ಮನುಷ್ಯನ ಕ್ರೌರ್ಯ ಮತ್ತು ಸಮಾಜದ ಕ್ರೌರ್ಯ: ಕೌರಿಸ್ಮಾಕಿ ಸಿನಿಮಾದ ಕಥಾವಸ್ತು

“The Match Factory Girl” ಫಿನ್ ಲ್ಯಾಂಡ್ ದೇಶದ ಸಿನಿಮಾ. ಅಕಿ ಕೌರಿಸ್ಮಾಕಿ ಈ ಚಿತ್ರವನ್ನು 1990ರಲ್ಲಿ ನಿರ್ದೇಶಿಸಿದರು. ಜಗತ್ತಿನಲ್ಲಿರುವ ಕೆಲವೇ ಕೆಲವು ಒರಜಿನಲ್ ಫಿಲ್ಮ್ ಮೇಕರ್ ಗಳಲ್ಲಿ ಕೌರಿಸ್ಮಾಕಿ ಕೂಡ ಒಬ್ಬರು. 1983ರಲ್ಲಿ ಸಿನಿಮಾ ವೃತ್ತಿಜೀವನವನ್ನು ಆಯ್ದುಕೊಂಡು 18 ಕಥಾ ಚಿತ್ರ, 18 ಕಿರುಚಿತ್ರ, ಹಲವು ಮ್ಯೂಸಿಕಲ್ ವಿಡಿಯೋಗಳ ನಿರ್ದೇಶನವನ್ನೂ ಮಾಡಿದ್ದಾರೆ. ಯಾವುದೇ ಸಿನಿಮಾಗಳು 90 ನಿಮಿಷವನ್ನು ಮೀರಬಾರದು, ಶಬ್ದಗಳ ಮೂಲಕ ಕಥೆಯನ್ನು ಕಟ್ಟುವುದಾದರೆ ಸಿನಿಮಾ ಮಾಡುವ ಅಗತ್ಯವೇನು ?, 20 ಸಿನಿಮಾಗಳ ನಂತರ ನಿವೃತ್ತಿ ಘೋಷಿಸುತ್ತೇನೆ ಮುಂತಾದ ಇವರ ಹೇಳಿಕೆಗಳು ಕೂಡ ಜಗತ್ಪ್ರಸಿದ್ದಿ ಪಡೆದಿವೆ. ಈತನ ಸಿನಿಮಾಗಳು 2 ಬಾರಿ ಆಸ್ಕರ್ ಪ್ರಶಸ್ತಿ ಗೆದ್ದರೂ, ಅಮೆರಿಕಾದ ಯುದ್ಧ ನೀತಿಗಳನ್ನು ಹಾಗೂ ರಾಜಕೀಯ ನೀತಿಗಳನ್ನು ವಿರೋಧಿಸುತ್ತೇನೆ ಎಂಬ ಕಾರಣ ನೀಡಿ ಅದನ್ನು ನಿರಾಕರಿಸುತ್ತಾನೆ. ತನ್ನ ನೆಚ್ಚಿನ ನಿರ್ದೇಶಕರಾದ ಅಬ್ಬಾಸ್ ಕೈರೋಸ್ತಮಿ ಹಾಗೂ ಇರಾನಿಯನ್ ಫಿಲ್ಮ್ ಮೇಕರ್ ಗಳಿಗೆ ಸಂಘರ್ಷವೇರ್ಪಟ್ಟು, ಕೈರೋಸ್ತಮಿಗೆ ಚಿತ್ರರಂಗದಿಂದ ನಿರ್ಬಂಧ ವಿಧಿಸಿದಾಗಲೂ ಅದನ್ನು ಪ್ರತಿಭಟಿಸುತ್ತಾನೆ. ಈ ಎಲ್ಲಾ ಅಂಶಗಳಿಂದ ಅಕಿ ಕೌರಿಸ್ಮಾಕಿಯ ರಾಜಕೀಯ ನಿಲುವುಗಳೂ ಕೂಡ ಅಗಿಂದ್ದಾಗೆ ಮುನ್ನಲೆಗೆ ಬರುತ್ತಿದ್ದವು.

