ಬದುಕಿನ ಎಲ್ಲಾ ಮುಖಗಳ ಅನಾವರಣ: The Story of Qiu Ju

‘The Story of Qiu Ju’ 1992ರಲ್ಲಿ ಬಿಡುಗಡೆಯಾದ ಚೈನಾದ ಸಿನಿಮಾ. ‘ಕ್ಯೂ-ಝೂ’ ಎಂದು ಹಲವೆಡೆ ಪರಿಗಣಿಸಲ್ಪಟ್ಟರೂ ಇದನ್ನು ಚೈನೀಸ್ ಪರಿಭಾಷೆಯಲ್ಲಿ ‘ಶೋ-ಚೂ’ ಎಂದು ಕರೆಯುವುದು ಸರಿಯಾದ ಕ್ರಮ. ಝಾಂಗ್ ಯಿಮೋವ್ ಈ ಚಿತ್ರವನ್ನು ನಿರ್ದೇಶಿಸಿದವರು. ಇವರನ್ನು 5ನೇ ತಲೆಮಾರಿನ ಸಿನಿಮಾ ಸಿರ್ದೇಶಕ ಎಂದು ಪರಿಗಣಿಸಬಹುದು. ಚೈನಾದಲ್ಲಿ ಮೊದಲಿನಿಂದಲೂ ಬಹಳ ಸಿನಿಮಾಗಳನ್ನು ತೆರೆಗೆ ತರಲಾಗುತ್ತಿತ್ತು. ತಂತ್ರಜ್ಞಾನಗಳನ್ನು ಸಮಪರ್ಕವಾಗಿ ಬಳಸಿಕೊಂಡು ಹಾಲಿವುಡ್ ಗೆ  ಸೆಡ್ಡು ಹೊಡೆಯುವ ರೀತಿಯಲ್ಲಿ ಈ ದೇಶದ ಚಿತ್ರಗಳಿರುತ್ತಿದ್ದವು.

ಜಪಾನೀಸ್ ಆಕ್ರಮಣದ ನಂತರದ ಸಿನಿಮಾಗಳನ್ನು ಮೊದಲನೇ ತಲೆಮಾರಿನ ಸಿನಿಮಾಗಳೆಂದು ಕರೆಯುತ್ತೇವೆ. 1931 ರಿಂದ 1941ರ ಕಾಲಘಟ್ಟದವರೆಗೆ ಹೆಚ್ಚು ಹಾಲಿವುಡ್ ಮಾದರಿಯ ರೀತಿಯಲ್ಲಿ ಸಿನಿಮಾಗಳು ತಯಾರಾಗುತ್ತಿದ್ದವು. ಎರಡನೇ ಮಹಾಯುದ್ಧದ ನಂತರ ಚೈನಾದಲ್ಲಿ ವಿನೂತನ ಮಾದರಿಯ ಸಿನಿಮಾಗಳು ತೆರೆಗೆ ಅಪ್ಪಳಿಸಲಾರಂಭಿಸಿದವು. ಇದನ್ನು 2ನೇ ತಲೆಮಾರಿನ ಸಿನಿಮಾಗಳೆಂದು ಕರೆಯಲಾಯಿತು. 1950ರ ಸಮಯದಲ್ಲಿ ಎಲ್ಲೆಡೆ ಸಾಂಸ್ಕೃತಿಕ ಕ್ರಾಂತಿಗಳು ಸಂಭವಿಸತೊಡಗಿದವು. ಈ ಅವಧಿಯಲ್ಲಿ ಅಂದರೇ 1949ರಿಂದ 1967ರವರೆಗೆ ಈ ಸಾಂಸ್ಕೃತಿಕ ಕ್ರಾಂತಿಯಲ್ಲಿ ತೊಡಗಿದವರು ಸಿನಿಮಾ ಮಾಧ್ಯಮವನ್ನು ಬಳಸಿಕೊಳ್ಳಲಾರಂಭಿಸಿದರು. ನಂತರದ ಸಿನಿಮಾಗಳು ಪ್ರೋಪಗಂಡ ಮಾದರಿಯಲ್ಲಿರುತ್ತಿದ್ದವು. ಚೈನೀಸ್ ಎಡಪಂಥೀಯ ಧೋರಣೆಗಳನ್ನು ಜನಪ್ರಿಯಗೊಳಿಸುವುದು, ಸಾಧನೆಗಳನ್ನು ಜನತೆಗೆ ಮುಟ್ಟಿಸುವುದು ಇದರ ಕಾರ್ಯವಾಗಿತ್ತು.  ಈ ಕಾರಣದಿಂದ ಸಿನಿಮಾಗಳು ಕೂಡ ಬಹಳ ಜನಪ್ರಿಯವಾಗತೊಡಗಿದವು.

