‘ಚೋಮನ ದುಡಿ’ 1975ರಲ್ಲಿ ತೆರೆಕಂಡ ಚಿತ್ರ. ಶಿವರಾಮ ಕಾರಂತರ ಕೃತಿಯನ್ನಾಧರಿಸಿ ಬಿ.ವಿ ಕಾರಂತರು ಸ್ವತಂತ್ರವಾಗಿ ನಿರ್ದೇಶಿಸಿದ ಪ್ರಥಮ ಚಿತ್ರ. ಚಿತ್ರಕಥೆಯನ್ನು ಸ್ವತಃ ಶಿವರಾಮ ಕಾರಂತರೇ ಬರೆದಿದ್ದಾರೆ. ಒಬ್ಬ ಸಾಹಿತಿ ಚಿತ್ರಕಥೆ ಬರೆದಾಗ ಅದು ಸಾಹಿತ್ಯ ರೂಪದಲ್ಲಿರುತ್ತದೆಯೇ ಹೊರತು ಸಿನಿಮಾ ರೂಪದಲ್ಲಿ ಅಥವಾ ದೃಶ್ಯ ಮಾಧ್ಯಮಕ್ಕೆ ಅನುಗುಣವಾಗಿರಲ್ಲ ಎಂಬ ನಂಬಿಕೆಯಿದೆ. ಆದರೆ ಚೋಮನ ದುಡಿ ಸಿನಿಮಾದ ಚಿತ್ರಕಥೆಯನ್ನು ಗಮನಿಸಿದಾಗ ಆ ಮಾತು ಸುಳ್ಳು ಎಂಬುದು ಅರಿವಾಗುತ್ತದೆ. ಇಲ್ಲಿ ಪೂರ್ಣವಾಗಿ ಚಿತ್ರ ಮಾಧ್ಯಮದ ಸಾಧ್ಯತೆ-ಭಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡೆ ಶಿವಾರಮ ಕಾರಂತರು ಚಿತ್ರಕಥೆ ಬರೆದಿದ್ದಾರೆ. ಹೀಗಾಗಿ ಚಿತ್ರಕಥೆಯಲ್ಲಿಯೇ ಚೋಮನದುಡಿ ಗೆದ್ದಿದೆ ಎಂದರೇ ತಪ್ಪಾಗಲ್ಲ.
ಚೋಮನದುಡಿ ಕಾದಂಬರಿಯಲ್ಲೇ ಅನೇಕ ಅಸಮಾನ್ಯ ಸಂಗತಿಗಳಿವೆ. ದಲಿತ, ದಲಿತರ ಶೋಷಣೆಯನ್ನು ಕೇವಲ ಜಾತಿಯ ನೆಲೆಯಲ್ಲಿ ಮಾತ್ರ ನೋಡದೆ. ಅದಕ್ಕೊಂದು ವಿಸ್ತಾರವಾದ ಹಿನ್ನೆಲೆಯನ್ನು ಕೊಡಲಾಗಿದೆ. ಕಾದಂಬರಿಯಲ್ಲಿ ಚೋಮನಿಗೆ ಅನ್ಯಾಯವಾಗುತ್ತಿರುತ್ತದೆ. ಹುಟ್ಟಿನಿಂದ ದಲಿತ ಎನ್ನುವ ಕಾರಣದಿಂದ ಅವನಿಗೆ ಜಮೀನನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅದು ಕನಸಾಗಿಯೇ ಉಳಿಯುವುದು ಇಲ್ಲಿನ ದುರಂತ. ಶಿವರಾಮ ಕಾರಂತರು ಸಿನಿಮಾವನ್ನು ಕೇವಲ ಭಾವುಕ ನೆಲೆಯಲ್ಲಿ ಮಾತ್ರ ಚಿತ್ರಿಸುವುದಿಲ್ಲ. ಬದಲಾಗಿ ಸಮಾಜದ ವ್ಯವಸ್ಥೆಗನುಗುಣವಾಗಿ, ಕ್ರಮಾನುಗತವಾಗಿ ಶೋಷಣೆ ಹೇಗೆ ನಡೆಯುತ್ತದೆ ಎಂಬುದನ್ನು ಹೇಳುತ್ತಾ ಹೋಗುತ್ತಾರೆ.
