ಭ್ರಮೆ ಮತ್ತು ವಾಸ್ತವ ನಡುವಿನ ಸತ್ಯ: ‘ಬ್ಲೋ-ಅಪ್’ ಕುರಿತು ಕಾಸರವಳ್ಳಿ ಮಾತು

ಬ್ಲೋ-ಅಪ್ (Blow-up) 1966ರಲ್ಲಿ ಬಿಡುಗಡೆಯಾದ ಬ್ರಿಟಿಷ್ ಸಿನಿಮಾ. ಈ ಚಿತ್ರವನ್ನು ನಿರ್ದೇಶಿಸಿದವರು ಮೈಕಲ್ಯಾಂಜಲೋ ಆಂಟೋನಿಯೋನಿ. ಇಟಾಲಿಯನ್ ಫಿಲ್ಮ್ ಮೇಕರ್  ಆಗಿರುವ ಇವರು ಸಿನಿಮಾ ಜಗತ್ತು ಕಂಡ ಅತ್ಯಂತ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು. ಇವರ ಪ್ರಥಮ ಸಿನಿಮಾವಾದ ಬ್ಲೋ-ಅಪ್ ನಲ್ಲಿ ಬಹಳ ರೋಚಕವಾದ ಕಥಾಹಂದರವಿದೆ.

ಥಾಮಸ್ ಎನ್ನುವ ಫ್ಯಾಷನ್ ಫೋಟೋಗ್ರಾಫರ್ ಉದ್ಯಾನವನವೊಂದರ ಫೋಟೋ ತೆಗೆಯುವುದರಲ್ಲಿ ನಿರತನಾಗಿದ್ದ. ಅದೇ ಸಂದರ್ಭದಲ್ಲಿ ಹೆಂಗಸೊಬ್ಬಳು ತನ್ನ ಪ್ರಿಯಕರನೊಂದಿಗೆ ಆ ಸ್ಥಳದಲ್ಲಿ ಓಡಾಡುತ್ತಿರುತ್ತಾಳೆ. ಇದನ್ನು ಗಮನಿಸಿದ ಥಾಮಸ್, ಅವಳನ್ನು ಹಿಂಬಾಲಿಸುತ್ತಾ ಆಕೆಯ ಛಾಯಾಚಿತ್ರ ತೆಗೆಯುತ್ತಾನೆ. ಆಕ್ರೋಶಗೊಂಡ ಆ ಹುಡುಗಿ “ನಿನಗೆ ನನ್ನ ಫೋಟೋ ತೆಗೆಯುವ ಹಕ್ಕಿಲ್ಲ. ನೀನು ತೆಗೆದ ಫೋಟೋವಿನ ನೆಗೆಟಿವ್ ಕೂಡಲೇ ನೀಡು” ಎಂದು ಧ್ವನಿ ಏರಿಸುತ್ತಾಳೆ. ಆದರೆ ಜಾಣ್ಮೆ ಪ್ರದರ್ಶಿಸಿದ ಫೋಟೋಗ್ರಾಫರ್ ಬೇರೊಂದು ನೆಗೆಟಿವ್ ನೀಡಿ ಅಲ್ಲಿಂದ ಕಾಲುಕೀಳುತ್ತಾನೆ. ನಂತರ ಮನೆಯಲ್ಲಿ ನೆಗೆಟಿವ್ ನಿಂದ ಫೋಟೋ ಕಾಪಿ ತೆಗೆಯುತ್ತಿರುವಾಗ ವಿಸ್ಮಯವೊಂದನ್ನು ಆತನ ಗಮನಕ್ಕೆ ಬರುತ್ತದೆ. ಆ ಇಬ್ಬರೂ ಬಲಗಡೆ ತಿರುಗಿ ಏನನ್ನೋ ತದೇಕಚಿತ್ತದಿಂದ ನೋಡುತ್ತಿರುವ ಹಾಗೆ ಭಾಸವಾಗುತ್ತದೆ. ಇವರೇಕೆ ಹಾಗೆ ನೋಡುತ್ತಿದ್ದಾರೆ? ಎಂಬ ಪ್ರಶ್ನೆ  ಮೂಡಿ,  ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲೊಂದು ಮೃತದೇಹ ಬಿದ್ದಿರುವುದು ಥಾಮಸ್ ನ ಗಮನಕ್ಕೆ ಬಂದು ಆಶ್ಚರ್ಯಕ್ಕೀಡಾಗುತ್ತಾನೆ.

