ಕ್ರೌರ್ಯದ ಮೂಲ ನೆಲೆ ಯಾವುದು ?: ‘ಉತ್ತರಾ’ ಸಿನಿಮಾದಲ್ಲಿದೆ ಉತ್ತರ

‘ಉತ್ತರಾ’ ಬುದ್ಧದೇವದಾಸ ಗುಪ್ತಾ ನಿರ್ದೇಶನದ ಬೆಂಗಾಲಿ ಚಿತ್ರ. ಮೂಲತಃ ಸಾಹಿತಿಯಾಗಿರುವ ಗುಪ್ತಾ ನಾಲ್ಕು ಕಾದಂಬರಿ ಹಾಗೂ 8 ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಆದಾಗ್ಯೂ ಇವರು ತಮ್ಮ ಸಿನಿಮಾಗಳಲ್ಲಿ ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡಿಲ್ಲ. ಅದರ ಬದಲಾಗಿ ಬಿಂಬಗಳ ಮೂಲಕವೇ ಕಥೆಯನ್ನು ಕಟ್ಟುತ್ತಾ ಹೋಗುತ್ತಾರೆ. ಹೀಗಾಗಿ ಗುಪ್ತಾ ಅವರ ಸಿನಿಮಾಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ.

ಗುಪ್ತಾ ಅವರ ಸಿನಿಮಾದಿಂದ, ಸಾಹಿತ್ಯ ಹೆಚ್ಚು ಪ್ರಭಾವಿತವಾಗಿದೆ. ಅವರ ಸಾಹಿತ್ಯದಿಂದ ಸಿನಿಮಾಕ್ಕೊಂದು ಶಕ್ತಿ ಬಂದಿದೆ. ಸಾಮಾಜಿಕ, ರಾಜಕೀಯ ಗ್ರಹಿಕೆಗಳು ಒಂದು ದಾರ್ಶನಿಕ ಸ್ವರೂಪ ತಾಳಲು ಇವರ ಸಾಹಿತ್ಯ ನೀಡಿದ ಕೊಡುಗೆ ಅಪಾರ. ಸಿನಿಮಾಗಳಿಗೆ ಒಂದು ಕಾವ್ಯಾತ್ಮಕ ಬಿಂಬವನ್ನು ಕಟ್ಟಿಕೊಡುವ ಶಕ್ತಿಯೂ ಇವರ ಕವಿ ಮನಸ್ಸಿಗಿದೆ.

ಗುಪ್ತಾ ಅವರ ಆರಂಭದ ಚಿತ್ರಗಳು ಅಲ್ಲಿಯವರೆಗೂ ಪ್ರಚಲಿತದಲ್ಲಿದ್ದ ಕ್ರಮದಲ್ಲಿಯೇ ಇದ್ದವು. ನೇರವಾದ ಹಾಗೂ ಪ್ರಸ್ತುತ ವಸ್ತುಸ್ಥಿತಿಯನ್ನು ವಿಮರ್ಶಿಸುವ ಮಾದರಿಯಲ್ಲಿ ಕತೆಯನ್ನು ಕಟ್ಟುವ ಕ್ರಮವಿತ್ತು. ಆದರೆ ಆನಂತರದ ಸಿನಿಮಾಗಳಲ್ಲಿ ಅವರು ಕತೆಯನ್ನು ನೇರವಾಗಿ ಹೇಳದೆ ಅನ್ಯೋಕ್ತಿಯ (ರೂಪಕ) ರೀತಿಯಲ್ಲಿ ಕಟ್ಟುವ ಕ್ರಮವನ್ನು ರೂಢಿಸಿಕೊಂಡರು. ಇದು ಭಾರತೀಯ ಚಿತ್ರರಂಗಕ್ಕೆ ಹೊಸತು. ಇದನ್ನು ಬಹಳ ವಿಮರ್ಶಕರು Poetic Cinema ಎಂದು ಕರೆದಿದ್ದಾರೆ. ಈ ಶಬ್ದವನ್ನು ‘ಪಿಯರೆ ಪೌಲೋ ಪಸೊಲಿನೀಯ’ ಸಿನಿಮಾಗಳಿಗೂ ಬಳಸುತ್ತಾರೆ. ಆದರೆ ಪಸೊಲಿನೀ ಮಾದರಿಯ Poetic Cinema ವನ್ನು ಗುಪ್ತಾ ಕಟ್ಟುವುದಿಲ್ಲ. ಅದ್ದರಿಂದ ಅದರ ಬದಲಿಗೆ imagist painters ಎಂಬ ಶಬ್ದವನ್ನು ಎರವಲು ಪಡೆದು ಇವರ ಸಿನಿಮಾವನ್ನು imagist Cinema ಎಂದು ಕರೆಯಬಹುದು.

