ಜಗತ್ತಿನ ಸಿನಿಮಾದಲ್ಲಿ ನವ ವಾಸ್ತವಿಕತೆ ಅಂಶಗಳು: ಅಬ್ಬಾಸ್ ಕೈರೋಸ್ತಾಮಿ ದೃಷ್ಟಿಕೋನ

1987ರಲ್ಲಿ ಇರಾನ್ ನಲ್ಲಿ ತಯಾರಾದ ಚಿತ್ರ “Where is My Friend’s House”. ಅಬ್ಬಾಸ್ ಕೈರೋಸ್ತಾಮಿ ನಿರ್ದೇಶಿಸಿದ  ಈ ಸಿನಿಮಾ ಹಲವು ಕಾರಣಗಳಿಗಾಗಿ ವಿಶೇಷತೆಯನ್ನು ಪಡೆದಿದೆ. ಇದು ನವವಾಸ್ತವಿಕತೆಗೆ (Neorealism) ಹೊಸ ಭಾಷ್ಯ ಬರೆದ ಚಿತ್ರ. ಎರಡನೇ ಮಹಾಯುದ್ಧದ ನಂತರ, ಮುಖ್ಯವಾಗಿ ಇಟಲಿಯಿಂದ ಆರಂಭವಾಗಿ ನಂತರ ಜಾಗತಿಕ ಚಿತ್ರರಂಗಕ್ಕೆ ಹರಡಿಕೊಂಡ ಚಿತ್ರ ಶೈಲಿ, ಈ ನವವಾಸ್ತವಿಕತೆ. ಯಾವುದೇ ಒಪ್ಪ ಹೋರಣಗಳಿಲ್ಲದೆ, ಸೌಂದರ್ಯಕ್ಕೆ ಒತ್ತು ಕೊಡದೆ, ವಾಸ್ತವಗಳನ್ನು ಮಾತ್ರ ಚಿತ್ರಿಸಬೇಕೆಂದು ಹುಟ್ಟಿಕೊಂಡ ಪಂಥ ನಿಯೋ ರಿಯಾಲಿಸಮ್.

ನವವಾಸ್ತವಿಕತೆ ಎಂಬ ಚಿತ್ರ ಶೈಲಿ ಕ್ರಮೇಣವಾಗಿ ಜಗತ್ತಿನ ಎಲ್ಲಾ ಕಡೆಯೂ ತನ್ನ ಪ್ರಭಾವವನ್ನು ಬೀರಲು ಪ್ರಾರಂಭಿಸಿತು. ಇದರ ಪರಿಣಾಮವಾಗಿಯೇ ಭಾರತದಲ್ಲಿಯೂ ಸತ್ಯಜಿತ್ ರೇ, ರಿತ್ವಿಕ್ ಘಟಕ್, ಬಿಮಲ್ ರಾಯ್ ಮುಂತಾದವರು ಈ ನವವಾಸ್ತವಿಕತೆಯ ಅಂಶಗಳನ್ನು ತಮ್ಮ ಸಿನಿಮಾದಲ್ಲಿ ಅಳವಡಿಸಿಕೊಂಡರು. ಆದರೇ ಜಗತ್ತಿನಾದ್ಯಂತ ಪ್ರಭಾವ ಬೀರಿದ  ಈ ಚಿತ್ರ ಶೈಲಿ ಕ್ರಮೇಣ ತನ್ನ ಹೊಳಪನ್ನು ಕಳೆದುಕೊಳ್ಳಲಾರಂಭಿಸಿತು. ನಂತರ 80ರ ದಶಕದಲ್ಲಿ ಬಂದ ಇರಾನ್  ಸಿನಿಮಾ “Where is My Friend’s House” ಅದಕ್ಕೊಂದು ಹೊಸ ಮುನ್ನುಡಿಯನ್ನು ಬರೆಯಿತು. ಈ ಚಿತ್ರದ ನಿರ್ದೇಶಕ ಮತ್ತು ಬರಹಗಾರ ಅಬ್ಬಾಸ್ ಕೈರೋಸ್ತಾಮಿಯ ಮೊದಲ ಚಿತ್ರವಿದು. ಇದಕ್ಕೂ ಮೊದಲು ಕೆಲವು ಕಿರುಚಿತ್ರಗಳನ್ನು ರಚಿಸಿದ್ದರೂ, ಪೂರ್ಣಾವಧಿ ಚಿತ್ರಗಳಲ್ಲಿ ಕೈರೋಸ್ತಾಮಿಗೆ ಅನುಭವವಿರಲಿಲ್ಲ.