ಕೌರಿಸ್ಮಾಕಿ ಸಿನಿಮಾಗಳಲ್ಲಿ ಎರಡು ಮುಖ್ಯ ಭಾಗವಿದೆ. ಒಂದನ್ನು ಹೆಲ್ಸಿಂಕಿ ಟ್ರಯಾಲಜಿ ಎಂದು ಕರೆದರೆ, ಮತ್ತೊಂದನ್ನು ಫಿನ್ ಲ್ಯಾಂಡ್ ಟ್ರಯಾಲಜಿ ಎಂದು ಕರೆಯುತ್ತಾರೆ. ಈತ ಹೆಚ್ಚಾಗಿ ಫಿನ್ ಲ್ಯಾಂಡ್ ದೇಶದ ಕಾರ್ಮಿಕರ ಬಗ್ಗೆ ಹಾಗೂ ಆರ್ಥಿಕವಾಗಿ ಅಸಹಾಯಕ ಸ್ಥಿತಿಯಲ್ಲಿರುವವರ ಬಗ್ಗೆ ಸಿನಿಮಾ ಮಾಡಲು ಉತ್ಸುಕನಾಗಿರುತ್ತಾನೆ. ‘The Match Factory Girl’ ಕೇವಲ 69 ನಿಮಿಷಗಳಿರುವ, ಹೆಲ್ಸಿಂಕಿ ಟ್ರಯಾಲಜಿಯಲ್ಲಿ ಬರುವ ಮೂರನೇ ಸಿನಿಮಾ. ಈತನ ಮೊದಲ ಎರಡು ಸಿನಿಮಾಗಳಿಗೂ ಅಪಾರ ಜನಮನ್ನಣೆ ದೊರೆತಿತ್ತು.  

ಮನುಷ್ಯ ಸಂಘಜೀವಿ. ತನ್ನ ಸಂಕಟ, ದುಃಖ, ದುಮ್ಮಾನ, ಸಂತೋಷ, ಕೋಪವನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಲು ಸಾಧ್ಯವಾಗದಿದ್ದರೇ ಉದ್ರಿಕ್ತನಾಗುತ್ತಾನೆ. ಹೀಗಾಗಿ ಆತ ತನ್ನೊಳಗಿನ ಅನಿಸಿಕೆಗಳನ್ನು, ಅನುಭವಗಳನ್ನು, ಭಾವನೆಗಳನ್ನು ನಿರಂತರವಾಗಿ ತನ್ನ ಆತ್ಮೀಯರೊಂದಿಗೆ, ಬಂಧುಬಾಂಧವರೊಂದಿಗೆ ಹಂಚಿಕೊಳ್ಳುತ್ತಿರುತ್ತಾನೆ. ಈ ಹಂಚಿಕೊಳ್ಳುವ ಕ್ರಿಯೆಯಿಂದ ಒತ್ತಡಗಳ ನಿವಾರಣೆಯಾಗುತ್ತದೆ ಎಂಬುದು ನಿರ್ವಿವಾದ. ಭಾರತದ ಸಮಾಜವೂ ಇದೇ ಮಾದರಿಯಲ್ಲಿ ರಚಿತವಾಗಿದೆ. ಆದರೇ ಫಿನ್ ಲ್ಯಾಂಡ್ ದೇಶವನ್ನು ಗಮನಿಸುವುದಾದರೆ, ಅಲ್ಲಿ ಜನಸಂಖ್ಯೆ ಬಹಳ ಕಡಿಮೆ. ಅಸಾಧ್ಯ ಚಳಿಯಿಂದಾಗಿ ಮನೆ ಬಿಟ್ಟು ಹೆಚ್ಚಾಗಿ ಯಾರು ಹೊರಗೆ ಬರುವುದಿಲ್ಲ. ಇದರಿಂದ ಜನರ ನಡುವೆ ಪರಸ್ಪರ ಸಂವಹನದ ಕೊರತೆ ಎದ್ದು ಕಾಣುತ್ತದೆ. ಇಂತಹ ಸಮಾಜ ವ್ಯವಸ್ಥೆಯಲ್ಲಿರುವ ಜನರ ಮನಸ್ಥಿತಿಗಳೇ ‘The Match Factory Girl’ ಸಿನಿಮಾದ ಕಥಾವಸ್ತು.

