ಒಂದು ಸಿನಿಮಾ ಎಂದಾಕ್ಷಣ ನಮಗೆ ಅದರಲ್ಲಿ ಅಭಿನಯಿಸಿದ/ಅಭಿನಯಿಸುತ್ತಿರುವ ನಟ, ನಟಿ, ನಿರ್ದೇಶಕರ ರೂಪ ಕಣ್ಮುಂದೆ ಬರುತ್ತದೆ. ಆದರೆ 80,90ರ ದಶಕದ ಸಿನಿಮಾಗಳು ಪ್ರಸಾರವಾದ ಸಂದರ್ಭದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲೊಂದು ಸಾಮಾನ್ಯ ಹೆಸರು ಪ್ರತಿಯೊಬ್ಬರ ಗಮನ ಸೆಳೆಯುತ್ತದೆ. ಅದು ಉಡುಪಿ ಜಯರಾಂ ಎಂಬ ನೃತ್ಯ ಬ್ರಹ್ಮನ ಹೆಸರು.
ಹಿಂದಿನ ಕಾಲದ ಹಲವು ದಿಗ್ಗಜ ನಟ-ನಟಿಯರಿಗೆ ನೃತ್ಯ ನಿರ್ದೇಶನ ಮಾಡಿ ‘ಸ್ಟಾರ್’ ಪಟ್ಟ ಗಿಟ್ಟಿಸಿಕೊಂಡವರು ಈ ಉಡುಪಿ ಜಯರಾಂ. ದಕ್ಷಿಣ ಸಿನಿಮಾ ರಂಗದಲ್ಲಿ ಬಹುಬೇಡಿಕೆಯ ಕೊರಿಯೋಗ್ರಾಫರ್ ಆಗಿದ್ದ ಇವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ತುಳು ಮಾತ್ರವಲ್ಲದೆ ಸಿನ್ಹಾಳ ಭಾಷೆಗಳ ಹಾಡುಗಳಿಗೂ ನೃತ್ಯ ಸಂಯೋಜಿಸಿ ಅದ್ಭುತವನ್ನು ಸಾಧಿಸಿದ್ದರು. ಕನ್ನಡದ ಸ್ಟಾರ್ ನಟರಾಜ ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ನಾಗ್ ಸಹೋದರರ ಜೊತೆಗೆ ಎಂಜಿಆರ್, ಎನ್.ಟಿ ರಾಮರಾವ್, ಅಕ್ಕಿನೇನಿ, ಕಮಲ್, ಚಿರಂಜೀವಿ ಸೇರಿದಂತೆ ಹಲವು ಕಲಾವಿದರಿಗೆ ಕೊರಿಯೋಗ್ರಫಿ ಮಾಡಿದ್ದ ಇವರು ನೃತ್ಯವನ್ನು ದೈವೀ ಸ್ವರೂಪದಲ್ಲಿ ಕಂಡಿದ್ದರು.
