ವಾಸ್ತವ, ಭ್ರಮೆ, ನಂಬಿಕೆ: ‘ಸಂಸ್ಕಾರ’ದ ಬಗ್ಗೆ ಕಾಸರವಳ್ಳಿ ಮಾತು

1970ರಲ್ಲಿ ಬಿಡುಗಡೆಯಾದ ‘ಸಂಸ್ಕಾರ’, ಕನ್ನಡ ಸಿನಿಮಾ ಜಗತ್ತಿನಲ್ಲಿ ನನ್ನನ್ನು ತುಂಬಾ ಪ್ರಭಾವಿಸಿದ ಸಿನಿಮಾ. ಕನ್ನಡ ಚಿತ್ರಗಳು ಅಲ್ಲಿಯ ತನಕ ಕೇವಲ ಭಾವನಾತ್ಮಕ ನೆಲೆಯಲ್ಲಿರುತ್ತಿದ್ದವು. ಪ್ರೇಕ್ಷಕನನ್ನು ಅಳಿಸುವ, ನಗಿಸುವ ಮತ್ತು ರಂಜಿಸುವ ರೀತಿಯಲ್ಲಿನ ಕಥೆಗಳು ಹೆಚ್ಚಾಗಿದ್ದವು. ಅವುಗಳೆಲ್ಲಾ ಯಶಸ್ವಿ ಸಿನಿಮಾವಾದರೂ  ವೈಚಾರಿಕವಾಗಿ ಗಮನಿಸಿದಾಗ ಬಹಳ ಬಡವಾಗಿರುತ್ತಿದ್ದವು. ಆದರೆ ‘ಸಂಸ್ಕಾರ’ದಲ್ಲಿ ಪೂರ್ವಪರಗಳನ್ನು ಇಟ್ಟುಕೊಂಡು ವೈಚಾರಿಕವಾಗಿ ಚಿತ್ರಿಸಲಾಗಿತ್ತು. ಅಂತಹ ವಿಶ್ಲೇಷಣೆ ಮಾಡುವ ಪ್ರವೃತ್ತಿ ಅಲ್ಲಿಯವರೆಗೆ ಕನ್ನಡ ಸಿನಿಮಾದಲ್ಲಿ ಬಂದಿರಲಿಲ್ಲ.

‘ಸಂಸ್ಕಾರ’ ನಮ್ಮ ಇರುವಿನ ಬಗ್ಗೆ, ನಮ್ಮ ಸಮಾಜದ ಬಗ್ಗೆ ಮಾಡಿದ ಮೊದಲ ಸಿನಿಮಾ. ಈ ಸಿನಿಮಾ ಡಾ. ಯು. ಆರ್. ಅನಂತಮೂರ್ತಿ ಅವರ ಬಹು ಚರ್ಚಿತವಾದ ಕಾದಂಬರಿ ಸಂಸ್ಕಾರವನ್ನು ಆಧರಿಸಿದೆ. ಪಟ್ಟಾಭಿರಾಮ ರೆಡ್ಡಿ ಇದರ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರು. ಕನ್ನಡ ಸಾಂಸ್ಕೃತಿಕ ಲೋಕ ಆ ಸಮಯದಲ್ಲಿ ಕಂಡಂತಹ ಕೆಲವು ಹರಿವುಗಳನ್ನೆಲ್ಲಾ ಬಳಸಿಕೊಂಡಂತಹ ಸಿನಿಮಾ ಇದು. ಗಿರೀಶ್ ಕಾರ್ನಾಡ್ ಪ್ರಧಾನ ಭೂಮಿಕೆಯಲ್ಲಿದ್ದರು. ಸ್ನೇಹಲತಾ ರೆಡ್ಡಿ ಕೂಡ ಮುಖ್ಯ ಪಾತ್ರದಲ್ಲಿದ್ದರು. ಕತೆಯ ಹಂದರದಲ್ಲೇ ಒಂದು ರೀತಿಯ ಹೊಸತನವಿತ್ತು. ಯುಗ್ಮ ವೈರುಧ್ಯಗಳ ಒಂದು ಲೋಕವನ್ನೇ ಅನಂತಮೂರ್ತಿ, ನಮ್ಮ ಮುಂದೆ ತೆರೆದಿಡುತ್ತಾ ಹೋಗಿದ್ದರು.