2000ದಲ್ಲಿ ತೆರೆಗೆ ಬಂದ ಸಿನಿಮಾ ‘ಉತ್ತರಾ’ವನ್ನು, imagist Cinemaದ ಪ್ರಾತಿನಿಧಿಕವಾಗಿ ಗುರುತಿಸಬಹುದು. ನಕ್ಸಲೈಟ್ ಹಿಂಸೆಗಳಿಂದ ಮನನೊಂದಿದ್ದ ಬುದ್ಧದೇವದಾಸ ಗುಪ್ತಾ, ವಾಸ್ತವ ಮಾರ್ಗಗಳನ್ನು ಬಿಟ್ಟು ರೂಪಕಗಳ ಮೂಲಕ, ಕಾಲ್ಪನಿಕ ಕಥೆಗಳ ಮೂಲಕ ಚಿತ್ರವನ್ನು ಹೇಳುವ ಪರಂಪರೆಯನ್ನು ಆರಂಭಿಸಿದರು. ವ್ಯಕ್ತ ವಿವರಗಳಿಂದ ಅವ್ಯಕ್ತವೋ, ಅಮೂರ್ತವಾದ ಧ್ವನಿಗಳನ್ನು ಹೊರಡಿಸುವ ಮತ್ತೊಂದು ಮಾರ್ಗವನ್ನು ಸೃಷ್ಟಿ ಮಾಡುತ್ತಾರೆ. ಅದಕ್ಕೆ ಅವರು minimalist ಕ್ರಮವನ್ನು ಬಳಸಿಕೊಂಡರು. ‘ಉತ್ತರಾ’ ಸಿನಿಮಾದಲ್ಲಿ ಮೂರು ಅಥವಾ ನಾಲ್ಕು ಎಳೆಯ ಕತೆಗಳು ಒಂದಕ್ಕೊಂದು ಸಮನಾಂತರವಾಗಿ ಚಲಿಸುತ್ತಿರುತ್ತದೆ. ಒಂದು ಮತ್ತೊಂದಕ್ಕೆ ಕುಮ್ಮಕ್ಕು ಕೊಡದೇ ಎಲ್ಲಾ ಎಳೆಗಳು ಅಂತ್ಯದಲ್ಲಿ ಮಾತ್ರವೇ ಕೂಡಿಕೊಳ್ಳುತ್ತದೆ.

