ಸಿನೆಮಾ ನೋಡುವುದು ಹೇಗೆ ? ಗಿರೀಶ್ ಕಾಸರವಳ್ಳಿ ದೃಷ್ಟಿಕೋನ

ಸಿನಿಮಾ ರಂಗಕ್ಕೆ ಸುಮಾರು 125 ವರ್ಷಗಳ ಇತಿಹಾಸವಿದೆ. ಸಾವಿರಾರು ವರುಷಗಳ ಇತಿಹಾಸವಿರುವ ಉಳಿದ ಕಲಾಪ್ರಕಾರಗಳಿಗೆ ಹೋಲಿಸಿದರೆ, ಸಿನಿಮಾರಂಗದ ಸೌಂದರ್ಯಶಾಸ್ತ್ರ, ಅದರ ಗ್ರಹಿಕೆಯ ರೀತಿ ಕಾಲಾನುಕಾಲಕ್ಕೆ ಬದಲಾವಣೆಗಳಾಗುತ್ತಿವೆ. ಅನೇಕ ತರದ ಸವಾಲುಗಳನ್ನು ಎದುರಿಸಿ, ಜಾಗತಿಕ ಪಲ್ಲಟಗಳಿಗೆ ಎದೆಯೊಡ್ಡಿ ಸಿನಿಮಾಗಳು ಪಕ್ವವಾಗುತ್ತಾ ಸಾಗಿದ ಪರಿಣಾಮ, ಅದರ ವ್ಯಾಕರಣ, ಸೌಂದರ್ಯಶಾಸ್ತ್ರ, ಉದ್ದೇಶಗಳು ನಿರಂತರವಾಗಿ ಪರಿವರ್ತನೆಯಾಗುತ್ತಿದೆ. ಹೀಗಾಗಿ ಇಡೀ ಜಗತ್ತಿನಲ್ಲಿ ಸಿನಿಮಾ ನೋಡುವ ಕ್ರಮ ಯಾವುದು ಎಂಬುದರ ಬಗ್ಗೆ ಪ್ರತಿಯೊಬ್ಬರೂ ಸ್ವಲ್ಪ ಮಟ್ಟಿಗಾದರೂ ತಿಳಿದುಕೊಳ್ಳಬೇಕು.

ಪ್ರೇಕ್ಷಕರು ಸಾಮಾನ್ಯವಾಗಿ ತೆರೆಯ ಮೇಲೆ ಹೇಳುವ ಕಥೆಯನ್ನು ಮಾತ್ರ ಗಮನಿಸುತ್ತಾರೆ. ಆದರೇ ಸಿನಿಮಾಗಳಿಗೆ ಕಥೆಯೊಂದೇ ಮುಖ್ಯವಲ್ಲ. ಅದು ಯಾವ ರೀತಿಯಲ್ಲಿ ಕಥೆಯನ್ನು ಹೇಳುತ್ತಿದೆ ಎಂಬುದು ಕೂಡ ಬಹಳ ಮುಖ್ಯ. ಸತ್ಯಜಿತ್ ರೇ ಹೇಳುವಂತೆ “ಕಂಟೆಂಟ್ ಎಷ್ಟು ಮುಖ್ಯವೋ ಕಂಟೇನರ್ ಕೂಡ ಅಷ್ಟೇ ಮುಖ್ಯನಾಗುತ್ತಾನೆ”. ಸಿನಿಮಾ ವ್ಯಾಖ್ಯಾನಿಸುವವವರು ಮತ್ತು ಸಿದ್ದಾಂತಿಗಳು ಹೇಳುವ ಪ್ರಕಾರ ಫಾರ್ಮ್ ಮತ್ತು ಕಂಟೆಂಟ್ ಗಳನ್ನು ಏಕಕಾಲಕ್ಕೆ ಗ್ರಹಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಯಾಕೆಂದರೇ ಸಿನಿಮಾಗಳು ಮೂಲತಃ ತಂತ್ರಜನ್ಯ ಮಾಧ್ಯಮ. ಲಕ್ಷಾಂತರ ರೂ.ಗಳ ಬಂಡವಾಳ ಬೇಡುತ್ತದೆ. ಹೀಗಾಗಿ ಸಿನಿಮಾ ಮುಖ್ಯವಾಗಿ ಬಂಡವಾಳ ಶಾಹಿಗಳ ಅಥವಾ ಉದ್ದಿಮೆದಾರರ ಕೈಸ್ವತ್ತು ಆಗಿರುತ್ತದೆ. ಇದರಿಂದಾಗಿಯೇ ನಟ, ನಿರ್ದೇಶಕ, ತಂತ್ರಜ್ಞ ಮುಂತಾದ ಚಲನಚಿತ್ರ ಸೃಷ್ಟಿಕರ್ತರು ಬಂಡವಾಳಶಾಹಿಗಳ ಉದ್ದೇಶಗಳಿಗೆ ಸಾಧನವಾಗುತ್ತಾರೆ. ಸಿನಿಮಾ ಸೃಷ್ಟಿಕ್ರಿಯೆ ಹಿಂದೆ ಯಾವ ರೀತಿಯ ಒತ್ತಡಗಳು ಕೆಲಸ ಮಾಡುತ್ತಿವೆ ಎಂಬುದು ಕೂಡ ಅದರ ಸ್ವರೂಪವನ್ನು ಸೃಷ್ಟಿ ಮಾಡುತ್ತವೆ. ನೋಡುಗರು ಅದನ್ನು ಅರ್ಥೈಸಿಕೊಳ್ಳಬೇಕು.

