ಸಂಗೀತದ ಮೂಲಕ ಮಾನವ ಶಕ್ತಿಯನ್ನು ಕಟ್ಟಿಕೊಟ್ಟ ಸಿನಿಮಾ ‘ದ ನೇಕೆಡ್ ಐಲ್ಯಾಂಡ್’

‘ದ ನೇಕೆಡ್ ಐಲ್ಯಾಂಡ್’ ಎಂಬ ಜಪಾನೀಸ್ ಸಿನಿಮಾವನ್ನು 1960ರಲ್ಲಿ ಕೆನೆತ್ ಶಿಂಡೋ ನಿರ್ದೇಶಿಸಿದರು. ಬಹಳ ಕಾವ್ಯಾತ್ಮಕವಾಗಿ ಮೂಡಿಬಂದ ಇದು ಮೂಕಿ ಚಿತ್ರವಾಗಿತ್ತು. ಜಪಾನಿನಲ್ಲಿ ಬಹಳ ಐಲ್ಯಾಂಡ್ ಗಳು ನಿರ್ಜನವಾಗಿರುತ್ತವೆ. ಕೆಲವೊಂದು ದ್ವೀಪ ಪ್ರದೇಶಗಳಲ್ಲಿ ಮಾತ್ರ ಒಂದು ಅಥವಾ ಎರಡು ಕುಟುಂಬಗಳು (ಉದಾ: Seto Inland Sea)  ವಾಸಮಾಡುತ್ತಿರುತ್ತವೆ. ಇಂತಹ ದ್ವೀಪ ಪ್ರದೇಶದಲ್ಲಿ ಕೆನೆತ್ ಶಿಂಡೋ ಹುಟ್ಟಿ ಬೆಳೆದಿದ್ದರು. ಅವರ ತಂದೆ-ತಾಯಿ ಕೂಡ ಪ್ರತಿದಿನದ ಬದುಕನ್ನು ಸುಂದರಗೊಳಿಸಲು ಶತಪ್ರಯತ್ನ ಮಾಡುತ್ತಿದ್ದರು. ಇರುವೆಗಳಿಗೂ ವಾಸಯೋಗ್ಯವಲ್ಲದ ಪ್ರದೇಶವಾದರೂ ಶಿಂಡೋ ತಂದೆ-ತಾಯಿ ಅಲ್ಲೆ ಜೀವನ ಸಾಗಿಸುತ್ತಿದ್ದರು. “Home is where the heart is” ಎಂಬ ಮಾತಿನಂತೆ ಅವರು ಹುಟ್ಟಿದಲ್ಲೇ ಸಾಯುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇಂತಹ ಪರಿಸರದಲ್ಲೇ ಜೀವನ ಕಂಡುಕೊಂಡ ಶಿಂಡೋಗೆ ತನ್ನ ತಂದೆ-ತಾಯಿಯ ನೆನಪಿಗಾಗಿ ಸಿನಿಮಾವೊಂದನ್ನು ಮಾಡಬೇಕೆಂಬ ಆಸೆ ಚಿಗುರೊಡೆಯುತ್ತದೆ. ಆ ಪ್ರಯತ್ನದಲ್ಲಿ ಮೂಡಿಬಂದ ಚಿತ್ರವೇ ‘ದ ನೇಕೆಡ್ ಐಲ್ಯಾಂಡ್’.