ಮೇಲ್ಜಾತಿಯವರ ರಾಜಕೀಯ, ದಲಿತರ ತುಳಿತ ಅದರ ಜೊತೆಗೆ ಗಂಡಸರ ಪ್ರಪಂಚ ಮತ್ತು ಹೆಂಗಸ ಪ್ರಪಂಚ ನಡುವಿನ ತಿಕ್ಕಾಟಗಳು ಈ ಸಿನಿಮಾದಲ್ಲಿ ಸ್ಪಷ್ಟವಾಗಿ ಕಾಣಸಿಗುವುದು. ನಮ್ಮ ಮನಸಿನಲ್ಲಿ ಬೌದ್ಧಿಕ ಮತ್ತು ದೈಹಿಕ ಎಂಬ ಎರಡು ಬಗೆಯ ವ್ಯಕ್ತಿತ್ವ ಇರುವುದು. ಈ ಎರಡರ ನಡುವಿನ ಸೆಣೆಸಾಟ ಚಿತ್ರದ ಉದ್ದಕ್ಕೂ ಬೇರೆ ಬೇರೆ ರೀತಿಯಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ಅದು ಸಂಸ್ಕಾರ ಸಿನಿಮಾದ ದೊಡ್ಡ ಶಕ್ತಿ.

ಸಾಮಾನ್ಯವಾಗಿ ಪಾಂಡಿತ್ಯದಿಂದ ನಾವು ಜಗತ್ತನ್ನು ಗ್ರಹಿಸುವ ಕ್ರಮವೊಂದಿದೆ. ಅದರೊಂದಿಗೆ ಲೋಕ ಗ್ರಹಿಕೆಯಿಂದ ಜಗತ್ತನ್ನು ನೋಡುವ ಕ್ರಮವೂ ಇದೆ. ಇದನ್ನ ಅನಂತಮೂರ್ತಿ ಕಥೆಯಲ್ಲಿ ಜೊತೆಜೊತೆಗೆ ಜೋಡಣೆ ಮಾಡಿದ್ದಾರೆ. ಸಮಾಜವಾದಿ, ಲೋಹಿಯಾವಾದಿಗಳಿಂದ ಬಂದ ಕಾಣಿಕೆಗಳನ್ನು, ಜಾತಿಯ ನೆಲೆಯಲ್ಲಿ ಮತ್ತು ಧರ್ಮದ ನೆಲೆಯಲ್ಲಿ ಅನಂತಮೂರ್ತಿ ಚಿತ್ರಿಸಿದ್ದರಿಂದ ಸಂಸ್ಕಾರ ಕತೆಗೆ ಒಂದು ಗಾಂಭೀರ್ಯ ಮತ್ತು ಆಳ ಬಂದಿದೆ. ಅದನ್ನು ಸಿನಿಮಾದಲ್ಲೂ ಬಹಳ ಸಮರ್ಥವಾಗಿ ತೋರಿಸಲಾಗಿದೆ.

ಸಿನಿಮಾತ್ಮಕವಾಗಿಯೂ ಸಂಸ್ಕಾರ ಸಿನಿಮಾ ಬಹಳ ಪ್ರಾಮುಖ್ಯತೆ ಪಡೆದಿದೆ. ಏಕೆಂದರೆ ಅಲ್ಲಿಯ ತನಕ ಕನ್ನಡ ಸಿನಿಮಾ ರಂಗದಲ್ಲಿ, ಸ್ವಲ್ಪ ಮಟ್ಟಿಗೆ ಭಾರತೀಯ ಸಿನಿಮಾ ರಂಗದಲ್ಲೂ ಸಿನಿಮಾ ಕಟ್ಟುವ ಕ್ರಮದಲ್ಲಿ ಕೃತಕತೆ ಹೆಚ್ಚಾಗಿ ಕಾಣಿಸುತ್ತಿದ್ದವು. ಚಿತ್ರದಲ್ಲಿನ ನಟ/ನಟಿಯರು ಸಹಜವಾಗಿ ಅಭಿನಯಿಸುತ್ತಿಲ್ಲ. ಭಾವನೆಗಳನ್ನು ಬಲವಂತವಾಗಿ ಹೇರಲಾಗುತ್ತಿದೆ. ಸಂಗೀತವನ್ನು ಜೋಡಿಸುವ ಕ್ರಮದಲ್ಲಿ, ದೃಶ್ಯ ಜೋಡಿಸುವ ಕ್ರಮದಲ್ಲಿನ ವ್ಯತ್ಯಾಸ ಮೊಪದಲಾದವು ಗ್ರಹಿಕೆಗೆ ಬರುತಿದ್ದವು.  ಅಂದರೆ ಕೃತಕತೆ ಎನ್ನುವುದಕ್ಕಿಂತ ವಾಸ್ತವತೆಯನ್ನು ಯಥವತ್ತಾಗಿ ತೋರಿಸದೆ, ಪ್ರತಿಯೊಂದನ್ನೂ ಕಟ್ಟಿಕೊಡುವ ಕ್ರಮಗಳಿದ್ದವು.

