ನಾಗರಿಕ ಸಮಾಜದ ದೌರ್ಜನ್ಯಕ್ಕೆ ಪ್ರಕೃತಿಯ ಪ್ರತ್ಯುತ್ತರ: ವುಮನ್ ಇನ್ ದ ಡ್ಯೂನ್ಸ್ ವಿಶ್ಲೇಷಣೆ

‘Woman in the Dunes’ 1964ರಲ್ಲಿ ತೆರೆಗೆ ಬಂದ ಜಪಾನ್ ಚಿತ್ರ. ಕೊಬೋ ಅಬೆಯ ಕಾದಂಬರಿಯನ್ನಾಧರಿಸಿ ಹಿರೋಶಿ ತೆಶಿಗೆಹಾರಾ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಎರಡು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನವಾದ ಮೊದಲ ಜಪಾನೀಸ್ ಚಿತ್ರವಾಗಿ  ‘Woman in the Dunes’ ಜಗದ್ವಿಖ್ಯಾತಿ ಕೂಡ ಪಡೆದಿತ್ತು. ಸಿನಿಮಾಗಳನ್ನು ರೂಪಕವಾಗಿ ಹೇಗೆ ಕಟ್ಟಬಹುದು ಎಂಬುದಕ್ಕೆ ಈ ಚಿತ್ರ ಉತ್ತಮ ಉದಾಹರಣೆ.

ಚಲನಶೀಲತೆ ಎಂಬುದು ಎಲ್ಲಾ ಸಮುದಾಯಗಳ ಜೀವಂತಿಕೆಯ ಲಕ್ಷಣ. ಮಾನವ ಸಮಾಜ ಅಭಿವೃದ್ಧಿಯ ಹೆಸರಿನಲ್ಲಿ ಹೆಜ್ಜೆಯಿಡುವುದು ಒಂದು ಕ್ರಮವಾದರೇ, ಪ್ರಕೃತಿಯು ಬೆಳವಣಿಗೆಯ ಹಾದಿಯಲ್ಲಿ ಸಾಗುವುದು ಇನ್ನೊಂದು ಕ್ರಮ. ಇವೆರಡರಲ್ಲಿ ಯಾವುದು ಸರಿ ಎಂಬ ಜಿಜ್ಞಾಸೆಯೂ ನಮ್ಮಲ್ಲಿ ಬಹಳ ಚಾಲ್ತಿಯಲ್ಲಿದೆ. ‘Woman in the Dunes’  ಈ ವಿಚಾರವನ್ನು ಸೂಕ್ಷ್ಮವಾಗಿ  ಅಭಿವ್ಯಕ್ತಿಸುತ್ತದೆ.

ಹಿರೋಶಿ ತೆಶಿಗೆಹಾರಾ ಈ ಸಿನಿಮಾದಲ್ಲಿ ಮೂರು ರೀತಿಯ ಚಲನೆಗಳ ಮಾದರಿಯನ್ನು ಜೋಡಿಸುತ್ತಾ ಹೋಗುತ್ತಾನೆ. ಕೀಟಶಾಸ್ತ್ರಜ್ಞನಾಗಿರುವ ಕಥಾನಾಯಕ, ಪಟ್ಟಣದಿಂದ ಕೀಟವೊಂದನ್ನು ಹುಡುಕಿಕೊಂಡು ಸಮುದ್ರ ತೀರಕ್ಕೆ ಬರುತ್ತಾನೆ. ಅಲ್ಲಿ ಸಿಗುವ ಕೀಟಗಳನ್ನು ಶೇಖರಿಸಿ ಸಂಶೋಧನೆ ನಡೆಸುವುದು ಆತನ ಉದ್ದೇಶವಾಗಿತ್ತು. ಆದರೇ ಈ ಪ್ರಕ್ರಿಯೆಯ ನಡುವೆ ಕತ್ತಲಾಗಿರುವುದು ನಾಯಕನ ಅರಿವಿಗೆ ಬಾರದೆ, ಆತ ಹಿಂದಿರುಗಿ ಪ್ರಯಾಣಿಸಬೇಕಾಗಿದ್ದ ಬಸ್ ಹೊರಟುಹೋಗಿರುತ್ತದೆ. ಕೊನೆಗೆ ವಿಧಿಯಿಲ್ಲದೇ ಅಲ್ಲೆ ಇದ್ದ ಮರಳು ದಿಬ್ಬದ ಸಮೀಪದಲ್ಲಿ ಮಲಗಿಕೊಳ್ಳಲು ಮುಂದಾಗುತ್ತಾನೆ. ಈ ಸಮಯದಲ್ಲಿ ಸ್ಥಳಕ್ಕೆ ಬಂದ ಅಲ್ಲಿನ ಮೂಲನಿವಾಸಿಗಳು ಆತನ ವಿಚಾರವನ್ನು ತಿಳಿದು, ಕರೆದುಕೊಂಡು ಹೋಗಿ ದಿಬ್ಬವೊಂದರ ಬಾವಿಯೊಳಕ್ಕೆ ಇಳಿಸುತ್ತಾರೆ. ಅಲ್ಲಿ ವಿಧವೆಯೊಬ್ಬಳು ವಾಸ ಮಾಡುತ್ತಿದ್ದ ಸುಂದರವಾದ ಮನೆಯಿತ್ತು.