ತಾವು ವಾಸ ಮಾಡುತ್ತಿರುವ ದ್ವೀಪದಲ್ಲಿ ಗಿಡ ನೆಟ್ಟು, ಅದನ್ನು ಹಸಿರಾಗಿ ಪರಿವರ್ತಿಸಬೇಕೆಂಬುದು ಶಿಂಡೋ ತಂದೆ ತಾಯಿಯ ಕನಸಾಗಿತ್ತು. ಆದರೇ ಸಮುದ್ರದಲ್ಲಿನ ಉಪ್ಪು ನೀರು, ಗಿಡಬೆಳೆಸುವ ಅವರ ಆಸೆಗೆ ತಣ್ಣೀರೆರಚಿತ್ತು. ಆದರೂ ಪ್ರಯತ್ನ ಬಿಡದೆ ದೋಣಿಯ ಮೂಲಕ ಪಕ್ಕದ ತೀರಕ್ಕೆ ಹೋಗಿ ಬಕೆಟ್ ಗಳ ಮೂಲಕ ಸಿಹಿನೀರನ್ನು ತಂದು ಗಿಡ ಬೆಳೆಸುವ ಕೈಂಕರ್ಯ ಕೈಗೊಳ್ಳುತ್ತಾರೆ. ಈ ಪ್ರಯಾಣವನ್ನೇ ಉಪಮೇಯ ಅಥವಾ ರೂಪಕವಾಗಿ ಸಿನಿಮಾದಲ್ಲಿ ಹೇಳಲಾಗುತ್ತದೆ. ಎಲ್ಲಿಂದಲೋ ನೀರು ತಂದು ಪರಿಸರವನ್ನು ಹಸಿರುಗೊಳಿಸುವ ಮನುಷ್ಯನ ಈ ಪ್ರಯತ್ನ ಸಾರ್ಥಕವೇ ಅಥವಾ ನಿರರ್ಥಕವೇ ಎಂಬ ಪ್ರಶ್ನೆಯನ್ನು ಈ ಚಿತ್ರ ಪ್ರೇಕ್ಷಕರ ಮುಂದಿಡುತ್ತದೆ. ಕೆನೆತ್ ಶಿಂಡೋ ಸಿನಿಮಾ ಮಾಡುವ ಪ್ರಸ್ತಾಪ ಮುಂದಿಟ್ಟಾಗ ಯಾರು ಕೂಡ ಹಣ ಹೂಡಲು ಸಿದ್ದರಿರಲಿಲ್ಲ. ಕೊನೆಗೆ ತಾಯಿಯ ಪಾತ್ರದಲ್ಲಿ ಹೆಂಡತಿಯನ್ನೇ ಕಥನಾಯಕಿಯನ್ನಾಗಿ ಮಾಡಿ ತಾನೇ ಹಣಹಾಕಿ ಸಿನಿಮಾ ಮಾಡುತ್ತಾನೆ.

ಬರಡು ನೆಲದಲ್ಲಿ ಹಸಿರು ಚಿಮ್ಮಿಸಲು ಪ್ರಯತ್ನ ಮಾಡುವ ಗಂಡ-ಹೆಂಡತಿ, ತಮ್ಮಿಬ್ಬರು ಮಕ್ಕಳಲ್ಲಿ ಒಬ್ಬನನ್ನು ನಿರ್ದೇಶಕನನ್ನಾಗಿ ಮಾಡಿ, ಮತ್ತೊಬ್ಬಾತನನ್ನು ಉತ್ತಮ ಸ್ಥಾನಕ್ಕೆ ಏರಿಸುವಲ್ಲಿ ಯಶಸ್ಸಾಗುತ್ತಾರೆ. ತನಗೆ ಸರಿಯೆನಿಸಿದ್ದನ್ನು ಹೇಗಾದರೂ ಸಾಧಿಸಬೇಕು, ಅನುಕೂಲವಿಲ್ಲವೆಂದು ಕೈಚೆಲ್ಲಬಾರದು. ನನ್ನ ಜಗತ್ತನ್ನು ಸುಂದರಗೊಳಿಸಬೇಕು ಎಂಬ ಆಂತರಿಕ ಶಕ್ತಿಯನ್ನು ಒಳಗೊಂಡಿದ್ದ ಕುಟುಂಬದ ಬಗ್ಗೆ ಚಿತ್ರದಲ್ಲಿ ಅಭೂತಪೂರ್ವವಾಗಿ ವಿವರಿಸಲಾಗಿದೆ. ತಾವು ಮಾಡುತ್ತಿರುವ ಪ್ರಯತ್ನ ನಿಷ್ಪ್ರಯೋಜಕ ಎಂದು ತಿಳಿದಿದ್ದರೂ ಕೂಡ ಅದರಲ್ಲೇ ಜೀವನ ಸಾಗಿಸುತ್ತಾರೆ. ಇದರಿಂದ ಮನುಷ್ಯನ ಸೃಜನಶೀಲ ಶಕ್ತಿಯ ಬಗ್ಗೆ ಪ್ರೇಕ್ಷಕನಿಗೆ ನಂಬಿಕೆ ಬರಲು ಪ್ರಾರಂಭವಾಗುತ್ತದೆ.

ಇಡೀ ಸಿನಿಮಾವನ್ನು ಗಮನಿಸಿದಾಗ The Myth of Sisyphus ಪದೇ ಪದೇ ನೆನಪಾಗತೊಡಗುತ್ತದೆ. Sisyphusಗೆ ಬಂಡೆಯನ್ನು ಮೇಲಕ್ಕೇರಿಸಬೇಕೆಂಬ ಶಾಪವಿರುತ್ತದೆ. ಕೆನೆತ್ ಶಿಂಡೋ ಕುಟುಂಬಕ್ಕೂ ಕೂಡ ವಾಸಯೋಗ್ಯವಿರದ ದ್ವೀಪದಲ್ಲಿ ಬದುಕಬೇಕೆಂಬ ಶಾಪವಿರುತ್ತದೆ. ಇದನ್ನು ತಿಳಿದೂ ಕೂಡ ಶಿಂಡೋನ ತಂದೆ-ತಾಯಿ ಸುಮ್ಮನೆ ಕುಳಿತಿರುವುದಿಲ್ಲ. ಹೀಗಾಗಿ ಸಿನಿಮಾ ಕಟ್ಟಿದ ಕ್ರಮ ಬಹಳ ಪ್ರೀತಿಯ ವಸ್ತುವಾಗಿ ನೋಡುಗನಿಗೆ ಕಾಣಿಸಲಾರಂಭಿಸುತ್ತದೆ. ಎಲ್ಲಾ ಅನುಕೂಲವಿದ್ದರೂ ನಾವು ಇನ್ನೊಬ್ಬರ ಮೇಲೆ ಗೂಬೆ ಕೂರಿಸಿ ಕಾಲ ಕಳೆಯುತ್ತಿರುತ್ತೇವೆ. ಆದರೇ ಶಿಂಡೋ ಕುಟುಂಬದ ಬದುಕನ್ನು ಕಂಡಾಗ ಸಿನಿಮಾದಲ್ಲಿ ಮನುಷ್ಯನ ಅಗಾಧ ಶಕ್ತಿ ಪ್ರೇಕ್ಷಕನ ಮುಂದೆ ವಿಜೃಂಬಿಸುತ್ತಿರುತ್ತದೆ.

ಚಿತ್ರದಲ್ಲಿ ಮಾನವ ಶಕ್ತಿಯನ್ನು ಸಂಗೀತದ ಮೂಲಕ ಸೂಕ್ತವಾಗಿ ಕಟ್ಟಿಕೊಡಲಾಗಿದೆ. ಕೆಲವು ಏರಿಯಲ್ ಶಾಟ್ ಗಳು ಕಣ್ಮನ ಸೆಳೆಯುತ್ತಿರುತ್ತದೆ, ಮಗ ಸತ್ತರೂ ಮಾರನೇ ದಿನ ಮತ್ತೆ ನೀರು ತರುವ ಗಂಡ-ಹೆಂಡತಿಯ ದೃಶ್ಯವನ್ನು ನೋಡಿ ಬಹಳ ಮಂದಿ ಸಿನಿಮಾದಲ್ಲಿ ಇದನ್ನು ಹೊರತುಪಡಿಸಿದರೆ ಬೇರೇನೂ ನಡೆಯುತ್ತಿಲ್ಲ ಎಂಬ ಕಾರಣವೊಡ್ಡಿ ಅದನ್ನು ತಿರಸ್ಕರಿಸುತ್ತಾರೆ. ಆದರೆ ಬದುಕನ್ನು ನಿಜಸ್ವರೂಪದಲ್ಲಿ ಮಾತ್ರ ನೋಡಿ ಎಂಬಂತೆ ಸಿನಿಮಾದಲ್ಲಿ ಶಿಂಡೋ, ಜನರನ್ನು ಪ್ರೇರೆಪಿಸುತ್ತಾನೆ. ಕಥೆ ವಿಸ್ತಾರವಾಗಿರುವುದಿಲ್ಲ. ಸಣ್ಣ ಕಥೆಯನ್ನು ಬಹಳ ಚೊಕ್ಕವಾಗಿ ಕಟ್ಟಿಕೊಡಲಾಗಿದೆ. ಸಂಗೀತ ಗುಣವೂ ಅಮೋಘವಾಗಿದೆ ಹೀಗೂ ಬದುಕಬಹುದೇ ? ಎಂಬ ಪ್ರಶ್ನೆಯನ್ನು ಈ ಚಿತ್ರ ಸೃಷ್ಟಿಸುವುದಲ್ಲದೆ ಬದುಕುವವರ ಬವಣೆ ಪ್ರತಿಯೊಬ್ಬ ನೋಡುಗನ ಅನುಭವಕ್ಕೂ ಬರುತ್ತದೆ. ಕಷ್ಟಜೀವನದಲ್ಲೂ ಸುಖ ಕಂಡುಕೊಳ್ಳುವ ಬಗೆಯನ್ನು ಬಹಳ ಅದ್ಭುತವಾಗಿ ತೋರಿಸಲಾಗಿದೆ.