ಸಾಂಸ್ಕೃತಿಕ ಕ್ರಾಂತಿ ಸಮಯದಲ್ಲಿ ಮಕ್ಕಳನ್ನು ಶಾಲೆಯಿಂದ ಹೊರಗೆ ಕಳುಹಿಸಲಾಗುತ್ತಿತ್ತು. ಮೆಕ್ಯಾನಿಕ್ ಸೇರಿದಂತೆ ವಿವಿಧ ವೃತ್ತಿಗಳಲ್ಲಿ ಇವರು ತೊಡಗಿಕೊಳ್ಳುತ್ತಿದ್ದರು. ಝಾಂಗ್ ಯಿಮೋವ್ ಕೂಡ ಇದೇ ಮಾದರಿಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದರು. 1984ರವರೆಗೆ Scar ಸಿನಿಮಾಗಳು ಅಂದರೇ, ಸಾಂಸ್ಕೃತಿಕ ಕ್ರಾಂತಿಯ ಸಮಯದಲ್ಲಾದ ಅನ್ಯಾಯಗಳನ್ನು ತೋರ್ಪಡಿಸುವ ಸಿನಿಮಾಗಳು ಬರುತ್ತಿದ್ದವು. ಇದೆಲ್ಲದರ ನಂತರ 5ನೇ ತಲೆಮಾರಿನ ನಿರ್ದೇಶಕರು ಚಿತ್ರರಂಗ ಪ್ರವೇಶಿಸುತ್ತಾರೆ.

ಸಾಂಸ್ಕೃತಿಕ ಕ್ರಾಂತಿಯ ಸಮಯದಲ್ಲಿ ಬೀಜಿಂಗ್ ಫಿಲ್ಮ್ ಆಕಾಡೆಮಿಯ ಕದ 19 ವರ್ಷಗಳ ಕಾಲಾವಧಿಯವರೆಗೆ ಮುಚ್ಚಿತ್ತು. ಪರಿಣಾಮವಾಗಿ ಸಿನಿಮಾಗಳು ಮತ್ತು ಅದರ ಗುಣಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಯಿತು. ಸಾಂಸ್ಕೃತಿಕ ಕ್ರಾಂತಿ ಕೊನೆಗೊಂಡ ನಂತರದಲ್ಲಿ ಫಿಲ್ಮ್ ಆಕಾಡೆಮಿಗೂ ಮರುಜೀವ ಬಂತು. ಹೊಸ ಹೊಸ ನಿರ್ದೇಶಕರೂ ರಂಗಕ್ಕಿಳಿಯುತ್ತಾರೆ. ಝಾಂಗ್ ಯಿಮೋವ್ ಕೂಡ ಅವರಲ್ಲೊಬ್ಬ. ಇವರ ಕಾಲಾವಧಿಯಲ್ಲಿ ವಿನೂತನ ಮಾದರಿಯ ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದವು. ಇದು ಚೈನೀಸ್ ಸಿನಿಮಾ ರಂಗಕ್ಕೆ ಹೊಸ ಆಯಾಮವನ್ನು ಒದಗಿಸಿತು.

ಝಾಂಗ್ ಯಿಮೋವ್ ತನ್ನ ಆರಂಭದ ಕಾಲಾವಧಿಯಿಂದಲೇ ಅತ್ಯುತ್ತಮ ಸಿನಿಮಾಗಳನ್ನು ನಿರ್ದೇಶಿಸಲಾರಂಭಿಸಿದ. ಪರಿಣಾಮವಾಗಿ ಜಗತ್ತಿನಾದ್ಯಂತ ಆತನನ್ನು ಗುರುತಿಸಲಾರಂಭಿಸಿದರು. ಆತನ ಮೊದಲ ಸಿನಿಮಾ 1988ರಲ್ಲಿ ತೆರೆಗೆ ಬಂದ ‘ರೆಡ್ ಸೋರ್ಘ್ಯಾಂ’ ಜಾಗತಿಕ ಮನ್ನಣೆ ಪಡೆಯಿತು. ಎರಡನೇ ಸಿನಿಮಾ ‘ಜೋ ಡ್ಯೂ’ 1990ರಲ್ಲಿ ಬೆಳ್ಳಿತೆರೆಗೆ ಅಪ್ಪಳಿಸಿದರೂ ಅದೇ ಖ್ಯಾತಿಯನ್ನು ಮೂರನೇಯ ಚಿತ್ರ ಉಳಿಸಿಕೊಳ್ಳಲಿಲ್ಲ. 4ನೇ ಸಿನಿಮಾ 1991ರಲ್ಲಿ ಬಿಡುಗಡೆಯಾದ ‘ರೈಸ್ ದ ರೆಡ್ ಲ್ಯಾಂಟರ್ನ್’ ಯಿಮೋವ್ ವೃತ್ತಿಜೀವನದಲ್ಲಿ ಅತ್ಯುತ್ತಮ ಸಿನಿಮಾ. ಜಾಗತಿಕ ಸಿನಿಮಾ ರಂಗದ ಹೆಗ್ಗುರುತಾಗಿ ಈ ಚಿತ್ರ ಗುರುತಿಸಲ್ಪಟ್ಟಿತ್ತು. ಮೊದಲಿನ ಸಿನಿಮಾಗಳು ಜನಪ್ರಿಯವಾದರೂ ಯಿಮೋವ್ ಅದೇ ಮಾದರಿಯನ್ನು ತನ್ನ ಮುಂದಿನ ಚಿತ್ರದಲ್ಲಿ ಆರಿಸಿಕೊಳ್ಳಲಿಲ್ಲ. ‘ದ ಸ್ಟೋರಿ ಆಫ್ ಕ್ಯೂ ಝೂ’ ಇವೆಲ್ಲಾ ಸಿನಿಮಾಗಳಿಗಿಂತ ಬಹಳ ಭಿನ್ನವಾಗಿತ್ತು.