ವಿಶಾಲವಾದ ಬಯಲಿನಲ್ಲಿ ಹೋಗುವ ಏಕಮಾತ್ರ ರೈಲಿನ, ರೈಲ್ವೇ ಸ್ಟೇಷನಿಗೆ ಇಬ್ಬರು ಪೈಲ್ವಾನರು ಗಾರ್ಡ್ ಗಳಾಗಿರುತ್ತಾರೆ. ಆದರೇ ಈ ಇಬ್ಬರೂ ಗಾರ್ಡ್ ಕೆಲಸದಲ್ಲಿ ಆಸಕ್ತಿವಹಿಸದೇ, ಸದಾ ಮರುಳುಗಾಡಿನಲ್ಲಿ ಕುಸ್ತಿ ಮಾಡುತ್ತಿದ್ದರು. ಇಬ್ಬರೂ ಕೂಡ ಉತ್ತಮ ಸ್ನೇಹಿತರಾಗಿದ್ದರು. ಏತನ್ಮಧ್ಯೆ ಪೈಲ್ವಾನ್ ಗಳಲ್ಲೊಬ್ಬ ‘ಉತ್ತರಾ’ ಎಂಬ ಹುಡುಗಿಯನ್ನು ವಿವಾಹದ ತಕ್ಷಣ, ಅವರ ಗೆಳೆತನದಲ್ಲಿ ಬಿರುಕು ಮೂಡಲಾರಂಭಿಸುತ್ತದೆ. ‘ಉತ್ತರಾ’ ಎಂಬುದನ್ನು ಪ್ರಶ್ನೆಗಳಿಗುತ್ತರಾ ಎಂಬ ಧ್ವನಿಯಲ್ಲೂ ಅರ್ಥೈಸಿಕೊಳ್ಳಬಹುದು.

ವಿಶಾಲ ಮೈದಾನದಲ್ಲಿ ಒಂಟಿ ರೈಲ್ವೇ ಸ್ಟೇಷನ್ ಏಕೆ ಇದೆ ? ದಿಬ್ಬದ ಮೇಲೆಯೇ ಚರ್ಚ್ ಯಾಕೆ ಕಟ್ಟಲಾಗಿದೆ ? ಅಲ್ಲಿ ಮುಸುಕು ಹಾಕಿಕೊಂಡು ಓಡಾಡುವ ವೇಷಧಾರಿಗಳು ಯಾರು ?  ಕುಬ್ಜ ಜನಗಳು ಸುತ್ತಾಡುವುದರ ಹಿಂದಿನ ಅರ್ಥವೇನು ?  ಈ ತೆರನಾದ ಹಲವು ಪ್ರಶ್ನೆಗಳು ಸಿನಿಮಾ ನೋಡುವಾಗ ಎದುರಾದರೂ ಅದಕ್ಕೆ ಅರ್ಥಗಳು ದೊರಕುವುದಿಲ್ಲ, ಯಾಕೆಂದರೇ ವಾಸ್ತವ ಮಾದರಿಯ ಕತೆಗಳನ್ನು ಗುಪ್ತಾ ಎಂದಿಗೂ ಅನುಸರಿಸುತ್ತಿರಲಿಲ್ಲ. ಅದರ ಬದಲು ಅವರು ಹುಡುಕುವ ನೆಲೆಗಳು- ಅರ್ಥಗಳು ಬೇರೆ ರೀತಿಯಲ್ಲಿರುತ್ತದೆ. ಮನುಷ್ಯ ಸಮಾಜದಲ್ಲಿ ಯಾವಾಗಲು ಕಂಡುಬರುವ ಕ್ರೌರ್ಯದ ಮೂಲ ನೆಲೆ ಯಾವುದು ? ಮತ್ತು ಅದರ ಉದ್ದೇಶವೇನು ? ಅದು ಯಾಕೆ ಮನುಷ್ಯನ ಜೀವನದಲ್ಲಿ ಅವ್ಯಾಹತವಾಗಿ ಹರಿದುಕೊಂಡು ಬರುತ್ತಿದೆ ? ಈ ಮಾದರಿಯ ಪ್ರಶ್ನೆಗಳಿಗೆ ಮಾತ್ರ ಗುಪ್ತಾ ತಮ್ಮ ಸಿನಿಮಾದಲ್ಲಿ ಉತ್ತರ ಕಂಡುಕೊಳ್ಳುತ್ತಾರೆಯೇ ವಿನಃ ಬೆಟ್ಟದ ಮೇಲೆ ಪಾದ್ರಿ ಯಾಕಿದ್ದಾನೆ ಎಂಬಂತಹ ಪ್ರಶ್ನೆಗಳ ಕಡೆಗೆ ಗಮನ ಹರಿಸುವುದಿಲ್ಲ.