ಆ ಪ್ರದೇಶದಲ್ಲಿ (ಮರುಭೂಮಿ) ತಲೆತಲಾಂತರದಿಂದ ವಾಸ ಮಾಡುತ್ತಿರುವವರ ಜನಸಂಖ್ಯಾ ಪ್ರಮಾಣ, ಕಾಲ ಸರಿಯುತ್ತಿದ್ದಂತೆ ಕ್ರಮೇಣ ಕ್ಷೀಣಿಸುತಿತ್ತು. ಹೀಗಾಗಿ ಅಲ್ಲಿನ ಮೂಲನಿವಾಸಿಗಳು ಜನಸಂಖ್ಯೆ ವೃದ್ಧಿಸಿಕೊಳ್ಳಲು ನಾನಾ ಪ್ರಯತ್ನ ನಡೆಸುತ್ತಿದ್ದರು. ಅದರ ಫಲವಾಗಿಯೇ ಕಥಾನಾಯಕನನ್ನು ಆತನಿಗೆ ಅರಿವಿಲ್ಲದಂತೆಯೇ ಸೆರೆಹಿಡಿದು ಆ ದಿಬ್ಬದೊಳಗಿನ ಬಾವಿಯೊಳಕ್ಕೆ ಕಳುಹಿಸಿದ್ದರು. ಬಳಿಕ ಬಾವಿಗೆ ಇಳಿಯಲು ಸಂಪರ್ಕ ಸೇತುವಾಗಿದ್ದ ರಾಟೆಯನ್ನು ಅಲ್ಲಿಂದ ಬಿಚ್ಚಿ ಕೊಂಡೊಯ್ದಿದ್ದರು. ಹೀಗಾಗಿ ಕಥಾನಾಯಕನಿಗೆ ವಿಧವೆಯೊಂದಿಗೆ ಬಾಳುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ತಪ್ಪಿಸಿಕೊಳ್ಳಲು ಹಲವು ಬಾರಿ ಯತ್ನಿಸಿದರೂ ಅದರಲ್ಲಿ ಆತ ಸಫಲವಾಗುವುದಿಲ್ಲ. ಕೊನೆಗೆ ಆ ವಿಧವೆ ಹೆಂಗಸು ಈತನಿಂದ ಗರ್ಭಿಣಿಯಾಗಿ, ಹೆರಿಗೆ ನೋವು ಆರಂಭವಾದ ಮೇಲೆ ಮೂಲನಿವಾಸಿಗಳು ಕಥಾನಾಯಕನಿಗೆ ಓಡಿ ಹೋಗಲು ಅವಕಾಶ ಕಲ್ಪಿಸುತ್ತಾರೆ. ಆದರೇ ಆ ವೇಳೆಗೆ ಆತ ನಿಸರ್ಗದೊಂದಿಗೆ ಸಹಜವಾಗಿ ಬದುಕುವ ಕಲೆಯನ್ನು ಕರಗತ ಮಾಡಿಕೊಂಡಿದ್ದರಿಂದ ಎಲ್ಲೂ ಹೋಗದೆ ಅಲ್ಲೆ ನೆಲೆಸಲಾರಂಭಿಸುತ್ತಾನೆ. ಬಳಿಕ ತನ್ನ ಬುದ್ದಿಮತ್ತೆಯನ್ನು ಬಳಸಿಕೊಂಡು ಮರುಭೂಮಿಯಲ್ಲಿ ನೀರನ್ನು ಹೇಗೆ ಹುಡುಕಬಹುದು ಎಂಬುದನ್ನು ತೋರಿಸಿಕೊಡುತ್ತಾನೆ.