ಉಡುಪಿಯ ಬಾಳೇಕುದ್ರೆ ಎಂಬ ಊರಿನಲ್ಲಿ 28 ನವೆಂಬರ್ 1929ರಲ್ಲಿ ಜನಿಸಿದ್ದ ಜಯರಾಂ, ತಂದೆ ಆನಂದ ಭಟ್ಟರೊಂದಿಗೆ ಚಿಕ್ಕ ವಯಸ್ಸಿನಲ್ಲೇ ಕಣಿವೆ ಪ್ರದೇಶ, ದಕ್ಷಿಣ ಕೆನರಾ ಮುಂತಾದ ಕಡೆ ಪ್ರವಾಸ ಮಾಡಿ ನೃತ್ಯ ಮತ್ತು ಸಂಗೀತದ ಮೇಲೆ ಹೆಚ್ಚಿನ ಒಲುಮೆ ಬೆಳೆಸಿಕೊಳ್ಳುತ್ತಾರೆ. ತಾಯಿ ಜಲಜಮ್ಮ ಕೂಡ ಮಗನ ಸಾಧನೆಗೆ ಬೆಂಬಲವಾಗಿ ನಿಂತರೂ, ಜಯರಾಂ ಅವರಿಗೆ ತಮ್ಮ 5ನೇ ವಯಸ್ಸಿಗೆ ಮಾತೃವಿಯೋಗವಾಗುತ್ತದೆ. ನಂತರ ಮಲತಾಯಿ ಭವಾನಿಯ ಆಶ್ರಯದಲ್ಲಿ ಬೆಳೆದ ಇವರಿಗೆ ಸಂತಸದ ಜೀವನ ಎಂಬುದು ಮರೀಚಿಕೆಯಾಯಿತು. ಹೊಟ್ಟೆಪಾಡಿಗಾಗಿ ಅಡಿಕೆ ಸುಲಿಯಲು ತೆರಳುತ್ತಿದ್ದಾಗ ಬದುಕಿನ ನೈಜತೆಯ ಅರಿವಾಗತೊಡಗಿದವು. ಬಡತನ ಹಾಸುಹೊಕ್ಕಾಗಿ ಅಕ್ಕನ ಸಹಾಯದಿಂದ ಹೊಟೇಲ್ ಒಂದರಲ್ಲಿ ಕೆಲಸ ಮಾಡತೊಡಗಿದ್ದರು.
ನಂತರ ಪದ್ಮನಾಭ ಭಟ್ ಎಂಬವರಿಂದ ನೃತ್ಯ ಮತ್ತು ಸಂಗೀತ ಕಲಿತ ಜಯರಾಂ, ಮಧುಸೂಧನ್ ಎಂಬ ಗುರುಗಳಿಂದ ಭರತನಾಟ್ಯಂ ಅಭ್ಯಾಸದಲ್ಲಿ ನಿರತರಾಗುತ್ತಾರೆ. ಕಥಕ್, ಕಥಕ್ಕಳಿ, ಮಣಿಪುರಿ ನೃತ್ಯ, ಕುಚುಪ್ಪುಡಿ, ಭಾಂಗ್ರಾ ಶೈಲಿಯ ನೃತ್ಯ ಪ್ರಕಾರಗಳಲ್ಲೂ ಪರಿಣಿತರಾಗುತ್ತಾರೆ. ತಮ್ಮ 17ನೇ ವಯಸ್ಸಿನಲ್ಲಿ ಉಡುಪಿಯಿಂದ ಮದ್ರಾಸ್ ಗೆ ತೆರಳಿದ ಅವರಿಗೆ ಜೆಮಿನಿ ಪಿಚ್ಚರ್ಸ್ ಅವರ ಚಂದ್ರಲೇಖ ಸಿನಿಮಾದಲ್ಲಿ ಬ್ಯಾಂಡ್ ಮಾಸ್ಟರ್ ಆಗಿ ಅವಕಾಶ ಸಿಗುತ್ತದೆ.

ಡಾ. ರಾಜಕುಮಾರ್ ಅವರ ಮೊದಲ ಚಿತ್ರ “ಬೇಡರ ಕಣ್ಣಪ್ಪ”ದಲ್ಲಿ(1954) ಸಹಾಯಕ ಕೊರಿಯೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಾರೆ. 1956ರಲ್ಲಿ ಭಾಗ್ಯೋದಯ ಸಿನಿಮಾದ ಮೂಲಕ ಸ್ವತಂತ್ರ ನೃತ್ಯ ಸಂಯೋಜಕರಾಗುತ್ತಾರೆ. ಇಲ್ಲಿಂದಲೇ ವೃತ್ತಿ ಜೀವನದ ಮಹೋನ್ನತಿಯನ್ನು ಕಂಡ ಜಯರಾಂ 500ಕ್ಕೂ ಅಧಿಕ ಕನ್ನಡ ಸಿನಿಮಾಗಳಿಗೆ ನೃತ್ಯ ನಿರ್ದೆಶಕರಾಗುತ್ತಾರೆ. ಮಾತ್ರವಲ್ಲದೆ ಎಂಜಿಆರ್ ಅವರ “ನಾಳೈ ನಮ್ಮದೈ” ಹಾಗೂ ಶಿವಾಜಿ ಗಣೇಶನ್ ಅವರ “ಕರ್ಣನ್” ಚಿತ್ರಗಳಿಗೂ ಕೊರಿಯೋಗ್ರಫಿ ಮಾಡಿದ್ದಾರೆ.
