅದ್ಭುತಗಳನ್ನು ಸೃಷ್ಟಿಸಲಿಲ್ಲ. ಬದಲಾಗಿ 8 ಅದ್ಭುತಗಳನ್ನು ಜಗತ್ತಿಗೆ ಪರಿಚಯಿಸಿದರು ಎನ್ನುತ್ತಾರೆ ಫ್ರಾನ್ಸಿಸ್ ಫೋರ್ಡ್ ಕೋಪ್ಪಾಲಸ್.

ಕುರೋಸಾವ ಸಿನಿಮಾಗಳು ಇಂದಿಗೂ ‘ಐಕಾನಿಕ್’ ಆಗಿ ಗುರುತಿಸಿಕೊಂಡಿದೆ. ಅದರಲ್ಲೊಂದು ರಾಶೋಮನ್ (1950). ಈ  ಸಿನಿಮಾದ ಚಿತ್ರಕಥೆ ಹಲವರ ಮೇಲೆ ಬಹಳ ಪ್ರಭಾವ ಬೀರಿದ್ದವು. ಮಾತ್ರವಲ್ಲದೆ ಇದು ಇಂಗ್ಲೀಷ್ ಭಾಷೆಯಲ್ಲಿ ‘ದಿ ರಾಶೋಮನ್ ಎಫೆಕ್ಟ್’ ಎಂಬ ಹೊಸದೊಂದು ಪದಗುಚ್ಛ ಸೃಷ್ಟಿಯಾಗಲು ಕಾರಣವಾಯಿತು. ರಾಶೋಮನ್ ಚಿತ್ರ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಮತ್ತು ನಂತರದಲ್ಲಿ ಮೃತಪಟ್ಟ ಆಕೆಯ ಸಮರಾಯ್ ಪತಿಯ ಸುತ್ತ ಸಾಗುತ್ತದೆ. ಇಂದು ಈ ಮಾದರಿಯ ಸಿನಿಮಾಗಳು ಸಾಮಾನ್ಯವೆಂಬಂತಾದರೂ. ಆಗಿನ ಕಾಲದಲ್ಲಿ ಕೈಗೊಂಡ ಪ್ರಯೋಗ ಎಲ್ಲರನ್ನೂ ನಿಬ್ಬೆರಗಾಗಿಸಿತ್ತು. ಸೂರ್ಯನನ್ನು ನೇರವಾಗಿ ದೃಶ್ಯೀಕರಿಸಿದ ಮೊದಲ ಸಿನಿಮಾ ಇದಾಗಿತ್ತು. ಇದು ಕುರೋಸಾವ ಅವರ ಮೊದಲ ಹಿಟ್ ಚಿತ್ರವಾಗಿದ್ದು, 1951ರಲ್ಲಿ ನಡೆದ ವೆನಿಸ್ ಫಿಲ್ಡ್ ಫೆಸ್ಟಿವಲ್ ನಲ್ಲಿ ಗೋಲ್ಡನ್ ಲಯನ್, ಗ್ರ್ಯಾಂಡ್ ಫ್ರಿಕ್ಸ್ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಜೊತೆಗೆ ಅತ್ಯುತ್ತಮ ವಿದೇಶಿ ಚಿತ್ರವೆಂದು ‘ಅಕಾಡೆಮಿ ಅವಾರ್ಡ್’ ಪಡೆದುಕೊಂಡಿತು. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಜಪಾನಿನ ಮೊದಲ ಸಿನಿಮಾವಾಗಿ ಜಗತ್ತನ್ನು ತನ್ನತ್ತ ಸೆಳೆಯಿತು.