ಚೋಮನ ಮೇಲೆ ಜಾತಿಯ ನೆಲೆಯಲ್ಲಿ ಶೋಷಣೆಯಾಗುತ್ತಾ ಇರುತ್ತದೆ. ಅವನ ಜಮೀನು ಹೊಂದಬೇಕೆಂಬ ಕನಸಿಗೆ ಮಾನ್ಯತೆ ಸಿಗುವುದಿಲ್ಲ. ಚೋಮನ ಧಣಿಯಾಗಿರುವ ಸಂಕಪಯ್ಯನಿಗೆ ಜಮೀನು ಕೊಡಬೇಕೆಂಬ ಮನಸ್ಸಿದ್ದರೂ ನಂಬಿಕೆಯ ನೆಲೆಯಲ್ಲಿ ಅಸಹಾಯಕರಾಗುತ್ತಾರೆ. ಸಂಪ್ರದಾಯವನ್ನು ಪ್ರತಿನಿಧಿಸುವ ಸಂಕಪ್ಪಯ್ಯನ ತಾಯಿ ಚೋಮನಿಗೆ ಜಮೀನು ನೀಡುವುದಕ್ಕೆ ಆಸ್ಪದ ಕೊಡುವುದಿಲ್ಲ. ಹೀಗಾಗಿ ಚೋಮನಿಗೆ ಕೇವಲ ಜಾತಿಯಲ್ಲಿ ನೆಲೆಯಲ್ಲಿ ಮಾತ್ರವಲ್ಲದೆ ಸಂಪ್ರದಾಯದ ನೆಲೆಯಲ್ಲೂ ಅನ್ಯಾಯವಾಗುತ್ತಾ ಹೋಗುತ್ತದೆ. ಸಂಕಪ್ಪಯ್ಯ ಕೂಡ ಈ ಸಂಪ್ರದಾಯದ ನೆಲೆಯಲ್ಲಿ ಬಂಧಿಯಾಗಿ ಚೋಮನಿಗೆ ಸಹಾಯ ಮಾಡಲು ಆಗುವುದಿಲ್ಲ.
ನಂತರ ಚೋಮನ ಕುಟುಂಬ ಹಿಂದೆ ಪಡೆದಂತಹ ಸಾಲವನ್ನು ತೀರಿಸಲಿಕ್ಕಾಗಿ ಕಾಫಿ ತೋಟವೊಂದರ ದೊರೆಗಳ ಬಳಿ ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಠಿಯಾಗುತ್ತದೆ. ಇಲ್ಲಿ ದೊರೆಗಳೆಂದರೆ ಆ ಕಾಲದಲ್ಲಿನ ಬ್ರಿಟೀಷ್ ಅಧಿಕಾರಿಗಳು. ಚೋಮ ತನ್ನ ಎರಡು ಗಂಡು ಮಕ್ಕಳಾದ ಚನಿಯ ಮತ್ತು ಗುರುವನನ್ನು ಮೊದಲಿಗೆ ಕಾಫಿ ತೋಟಕ್ಕೆ ಕೆಲಸಕ್ಕೆ ಕಳುಹಿಸುತ್ತಾನೆ. ಆದರೆ ಚನಿಯ ಮೃತಪಡುತ್ತಾನೆ. ಗುರುವ ಬೇರೆ ಜಾತಿಯ ಹೆಂಗಸಿನ ಹಿಂದೆ ಓಡಿಹೋಗುತ್ತಾನೆ. ಹೀಗಾಗಿ ಚೋಮನಿಗೆ ಸಾಲವನ್ನು ತೀರಿಸಲು ಸಾಧ್ಯವೇ ಆಗುವುದಿಲ್ಲ. ಏನೂ ಮಾಡಲು ತೋಚದ ಚೋಮ, ಮುಂದಿನ ಬಾರಿ ತನ್ನ ಮಗಳಾದ ಬೆಳ್ಳಿಯನ್ನೇ ಕಾಫಿ ತೋಟದ ಕೆಲಸಕ್ಕೆ ಕಳುಹಿಸುತ್ತಾನೆ. ಈ ವೇಳೆ ಬ್ರಿಟೀಷ್ ವ್ಯಕ್ತಿಯೊಬ್ಬ ಬೆಳ್ಳಿಯ ಮೇಲೆ ಶೋಷಣೆ ಮಾಡಲು ಪ್ರಾರಂಭಿಸುತ್ತಾನೆ. ಇಲ್ಲಿ ಶೋಷಣೆ ಮಾಡುತ್ತಿದ್ದ ವ್ಯಕ್ತಿಯನ್ನು ಇಂಗ್ಲೀಷ್ ವಸಾಹತುಶಾಹಿಯ ಪ್ರತಿನಿಧಿಯಾಗಿ ಪರಿಗಣಿಸಬಹುದು.