ಡಾ. ರಾಜ್ ಅವರ ಹಲವು ಚಿತ್ರಗಳನ್ನು ಗಮನಿಸಿದರೆ ಅಲ್ಲಿ ಜಯರಾಂ ಅವರ ನೃತ್ಯ ನಿರ್ದೇಶನವಿರುತ್ತಿದ್ದವು. ಅವರು ಡ್ಯಾನ್ಸ್ ಕಲಿಸಿದರೆ ತಾನದನ್ನು ಮಾಡಬಲ್ಲೇ ಎಂಬ ಧೈರ್ಯ ಅಣ್ಣಾವ್ರಿಗಿದ್ದರಿಂದ ಇಬ್ಬರ ನಡುವೆ ಆತ್ಮೀಯತೆ ಬಹಳ ಬೆಳೆದಿದ್ದವು. ಹೆಚ್ಚಿನ ಸಂದರ್ಭದಲ್ಲಿ ಶೂಟಿಂಗ್ ಗೆ ಮೊದಲೇ ಜಯರಾಂ ನೃತ್ಯಗಾರರಿಗೆ ಕಠಿಣ ತರಬೇತಿ ನೀಡುತ್ತಿದ್ದರು. ಗ್ರೂಪ್ ಡ್ಯಾನ್ಸ್ ಗಳಿದ್ದ ಸಂದರ್ಭದಲ್ಲಿ ಮೊದಲೇ ರೆಕಾರ್ಡ್ ಮಾಡಿದ ಕ್ಯಾಸೆಟ್ ಪಡೆದು ಮದ್ರಾಸ್ ನಲ್ಲಿ ಕಂಪೋಸ್ ಮಾಡುತ್ತಿದ್ದರು. ಶೂಟಿಂಗ್ ದಿವಸ ತರಬೇತಿ ನೀಡುವುದು ಬಹಳ ಕಷ್ಟಕರವಾದ್ದರಿಂದ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅವರ ಹವ್ಯಾಸಗಳಲ್ಲೊಂದಾಗಿತ್ತು. ಸಾಮಾನ್ಯವಾಗಿ ಅನೇಕ ನಿರ್ದೇಶಕರು ಪಾಶ್ಚಾತ್ಯ ಶೈಲಿಯ ನೃತ್ಯಕ್ಕೆ ಹೆಚ್ಚಾಗಿ ತಮ್ಮನ್ನು ಅಳವಡಿಸಿಕೊಳ್ಳುತ್ತಾರೆ. ಆದರೆ ಜಯರಾಂ ಸ್ಥಳೀಯ ಮತ್ತು ಸಾಂಪ್ರದಾಯಿಕ ನೃತ್ಯ ಪ್ರಕಾರಗಳಿಗೆ ಹೆಚ್ಚಿನ ಮಹತ್ವ ನೀಡಿದ್ದರು.
ಬದುಕು ಬಂಗಾರವಾಯ್ತು, ಕವಿರತ್ನ ಕಾಳಿದಾಸ, ಪ್ರೇಮದ ಕಾಣಿಕೆ, ಬಂಗಾರದ ಮನುಷ್ಯ, ಸನಾದಿ ಅಪ್ಪಣ್ಣ, ಬಬ್ರುವಾಹನ, ಗಿರಿ ಕನ್ಯೆ, ಜೀವನ ಚೈತ್ರ, ಭೂಮಿಗೆ ಬಂದ ಭಗವಂತ, ಸೊಸೆ ತಂದ ಸೌಭಾಗ್ಯ, ಮಲಯ ಮಾರುತ, ಮುತ್ತಿನ ಹಾರ, ಗೀತಾ, ಪುಟಾಣಿ ಎಜೆಂಟ್ 123, ಚಂಡಿ-ಚಾಮುಂಡಿ ಮುಂತಾದವು ಇವರು ನೃತ್ಯ ಹೇಳಿಕೊಟ್ಟು ದೃಶ್ಯವೈಭವ ಸಂಯೋಜಿಸಿದ ಪ್ರಸಿದ್ಧ ಚಿತ್ರಗಳು.

