
ಸೌಂದರ್ಯ ಮೀಮಾಂಸೆ ಅಥವಾ ಏಸ್ಥೆಟಿಕ್ಸ್ ಎಂದರೆ ಏನು? ಇದರ ಮೂಲ ಅರ್ಥ ಹುಡುಕುತ್ತಾ ಹೋದರೆ, ಗ್ರಹಿಕೆ, ಅನುಭೂತಿ ಹಾಗೂ ಅನುಭವ ಎಂದು ಅರ್ಥೈಸಿಕೊಳ್ಳಬಹುದಾಗಿದೆ. ಹೀಗಾಗಿ ಒಂದು ಕಲಾಪ್ರಕಾರವನ್ನು ಗ್ರಹಿಸಲು, ಅನುಭವಿಸಲು ಸೌಂದರ್ಯ ಮೀಮಾಂಸೆಯನ್ನು ಬಳಸಿಕೊಳ್ಳಲಾಗುತ್ತದೆ. ಹಾಗೆಯೇ, ಆ ಕಲೆಯನ್ನು ಕಟ್ಟಲೂ ಇದನ್ನೇ ಬಳಸಿಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ, ಕಲೆಯ ಆಸ್ವಾದನೆಯನ್ನು ಸಾಧ್ಯವಾಗಿಸುವುದೇ ಸೌಂದರ್ಯ ಮೀಮಾಂಸೆ ಅಥವಾ ಏಸ್ಥೆಟಿಕ್ಸ್. ಕಲಾವಿದರ ಹಿನ್ನೆಲೆ, ಅವರ ರಾಜಕೀಯ, ಸಾಮಾಜಿಕ ನಿಲುವುಗಳ ಮೇಲೆ ಅವರ ಅಭಿವ್ಯಕ್ತಿಯೂ ರೂಪುಗೊಳ್ಳುತ್ತಿರುತ್ತದೆ. ಆಯಾ ಕಲೆಯನ್ನು ಅರ್ಥೈಸಿಕೊಳ್ಳುವುದರಲ್ಲಿ, ಆಯಾ ಚೌಕಟ್ಟುಗಳು, ಸೈದ್ಧಾಂತಿಕ ನಿಲುವುಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚಿನ ಸಹಕಾರಿಯಾಗಿರುತ್ತದೆ. ಸಿನೆಮಾ ಚಿತ್ರಕಥೆ ಬರೆಯುವ ಸಂದರ್ಭದಲ್ಲಿ, ಮೊದಲನೇ ಆಕ್ಟ್ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಮಾತನಾಡುವಾಗ, ಅದರಲ್ಲಿ ಕಥೆಯ ಪ್ಲಾಟ್, ಪಾತ್ರಗಳು ಇತ್ಯಾದಿಗಳನ್ನು ಪರಿಚಯಿಸುವುದೇ ಅಲ್ಲದೇ, ಅದು ಸಿನೆಮಾದ ಏಸ್ಥೆಟಿಕ್ ಚೌಕಟ್ಟಿನ ಪರಿಚಯವನ್ನೂ ಮಾಡುತ್ತದೆ. ಒಂದು ರೀತಿಯಲ್ಲಿ ಪ್ಲಾಟ್ ನ್ನು ಯಾವ ದಿಕ್ಕಿನಿಂದ, ಯಾವ ನಿಲುವುಗಳೊಂದಿಗೆ ಶೋಧಿಸಲಾಗುತ್ತಿದೆ ಎನ್ನುವ ವಿವರ ಇದು. ಇದು ಸಿನೆಮಾದೊಳಗೆ ಹುಟ್ಟಿದ ಚಳುವಳಿಯಿಂದ ಹುಟ್ಟುವ ಸೌಂದರ್ಯ ಮೀಮಾಂಸೆಯಾಗಿರಬಹುದು, ಅಥವಾ ರಾಜಕೀಯ, ಸಾಮಾಜಿಕ ಚಳುವಳಿಗಳಿಂದ ಹುಟ್ಟುವ ಸೌಂದರ್ಯ ಮೀಮಾಂಸೆಯೂ ಆಗಿರಬಹುದು. ಒಂದು ಸಿನೆಮಾವನ್ನು ಆಸ್ವಾದಿಸುವ ಸಮಯದಲ್ಲಿ, ಈ ಹಿನ್ನೆಲೆಯನ್ನು ಸಿನೆಮಾ ತನ್ನ ಪ್ರೇಕ್ಷಕರಿಗೆ ತಿಳಿಸುತ್ತದೆ ಹಾಗೂ ಆ ಮೂಲಕ ದಿಕ್ಕು ತೋರಿಸುತ್ತಾ ಹೋಗುತ್ತದೆ. ಎಲ್ಲಾ ಕಲೆಗಳಂತೆ ಸಿನೆಮಾದಲ್ಲೂ ಪ್ರೇಕ್ಷಕ ತನ್ನ ನಿಲುವುಗಳ ಮೂಲಕ ಸಿನೆಮಾದ ರಾಜಕೀಯಕ್ಕೆ ಸ್ಪಂದಿಸುತ್ತಾನೆ. ಅಲ್ಲಿನ ಸೌಂದರ್ಯ ಮೀಮಾಂಸೆಯ ಮೂಲಕ ತನ್ನ ದರ್ಶನವನ್ನೂ ಕಾಣುತ್ತಾನೆ.
ಅಭಯ ಸಿಂಹ


![Blogging the Reel World – GRAN TORINO [2008]](https://chitrayana.com/wp-content/uploads/2023/02/Gran-Torino-e1676009947450.png)

![Blogging the Reel World – NO MAN’S LAND [2001]](https://chitrayana.com/wp-content/uploads/2023/01/NO-MANS-LAND-MYSTIC-RIVER-e1673936905514.png)
0 Comments