ಸಿನಿಮಾದಲ್ಲಿ ಮೊದಲಿಗೆ ಜಾತಿಯ ನೆಲೆಯಲ್ಲಾಗುತ್ತಿದ್ದ ಶೋಷಣೆ ನಂತರ ಸಂಪ್ರದಾಯದ ನೆಲೆಯಲ್ಲಾಯಿತು. ತದನಂತರ ರಾಜಕೀಯ ವ್ಯವಸ್ಥೆಯ ರೀತಿಯಲ್ಲಿ, ಜಾಗತಿಕ ಮಟ್ಟದ ರೀತಿಯಲ್ಲಿ ಶೋಷಣೆಗಳು ನಡೆಯಲಾರಂಭಿಸಿದವು. ಇಲ್ಲಿ ಜಾಗತಿಕ ಮಟ್ಟ ಎಂದರೇ ಬ್ರಿಟೀಷರು ಎಲ್ಲಾ ದೇಶಗಳಲ್ಲೂ ಇದೇ ಮಾದರಿಯ ಶೋಷಣೆಯನ್ನು ನಡೆಸುತ್ತಾ ಇದ್ದರು ಎಂಬರ್ಥ ಬರುವುದು. ಶಿವರಾಮ ಕಾರಂತರು ಬೇರೆ ಬೇರೆ ದೃಷ್ಠಿಕೋನದಲ್ಲಿ ಚಿತ್ರವನ್ನು ಚಿತ್ರಿಸುತ್ತಾ ಹೋಗುತ್ತಾರೆ. ಈ ದೃಷ್ಟಿಕೋನ ಸಿನಿಮಾದಲ್ಲಿ ಅಮೋಘವಾಗಿ ವ್ಯಕ್ತವಾಗಿರುವುದರಿಂದ ಹೆಗ್ಗಳಿಕೆಗೆ ಕಾರಣವಾಯಿತು. ಚಿತ್ರದ ಕತೆ ಬಹಳ ಗಟ್ಟಿಯಾಗಿರುವುದರಿಂದ ಸಿನಿಮಾವೂ ಗಟ್ಟಿಯಾಗಿದೆ ಎಂಬುದನ್ನ ಮೊದಲಿಗೆ ನಿಸ್ಸಂಶಯವಾಗಿ ಹೇಳಬಹುದು.