ಸಿನಿಮಾದಲ್ಲಿ ಮೂರು ರೀತಿಯ ಜೀವನಕ್ರಮಗಳನ್ನು ಸರಳವಾಗಿ ವಿವರಿಸಲಾಗಿದೆ. ಹೊರಗಿನಿಂದ ಬರುವ ನಾಗರಿಕ ಸಮಾಜದ ಚಿತ್ರಣ ಇಲ್ಲಿ ಒಂದು ರೀತಿಯ ಜೀವನಕ್ರಮ. ಕೀಟಶಾಸ್ತ್ರಜ್ಞ ಎಂಬುದಿಲ್ಲಿ ರೂಪಕ ಮಾತ್ರ.  ಕಥಾನಾಯಕ ಮರುಭೂಮಿಯ ಜೀವನವನ್ನು ಕೇವಲ ವೈಜ್ಞಾನಿಕ ಕೂತೂಹಲಕ್ಕಾಗಿ ಮಾತ್ರವೇ ನೋಡುತ್ತಾನೆಯೇ ಹೊರತು, ಅನುಭವದ ಭಾಗವಾಗಿ ಅನುಸರಿಸುವುದಿಲ್ಲ.  

ಮತ್ತೊಂದು ರೀತಿಯ ಜೀವನಕ್ರಮವೆಂದರೇ, ನಾಗರಿಕ ಸಮಾಜದ ತುಳಿತಕ್ಕೆ ಒಳಗಾಗಿ, ಮರುಭೂಮಿಯ ಮೂಲನಿವಾಸಿಗಳ ಸಂತತಿಯೇ ನಾಶವಾಗುತ್ತಿರುವಾಗ, ಅವೆರಡರ ಸಂಪ್ರದಾಯಗಳ ಸಂಪರ್ಕದಿಂದ ಹೊಸ ರೀತಿಯ ಸಂಸ್ಕೃತಿಯೊಂದು ಮೊಳಕೆಯೊಡೆಯುವುದು. ಮರಭೂಮಿಯ ನಿವಾಸಿಗಳು ಪ್ರಕೃತಿಗೆ ಪೈಪೋಟಿ ನೀಡುತ್ತಲೇ ಶತಾಯಗತಾಯ ಅಲ್ಲಿಯೇ ನೆಲೆಸುವುದು ಕೂಡ, ಅವರ ಬದುಕಿನ ಒಂದು ಭಾಗವಾಗಿ ಸಿನಿಮಾದಲ್ಲಿ ಪರಿಗಣಿಸಲ್ಪಡುತ್ತದೆ.