ಮೊದಲಿನ ಸಿನಿಮಾ ಶೈಲಿಗಳು ಸಮಾಜದ ಮೇಲೆ, ಪ್ರೇಕ್ಷಕರ ಮೇಲೆ ಬಹಳ ಪರಿಣಾಮ ಬೀರಿದ್ದವು. ಆದರೆ ಅದಕ್ಕೆ ತದ್ವಿರುದ್ದವಾದ ಶೈಲಿಯಲ್ಲಿ ಅಂದರೆ ಸಾಕ್ಷ್ಯಚಿತ್ರ ಮಾದರಿಯಲ್ಲಿ, ನಿಧಾನಗತಿಯ, ನಟನೆಗೆ ಆಷ್ಟೇನೂ ಪ್ರಾಮುಖ್ಯತೆ ಕೊಡದ ರೀತಿಯಲ್ಲಿ ‘ದ ಸ್ಟೋರಿ ಆಫ್ ಕ್ಯೂ ಝೂ’ ಚಿತ್ರವನ್ನು ನಿರ್ದೇಶಿಸಿದ್ದರು. ಇದನ್ನು ಗಮನಿಸಿದಾಗ 5ನೇ ತಲೆಮಾರಿನ ಚಿತ್ರಗಳಲ್ಲಿ ಯಿಮೋವ್ ಗೆ ಅಸಮಾಧಾನ ಇತ್ತು ಎಂಬುದು ಅರಿವಿಗೆ ಬರುತ್ತದೆ. 1980ರಲ್ಲಿ ಬಿಡುಗಡೆಯಾದ ಇರಾನಿಯನ್ ಸಿನಿಮಾದ ಶೈಲಿಯನ್ನು ಬಳಸಿಕೊಂಡು, 1992ರಲ್ಲಿ ಹೊಸ ಮಾದರಿಯನ್ನು ಯಿಮೋವ್ ಪ್ರೇಕ್ಷಕರ ಮುಂದಿಟ್ಟಿದ್ದ.

ಚೈನಾದ ‘The wan family’s lawsuit’ ಕಾದಂಬರಿಯನ್ನಾಧರಿಸಿ ‘ದ ಸ್ಟೋರಿ ಆಫ್ ಕ್ಯೂ ಝೂ’ ಸಿನಿಮಾವನ್ನು ನಿರ್ದೇಶಿಸಲಾಗಿತ್ತು. ಹಳ್ಳಿಗಾಡಿನಲ್ಲಿ ಮಹಿಳೆಯೊಬ್ಬಳು ರೈತ ಕುಟುಂಬದಲ್ಲಿ ವಾಸಿಸುತ್ತಿದ್ದಳು. ಕೆಂಪು ಮೆಣಸಿನಕಾಯಿಯನ್ನು ಬೆಳೆದು-ಮಾರುವುದು ಇವರ ಕಾಯಕ. ಗ್ರಾಮದ ಮುಖ್ಯಸ್ಥನಿಗೂ ಹಾಗೂ ಈ ಮಹಿಳೆಯ ಗಂಡನಿಗೂ ಒಮ್ಮೆ ಜಗಳವಾಗುತ್ತದೆ. ಇದು ತಾರಕಕ್ಕೇರಿದ ಕಾರಣ ಗ್ರಾಮ ಮುಖ್ಯಸ್ಥ, ಆಕೆಯ ಗಂಡನ ಸೊಂಟದ ಕೆಳ ಭಾಗಕ್ಕೆ ಒದೆಯುತ್ತಾನೆ. ಪರಿಣಾಮವಾಗಿ ತೀವ್ರ ಯಾತನೆ ಅನುಭವಿಸುತ್ತಿದ್ದ ಆಕೆಯ ಗಂಡನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹೊಡೆತದ ಪ್ರಭಾವ ಗಂಭೀರವಾಗಿದೆ ಎಂದು ವೈದ್ಯರು ಕೂಡ ಹೇಳಿದ್ದರಿಂದ, ತನಗೆ ಸಮಸ್ಯೆಯಾಗುವುದು ಬೇಡ ಎಂಬ ಕಾರಣಕ್ಕೆ ಗ್ರಾಮ ಮುಖ್ಯಸ್ಥನ ಮೇಲೆ ಪೊಲೀಸರಿಗೆ ದೂರು ನೀಡುತ್ತಾಳೆ. ಇಡೀ ಸಿನಿಮಾದಲ್ಲಿ ಪ್ರಕರಣದ ತೀರ್ಪಿಗಾಗಿ ಓಡಾಡುವುದೇ ಈಕೆಯ ಕಾಯಕವಾಗುತ್ತದೆ.