ಆದರೆ ಸಂಸ್ಕಾರ ಸಿನಿಮಾ ಪ್ರೇಕ್ಷಕರನ್ನು ವಾಸ್ತವತೆಗೆ ಕರೆದುಕೊಂಡು ಹೋಯಿತು. ಕತೆ ನಡೆಯುವ ಕ್ರಮ, ಸ್ಥಳದ ಆಯ್ಕೆ ಪಾತ್ರಗಳ ಅಭಿನಯ ಎಲ್ಲವೂ ಸಂಭವನೀಯ ಮಾದರಿಯಲ್ಲಿ ಇದ್ದವು. ಈ ರೀತಿಯ ಕಥೆ ಕಟ್ಟುವ ಕ್ರಮವಂತೂ ಕನ್ನಡಕ್ಕೆ ಹೊಸದಾಗಿತ್ತು. ಭಾರತೀಯ ಚಿತ್ರರಂಗದಲ್ಲೂ ಕೆಲವೇ ಕೆಲವರು ಈ ರೀತಿಯ ಕತೆಯನ್ನು ಕಟ್ಟುತಿದ್ದರು. ಹೀಗಾಗಿ ಚಿತ್ರದಲ್ಲಿನ ಅಗ್ರಹಾರ, ಬ್ರಾಹ್ಮಣರು, ಅವರ ಲಾಲಸೆಗಳು, ದುಃಖಗಳು, ಸಂಕಟಗಳು ಎಲ್ಲವೂ ನಿಜ ಅನ್ನುವಂತೆ ಭಾಸವಾಗುತ್ತಿತ್ತು ಚಿತ್ರದ ಕಥಾಹಂದರದಲ್ಲೇ ಎರಡು ರೀತಿಯ ಭಾವನೆಯನ್ನು ಸೃಷ್ಠಿಸುವುದು ಮತ್ತು ಇರುವೆಕೆಯನ್ನು ಮುಖಾಮುಖಿ ಮಾಡೋದು ಆ ಕತೆಯ ದೊಡ್ಡ ಶಕ್ತಿಯಾಗಿತ್ತು.

ಸಂಸ್ಕಾರ ಚಿತ್ರದಲ್ಲಿ ಕಂಡುಬರುವ ಪಾಂಡಿತ್ಯ ಪ್ರಪಂಚಕ್ಕೆ ಪ್ರಾಣೇಶಚಾರ್ಯರು ಪ್ರತಿನಿಧಿ. ಲೋಕಗ್ರಹಿಕೆಯ ಪ್ರಪಂಚಕ್ಕೆ ಮಲೆಯರ ಪುಟ್ಟ ಪ್ರತಿನಿಧಿ. ಇವೆಲ್ಲದರ ಜೊತೆಗೆ ಒಂದು ಕಡೆ ಗಂಡಸರ ಪ್ರಪಂಚ, ಮತ್ತೊಂದು ಕಡೆ ಕಡೆ ಹೆಂಗಸರ ಪ್ರಪಂಚ. ಗಂಡಸರಿಗೆ ಹೇಗಾದರೂ ಮಾಡಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಭಾವನೆ ಇದ್ದರೇ, ಹೆಂಗಸರಿಗೆ ಬೇರೆ ಹಲವು ರೀತಿಯ ಒತ್ತಡಗಳಿದ್ದವು. ಇವೆಲ್ಲದರ ಮೂಲಕ ಬೆಳೆಯುತ್ತಾ ಸಾಗುವ ಕತೆಯಲ್ಲಿ ವ್ಯಕ್ತಿ ವಿಕಾಸಕ್ಕೆ ಪ್ರಾಮುಖ್ಯತೆ ಸಿಗುತ್ತಾ ಹೋಗುತ್ತದೆ. ಸಿನಿಮಾದ ಅಂತ್ಯದಲ್ಲಿ, ಬರೀ ಪಾಂಡಿತ್ಯ ಇದ್ದರೆ ಸಾಲದು. ವ್ಯವಹಾರಿಕ ಜ್ಞಾನವೂ ಹಾಗೂ ಲೋಕಗ್ರಹಿಕೆಯ ಜ್ಞಾನವೂ ಬೇಕು ಅನ್ನುವ ಅರಿವು ಪ್ರಾಣೇಶಚಾರ್ಯರಿಗೆ ಹುಟ್ಟುತ್ತದೆ. ಇದು ಸಂಸ್ಕಾರ ಸಿನಿಮಾದ ಬಹುದೊಡ್ಡ ಕಾಣಿಕೆ ಎಂದೇ ಅರ್ಥೈಸಬಹುದು.