ಎರಡನೇಯ ಬಹಳ ಮುಖ್ಯವಾದ ಸಾಧನೆ ಎಂದರೇ ಅಥೆಂಟಿಕ್ ಅಥವಾ ವಿಶ್ವಾಸಾರ್ಹ ಪ್ರಪಂಚ. ಸಿನಿಮಾದಲ್ಲಿ ಬಹಳ ದೊಡ್ಡದಾದ ಮತ್ತು ಕಷ್ಟಕರವಾದ ಕೆಲಸ ಯಾವುದು ಅಂದರೇ ಪ್ರೇಕ್ಷಕನಿಗೆ ತಾನು ತೆರೆಯ ಮೇಲೆ ನೋಡುತ್ತಾ ಇರುವುದು ಅಥೆಂಟಿಕ್ ಅನ್ನುವ ಭಾವನೆಯನ್ನು ಹುಟ್ಟಿಸುವುದು. ಈ ಅಥೆಂಟಿಕ್ ಅನ್ನುವ ಶಬ್ದ ಸಾಹಿತ್ಯ ಲೋಕದಲ್ಲಿ ಅಥವಾ ಇನ್ಯಾವುದೇ ಕ್ಷೇತ್ರದಲ್ಲಿ ಮೌಲ್ಯ ನಿರ್ಧಾರಕ ಅಂಶವಾಗದೇ ಇರಬಹುದು. ಆದರೆ ಸಿನಿಮಾದಲ್ಲಿ ಈ ಶಬ್ದಕ್ಕೆ ಹೆಚ್ಚಿನ ಮನ್ನಣೆ ಇದೆ. ತಾನು ತೆರೆಯಲ್ಲಿ ನೋಡುತ್ತಾ ಇರುವುದು ಸಂಭವನೀಯ ಅಥವಾ ವಿಶ್ವಾಸಾರ್ಹ ಎಂಬುದು ಅನಿಸದೇ ಇದ್ದರೇ, ಪ್ರೇಕ್ಷಕ ಎಲ್ಲವನ್ನೂ ಅನುಮಾನದಿಂದ ನೋಡಲು ಆರಂಭಿಸುತ್ತಾನೆ.
ಸ್ವೀಡೀಶ್ ನ ಜನಪ್ರಿಯ ಚಿತ್ರ ನಿರ್ದೇಶಕರಲ್ಲಿ ಇಂಗ್ಮಾರ್ ಬರ್ಗ್ಮನ್ ಕೂಡ ಒಬ್ಬರು. ದೃಶ್ಯ ಕಟ್ಟುವುದು ಅಂದರೇ ಕೇವಲ ನೈಜತೆಯ ಮಾದರಿಯಲ್ಲಿ ಅಥವಾ ರಿಯಾಲಿಸ್ಟಿಕ್ ಆಗಿ ತೋರಿಸುವುದಷ್ಟೆ ನಿಮ್ಮ ಉದ್ದೇಶವೇ ? ಎಂಬ ಪ್ರಶ್ನೆಯನ್ನು ಒಬ್ಬಾತ ಬರ್ಗ್ಮನ್ ಅವರಿಗೆ ಕೇಳುತ್ತಾನೆ. ಇದಕ್ಕೆ ಉತ್ತರಿಸಿದ ಬರ್ಗ್ಮನ್, ಸಿನಿಮಾದಲ್ಲಿ ದೃಶ್ಯ ಕಟ್ಟುವ ಕಲೆ ಕೇವಲ ರಿಯಾಲಿಸ್ಟಿಕ್ ಆಗಿದ್ದರೇ ಮಾತ್ರ ಸಾಲದು. ಅದು ಲೈಫ್ ಲೈಕ್ ಮಾದರಿಯಲ್ಲಿರಬೇಕು. ಅಂದರೇ ಜೀವನಕ್ಕೆ ಬಹಳ ಹತ್ತಿರವಾಗಿರಬೇಕು ಎಂಬುದಾಗಿ ತಿಳಿಸುತ್ತಾರೆ.
