ಜನ ಅರಣ್ಯ ಮತ್ತು ಸತ್ಯಜಿತ್ ರೇ ಚಿತ್ರ ಕಟ್ಟುವ ಕ್ರಮ: ಕಾಸರವಳ್ಳಿ ಮಾತು

‘ಜನ ಅರಣ್ಯ’ ಸತ್ಯಜಿತ್ ರೇ ನಿರ್ದೇಶಿಸಿರುವ ಬೆಂಗಾಲಿ ಚಿತ್ರ. ಸಾಮಾನ್ಯವಾಗಿ ಸತ್ಯಜಿತ್ ರೇ ಅಂದ ತಕ್ಷಣ, ಪತೇರ್ ಪಾಂಚಾಲಿ, ಜಲ್ಸಾಗರ್, ಚಾರುಲತ, ದೇವಿ ಮತ್ತು ಮಹಾನಗರ್ ಸಿನಿಮಾಗಳ ನೆನಪಿಗೆ ಬರುತ್ತದೆ. ಇವರ ಚಿತ್ರಯಾನವನ್ನು ಸಾಮಾನ್ಯವಾಗಿ ಮೂರ್ನಾಲ್ಕು ಘಟ್ಟಗಳಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಪಡಬಹುದು. ಮೊದಲನೆಯದಾಗಿ ಪತೇರ್ ಪಾಂಚಾಲಿ, ದೇವಿ, ಮಹಾನಗರ್ ಅಥವಾ ಕಾಪುರ್ಶ್ ಮತ್ತು ಮಹಾಪುರುಶ್ ಸಿನಿಮಾಗಳು. ಎರಡನೇಯದು ಆರ್ನಯ್ಯರ್ ದಿನ್ ರಾತ್ರಿ ಮತ್ತು ಸಿಟಿ ಟ್ರಯಾಲಜಿ ಚಿತ್ರಗಳು. ಮೂರನೇಯದು, ಸತ್ಯಜಿತ್ ರೇ ಅವರಿಗೆ ಹೃದಯ ಸಂಬಂಧ ಕಾಯಿಲೆ ಬಂದನಂತರ, ಕೇವಲ ಸ್ಟುಡಿಯೋದಲ್ಲಿ ಮಾಡಿದಂತಹ ಕೊನೆಯ ನಾಲ್ಕು ಸಿನಿಮಾಗಳು.

ಮೊದಲನೇ ಘಟ್ಟದ ಸಿನಿಮಾ ಪತೇರ್ ಪಾಂಚಾಲಿ ವಿಶ್ವದಲ್ಲೇ ಮನ್ನಣೆ ಪಡೆಯಿತು. ಇವತ್ತಿಗೂ ರೇ ಅವರ ಮಹತ್ವದ ಕೃತಿಗಳೆಲ್ಲವೂ ಬರುವುದು ಮೊದಲ ಘಟ್ಟದಲ್ಲಿ. 1967-68ರ ಹೊತ್ತಿಗೆ ಬೆಂಗಾಲಿಯಲ್ಲಿ ಒಂದು ರೀತಿಯ ಅಶಾಂತಿ ಹರಡಿತ್ತು. ಒಂದು ಕಡೆ ನಕ್ಸಲೈಟರ ಚಳುವಳಿ, ಇನ್ನೊಂದು ಕಡೆ ನಿರುದ್ಯೋಗಿಗಳ ಗಲಾಟೆ, ಮತ್ತೊಂದು ಕಡೆ ವಿದ್ಯಾರ್ಥಿಗಳ ಮುಷ್ಕರ. ಅದೇ ಸಮಯದಲ್ಲಿ ಮೃಣಾಲ್ ಸೇನ್ ಅವರು ಹೊಸ ರೀತಿಯ ಸಿನಿಮಾಗಳನ್ನು ನಿರ್ದೇಶಿಸುವ ಕರೆಯೂ ಕೊಟ್ಟಿದ್ದರು.