“ನೃತ್ಯದ ಬಗೆಗಿದ್ದ ಅವರಿಗೆ ಇದ್ದ ಆಸಕ್ತಿ, ಶ್ರದ್ಧೆ ಇಂದಿನ ಕಾಲದ ಪ್ರತಿಯೊಬ್ಬರಿಗೂ ಸ್ಪೂರ್ತಿ. ತಮ್ಮ ಕೊನೆಗಾಲದಲ್ಲಿ ಅಲ್ ಝೈಮರ್ ಕಾಯಿಲೆಗೆ ತುತ್ತಾಗಿ ದಯನೀಯ ಸ್ಥಿತಿಯನ್ನು ಅನುಭವಿಸಿದ್ದರು. ಹೆಂಡತಿ, ಮಕ್ಕಳು, ಮೊಮ್ಮಕ್ಕಳನ್ನು ಮಾತ್ರವಲ್ಲದೆ ಊಟ ಮಾಡಬೇಕು ಎಂಬುದನ್ನೇ ಮರೆತುಬಿಟ್ಟಿದ್ದರು. ಆದರೆ, ನೃತ್ಯವನ್ನು ಮಾತ್ರ ಮರೆತಿರಲಿಲ್ಲ. ಶಾಸ್ತ್ರೀಯ ಸಂಗೀತ ಕೇಳಿದೊಡನೆ ಅವರು ಕುಣಿಯುತ್ತಿದ್ದರು. ಅಷ್ಟರ ಮಟ್ಟಿಗೆ ನೃತ್ಯ ಅವರಲ್ಲಿ ಬೆರೆತಿತ್ತು” ಎಂದು ಮೊಮ್ಮಗಳಾದ ಅಭಿನಯ ರೋಹನ್ ಕಾರ್ಯಕ್ರಮವೊಂದರಲ್ಲಿ ನೆನಪಿಸಿಕೊಳ್ಳುತ್ತಾರೆ.
ಜಯರಾಂ ಅವರಿಗೆ ಉಡುಪಿ ಶ್ರೀಕೃಷ್ಣ ಎಂದರೇ ಅಚ್ಚುಮೆಚ್ಚು. ಉಡುಪಿ ಅವರ ಹುಟ್ಟೂರು ಕೂಡ ಆಗಿದ್ದರಿಂದ ಉಡುಪಿ ಜಯರಾಂ ಎಂಬ ಹೆಸರಿನಲ್ಲೇ ಪ್ರಖ್ಯಾತಗೊಂಡರು. ಸಾಂಪ್ರದಾಯಿಕ ನೃತ್ಯ ಪ್ರಕಾರಕ್ಕೆ ತಮ್ಮ ಕೊನೆಗಾಲದವರೆಗೂ ಹೆಚ್ಚಿನ ಮನ್ನಣೆ ನೀಡಿ, ಮಾದರಿಯ ಜೀವನ ನಡೆಸಿದರು. ಸಿನಿಮಾದಲ್ಲಿನ ದೃಶ್ಯವೈಭವಕ್ಕೆ ಹೊಸ ಅರ್ಥ ಕಲ್ಪಿಸಿ 2004 ಆಕ್ಟೋಬರ್ 13ರಂದು ಚೆನ್ನೈನಲ್ಲಿ ಇಹಲೋಕ ತ್ಯಜಿಸಿದ್ದರು.

0 Comments