ಸಿನಿಮಾ ಎಂಬುವುದು ಬಿಂಬಗಳ ಮೂಲಕ, ಧ್ವನಿಯ ಮೂಲಕ, ಸಂಕಲನ ಮೂಲಕ ಕತೆಯನ್ನು ವಿಸ್ತಾರಗೊಳಿಸುವ ಒಂದು ಮಾಧ್ಯಮ. ವಿಷುವಲ್ ಎಂದ ತಕ್ಷಣವೇ ಪಾತ್ರಗಳ ಆಯ್ಕೆ, ಪಾತ್ರಧಾರಿಗಳ ಆಯ್ಕೆ, ಸ್ಥಳದ ಆಯ್ಕೆ ಮಾತ್ರ ಸಾಲದು. ಪ್ರೇಕ್ಷಕನಿಗೆ ಅನುಭವ ಬರುವ ರೀತಿಯಲ್ಲಿ ಚಿತ್ರವನ್ನು ಕಟ್ಟಿಕೊಡುತ್ತಾ ಹೋಗಬೇಕು. ಸಂಸ್ಕಾರದ ಒಂದು ದೊಡ್ಡ ಸಾಧನೆ ಎಂದರೆ, ಪ್ರತಿಯೊಂದು ಪಾತ್ರವು ಪೂರ್ಣಪ್ರಮಾಣವಾಗಿ ಹೊಂದಾಣಿಕೆಯಾಗುತ್ತಿದ್ದವು. ಅಲ್ಲಿಯ ತನಕದ ಸಿನಿಮಾಗಳಲ್ಲಿ ಈ ಅಂಶಗಳು ಕಾಣುತ್ತಿರಲಿಲ್ಲ. ಬದಲಾಗಿ ಅಭಿನಯಿಸುತ್ತಿರುವವವರು ಪಾತ್ರವನ್ನು ಪ್ರತಿನಿಧಿಸುತ್ತಿರುವುದು ಸ್ಪಷ್ಟವಾಗಿ ತಿಳಿಯುತಿತ್ತು. ಆದರೆ ಪಾತ್ರಗಳನ್ನು ನೈಜ ಅನ್ನುವ ರೀತಿಯಲ್ಲಿ ಕಟ್ಟಿಕೊಡುವುದು ಬಹಳ ಕಷ್ಟದ ಕೆಲಸ. ಸಂಸ್ಕಾರ ಅದನ್ನು ಅನಾಯಾಸವಾಗಿ ಸಾಧಿಸಿದೆ ಎಂಬುದೇ ದೊಡ್ಡ ಸಾಧನೆ.