 “ಸತ್ಯಜಿತ್ ರೇ ಅವರ ಸಿನಿಮಾ, ಹಳೆಯ ಕಾಲದ ವಸ್ತುಸ್ಥಿತಿಯ ಬಗ್ಗೆ ಇರುವುದೇ ಹೊರತು, ಇವತ್ತಿನ ವಾಸ್ತವದ ಬಗ್ಗೆ ಇರುವುದಿಲ್ಲ” ಎಂದು ಕೆಲವರು ಆಕ್ಷೇಪದ ಧ್ವನಿಯಲ್ಲಿ ಮಾತನಾಡಲಾರಂಭಿಸಿದರು. ವಿಭೂತಿ ಭೂಷಣ ಉಪಾಧ್ಯಾಯರ ಕತೆ ಅಥವಾ ಟ್ಯಾಗೋರ್ ಅವರ ಕಥೆಯನ್ನು ಸುಂದರವಾಗಿ ಕಟ್ಟಿಕೊಡಬಹುದಾಗಿದ್ದರೂ, ಇವತ್ತಿನ ವಾಸ್ತವಕ್ಕೆ ಅವರು ಮುಖಾಮುಖಿ ಆಗುವುದೇ ಇಲ್ಲ ಎಂಬ ಹೇಳಿಕೆಗಳನ್ನು ಕೊಡುತ್ತಿದ್ದರು.

ಇಂತಹ ಮಾತುಗಳಿಗೆ ಪ್ರತಿಕ್ರಿಯೆ ಕೊಡಬೇಕೆಂದು ರೇ ಅವರು ಒಮ್ಮೆ ಕಲ್ಕತ್ತಾಗೆ ಬರುತ್ತಾರೆ. ಅಲ್ಲಿನ ಸ್ಥಿತಿಗತಿಗಳನ್ನಿಟ್ಟುಕೊಂಡು ಚಿತ್ರ ಮಾಡಲು ಆರಂಭಿಸುತ್ತಾರೆ. ಅಂದರೇ ಸಿಟಿ ಟ್ರಯಾಲಜಿ ಅಥವಾ ನಗರ ತ್ರಿವಳಿಯಿಂದ ಕೂಡಿರುವ ಸಿನಿಮಾ. ಈ ರೀತಿಯ ಕಥೆಗಳಿಗೆ ಕಲ್ಕತ್ತಾ ತ್ರಿವಳಿ ಅಂತಲೂ ಕರೆಯಬಹುದು. ಅದರಲ್ಲಿ ಮೊದಲನೇ ಚಿತ್ರ ಪ್ರತಿದ್ವಂದಿ, ಎರಡನೇಯದ್ದು ಸೀಮಾಬದ್ಧ, ಮೂರನೇ ಚಿತ್ರ ಜನ ಅರಣ್ಯ. ಇದನ್ನು ಕ್ರಮಬಧ್ಧವಾಗಿ ಪ್ರತಿದ್ವಂದಿ, ಜನ ಅರಣ್ಯ ಮತ್ತು ಸೀಮಾಬದ್ಧ ಎನ್ನುವ ರೀತಿಯಲ್ಲೂ ನೋಡಬಹುದು. ಏಕೆಂದರೆ ರೇ ಈ ತೆರನಾದ ಚಿತ್ರಗಳಿಂದ ಅದರ ವ್ಯಾಖ್ಯಾನವನ್ನು ಬೇರೊಂದು ರೀತಿಯಲ್ಲಿ ಕಟ್ಟುವುದಕ್ಕೆ ಶುರು ಮಾಡಿದ್ದರು.

ಸತ್ಯಜಿತ್ ರೇ ಸಾಕ್ಷ್ಯಚಿತ್ರ ಮಾದರಿಯಲ್ಲಿ ಸಿನಿಮಾವನ್ನು ನಿರ್ದೇಶಿಸುತ್ತಾರೆ. ಹಾಗಾಗಿ ಅವರ ಇಡೀ ಚಿತ್ರದ ಸಂವಿಧಾನವೇ ಬದಲಾಗುತ್ತದೆ. ಮೊದಲು ಇದ್ದಂತಹ ಲಿರಿಸಿಸಂ ಹಾಗೂ ಪೊಯೆಟಿಕ್ ಕ್ವಾಲಿಟಿ ಈ ಸಿನಿಮಾಗಳಲ್ಲಿ ಕಾಣುವುದಿಲ್ಲ. ನೇರವಾಗಿ ಕಲ್ಕತ್ತಾದಲ್ಲಿರುವ ಸಮಸ್ಯೆಗಳ ಕುರಿತು, ಬೇರೆಯೆ ರೀತಿಯಲ್ಲಿ ಕಥೆಯನ್ನು ಕಟ್ಟುವುದಕ್ಕೆ ಆರಂಭಿಸುತ್ತಾರೆ. ಆ ಮೂರು ತ್ರಿವಳಿಯಲ್ಲಿ ಅತ್ಯುತ್ತಮ ಚಿತ್ರ ‘ಜನ ಅರಣ್ಯ’.