ರೈಲ್ವೇ ಸ್ಟೇಷನ್ನಿನ ಎದುರಿಗೆ ಇದ್ದ ಒಂದು ದಿಬ್ಬದಲ್ಲಿ ಚರ್ಚ್ ಇತ್ತು. ಇದರ ಪಾದ್ರಿ ನೀಡುವ ಉಚಿತ ಊಟಕ್ಕೆ ನಾಲ್ಕು ಮಂದಿ ಮುದುಕರು ಪ್ರತಿನಿತ್ಯ ಬರುತ್ತಿರುತ್ತಾರೆ. ಈ ಮುದುಕರಿಗೆ ಊಟ ಮಾಡಿದ ನಂತರ, ಹೇಗಾದರೂ ಮಾಡಿ ವಿಸಾ ಪಡೆದುಕೊಂಡು ಅಮೆರಿಕಾಕ್ಕೆ ತೆರಳಬೇಕೆಂಬ ಕನಸಿತ್ತು. ಒಬ್ಬ ಹುಡುಗ ಅಲ್ಲಾಗುತ್ತಿರುವ ವಿದ್ಯಾಮಾನವನ್ನೆಲ್ಲಾ ಗಮನಿಸುತ್ತಿರುತ್ತಾನೆ. ಮತ್ತೊಂದು ಅಂಶವೆಂದರೆ ಸಿನಿಮಾದಲ್ಲಿ ಯಾವ ಪಾತ್ರಗಳಿಗೂ ನೇರಾನೇರ ಸಂಬಂಧ ಇರುವುದಿಲ್ಲ. ಊಟ ಕೊಡುವ ನೆಪದಲ್ಲಿ ಪಾದ್ರಿಯೂ ಮತಾಂತರ ಮಾಡುವ ಕೆಲಸ ಮಾಡುತ್ತಾನೆ ಎಂಬ ವದಂತಿ ಕತೆಯ ನಡುವೆ ಹರಡುತ್ತದೆ.

ಈ ವಿಚಾರ ಸುತ್ತಮುತ್ತಲೂ ಪಸರಿಸಿದ ಪರಿಣಾಮ ಎಲ್ಲಿಂದಲೋ ಧುತ್ತೆಂದು ಪ್ರತ್ಯಕ್ಷವಾಗುವ ನಾಲ್ಕು ಮಂದಿ ಪಾದ್ರಿಯ ಕೊಲೆಗೈಯುತ್ತಾರೆ. ಈ ದೃಶ್ಯವನ್ನು ಕಂಡು ಉತ್ತರಾಳು ಭಯಭೀತಿಯಿಂದ ಹೇಗಾದರೂ ಕೊಲೆಯನ್ನು ತಪ್ಪಿಸಿ ಎಂದು ಇಬ್ಬರು ಕುಸ್ತಿಪಟುಗಳಲ್ಲಿ ಬೇಡಿಕೊಳ್ಳುತ್ತಾಳೆ. ಆದರೇ ಕುಸ್ತಿಯಲ್ಲಿ ನಿರತರಾಗಿದ್ದ ಅವರು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕೊನೆಗೆ ಉತ್ತರಾಳೇ ಘಟನೆಯನ್ನು ತಪ್ಪಿಸಲು ಹೋಗಿ ಕೊಲೆಯಾಗುತ್ತಾಳೆ. ಪಾದ್ರಿ ಮತ್ತು ಉತ್ತರಾಳನ್ನು ಹತ್ಯೆಗೈದ ನಂತರ, ಅಲ್ಲಿದ್ದ ಬಾಲಕನೊಬ್ಬನನ್ನು ಕೂಡ ಕೊಲ್ಲಲು ಆ ದುರುಳರು ಮುಂದಾಗುತ್ತಾರೆ. ಆದರೇ ಅವರಿಂದ ತಪ್ಪಿಸಿಕೊಳ್ಳುವ ಬಾಲಕ, ಮುಖವಾಡ ಧರಿಸಿಕೊಂಡು ಊರಿಂದ ಊರಿಗೆ ನಾಟಕ ಮಾಡಲು ತೆರಳುವ ತಂಡವೊಂದನ್ನು ಕೂಡಿಕೊಳ್ಳುತ್ತಾನೆ. ಮಾತ್ರವಲ್ಲ ಅವರ ಮಾದರಿಯಲ್ಲೆ ಮುಖವಾಡ ಧರಿಸಿಕೊಳ್ಳುತ್ತಾನೆ. ಹಿಂಸೆಗೆ ಕಲೆಯು ಪ್ರತಿರೋಧ ಒಡ್ಡಬಲ್ಲದ್ದು ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ.