ಅಬ್ಬಾಸ್ ಕೈರೋಸ್ತಾಮಿ ತಮ್ಮ ಸಿನಿಮಾಗಳಲ್ಲಿ, ಒಂದೇ ಘಟನೆಯನ್ನು ಇಟ್ಟುಕೊಂಡು ಅದರ ಹಲವು ಮುಖಗಳನ್ನು ತೋರಿಸುವುದು ವಿಶೇಷವಾಗಿತ್ತು. ಚಿತ್ರಕಟ್ಟುವ ಕ್ರಮದಲ್ಲೂ ಪುನರಾವರ್ತನೆಯ ಸ್ವರೂಪಗಳಿದ್ದವು. ಉದಾಹರಣೆಗೆ ಒಂದು ಸಂಭಾಷಣೆ/ಘಟನೆಯನ್ನು ನಿರಂತರವಾಗಿ ಪುನರಾವರ್ತನೆ ಮಾಡಿ, ಆ ಮೂಲಕ ಸಿನಿಮಾಕ್ಕೊಂದು ಆವರ್ತ ಗುಣವನ್ನು (cyclic nature) ಪರಿಚಯಿಸುತಿದ್ದರು. ಇದರಿಂದ ಚಿತ್ರವನ್ನು ಪ್ರೇಕ್ಷಕರು ಪೂರ್ಣದೃಷ್ಟಿಯಿಂದ, ವಿಶಾಲವಾಗಿ ನೋಡುವ ಸಂಪ್ರದಾಯ ಸೃಷ್ಠಿಯಾಯಿತು. ಇವರ ಸಿನಿಮಾಗಳು ಮೇಲ್ನೋಟಕ್ಕೆ ಸರಳ ಎನಿಸಿದರೂ ಆಳವಾಗಿ ಅರ್ಥೈಸಿಕೊಂಡಾಗ ಮಾತ್ರವೇ ಆತ್ಯಂತಿಕವಾದ (ವಿಶಾಲವಾದ) ಅರ್ಥವನ್ನು  ನೀಡುತ್ತದೆ.

“Where is My Friend’s House” ಇವೆಲ್ಲಾ ಗುಣಗಳನ್ನು ಒಳಗೊಂಡಂತಹ ಒಂದು ಸಿನಿಮಾ. ಇದರಲ್ಲಿ ಆಹ್ಮದ್ ಹಾಗೂ ಮಹಮ್ಮದ್ ಎಂಬಿಬ್ಬ ಹುಡುಗರ ಕತೆ ಕಾಣಸಿಗುತ್ತದೆ. ಮಹಮ್ಮದ್ ಹೋಂ ವರ್ಕ್ ಮಾಡದೇ ಒಂದಿನ ಶಾಲೆಗೆ ಬಂದಿದ್ದರಿಂದ ಮೇಷ್ಟ್ರು ನಾಳೆಯೊಳಗೆ ಅದನ್ನ ಸಲ್ಲಿಕೆ ಮಾಡದಿದ್ದರೇ ಕ್ಲಾಸ್ ರೂಂನಿಂದ ಹೊರಕ್ಕೆ ಕಳುಹಿಸುವುದಾಗಿ ಶಿಕ್ಷೆಯನ್ನು ವಿಧಿಸುತ್ತಾರೆ. ಪಕ್ಕದೂರಿನಿಂದ ಶಾಲೆಗೆ ಬರುತ್ತಿದ್ದ ಆಹ್ಮದ್, ಎಂದಿನಂತೆ ಅಂದು ಕೂಡ ಮನೆಗೆ ತೆರಳಿ ಹೋಂವರ್ಕ್ ಮಾಡಲೆಂದು ಕುಳಿತಾಗ ಮಹಮ್ಮದ್ ನ ನೋಟ್ ಬುಕ್ ತನ್ನ ಬ್ಯಾಗಿನೊಳಗೆ ಇರುವುದು ಗಮನಿಸುತ್ತಾನೆ. ಪ್ರಮಾದವಾಯಿತೆಂದು ಕೂಡಲೇ ಮಹಮ್ಮದ್ ನನ್ನು ಹುಡುಕಿಕೊಂಡು ತೆರಳಿದರೂ ಅವನು ಸಿಗುವುದಿಲ್ಲ. ನಂತರ ಏನೂ ಮಾಡಬೇಕೆಂದು ತಿಳಿಯದ ಆಹ್ಮದ್, ರಾತ್ರಿ ಇಬ್ಬರ ಬುಕ್ಕಿನಲ್ಲಿಯೂ ಹೋಂವರ್ಕ್ ಬರೆದು ಮಾರನೇ ದಿನ ಅದನ್ನು ಮೇಷ್ಟ್ರಿಗೆ ನೀಡುತ್ತಾನೆ. ವ್ಯತ್ಯಾಸ ತಿಳಿಯದ ಮೇಷ್ಟ್ರು ಇಬ್ಬರ ಪುಸ್ತಕದಲ್ಲಿಯೂ ಗುಡ್ ಎಂದು ಬರೆದು ಕಳುಹಿಸುವಲ್ಲಿಗೆ ಕತೆ ಮುಕ್ತಾಯವಾಗುತ್ತದೆ.