ರೇ ಅವರ ಚಿತ್ರ ಕಟ್ಟುವ ಕ್ರಮದಲ್ಲಿ ಕಾವ್ಯಾತ್ಮಕ ಸ್ವರೂಪ, ಮಾನವೀಯ ಅನುಕಂಪ. ಸಕಾರಾತ್ಮಕ ದೃಷ್ಟಿಕೋನ ಎಂಬ ಮೂರು ಅಂಶಗಳಿರುತ್ತವೆ. ಮೊದಲನೇ ಚಿತ್ರ ಪ್ರತಿದ್ವಂದಿಯಲ್ಲಿ ಸಿದ್ಧಾರ್ಥ ಎನ್ನುವ ನಾಯಕನಿಗೆ ಕೆಲಸ ಸಿಗದೆ, ಸಂದರ್ಶನಗಳಿಗೆ ಹೋಗುತ್ತಾ, ಅಲೆದಾಡುತ್ತಾ, ಒಂದು ರೀತಿ ಹತಾಶನಾಗುವ ಆದರ್ಶವಾದಿ ಯುವಕನ ಪಾತ್ರವಿರುತ್ತದೆ. ಜನ ಅರಣ್ಯ ಸಿನಿಮಾದಲ್ಲಿ, ಆಗಷ್ಟೇ ಪದವಿಧರನಾದ ಯುವಕ ದಲ್ಲಾಳಿಯ ಕೆಲಸಕ್ಕೆ ಸೇರುತ್ತಾನೆ. ಆತ ಓದಿದಕ್ಕೂ ಮಾಡುವ ಕೆಲಸಕ್ಕೂ ಸಂಬಂಧವೇ ಇರಲಿಲ್ಲ. ಇಲ್ಲಿ ನಾಯಕನಿಗೆ “ದಲ್ಲಾಳಿತನ ಸರಿಯೋ-ತಪ್ಪೋ? ನಾನು ಮಾಡಬೇಕೋ- ಬೇಡವೋ? ದಲ್ಲಾಳಿ ಎಂದ ತಕ್ಷಣ ಎಲ್ಲರ ಕೈ ಬಿಸಿ ಮಾಡಬೇಕು, ಲಂಚ ಕೊಡಬೇಕು, ಕೆಟ್ಟ ಪೈಪೋಟಿಯನ್ನು ತರಬೇಕು. ಇವೆಲ್ಲದರಲ್ಲಿ ನೈತಿಕ ಪ್ರಜ್ಞೆ ಎಲ್ಲಿದೆ?” ಅನ್ನುವ ಭಾವನೆ ಕಾಡುತ್ತಲಿರುತ್ತದೆ. ಕೊನೆಗೆ ಸಿನಿಮಾ ಅವನ ನೈತಿಕ ಅಧಃಪತನದಲ್ಲಿ ಅಂತ್ಯವಾಗುತ್ತದೆ. ಮೂರನೇ ಸಿನಿಮಾ ಸೀಮಾಬದ್ಧದಲ್ಲಿ ಕಥಾನಾಯಕ ಬಹುದೊಡ್ಡ ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸದಲ್ಲಿರುತ್ತಾನೆ. ಹೇಗಾದರೂ ಮಾಡಿ ಪೈಪೋಟಿಯಲ್ಲಿ ಗೆಲ್ಲುವ ಹಠತೊಟ್ಟು ಅದರಲ್ಲಿ ಯಶಸ್ವಿಯಾಗುತ್ತಾನೆ. ಆದರೇ ಅವನ ನಾದಿನಿಗೆ ಈ ಸಾಧನೆ ಅಧಃಪತನವಾಗಿ ಕಾಣಲಾರಂಭಿಸಿದ್ದರಿಂದ ಆಕೆ ಮನೆ ಬಿಟ್ಟು ಹೋಗುತ್ತಾಳೆ.