ಸಾಮಾನ್ಯವಾಗಿ ಸಿನಿಮಾಗಳಿಗೆ ಅದರದ್ದೇ ಆದ ಇಮೇಜ್ ಇರುತ್ತವೆ. ಇಲ್ಲಿ ದೃಶ್ಯಬಿಂಬ ಮಾತ್ರವಲ್ಲದೆ ಶಬ್ದಬಿಂಬ, ಸಂಕಲನವೂ ಬಹುಮುಖ್ಯ ಪಾತ್ರವಹಿಸುತ್ತದೆ. ತೆರೆಯಮೇಲೆ ಕಾಣಿಸಿಕೊಳ್ಳುವ ಪ್ರತಿಯೊಂದು ದೃಶ್ಯವೂ ನಿಜವೆಂದೇ ಭಾಸವಾಗುತ್ತದೆ. ಆದರೇ ಅವು ಭ್ರಮೆ ಹುಟ್ಟಿಸುವ ಕೃತಕ ಇಮೇಜ್ ಗಳು. ಪ್ರತಿಯೊಂದು ದೃಶ್ಯಬಿಂಬಗಳ ಹಿಂದೆಯೂ ತಾತ್ವಿಕವಾದ, ರಾಜಕೀಯವಾದ ನೆಲೆ ಇದ್ದೇ ಇರುತ್ತದೆ. ಹೀಗಾಗಿ ದೃಶ್ಯಗಳಿಗೆ ಅದರದ್ದೇ ಆದ ರಾಜಕೀಯವಿದೆ. ಇದನ್ನು ಬಿಂಬರಾಜಕೀಯ ಎಂದು ಕರೆಯಬಹುದು. ದೃಶ್ಯದ ಒಳಗಿರುವ ರಾಜಕೀಯ ಮತ್ತು ದೃಶ್ಯವನ್ನು ಸೃಷ್ಟಿ ಮಾಡುವ ತಂಡದ ರಾಜಕೀಯ ಧೋರಣೆಗಳನ್ನು ಬಿಂಬನ ರಾಜಕೀಯ ಎಂದು ಪರಿಗಣಿಸಬಹುದು. ಇವರೆಡನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿದ್ದರೇ ನಾವು ಸಿನಿಮಾವನ್ನು ಸಮಗ್ರವಾಗಿ ಗ್ರಹಿಸಲು ಸಾಧ್ಯವಿಲ್ಲ.

ವ್ಯಾಪಾರಿ ಪದ್ದತಿಯಲ್ಲಿ ಸಿದ್ದವಾಗುತ್ತಿರುವ ಕಲಾಮಾಧ್ಯಮ ಸಿನಿಮಾ. ಇಲ್ಲಿ ಹೆಚ್ಚು ರಂಜಿಸುವ ರೀತಿಯಲ್ಲಿ, ಆವರಿಸಿಕೊಳ್ಳುವ ರೀತಿಯಲ್ಲಿ ದೃಶ್ಯವನ್ನು ಕಟ್ಟಲಾಗುತ್ತದೆ. ಹೀಗಾಗಿ ಸಿನಿಮಾ ನೋಡುವುದು ಕೂಡ ತುಸು ಕಷ್ಟದ ಕೆಲಸ. ಮೈಮರೆತು ನೋಡುವ ಕ್ರಮ ಬೇರೆ. ಸಿನಿಮಾದ ನಿಜವಾದ ಅರ್ಥ ಏನೆಂದು ತಿಳಿಯಬೇಕಾದರೇ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. “ಕ್ಷಿಷ್ಟಿಯನ್ ಮೇಟ್ಸ್” ಎಂಬಾತನ ಪ್ರಕಾರ, It’s easy to experience a film, but difficult to explain it.  ಇಂದು ಸಿನಿಮಾ ಸೃಷ್ಟಿಕರ್ತನ ಉದ್ದೇಶ ಹಾಗೂ ಅನುಭವಗಳನ್ನು ಅರ್ಥ ಮಾಡಿಕೊಂಡಾಗ ಮಾತ್ರ ಚಿತ್ರವೂ ಸಮಗ್ರವಾಗಿ ಅರ್ಥವಾಗುತ್ತದೆ.

