
ಸಿನೆಮಾ ಧ್ವನಿ ಸಂಯೋಜನೆಯಲ್ಲಿ ಮುಖ್ಯವಾಗಿ ಎರಡು ವಿಭಾಗಗಳನ್ನು ಗಮನಿಸಬಹುದು. ಒಂದು ಸಾಧ್ಯ ಧ್ವನಿಗಳು (Digetic Sounds) ಎರಡನೆಯದು ಸಾಧಿತ ಧ್ವನಿಗಳು (Non-digetic Sounds). ಸಾಧ್ಯ ಧ್ವನಿಗಳು ಅಂದರೆ ಚಿತ್ರ ಪರದೆಯ ಮೇಲೆ ಕಾಣುವ ಎಲ್ಲಾ ಚಟುವಟಿಕೆಗಳಿಂದ ಸಹಜವಾಗಿ ಉದ್ಭವಿಸುವ ಧ್ವನಿಗಳಾಗಿರುತ್ತವೆ. ಅಂದರೆ, ಬಾಗಿಲು ತೆರೆಯುವ ಶಬ್ದ, ಪಾತ್ರದ ಹಿನ್ನೆಲೆಯಲ್ಲಿ ಕಾಣಿಸುತ್ತಿರುವ ಟಿ.ವಿಯಿಂದ ಬರುತ್ತಿರುವ ಶಬ್ದ, ಪರಿಸರದಲ್ಲಿ ಕಾಣಿಸುತ್ತಿರುವ ವಾಹನ, ಪ್ರಾಣಿಗಳು ಇತ್ಯಾದಿಗಳ ಶಬ್ದ ಈ ವರ್ಗಕ್ಕೆ ಸೇರುತ್ತದೆ. ಹಾಗೆಯೇ, ಪರದೆಯಲ್ಲಿ ಕಾಣದಿದ್ದರೂ, ಸಿನೆಮಾದಲ್ಲಿ ಕೇಳಿಸುವ ಇನ್ನೂ ಅನೇಕ ಶಬ್ದಗಳಿರುತ್ತವೆ. ಕಿಟಕಿಯಾಚೆಯಿಂದ ಕೇಳಿ ಬರುವ ರೈಲಿನ ಶಬ್ದ ಇರಬಹುದು. ಜನರ ಮಾತಿನ ಶಬ್ದ ಇರಬಹುದು ಅಥವಾ ಇನ್ನೇನಾದರೂ. ಈ ಶಬ್ದಗಳು, ತೆರೆಯ ಮೇಲೆ ದೃಶ್ಯವಾಗಿ ಕಾಣದಿದ್ದರೂ, ನಮ್ಮ ಮನಃಪಟಲದಲ್ಲಿ ಪರಿಸರದ ಕಲ್ಪನೆಯನ್ನು ಮೂಡಿಸುವಲ್ಲಿ ಬಹಳ ಸಹಕಾರಿಯಾಗಿರುತ್ತವೆ. ನಮ್ಮ ನಿತ್ಯ ಜೀವನದ ಉದಾಹರಣೆಯನ್ನೇ ತೆಗೆದುಕೊಂಡರೆ ಈ ವಿಷಯ ಇನ್ನಷ್ಟು ಸುಲಭವಾಗಿ ಅರ್ಥವಾಗಬಹುದು. ಒಂದು ಕೋಣೆಯಲ್ಲಿ ನೀವು ಕುಳಿತಿದ್ದೀರಿ ಎಂದುಕೊಳ್ಳಿ. ನಿಮ್ಮ ಸುತ್ತ ಕೋಣೆಯೊಳಗೆ ಕಾಣುವ ಯಾವುದೇ ವಿಚಾರ ಅಂದರೆ ನೀವು ಕುಳಿತಿರುವ ಕುರ್ಚಿಯ ಕಿರುಗುಟ್ಟುವಿಕೆ, ಫ್ಯಾನ್ ಸುತ್ತುವಿಕೆ, ಬಾಗಿಲು ತೆರೆಯುವ ಶಬ್ದ ನಡೆದಾಡುವಾಗ ಹೆಜ್ಜೆ ಸಪ್ಪಳ ಇತ್ಯಾದಿ ಸಾಧ್ಯ ಶಬ್ದಗಳಾಗಿವೆ. ಹಾಗೆಯೇ, ಕೋಣೆಯ ಹೊರಗಿನಿಂದ ಕೇಳಿಸಬಹುದಾದ ಮಕ್ಕಳು ಆಡುತ್ತಿರುವ ಶಬ್ದ, ವಾಹನವೊಂದು ಹಾದು ಹೋದ ಶಬ್ದ ಇತ್ಯಾದಿಗಳು ಸಾಧಿತ ಶಬ್ದಗಳಾಗಿವೆ. ಈ ಸಾಧಿತ ಶಬ್ದಗಳು ನಮಗೆ ಕೋಣೆ ಎಂಥಾ ಪ್ರದೇಶದಲ್ಲಿ ಇದೆ ಎನ್ನುವ ಕಲ್ಪನೆಯನ್ನು ಕೊಡುತ್ತದೆ. ಹೀಗೆ ಧ್ವನಿ ಸಂಯೋಜನೆಯಿಂದ ನಿಮ್ಮನ್ನು ಒಂದು ಕಲ್ಪನಾಲೋಕಕ್ಕೆ ಕರೆದುಕೊಂಡು ಹೋಗುವ ಸಾಮರ್ಥ್ಯ ಸಿನೆಮಾಕ್ಕೆ ಇದೆ. ನೋಡಿ, ಧ್ವನಿ ಎಂಥಾ ಮಹತ್ವದ ಪಾತ್ರವಹಿಸುತ್ತದೆ ಅಲ್ಲವೇ? ಜೀವನದಲ್ಲೂ, ಸಿನೆಮಾದಲ್ಲೂ!
ಅಭಯ ಸಿಂಹ


![Blogging the Reel World – GRAN TORINO [2008]](https://chitrayana.com/wp-content/uploads/2023/02/Gran-Torino-e1676009947450.png)

![Blogging the Reel World – NO MAN’S LAND [2001]](https://chitrayana.com/wp-content/uploads/2023/01/NO-MANS-LAND-MYSTIC-RIVER-e1673936905514.png)
0 Comments