ಮೊದಲಿಗೆ ಪೊಲೀಸ್ ಮೇಲಾಧಿಕಾರಿಯ ಬಳಿ ತನಗೆ ಅನ್ಯಾಯವಾಗಿದೆ ಎಂದು ಹೇಳುತ್ತಾಳೆ. ಬಳಿಕ ತಾಲೂಕು ಮಟ್ಟದ ಅಧಿಕಾರಿಗಳ ಬಳಿ ತೆರಳಿ ದೂರು ದಾಖಲಿಸುತ್ತಾಳೆ. ನ್ಯಾಯ ದೊರಕಿಸಿಕೊಡಿ ಎಂದು ಅವಲತ್ತುಕೊಳ್ಳುತ್ತಾಳೆ. ಅವರು ಪರಿಹಾರದ ಹಣ ದೊರಕಿಸಿಕೊಡುತ್ತೇವೆ ಎಂಬ ಮಾತು ಕೊಟ್ಟರೂ, ಪರಿಹಾರ ಬೇಡ, ಕಳೆದುಹೋಗಿರುವ ಮಾರ್ಯಾದೆ ಸಿಕ್ಕರೆ ಸಾಕು ಎಂದು ಭಿನ್ನವಿಸಿಕೊಳ್ಳುತ್ತಾಳೆ.  ಅದಕ್ಕೆ ಅಧಿಕಾರಿಗಳು ಒಪ್ಪದಿದ್ದರಿಂದ, ಜಿಲ್ಲಾ ಮಟ್ಟದ ಅಧಿಕಾರಿಗಳ ಬಳಿ ತೆರಳುತ್ತಾಳೆ. ಅವರು ಕೂಡ ಪರಿಹಾರ ಹಣವನ್ನು ಮಾತ್ರ ಕೊಡಲಾಗುವುದು ಎಂದು ಪುನರಾವರ್ತನೆ ಮಾಡುತ್ತಾರೆ. ಎಲ್ಲೂ ಈಕೆಗೆ ನ್ಯಾಯ ಸಿಗುವುದಿಲ್ಲ.

ಆ ಸಮಯದಲ್ಲಿ ಆಕೆ ತುಂಬು ಗರ್ಭಿಣಿಯಾದ್ದರಿಂದ ಓಡಾಟದ ಸಮಯದಲ್ಲಿ ತೀವ್ರತರವಾದ ನೋವನ್ನು ಅನುಭವಿಸುತ್ತಿರುತ್ತಾಳೆ. ಒಮ್ಮೆ ಗ್ರಾಮದಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತಿತ್ತು. ಊರಿನಲ್ಲಿ ಯಾರು ಕೂಡ ಇರಲಿಲ್ಲ. ಈಕೆಗೆ ಹೆರಿಗೆ ನೋವು ಆರಂಭವಾದ್ದರಿಂದ ಗಂಡ ಚಡಪಡಿಸಲಾರಂಭಿಸುತ್ತಾನೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲೂ ಯಾರು ಸಿಗುವುದಿಲ್ಲ. ಕೊನೆಗೆ ಗ್ರಾಮದ ಮುಖ್ಯಸ್ಥನನ್ನು ಕರೆದುಕೊಂಡು ಬಂದು, ಆತನ ಮೋಟಾರ್ ಬೈಕಿನಲ್ಲಿ ಆಸ್ಪತ್ರೆಗೆ ದಾಖಲಿಸುತ್ತಾನೆ. ಈ ಘಟನೆಯ ನಂತರ ಮಹಿಳೆ ಮತ್ತು ಮುಖ್ಯಸ್ಥನ ನಡುವೆ ಯಾವುದೇ ದ್ವೇಷವಿರುವುದಿಲ್ಲ.