ಸಿನಿಮಾದಲ್ಲಿ ಅನೇಕ ದೃಶ್ಯಗಳು ಬರುತ್ತಿರುತ್ತವೆ. ಕೇವಲ ಮೈಮರೆಸುವುದು ಅವುಗಳ ಉದ್ದೇಶವೇ ? ಅಥವಾ ಅವುಗಳಿಗೊಂದು ಧ್ವನಿ, ಅರ್ಥ ಇರುತ್ತವೆಯೇ ? ಪ್ರತಿಯೊಂದು ತಾಂತ್ರಿಕ ಸೌಲಭ್ಯಗಳಿರುವುದು ಮೆಚ್ಚಿಸಲಿಕ್ಕಾಗಿಯೇ ?. ಈ ಮೆಚ್ಚಿಸುವುದು ಎಂಬುದು ಗ್ರಾಹಕ ಸಂಸ್ಕೃತಿ (consumerist ideology). ವಸ್ತುವಿಗೆ ಅಗತ್ಯವೋ ಅಥವಾ ಅಗತ್ಯವಿಲ್ಲವೋ !! ಒಟ್ಟಾರೆ ಅದನ್ನು ಮಾರಾಟ ಮಾಡುವುದು ಮಾತ್ರ ಉದ್ದೇಶವಾಗಿರುತ್ತದೆ. ಹೀಗಾದಾಗ ಅದು ಸರಕು ಸಂಸ್ಕೃತಿಯ ಒಂದು ಭಾಗವಾಗುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಇದರ ಮೂಲಕವೇ ನಾವು ನೋಡುವ ಪ್ರತಿಯೊಂದು ದೃಶ್ಯದ, ಪ್ರತಿಯೊಂದು ವಿವರಗಳನ್ನು ಪ್ರಶ್ನಿಸಬೇಕಾಗುತ್ತದೆ. ಉದಾ: ಬಹಳ ಅದ್ಬುತ ಫೋಟೋಗ್ರಫಿ ಎಂದು ಕೆಲವೊಮ್ಮೆ ಉದ್ಗರಿಸುತ್ತೇವೆ. ಈ ಬ್ಯೂಟಿಫುಲ್ ಫೋಟೋಗ್ರಫಿ ಎಂದರೇ ಏನು ? ಎನ್ನುವುದನ್ನು ಪ್ರಶ್ನೆ ಮಾಡಿಕೊಳ್ಳಬೇಕು. ಜಗತ್ತಿನಲ್ಲಿರುವ ಎಲ್ಲಾ ಆಗುಹೋಗುಗಳನ್ನು ಸುಂದರವಾಗಿ ತೋರಿಸುವುದರ ಹಿಂದಿರುವ ಉದ್ದೇಶ, ಮೈಮರೆಸುವುದು  ಅಥವಾ ಎಲ್ಲಾ ರಾಜಕೀಯ ಒತ್ತಡಗಳನ್ನು ಅನಾವರಣ ಮಾಡುವುದೇ ? ಕಲೆಯ ನೆಲೆ ನಮ್ಮನ್ನು ಕೊಳ್ಳುವ ರೀತಿಯಲ್ಲಿರಬಾರದು, ಅರಿವನ್ನು ಹೆಚ್ಚಿಸುವ ರೀತಿಯಲ್ಲಿರಬೇಕು. ಹೀಗಾಗಿ ಸಿನಿಮಾದ ಪ್ರತಿಯೊಂದು ತಂತ್ರಗಳನ್ನೂ ಕೂಡ ಪ್ರಶ್ನೆ ಮಾಡುತ್ತಾ ಸಾಗಬೇಕು.  