ಮೂರನೇಯ ರೀತಿಯ ಜೀವನಕ್ರಮವೆಂದರೇ ಪ್ರಕೃತಿ ಆರಿಸಿಕೊಳ್ಳುವ ಮಾರ್ಗ. ಪ್ರಕೃತಿಯೂ ಯಾವುದೇ ಅಡೆತಡೆಗಳು ಬಂದರೂ ಅದನ್ನು ಮೆಟ್ಟಿನಿಂತು ಅಥವಾ ಹೊಂದಿಕೊಂಡು ನಿರಂತರವಾಗಿ ಬೆಳೆಯುತ್ತಿರುತ್ತದೆ. ಇದನ್ನು path of least resistance ಎಂದು ಕೂಡ ಕರೆಯಬಹುದು. ಈ ವಿಧಾನವನ್ನು ಸಿನಿಮಾದುದ್ದಕ್ಕೂ ರೂಪಕಗಳ ಮೂಲಕವೇ ನಿರ್ದೇಶಕರಾದ ಹಿರೋಶಿ ತೆಶಿಗೆಹಾರಾ ಹೇಳುತ್ತಾ ಬರುತ್ತಾರೆ. ಒತ್ತಡದ ಕಡೆಯಿಂದ ನಿರ್ವಾತದ ಕಡೆಗೆ ಹರಿದು ಬರುವ ಗಾಳಿಯೂ ಸಮತೋಲನವನ್ನು ಕಾಯ್ದುಕೊಳ್ಳುವಂತೆ, ಸಿನಿಮಾದಲ್ಲಿ ಬಳಸುವ ಮರಳು ಕೂಡ ಹರಿದು ಬಂದು ತನ್ನ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ. ಪ್ರಕೃತಿಯ  ರೀತಿಯಲ್ಲೇ ಸಮತೋಲವನ್ನು ಕಾಪಾಡಿಕೊಳ್ಳುತ್ತದೆ. ಆದರೆ ಮನುಷ್ಯ ಸಮಾಜ ಅರ್ಥಾತ್ ನಾಗರಿಕ ಸಮಾಜ ಈ ಸಮತೋಲನವನ್ನು ಕಾಯ್ದುಕೊಳ್ಳದೇ ಅದರ ಏರುಪೇರಿಗೆ ಕಾರಣನಾಗುತ್ತಾನೆ. ಸವಲತ್ತುಗಳನ್ನು ಪಡೆಯುವವರೆಲ್ಲರೂ ಅದರ ಕ್ರೋಢಿಕರಣದಲ್ಲಿ ನಿರತರಾಗುವುದರ ಜೊತೆಗೆ, ಕನಿಷ್ಠ ಸೌಲಭ್ಯ ಪಡೆಯುವವರ ಪಾಲನ್ನೂ ತಮ್ಮದಾಗಿಸಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಅಂದರೇ ಅಸಮಾನತೆಯನ್ನು ಹೆಚ್ಚಿಸುವುದೇ ಇವರ ಕಾಯಕವಾಗಿರುತ್ತದೆ. ಪ್ರಕೃತಿ ಈ ಅಸಮಾನತೆಯನ್ನು ಸಮತೋಲನ ಮಾಡಿದರೇ, ಮನುಷ್ಯ ಸಮಾಜ ಅದನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತದೆ. ಈ ತೆರೆನಾದ ಮೂರು ರೀತಿಯ ಚಲನೆಗಳು ‘Woman in the Dunes’ ಸಿನಿಮಾದ ಧ್ವನಿ ಎಂದೇ ಹೇಳಬಹುದು.