ಈ ಲೈಫ್ ಲೈಕ್ ಎನ್ನುವುದು ‘ಚೋಮನದುಡಿ’ ಬರುವವರೆಗೂ ಕನ್ನಡ ಸಿನಿಮಾದಲ್ಲಿ ಆ ಕಾಲಕ್ಕೆ ಬಹಳ ಅಪರೂಪವಾಗಿ ಕಾಣಿಸುತ್ತಾ ಇದ್ದ ಅಂಶಗಳು. ಜನಪ್ರಿಯ ಚಿತ್ರಗಳಲ್ಲೂ ಈ ಲೈಫ್ ಲೈಕ್ ಎನ್ನುವುದು ಗುಣಮಟ್ಟದ ಮಾನದಂಡವಾಗಿರಲಿಲ್ಲ. ಆದ್ರೆ ಹೊಸ ಅಲೆಯ ಚಲನಚಿತ್ರಗಳು ಕನ್ನಡದಲ್ಲಿ ಬರಲು ಶುರುವಾದಾಗಿನಿಂದ, ಈ ಲೈಫ್ ಲೈಕ್ ಅಂಶಗಳು ಮುನ್ನೆಲೆಗೆ ಬಂದವು. ಚೋಮನದುಡಿಯಲ್ಲಿ ಕೂಡ ಬಹಳ ಯಶಸ್ವಿಯಾಗಿ ಈ ಅಥೆಂಟಿಕ್ ಪ್ರಪಂಚವನ್ನು ಕಟ್ಟಿಕೊಡಲಾಗಿತ್ತು. “ಸಂಸ್ಕಾರ”, “ಕಾಡು”. ಸಿನಿಮಾಗಳಲ್ಲೂ ಈ ಪ್ರಯತ್ನ ನಡೆಸಲಾಗಿತ್ತು. ಆದರೆ ಪೂರ್ಣವಾಗಿ ಯಶಸ್ವಿಯಾಗಿದ್ದು ಮಾತ್ರ ಚೋಮನದುಡಿ ಚಿತ್ರದಲ್ಲಿ.
ಇಲ್ಲಿ ಸಿನಿಮಾದ ವಸ್ತು ಎಂಬುದು ದಲಿತನ, ಚೋಮನ ಶೋಷಣೆಯಾಗಿದ್ದರೂ ಕೂಡ, ಅದನ್ನು ಧ್ವನಿಸುವ ರೀತಿಯಲ್ಲಿ, ಬಿಂಬಿಸುವ ರೀತಿಯಲ್ಲಿ ನಿರ್ದೇಶಕರಾದ ಬಿ.ವಿ ಕಾರಂತರು ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ. ಪಾತ್ರಗಳ ಆಯ್ಕೆ, ಪರಿಕರಗಳ ವಿನ್ಯಾಸ ಮುಂತಾದವನೆಲ್ಲಾ ಅಚ್ಚುಕಟ್ಟಾಗಿ ಅಳವಡಿಸಿಕೊಂಡು, ಎಲ್ಲೂ ಕೂಡ ಭಾವನೆಗಳಿಗೆ ಧಕ್ಕೆಯಾಗದ ರೀತಿ ಚಿತ್ರವನ್ನು ರೂಪಿಸಿರುವುದು ಹೆಗ್ಗಳಿಕೆ. ಹೀಗಾಗಿ ಸಿನಿಮಾ ಭಾವನಾತ್ಮಕವಾಗಿಯೂ ಗೆಲುವು ಸಾಧಿಸುತ್ತದೆ. ಹಾಗೆಯೇ ವಿಶ್ವಾಸಾರ್ಹವಾಗಿ ಜನರ ಮನ ಸೆಳೆಯುತ್ತದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಚೋಮನದುಡಿ, ಆವರೆಗೂ ಕನ್ನಡದ ಬೇರಾವುದೇ ಚಿತ್ರಗಳು ಮಾಡಿರದ ಸಾಧನೆಯನ್ನು ಮಾಡಿದೆ ಎಂದರೆ ಉತ್ಪ್ರೇಕ್ಷೆಯಲ್ಲ. ಮುಖ್ಯವಾಗಿ ಸಿನಿಮಾತ್ಮಕ ಅಂಶಗಳಲ್ಲಿ ಅಂದರೆ ಅದರ ತಂತ್ರಗಾರಿಕೆಯಲ್ಲಿ ಬಹಳ ಹೊಸತನವಿದೆ. ಅಭಿನಯ ವಿಷಯದಲ್ಲೂ ಕೂಡ ಪಾತ್ರಧಾರಿಗಳು ಸಂಪೂರ್ಣವಾಗಿ ಲೀನರಾಗಿರುವುದರಿಂದ, ಅಥೆಂಟಿಕ್ ಪ್ರಪಂಚ ನಮ್ಮ ಕಣ್ಣುಮುಂದೆಯೇ ಲೀಲಾಜಾಲವಾಗಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ಸಿನಿಮಾದಲ್ಲಿ ಯಾರು ಕೂಡ ಅಭಿನಯಿಸುತ್ತಿದ್ದಾರೆ ಎಂದನಿಸುವುದೇ ಇಲ್ಲ. ನೈಜ ಘಟನೆಯನ್ನು ಕ್ಯಾಮರಾದಲ್ಲಿ ಯಥಾವತ್ತಾಗಿ ಚಿತ್ರಿಸಲಾಗಿದೆ ಎಂಬುದಷ್ಟೇ ಪ್ರೇಕ್ಷಕನಿಗೆ ಮನದಲ್ಲಿ ಉಳಿಯುತ್ತದೆ.