ಸಿನಿಮಾದಲ್ಲಿ ಮುಖ್ಯವಾಗಿ ನಾಲ್ಕೈದು ತಂತ್ರಗಳಿವೆ. ಪ್ರಮುಖವಾಗಿ ಛಾಯಾಗ್ರಾಹಣ, ಸಂಕಲನ, ಶಬ್ದ ಮುದ್ರಣ, ನಟನೆ, ಪ್ರೊಡಕ್ಷನ್ ಡಿಸೈನ್ ಮುಂದಾದವು. ಇವುಗಳನ್ನು ಮೈಮರೆಸಲಿಕ್ಕಾಗಿ ಅಳವಡಿಸಲಾಗಿದೆಯೇ ? ಅಥವಾ ವಸ್ತುವಿನ ಧ್ವನಿ ಶಕ್ತಿಯನ್ನು ಹೆಚ್ಚಿಸಲು ಬಳಸಲಾಗಿದೆಯೇ ? ಎಂಬುದನ್ನು ಪ್ರೇಕ್ಷಕ ಗಮನಿಸಬೇಕಾಗುತ್ತದೆ. ಸಿನಿಮಾಗಳು ತೆರೆಯ ಮೇಲೆ ಬಹಳ ಸುಂದರವಾಗಿ ಕಾಣಬೇಕು ಎಂಬುದು ತಪ್ಪು ಕಲ್ಪನೆ. ‘ಸುಂದರವಾಗಿರುವುದು’ ಅಂದರೇ ಏನು ? ಎಂಬುದನ್ನು ನಮ್ಮಲ್ಲಿ ಪ್ರಶ್ನಿಸಿಕೊಂಡಾಗ ನಮಗಿಂತ ಹೊರತಾದುದು ಎಂಬ ಅರ್ಥ ಬರುತ್ತದೆ. ಆದರೆ ಸಿನಿಮಾ ನಮ್ಮ ಒಳಗನ್ನು ನೋಡಿಕೊಳ್ಳುವ ರೀತಿಯಲ್ಲಿರಬೇಕೆ ಹೊರತು, ಇನ್ಯಾವುದನ್ನೋ ಹಿಂಬಾಲಿಸುವುದು ಅಥವಾ ಆಕರ್ಷಣೆಗೆ ಒಳಗಾಗುವುದಲ್ಲ. ಹೀಗಾಗಿ ಒಂದು ವರ್ಗದ ಜನ, ಒಂದು ಜಾತಿಯ ಜನ, ಒಂದು ದೇಶದ ಜನ, ಇವರು ಸುಂದರರು, ಇವರು ಸುಂದರರಲ್ಲ ಎಂಬುದನ್ನು ಚಿತ್ರ ಕಟ್ಟುವ ಕ್ರಮದಲ್ಲಿ ನಿರಂತರವಾಗಿ ಹೇಳಲಾಗುತ್ತಿದೆ. ಇದನ್ನು ಅರ್ಥೈಸಿಕೊಳ್ಳದಿದ್ದರೇ ನಾವು ತಪ್ಪಾಗಿ ಸಿನಿಮಾಗಳನ್ನು ಗ್ರಹಿಸುತ್ತಿದ್ದೇವೆ ಎಂದರ್ಥ.

ಸಿನಿಮಾಗಳು ಅದ್ಬುತವಾಗಿ-ಸುಂದರವಾಗಿ ಕಾಣಬೇಕೆಂಬ ಕೆಲವರು ಹಾಲೆಂಡ್, ಸಿಂಗಾಪುರ ಮುಂತಾದ ದೇಶಗಳಿಗೆ ತೆರಳಿ ಚಿತ್ರಿಕರಿಸುತ್ತಾರೆ. ಜನರು ಕೂಡ ಇದನ್ನು ಮೆಚ್ಚಿಕೊಳ್ಳುತ್ತಾರೆ. ಆದರೆ ಅದರ ಹಿಂದಿನ ರಾಜಕೀಯ ನಮ್ಮ ದೇಶ ಸುಂದರವಾಗಿಲ್ಲ, ನಮ್ಮ ಜನಾಂಗ ಸುಂದರವಾಗಿಲ್ಲ, ನಮ್ಮ ಜನರು ಸುಂದರವಾಗಿಲ್ಲ ಎಂಬುದನ್ನು ಒತ್ತಿ ಹೇಳುತ್ತದೆ. ಇಂದು ಮೈಬಣ್ಣವೇ ನಟನೆಯ ಅಳತೆಗೋಲಾಗುತ್ತಿರುವುದು ಸರಿಯಲ್ಲ. ನಮ್ಮಲ್ಲಿರುವ ಸ್ಥಳೀಯ ಸಂಸ್ಕೃತಿಯಲ್ಲೇ ಅನೇಕ ಅಂಶಗಳಿರುತ್ತವೆ. ಅನೇಕ ಸತ್ಯಗಳಿರುತ್ತವೆ. ಅದನ್ನು ಚಿತ್ರದಲ್ಲಿ ತೋರಿಸಬೇಕೆ ಹೊರತು ಹೊರಗಿನಿಂದ ಎರವಲು ತಂದ ವಿಚಾರಗಳನ್ನು ಸಿನಿಮಾ ಮಾಡುವುದಲ್ಲ. ಹೀಗಾಗಿ ಯಾವುದು ವಸ್ತುವಿನ ಧ್ವನಿಶಕ್ತಿಯನ್ನು ಹೆಚ್ಚು ಮಾಡುವುದೋ ಅದು ಒಳ್ಳೆಯ ಫೋಟೋಗ್ರಫಿಯಾಗಿ ಗುರುತಿಸಿಕೊಳ್ಳುತ್ತದೆ. ಸುಂದರವಾಗಿ ಕಾಣುವುದೇ ಅತ್ಯುತ್ತಮವಲ್ಲ. ಇದೇ ಮಾತನ್ನು ನಟನೆಗೂ ಅನ್ವಯಿಸಬಹುದು. ನಟನೆ ಅಂದರೇ ಭಾವಪ್ರದರ್ಶನವಲ್ಲ. ಅವರ ಭಾವಪ್ರದರ್ಶನ ನೋಡಿ ನಾವು ಅಳುವುದು, ನಗುವುದು ಸೃಜನಶೀಲ ಕ್ರಿಯೆಯ ಭಾಗವಲ್ಲ. ಅದು ನಮ್ಮೊಳಗೆ ಹೊಕ್ಕು ನಮ್ಮನ್ನು ಎಚ್ಚರಿಸಬೇಕು. ಅದು ನಿಜವಾದ ಅಭಿನಯವಾಗುತ್ತದೆ.