ಥಾಮಸ್ ಕುತೂಹಲದಿಂದ ಮಾರನೇ ದಿನ ಉದ್ಯಾನವನಕ್ಕೆ ತೆರಳಿ ನೋಡಿದಾಗ ಮೃತದೇಹ ಅಲ್ಲೆ ಬಿದ್ದಿತ್ತು. ಇದು ಯಾರ ದೇಹ ? ಪೊಲೀಸಿನವರಿಗೆ ಸುದ್ದಿ ಮುಟ್ಟಿಸಬೇಕೆ ? ಬೇಡವೇ? ಎಂಬ ಗೊಂದಲ ಆತನಲ್ಲಿ ಮೂಡುತ್ತದೆ. ದುರದೃಷ್ಟವೆಂದರೇ ಆ ಸಂದರ್ಭದಲ್ಲಿ ಕ್ಯಾಮೆರಾ ತೆಗೆದುಕೊಂಡು ಹೋಗಲು ಕೂಡ ಮರೆತಿದ್ದ. ಅದ್ದರಿಂದ ಮತ್ತೆ ಅಲ್ಲಿಂದ ಹಿಂತಿರುಗಿ ತನ್ನ ದೈನಂದಿನ ಕೆಲಸದಲ್ಲಿ ನಿರತನಾಗಿ ಬಿಡುತ್ತಾನೆ. ದಿನ ಕಳೆದ ನಂತರ ಮಗದೊಮ್ಮೆ ಆ ಉದ್ಯಾನವನ ಸುತ್ತಾಡುತ್ತಾನೆ. ಈ ಬಾರಿ ಕ್ಯಾಮೆರಾ ತೆಗೆದುಕೊಂಡು ಹೋದರೂ ಅಲ್ಲಿ ಮೃತದೇಹ ಇರದಿದ್ದರಿಂದ ಗಲಿಬಿಲಿಗೊಳ್ಳುತ್ತಾನೆ.

ಮೈಕಲ್ಯಾಂಜಲೋ ಆಂಟೋನಿಯೋನಿಗೆ ಬ್ಲೋ-ಅಪ್ ಕಥೆಯನ್ನು ರೋಚಕವಾಗಿ, ವೈಭವೀಕರಿಸಿ ನಿರ್ಮಾಣ ಮಾಡುವ ಸಾಧ್ಯತೆಗಳಿತ್ತು. ಆದರೆ ಈ ತೆರನಾದ ಕಥೆ ಕಟ್ಟುವುದರಲ್ಲಿ ಆತನಿಗೆ ಆಸಕ್ತಿ ಇರುವುದಿಲ್ಲ. ಕಥೆಯಲ್ಲಿ ತಾತ್ವಿಕ ಆಯಾಮ, ತಿರುಳು, ಬಿಕ್ಕಟ್ಟನ್ನು ಹುಡುಕುವ ದೃಷ್ಟಿಕೋನ ಈತನದ್ದು. ಸಾಮಾನ್ಯವಾಗಿ ನಾವು ಕೇಳುವ ಕಥೆಯ ಭಾಗವನ್ನು ಬಿಟ್ಟು, ಅದೇ ಕಥೆಯ ಅಂಶವನ್ನು ಇನ್ನೊಂದು ನೆಲೆಗೆ ಎತ್ತಿಕೊಂಡು ಹೋಗುವುದು ದುಸ್ಸಾಹಸ. ಆದರೆ ಬ್ಲೋ-ಅಪ್ ಸಿನಿಮಾದಲ್ಲಿ ಇಂತಹ ಸಾಹಸವನ್ನು ಮಾಡಲಾಗಿದೆ. ಇದು ಒಂದು ರೀತಿಯ ಹುಡುಕಾಟದ ಚಿತ್ರ.