ಒಂದು ರೀತಿಯಲ್ಲಿ ಈ ಮೂರೂ ಸಿನಿಮಾಗಳನ್ನು ತ್ರಿಫಲಕ ಎಂದು ಹೇಳಬಹುದು. ಸೂಕ್ಷ್ಮವಾಗಿ ಗಮನಿಸಿದಾಗ ಸತ್ಯಜಿತ್ ರೇ ಇಡೀ ಭಾರತದ ಸಾಮಾಜಿಕ ಪರಿಸ್ಥಿತಿ ಮತ್ತು ನೈತಿಕ ಅಧಃಪತನ ಹೇಗಾಗುತ್ತಿದೆ ಅನ್ನುವುದನ್ನು ಸಿನಿಮಾದಲ್ಲಿ ಹೇಳುತ್ತಾ ಹೋಗುತ್ತಾರೆ. ಈ ನೈತಿಕ ಅಧಃಪತನ ಎನ್ನುವುದು ಆಗಿನ ಕಾಲದ ಬಹಳ ನಿರ್ದೇಶಕರಿಗೆ ಕಾಡಿದ ಒಂದು ಅಂಶ.

ಜನ ಅರಣ್ಯ ಸಿನಿಮಾದ ಕಥಾನಾಯಕ ಸೋಮನಾಥನಿಗೆ ತಾನು ಪದವಿಧರನಾಗಿದ್ದರೂ, ಒಳ್ಳೆಯ ಕೆಲಸ ಹಿಡಿಯದೆ, ದಲ್ಲಾಳಿ ಕೆಲಸ ಮಾಡುತ್ತಿದ್ದೇನಲ್ಲಾ ಎಂಬ ಬೇಸರ ಕಾಡುತ್ತಿರುತ್ತದೆ. ಇದಕ್ಕೆ ಲಂಚ, ಕಮಿಷನ್, ಅಲ್ಲಿರುವ ಪೈಪೋಟಿ ಎಲ್ಲವೂ ಕಾರಣವಾಗಿರುತ್ತದೆ. ತದನಂತರ ಬೇರೆ ಕಡೆಯಲ್ಲೂ ನಾಯಕನಿಗೆ ಕೆಲಸ ಸಿಗುವುದಿಲ್ಲ. ಹಳೆಯ ಸ್ನೇಹಿತನೊಬ್ಬ ಈತನನ್ನು ಒಂದು ಸ್ಥಳಕ್ಕೆ ಕರೆದುಕೊಂಡು ಹೋಗಿ “ಕಾಪಿ ಪೇಪರ್ ಮತ್ತು ಎನ್ವಲಪ್ ಮಾಡಿಸಿಕೊಡಬೇಕು, ನಿನಗೆ ಕಮಿಷನ್ ಕೊಡುತ್ತೀನಿ” ಎಂದು ಹೇಳುತ್ತಾನೆ. ಕಮಿಷನ್ ಕೊಟ್ಟು ಪೇಪರ್ ಖರೀದಿಸಿ ಮತ್ತು ಅದನ್ನು ಕಮಿಷನ್ ಮೂಲಕವೇ ಮಾರಾಟ ಮಾಡಬೇಕೆಂಬುದನ್ನು ಕೇಳಿ ಅಲ್ಲಿಯೂ ನಾಯಕನಿಗೆ ಬೇಸರವಾಗುತ್ತದೆ.