ಇಷ್ಟು ಸರಳವಾದ ವಿಷಯವನ್ನು ಸಿನಿಮಾ ಮಾಡಲು ಸಾಧ್ಯವೇ ? ಎಂಬ ಪ್ರಶ್ನೆಗೆ ಅಬ್ಬಾಸ್ ಕೈರೋಸ್ತಾಮಿ ಚಿತ್ರದ ಮೂಲಕ ಉತ್ತರಿಸಿದ್ದಾರೆ. ತುಂಬಾ ಜನ ಇದನ್ನು ಮಕ್ಕಳ ಸಿನಿಮಾ ಎಂದು ಪರಿಗಣಿಸುತ್ತಾರೆ. ಆದರೇ ನನ್ನ (ಗಿರೀಶ್ ಕಾಸರವಳ್ಳಿ) ದೃಷ್ಟಿಯಲ್ಲಿ ಇದೊಂದು ರಾಜಕೀಯ ಅಂಶಗಳಿಂದ ಕೂಡಿರುವ ಮಹಾನ್ ಸಿನಿಮಾ. ಇರಾನಿನ ಸಮಾಜದ ಸ್ವರೂಪವನ್ನು ವ್ಯಾಖ್ಯಾನಿಸುವ ಪ್ರಮುಖವಾದ ಸಿನಿಮಾ.

ಚಿತ್ರದಲ್ಲಿ ಕಂಡುಬರುವ ಒಂದು ದೃಶ್ಯದಲ್ಲಿ ಆಹ್ಮದ್ ನ ತಾತ, ತನ್ನ ಪಕ್ಕದಲ್ಲಿದ್ದ ವ್ಯಕ್ತಿ ಸಿಗರೇಟ್ ಇದೆಯೆಂದು ಹೇಳಿದರೂ ಆಹ್ಮದ್ ಗೆ ಹೊಸ ಸಿಗರೇಟ್ ತರುವಂತೆ ಒತ್ತಾಯಿಸುತ್ತಾನೆ. ಮಕ್ಕಳು ಯಾವಾಗಲೂ ಹಿರಿಯರ ಮಾತನ್ನು ಕೇಳಬೇಕು. ತನ್ನ ತಂದೆ ನಾನು ಸರಿಯಾದ ಕೆಲಸ ಮಾಡುತಿದ್ದರೂ ಹೊಡೆಯುತ್ತಿದ್ದ. ಆ ಮೂಲಕ ನಾನು ಸರಿದಾರಿಗೆ ಬರಲು, ಹಾಗೆಯೇ ಇಷ್ಟು ಒಳ್ಳೆಯವನಾಗೋದಕ್ಕೆ ಕಾರಣನಾಗಿದ್ದಾನೆ ಎಂದು ತಾತ ಹೇಳುತ್ತಾನೆ.  ಈ ಸಿನಿಮಾವು ಸಮಾಜದ ಕ್ರಮಾನುಗತ (hierarchy) ವ್ಯವಸ್ಥೆಯನ್ನು ಪ್ರಶ್ನಿಸುತ್ತದೆ. ಕಿರಿಯ ತಲೆಮಾರಿನವರು ಹಿರಿಯರ ಆಸೆಗಳನ್ನು ಪೂರೈಸಬೇಕೆಂಬ ಸನಾತನವಾಧಿ ಧೋರಣೆಯನ್ನು ಚಿತ್ರದುದ್ದಕ್ಕೂ ತೋರಿಸಲಾಗುತ್ತದೆ.  