ಚೋಮನದುಡಿ ಚಿತ್ರದಲ್ಲಿನ ಮತ್ತೊಂದು ಬಹಳ ಮುಖ್ಯ ಅಂಶ ಎಂದರೇ ಛಾಯಾಗ್ರಹಣ. ಎಸ್. ರಾಮಚಂದ್ರ ಅವರು ಸಮರ್ಥವಾಗಿ ದೃಶ್ಯವನ್ನು ಕಟ್ಟಿಕೊಟ್ಟಿದ್ದಾರೆ. ಕ್ಯಾಮಾರ ಲೆನ್ಸಿಂಗ್, ಕಂಪೋಶೀಷನ್, ಮೂಮೆಂಟ್ಸ್ ಹೀಗೆ ಪ್ರತಿಯೊಂದು ಸಣ್ಣ ಸಣ್ಣ ವಿವರಗಳನ್ನು ದಾಖಲಾಗಿಸುವ ರೀತಿಯಲ್ಲಿ ಬಿಂಬಿಸಿದ್ದಾರೆ. ಹೀಗಾಗಿ ಸಿನಿಮಾ ನೋಡಿದ ಮೇಲೂ ಚೋಮ, ಬೆಳ್ಳಿ, ಮನ್ವೇಲ, ಗುರುವ, ಚನಿಯ, ಸಂಕಪ್ಪಯ್ಯ ಎಲ್ಲರೂ ಕೂಡ ಮನಸ್ಸಿನಲ್ಲಿ ಉಳಿಯುತ್ತಾರೆ.
ಮತ್ತೊಂದು ಗಮನಾರ್ಹ ಸಂಗತಿಯೆಂದರೇ ಸಿನಿಮಾದ ಸಂಗೀತ. ಅಲ್ಲಿನ ತನಕ ಕನ್ನಡದ ಸಿನಿಮಾಗಳಲ್ಲಿ ಯಾವ ಯಾವ ವಾದ್ಯಗಳು ಮುನ್ನೆಲೆಗೆ ಬರಲಿಲ್ಲವೋ ಅದೆಲ್ಲವನ್ನೂ ಕೂಡ ಕಾರಂತರು ತಂದು, ಅದರಿಂದ ಸಿನಿಮಾವನ್ನು ಕಟ್ಟಿಕೊಡುತ್ತಾರೆ. ಹೀಗಾಗಿ ಇಲ್ಲಿ ‘ದುಡಿ’ಯೇ ಪ್ರಧಾನ ವಾದ್ಯವಾಗುತ್ತದೆ. ಸಿನಿಮಾಗಳಲ್ಲಿ ತಂತಿವಾದ್ಯಗಳಿಗೆ ಹೆಚ್ಚಿನ ಮಹತ್ವವಿದೆ. ಅಂದರೇ ವಯಲಿನ್, ವೀಣೆ ಮುಂತಾದವನ್ನು ಸಾಮಾನ್ಯ ಎಂಬಂತೆ ಬಳಸುತ್ತಾರೆ. ಆದರೆ ಕಾರಂತರು ಎತ್ತರದ ಸ್ಥಾನದಲ್ಲಿರುವ ವಾದ್ಯಗಳನ್ನು ಬದಿಗಿಟ್ಟು, ಶಿಷ್ಟ ವಾದ್ಯಗಳಲ್ಲದ ಉಪಕರಣಗಳನ್ನು ತಂದು ಸಂಗೀತವನ್ನು ಅಧ್ಬುತವಾಗಿ ನೀಡುತ್ತಾರೆ. ಚೋಮನದುಡಿ ಚಿತ್ರದಲ್ಲಿ ಬಿ.ವಿ ಕಾರಂತರು ಕೇವಲ ನಿರ್ದೇಶಕನ ಕ್ಯಾಪ್ ತೊಡದೇ ಸಂಗೀತ ನಿರ್ದೇಶನದ ಜವಬ್ದಾರಿಯನ್ನೂ ಕೂಡ ತೆಗೆದುಕೊಳ್ಳುತ್ತಾರೆ.