ನಮ್ಮಲ್ಲಿ ಹೆಚ್ಚಾಗಿ, ಜನರ ಮನಸ್ಥಿತಿಯನ್ನು ಕದಡುವ (emotionally disturbed) ರೀತಿಯಲ್ಲೆ ಅಭಿನಯಗಳಿರುತ್ತವೆ. ಯಾರು ಹೆಚ್ಚಾಗಿ ಭಾವನೆಗಳನ್ನು ಕೆದಕುತ್ತಾರೋ ಅವರು ಅತ್ಯುತ್ತಮ ನಟ, ನಟಿ ಎಂಬ ಬಿರುದಿಗೆ ಪಾತ್ರರಾಗುತ್ತಾರೆ. ಆದರೇ ಕೆದಕಿದ ಭಾವನೆಗಳ ಗೂಢಾರ್ಥವನ್ನು ಅರ್ಥೈಸಿಕೊಳ್ಳುವುದು ನಟನ ಉದ್ದೇಶವಾಗಿರಬೇಕು. ಹೀಗಾಗಿ ಬಹಳ ಜನರು ತಮ್ಮ ಅಭಿನಯವನ್ನು ಒಂದು ಹಂತದವರೆಗೂ ಎತ್ತರಿಸಿ, ಮುಂದೆ ಪ್ರೇಕ್ಷಕನೇ ಅದರೊಂದಿಗೆ ಸಂವಾದಿಸುವ ರೀತಿಯಲ್ಲಿ  ಕಟ್ಟುತ್ತಾರೆ. ಹೀಗಾಗಿ ಅಭಿನಯ ಕೂಡ ಒಂದು ಸಂವಾದವಾಗಿ ಮಾರ್ಪಟ್ಟಿದೆ. ಇದೇ ಮಾತುಗಳನ್ನು ಎಲ್ಲದಕ್ಕೂ ಹೇಳಬಹುದು.

ಸಂಗೀತದ ಬಗ್ಗೆ ಗಮನಿಸುವುದಾದರೇ ಸುಂದರ, lilting Music ಮುಂತಾದ ಶಬ್ದಗಳನ್ನು ಸಿನಿಮಾ ವ್ಯಾಖ್ಯಾನದಲ್ಲಿ, ಚಿತ್ರ ವಿಮರ್ಶೆಯಲ್ಲಿ ಬಳಸುತ್ತಾರೆ. Lilting ಎಂಬುದು ಕತ್ತಲೆಯಲ್ಲಿ ಕಣ್ಣುಮುಚ್ಚಿಕೊಂಡು ಹಾಡುವುದೇ ? ಅಥವಾ ಕತೆಯ ಒಡಳಾಲದಿಂದ ಹುಟ್ಟಿಬರುತ್ತಿದೆಯೇ ? ಎಂಬುದನ್ನು ಗಮನಿಸಬೇಕು. ಚೋಮನದುಡಿ ಸಿನಿಮಾದಲ್ಲಿ ಸಂಗೀತವು ಹೇಗೆ ಅವರ ಸಮುದಾಯದ, ಅವರ ಎಲ್ಲಾ ಆಕ್ರೋಶದ ಧ್ವನಿಯನ್ನು ಹೊರಹಾಕುವುದು ಎಂಬುದನ್ನು ನೋಡಬಹುದು. ಇಲ್ಲಿ ಪರಿಕರಗಳಲ್ಲಿ, ವಾದ್ಯಗಳಲ್ಲಿ ಧ್ವನಿ ಹೊರಹೊಮ್ಮಿ ಅದರ ಮೂಲಕವೇ ಸಮೂದಾಯ ಕಷ್ಟಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯವಾಯಿತು.