ಇರಾನಿನ ಸನಾತನವಾದಿಗಳು ಮತ್ತು ಧರ್ಮನಿಷ್ಠರು ಯಾವ ರೀತಿಯ ಮೌಲ್ಯಗಳನ್ನು ಸಮಾಜಕ್ಕೆ ದಾಟಿಸುತಿದ್ದಾರೆ, ಹಾಗೆಯೇ ಸ್ವತಂತ್ರವಾಗಿ ಯೋಚನೆ ಮಾಡಬಾರದೆಂಬ ಆಲೋಚನಾ ಕ್ರಮಗಳನ್ನು ಸಮಾಜಕ್ಕೆ ಹೇಗೆ ತಲಾತಲಾಂತವಾಗಿ ಪಸರಿಸುತ್ತಿದ್ದಾರೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ಅದರೊಂದಿಗೆ ಒಂದು ಮಾತನ್ನು ಮೂರು ಮೂರು ಬಾರಿ ಹೇಳುವ ಕ್ರಮವನ್ನೂ ಚಿತ್ರದಲ್ಲಿ ಕಾಣಬಹುದು. ಸ್ವತಃ ಆಹ್ಮದ್ ನ ಅಪ್ಪನೇ ಈ ರೀತಿ ಹೇಳಲು ಪ್ರಚೋದಿಸುತ್ತಿರುತ್ತಾನೆ. ಮೂರು ಬಾರಿ ಮಾತನಾಡಿದರೇ ಸ್ಪಷ್ಟವಾಗಿ ಅರ್ಥವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿರುತ್ತದೆ. ಇದರಲ್ಲಿಯೂ ಇರಾನಿನ ಧಾರ್ಮಿಕ ನಂಬಿಕೆಗಳ ಒತ್ತಾಸೆ ಇರುವುದು ಕಂಡುಬರುತ್ತದೆ. ಪರಿಣಾಮವಾಗಿ ಚಿತ್ರದಲ್ಲಿ ತಾಯಿ ಮಗನಿಗೆ, ಅಜ್ಜ ಮೊಮ್ಮಗನಿಗೆ ಒಂದೇ ಮಾತನ್ನು ಮೂರು ಬಾರಿ ಹೇಳುತಿರುತ್ತಾರೆ. ಇದರ ಮೂಲಕ ಮೂಲಭೂತವಾದಿಗಳಿಗೆ, ಅದರ ಜೊತೆಗೆ ಪರಂಪರಾಗತವಾಗಿ ಬಂದ ಪ್ರಶ್ನಾತೀತವಾದ ಸತ್ಯಗಳನ್ನು ಅಬ್ಬಾಸ್ ಕೈರೋಸ್ತಾಮಿ ಸಿನಿಮಾದ ಮೂಲಕ ಪ್ರಶ್ನಿಸುತ್ತಾರೆ.