ಸಂಸ್ಕಾರದ ಕತೆ ಮತ್ತು ಸಿನಿಮಾ ಎರಡರಲ್ಲೂ ಇರುವ ಒಂದು ತಾಕಲಾಟವೇನೆಂದರೆ, ವಾಸ್ತವ ಯಾವುದು- ಭ್ರಮೆ ಯಾವುದು?, ವಾಸ್ತವ ಯಾವುದು-ಮಿತ್ ಯಾವುದು?, ವಾಸ್ತವ ಯಾವುದು-ನಂಬಿಕೆ ಯಾವುದು? ಎಂಬುದನ್ನ ಅಕ್ಕಪಕ್ಕದಲ್ಲಿಟ್ಟುಕೊಂಡೇ ಹೆಣೆಯಲಾಗಿದೆ. ಉದಾಹರಣೆಗೆ; ಒಂದು ಕಡೆ ಹೆಣ ಇದ್ದರೆ, ಮತ್ತೊಂದು ಕಡೆ, ಊರಿನವರೆಲ್ಲಾ ಅದು ಹೆಣ ಅಲ್ಲ, ಭೂತ ಅನ್ನುವ ತರದಲ್ಲಿ ನಂಬುತ್ತಾ ಹೋಗುತ್ತಾರೆ. ಹೀಗೆ ಒಂದು ವಾಸ್ತವದಿಂದ ಮಿತ್ ಹೇಗೆ ಹುಟ್ಟಿಕೊಳ್ಳುತ್ತೆ ?  ಒಂದು ಮಿತ್ ಕಾರಣದಿಂದ ದೃಗೋಚರವಾಗುವಂತಹ ವಿಷಯಗಳು ಹೇಗೆ ಕಾಣಿಸುವುದಿಲ್ಲ ಎಂಬುದನ್ನ ಸಂಸ್ಕಾರದಲ್ಲಿ ಅದ್ಭುತವಾಗಿ ನಿರೂಪಿಸಲಾಗಿದೆ.

ಹೊಸ ರೀತಿಯ ಸಿನಿಮಾವನ್ನು ಕಟ್ಟುವ ಕ್ರಮದಿಂದ ಅದರ ಗಟ್ಟಿತನ ಅರಿವಿಗೆ ಬರುತ್ತದೆ. ಅಂದರೇ ಚಿತ್ರದಲ್ಲಿ ಯಾವುದೇ ರೀತಿಯ ಕೆರಳಿಸುವ ಸನ್ನಿವೇಶ ಇರಬಾರದು. ಇದ್ದರೂ ಕುಶಲತೆಯಿಂದ ಕೂಡಿರಬೇಕು. ಸಂಸ್ಕಾರ ಸಿನಿಮಾ ಈ ಕೆಲಸವನ್ನು ಆ ಕಾಲದಲ್ಲೇ ಮಾಡಿದೆ. 21ನೇ ಶತಮಾನದಲ್ಲಿ ನಾವು, ಹಾಲಿವುಡ್ ಮಾದರಿಯ ಸಿನಿಮಾಗಳಿಗೆ ತದ್ವಿರುದ್ಧವಾಗಿ, ಸ್ಮೂತ್ ಫಿನಿಷ್ ಇಲ್ಲದೆ ಇರುವಂತಹ ಹಾಗೂ ರಫ್ ಅಡ್ಜೆಸ್ಟ್ ಇರುವಂತಹ ಕಥಾಹಂದರವನ್ನು, ಕಥಾ ನಿರ್ವಹಣೆಯನ್ನು, ಸಂವಿಧಾನವನ್ನು ನಾವು ಗಮನಿಸುತ್ತಿರಬಹುದು. ಇಂತಹ ಪ್ರಯತ್ನಗಳು ಸಂಸ್ಕಾರದಲ್ಲಿ ಆಗಿಹೋಗಿತ್ತು.  

ಒಂದು ಸಂದರ್ಶನದಲ್ಲಿ ಅಡೂರು ಗೋಪಾಲಕೃಷ್ಣ, “ಸಾಕ್ಷ್ಯಚಿತ್ರ ಮಾಡುತ್ತಿದ್ದ ನನ್ನನ್ನು, ಕಥಾಚಿತ್ರದಲ್ಲಿಗೆ ಪ್ರೇರೆಪಿಸಿದ್ದು ಸಂಸ್ಕಾರ” ಎಂದು ಹೇಳಿದರು. ಹೀಗೆ ಇಷ್ಟೆಲ್ಲಾ ಜನರಿಗೆ ಪ್ರೇರಣೆ ಕೊಟ್ಟ ಸಂಸ್ಕಾರ, ರಾಷ್ಟ್ರಪತಿಗಳಿಂದ ಸ್ವರ್ಣ ಪದಕ ಪಡೆದ ಮೊದಲ ಕನ್ನಡ ಸಿನಿಮಾವಾಗಿ ಹೆಗ್ಗಳಿಕೆ ಪಡೆಯಿತು. ಇವತ್ತಿಗೂ ಬಹಳ ಗಟ್ಟಿಯಾದ ಸಿನಿಮಾವಾಗಿ ಹಾಗೆಯೇ ಮತ್ತೆ ಮತ್ತೆ ನೋಡಬೇಕಾದ ಸಿನಿಮಾವಾಗಿ ಸಂಸ್ಕಾರ ಉಳಿದುಕೊಂಡಿದೆ.