ಯೂರೋಪಿನ ಬಹಳ ಸಿನಿಮಾಗಳು, ಮನುಷ್ಯನ ಒಂಟಿತನದ ಬಗ್ಗೆ, ಸಂವಹನ ಕೊರತೆಯ ಬಗ್ಗೆ, ಮನೆಗಳಲ್ಲೂ ಅಪ್ಪ-ಮಕ್ಕಳ ಸಂಬಂಧ ನಶಿಸುತ್ತಿರುವ ಬಗ್ಗೆಯೇ ಚಿತ್ರಣವಾಗಿರುತ್ತದೆ. ‘The Match Factory Girl’ ಸಿನಿಮಾದ ಕಥಾನಾಯಕಿ ಹೆಸರು ಐರಿಸ್. ನೋಡಲು ಅಷ್ಟೇನೂ ಸುಂದರವಾಗಿರದ, ಮದುವೆಯಾಗದ ಹುಡುಗಿ ಈಕೆ. ಬೆಂಕಿಪೊಟ್ಟಣ ಕಾರ್ಖಾನೆಯಲ್ಲಿ ಸ್ಟಿಕ್ಕರ್ ಅಂಟಿಸುವ ಬಹಳ ನೀರಸವಾದ ಕೆಲಸದಲ್ಲಿ ತೊಡಗಿರುತ್ತಾಳೆ. ಕೆಲಸದಲ್ಲಿ ಯಾವುದೇ ಹೊಸತನವಿರುವುದಿಲ್ಲ.  ಐರಿಸ್ ಗೆ ತನ್ನ ಮನದ ತುಮುಲಗಳನ್ನು ಹಂಚಿಕೊಳ್ಳಲು ಯಾರಾದರೂ ಆತ್ಮೀಯರಿರಬೇಕು ಎಂಬ ಭಾವನೆ ಸದಾ ಕಾಡುತ್ತಿರುತ್ತದೆ. ಹೀಗಾಗಿ ಸ್ನೇಹವನ್ನು ಅರಸಿ ಐರಿಸ್ ಪ್ರತಿನಿತ್ಯ ಕೂಡ ಪರಿತಪಿಸುತ್ತಿರುತ್ತಾಳೆ. ವಯಸ್ಸಾಗಿರುವ ಆಕೆಯ ಅಮ್ಮನ ಜೊತೆ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ತೆರಳಿದರೂ ಮಲತಂದೆಯೇ ಆಕೆಯನ್ನು ದೂರವಿಡುತ್ತಿದ್ದ.