ಚಿತ್ರದಲ್ಲಿರುವುದು ಆಹ್ಮದ್ ಮತ್ತು ಮಹಮ್ಮದ್ ಅವರ ಕತೆಯಾಗಿದ್ದರೂ, ಸಿನಿಮಾದಲ್ಲಿ ಕಂಡುಬರುವುದು ಇರಾನಿನಿ ಸಾಮಾಜಿಕ ಸ್ವರೂಪ. ಅದರ ಜೊತೆಗೆ ಆಗಷ್ಟೇ ದೇಶದಲ್ಲಿ ಅಧಿಕಾರ ವಹಿಸಿಕೊಂಡಿದ್ದ ಆಲಿ ಖಮೇನಿಯ ರಾಜ್ಯಾಭಾರವನ್ನು ರೂಪಕಗಳ ಮೂಲಕ ಹೇಳಲಾಗುತ್ತದೆ.  ಹಿರಿಯರ ಪ್ರಪಂಚ ಮತ್ತು ಕಿರಿಯರ ಪ್ರಪಂಚದಲ್ಲಿ, ಕೇವಲ ವಯಸ್ಸಿನ ಅಂತರ ಮಾತ್ರವಲ್ಲದೆ, ಒಂದು ಪರಂಪರೆ ಮತ್ತು ಆಧುನಿಕತೆಯ ಶೈಲಿ, ಢಾಳಾಗಿ ಕಂಡುಬರುತ್ತದೆ. ಆಧುನಿಕತೆಯನ್ನು ಅನುಮಾನಿಸಬೇಕೆಂದು ಸಂಪ್ರದಾಯವಾದಿಗಳು ಹೇಳುತ್ತಿರುತ್ತಾರೆ. ಹೀಗಾಗಿ ಆಹ್ಮದ್ ನ ಅಪ್ಪ, ಅಮ್ಮ, ತಾತ, ಮೇಷ್ಟ್ರು ಪರಂಪರೆಗೆ ಹೆಚ್ಚಿನ ಒತ್ತು ಕೊಡುತ್ತಾರೆ. ಕೊನೆಯಲ್ಲಿ ಊರು ತಿಳಿದಿದೆಯೆಂದು ಮಹಮ್ಮದ್ ನನ್ನು ಹುಡುಕುತ್ತಾ ಆಹ್ಮದ್, ಬೆಟ್ಟ ಹತ್ತಿ-ಇಳಿದು ಹೋದರು ಮನೆಯ ವಿಳಾಸ ಸಿಗುವುದಿಲ್ಲ. ಒಣ ಹಾಕಿದ್ದ ಪ್ಯಾಂಟ್ ಗಳ ಆಧಾರದ ಮೇಲೆ ಕೆಲವೊಂದು ಮನೆಯಲ್ಲಿ ಮಹಮ್ಮದ್ ಕುರಿತಾಗಿ ವಿಚಾರಿಸುತ್ತಾನೆ. ಕೊನೆಗೊಬ್ಬ ಮುದುಕ ತನಗೆ ಮಹಮ್ಮದ್ ನ ವಿಳಾಸ ತಿಳಿದಿದೆಯೆಂದು ಆತನನ್ನು ಕರೆದುಕೊಂಡು ಹೊರಡುತ್ತಾನೆ. ಆ ಮುದುಕನ ವೃತ್ತಿ, ಮನೆಯಲ್ಲಿನ ಕಿಟಿಕಿಗಳನ್ನು ಸುಂದರವಾಗಿ ಕೆತ್ತಿ ಕೊಡುವುದಾಗಿತ್ತು. ಕಿಟಿಕಿಗಳು ಸುಂದರವಾಗಿ ಕಂಡುಬಂದರೂ, ಅದರ ಒಳಗಡೆ ಅಂದರೇ ಮನೆಯೊಳಗಿನ ವಾಸ್ತವ ಅನೇಕ ನಿಗೂಢತೆಗಳಿಂದ ಭೀಕರತೆಯಿಂದ ಕೂಡಿದೆ ಎಂಬುದನ್ನು ಸಿನಿಮಾದಲ್ಲಿ ನಿರ್ದೇಶಕರು ಹೇಳುತ್ತಾರೆ. ಆ ಮೂಲಕ ರೂಪಕ ರೀತಿಯಲ್ಲಿ ಕತೆಯನ್ನು ಕಟ್ಟುತ್ತಾ ಹೋಗುತ್ತಾರೆ.