ಫಿಸ್ಟ್ ಫುಲ್ ಆಫ್ ಡಾಲರ್ಸ್ ಸಿನಿಮಾವು ಕ್ಲಿಂಟ್ ಈಸ್ಟ್ ವುಡ್ ಅವರ ವೃತ್ತಿಜೀವನದ ಅತ್ಯುನ್ನತ ಚಿತ್ರ. ಈ ಚಿತ್ರವನ್ನು ವೀಕ್ಷಿಸಿದ ಕುರೋಸಾವ, ನಿರ್ದೇಶಕ ಸರ್ಜಿಯೋ ಲಿಯೋನ್ ಅವರಿಗೆ ಪತ್ರ ಬರೆದು “ನನಗೆ ನಿಮ್ಮ ಚಿತ್ರ ವೀಕ್ಷಿಸಲು ಅವಕಾಶ ಸಿಕ್ಕಿದೆ. ಇದೊಂದು ಉತ್ತಮ ಚಿತ್ರ. ಆದರೆ ಇದು ನನ್ನ ಚಿತ್ರ” ಎಂದು ತಿಳಿಸಿದರು. ಕಾರಣವೇನೆಂದರೆ ಅಕಿರಾ ನಿರ್ದೇಶನದ ಯೋಜಿಂಬೆ ಸಿನಿಮಾದ ಪಡಿಯಚ್ಚು ಇದಾಗಿತ್ತು.

ಸವೆನ್ ಸಮುರಾಯ್ ಕುರೋಸಾವ ನಿರ್ದೆಶಿಸಿದ ಅತ್ಯಂತ ಮನರಂಜನಾತ್ಮಕ ಮತ್ತು ವಾಣಿಜ್ಯಾತ್ಮಕವಾಗಿ ಲಾಭ ತಂದುಕೊಟ್ಟ ಚಿತ್ರ. ಇದು ಮೊದಲ ಅತ್ಯುನ್ನತ ವಿದೇಶಿ ಸಿನಿಮಾ ಎಂದು ಬಿಬಿಸಿ ಯಲ್ಲಿ ವಿಮರ್ಶೆಗೊಳಪಟ್ಟಿತ್ತು. ‘ಸೆವೆನ್ ಸಮುರಾಯ್’ ಹಿಂದಿಯ ‘ಶೋಲೆ’, ಮತ್ತು ಇಂಗ್ಲೀಷಿನ ‘ಮ್ಯಾಗ್ನಿಫಿಸಿಯೆಂಟ್ ಸೆವೆನ್’ ಚಿತ್ರಗಳಿಗೆ ಸ್ಪೂರ್ತಿಯಾಗಿದೆ. ನಂತರ ಬಂದ ‘ಇಕಿರು’ ಸಿನಿಮಾ ರಂಗದ ಇತಿಹಾಸದಲ್ಲೇ ಅತ್ಯುತ್ತಮ ಮೇಕಿಂಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, ನೈಜವಾಗಿ ಮೂಡಿಬಂದ ಈ ಚಿತ್ರದ ಪ್ರತಿಯೊಂದು ಅಂಶಗಳು ಮೆಚ್ಚುಗೆಗೆ ಪಾತ್ರವಾಗಿದ್ದವು.  

Ikimono no kiroku (1955) ಯುನೈಟೆಡ್ ಸ್ಟೇಟ್ಸ್ ಮತ್ತು ಸೋವಿಯತ್ ಯೂನಿಯನ್ ನಡೆಸಿದ ಪರಮಾಣು ಪರೀಕ್ಷೆಗಳ ಕುರಿತ ಚಿತ್ರವಾದರೂ ವಾಣಿಜ್ಯಾತ್ಮಕವಾಗಿ ಸೋಲನ್ನು ಅನುಭವಿಸಿತು. ಬಳಿಕ ಯುರೋಪಿಯನ್ ಸಾಹಿತ್ಯವನ್ನು ತನ್ನ ಸಿನಿಮಾದಲ್ಲಿ ಅಳವಡಿಸಿಕೊಂಡ ಕುರೋಸಾವ, Hakuchi (1951; The Idiot) ಮತ್ತು Kumonosu-jo (Throne of Blood)  ಚಿತ್ರವನ್ನು ನಿರ್ದೇಶಿಸಿದರು. ಇದು ಕ್ರಮವಾಗಿ Fyodor Dostoyevsky ಮತ್ತು ಷೇಕ್ಸ್ ಪೀಯರ್ ನ ಮ್ಯಾಕ್ ಬೆತ್ ಕೃತಿಯನ್ನು ಆಧರಿಸಿತ್ತು.