ಈ ಸಿನಿಮಾದಲ್ಲಿ ಥಾಮಸ್ ನ ಹುಡುಕಾಟ ವಿಭಿನ್ನವಾದದ್ದು. ಮಾಡೆಲ್ ಗಳ ಫೋಟೋ ಕ್ಲಿಕ್ಕಿಸಿ, ಅವರನ್ನು ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿರುವ ಮಾಡೆಲ್ ಗಳೆಂದು ತೋರಿಸುವುದು ಅವನ ವೃತ್ತಿ. ಆದರೆ ವೈಯಕ್ತಿಕವಾಗಿ ತನ್ನನ್ನು ತಾನು ಹೊಗಳಿಸಿಕೊಳ್ಳುವುದರಲ್ಲಿ ಆಸಕ್ತಿ ಇರುವುದಿಲ್ಲ. ಇದರ ಜೊತೆಗೆ ಜನರ ವಾಸ್ತವಸ್ಥಿತಿಯ ಬಗ್ಗೆಯೂ ಫೋಟೋಗಳನ್ನು ಕ್ಲಿಕ್ಕಿಸುತ್ತಿರುತ್ತಾನೆ. ಅಂದರೆ, ಒಂದು ಗ್ಲಾಮರ್ ಫೋಟೋಗ್ರಫಿ, ಮತ್ತೊಂದು ಅದರ ವಿರುದ್ಧವಾದ ವಾಸ್ತವ ಬದುಕಿನ ಫೋಟೋಗ್ರಫಿ ಮಾಡುವುದು ಇವನ ವೃತ್ತಿ. ಹೀಗಾಗಿ ನಿಜ ಎಲ್ಲಿದೆ ಎನ್ನುವುದೇ ಈ ಸಿನಿಮಾದ ಹುಡುಕಾಟ. ಈ ಹುಡುಕಾಟದ ಸನ್ನಿವೇಶವನ್ನು ಸಿನಿಮಾದ ಕೊನೆಯ ದೃಶ್ಯದಲ್ಲಿ ನೋಡಬಹುದು.

ಫೋಟೋಗ್ರಾಫರ್ ಹಿಂದಿನ ದಿನ ನೋಡಿದ ಹೆಣ, ಮಾರನೇ ದಿನ ಮಾಯವಾಗಿರುತ್ತದೆ. ಹಾಗಾದರೆ ಅಲ್ಲಿ ಮೃತದೇಹ ಇದ್ದದ್ದು ಸತ್ಯವೇ ? ಇಲ್ಲಿ ಆತನ ಫೋಟೋಗ್ರಫಿ ಅದಕ್ಕೆ ಪುರಾವೆ ಒದಗಿಸುತ್ತದೆ. ಆದರೆ ಮತ್ತೊಬ್ಬ ವ್ಯಕ್ತಿ ಹೆಣವನ್ನು ನೋಡುವವರೆಗೂ ಅದು ಸತ್ಯವಾಗಿರುವುದಿಲ್ಲ ಅಲ್ಲವೇ? ಉದಾಹರಣೆಗೆ ಕೋರ್ಟ್ ಗಳಲ್ಲಿ  ಇಬ್ಬರ ಸಾಕ್ಷಿಗಳಿದ್ದರೇ ಮಾತ್ರ ಸೂಕ್ತ ತೀರ್ಪು ಹೊರಬರುತ್ತದೆ. ಇಲ್ಲವಾದರೇ ತೀರ್ಪು ವಿಳಂಬವಾಗುವ ಸಾಧ್ಯತೆಗಳಿರುತ್ತದೆ.