ಹೀಗಾಗಿ ತನ್ನ ದೈನಂದಿನ ಕೆಲಸ ಮುಗಿದ ಕೂಡಲೇ, ಡ್ಯಾನ್ಸ್ ಕಾರ್ಯಕ್ರಮವೊಂದಕ್ಕೆ ತೆರಳುವ ಆಕೆ ಅಲ್ಲಿ ಸ್ನೇಹಿತರಿಗಾಗಿ ಹಂಬಲಿಸುತ್ತಿರುತ್ತಾಳೆ. ದುರದೃಷ್ಟವೆಂದರೆ ಯಾರೂ ಕೂಡ ಆಕೆಯನ್ನು ತಮ್ಮ ನೃತ್ಯ ಜೊತೆಗಾರ್ತಿಯಾಗಿ ಆಯ್ಕೆ ಮಾಡಿಕೊಳ್ಳುವುದಿಲ್ಲ. ಕೊನೆಗೊಬ್ಬಾತ ಈಕೆಯನ್ನು ಆರಿಸಿಕೊಂಡರೂ ವ್ಯೆಶ್ಯೆ ಎಂದು ಭಾವಿಸಿ, ದೈಹಿಕ ಸಂಪರ್ಕದ ನಂತರ ಹಣಕೊಟ್ಟು ಅಲ್ಲಿಂದ ತೆರಳುತ್ತಾನೆ. ಸ್ನೇಹಿತರನ್ನು ಗಳಿಸಲು ಹೋಗಿ ತಾನು ಮತ್ತೊಬ್ಬರ ಭೋಗದ ವಸ್ತುವಾಗುತ್ತಿರುವುದನ್ನು ಗಮನಿಸಿ ಐರಿಸ್ ಆಘಾತಕ್ಕೊಳಗಾಗುತ್ತಾಳೆ. ವಿಷಯ ತಿಳಿದ ಮೇಲೆ ಮನೆಯಿಂದಲೂ ಈಕೆಯನ್ನು ಹೊರಹಾಕಲಾಗುತ್ತದೆ. ಕೊನೆಗೆ ಅಸಹಾಯಕಳಾಗುವ ಐರಿಸ್ ತನ್ನನ್ನು ದುರುದ್ದೇಶಗಳಿಗೆ ಬಳಸಿಕೊಂಡವರನ್ನು, ವಿಷ ನೀಡಿ ಕೊಲ್ಲುವ ಮಾರ್ಗವನ್ನು ಆಯ್ದುಕೊಳ್ಳುತ್ತಾಳೆ.

ಒಂಟಿತನದ ನೋವನ್ನು ‘The Match Factory Girl’ ಸಿನಿಮಾದಲ್ಲಿ ಬಹಳ ಅದ್ಭುತವಾಗಿ ಚಿತ್ರಿಸಲಾಗಿದೆ. ಸಂಪೂರ್ಣ ಸಿನಿಮಾದಲ್ಲಿ ಕೇವಲ 10 ನಿಮಿಷ ಮಾತ್ರ ಮಾತುಕತೆಯಿದೆ. ಪ್ರತಿಯೊಂದನ್ನು ಕ್ರಿಯೆಯ ಮೂಲಕವೇ ಹೇಳಲಾಗುತ್ತದೆ. ಆಕೆ ಮತ್ತೊಬ್ಬರನ್ನು ಹತ್ಯೆ ಮಾಡುವಾಗಲೂ ಯಾವುದೇ ಅಬ್ಬರ, ಆಡಂಬರದ ಶಬ್ದಗಳು ಪ್ರೇಕ್ಷಕನಿಗೆ ಕೇಳಿಸುವುದಿಲ್ಲ. ಆಕೆಯ ಒಂಟಿತನ ಪ್ರೇಕ್ಷಕನಿಗೂ ಕೂಡ ಪರಿತಪಿಸುವಂತಾಗಿ, ಅವಳಿಗೆ ಯಾರಾದರೂ ಜೊತೆಗಾರರು ಸಿಗಲಿ, ಸಂತೋಷವನ್ನು ಹಂಚಿಕೊಳ್ಳುವಂತಾಗಲಿ, ಮನಸ್ಸಿಗೆ ಸಮಾಧಾನ ದೊರಕಲಿ ಮುಂತಾದ ಭಾವನೆಗಳು ಚಿತ್ರವನ್ನು ನೋಡುತ್ತಾ ಕಾಡಲಾರಂಭಿಸುತ್ತದೆ.  