ಈ ರೀತಿಯ ದುಃಖದಲ್ಲಿದ್ದಾಗಲೇ ಮತ್ತೊಬ್ಬ ಬಂದು “ನೋಡು ಇದರಿಂದ ಹೆಚ್ಚು ಲಾಭವಿಲ್ಲ. ಅದರ ಬದಲು ಕೆಮಿಕಲ್ಸ್ ಮಾರಾಟ ಮಾಡಿದರೆ ಜಾಸ್ತಿ ಲಾಭ ಬರುತ್ತದೆ” ಎಂದು ಒತ್ತಾಯಿಸುತ್ತಾನೆ.  ತದನಂತರ ನಾಯಕ ಕೆಮಿಕಲ್ ಮಾರುವುದಕ್ಕೂ ಮುಂದಾಗುತ್ತಾನೆ. ಕೊನೆಗೆ ಗೋಯೆಂಕಾವರೆಗೆ ಹೋಗಿ ಹುಡುಗಿಯರನ್ನು ಸಾಗಿಸುವ ಕೆಲಸವನ್ನೂ ಮಾಡಬೇಕಾದ ಸಂದರ್ಭ ಒದಗಿಬರುತ್ತದೆ. ಈ ರೀತಿಯಲ್ಲಿ ಬೃಹತ್ ಬದಲಾವಣೆಯನ್ನು ಹೇಳುತ್ತಾ, ಅವತ್ತಿನ ಕಲ್ಕತ್ತಾ ಸಮಾಜ, ಬೆಂಗಾಲಿ ಸಮಾಜ ಯಾವ ರೀತಿಯಲ್ಲಿತ್ತು ಎಂಬುದನ್ನು ಚಿತ್ರದಲ್ಲಿ ಹೇಳಲಾಗುತ್ತದೆ.

ಸತ್ಯಜಿತ್ ರೇ ಅವರ ಸಿನಿಮಾಗಳಲ್ಲಿ ಬಹುಮುಖ್ಯ ಅಂಶ ಎಂದರೇ ಆಶಾವಾದ. ಪತೇರ್ ಪಾಂಚಾಲಿ, ಚಾರುಲತಾ, ಮಹಾನಗರ್ ಮುಂತಾದ ಸಿನಿಮಾಗಳ ದುರ್ಬಲ ಸನ್ನಿವೇಶದಲ್ಲೂ ಆಶಾವಾದ ಕಾಣಿಸುತ್ತದೆ. ಪ್ರಥಮ ಬಾರಿಗೆ ಎಂಬಂತೆ ನಿರಾಶೆಯ ಅಂಶ ಮತ್ತು ಕ್ರೋಧ ಕಂಡುಬರುವುದು ಜನ ಅರಣ್ಯ ಸಿನಿಮಾದಲ್ಲಿ ಮಾತ್ರ. ಇಲ್ಲಿ ಕಥಾನಾಯಕ ಯಶಸ್ವಿಯಾದರೂ, ಅದನ್ನು ಬಿಂಬಿಸಿದ ರೀತಿಯಲ್ಲಿ ರೇ ಅವರಿಗೆ ಅಸಮಾಧಾನ ಇರುವುದು ಸ್ಪಷ್ಟವಾಗಿ ಕಾಣಸಿಗುತ್ತದೆ. ಒಂದು ರೀತಿಯ docu drama ಸಂವಿಧಾನವನ್ನು ಈ ಸಿನಿಮಾದಲ್ಲಿ ಅಳವಡಿಸಲಾಗಿದೆ.

ಸಿನಿಮಾದಲ್ಲಿ ಪೇಪರ್ ಮಾರುವ ರೀತಿ, ಕೆಮಿಕಲ್ ಮಾರುವ ರೀತಿ, ಕೊನೆಯಲ್ಲಿ ತನ್ನ ಸ್ನೇಹಿತನ ತಂಗಿ ಜ್ಯುತಿಕಾಳನ್ನು ನಾಯಕ ಕರೆದುಕೊಂಡು ಗೋಯೆಂಕಾ ಆಸ್ಪತ್ರೆಗೆ ತಲುಪಿಸುವವರೆಗೂ ಚಿತ್ರಕಥೆಯನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ.  ಇಲ್ಲಿ ಪ್ರೇಕ್ಷಕನಿಗೂ, ನಮ್ಮ ಸಮಾಜದಲ್ಲಿ ಇಷ್ಟರ ಮಟ್ಟಿಗೆ ಅಧಃಪತನ ಅಗುತ್ತಿದೆಯಾ ಎಂಬ ಭಾವನೆ ಕಾಡಲಾರಂಭಿಸುತ್ತದೆ.