ಹಾಗಾದರೇ ಸತ್ಯ ಎನ್ನುವುದನ್ನು ಹೇಗೆ ಹುಡುಕುವುದು? ತಾಂತ್ರಿಕವಾಗಿಯೋ? ಆಥವಾ ಒಬ್ಬ ವ್ಯಕ್ತಿ ಮಾನವೀಯತೆಯಿಂದ ಹೇಳಿದ ಮಾತ್ರಕ್ಕೆ ಸಂಗತಿ ಸತ್ಯವಾಗುತ್ತದೆಯೋ? ಈ ರೀತಿಯ ಎತ್ತರದ ಆಲೋಚನೆಯಿಂದ ಆಂಟೋನಿಯೋನಿ ಸಿನಿಮಾವನ್ನು ಅರ್ಥೈಸುತ್ತಾನೆ. ಇದಕ್ಕೆ ಪೂರಕವಾಗಿ ಕೊನೆಯಲ್ಲಿ ಬರುವ ದೃಶ್ಯವೊಂದರಲ್ಲಿ, ಥಾಮಸ್ ಗೆ ಉದ್ಯಾನವನದಲ್ಲಿದ್ದ ಮೃತದೇಹ ಕಾಣದಾದಾಗ ಗೊಂದಲಕ್ಕೀಡಾಗುತ್ತಾನೆ. ಈ ಸಂದರ್ಭದಲ್ಲಿ ಒಂದಷ್ಟು ಜನ ಬಯಲಿನಲ್ಲಿ ಆಟ ಆಡುತ್ತಿರುತ್ತಾರೆ. ಆದರೆ ಟೆನಿಸ್ ಬ್ಯಾಟ್ ಮತ್ತು ಬಾಲ್ ಇರುವುದಿಲ್ಲ, ಬದಲಾಗಿ ಮೈಮ್ ರೀತಿಯಲ್ಲಿ ಆಡುತ್ತಿರುತ್ತಾರೆ. ಥಾಮಸ್ ಅವರನ್ನು ಬಹಳ ಆಶ್ಚರ್ಯದಿಂದ ನೋಡುತ್ತಿರುತ್ತಾನೆ. ಇತ್ತ ಕಡೆಯಿಂದ ಒಬ್ಬ ಬ್ಯಾಟ್ ಇಲ್ಲದೆ ಹೊಡೆದಾಗ ಮತ್ತೊಂದು ಭಾಗದಲ್ಲಿರುವಾತನೂ ಅದೇ ರೀತಿ ಅಭಿನಯಿಸುತ್ತಿರುತ್ತಾನೆ. ಇದರಿಂದ ಗೊಂದಲಕ್ಕೀಡಾಗುವ  ಥಾಮಸ್ ಗೆ,  “ಅಲ್ಲಿ ನಿಜಕ್ಕೂ ಚೆಂಡು ಇದ್ದು ನನಗೆ ಕಾಣಿಸುತ್ತಿಲ್ಲವೋ? ಅಥವಾ ನನಗೆ ಭ್ರಮೆಯೋ? ಈ ಭ್ರಮೆ ಮತ್ತು ವಾಸ್ತವ ನಡುವಿನ ಸತ್ಯ ಎಲ್ಲಿದೆ?” ಎಂಬ ಅನುಮಾನ ಕಾಡುತ್ತದೆ.