1960ರಲ್ಲಿ ಕುರೋಸಾವ ಪ್ರೊಡಕ್ಷನ್ ಆರಂಭವಾಯಿತು. ನಿರ್ಮಾಪಕರಾದ ನಂತರ ಸತತವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರೂ, ಯೊಜಿಂಬೆ(1961), ಆಖಾಹಿಗೆ(1965) ಮುಂತಾದ ಮನರಂಜನಾತ್ಮಕ ಸಿನಿಮಾ ನಿರ್ದೇಶಿಸಿದರು. ಆದರೆ 1960ರಲ್ಲಿ ಹಲವು ಜಪಾನ್ ಚಿತ್ರಗಳು ಜನರ ಮನಗೆಲ್ಲಲು ವಿಫಲವಾದವು. ಸಿನಿಮಾ ಕಂಪೆನಿಗಳು ನಷ್ಟವನ್ನು ಅನುಭವಿಸಿದವು. ಪರಿಣಾಮವಾಗಿ ಕುರೋಸಾವ ಹಾಲಿವುಡ್ ನಿರ್ಮಾಪಕರೊಂದಿಗೆ ಕೈಜೋಡಿಸಿದರು. ಆದರೆ ಅವರ ಪ್ರತಿಯೊಂದು ಪ್ರೊಜೆಕ್ಟ್ ಗಳು ವೈಫಲ್ಯಯನ್ನು ಅನುಭವಿಸಿದವು. ಕ್ಯಾಟೋ ಸ್ಟುಡಿಯೋ 1968ರಲ್ಲಿ Tora! Tora! Tora ಎಂಬ ಸಿನಿಮಾ ನಿರ್ಮಾಣಕ್ಕಿಳಿಯಿತು. ಆದರೆ ಯೋಜಿಸಿದಂತೆ ಸಿನಿಮಾ ಸಾಗಲಿಲ್ಲ. ಕೂಡಲೇ ಕುರೋಸಾವ ಅವರನ್ನು ನಿರ್ದೇಶಕ ಸ್ಥಾನದಿಂದ ಕೆಳಕ್ಕಿಳಿಸಿ, ಮತ್ತೊಬ್ಬ ನಿರ್ದೇಶಕರನ್ನು ಕರೆತರಲಾಯಿತು. ಈ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕುರೋಸಾವ, ಕೆಲ ಕಾಲ ಜಪಾನ್ ಟಿವಿ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದರು. ನಂತರ ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆಗೂ ಯತ್ನಿಸಿದ್ದರು.

1970ರಲ್ಲಿ ‘Dodesukaden’ ಎಂಬ ಮೊದಲ ಕಲರ್ ಸಿನಿಮಾವನ್ನು ಕುರಸೋವಾ ಹೊರತಂದರು. ಇದು ಅತ್ಯುತ್ತಮ ವಿದೇಶಿ ಸಿನಿಮಾ ಎಂದು ಗುರುತಿಸಲ್ಪಟ್ಟು ಆಸ್ಕರ್ ಗೆ ನಾಮನಿರ್ದೇಶನವಾಗಿತ್ತು. Dersu Uzala (1975) ಸಿನಿಮಾದಿಂದ ಕುರೊಸಾವ ಅವರ ಎಲ್ಲಾ ನಿರಾಶೆಗಳು ಕೊನೆಗೊಂಡು, ಮೊದಲ ಜಪಾನಿಯೇತರ ಸಿನಿಮಾವಾಗಿ ‘ಆಕಾಡೆಮಿ ಅವಾರ್ಡ್’ ಗಳಿಸಿದ್ದು, ಮಾತ್ರವಲ್ಲದೆ ಸೋವಿಯನ್ ಯೂನಿಯನ್ ನಲ್ಲಿ 20 ಮಿಲಿಯನ್ ಟಿಕೆಟ್ ಗಳು ಮಾರಾಟವಾದವು.

