
ಚಿತ್ರಕಥೆ ಬರೆಯುವವರಿಗೆ ಮೊಂಟಾಜ್ ಎನ್ನುವುದು ಒಂದು ಪ್ರಿಯವಾದ ಸಾಧನ. ಮೊಂಟಾಜ್ ಎಂದರೆ ಒಂದಷ್ಟು ಶಾಟ್ಸ್ ಗಳ ಮೂಲಕ ಒಂದು ಭಾವನೆಯ ಅನುಭವವನ್ನು, ಒಂದು ಘಟನೆಯನ್ನು ಸಮಯ-ಸಾಂದ್ರೀಕರಿಸಿ ಕೊಡುವುದು ಎಂದು ಅರ್ಥ. ಉದಾಹರಣೆಗೆ ಒಬ್ಬ ಸಾಮಾನ್ಯ ಮನುಷ್ಯ ವಿಶ್ವ ದರ್ಜೆಯ ಓಟಗಾರನಾಗಬೇಕಾದರೆ (ಭಾಗ್ ಮಿಲ್ಕಾ ಭಾಗ್ ಚಿತ್ರದ ಉದಾಹರಣೆ) ಅವನು ನಿರಂತರವಾಗಿ ಅಭ್ಯಾಸ ಮಾಡುತ್ತಿರುವುದು; ಪದೇ ಪದೇ ಸೋಲುತ್ತಾ, ನಿಧಾನಕ್ಕೆ ಗೆಲುವಿನ ಕಡೆಗೆ ಹೋಗುತ್ತಿರುವುದು ಒಂದು ಹಾಡಿನ ಮೂಲಕ ನಾವು ಕಾಣಬಹುದು. ಆದರೆ ಇದು ಬರವಣಿಗೆಯಲ್ಲಿ ಬಹಳ ಅಪಾಯಕಾರಿ ಸಾಧನವೂ ಆಗಬಹುದು. ಉದಾಹರಣೆಗೆ ಒಬ್ಬನಿಗೆ ದುಃಖವಾಗಿದೆ ಎನ್ನುವುದನ್ನು ತೋರಿಸಲು ಮೊಂಟಾಜ್ ಬರೆಯುತ್ತಿದ್ದರೆ, ಆಗ ಮತ್ತೆ ಮತ್ತೆ ಆತ ವಿಭಿನ್ನ ಸ್ಥಳಗಳಲ್ಲಿ ಜೋಲು ಮುಖ ಹಾಕಿ ಕುಳಿತಿರುವುದನ್ನು ತೋರಿಸುವುದರಿಂದ ಹಿನ್ನೆಲೆಯಲ್ಲಿ ಎಷ್ಟೇ ಭಾವನಾತ್ಮಕ ಸಂಗೀತ ಹಾಕಿದರೂ, ಪರಿಣಾಮದಲ್ಲಿ ಅನುಭವ ಹೆಚ್ಚಾಗುವುದಿಲ್ಲ. ಕಾರಣ, ದೃಶ್ಯದೊಳಗೆ ಪಾತ್ರದ ಭಾವನೆಯಲ್ಲಿ ಚಲನೆ ಕಾಣಿಸದೇ ಇರುವುದು. ಹೀಗಾಗಿ, ಒಂದು ಮೊಂಟಾಜ್ ಬರೆಯುತ್ತಿರುವಾಗ, ಭಾವನೆಯ ಮೇಲ್ಮುಖ ಅಥವಾ ಕೆಳಮುಖ ಚಲನೆಯ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಉದಾಹರಣೆಗೆ ಒಂದು ಪಾತ್ರ ಸಮಯ ಕಳೆದಂತೆ ನಿರಾಶೆಯ ಮಡುವಲ್ಲಿ ಮುಳುಗುತ್ತಿರುವುದೋ (ಕೆಳಮುಖ ಚಲನೆ), ಅಥವಾ ಕೆಟ್ಟಿದ್ದ ಆರೋಗ್ಯ ಸುಧಾರಿಸುತ್ತಿರುವುದೋ (ಮೇಲ್ಮುಖ ಚಲನೆ) ಹೀಗೆ. ಇದರ ಜೊತೆಯಲ್ಲಿ ಕೇವಲ ಪರಿಸರವನ್ನು ತೋರಿಸುವಂಥಾ ಮೊಂಟಾಜ್ ಬಗ್ಗೆ ಮಾತನಾಡಬಹುದು. ಉದಾಹರಣೆಗೆ, ಒಂದು ಪಾತ್ರ ಎಂಥಾ ಪರಿಸರದಲ್ಲಿ ವಾಸವಾಗಿದೆ ಎಂದು ತೋರಿಸಲು ಒಂದಷ್ಟು ಶಾಟ್ಸ್ ಗಳನ್ನು ಜೊತೆಯಾಗಿ ಹಾಕುವುದರ ಮೂಲಕ ಪರಿಸರವನ್ನು ತೋರಿಸಬಹುದು. ಇಲ್ಲಿಯೂ ಶಾಟ್ಸ್ ಗಳ ಮಧ್ಯದಲ್ಲಿ ಒಂದು ಕಥನ ಬೇಕಾಗುತ್ತದೆ, ಭಾವನೆಯ ಚಲನೆ ಬೇಕಾಗುತ್ತದೆ. ಉದಾಹರಣೆಗೆ ಮೋಡ ಕವಿಯುವುದು, ಮಳೆ ಬರುವುದು, ಮಳೆ ನಿಂತು ಹನಿಗಳು ತೊಟ್ಟಿಕ್ಕುತ್ತಿರುವುದು ಅಥವಾ ಮಾರುಕಟ್ಟೆಯಲ್ಲಿ ಒಬ್ಬಾತ ನಡೆಯುವಾಗ ಹಿನ್ನೆಲೆಯ ಯಾವುದೋ ಧ್ವನಿಯ ಮೂಲಕ ಮುಮ್ಮುಖವಾಗಿ ಸಮಯದ ಸರಿಯುವಿಕೆಯ ಸೂಚನೆ ಇತ್ಯಾದಿ. ಹೀಗೆ ಮೊಂಟಾಜ್ ಎನ್ನುವ ಅದ್ಭುತವನ್ನು ಬಹಳ ಶಕ್ತಿಯುತವಾಗಿ ಬಳಸಬಹುದು. ಆದರೆ ಇದು ಹರಿತ ಚೂರಿಯಂತೆ ಎನ್ನುವ ಎಚ್ಚರದಲ್ಲೇ ಬಳಸಬೇಕು. ಇದನ್ನು ಸರಿಯಾಗಿ ನಿರ್ವಹಿಸಿದಾಗ, ಅದು ಅನುಭವವನ್ನು ಕಟ್ಟಿಕೊಡಬಹುದು ಅಥವಾ ಸರಿಯಾಗಿ ನಿರ್ವಹಿಸದಿದ್ದರೆ ಪ್ರೇಕ್ಷಕರನ್ನು ನಿಮ್ಮ ಚಿತ್ರದಿಂದ ಹೊರಗೆ ನೂಕಬಹುದು. ಬನ್ನಿ ಬರೆಯೋಣ, ಪ್ರಯೋಗಿಸೋಣ, ಚಿತ್ರೀಸೋಣ!
ಅಭಯ ಸಿಂಹ


![Blogging the Reel World – GRAN TORINO [2008]](https://chitrayana.com/wp-content/uploads/2023/02/Gran-Torino-e1676009947450.png)

![Blogging the Reel World – NO MAN’S LAND [2001]](https://chitrayana.com/wp-content/uploads/2023/01/NO-MANS-LAND-MYSTIC-RIVER-e1673936905514.png)
0 Comments