ದೃಶ್ಯದ ಕೊನೆಗೆ ಆಟ ಆಡುತ್ತಿರುವವರು “ಬಾಲ್” ಎಂದು ಕೂಗುತ್ತಾರೆ. ತಕ್ಷಣ ಥಾಮಸ್ ಓಡಿಹೋಗಿ ಬಾಲನ್ನು ಹೆಕ್ಕಿ, ಅವರಿಗೆ ಕೊಡುವಂತೆ ಮಾಡಿ ಹೊರಡುತ್ತಾನೆ. ಅಲ್ಲಿಗೆ ಸಿನಿಮಾ ಮುಕ್ತಾಯವಾಗುತ್ತದೆ. ಆದರೆ ವಿಚಿತ್ರವೆಂದರೇ ಕೊನೆಯವರೆಗೂ ಆ ಕಥೆಯಲ್ಲಿ ನಿಜಕ್ಕೂ ಹೆಣ ಇದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ದೇಶಕ ಹೇಳುವುದಿಲ್ಲ. ಏಕೆಂದರೆ ಅತನ ಉದ್ದೇಶವೇ ಬೇರೆ ರೀತಿಯಲ್ಲಿರುತ್ತದೆ. ಈ ರೀತಿಯಾಗಿ ಆಂಟೋನಿಯೋನಿ, ತನ್ನ ಅನೇಕ ಸಿನಿಮಾಗಳಲ್ಲಿ ಕಥೆಗಳನ್ನು ಅರ್ಧಕ್ಕೆ ನಿಲ್ಲಿಸುವ ಸಂಪ್ರದಾಯವನ್ನು ಬೆಳೆಸಿಕೊಂಡಿದ್ದ. ಮುಂದೆ ಏನಾಗುವುದು ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ಏನಾಗುತ್ತಿದೆ ಎಂಬುದನ್ನು ಮಾತ್ರ ಒಳಹೊಕ್ಕಿ ನೋಡುತ್ತಾನೆ. ಹೀಗಾಗಿ ಪುರಾಣದಲ್ಲಿ ‘ಜಗನ್ಮಿಥ್ಯೆಯಂತೆ” ಸಿನಿಮಾಗಳ ಕಥೆಯನ್ನು ನಿರೂಪಿಸುತ್ತಾ ಹೋಗುತ್ತಾನೆ.

ಮೈಕಲ್ಯಾಂಜಲೋ ಆಂಟೋನಿಯೋನಿಗೆ ಸಿನಿಮಾ ಸಂವಿಧಾನದಲ್ಲಿ ಅದ್ಭುತವಾದ ಹಿಡಿತವಿದೆ. ಈತ ಕಥೆಯ ಆಶಯ ಮತ್ತು ಆತ್ಮದಿಂದ ಸಿನಿಮಾ ಸಂವಿಧಾನವನ್ನು ರೂಪಿಸುತ್ತಾನೆ. ನಾವು ಈ ಸಂವಿಧಾನದ ಬಗ್ಗೆ ಯೋಚಿಸದೆ ಸಿನಿಮಾ ನೋಡಿದರೆ, ಒಂದು ಪಾರ್ಶ್ವನೋಟ ಮಾತ್ರ ಅರ್ಥವಾಗಿರುತ್ತದೆ ಅಥವಾ ಸಿನಿಮಾದ ಕಥೆಯನ್ನು ಮಾತ್ರ ಗ್ರಹಿಸಿರುತ್ತೇವೆ. ಆದರೆ ಆಂಟೋನಿಯೋನಿಯನ ಉದ್ದೇಶವನ್ನು ನಾವು ತಿಳಿದುಕೊಂಡಿರುವುದಿಲ್ಲ.

ಬ್ಲೋ-ಅಪ್ ಸಿನಿಮಾದಲ್ಲಿ ನಿರ್ದೇಶಕ, ಎರಡು ತರಹದ ಪ್ರಪಂಚವನ್ನು ತೋರಿಸುತ್ತಾನೆ. ಒಂದು ಫ್ಯಾಷನ್ ಲುಕ್ ಪ್ರಪಂಚ. ಅಲ್ಲಿ ಪರಿಣಾಮಕಾರಿಯಾದ ವಸ್ತುಗಳು, ಕನ್ನಡಿಗಳಿರುತ್ತವೆ. ಅದು ತಳುಕಿನ ಪ್ರಪಂಚವಾದ್ದರಿಂದ ಬರುವ ಪಾತ್ರಗಳೂ ಕೂಡ ಅದೇ ಮಾದರಿಯಲ್ಲಿರುತ್ತದೆ. ಇಲ್ಲಿನ ಬಹುತೇಕ ದೃಶ್ಯಗಳನ್ನು ಲಾಂಗ್ ಶಾಟ್ ನಲ್ಲೇ ಚಿತ್ರೀಕರಿಸಿರುವುದು ವಿಶೇಷತೆ. ಕೆಲವು ದೃಶ್ಯಗಳನ್ನು ಒಂದೇ ಶಾಟ್ ನಲ್ಲಿ ತೆಗೆದು ಆಂಟೋನಿಯೋನಿಯ ಸೃಜನಾತ್ಮಕತೆ ತೋರಿಸಿದ್ದಾರೆ. ಎಲ್ಲೂ ಕ್ಲೋಸ್ ಅಪ್ ದೃಶ್ಯಗಳಿಲ್ಲ. ಭಾವನಾತ್ಮಕತೆಯಿಂದ ಕಥೆಯನ್ನು ಕಟ್ಟದೇ, ಪ್ರೇಕ್ಷಕರೇ ಸಿನಿಮಾವನ್ನು ಅರ್ಥೈಸಿಕೊಳ್ಳಬೇಕೆಂಬುದು ಇವನ ಉದ್ದೇಶ.