ಚೋಮನದುಡಿ ಸಿನಿಮಾದಲ್ಲಿ ಬಹಳ ಪರಿಣಾಮಕಾರಿಯಾದ ಚಿತ್ರಿತವಾದ ದೃಶ್ಯ ಎಂದರೇ ಚನಿಯನ ಸಾವು. ಅಲ್ಲಿನ ತನಕದ ಕನ್ನಡ ಸಿನಿಮಾಗಳಲ್ಲಿ ಸಾಮಾನ್ಯವಾಗಿ ವಯಲಿನ್ ಅಥವಾ ಬೇರೆ ಇನ್ಯಾವುದೇ ವಾದ್ಯ ಬಳಸಿಕೊಂಡು ಶೋಕವನ್ನು ಹುಟ್ಟಿಸುವ ರೀತಿಯಲ್ಲಿ ಸಾವಿನ ದೃಶ್ಯವನ್ನು ತೋರಿಸುತ್ತಾ ಇದ್ದರು. ಆದರೆ ಬಿ.ವಿ ಕಾರಂತರು ವಾದ್ಯವನ್ನು ಬಳಸೋದೆ ಇಲ್ಲ. ಅದರ ಬದಲಾಗಿ ತುಳುನಾಡಿನ ಸಂಪ್ರದಾಯಗಳಲ್ಲೋಂದಾದ “ಪಾಡ್ದನ”ವನ್ನು ಬೇರೆ ರೀತಿಯಲ್ಲಿ ಹಾಡಿಸಿ, ಸಿನಿಮಾದಲ್ಲಿ ಬಳಸುತ್ತಾ ಹೋಗುತ್ತಾರೆ. ಪಾಡ್ದನ ಎಂಬುದು ಮೇಲ್ವರ್ಗದ ಅಥವಾ ಮೇಲು ಜಾತಿಯ ಸಂಪ್ರದಾಯವಲ್ಲ. ದುಡಿ ಮುಂತಾದ ವಾದ್ಯಗಳು ಕೂಡ ಇವರ ಸಂಪ್ರದಾಯವಲ್ಲ. ಯಾವುದು ದಲಿತ ವರ್ಗಕ್ಕೆ, ಯಾವುದು ಶೋಷಿತ ವರ್ಗಕ್ಕೆ ಸೇರಿದೆಯೋ ಆ ಸಂಗೀತವನ್ನೆ ಅಥವಾ ಆ ಅಂಶವನ್ನೇ ಬಳಸಿಕೊಂಡು ಇಡೀ ಸಿನಿಮಾವನ್ನು ಕಟ್ಟಿಕೊಡುತ್ತಾರೆ. ಇದು ಕೇವಲ ತಂತ್ರಗಾರಿಕೆಯಲ್ಲ. ಒಂದು ರಾಜಕೀಯ ಒಳನೋಟವಾಗಿಯೂ ಗಮನ ಸೆಳೆಯುತ್ತದೆ. ಈ ಎಲ್ಲಾ ಕಾರಣದಿಂದ ಸಿನಿಮಾದ ಸಂಗೀತ ಬಹುಮುಖ್ಯ ಸ್ಥಾನದಲ್ಲಿ ನಿಲ್ಲುವುದು.