ಸಿನಿಮಾದ ಶೈಲಿಯನ್ನು ಕಾವ್ಯಾತ್ಮಕ ಅನ್ಯೋಕ್ತಿ ಎಂದು ಕೂಡ ಕರೆಯಬಹುದು. ಸಮಾಜೋ-ರಾಜಕೀಯ ಮಾದರಿಯಲ್ಲಿ ಈ ಸಿನಿಮಾವನ್ನು ಗಮನಿಸುವುದಾದರೇ ಅನೇಕ ಅರ್ಥಗಳು ತಪ್ಪಿಹೋಗುತ್ತದೆ. ಆದರೇ ಮನುಷ್ಯನ ಮೂಲ ಪ್ರವೃತ್ತಿಯನ್ನು ಮಾತ್ರ ಹುಡುಕಿಕೊಂಡು ತೆರಳಿದರೇ ಕ್ರೌರ್ಯ ಮತ್ತು ಆತನ ವಿನಾಶಕಾರಿ ಪ್ರವೃತ್ತಿ, ಯಾವ ರೀತಿ ಜಾಗೃತಗೊಳ್ಳುತ್ತಿದೆ ಮತ್ತು ಅಭಿವ್ಯಕ್ತಗೊಳ್ಳುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಮನುಷ್ಯನ ಕಾರ್ಯಕಾರಣ ಸಂಬಂಧವು ಆತನ ಕ್ರಿಯೆಗೂ ಮತ್ತು ಪ್ರವೃತ್ತಿಗೂ ನೇರವಾದ ಸಂಬಂಧ ಇದೆಯೇ ? ಅಥವಾ ಅದು ಒಂದು ರೀತಿಯ ಗುಪ್ತ ಸಂಬಂಧವೇ ? ಎಂಬುದನ್ನು ಕೂಡ ಸಿನಿಮಾ ಅನಾವರಣ ಮಾಡುತ್ತಾ ಹೋಗುತ್ತದೆ. ವಾಸ್ತವ ಮಾರ್ಗ ಅನುಸರಿಸಿದರೇ ಈ ಎಲ್ಲಾ ಕ್ರಿಯೆಗಳಿಗೂ ಒಂದು ಕಾರಣ ನೀಡಬೇಕಾದ ಅನಿವಾರ್ಯತೆಯಿತ್ತು. ಈ ಕಾರಣಗಳಿಗೂ, ಸಮಾಜದ ಅಥವಾ ಧಾರ್ಮಿಕ ನೆಲೆಯ, ರಾಜಕೀಯ ಉದ್ದೇಶಗಳನ್ನು ಪ್ರಸ್ತುತ ಪಡಿಸಬೇಕಾಗಿತ್ತು. ಆದರೇ ನಿರ್ದೇಶಕರಾದ ಗುಪ್ತಾ, ಅನ್ಯೋಕ್ತಿಯ ಮಾರ್ಗವನ್ನು ಮಾತ್ರ ಅನುಸರಿಸಿ ಮಾನವನ ಮೂಲರೂಪವನ್ನು ಹೇಳುತ್ತಾ ಮುಖಾಮುಖಿ ಮಾಡುತ್ತಾರೆ.