ಒಂದು ವರ್ಷದ ನಂತರ ಆಕೆಯ ಮಗುವಿನ ಜನ್ಮದಿನ ಆಚರಣೆಗೆ ಗ್ರಾಮದ ಮುಖ್ಯಸ್ಥನಿಗೂ ಆಹ್ವಾನ ನೀಡಲಾಗಿತ್ತು. ಆದರೆ ಆತ ಬಹಳ ಹೊತ್ತಾದರೂ ಗೈರಾಗಿರುತ್ತಾನೆ. ಕಾರಣ ತಿಳಿಯಲು ಹೊರಟ ಮಹಿಳೆಗೆ, ಆತನನ್ನು ಕೇಂದ್ರದ ಅಧಿಕಾರಿಗಳು ಬಂಧಿಸಿರುವುದು ಗಮನಕ್ಕೆ ಬರುತ್ತದೆ. ಇದನ್ನು ತಪ್ಪಿಸಲು ಹೊರಟರೂ ಆಗಲೇ ಬಹಳ ತಡವಾಗಿತ್ತು. ಅಧಿಕಾರಿಗಳು ಗ್ರಾಮ ಮುಖ್ಯಸ್ಥನನ್ನು ಬಂಧಿಸಿ ಕರೆದುಕೊಂಡು ತೆರಳುತ್ತಾರೆ. ಇಲ್ಲಿಗೆ ಸಿನಿಮಾ ಮುಕ್ತಾಯವಾಗುತ್ತದೆ. ಅಷ್ಟು ದಿನ ನ್ಯಾಯಕ್ಕಾಗಿ ಪರಿತಪಿಸಿದ ಆ ಮಹಿಳೆ, ಕೊನೆಗೆ ಮಾನವೀಯತೆಗೆ ಬೆಲೆ ಕೊಟ್ಟರೂ, ಕಾಲ ಆಕೆಯ ನಿರ್ಣಯದಂತೆ ನಡೆಯುವುದಿಲ್ಲ.

ನ್ಯಾಯ ಎಂಬುದು ಸ್ಥಿರವಾದ ಕಲ್ಪನೆ. ಮನುಷ್ಯ ಸಂಬಂಧದ ಮೇಲೆ ನ್ಯಾಯ ಎನ್ನುವುದು ನಿರ್ಧರಿತವಾಗುತ್ತದೆ ಎಂಬುದು ಕಥೆಯಲ್ಲಿ ತಿಳಿದುಬರುವ ಅಂಶ. ಇಲ್ಲಿ ನಿರ್ದೇಶಕರು, ಆ ಮಹಿಳೆಯನ್ನು ಪೂರ್ಣವಾಗಿ ಅಸಹಾಯಕಳು ಎನ್ನುವ ರೀತಿ ತೋರಿಸಿಲ್ಲ, ಹಾಗೆಯೇ ಗ್ರಾಮದ ಮುಖ್ಯಸ್ಥನಿಗೂ ದರ್ಪ ಇದೆ ಎಂಬುದನ್ನು ತೋರಿಸಿಲ್ಲ. ಅದರ ಬದಲಿಗೆ ಮಹಿಳೆಯ ಹಠಮಾರಿತನವನ್ನೂ, ಮುಖ್ಯಸ್ಥನ ಒಳ್ಳೆಯತನವನ್ನೂ ಚಿತ್ರಿಕರಿಸುತ್ತಾರೆ.

ಕಾನೂನು ಎಂಬುದು ಮಾನವೀಯತೆಯಿಂದ ಕೂಡಿರುತ್ತದೆ. ಅದರಲ್ಲೂ ಕಾಳಜಿ, ಆರ್ದ್ರತೆ ಇದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಹೀಗಾಗಿ ಸಿನಿಮಾ ಕಟ್ಟುವ ಕ್ರಮದಲ್ಲಿ ಹೊಸತನವಿತ್ತು. ಜಗತ್ತಿನಲ್ಲಿ ವಿಶೇಷವಾಗಿ ಚೈನಾದಲ್ಲಿ ಅಪರಿಚಿವಾದ ಕ್ರಮವನ್ನು ಚಿತ್ರದಲ್ಲಿ ಹೇಳುತ್ತಾ ಹೋಗಲಾಗುತ್ತದೆ. ಸಾಮಾನ್ಯ ನಿರೂಪಣೆ ಇದರ ಒಂದು ಭಾಗ. ಇಲ್ಲಿ ಯಾವುದೇ ಮಗ್ಗುಲುಗಳಿಲ್ಲ. ನೇರವಾಗಿ ಹೋಗುವ ಈ ಸಿನಿಮಾದಲ್ಲಿ ಯಾವುದಕ್ಕೂ ವೇದಿಕೆಯನ್ನೊದಗಿಸದೇ, ಅಧಿಕೃತವನ್ನಷ್ಟೇ ತೋರಿಸಲಾಗುತ್ತದೆ. ಸಿನಿಮಾ ಎಂಬ ಕಲೆಯಲ್ಲಿ ಅಧಿಕೃತ ಪ್ರಪಂಚದ ಮಾಹಿತಿಯನ್ನೇ ಹೆಚ್ಚಾಗಿ ನೀಡಲಾಗುತ್ತದೆ. ಯಾವುದೇ ಮಾದರಿಯ ಸಾಮಾಜಿಕ, ನೈಜ ಮಾದರಿಯ ಸಿನಿಮಾಗಳಲ್ಲಿ ಈ ಅಧಿಕೃತತೆ ಎಂಬುದು ಬಹಳ ಮುಖ್ಯ. ಅದಾಗ್ಯೂ  ಈ ಅಧಿಕೃತತೆಯೂ ಸುಳ್ಳನ್ನು ಪ್ರತಿಬಿಂಬಿಸಬಾರದು. ಹೀಗಾಗಿ ಝಾಂಗ್ ಯಿಮೋವ್ ಎಲ್ಲಾ ದಟ್ಟವಾದ ವಿವರಗಳನ್ನು ನೈಜ ಸ್ಥಳದಲ್ಲಿ ಚಿತ್ರಿಕರಿಸಿ, ಅದರ ನಡುವೆ ತನ್ನ ಚಾತುರ್ಯವನ್ನು ತೋರುತ್ತಾನೆ.