0 Comments

Related Articles

Related

ಕಥಾ ಚಿತ್ರದಲ್ಲಿ ಸಾಕ್ಷ್ಯ ಚಿತ್ರದ ಪರಂಪರೆ: ದ ಬ್ಯಾಟಲ್ ಆಫ್ ಅಲ್ಜಿಯರ್ಸ್

ಕಥಾ ಚಿತ್ರದಲ್ಲಿ ಸಾಕ್ಷ್ಯ ಚಿತ್ರದ ಪರಂಪರೆ: ದ ಬ್ಯಾಟಲ್ ಆಫ್ ಅಲ್ಜಿಯರ್ಸ್

ದ ಬ್ಯಾಟಲ್ ಆಫ್ ಅಲ್ಜಿಯರ್ಸ್ ಸಿನಿಮಾ ಭಾರೀ ಜನಪ್ರಿಯವಾಯಿತಲ್ಲದೆ, ವ್ಯಾಪಕ ಮನ್ನಣೆಯನ್ನೂ ಪಡೆಯಿತು. ‘Venice’ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲೂ ‘ದ ಬ್ಯಾಟಲ್ ಆಫ್ ಅಲ್ಜಿಯರ್ಸ್’ ಪ್ರದರ್ಶನ ಕಂಡಿತು. ಅಲ್ಲದೇ, ಹಲವಾರು ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂಡು, ಚಿತ್ರಕಥೆ ಮತ್ತು ನಿರ್ದೇಶನ ವಿಭಾಗದಲ್ಲಿ ಆಸ್ಕರ್ ಗೆ ಭಾಜನವಾಯಿತು. ಒಂದೇ ವರ್ಷದಲ್ಲಿ ಮೂರು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಸಿನಿಮಾ ಎಂಬ ಹೆಗ್ಗಳಿಕೆ ಇಂದಿಗೂ ಈ ಚಿತ್ರದ ಹೆಸರಿನಲ್ಲಿದೆ.

read more
ಸಂಗೀತಗಳು ಸಮುದಾಯದ ಭಾಗವಾಗಬೇಕು: ‘ಕಾಡು’ ಸಿನಿಮಾ ವಿಶ್ಲೇಷಣೆ

ಸಂಗೀತಗಳು ಸಮುದಾಯದ ಭಾಗವಾಗಬೇಕು: ‘ಕಾಡು’ ಸಿನಿಮಾ ವಿಶ್ಲೇಷಣೆ

‘ಕಾಡು’ 1973ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಗಿರೀಶ್ ಕಾರ್ನಾಡ್ ಸ್ವತಂತ್ರವಾಗಿ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿ ಆಧಾರಿತವಾದ ಈ ಚಿತ್ರಕ್ಕೆ ಸಾಕಷ್ಟು ಜನಮನ್ನಣೆ ದೊರಕಿದೆ. ಆಗಿನ ಕಾಲದ ಕನ್ನಡ ಸಾಹಿತ್ಯ ಪರಂಪರೆಗೆ ಅನುಗುಣವಾಗಿ. ಈ ಚಿತ್ರವನ್ನು ಗಮನಿಸಿದರೆ ಬಹಳ ಮಹತ್ವದ ವಿಚಾರಗಳು ತಿಳಿಯುತ್ತದೆ. ನವ್ಯರು ಪ್ರಶ್ನಿಸುತ್ತಿದ್ದ ಅನೇಕ ಅಂಶಗಳನ್ನು ಈ ಕಥೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

read more
THE OTT ERA

THE OTT ERA

OTT or Over-the-top, is a convenient little term which describes a new way to watch movies and TV shows whenever we want, on a variety of devices, and without the use of traditional broadcast, cable, or satellite pay-tv providers.

read more