ಕೇವಲ ಮೈಮರೆಸುವ ಸಂಗೀತವಿದ್ದಾಗ, ನೋವು ಸಂಕಟಗಳು ಮುಖ್ಯವಾಗುವುದಿಲ್ಲ. ಸಂತೋಷ, ದುಃಖ ದುಮ್ಮಾನಗಳು ಮುಖ್ಯವಾಗುವುದಿಲ್ಲ, ನಮ್ಮ ತೆವಲುಗಳು ಮಾತ್ರ ಮುಖ್ಯವಾಗುತ್ತದೆ. ಸಿನಿಮಾ ಈ ರೀತಿಯಾಗಿರಬಾರದು. ಸಂಕಲನಗಳು ಕೂಡ ಪ್ರಬುದ್ಧವಾಗಿರಬೇಕು. ಇಂದು ಪ್ರೇಕ್ಷಕನನ್ನು ಕುರ್ಚಿಯ ಅಂಚಿನಲ್ಲೆ ಕೂರಿಸುವುದು ಅತ್ಯುತ್ತಮ ಸಂಕಲನ/ಎಡಿಟಿಂಗ್ ಎಂದೆನಿಸಿಕೊಳ್ಳುತ್ತಿದೆ. ಆದರೆ ಸಂಕಲನ ಎಂಬುದೊಂದು ಉಪಕರಣ. ವಸ್ತುವಿನ ಜೊತೆ ಪ್ರೇಕ್ಷಕ ಯಾವ ರೀತಿಯಲ್ಲಿ ಸಂಬಂಧವನ್ನು, ನಂಟನ್ನು ಇರಿಸಿಕೊಳ್ಳಬೇಕೆಂಬುದನ್ನು ಕಟ್ಟುವ ಒಂದು ಕ್ರಮ. ಹೀಗಾಗಿ ನಿರ್ದೇಶಕ ಅಥವಾ ಸಿನಿಮಾದ ಕರ್ತೃ ಆರಿಸಿಕೊಳ್ಳುವ ಟೆಂಪೋ ಅಥವಾ ರಿದಂ ಕೇವಲ ಕುರ್ಚಿಯ ಅಂಚಿನಲ್ಲಿ ಕೂರಿಸುವ ತಂತ್ರವಾಗಿರಬಾರದು. ಅದು ವಸ್ತುವಿನ ಜೊತೆಗೆ ಪ್ರೇಕ್ಷಕ ಯಾವ ರೀತಿಯಲ್ಲಿ ತೊಡಗಿಕೊಳ್ಳಬೇಕೆಂಬುದನ್ನು ನಿರ್ಧರಿಸುವ ಸಾಧನವಾಗಬೇಕು.

ಲುಯಿಸ್ ಬುನುವೆಲ್ “The Face of the Film is a Political statement of the filmmaker” ಎಂಬ ಮಾತನ್ನು ಹೇಳುತ್ತಾನೆ. ಅಂದರೇ ಪ್ರೇಕ್ಷಕ ಯಾವ ವಿಷಯನ್ನು, ಎಷ್ಟು ಕೂಲಂಕುಶವಾಗಿ ಗ್ರಹಿಸಬೇಕೆಂಬುದನ್ನು ಸಂಕಲನ ನಿರ್ಧರಿಸುತ್ತದೆ. ಒಬ್ಬಾತ ಮತ್ತೊಬ್ಬನಿಗೆ ಹೊಡೆದ ಎಂದಿಟ್ಟುಕೊಳ್ಳಿ. ಇದನ್ನು ನ್ಯೂಸ್ ಐಟಂ ಆಗಿ ತಲುಪಿಸುವುದೋ ಅಥವಾ ಯಾರಿಗೆ ಹೊಡೆದರು, ಹೊಡೆಯಿಸಿಕೊಂಡವನ ಸಾಮಾಜಿಕ, ರಾಜಿಕೀಯ ನೆಲೆಗಳೇನು ?, ಹೊಡೆದವನ ಸಾಮಾಜಿಕ ನೆಲೆಯೇನು ?, ಈ ಸಂಘರ್ಷಕ್ಕೆ ಎಷ್ಟರ ಮಟ್ಟಿಗೆ ಐತಿಹಾಸಿಕ ಕಾರಣಗಳಿವೆ ?, ಇದನ್ನೆಲ್ಲವನ್ನು ನಿಧಾನವಾಗಿ, ವಿವರಾತ್ಮಕವಾಗಿ ಹೇಳಬೇಕಾಗುತ್ತದೆ. ಆಗ ಅದರ ರಾಜಕೀಯ ನಮಗೆ ಅರ್ಥವಾಗತೊಡಗುತ್ತದೆ. ಇಲ್ಲದಿದ್ದರೇ ಕೇವಲ ಘಟನೆ ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಅದರ ಹಿಂದಿನ ಕಾರ್ಯಕಾರಣ ಸಂಬಂಧ ಅರ್ಥವಾಗುವುದಿಲ್ಲ. ಹೀಗಾಗಿ ವಿವರಗಳ ಮೂಲಕ ಸಮಗ್ರವಾಗಿ ಕಟ್ಟುಕೊಡುವುದು ನಿಜವಾದ ಸಿನಿಮಾದ ಕೆಲಸ. ಅದು ಪೊಲಿಟಿಕ್ಸ್ ಆಫ್ ಇಮೇಜಿಂಗ್.