ಕಥಾನಾಯಕ ಸೋಮನಾಥನದ್ದು, ಸಾಮಾನ್ಯ ಮಧ್ಯಮವರ್ಗದ ಮನೆಯಾಗಿತ್ತು. ಆತನ ತಂದೆ ಆದರ್ಶಗಳನ್ನು ತಲೆಯಲ್ಲಿ ಇಟ್ಟುಕೊಂಡಂತಹ ಮನುಷ್ಯ. ಮಗನಿಗೆ ಒಳ್ಳೆಯ ಕೆಲಸ ಇರಬೇಕೆಂಬ ಚಿಂತೆ ಯಾವಾಗಲೂ ಕಾಡುತ್ತಿರುತ್ತದೆ. ಸೋಮನಾಥನ ಅಣ್ಣ-ಅತ್ತಿಗೆಗೂ ಕೆಲಸ ಸಿಕ್ಕಿದ ತಕ್ಷಣ ಮದುವೆ ಮಾಡಿಬಿಡಬೇಕೆಂಬ ಅವಸರವಿರುತ್ತದೆ. ನಾಯಕನಿಗೆ ಕೆಲಸವಿಲ್ಲ ಎಂದು ತಿಳಿದ ಆತನ ಪ್ರೆಯಸಿಯೂ ಈತನಿಂದ ದೂರವಾಗಿ ಬೇರೆಂದು ಮದುವೆಯಾಗುತ್ತಾಳೆ. ಮಾತ್ರವಲ್ಲ ಮಗುವಿನ ಫೋಟೋವನ್ನು ಕಳುಹಿಸುತ್ತಿರುತ್ತಾಳೆ. ಇಲ್ಲಿ ದೇಶೀಯ ರಾಜಕೀಯವನ್ನು ರೇ ವಸ್ತುನಿಷ್ಠವಾಗಿ ಚಿತ್ರಿಸಿದ್ದಾರೆ.

ಜನ ಅರಣ್ಯ 1975ರಲ್ಲಿ ತೆರೆಕಂಡ ಸಿನೆಮಾ. ಅದೇ ಸಂದರ್ಭದಲ್ಲಿ ಭಾರತದಲ್ಲಿ ಪ್ರಕ್ಷುಬ್ಧತೆ ಇತ್ತು, ನಕ್ಸಲ್ ವಾದಿ ಚಳುವಳಿ ಉದ್ದಗಲಕ್ಕೂ ಹರಡಿತ್ತು, ಮಾರ್ಕ್ಸ್ ವಾದಿ ಚಿಂತನೆಗೆ ಪ್ರಾಮುಖ್ಯತೆಯಿತ್ತು.  ತುರ್ತುಪರಿಸ್ಥಿತಿಯ ಜೊತೆಗೆ ಜೆಪಿ ಚಳವಳಿಯೂ ಆರಂಭವಾಗಿತ್ತು. ಈ ಎಲ್ಲಾ ತಲ್ಲಣಗಳನ್ನು ಇಟ್ಟುಕೊಂಡು ಸಿನೆಮಾ ನೋಡುತ್ತಾ ಹೋದಾಗ, ಇದು ಕೇವಲ ಸೋಮನಾಥನ ಕಥೆಯಾಗಿರುವುದಿಲ್ಲ, ಕೇವಲ ಒಂದು ಕಲ್ಕತ್ತಾದ ನಿರುದ್ಯೋಗಿ ಯುವಕನ ಕಥೆಯಾಗಿರುವುದಿಲ್ಲ, ಬದಲಾಗಿ ಹತಾಶ ಭಾರತದ ಕಥೆಯಾಗಿ ರೂಪುಗೊಳ್ಳುತ್ತದೆ. ಯುವಕರಲ್ಲಿ ಮತ್ತು ಹತಾಶೆಗೊಂಡ ಭಾರತದಲ್ಲಿ ಯಾವ ರೀತಿಯಲ್ಲಿ ಮೌಲ್ಯಗಳ ಅಧಃಪತನವಾಗುತ್ತಿದೆ ಎಂಬುದನ್ನು ರೇ ಅವರು ಇಲ್ಲಿ ಹೇಳುತ್ತಾ ಹೋಗ್ತಾರೆ. ಇಂತಹ ಅನೇಕ ಕಾರಣಗಳಿಂದ, ವಸ್ತುವಿನ ದೃಷ್ಟಿಯಿಂದ ಹಾಗೂ ಅದರ ಸಂವಿಧಾನದ ದೃಷ್ಟಿಯಿಂದ ಜನ ಅರಣ್ಯ ಬಹಳ ಮುಖ್ಯವಾದ ಸಿನೆಮಾವಾಗಿ ಗುರುತಿಸಿಕೊಂಡಿದೆ.

0 Comments

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more