ಸಿನಿಮಾವನ್ನು ಎರಡು ರೀತಿಯಲ್ಲಿ ಕಟ್ಟಬಹುದು. ಮೊದಲನೆಯದಾಗಿ ಪರಿಚಿತ ಜಗತ್ತಿನ ಅಪರಿಚಿತ ಮುಖಗಳನ್ನು ತೋರಿಸುವ ಕ್ರಮ. ಇಲ್ಲಿ ಸಿನಿಮಾಗಳು ನಮ್ಮ ಮುಖವನ್ನೇ ನಮಗೆ ತೋರಿಸುವ ಕನ್ನಡಿಯ ಮಾದರಿಯಲ್ಲಿರುತ್ತದೆ. ವಾಸ್ತವಕ್ಕೆ ಬಹಳ ಹತ್ತಿರದಲ್ಲಿರುವ ವಸ್ತುವಿವರಗಳನ್ನು ಹುಡುಕುವ ಅನಿವಾರ್ಯತೆ ಇರುತ್ತದೆ. ಮನುಷ್ಯ ಪ್ರಕೃತಿ ದತ್ತವಾಗಿರುವುದನ್ನು ಬದಲಾಯಿಸಬಾರದು. ಅಲ್ಲಿರುವ ವಸ್ತುವಿವರಗಳನ್ನು ಬಳಸಿಕೊಂಡೇ ಕತೆಯನ್ನು ಕಟ್ಟಬೇಕು. ಈಗಾದರಷ್ಟೇ ‘ನಿಜ’ ಎಂಬ ಪದಕ್ಕೆ ಅರ್ಥ ಬರುವುದು.

ಎರಡನೇಯ ವಿಧಾನವೆಂದರೇ ದೃಶ್ಯ ಮತ್ತು ಶ್ರವ್ಯ ಬಿಂಬಗಳನ್ನು ಕೇವಲ ತೋರ್ಪಡಿಸಲು ಮಾತ್ರ ಕಟ್ಟುವುದಲ್ಲ. ಜಗತ್ತಿನ ಒಳಮೈಯ ದರ್ಶನ ಮಾಡುವ ಹೊಸ ಬಿಂಬಗಳನ್ನು, ಹೊಸ ಶಬ್ದಗಳನ್ನು, ಹೊಸ ದೃಶ್ಯಗಳನ್ನು ಹುಡುಕಲು ಬಳಸಬೇಕು. ಆ ಮೂಲಕ ಜಗತ್ತಿನ ಹೊರಮೈಗಿಂತ ಭಿನ್ನವಾದ ಒಳಮೈಯನ್ನು ಪರಿಚಯಿಸಬೇಕು.  