ಸಿನಿಮಾದ ದೃಶ್ಯವೊಂದರಲ್ಲಿ, ತೀರದಿಂದ ತಂದ ನೀರನ್ನು ಗಿಡಗಳಿಗೆ ಸಿಂಪಡಿಸಿದೆ ಡ್ರಂ ಒಳಗೆ ತುಂಬಿಟ್ಟು ಸ್ನಾನ ಮಾಡಲು ತೊಡಗುತ್ತಾರೆ. ನೀರು ಪೋಲಾಗುತ್ತಿದೆ ಎಂಬುದಕ್ಕೂ ಆದ್ಯತೆ ನೀಡದೆ ಸ್ನಾನದ ಸುಖಕ್ಕಾಗಿ ಹಂಬಲಿಸುವುದನ್ನು ಚಿತ್ರದಲ್ಲಿ ಕಾಣಬಹುದು. ಮಕ್ಕಳು ಮೀನು ಹಿಡಿಯಲು ಹೋಗುವುದು ಕೂಡ ಅವರ ಸಂತೋಷದ ಒಂದು ಭಾಗವಾಗಿರುತ್ತದೆ. ಹೀಗೆ ಬದುಕಿನ ಸಣ್ಣ ಸಣ್ಣ ಮಧುರ ಕ್ಷಣಗಲ್ಲೇ ಸಾರ್ಥಕತೆಯನ್ನು ಕಂಡುಕೊಳ್ಳುವಂತ ಕೋಟ್ಯಾಂತರ ಮಂದಿ ನಮ್ಮ ನಡುವೆ ಇರುತ್ತಾರೆ. ಅವರ ಬದುಕಿನ ನಿರೀಕ್ಷೆಗಳು ಮತ್ತು ಬದುಕಿನ ಕ್ರಮ ಒಂದಕ್ಕೊಂದು ಹೊಂದಾಣಿಕೆಯಾಗುತ್ತಿರುತ್ತದೆ. ಈ ಸಿನಿಮಾ ಕೂಡ ಇಂತಹ ವಿಚಾರವನ್ನೇ ತೆರೆಯ ಮೇಲೆ ವ್ಯಕ್ತಪಡಿಸುತ್ತದೆ.

ಭಾರತೀಯ ಸಿನಿಮಾ ರಂಗವನ್ನು ಗಮನಿಸುವುದಾದರೇ, ಪತೇರ್ ಪಾಂಚಾಲಿಯ ಅನೇಕ ದೃಶ್ಯಗಳು ಸಂಗೀತದ ವೈಭವವನ್ನು ಸಾರುತ್ತದೆ. ಇಂತಹ ಸಿನಿಮಾಗಳಲ್ಲಿ ನಿರೂಪಣೆ, ಕಥಾ ತಿರುವು, ಭಾಷೆ, ಏರಿಳಿತಗಳು ಎಲ್ಲವನ್ನೂ ಕಾಣಬಹುದು. ಆದರೇ ‘ದ ನೇಕೆಡ್ ಐಲ್ಯಾಂಡ್’ ವಾಸ್ತವದ ಪ್ರತಿರೂಪವಾಗಿರುತ್ತದೆ. ಹೊಸ ಮಾದರಿಯ ನಿರೂಪಣೆ, ಕಥಾ ತಿರುವು ಏನೂ ಕಾಣಸಿಗುವುದಿಲ್ಲ. ಸಿನಿಮಾದಲ್ಲಿ ಲಿರಿಕಲ್ ಕ್ವಾಲಿಟಿಯನ್ನು ಅಲ್ಲಲ್ಲಿ ತರುವುದಕ್ಕೂ ಮತ್ತು ಇಡೀ ಸಿನಿಮಾವನ್ನು ಲಿರಿಕಲ್ ಕ್ವಾಲಿಟಿಯಲ್ಲೇ ರೂಪಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ‘ದ ನೇಕೆಡ್ ಐಲ್ಯಾಂಡ್’ ಮಾದರಿಯಲ್ಲಿ ಭಾರತದಲ್ಲಿ ಹೆಚ್ಚಾಗಿ ಸಿನಿಮಾಗಳು ಬಂದಿಲ್ಲ. ಆದರೇ ಈ ಮಾದರಿಯಲ್ಲಿಯೂ ಸಿನಿಮಾ ಮಾಡಬಹುದು ಎಂಬ ಸಾಧ್ಯತೆಯನ್ನು ತೋರಿಸಿಕೊಟ್ಟಿರುವುದು ದ ನೇಕೆಡ್ ಐಲ್ಯಾಂಡ್ ಚಿತ್ರ. ಒಂದು ರೂಪಕವಾಗಿ, ಸಂಗೀತವಾಗಿ ಸಿನಿಮಾವನ್ನು ಕಟ್ಟುವ ಬಗೆಯನ್ನು ಈ ಸಿನಿಮಾದಲ್ಲಿ ಬಹಳ ಅಮೋಘವಾಗಿ  ಚಿತ್ರಿಸಲಾಗಿದೆ.