ಈ ರೀತಿಯಾಗಿ ಸಿನಿಮಾ ಕಟ್ಟುವ ಕ್ರಮವನ್ನು Docu fiction ಎಂದು ಕರೆಯಲಾಗುತ್ತದೆ. ಇದನ್ನು ಪರಿಣಾಮಕಾರಿಯಾಗಿ 80ರ ದಶಕದಲ್ಲಿ ತಂದವನು ಅಬ್ಬಾಸ್ ಕೈರೋಸ್ತಾಮಿ. ನಂತರ ಏಷಿಯನ್ ಸಿನಿಮಾಗಳಲ್ಲಿ ಇದನ್ನೇ ನಕಲು ಮಾಡಲಾರಂಭಿಸಿದರು. ಏಷಿಯನ್ ಸಿನಿಮಾಗಳು ಇದೇ ಮಾದರಿಯಲ್ಲಿರಬೇಕೆಂಬುದರ ಮಟ್ಟಿಗೆ ಪ್ರತಿಯೊಬ್ಬರೂ ನಂತರದ ವರ್ಷದಲ್ಲಿ ಅನುಕರಿಸಲಾರಂಭಿಸಿದರು.

ಡಾಕ್ಯೂ ಫಿಕ್ಷನ್ ಸಿನಿಮಾಗಳ ರಾಜಕಾರಣವನ್ನು ಹಲವು ಮಾದರಿಯಲ್ಲಿ ತಿಳಿಯಬಹುದು. “ದ ಬೈಸಿಕಲ್ ಥೀಫ್” ನವವಾಸ್ತವಿಕತೆಯ ಬಹಳ ದೊಡ್ಡ ಸಿನಿಮಾ. ಆದರೇ ಅಬ್ಬಾಸ್ ಕೈರೋಸ್ತಾಮಿ ಹೇಳುವ ಪ್ರಕಾರ “ದ ಬೈಸಿಕಲ್ ಥೀಫ್” ಸಿನಿಮಾ ವಾಸ್ತವ ಅಂಶಗಳಿಂದ ಕೂಡಿಲ್ಲ. ಯಾಕಂದರೆ ಇದರಲ್ಲಿ ಕಥೆಯ ನಿರೂಪಣೆಗೆ ಹಾಗೂ ಭಾವನೆ ಸೃಷ್ಟಿಗೆ ಸಂಗೀತವನ್ನು ಬಳಸಲಾಗಿದೆ. ಇದರಿಂದ ಸಿನಿಮಾದಲ್ಲಿ ಕೃತಕತೆ ಹೆಚ್ಚಾಗಿದೆ ಎಂದಿದ್ದಾನೆ. ಒಂದು ಘಟನೆಯನ್ನು ಅನಾವರಣ ಮಾಡುವುದಷ್ಟೆ ನವವಾಸ್ತವಿಕತೆಯ ಮೂಲ ಕೈಗನ್ನಡಿ. 1960ರ ಕಾಲದಲ್ಲಿ ಹಲವು ನಿರ್ದೇಶಕರು ಸಿನಿಮಾವನ್ನು ಕೇವಲ ಅನಾವರಣ ಮಾಡಬೇಕು, ಯುಕ್ತಿಯಿಂದ ನಿಭಾಯಿಸಬೇಕೆಂಬುದನ್ನು ಒತ್ತಿ ಒತ್ತಿ ಹೇಳುತ್ತಿದ್ದರು. ಆದರೆ ಕೌಶಲ್ಯದಿಂದ ಕೂಡಿದ ಸಿನಿಮಾಗಳನ್ನು ಕೂಡ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿರುವುದು ಇರಾನಿಯನ್ ಸಿನಿಮಾದವರು. ಅದರಲ್ಲಿ ಪ್ರಮುಖನಾದವನೇ ಅಬ್ಬಾಸ್ ಕೈರೋಸ್ತಾಮಿ. ಮಕ್ಕಳ ಮೂಲಕವೇ ಪ್ರಸ್ತುತ ಇರಾನಿನಿ ಬಗ್ಗೆ, ಹಾಗೆಯೇ ಆದೇ ಮಾದರಿಯಲ್ಲಿ ಜಗತ್ತಿನ ಬೇರೆಡೆಯಲ್ಲಿರುವ ಧರ್ಮ ಮತ್ತು ಧಾರ್ಮಿಕ ಜಗತ್ತು ಎಲ್ಲಿ ಪ್ರಭುತ್ವವನ್ನು  ನಿಯಂತ್ರಿಸುತ್ತಿರುತ್ತದೆಯೋ ಅಂತಹ ಎಲ್ಲಾ ಸಮಾಜಗಳ ಬಗ್ಗೆ ಈ ಸಿನಿಮಾದಲ್ಲಿ ವ್ಯಾಖ್ಯಾನ ಮಾಡಲಾಗಿದೆ. ಇಂದು ಜಗತ್ತಿನಲ್ಲಿ ಕೌಶಲ್ಯಭರಿತ ಸಿನಿಮಾಗಳು ಬಹಳ ದೊಡ್ಡ ಸ್ಥಾನವನ್ನು ಪಡೆದಿವೆ.