ಪ್ರೇಕ್ಷಕನಿಗೆ ಸಂಪೂರ್ಣ ವಿವರ ನೀಡದೆ ಕೇವಲ ವಿಚಾರಗಳನ್ನು ರವಾನಿಸುವ ಕೆಲಸ ಮಾಡಿದರೇ, ಆತ ಮುಂದೇನಾಯ್ತು ಎಂಬುದನ್ನು ಕುತೂಹಲದಿಂದ ನೋಡುತ್ತಿರುತ್ತಾನೆ.  ಆದರೇ ಎಚ್ಚರವಿರುವ ಹಾಗೂ ಕಾಳಜಿಯಿರುವ ನಿರ್ದೇಶಕನಾದರೆ ನಿಧಾನವಾಗಿ ಕಥೆಯನ್ನು ಹೇಳುವ ಸಂಪ್ರದಾಯವನ್ನು ಬೆಳಸಿಕೊಳ್ಳುತ್ತಾನೆ. ಅಲ್ಲಿ ಮುಂದೇನಾಗುವುದು ಎಂಬ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಅದರ ಬದಲಿಗೆ ಈಗೇನಾಗುತ್ತಿದೆ ಎಂಬುದರ ಬಗ್ಗೆ ಮಾತ್ರ ಪ್ರೇಕ್ಷಕ ಗಮನ ಹರಿಸುತ್ತಾ ಹೋಗುತ್ತಾನೆ.

ಈ ರೀತಿಯಾಗಿ ಸಿನಿಮಾದಲ್ಲಿ ಕಥಾವಸ್ತು ಎಷ್ಟು ಮುಖ್ಯವೋ, ಕಟ್ಟುವ ಕ್ರಮಕ್ಕೂ ಅಷ್ಟೇ ಮಹತ್ವವಿದೆ. ಸಿನಿಮಾದ ನಡೆಯನ್ನು ಗಮನಿಸುತ್ತಾ ಹೋದರೆ, ಇತ್ತೀಚಿನ ವರ್ಷಗಳಲ್ಲಿ ಕಟ್ಟುವ ಕ್ರಮಕ್ಕೆ ಹೆಚ್ಚಿನ ಒತ್ತು ಸಿಗುತ್ತಿದೆ. ಈ ಮೊದಲು ಕಥೆಯನ್ನು ರೋಮ್ಯಾಂಟಿಕ್ ಆಗಿ ಹೇಳಲಾಗುತ್ತಿತ್ತು, ಇದು ಪ್ರೇಕ್ಷಕನಿಗೆ ಬೇಗ ತಲುವುದು ಎಂಬ ಆಲೋಚನೆಗಳಿದ್ದವು. ಆದರೆ ಈ ಕ್ರಮ ಸುಳ್ಳು ಎಂಬುದು ನಂತರ ಬಯಲಾಯಿತು. ಹಸಿಹಸಿಯಾಗಿ ದೃಶ್ಯವನ್ನು ಪ್ರೇಕ್ಷಕನಿಗೆ ತೋರಿಸುವುದರಿಂದ, ನೋಡಲು ಕಷ್ಟವಾದರೂ ವಾಸ್ತವವನ್ನು ತಿಳಿಸಿದಂತಾಗುತ್ತದೆ. ಸಿನಿಮಾದ ಉದ್ದೇಶವೇ ಜನರನ್ನು ಆ ಘಟನೆಗಳಿಗೆ ಶ್ರುತಿ ಮಾಡುವುದು. ಆಥವಾ ಆ ಘಟನೆಗಳ ಜೊತೆಗೆ ಮುಖಾಮುಖಿ ಮಾಡುವುದು.