ಆಂಟೋನಿಯೋನಿಯ ಎರಡನೇಯ ಬಹಳ ಮುಖ್ಯ ಗುಣವೆಂದರೇ, ಸಾಮಾಜಿಕ ವಾಸ್ತವತೆಯನ್ನು ಬಿಟ್ಟು, ಮನಸ್ಸಿನ ವ್ಯಾಪಾರದ ಬಗ್ಗೆ ಹೆಚ್ಚು ಗಮನಕೊಡುತ್ತಾನೆ. ಅಂದರೆ ಮನುಷ್ಯನ ಮನಸ್ಸಿನ ವ್ಯಾಪಾರಗಳನ್ನು ಬಾಹ್ಯೀಕರಿಸುವುದು. ಅಲ್ಲದೇ ಇದನ್ನು ಹೊರಗೆಳೆಯುವುದಕ್ಕೆ ದೈಹಿಕವಾಗಿ ಶ್ರಮಪಡುವುದು. ಅದರ ಜೊತೆಗೆ ತಿರುಗಾಟ ನಡೆಸುವುದು. ಇಂತಹ ದೃಶ್ಯಗಳನ್ನು ನೋಡಿದ ಪ್ರೇಕ್ಷಕನಿಗೆ ಉದ್ದೇಶವಿಲ್ಲದೆ ತಿರುಗಾಡುತ್ತಿದ್ದಾನೆ ಎಂಬ ಭಾವನೆ ಮೂಡಬಹುದು. ಆದರೆ ಪಾತ್ರಗಳಿಗೆ ಇದು ಬಹಳ ಮುಖ್ಯ. ಏಕೆಂದರೆ ತಿರುಗಾಟದಲ್ಲಿ ತಮ್ಮ ತೊಳಲಾಟವನ್ನು ಅನುಭವಿಸುತ್ತಿರುತ್ತಾರೆ. ಹಾಗಾಗಿ ಆಂಟೋನಿಯೋನಿಯನ ಎಲ್ಲಾ ಸಿನಿಮಾಗಳಲ್ಲೂ ತಿರುಗಾಟ ಎನ್ನುವುದು ಬಹಳ ಮುಖ್ಯ ಅಂಶ.

ಈ ಫ್ಯಾಷನ್ ಫೋಟೋಗ್ರಫಿಯ ಪ್ರತಿಬಿಂಬವಾಗಿ ಸಿನಿಮಾದಲ್ಲಿ Muted Warm ಬಣ್ಣಗಳನ್ನೇ ಬಳಸಲಾಗಿದೆ. ಸಿನಿಮಾ ನಿರ್ಮಾಣಕ್ಕಾಗಿಯೇ ಉದ್ಯಾನವನಕ್ಕೆ ಹಸಿರು ಬಣ್ಣವನ್ನು ಬಳಿಯಲಾಗಿತ್ತು. ಭೂಮಿಯ ಮೇಲೆ ಚಿತ್ತಾರ ಮೂಡಿಸುವ ಕ್ರಮ ಆರಂಭವಾಗಿದ್ದೇ ಆಂಟೋನಿಯೋನಿಯಿಂದ. ತನಗೆ ಒಪ್ಪಿಗೆಯಾಗುವ ಬಣ್ಣಗಳನ್ನು ತಂದು ಪೇಂಟ್ ಮಾಡಿಸುತ್ತಿದ್ದ. ಚಿತ್ರವನ್ನು ನೋಡಿದ ತಕ್ಷಣ ಇದು ನಿಜವಾದ ಹಸಿರುಳ್ಳ ಉದ್ಯಾನವನ ಎಂದು ಪ್ರೇಕ್ಷಕರಲ್ಲಿ ಭಾವ ಸೃಷ್ಟಿಸುತ್ತಾನೆ.