ಅಕಿ ಕೌರಿಸ್ಮಾಕಿ ಈ ಸಿನಿಮಾದಲ್ಲಿ ಕಟ್ಟಿದ ಕಥಾವಸ್ತು ಪರಿಚಿತವೆನಿಸಿದರೂ, ಸರಳತೆಯಲ್ಲಿ ಒಳಾರ್ಥವನ್ನು ಬಹಳ ಮನಮೋಕವಾಗಿ ಚಿತ್ರಿಸಿದ್ದಾನೆ. Minimalism ಹಾಗೂ visual narrative ಈ ಎರಡು ಅಂಶಗಳನ್ನು ಕೂಡ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾನೆ. ಸಿನಿಮಾಕ್ಕೆ ಮತ್ತೊಂದು ಎಳೆಯನ್ನು ತಂದು ಅದನ್ನು ಆಕರ್ಷಕಗೊಳಿಸದೆ, ನೋಡಿದ ತಕ್ಷಣ ಅರ್ಥವಾಗುವ ರೀತಿಯಲ್ಲಿ ಚಿತ್ರಿಸಿದ್ದಾನೆ. ‘ಮುಂದೇನು’ ಎನ್ನುವ ಕುತೂಹಲಕ್ಕಿಂತ ‘ಅದೇನು’ ಎಂಬ ಕುತೂಹಲವೇ ಪ್ರೇಕ್ಷಕನಿಗೆ ಹೆಚ್ಚಾಗಿರುತ್ತದೆ.

ಅಕಿ ಕೌರಿಸ್ಮಾಕಿ ಇದರಲ್ಲಿ ಸಂಗೀತ ಮತ್ತು ಕಥಾಹಂದರಕ್ಕೆ(storyline) ಹೆಚ್ಚಿನ ಮಾನ್ಯತೆ ನೀಡಿಲ್ಲ. ಅಂತಹ ಅಂಶಗಳು ಪ್ರೇಕ್ಷಕರ ಗಮನವನ್ನು ಬೇರತ್ತ ಸೆಳೆಯುತ್ತದೆ ಎಂಬುದು ಆತನ ಅಭಿಪ್ರಾಯ. ಮಾತುಗಳ ಬಳಕೆ, ಅಭಿನಯಕ್ಕೂ ಹೆಚ್ಚಿನ ಮಹತ್ವ ಕೊಡದೇ ಸಹಜತೆಗೆ ಒತ್ತು ನೀಡುತ್ತಾನೆ. ಕ್ಲೋಸ್ ಅಪ್ ದೃಶ್ಯಕ್ಕೂ ಆದ್ಯತೆ ಕೊಡದೆ, ಲಾಂಗ್ ಶಾಟ್ ಕಡೆಗೆ ಹೆಚ್ಚಿನ ಗಮನವನ್ನು ಕೇಂದ್ರಿಕರಿಸುತ್ತಾನೆ. ಇದರಿಂದ ಪ್ರೇಕ್ಷಕನಿಗೂ, ತಾನು ಕಥಾನಾಯಕಿಯಾದ ಐರಿಸ್ ಮನೆಯಲ್ಲಿರುವ ಹಾಗೆ, ಆಕೆಯ ಜೊತೆಗಿರುವ ಹಾಗೆ ಭಾಸವಾಗುತ್ತದೆ. ಬದುಕು ಎಷ್ಟೊಂದು ಅಸಹಾಯಕ ಎಂಬ ಭಾವನೆಯೂ ಕಾಡಲಾರಂಭಿಸುತ್ತದೆ.

