
ಅಮೇರಿಕಾದಲ್ಲಿ ನಡೆಯುತ್ತಿರುವ ವರ್ಣ ತಾರತಮ್ಯ ವಿರೋಧಿ ಚಳುವಳಿಯನ್ನು ಗಮನದಲ್ಲಿರಿಸಿಕೊಂಡು, ಹಲವು ಚಲನಚಿತ್ರಗಳನ್ನು ಸ್ಟ್ರೀಮಿಂಗ್ ಸರ್ವೀಸ್ ಗಳಿಂದ ತೆಗೆದಿದ್ದಾರೆ. ಈ ಚಿತ್ರಗಳಲ್ಲಿ, ವರ್ಣೀಯರನ್ನು ತೋರಿಸಿರುವ ರೀತಿ ಇಂದಿನ ಕಾಲಕ್ಕೆ ಅನುಗುಣವಾಗಿಲ್ಲ ಎಂದು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆದರೆ, ಆಯಾ ಸಿನೆಮಾವನ್ನು ಆ ಕಾಲದ ಮಸೂರದಲ್ಲೇ ನೋಡಬೇಕೇ ಹೊರತು, ಇಂದಿನ ಕನ್ನಡಕದಲ್ಲಿ ಅಂದಿನ ಕೃತಿಯನ್ನು ನೋಡುವುದೇ ತಪ್ಪು ಎಂದು ನನಗೆ ಅನಿಸುತ್ತದೆ. ಇಂದಿನ ಭಾವಕ್ಕೆ ಅಂದಿನ ನಡೆ ತಪ್ಪು ಎನಿಸಬಹುದು. ಆದರೆ ಅಂದು ಅದೇ ಅವರ ಸತ್ಯವಾಗಿತ್ತು. ಕೃತಿಯೊಂದನ್ನು ಅದರ ಕಾಲದ ಶಿಶುವಾಗಿಯಷ್ಟೇ ನೋಡಲು ನಾವೆಲ್ಲರೂ ಕಲಿಯಬೇಕು. ಇಂದು ಅದನ್ನು ನಿಷೇಧಿಸಿ, ಇತಿಹಾಸದಿಂದ ಅಳಿಸಿ ಹಾಕುವುದು ಸರಿಯಾದ ದಾರಿ ಆಗಲಾರದು. ಜಾಗತಿಕ ಮಹಾ ಯುದ್ಧದ ಇತಿಹಾಸದಿಂದ ನಾವು ಪಾಠ ಕಲಿಯಬೇಕೇ ಹೊರತು, ಆ ಯುದ್ಧವೇ ಆಗಿಲ್ಲ, ಮನುಷ್ಯರೆಲ್ಲರೂ ಸದಾ ಕಾಲ ಚೆನ್ನಾಗಿ ಬಾಳಿ ಬದುಕಿದ್ದಾರೆ ಎನ್ನುವುದು ಸುಂದರ ಸುಳ್ಳಷ್ಟೆ ಆಗಿರುತ್ತದೆ. ಸಿನೆಮಾ ನಿರ್ಮಾಣವೂ ಇತಿಹಾಸವನ್ನು ದಾಖಲಿಸುವ ಒಂದು ಪ್ರಕ್ರಿಯೆ. ಅದು ಆಯಾ ಕಾಲದ ಮಾನಸಿಕತೆಯನ್ನು, ಜಾಗತಿಕ ರಾಜಕೀಯ, ಸಾಮಾಜಿಕ ಆಗುಹೋಗುಗಳನ್ನು ಪ್ರದರ್ಶಿಸುತ್ತಿರುತ್ತದೆ. ಹೀಗಾಗಿ ಸಿನೆಮಾಗಳನ್ನು ಕೇವಲ ಕಥೆಯಾಗಿ ನೋಡದೆ, ಅದರ ಕಾಲದೊಳಗೆ ಹೊಕ್ಕು ನೋಡಿದಾಗ, ನಮ್ಮ ಕುರಿತಾಗಿ ನಾವೇ ಎಷ್ಟೋ ಹೊಸ ವಿಚಾರಗಳನ್ನು ಕಲಿಯಬಹುದಾಗಿರುತ್ತದೆ.
ಅಭಯ ಸಿಂಹ


![Blogging the Reel World – GRAN TORINO [2008]](https://chitrayana.com/wp-content/uploads/2023/02/Gran-Torino-e1676009947450.png)

![Blogging the Reel World – NO MAN’S LAND [2001]](https://chitrayana.com/wp-content/uploads/2023/01/NO-MANS-LAND-MYSTIC-RIVER-e1673936905514.png)
0 Comments