ಆಂಟೋನಿಯೋನಿಯ ಸ್ವಾರಸ್ಯವಾದ ಸಂಗತಿ ಎಂದರೆ, ಈತನ ಹೆಚ್ಚಿನ ಸಿನಿಮಾಗಳು ತಯಾರಾಗುವುದು ನಗರ ಪ್ರದೇಶಗಳಲ್ಲಿ. ಮೂಲಭೂತವಾಗಿ ಈತ Architecture ವಿದ್ಯಾರ್ಥಿ. ಆದ್ದರಿಂದಲೇ Architecture ಮತ್ತು Paintings ಬಗ್ಗೆ ಬಹಳ ಹಿಡಿತವಿತ್ತು. ಸಿನಿಮಾದಲ್ಲಿ ಈತನಂತೆ ಕಲಾತ್ಮಕತೆಯನ್ನು ತಂದವರು ಮತ್ತೊಬ್ಬರಿಲ್ಲ. ದೊಡ್ಡ ಕಟ್ಟಡ, ಸಣ್ಣಮನೆ, ಕಿಟಕಿಗಳಲ್ಲಿ ಸೃಜನಾತ್ಮಕ ಕಲೆಯನ್ನು ಸೃಷ್ಟಿಸಿರುವುದು ಇವನ ಹೆಗ್ಗಳಿಕೆ. ಒಂದು ರೀತಿಯಲ್ಲಿ ಮನಸ್ಸಿನ ಎಲ್ಲಾ ತುಮುಲಗಳಿಗೆ, ಈ Architecture ಅನ್ನು ಒಂದು ಸಂವಾಧಿಯಾಗಿ ಚಿತ್ರದಲ್ಲಿ ಬಳಸಿದ್ದಾನೆ.

ಮತ್ತೊಂದು ಆಕರ್ಷಕ ವಿಚಾರ ಎಂದರೆ, Use of Negative Space. ಫ್ಯಾಷನ್ ಲುಕ್ ಫೋಟೋಗ್ರಫಿ ದೃಶ್ಯಗಳಲ್ಲಿ ಈ ಅಂಶವನ್ನು ಹೆಚ್ಚಾಗಿ ಬಳಸಲಾಗಿದೆ. ಈ Negative Space ಎಂದರೆ, ವ್ಯಕ್ತಿ ಮತ್ತು ಪಾತ್ರವೇ ಪ್ರಮುಖ ಎನ್ನುವಂತೆ ತೋರಿಸುವುದು. ಯಾವುದು ಪಾತ್ರವಲ್ಲವೋ ಅದನ್ನು ಅಮುಖ್ಯ ಎಂದು ನಿರ್ಧರಿಸುತ್ತೇವೆ. ಆಂಟೋನಿಯೋನಿಗೆ Negative Space ಬಹಳ ಮುಖ್ಯ. ಅಮುಖ್ಯವನ್ನೇ ಮುಖ್ಯವನ್ನಾಗಿಸಿ ಸಿನಿಮಾ ಕಟ್ಟುತ್ತಾನೆ.