Action ನನ್ನು ತೋರಿಸಿದ ಕ್ರಮ ಕೂಡ ಇಲ್ಲಿ ಬಹಳ ಮುಖ್ಯವಾಗುತ್ತದೆ. ಉದಾ: ಗ್ರಾಮದ ಮುಖ್ಯಸ್ಥ ಆ ಮಹಿಳೆಯ ಗಂಡನಿಗೆ ಒದೆಯುವುದನ್ನು ಎಲ್ಲೂ ತೋರಿಸಿಲ್ಲ. ಬದಲಾಗಿ ಆಕೆ ಪ್ರಕರಣ ದಾಖಲಿಸುವಾಗ ಈ ಕುರಿತ ವರದಿಯನ್ನು ಒಪ್ಪಿಸುತ್ತಿರುತ್ತಾಳೆ. ಚಿತ್ರದಲ್ಲಿ ಮುಖ್ಯಪಾತ್ರ ವಹಿಸಿದಾಕೆಯ ಹೆಸರು ಗಾಂಗ್ ಲೀ. ಯಿಮೋವ್ ನಿರ್ದೇಶಿಸಿದ ಎಲ್ಲಾ ಸಿನಿಮಾಗಳಲ್ಲೂ ಆಕೆ ನಟಿಸಿದ್ದಾಳೆ. ಚೈನಾದ ಅತ್ಯಂತ ಸುಂದರ ನಟಿ ಈಕೆ. ಆದರೆ ‘The Story of Qiu Ju’ ಸಿನಿಮಾದಲ್ಲಿ ಈಕೆಯನ್ನು ಸುಂದರವಾಗಿ ತೋರಿಸಲಾಗುವುದಿಲ್ಲ. ಗರ್ಭಿಣಿ, ಆಕೆಯ ಬಟ್ಟೆಗಳು, ಆಕರ್ಷಕವಲ್ಲದ ರೂಪ ಕಂಡಾಗ ಇದು ಅಲ್ಲಿನ ನೈಜ ಗ್ರಾಮಸ್ಥೆ ಎಂದು ಪ್ರೇಕ್ಷಕನಿಗೆ ಅನಿಸಲಾರಂಭಿಸುತ್ತದೆ. ಹೀಗಾಗಿ ನೋಡುಗರ ಗಮನ ಆ ನಟಿಯ ಬಗ್ಗೆಯಾಗಲಿ ಅಥವಾ ಅವಳ ಅಭಿನಯದ ಬಗ್ಗೆಯಾಗಲಿ ಹೋಗದೆ, ಸಮಸ್ಯೆಯ ಬಗ್ಗೆ ಅರಿವು ಮೂಡುತ್ತಾ ಹೋಗುತ್ತದೆ.

ಈ ಸಿನಿಮಾದ ಬಹುದೊಡ್ಡ ಸಾಧನೆಯೆಂದರೇ ಸಮಯ ನಿರ್ವಹಣೆ. ಎಲ್ಲಾ ಚಿತ್ರದಲ್ಲೂ ಸಾಮಾನ್ಯವಾಗಿ ಸಮಯಕ್ಕೆ ಹೆಚ್ಚಿನ ಬೆಲೆ ಕೊಡುತ್ತಾರೆ. ಇದು ಗಮನವನ್ನು ಅತ್ತಿತ್ತ ಸೆಳೆಯದೆ ನೋಡುಗರನ್ನು ಹಿಡಿದಿಟ್ಟುಕೊಳ್ಳುವ ರೀತಿಯಲ್ಲಿರುತ್ತದೆ. ಸಮಯಕ್ಕೆ ಅನುಗುಣವಾಗಿ ಕಥನ ಕ್ರಮ ಇಲ್ಲದಿದ್ದರೇ ಅದನ್ನು ಡೆಡ್ ಟೈಮ್, ಡೆಡ್ ಸ್ಪೇಸ್ ಎಂದು ಹಾಲಿವುಡ್ ಚಿತ್ರರಂಗದಲ್ಲಿ ಕರೆಯಲಾಗುತ್ತದೆ. ಆದರೆ ಯಿಮೋವ್, ಡೆಡ್ ಸ್ಪೇಸ್ ಗಳನ್ನು ಹೆಚ್ಚಾಗಿ ತನ್ನ ಚಿತ್ರದಲ್ಲಿ ಬಳಸಿಕೊಳ್ಳುತ್ತಾನೆ. ಇದು ಕಥೆಯ ಸಾಂದ್ರತೆಯನ್ನು ಹೆಚ್ಚಿಸಿದೆ.