ಡ್ಯೂನ್ ಎಂದರೇ ಮರಳಿನಲ್ಲೇ ನಿರ್ಮಾಣವಾದ ಬಾವಿ ಎಂದರ್ಥ.  ಇದರಲ್ಲಿ ಆ ವಿಧವೆ ಹೆಂಗಸು ವಾಸ ಮಾಡುತ್ತಿರುತ್ತಾಳೆ. ಬಾವಿಯ ಮೇಲ್ಭಾಗದಿಂದ ಪ್ರತಿನಿತ್ಯವೂ ಮರಳು ಈಕೆಯ ಮನೆಯ ಮೇಲೆ ಬೀಳುತ್ತಿರುತ್ತದೆ. ಈ ಮರಳನ್ನು ಆಗಿಂದಾಗ್ಗೆ ತೆಗೆಯದಿದ್ದರೇ ಮನೆಯ ಜೊತೆಗೆ ಅಲ್ಲಿರುವವರೂ ಸಮಾಧಿಯಾಗುವ ಸಂಭವವಿತ್ತು. ಹೀಗಾಗಿ ಆ ವಿಧವೆ ಹೆಂಗಸು ಮತ್ತು ಕಥಾನಾಯಕ ರಾತ್ರಿಯೆಲ್ಲಾ ಮರಳನ್ನು ಬುಟ್ಟಿಗೆ ತುಂಬಿಸಿ ಬಾವಿಯ ಮೇಲ್ಭಾಗಕ್ಕೆ ರಾಟೆಯ ಮೂಲಕ ಕಳುಹಿಸುತ್ತಾರೆ. ಈ ಕೆಲಸದಲ್ಲಿ ಅಲ್ಲಿನ ಮೂಲ ನಿವಾಸಿಗಳು ಕೂಡ ಕೈಜೋಡಿಸುತ್ತಾರೆ. ಇದೊಂದು The Myth of Sisyphus ಮಾದರಲ್ಲಿರುವ ನಿರರ್ಥಕ ಕ್ರಿಯೆ.

ಈ ಸಿನಿಮಾ ಕತೆಯ ಲೇಖಕ ಕೊಬೋ ಅಬೆಯ ಮೇಲೆ ಫ್ರಾಂಜ್ ಕಾಫ್ಕಾ ಪ್ರಭಾವ ಬಹಳ ಬೀರಿದ್ದ. ಹೀಗಾಗಿ ಸಿನಿಮಾದಲ್ಲಿ ಕಂಡುಬರುವ ಎಲ್ಲಾ ವಿವರಗಳು ರೂಪಕವಾಗಿ ಪ್ರೇಕ್ಷಕನಿಗೆ ಕಾಣಿಸುತ್ತದೆ. ಇದರಲ್ಲಿರುವ ಪ್ರತಿಯೊಂದು ವಿವರವನ್ನೂ ಮತ್ತೊಂದು ರೀತಿಯಲ್ಲಿ ಅರ್ಥೈಸಬಹುದು. ಉದಾಹರಣೆಗೆ, ಮರಳಿನಲ್ಲಿ ನಿರ್ಮಾಣವಾದ ಬಾವಿಯನ್ನೇ ವಸ್ತುವಿನ ಪ್ರತಿರೂಪವಾಗಿ ಗುರುತಿಸಬಹುದು. ಬಾವಿಯೊಳಗೆ ಬದುಕುತ್ತಿರುವ ವಿಧವೆಯನ್ನು ಇನ್ನೊಂದು ಆರ್ಥವಾಗಿ ಗುರುತಿಸಬಹುದು. ಕೀಟಗಳನ್ನು ಸಾಯಿಸಿ, ಮತ್ತೆ ಜೋಡಿಸಿ, ಅದರಿಂದ ವೈಜ್ಞಾನಿಕ ಸತ್ಯವನ್ನು ಕಂಡುಕೊಳ್ಳಲು ಹೊರಟಿರುವ ಕೀಟಶಾಸ್ತ್ರಜ್ಞನ ಜೀವನವನ್ನೂ ಮಗದೊಂದು ಅರ್ಥದಲ್ಲಿ ಕಾಣಬಹುದು.