ಈ ಸಿನಿಮಾದ ಸಂಭಾಷಣೆ ವಿಶಿಷ್ಟವಾಗಿದೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಒಂದು ಪಾತ್ರಕ್ಕೆ ಪೂರಕವಾಗಿ ಮತ್ತೊಬ್ಬ ಮಾತನಾಡುತ್ತಾನೆ. ಅದಕ್ಕೆ ಸಹಜವಾದ ಅಂತ್ಯವನ್ನು ಕೊಡುತ್ತೇವೆ. ಆದರೆ ಆಂಟೋನಿಯೋನಿ ಕ್ರಮ ಸ್ವಲ್ಪ ವಿಭಿನ್ನ. To the Point ಮತ್ತು abrupt ಮಾತುಗಳು ಅಂದರೇ ಎಷ್ಟು ಬೇಕೋ ಅಷ್ಟೇ ಮಾತನಾಡುವುದು. ಈ ಕ್ರಮದಿಂದ ದುರಹಂಕಾರ ಹಾಗೂ ಅಸಹನೆ ಪ್ರಾಧನ್ಯತೆಗೆ ಬರುವ ಹಾಗೆ ಮಾಡುತ್ತಾನೆ. ಈ ಸಿನಿಮಾದಲ್ಲಿ ಬರುವ ಫೋಟೋಗ್ರಾಫರ್ ಜೀವನಕ್ರಮವೂ ಇದೇ ರೀತಿ ಇರುವುದು.

ಬ್ಲೋ-ಅಪ್ ಎನ್ನುವುದು ಫೋಟೋಗ್ರಫಿಯ ಒಂದು ಭಾಷೆ. ಅಂದರೆ ಸಣ್ಣ ಚಿತ್ರವನ್ನು ದೊಡ್ಡದಾಗಿಸಿದರೆ ಅದನ್ನು ಬ್ಲೋ-ಅಪ್ ಎನ್ನುತ್ತೇವೆ. ಇವತ್ತಿನ ಜೀವನ ಕ್ರಮ ಬ್ಲೋ-ಅಪ್ ಆಗಿದೆಯೇ? ಇದು ಸಹಜವೇ? ಅಥವಾ ಅಸಹಜವೇ? ಎಂಬ ಪ್ರಶ್ನೆ ಎದುರಾದಂತೆ, ಸಿನಿಮಾದಲ್ಲಿದ್ದ ಹೆಣ ಸಹಜವೇ ಅಥವಾ ಅಸಹಜವೇ? ಟೆನಿಸ್ ಆಟ ಸಹಜವೇ ಅಥವಾ ಅಸಹಜವೇ? ನಮ್ಮ ಬದುಕೇ ಸಹಜವೇ ಅಥವಾ ಅಸಹಜವೇ? ಎಂಬ ಪ್ರಶ್ನೆಗಳನ್ನು ಆಂಟೋನಿಯೋನಿ ಈ ಸಿನಿಮಾದಲ್ಲಿ ಪರಿಣಾಮಕಾರಿಯಾಗಿ ಎತ್ತಿದ್ದಾನೆ.

ಬ್ಲೋ-ಅಪ್ ಸಿನಿಮಾ, ಸಂವಿಧಾನ ಹಾಗೂ ನೋಟದ ದೃಷ್ಟಿಯಿಂದ ಮಹತ್ವವಾದ ಸಿನಿಮಾ ಎಂದು ಜಗತ್ತು ಪರಿಗಣಿಸಿದೆ. ಆಂಟೋನಿಯೋನಿ, “ತಾನು ಮಾರ್ಕ್ಸಿಸ್ಟ್” ಎಂದು ಹೇಳಿಕೊಳ್ಳುತ್ತಾನೆ. ಆದರೆ ಮಾರ್ಕ್ಸಿಸ್ಟ್ ಮತ್ತು ಸೋಷಿಯಲಿಸ್ಟ್ ಸಿದ್ದಾಂತಗಳಿಗೆ ಸಿಕ್ಕಿಕೊಳ್ಳದೆ, ಜಗತ್ತಿನ ಆಗು ಹೋಗುಗಳನ್ನು ತಾತ್ವಿಕವಾಗಿ ನೋಡುವ ಕಲೆಗಾರಿಕೆ ಈತನಿಗಿತ್ತು. ಈ ಕಾರಣಕ್ಕಾಗಿ ನಾವು ಆಂಟೋನಿಯೋನಿಗೆ ಕೃತಜ್ಞರಾಗಿರಬೇಕು.

ಗಿರೀಶ್ ಕಾಸರವಳ್ಳಿ

0 Comments

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more