ಬುದ್ಧದೇವದಾಸ ಗುಪ್ತಾ ಸಿನಿಮಾವನ್ನು ಕಾರ್ಯಕಾರಣ ಸಂಬಂಧವಾಗಿ ತೋರ್ಪಡಿಸದೇ, ರೂಪಕವಾಗಿ ಮಾತ್ರ ಪ್ರೇಕ್ಷಕನ ಮುಂದಿಡುತ್ತಾರೆ. ಕೆಲವೊಮ್ಮೆ ಪ್ರೇಕ್ಷಕನಿಗೆ ಪರಿಚಿತವಾದ ಸ್ಥಳಗಳ ಪರಿಚಯವೂ ಇದರಲ್ಲಿ ಕಾಣಬಹುದು. ಉದಾ: ಕ್ಷಿತೀಜದ ಹೊರಗೆ ಹಬ್ಬಿರುವ ವಿಸ್ತಾರವಾದ ಬಯಲಿದೆ. ಆ ಬಯಲಿನಲ್ಲಿ ಅನೇಕ ಕ್ರಿಯೆಗಳು ನಡೆಯುತ್ತಿರುತ್ತದೆ. ಅಲ್ಲಿ ಮನುಷ್ಯರು ವಾಸ ಮಾಡುವುದಿಲ್ಲವೇ ? ಅಥವಾ ಜೀವವೈವಿಧ್ಯಗಳು ವಾಸ ಮಾಡುತ್ತಿಲ್ಲವೇ ? ಉತ್ತರಾ ಹೊರತುಪಡಿಸಿದರೇ ಬೇರೆ ಹೆಂಗಸರೇ ಇರಲಿಲ್ಲವೇ ? ಎಂಬ ಪ್ರಶ್ನೆಗಳಿಗೆ ಗುಪ್ತಾರ ಸಿನಿಮಾದಲ್ಲಿ ಅರ್ಥ ದೊರಕುವುದಿಲ್ಲ.

ಕೆಲವು ವಿವರಗಳು ಈ ಚಿತ್ರದಲ್ಲಿ ಭಾರತೀಯ ಸಿನಿಮಾಗಳಿಗೆ ಅಪರಿಚಿವಾಗಿರುವಷ್ಟು ಕಾವ್ಯಾತ್ಮಕ ಸ್ವರೂಪದಲ್ಲಿದ್ದವು. ಉದಾ: ಸಿನಿಮಾದಲ್ಲಿ ಬಳಸಿರುವ ದೃಶ್ಯವೈಭವ ,ಕ್ಯಾಮರ ತಂತ್ರಗಳು, ಟ್ರಾಲಿಗಳ ಬಳಕೆ, ಮಂದಗತಿಯ ನಿರೂಪಣಾ ಶೈಲಿ ಮುಂತಾದವು. ಪ್ರತಿ ಘಟನೆಗಳಿಗೂ, ಕಾಲಗಳಿಗೂ ಅದರದ್ದೇ ಆದ ಐತಿಹಾಸಿಕ ಸ್ವರೂಪಗಳಿರುತ್ತವೆ.  ಬುದ್ಧದೇವದಾಸ ಗುಪ್ತಾ ಅವರು ಉದ್ದೇಶಪೂರ್ವಕವಾಗಿಯೇ ಐತಿಹಾಸಕ ಸ್ವರೂಪಗಳನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸುವುದಿಲ್ಲ. ಆ ಎಲ್ಲಾ ಘಟನೆಗಳಿಗೂ ಆದಿಸ್ವರೂಪವನ್ನು ತಂದುಕೊಂಡುವ ಕೆಲಸವನ್ನು ಮಾಡುತ್ತಾರೆ. ಕಾಲಾತೀತತೆಯನ್ನೂ ಚಿತ್ರದಲ್ಲಿ ಗುರುತಿಸಬಹುದು. ಹೀಗಾಗಿ ಗುಪ್ತಾ ಅವರ ಸಿನಿಮಾಗಳು ಸದ್ಯದ ಭಾರತದ ಕಥೆಯನ್ನು ಹೇಳುವುದರೊಂದಿಗೆ ಮನುಷ್ಯ ಪ್ರವೃತ್ತಿಯಲ್ಲಿರುವ ಕ್ರೌರ್ಯ ಮತ್ತು ವಿನಾಶಕಾರಿ ಸ್ವಭಾವವನ್ನು ಪ್ರೇಕ್ಷಕರ ಮುಂದಿಡುತ್ತದೆ. ಈ ರೀತಿ ಸಿನಿಮಾ ಕಟ್ಟುವ ಕ್ರಮ ಭಾರತೀಯ ಮತ್ತು ಜಾಗತಿಕ ಸಂದರ್ಭದಲ್ಲಿ ಬಹಳ ಅಪರೂಪವಾಗಿ ಗುರುತಿಸಲ್ಪಟ್ಟಿದೆ.