60-70ರ ದಶಕದವರೆಗೂ ಹಸಿ ಹಸಿ ವಾಸ್ತವವನ್ನು ಬಿಂಬಿಸುವುದೇ ಸಿನಿಮಾಗಳ ಉದ್ದೇಶವಾಗಿತ್ತು. ಅನಂತರ ಈ ಕ್ರಮವೂ ಕೂಡ ಪ್ರಶ್ನೆಗಳಿಗೆ ಗುರಿಯಾಯಿತು. ಸಿನಿಮಾವನ್ನು ತುಣಕು-ತುಣುಕಾಗಿ ಕತ್ತರಿಸಿ ಸಂಕಲಿಸಿ ತೋರಿಸುವ ಕ್ರಮ ನಿರ್ದೇಶಕನದ್ದೆ ಆಗಿರುತ್ತದೆ, ಅದು ವಾಸ್ತವವಲ್ಲ. ಹೀಗಾಗಿ ಪ್ರೇಕ್ಷಕನಿಗೆ ಘಟನೆಯ ಜೊತೆ ನೇರವಾಗಿ ಮುಖಾಮುಖಿ ಸಂಕಲನದ ಮೂಲಕ ಮಾಡಬೇಕಾಗುತ್ತದೆ. ಸಿನಿಮಾವನ್ನು ನೋಡಿದಾಗ ಅದರ ಒಳಗಡೆ ಯಾವ ವಸ್ತುವನ್ನು ಆರಿಸಿಕೊಂಡಿದ್ದಾನೆ ಹಾಗೂ ಎಷ್ಟು ವಿವರವಾಗಿ ಕಟ್ಟುತ್ತಿದ್ದಾನೆ ಎಂಬುದರ ಅರಿವು ಪ್ರೇಕ್ಷಕನಿಗಾಗಬೇಕು. ಅದರ ಜೊತೆಗೆ ಆ ಚಿತ್ರ ಎಷ್ಟರ ಮಟ್ಟಿಗೆ ಸೃಜನಾತ್ಮಕತೆಯಿಂದ ಕೂಡಿದೆ ಮತ್ತು ಎಷ್ಟರ ಮಟ್ಟಿಗೆ progressive and regressive ಆಗಿದೆ ಎಂಬುದನ್ನು ಕಂಡುಕೊಳ್ಳಬೇಕು.

ಚಲನಚಿತ್ರಗಳು ನಮ್ಮ ಅರಿವನ್ನು ಹೆಚ್ಚಿಸಬೇಕು. ಪರಿಚಿತ ಮುಖದೊಳಗಿನ ಅಪರಿಚಿತತೆ ಹಾಗೂ ಹೊಸ ಜಗತ್ತನ್ನು ತೋರ್ಪಡಿಸುವಂತಿರಬೇಕು. ಸಿನಿಮಾವನ್ನು ಆಸ್ವಾದಿಸುವಾಗ ನಿಷ್ಕ್ರೀಯತೆಯಿಂದ ನೋಡುವುದು ಬಹಳ ದೊಡ್ಡ ಅಪಾಯಕಾರಿ. ಪ್ರೇಕ್ಷಕ ನಿಷ್ಕ್ರೀಯನಾಗಿದ್ದಾಗ ಬಂಡವಾಳಶಾಹಿಯು ವ್ಯಕ್ತಿತ್ವವನ್ನು ಕದ್ದು ಬಂಡವಾಳದ ಮೂಲಧನವನ್ನಾಗಿಸಿಕೊಳ್ಳುತ್ತಾನೆ. ಹೀಗಾಗಿ ಸ್ವಲ್ಪ ಮಟ್ಟಿಗಾದರೂ ಪ್ರೇಕ್ಷಕನಿಗೆ ಎಚ್ಚರವಿರಬೇಕು, ಸಿನಿಮಾದ ಕತೆ, ಭಾವನೆ ಮಾತ್ರವಲ್ಲ, ಅದರ ಹಿಂದಿರುವ ತಾತ್ವಿಕ-ಸಾಮಾಜಿಕ ಕಾಳಜಿಗಳ ಬಗ್ಗೆಯೂ ಯೋಚಿಸುತ್ತಾ ಸಿನಿಮಾವನ್ನು ನೋಡಿದರೆ ಅದಕ್ಕೆ ಹೆಚ್ಚಿನ ಅರ್ಥ ಬರುವುದು ಮತ್ತು ಆ ರೀತಿಯಾಗಿ ನೋಡುವ ಕ್ರಮ ಹೆಚ್ಚು ಆರೋಗ್ಯಕರ.

  • ಗಿರೀಶ್ ಕಾಸರವಳ್ಳಿ

0 Comments

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more