‘Woman in the Dunes’  ಸಿನಿಮಾವನ್ನು ಒಂದು ಚಿಂತನೆಯ ಸಾಕಾರಕ್ಕಾಗಿ ಜೋಡಿಸಿದ ವಸ್ತುವಿನ ಪ್ರತಿರೂಪ ಎಂದೇ ಹೇಳಬಹುದು. ಮರಳು, ನೀರು, ಬದುಕುವ ಕ್ರಮ ಮುಂತಾದ ದೃಶ್ಯವಿವರಗಳು ಕೂಡ ಚಿತ್ರದ ಅರ್ಥವಂತಿಕೆಯನ್ನು ಹೆಚ್ಚಿಸುವ ವಿವರಗಳಾಗಿವೆ. ಮರಳು ಸಿನಿಮಾದಲ್ಲಿ ಬಹಳ ಮುಖ್ಯ ವಸ್ತು. ಇಡೀ ಚಿತ್ರದ ಗಟ್ಟಿತನವೇ ಫೋಟೋಗ್ರಫಿ ಶೈಲಿ. ಮರಳು ಜಾರಿಕೊಂಡು ಬಂದಾಗ ಅದು ನೀರಿನ ಮಾದರಿಯಲ್ಲಿ ಗೋಚರಿಸುತ್ತದೆ. ಕೆಲವೊಮ್ಮೆ ಅದೇ ಮರಳು ಹೆದರಿಕೆ ಹುಟ್ಟಿಸುವ ರೀತಿಯಲ್ಲಿರುತ್ತದೆ. ಮರಳಿನಲ್ಲಿರುವ ಭಾವಾತ್ಮಕ ಗುಣ ಮತ್ತು ಅದು ಮೈಗಂಟಿಕೊಂಡಾಗ ಆಗುವ ಕಿರಿಕಿರಿಯನ್ನು ಚಿತ್ರದಲ್ಲಿ ನಿರ್ದೇಶಕರು ಜೊತೆಜೊತೆಗೆ ಕಟ್ಟಿಕೊಡುತ್ತಾರೆ. ಕಥಾನಾಯಕ ಮತ್ತು ವಿಧವೆಯ ಮೇಲೆ ಅಂಟಿಕೊಳ್ಳುವ ಮರಳನ್ನು ಗಮನಿಸಿದಾಗ ಪ್ರೇಕ್ಷಕನಿಗೆ ಒಂದು ಕ್ಷಣ, ಇದೇಂತಹ ದುರ್ಬರ ಜೀವನ ಎಂಬ ಭಾವನೆ ಕಾಡುತ್ತದೆ.

ಚಿತ್ರದಲ್ಲಿ ಕೇಳಿಬರುವ ಶಬ್ದಗಳು ಅಥವಾ ಸೌಂಡ್ ಡಿಸೈನ್ ದೃಶ್ಯಗಳ ಪರಿಣಾಮವನ್ನು ಹೆಚ್ಚು ಮಾಡುತ್ತದೆ. ಆದರೇ ಅದು ಸಂಪೂರ್ಣ ಸಂಗೀತವಾಗಿರದೇ ಕೇಳಲು ಕೂಡ ಹಿತವಾಗಿರುವುದಿಲ್ಲ. ಸಂಗೀತವೋ ಅಥವಾ ಕರ್ಕಶವೋ ? ಬದುಕು ಸುಂದರವೋ ಅಥವಾ ಬದುಕು ದುರ್ಬರವೋ ? ಎಂಬುದನ್ನು ಚಿತ್ರದಲ್ಲಿ ಸೊಗಸಾಗಿ ವಿವರಿಸಲಾಗಿದೆ. ಸಿನಿಮಾವನ್ನು ಉಪಮೆಯಾಗಿ ಕಟ್ಟುವ ಬಗೆ ಮತ್ತು ಸಿನಿಮಾದ ವಿವರಗಳನ್ನು ರೂಪಕ ಶಕ್ತಿಯಾಗಿ ಹೇಗೆ ದುಡಿಸಿಕೊಳ್ಳಬಹುದು ? ಈ ವಿವರಗಳು ಕೇವಲ ಅಂದವನ್ನು ಹೆಚ್ಚಿಸಿಕೊಳ್ಳಲು ಇರುವ ವಿವರಗಳಲ್ಲ, ಬದಲಾಗಿ ಧ್ವನಿಯನ್ನು ಹೆಚ್ಚಿಸುವ ವಿವರಗಳು ಎಂಬುದನ್ನು ‘Woman in the Dunes’ ಸಿನಿಮಾದಲ್ಲಿ ಅದ್ಬುತವಾಗಿ ಕಟ್ಟಿಕೊಡಲಾಗಿದೆ.

  • ಗಿರೀಶ್ ಕಾಸರವಳ್ಳಿ

0 Comments

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more