1980ರಲ್ಲಿ ಬಿಡುಗಡೆಗೊಂಡ ‘Kagemusha’ ಎಂಬ ಸಮುರಾಯ್ ಸಿನಿಮಾದ ಯುದ್ಧದ ಸನ್ನಿವೇಶಗಳು ಕುರೊಸಾವ ಚಿಂತನೆಗೆ ಹಿಡಿದ ಕೈಗನ್ನಡಿಯಾಗಿತ್ತು. ನಂತರ ಬಂದ Ran (1985) ಅತ್ಯಂತ ಯಶಸ್ವಿ ಪ್ರದರ್ಶನವನ್ನು ಕಂಡಿತ್ತು. ಅವರ ಕೊನೆಯ 3 ಸಿನಿಮಾಗಳು Dreams (1990), Rhapsody in August (1990), and Madadayo (1993) ಉತ್ತಮ ಪ್ರದರ್ಶನವನ್ನೇನೂ ಕಾಣಲಿಲ್ಲ.

ಪ್ರಮುಖವಾಗಿ ಕುರೋಸಾವ ಜಪಾನೀಸ್ ಸಿನಿಮಾಗಳಿಗೆ ಕಲಾತ್ಮಕತೆಯ ಮತ್ತು ಸಹಜತೆಯ ಕೋನವನ್ನು ಒದಗಿಸಿದರು. ರಾಶೋಮನ್ ಸಿನಿಮಾದ ನಂತರ ಹಲವು ಜಪಾನೀಸ್ ಸಿನಿಮಾ ನಿರ್ಮಾಪಕರು ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು. ಜಪಾನಿನ ಪಶ್ಚಿಮ ಭಾಗದಲ್ಲಿದ್ದವರಿಗೆ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಮೂಡುವಂತೆ ಮಾಡಿರುವುದು ಕುರೋಸಾವ ಹೆಗ್ಗಳಿಕೆ. ಜಪಾನಿನ ವಿನೂತನ ಕಲೆ ಮತ್ತು ಭಾವನೆಗಳನ್ನು ಒಗ್ಗೂಡಿಸಿ, ದೃಶ್ಯಗಳನ್ನು ಪ್ರಸ್ತುತ ಪಡಿಸುತ್ತಿದ್ದರಿಂದಲೇ ನಿರ್ದೇಶನದಲ್ಲಿ ಮೈಲಿಗಲ್ಲನ್ನು ಸಾಧಿಸಿದ್ದರು.

ಜಗತ್ತಿನ ಅತ್ಯುತ್ತಮ ನಿರ್ದೇಶಕರಲ್ಲಿ 6ನೇ ಸ್ಥಾನ ಪಡೆದಿರುವುದು ಅಕಿರಾ ಕುರೋಸಾವ ಅವರ ಸಾಧನೆ. ಸತ್ಯಜಿತ್ ರೇ ಅವರ ಕಟ್ಟಾ ಅಭಿಮಾನಿಯಾಗಿ. ಚಿತ್ರರಂಗದಲ್ಲಿನ ಸಾಧನೆಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಗೋಲ್ಡನ್ ಲಯನ್, ಅಕಾಡೆಮಿ ಅವಾರ್ಡ್, ಅಮೆರಿಕಾ ಲೈಫ್ ಟೈಮ್ ಅಚೀವ್ ಮೆಂಟ್ ಅವಾರ್ಡ್, Praemium Imperiale prize, ಪ್ರತಿಷ್ಠಿತ ಆಸ್ಕರ್ ಪಡೆದಿದ್ದಾರೆ. ಹುಚ್ಚು ಜಗತ್ತಿನಲ್ಲಿ ಹುಚ್ಚರು ಮಾತ್ರ ವಿವೇಕವಂತರು ಎನ್ನುವ ಇವರು 1998ರಲ್ಲಿ ಧೀರ್ಘಕಾಲದ ಅನಾರೋಗ್ಯದಿಂದ ನಿಧನರಾದರು.

0 Comments

Submit a Comment

Your email address will not be published. Required fields are marked *

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more