0 Comments

Related Articles

Related

ಕಥಾ ಚಿತ್ರದಲ್ಲಿ ಸಾಕ್ಷ್ಯ ಚಿತ್ರದ ಪರಂಪರೆ: ದ ಬ್ಯಾಟಲ್ ಆಫ್ ಅಲ್ಜಿಯರ್ಸ್

ಕಥಾ ಚಿತ್ರದಲ್ಲಿ ಸಾಕ್ಷ್ಯ ಚಿತ್ರದ ಪರಂಪರೆ: ದ ಬ್ಯಾಟಲ್ ಆಫ್ ಅಲ್ಜಿಯರ್ಸ್

ದ ಬ್ಯಾಟಲ್ ಆಫ್ ಅಲ್ಜಿಯರ್ಸ್ ಸಿನಿಮಾ ಭಾರೀ ಜನಪ್ರಿಯವಾಯಿತಲ್ಲದೆ, ವ್ಯಾಪಕ ಮನ್ನಣೆಯನ್ನೂ ಪಡೆಯಿತು. ‘Venice’ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲೂ ‘ದ ಬ್ಯಾಟಲ್ ಆಫ್ ಅಲ್ಜಿಯರ್ಸ್’ ಪ್ರದರ್ಶನ ಕಂಡಿತು. ಅಲ್ಲದೇ, ಹಲವಾರು ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂಡು, ಚಿತ್ರಕಥೆ ಮತ್ತು ನಿರ್ದೇಶನ ವಿಭಾಗದಲ್ಲಿ ಆಸ್ಕರ್ ಗೆ ಭಾಜನವಾಯಿತು. ಒಂದೇ ವರ್ಷದಲ್ಲಿ ಮೂರು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಸಿನಿಮಾ ಎಂಬ ಹೆಗ್ಗಳಿಕೆ ಇಂದಿಗೂ ಈ ಚಿತ್ರದ ಹೆಸರಿನಲ್ಲಿದೆ.

read more
ಸಂಗೀತಗಳು ಸಮುದಾಯದ ಭಾಗವಾಗಬೇಕು: ‘ಕಾಡು’ ಸಿನಿಮಾ ವಿಶ್ಲೇಷಣೆ

ಸಂಗೀತಗಳು ಸಮುದಾಯದ ಭಾಗವಾಗಬೇಕು: ‘ಕಾಡು’ ಸಿನಿಮಾ ವಿಶ್ಲೇಷಣೆ

‘ಕಾಡು’ 1973ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಗಿರೀಶ್ ಕಾರ್ನಾಡ್ ಸ್ವತಂತ್ರವಾಗಿ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿ ಆಧಾರಿತವಾದ ಈ ಚಿತ್ರಕ್ಕೆ ಸಾಕಷ್ಟು ಜನಮನ್ನಣೆ ದೊರಕಿದೆ. ಆಗಿನ ಕಾಲದ ಕನ್ನಡ ಸಾಹಿತ್ಯ ಪರಂಪರೆಗೆ ಅನುಗುಣವಾಗಿ. ಈ ಚಿತ್ರವನ್ನು ಗಮನಿಸಿದರೆ ಬಹಳ ಮಹತ್ವದ ವಿಚಾರಗಳು ತಿಳಿಯುತ್ತದೆ. ನವ್ಯರು ಪ್ರಶ್ನಿಸುತ್ತಿದ್ದ ಅನೇಕ ಅಂಶಗಳನ್ನು ಈ ಕಥೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

read more
THE OTT ERA

THE OTT ERA

OTT or Over-the-top, is a convenient little term which describes a new way to watch movies and TV shows whenever we want, on a variety of devices, and without the use of traditional broadcast, cable, or satellite pay-tv providers.

read more