
ಮನುಷ್ಯನ ಇತಿಹಾಸದ ಉದ್ದಕ್ಕೂ ಅವನಿಗೆ, ಸಮಯದ ಕುರಿತಾಗಿ ಕುತೂಹಲ ಇತ್ತು. ಅದನ್ನು ಅರ್ಥ ಮಾಡಿಕೊಳ್ಳುವ ಹಂಬಲವಿತ್ತು. ಭೌತಿಕವಾಗಿ ಸಮಯದ ಪರಿಣಾಮ ಏನು? ಮಾನಸಿಕವಾಗಿ ಸಮಯದ ಪರಿಣಾಮ ಏನು? ಇದು ಅವನ ಬಹಳ ಪ್ರಮುಖ ಜಿಜ್ಞಾಸೆಗಳಲ್ಲಿ ಒಂದಾಗಿತ್ತು. ಭೂತ ಕಾಲದ ನೆನಪುಗಳು, ಭವಿಷ್ಯದ ನಿರೀಕ್ಷೆ, ಆತಂಕಗಳು, ಅವನ ವರ್ತಮಾನವನ್ನು ಸದಾ ತಲ್ಲಣದಲ್ಲಿರುವಂತೆ ಮಾಡಿದ್ದಾವೆ. ಕಾಲದಲ್ಲಿ ಹಿಂದಕ್ಕೆ ಹೋಗಿ ತಪ್ಪುಗಳನ್ನು ತಿದ್ದುವುದೋ, ಆಪ್ತರೊಂದಿಗೆ ಮತ್ತೆ ಬದುಕುವುದೋ ಸಾಧ್ಯವಿದ್ದಿದ್ದರೆ? ಭವಿಷ್ಯಕ್ಕೆ ಹೋಗಿ, ನಮ್ಮ ನಿರ್ಧಾರಗಳ ಪರಿಣಾಮವನ್ನು ತಿಳಿದುಕೊಳ್ಳಬಹುದಾಗಿದ್ದರೆ ಎನ್ನುವ ಕುತೂಹಲ, ಆತಂಕವೂ ನಮಗೆಲ್ಲರಿಗೂ ಇದ್ದೇ ಇದೆ. ನಿಜ ಜೀವನದಲ್ಲಿ ಸಾಧ್ಯವಿಲ್ಲದ ಈ ವಿಚಾರಗಳನ್ನು ಸಿನೆಮಾದಲ್ಲಿ ಬಹಳ ಬಾರಿ ಚರ್ಚಿಸಲಾಗಿದೆ, ಪ್ರಯೋಗಿಸಲಾಗಿದೆ. ನಿರೂಪಣೆಯ ದೃಷ್ಟಿಯಿಂದ ಫ್ಲಾಷ್ ಬ್ಯಾಕ್ (ಉದಾಹರಣೆ: Forest Gump – 1994) ಅಥವಾ ಫ್ಲಾಷ್ ಫಾರ್ವರ್ಡ್ (ಉದಾಹರಣೆ: Sherlock Holmes – 2009) ತಂತ್ರವನ್ನು ಬಳಸಿ ಸಮಯದಲ್ಲಿ ಹಿಂದಕ್ಕೋ ಅಥವಾ ಮುಂದಕ್ಕೋ ಹೋಗುವುದು ಒಂದು ವಿಧಾನ. ಹಾಗೆಯೇ, ಸಮಯವನ್ನು ಹಿಗ್ಗಿಸಿ ನೋಡುವುದು ಇನ್ನೊಂದು ವಿಧಾನ. (ಉದಾಹರಣೆ: An Occurrence at Owl Creek Bridge – 1962) ಇಲ್ಲಿ ಸಮಯದ ಚಲನೆಯನ್ನು ನಿಧಾನಗೊಳಿಸಿ, ಅದರ ನಡುವೆ ಅನೇಕ ಮಾಹಿತಿಯನ್ನು ತುಂಬಿಸಲಾಗುತ್ತದೆ. ಇನ್ನು ಒಂದೇ ಸಮಯವನ್ನು ಮತ್ತೆ ಮತ್ತೆ ಜೀವಿಸುವಂಥಾ ಸಿನೆಮಾಗಳನ್ನೂ ನಾವು ನೋಡಿದ್ದೇವೆ. (ಉದಾಹರಣೆ: Run Lola Run – 1998) ಇನ್ನು ಸಮಯವನ್ನು ಒಂದು ಲೂಪ್ ಆಗಿ ತೋರಿಸುವಂಥಾ ಸಿನೆಮಾಗಳೂ ಇವೆ. ಇಲ್ಲಿ ಸಮಯ ಒಂದು ಆವೃತ್ತದಲ್ಲಿ ಇರುತ್ತದೆ. ಪ್ರೇಕ್ಷಕನಿಗೆ ಕೆಲವು ಘಟನೆಗಳ ಪುನರಾವರ್ತನೆ, ಅಥವಾ ಪರಿಚಿತ ಕ್ಯಾಮರಾ ಚಲನೆಯಿಂದ ಇದರ ಅರಿವು ಸಿಗುತ್ತದೆ. (ಉದಾಹರಣೆ: Dunkirk – 2017), ಇನ್ನು ಸಮಯದ ನಿರಂತರತೆಯನ್ನು ತೋರಿಸಿ, ಘಟನೆಯ ಪರಿಣಾಮವನ್ನು ದಟ್ಟಗೊಳಿಸುವಂಥಾ ಸಿನೆಮಾಗಳೂ ಅನೇಕ (ಉದಾಹರಣೆ: 1917 – 2019) ಸಮಯದೊಂದಿಗೆ ಹೀಗೆ ಪ್ರಯೋಗಗಳು ಇನ್ನೂ ಅನೇಕ. ಸಿನೆಮಾದಲ್ಲಿ ಕಥೆ ಭಾವನೆಗಳನ್ನು ಹಿಡಿದಿಡಲು ಸಹಕಾರಿಯಾಗಿರುತ್ತದೆ. ಹಾಗೆಯೇ, ಸಮಯದೊಂದಿಗಿನ ಆಟ ಪ್ರೇಕ್ಷಕರ ಗಮನವನ್ನು, ಆಸಕ್ತಿಯನ್ನು ಸುಪ್ತವಾಗಿ, ಒಂದು ಸ್ಥರ ಆಳದಿಂದ ಹಿಡಿದಿಟ್ಟುಕೊಳ್ಳುತ್ತದೆ, ಆಕರ್ಷಿಸುತ್ತದೆ. ಏಕೆಂದರೆ, ಸಮಯ ಎನ್ನುವ ಅಮೂರ್ತತೆ, ಮನುಷ್ಯನ ಮನಸ್ಸನ್ನು ಸದಾ ಆಕರ್ಷಿಸಿದೆ.
ಅಭಯ ಸಿಂಹ
0 Comments