  • ಗಿರೀಶ್ ಕಾಸರವಳ್ಳಿ.

0 Comments

Related Articles

Related

ಕಥಾ ಚಿತ್ರದಲ್ಲಿ ಸಾಕ್ಷ್ಯ ಚಿತ್ರದ ಪರಂಪರೆ: ದ ಬ್ಯಾಟಲ್ ಆಫ್ ಅಲ್ಜಿಯರ್ಸ್

ಕಥಾ ಚಿತ್ರದಲ್ಲಿ ಸಾಕ್ಷ್ಯ ಚಿತ್ರದ ಪರಂಪರೆ: ದ ಬ್ಯಾಟಲ್ ಆಫ್ ಅಲ್ಜಿಯರ್ಸ್

ದ ಬ್ಯಾಟಲ್ ಆಫ್ ಅಲ್ಜಿಯರ್ಸ್ ಸಿನಿಮಾ ಭಾರೀ ಜನಪ್ರಿಯವಾಯಿತಲ್ಲದೆ, ವ್ಯಾಪಕ ಮನ್ನಣೆಯನ್ನೂ ಪಡೆಯಿತು. ‘Venice’ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲೂ ‘ದ ಬ್ಯಾಟಲ್ ಆಫ್ ಅಲ್ಜಿಯರ್ಸ್’ ಪ್ರದರ್ಶನ ಕಂಡಿತು. ಅಲ್ಲದೇ, ಹಲವಾರು ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂಡು, ಚಿತ್ರಕಥೆ ಮತ್ತು ನಿರ್ದೇಶನ ವಿಭಾಗದಲ್ಲಿ ಆಸ್ಕರ್ ಗೆ ಭಾಜನವಾಯಿತು. ಒಂದೇ ವರ್ಷದಲ್ಲಿ ಮೂರು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಸಿನಿಮಾ ಎಂಬ ಹೆಗ್ಗಳಿಕೆ ಇಂದಿಗೂ ಈ ಚಿತ್ರದ ಹೆಸರಿನಲ್ಲಿದೆ.

read more
ಸಂಗೀತಗಳು ಸಮುದಾಯದ ಭಾಗವಾಗಬೇಕು: ‘ಕಾಡು’ ಸಿನಿಮಾ ವಿಶ್ಲೇಷಣೆ

ಸಂಗೀತಗಳು ಸಮುದಾಯದ ಭಾಗವಾಗಬೇಕು: ‘ಕಾಡು’ ಸಿನಿಮಾ ವಿಶ್ಲೇಷಣೆ

‘ಕಾಡು’ 1973ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಗಿರೀಶ್ ಕಾರ್ನಾಡ್ ಸ್ವತಂತ್ರವಾಗಿ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿ ಆಧಾರಿತವಾದ ಈ ಚಿತ್ರಕ್ಕೆ ಸಾಕಷ್ಟು ಜನಮನ್ನಣೆ ದೊರಕಿದೆ. ಆಗಿನ ಕಾಲದ ಕನ್ನಡ ಸಾಹಿತ್ಯ ಪರಂಪರೆಗೆ ಅನುಗುಣವಾಗಿ. ಈ ಚಿತ್ರವನ್ನು ಗಮನಿಸಿದರೆ ಬಹಳ ಮಹತ್ವದ ವಿಚಾರಗಳು ತಿಳಿಯುತ್ತದೆ. ನವ್ಯರು ಪ್ರಶ್ನಿಸುತ್ತಿದ್ದ ಅನೇಕ ಅಂಶಗಳನ್ನು ಈ ಕಥೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

read more
THE OTT ERA

THE OTT ERA

OTT or Over-the-top, is a convenient little term which describes a new way to watch movies and TV shows whenever we want, on a variety of devices, and without the use of traditional broadcast, cable, or satellite pay-tv providers.

read more