ನಮಗೆ ಎಲ್ಲಾ ಸವಲತ್ತುಗಳಿದ್ದರೂ ಅದನ್ನು ಆನಂದಿಸುವ ಕ್ರಮ ವಿಭಿನ್ನವಾಗಿರುತ್ತದೆ. ಆದರೇ ಸವಲತ್ತುಗಳಿಲ್ಲದಾಗ ಬದುಕು ಎಷ್ಟು ಅಸಹನೀಯವಾಗುತ್ತದೆ, ಅಂತಹ ಸಂದರ್ಭದಲ್ಲಿ ಕ್ರೌರ್ಯ ಹೇಗೆ ವಿಜ್ರಂಬಿಸುವುದು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅಸಹನೀಯತೆ ಎಂಬುದು ಮನುಷ್ಯನಲ್ಲಿದೆಯೋ ? ಅಥವಾ ಸಮಾಜದಲ್ಲಿದೆಯೋ ಎಂಬುದನ್ನು ಕೂಡ ಚಿತ್ರದಲ್ಲಿ ಪ್ರಶ್ನಿಸಲಾಗುತ್ತದೆ. ನೋಡಲು ಆಕರ್ಷಕವಾಗಿಲ್ಲ ಎಂಬ ಒಂದೇ ಕಾರಣಕ್ಕಾಗಿ ಕಥಾನಾಯಕಿಯನ್ನು ಸಮಾಜದಿಂದ ದೂರ ತಳ್ಳಲಾಗುತಿತ್ತು. ಮನುಷ್ಯ ಪ್ರವೃತ್ತಿಯಲ್ಲಿರುವ ಇಂತಹ ಕ್ರೌರ್ಯ ಮತ್ತು ಸಮಾಜದಲ್ಲಿರುವ ಕ್ರೌರ್ಯವನ್ನು ವಿಸ್ತರಿಸುತ್ತಾ ಅಕಿ ಕೌರಿಸ್ಮಾಕಿ ಒಂದು ಮೈನವಿರೇಳಿಸುವ ಕತೆಯನ್ನು ಕಟ್ಟಿಕೊಡುತ್ತಾನೆ.

Minimalism ಮೂಲಕ ಅಕಿ ಕೌರಿಸ್ಮಾಕಿ ಮತ್ತೊಂದು ತಂತ್ರವನ್ನೂ ಸಿನಿಮಾದಲ್ಲಿ ಅನುಸರಿಸುತ್ತಾನೆ. ಇಲ್ಲಿ ಕ್ಯಾಮರಗಳು ಚಲಿಸುವುದಿಲ್ಲ. ಬದಲಾಗಿ ಸ್ಥಿರವಾಗಿ ನಿಂತು ದೃಶ್ಯವನ್ನು ಸೆರೆಯಿಡಿಯುತ್ತವೆ.  ಹೀಗಾಗಿ ಚಿತ್ರದ ಸಾರ ಪ್ರೇಕ್ಷಕನಿಗೆ ನೇರವಾಗಿ ದಕ್ಕುತ್ತದೆ. ಫ್ರಾನ್ಸಿನ ನಿರ್ದೇಶಕನಾದ ರಾಬರ್ಡ್ ಬ್ರೆಸ್ಸೋ ತಂತ್ರಗಾರಿಕೆಗಳು, ಕೌರಿಸ್ಮಾಕಿ ಸಿನಿಮಾದಲ್ಲಿ ಹೆಚ್ಚಾಗಿ ಕಾಣಬಹುದು. ಆದರೇ  ಬ್ರೆಸ್ಸೋ ಈ ತಂತ್ರಗಳನ್ನು ಚಿತ್ರದ ತಾತ್ವಿಕ ಮತ್ತು ದೈವಿಕ ಅಂಶಗಳಿಗೆ ಹೆಚ್ಚಾಗಿ ಬಳಸುತ್ತಿರುತ್ತಾನೆ. ಆದರೇ ಕೌರಿಸ್ಮಾಕಿ ಸಾಮಾಜಿಕ ಮತ್ತು ಅಸ್ತಿತ್ವದ ಕುರಿತಾಗಿ ಚಿತ್ರ ನಿರ್ಮಾಣ ಮಾಡುವಾಗ ಈ ಅಂಶಗಳನ್ನು ಬಳಸುತ್ತಾನೆ. ಹೀಗಾಗಿ ಕೌರಿಸ್ಮಾಕಿ ಸಿನಿಮಾ ನಿರ್ದೇಶಿಸುವ ರೀತಿ ಬಹಳ ವಿಶೇಷವಾಗಿರುತ್ತದೆ. ಈತನ ತಂತ್ರಗಾರಿಕೆಯೇ ವಸ್ತುವಿನ ಗಹನತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವೈಭವೀಕರಣಗಳಿಲ್ಲದೇ ವಾಸ್ತವವನ್ನು ಕಟ್ಟುವ ಮತ್ತೊಂದು ಬಗೆಯ ಸಾಧ್ಯತೆಯನ್ನು ಕೌರಿಸ್ಮಾಕಿ ಸಿನಿಮಾದಲ್ಲಿ ಕಾಣಬಹುದು.