ಅಥೆಂಟಿಕ್ ಪ್ರಪಂಚವನ್ನು ಕಟ್ಟಿಕೊಡುವ ಪ್ರಯತ್ನದಲ್ಲಿ ಬಹುಮುಖ್ಯವಾಗಿ ಈ ಸಿನಿಮಾದಲ್ಲಿ ಕಂಡುಬಂದ ಮಗದೊಂದು ಅಂಶ ಎಂದರೇ ಶಾಬ್ದಿಕ ಘಟಕಗಳ ಸಂಯೋಜನೆ ಅಂದರೇ ಸೌಂಡ್ ಎಫೆಕ್ಟ್. ಪ್ರಾಯಶಃ ಕನ್ನಡ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ಸೌಂಡ್ ಎಫೆಕ್ಟ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬಹುದು ಎಂಬುದನ್ನು ನಿರೂಪಿಸಿದ ಸಿನಿಮಾ ಚೋಮನದುಡಿ. ಅಲ್ಲಿಯವರೆಗೂ ಸಂಭಾಷಣೆ, ಸಂಗೀತ, syncrounus sound ಅಥವಾ ವಾಯ್ಸ್ ಡಬ್ಬಿಂಗ್ ಮಾತ್ರ ಶಬ್ದ ಸಂಯೋಜನೆ ತಂತ್ರಜ್ಞಾನದ ಭಾಗವಾಗಿತ್ತು. ಕೆ.ಎಸ್ ಕೃಷ್ಣಮೂರ್ತಿಗಳ ಅವರ ಶಬ್ದ ಸಂಯೋಜನೆಯಲ್ಲಿ ಬೇರೆ ರೀತಿಯ ಅನೇಕ ಶಬ್ದಗಳನ್ನು ಬಳಸುವ ಮೂಲಕ ಸಿನಿಮಾದಲ್ಲಿ ಪರಿಸರವನ್ನು ಅಚ್ಚುಕಟ್ಟಾಗಿ ಸೃಷ್ಟಿ ಮಾಡುತ್ತಾ ಹೋಗುತ್ತಾರೆ. ಭತ್ತ ನೆಡುವ ಹಾಡು, ಭೂತ ಕಟ್ಟುವ ಹಾಡು, ಯಕ್ಷಗಾನದ ಶಬ್ದ ಇವೆಲ್ಲವನ್ನು ಕೃಷ್ಣಮೂರ್ತಿಗಳು ಬಹಳ ಅಂದವಾಗಿ ಮತ್ತು ಪರಿಣಾಮಕಾರಿಯಾಗಿ ಸಿನಿಮಾದಲ್ಲಿ ತೋರ್ಪಡಿಸಿದ್ದಾರೆ. ಹೀಗಾಗಿ ಈ ಸಿನಿಮಾ ಕೇವಲ ವಸ್ತು ದೃಷ್ಠಿಯಿಂದ ಮಾತ್ರ ಅಲ್ಲ, ಆ ವಸ್ತುವನ್ನು ಪ್ರತಿಬಿಂಬಿಸುವ ನೆಲೆಯಲ್ಲೂ ಕೂಡ ಬಹಳ ಯಶಸ್ವಿಯಾಗಿದೆ. ಚಿತ್ರ ಕಟ್ಟಿದ ರೀತಿ, ಛಾಯಾಗ್ರಹಣ, ಸಂಗೀತದ ಬಳಕೆ, ಅಭಿನಯ, ಸೌಂಡ್ ಡಿಸೈನ್ ಮುಂತಾದ ಎಲ್ಲಾ ಆಂಶಗಳನ್ನು ಪರಿಪೂರ್ಣವಾಗಿ ಕಟ್ಟಿಕೊಟ್ಟ ಸಿನಿಮಾ ಚೋಮನದುಡಿ. ಈ ಸಿನಿಮಾವನ್ನು ನೋಡಿದ ಹಿಂದಿಯ ಖ್ಯಾತ ನಿರ್ದೇಶಕ ಕೆ.ಎ ಅಬ್ಬಾಸ್ ಅವರು “ಪತೇರ್ ಪಾಂಚಾಲಿ ನಂತರ ನಾನು ನೋಡಿದ ಅತ್ಯಂತ ಪರಿಪೂರ್ಣ ಸಿನಿಮಾ ಇದು” ಎಂದು ವಿಶ್ಲೇಷಣೆ ಮಾಡುತ್ತಾರೆ.
0 Comments