0 Comments

Related Articles

Related

ಕಥಾ ಚಿತ್ರದಲ್ಲಿ ಸಾಕ್ಷ್ಯ ಚಿತ್ರದ ಪರಂಪರೆ: ದ ಬ್ಯಾಟಲ್ ಆಫ್ ಅಲ್ಜಿಯರ್ಸ್

ಕಥಾ ಚಿತ್ರದಲ್ಲಿ ಸಾಕ್ಷ್ಯ ಚಿತ್ರದ ಪರಂಪರೆ: ದ ಬ್ಯಾಟಲ್ ಆಫ್ ಅಲ್ಜಿಯರ್ಸ್

ದ ಬ್ಯಾಟಲ್ ಆಫ್ ಅಲ್ಜಿಯರ್ಸ್ ಸಿನಿಮಾ ಭಾರೀ ಜನಪ್ರಿಯವಾಯಿತಲ್ಲದೆ, ವ್ಯಾಪಕ ಮನ್ನಣೆಯನ್ನೂ ಪಡೆಯಿತು. ‘Venice’ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲೂ ‘ದ ಬ್ಯಾಟಲ್ ಆಫ್ ಅಲ್ಜಿಯರ್ಸ್’ ಪ್ರದರ್ಶನ ಕಂಡಿತು. ಅಲ್ಲದೇ, ಹಲವಾರು ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂಡು, ಚಿತ್ರಕಥೆ ಮತ್ತು ನಿರ್ದೇಶನ ವಿಭಾಗದಲ್ಲಿ ಆಸ್ಕರ್ ಗೆ ಭಾಜನವಾಯಿತು. ಒಂದೇ ವರ್ಷದಲ್ಲಿ ಮೂರು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಸಿನಿಮಾ ಎಂಬ ಹೆಗ್ಗಳಿಕೆ ಇಂದಿಗೂ ಈ ಚಿತ್ರದ ಹೆಸರಿನಲ್ಲಿದೆ.

read more
ಸಂಗೀತಗಳು ಸಮುದಾಯದ ಭಾಗವಾಗಬೇಕು: ‘ಕಾಡು’ ಸಿನಿಮಾ ವಿಶ್ಲೇಷಣೆ

ಸಂಗೀತಗಳು ಸಮುದಾಯದ ಭಾಗವಾಗಬೇಕು: ‘ಕಾಡು’ ಸಿನಿಮಾ ವಿಶ್ಲೇಷಣೆ

‘ಕಾಡು’ 1973ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಗಿರೀಶ್ ಕಾರ್ನಾಡ್ ಸ್ವತಂತ್ರವಾಗಿ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿ ಆಧಾರಿತವಾದ ಈ ಚಿತ್ರಕ್ಕೆ ಸಾಕಷ್ಟು ಜನಮನ್ನಣೆ ದೊರಕಿದೆ. ಆಗಿನ ಕಾಲದ ಕನ್ನಡ ಸಾಹಿತ್ಯ ಪರಂಪರೆಗೆ ಅನುಗುಣವಾಗಿ. ಈ ಚಿತ್ರವನ್ನು ಗಮನಿಸಿದರೆ ಬಹಳ ಮಹತ್ವದ ವಿಚಾರಗಳು ತಿಳಿಯುತ್ತದೆ. ನವ್ಯರು ಪ್ರಶ್ನಿಸುತ್ತಿದ್ದ ಅನೇಕ ಅಂಶಗಳನ್ನು ಈ ಕಥೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

read more
THE OTT ERA

THE OTT ERA

OTT or Over-the-top, is a convenient little term which describes a new way to watch movies and TV shows whenever we want, on a variety of devices, and without the use of traditional broadcast, cable, or satellite pay-tv providers.

read more