
ಸಿನೆಮಾ ಎನ್ನುವುದು ಕಟ್ಟು ಕಥೆ, ಸಾಕ್ಷ್ಯಚಿತ್ರ ಅನ್ನುವುದು ನಿಜ ಚಿತ್ರಣ ಎನ್ನುವ ಅಭಿಪ್ರಾಯ ಸಾಕಷ್ಟು ಜನರಲ್ಲಿದೆ. ಆದರೆ, ಕ್ಯಾಮರಾ ಮೂಲಕ ಯಾವುದನ್ನೇ ಚಿತ್ರೀಕರಿಸಿದರೂ, ಅದು ಒಂದು ಮಗ್ಗುಲಿನ ಸತ್ಯ ಮಾತ್ರ ಆಗುತ್ತದೆ. ಹೀಗಾಗಿ ಸಾಕ್ಷ್ಯಚಿತ್ರ ಅನ್ನುವುದೂ ಸಾಪೇಕ್ಷ ಸತ್ಯವಷ್ಟೇ ಆಗಿದೆ. ಹಾಗಾದರೆ, ಸಿನೆಮಾದಲ್ಲಿ ಸತ್ಯ ಎನ್ನುವುದು ಏನು.? ಅಂಥದ್ದೊಂದು ಇದೆಯೇ.? ನಾನು ಕಂಡುಕೊಂಡಂತೆ, ಸತ್ಯ ಅನ್ನುವುದು, ನಿರ್ದೇಶಕ ಅವನು ಕಟ್ಟುವ ಲೋಕದೊಳಗಿನ ಸತ್ಯ ಮಾತ್ರವಾಗಿರುತ್ತದೆ. ಇದು ಪ್ರತಿಯೊಬ್ಬ ನಿರ್ದೇಶಕನಿಗೂ, ಚಿತ್ರಕಥೆ ಲೇಖಕನಿಗೂ ಭಿನ್ನವಾದದ್ದಾಗಿರುತ್ತದೆ. ಉದಾಹರಣೆಗೆ, ನಿರ್ದೇಶಕನಾಗಿ ನೀವು ಕಟ್ಟುವ ಲೋಕದಲ್ಲಿ ಗುರುತ್ವಾಕರ್ಷಣೆ ಇಲ್ಲದಿದ್ದರೆ, ಅದು ಅಲ್ಲಿನ ಪ್ರತಿಯೊಂದು ಪಾತ್ರಕ್ಕೂ ಸತ್ಯವಾಗಿರುತ್ತದೆ. ಇದು ಭೌತಿಕ ಸತ್ಯದ ವಿಷಯವಾಯಿತು. ಹಾಗೆಯೇ, ನೀವು ಕಟ್ಟಿದ ಲೋಕದಲ್ಲಿ ಎಲ್ಲರೂ ಬೆತ್ತಲಾಗಿದ್ದರೆ, ಅಲ್ಲಿ ಬಟ್ಟೆ ಧರಿಸಿದವರೇ ಹುಚ್ಚರಾಗಿರುತ್ತಾರೆ. ಇದು ಮಾನಸಿಕ ನಿಲುವಿಗೆ ಸಂಬಂಧಿಸಿದ ವಿಷಯವಾಗುತ್ತದೆ. ಇನ್ನು ನಿಮ್ಮ ಸಿನೆಮಾದ ಪರಿಧಿಯೊಳಗೆ ಒಂದು ಕೋಮಿನವರು ಇನ್ನೊಂದು ಕೋಮಿನವರ ಮೇಲೆ ಆಕ್ರಮಣ ಮಾಡುತ್ತಾರೆ ಎಂದು ತೋರಿಸಿದರೆ, ಅದು ಸಿನೆಮಾದ ರಾಜಕೀಯ ನಿಲುವಾಗಿರುತ್ತದೆ. ನಿರ್ದೇಶಕನ ಸತ್ಯವನ್ನು ಅವನು ತನ್ನ ಸಿನೆಮಾದ ಮೂಲಕ ಕಾಣಿಸುತ್ತಿರುತ್ತಾನೆ. ಹೀಗಾಗಿ, ಒಬ್ಬ ಸಿನೆಮಾ ನಿರ್ದೇಶಕನಿಗೆ, ಸಿನೆಮಾ ಬರಹಗಾರನಿಗೆ, ಅವನ ಸತ್ಯವನ್ನು, ಲೋಕಹಿತದ ಸತ್ಯವನ್ನಾಗಿಸಿಕೊಳ್ಳುವುದು ತುಂಬಾ ಅಗತ್ಯವಿರುತ್ತದೆ. ಯಾಕೆಂದರೆ, ಕಲೆಯ ಶಕ್ತಿ ಇರುವುದೇ ಲೋಕಹಿತದಲ್ಲಿ. ಹೀಗಾಗಿ ಸಿನೆಮಾ ಕಟ್ಟುವ, ನೋಡುವ ಕೆಲಸದಲ್ಲಿರುವ ನಾವೆಲ್ಲರೂ ಇದನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಿರುತ್ತದೆ.
ಅಭಯ ಸಿಂಹ
0 Comments