  • ಗಿರೀಶ್ ಕಾಸರವಳ್ಳಿ

0 Comments

Related Articles

Related

ಕಥಾ ಚಿತ್ರದಲ್ಲಿ ಸಾಕ್ಷ್ಯ ಚಿತ್ರದ ಪರಂಪರೆ: ದ ಬ್ಯಾಟಲ್ ಆಫ್ ಅಲ್ಜಿಯರ್ಸ್

ಕಥಾ ಚಿತ್ರದಲ್ಲಿ ಸಾಕ್ಷ್ಯ ಚಿತ್ರದ ಪರಂಪರೆ: ದ ಬ್ಯಾಟಲ್ ಆಫ್ ಅಲ್ಜಿಯರ್ಸ್

ದ ಬ್ಯಾಟಲ್ ಆಫ್ ಅಲ್ಜಿಯರ್ಸ್ ಸಿನಿಮಾ ಭಾರೀ ಜನಪ್ರಿಯವಾಯಿತಲ್ಲದೆ, ವ್ಯಾಪಕ ಮನ್ನಣೆಯನ್ನೂ ಪಡೆಯಿತು. ‘Venice’ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲೂ ‘ದ ಬ್ಯಾಟಲ್ ಆಫ್ ಅಲ್ಜಿಯರ್ಸ್’ ಪ್ರದರ್ಶನ ಕಂಡಿತು. ಅಲ್ಲದೇ, ಹಲವಾರು ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂಡು, ಚಿತ್ರಕಥೆ ಮತ್ತು ನಿರ್ದೇಶನ ವಿಭಾಗದಲ್ಲಿ ಆಸ್ಕರ್ ಗೆ ಭಾಜನವಾಯಿತು. ಒಂದೇ ವರ್ಷದಲ್ಲಿ ಮೂರು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಸಿನಿಮಾ ಎಂಬ ಹೆಗ್ಗಳಿಕೆ ಇಂದಿಗೂ ಈ ಚಿತ್ರದ ಹೆಸರಿನಲ್ಲಿದೆ.

read more
ಸಂಗೀತಗಳು ಸಮುದಾಯದ ಭಾಗವಾಗಬೇಕು: ‘ಕಾಡು’ ಸಿನಿಮಾ ವಿಶ್ಲೇಷಣೆ

ಸಂಗೀತಗಳು ಸಮುದಾಯದ ಭಾಗವಾಗಬೇಕು: ‘ಕಾಡು’ ಸಿನಿಮಾ ವಿಶ್ಲೇಷಣೆ

‘ಕಾಡು’ 1973ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಗಿರೀಶ್ ಕಾರ್ನಾಡ್ ಸ್ವತಂತ್ರವಾಗಿ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿ ಆಧಾರಿತವಾದ ಈ ಚಿತ್ರಕ್ಕೆ ಸಾಕಷ್ಟು ಜನಮನ್ನಣೆ ದೊರಕಿದೆ. ಆಗಿನ ಕಾಲದ ಕನ್ನಡ ಸಾಹಿತ್ಯ ಪರಂಪರೆಗೆ ಅನುಗುಣವಾಗಿ. ಈ ಚಿತ್ರವನ್ನು ಗಮನಿಸಿದರೆ ಬಹಳ ಮಹತ್ವದ ವಿಚಾರಗಳು ತಿಳಿಯುತ್ತದೆ. ನವ್ಯರು ಪ್ರಶ್ನಿಸುತ್ತಿದ್ದ ಅನೇಕ ಅಂಶಗಳನ್ನು ಈ ಕಥೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

read more
THE OTT ERA

THE OTT ERA

OTT or Over-the-top, is a convenient little term which describes a new way to watch movies and TV shows whenever we want, on a variety of devices, and without the use of traditional broadcast, cable, or satellite pay-tv providers.

read more