ಸಾಮಾನ್ಯವಾಗಿ ಕತೆಯನ್ನು ಕಟ್ಟುವ ಸಮಯದಲ್ಲಿ, ಅದಕ್ಕೆ ಉಪಕತೆಗಳನ್ನು ಕೂಡ ಸೃಷ್ಟಿಸಲಾಗುತ್ತದೆ. ಆದರೆ ಯಿಮೋವ್ ಈ ಕ್ರಮವನ್ನು ಅನುಸರಿಸುವುದಿಲ್ಲ. ಬದಲಿಗೆ ಯಿಮೋವ್ ಪ್ರತಿಯೊಂದು ಘಟನೆಗಳ ಹಿಂದೆಯೂ ಕೆಲವೊಂದು ವಿವರಗಳನ್ನು ಕಟ್ಟುತ್ತಾ ಹೋಗುತ್ತಾನೆ. ಆ ವಿವರಗಳಿಂದ ಸಿನಿಮಾಕ್ಕೆ ಒಂದು ಧ್ವನಿಶಕ್ತಿ ಬರುತ್ತಿರುತ್ತದೆ.  ಒಮ್ಮೆ ಗ್ರಾಮದ ಮಹಿಳೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮನವಿಯನ್ನು ಕೊಂಡೊಯ್ಯುತ್ತಾಳೆ. ಅಲ್ಲಿರುವ ಅಧಿಕಾರಿಯೊಬ್ಬ ಮದುವೆಯ ನೋಂದಣಿ ಕಾರ್ಯದಲ್ಲಿ ನಿರತನಾಗಿರುತ್ತಾನೆ. ಮಾತ್ರವಲ್ಲದೆ ಅಲ್ಲಿದ್ದ ನೂತನ ದಂಪತಿಗಳಿಗೆ ಕಿಚಾಯಿಸುವ ಕೆಲಸವನ್ನೂ ಮಾಡುತ್ತಿರುತ್ತಾನೆ. ನವವಧು-ವರರಿಬ್ಬರೂ ಆತನ ಪ್ರಶ್ನೆಗಳಿಗೆ ನಾಚಿಕೊಳ್ಳುತ್ತಾರೆ.

ಈ ದೃಶ್ಯ ಎರಡು ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಮುಖವಾಗಿ ಈ ಅಧಿಕಾರಿ ಅಮಾನುಷ ವ್ಯಕ್ತಿ ಅಲ್ಲ ಎಂಬುದನ್ನು ಪ್ರತಿನಿಧಿಸುತ್ತದೆ. ಎಲ್ಲಾ ಮನುಷ್ಯರ ತರವೇ ತಮಾಷೆ ಮಾಡುವ ಗುಣಸ್ವಭಾವವನ್ನು ಹೊಂದಿರುತ್ತಾನೆ ಎಂಬುದನ್ನು ಸೂಚಿಸುತ್ತದೆ. ಎರಡನೇ ಅಂಶ ಎಂದರೇ ಅಲ್ಲಿ ಕೇವಲ ಗ್ರಾಮದ ಮಹಿಳೆಯ ಸಮಸ್ಯೆಗಳು ಮಾತ್ರವಲ್ಲ, ಬೇರೆ ಮಾದರಿಯ ಸಮಸ್ಯೆಗಳೂ ಕೂಡ ಇವೆ ಎಂಬುದನ್ನು ತಿಳಿಸುತ್ತದೆ. ಘಟನೆಯ ಒಳಗೆ ಉಪಕಥೆಯನ್ನು ಇಲ್ಲಿ ಕಟ್ಟಲಾಗುತ್ತದೆ. ಇಲ್ಲಿ dramatic rendering ಇರುವುದಿಲ್ಲ. ಆದರೂ ಸಿನಿಮಾ ಸಪ್ಪೆಯಾಗಿ ಕಾಣುವುದಿಲ್ಲ. ನಾಟಕೀಯ ಬೆಳವಣಿಗೆ ಇಲ್ಲದೆಯೇ ಸಹಜವಾದ ನಮ್ಮ ಬದುಕಿನ ಎಲ್ಲಾ ಮುಖಗಳನ್ನು ಅನಾವರಣ ಮಾಡುತ್ತಾ, ಘಟನೆಯ ಒಳಗೆಯೇ ನೋವು ನಲಿವುಗಳನ್ನು ಝಾಂಗ್ ಯಿಮೋವ್ ತೋರಿಸುತ್ತಾ ಹೋಗುತ್ತಾನೆ. ಆ ಕಾರಣಕ್ಕಾಗಿ ಸಿನಿಮಾ ಬಹಳ ಮುಖ್ಯವಾಗಿದೆ. ಏನೂ ಘಟನೆ ನಡೆಯದೇ ಅನುದಿನದ ನಮ್ಮ ಆಗುಹೋಗುಗಳಲ್ಲಿಯೇ ನಾಟಕೀಯತೆಯನ್ನು ಕಾಣುವುದು, ಅದರಲ್ಲಿ ಮನುಷ್ಯ ಸಹಜವಾದ ಸಂಬಂಧಗಳನ್ನು ಹುಡುಕುವುದನ್ನು ಬಹಳ ಪರಿಣಾಮಕಾರಿಯಾಗಿ The Story of Qiu Ju ಸಿನಿಮಾದಲ್ಲಿ ತೋರಿಸಲಾಗಿದೆ.

  • ಗಿರೀಶ್ ಕಾಸರವಳ್ಳಿ

0 Comments

Related Articles

Related

ಕಥಾ ಚಿತ್ರದಲ್ಲಿ ಸಾಕ್ಷ್ಯ ಚಿತ್ರದ ಪರಂಪರೆ: ದ ಬ್ಯಾಟಲ್ ಆಫ್ ಅಲ್ಜಿಯರ್ಸ್

ಕಥಾ ಚಿತ್ರದಲ್ಲಿ ಸಾಕ್ಷ್ಯ ಚಿತ್ರದ ಪರಂಪರೆ: ದ ಬ್ಯಾಟಲ್ ಆಫ್ ಅಲ್ಜಿಯರ್ಸ್

ದ ಬ್ಯಾಟಲ್ ಆಫ್ ಅಲ್ಜಿಯರ್ಸ್ ಸಿನಿಮಾ ಭಾರೀ ಜನಪ್ರಿಯವಾಯಿತಲ್ಲದೆ, ವ್ಯಾಪಕ ಮನ್ನಣೆಯನ್ನೂ ಪಡೆಯಿತು. ‘Venice’ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲೂ ‘ದ ಬ್ಯಾಟಲ್ ಆಫ್ ಅಲ್ಜಿಯರ್ಸ್’ ಪ್ರದರ್ಶನ ಕಂಡಿತು. ಅಲ್ಲದೇ, ಹಲವಾರು ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂಡು, ಚಿತ್ರಕಥೆ ಮತ್ತು ನಿರ್ದೇಶನ ವಿಭಾಗದಲ್ಲಿ ಆಸ್ಕರ್ ಗೆ ಭಾಜನವಾಯಿತು. ಒಂದೇ ವರ್ಷದಲ್ಲಿ ಮೂರು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಸಿನಿಮಾ ಎಂಬ ಹೆಗ್ಗಳಿಕೆ ಇಂದಿಗೂ ಈ ಚಿತ್ರದ ಹೆಸರಿನಲ್ಲಿದೆ.

read more
ಸಂಗೀತಗಳು ಸಮುದಾಯದ ಭಾಗವಾಗಬೇಕು: ‘ಕಾಡು’ ಸಿನಿಮಾ ವಿಶ್ಲೇಷಣೆ

ಸಂಗೀತಗಳು ಸಮುದಾಯದ ಭಾಗವಾಗಬೇಕು: ‘ಕಾಡು’ ಸಿನಿಮಾ ವಿಶ್ಲೇಷಣೆ

‘ಕಾಡು’ 1973ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಗಿರೀಶ್ ಕಾರ್ನಾಡ್ ಸ್ವತಂತ್ರವಾಗಿ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿ ಆಧಾರಿತವಾದ ಈ ಚಿತ್ರಕ್ಕೆ ಸಾಕಷ್ಟು ಜನಮನ್ನಣೆ ದೊರಕಿದೆ. ಆಗಿನ ಕಾಲದ ಕನ್ನಡ ಸಾಹಿತ್ಯ ಪರಂಪರೆಗೆ ಅನುಗುಣವಾಗಿ. ಈ ಚಿತ್ರವನ್ನು ಗಮನಿಸಿದರೆ ಬಹಳ ಮಹತ್ವದ ವಿಚಾರಗಳು ತಿಳಿಯುತ್ತದೆ. ನವ್ಯರು ಪ್ರಶ್ನಿಸುತ್ತಿದ್ದ ಅನೇಕ ಅಂಶಗಳನ್ನು ಈ ಕಥೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

read more
THE OTT ERA

THE OTT ERA

OTT or Over-the-top, is a convenient little term which describes a new way to watch movies and TV shows whenever we want, on a variety of devices, and without the use of traditional broadcast, cable, or satellite pay-tv providers.

read more