“An Autumn Afternoon” (1962) – ಜಪಾನ್ ದೇಶದ ಈ ಸಿನಿಮಾವನ್ನು ನಿರ್ದೇಶಿಸಿದವರು ಯಸಿಜಿರೋ ಓಝೂ. ಇದು ಅವರ ಕೊನೆಯ ಚಿತ್ರ. ಜಗತ್ತಿನ ಇತರೇ ಖ್ಯಾತ ನಿರ್ದೇಶಕರ ಬಳಿ ನಿಮಗೆ ಸ್ಪೂರ್ತಿ ಯಾರು ಅಥವಾ ನಿಮ್ಮ ನೆಚ್ಚಿನ ನಿರ್ದೇಶಕರಾರು ಎಂಬ ಪ್ರಶ್ನೆ ಕೇಳಿದರೆ ಅನೇಕರು ಯಸಿಜಿರೋ ಓಝೂ ಹೆಸರನ್ನು ಹೇಳುತ್ತಾರೆ. ಆ ಕಾಲದಲ್ಲಿ ಅಕಿರಾ ಕುರೋಸಾವಾ, ಕೆಂಜಿ ಮಿಸೋಗುಚಿ, ಯಸಿಜಿರೋ ಓಝೂ ಜನಪ್ರಿಯ ತ್ರಿವಳಿ ನಿರ್ದೇಶಕರೆಂದೇ ಪ್ರಸಿದ್ದಿ ಪಡೆದಿದ್ದರು.
ಯಸಿಜಿರೋ ಓಝೂ ಅವರಲ್ಲಿರುವ ಶಾಂತ ಬಿಂಬನದ ರೂಪವೇ ಇತರರು ಅವರನ್ನು ಬಹಳ ಆತ್ಮೀಯವಾಗಿ ಕಾಣಲು ಕಾರಣವಾಗಿತ್ತು. ಮನಸ್ಸಿಗೆ ಮುದ ಕೊಡುವ ರೀತಿಯಲ್ಲಿ ಅವರು ತಮ್ಮ ಚಿತ್ರವನ್ನು ಚಿತ್ರಣ ಮಾಡುತ್ತಿದ್ದರು. ಅವರು ಸಿನಿಮಾ ಕಟ್ಟುವ ಕ್ರಮವೂ ಕೂಡ ಔಪಚಾರಿಕವಾಗಿತ್ತು. ಪ್ರೇಕ್ಷಕರಿಗೆ ಚಿತ್ರದಲ್ಲಿ ಮುಂದೇನಾಗುವುದು ಎಂಬ ಚಿಂತೆ ಕಾಡದೆ, ಆ ಕ್ಷಣದಲ್ಲಿ ಎನಾಗಲಿದೆ ಎಂಬುದರ ಕೂತೂಹಲವೇ ಹೆಚ್ಚಾಗಿರುತಿತ್ತು.
ಓಝೂ ಅವರ ಸಿನಿಮಾದಲ್ಲಿ ಕಂಡುಬರುವ ಪ್ರಮುಖ ಅಂಶ ಎಂದರೇ, ಮನುಷ್ಯನ ಕೆಟ್ಟ ಗುಣವನ್ನು ತೋರ್ಪಡಿಸಿದೆ, ಸಹಜವಾಗಿರುವ ಪ್ರವೃತ್ತಿಯನ್ನು ಮಾತ್ರ ದಾಖಲಿಸುತ್ತಾರೆ. ಮತ್ತೊಂದು ಸಿನಿಮಾದಲ್ಲಿ ನಾಟಕೀಯತೆ ಇರುವುದಿಲ್ಲ. ಮನೆಯಲ್ಲಿ ನಡೆಯುವ ಸಣ್ಣ ಪುಟ್ಟ ವ್ಯವಹಾರಗಳಲ್ಲಿಯೇ ಬಹಳಷ್ಟು ಅರ್ಥಗಳನ್ನು ಹುಡುಕಿ ಅದನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳುತ್ತಾರೆ. ಮಗದೊಂದು ಗಮನಾರ್ಹ ಅಂಶ ಎಂದರೇ ಶಾಂತತೆ. ಬಹುಶಃ ಓಝೂ ಅವರು ನಂಬಿರುವ ಬೌದ್ಧ ಧರ್ಮದ ತತ್ವ “ಮು” ನಿಂದಲೇ ಈ ಶಾಂತತೆಯನ್ನು ಸಿನಿಮಾದಲ್ಲಿ ಪ್ರಖರವಾಗಿ ನಿರೂಪಿಸಿದ್ದಾರೆ. ‘ಮು’ ಅಂದರೇ ಅನುಭವದ ಹಿಂದಿರುವ ಸಮಾಧಾನದ ಚಿತ್ತತೆ. ಹೀಗಾಗಿ ಗ್ರಹಿಕೆಯ ದೃಷ್ಟಿಕೋನದಿಂದ ಸಮಾಧಾನದಿಂದ ಚಿತ್ರಿಸುವ, ನೋಡುವ, ಪರಿಭಾವಿಸುವ ಶಕ್ತಿ ಓಝೂ ಸಿನಿಮಾಗಳಲ್ಲಿರುವುದು. ಆದ್ದರಿಂದ ಇವರ ಸಿನಿಮಾಗಳು ಅತೀಂದ್ರಿಯ ಮಾದರಿಯ ಚಿತ್ರಗಳಿಗೆ ಬಹಳ ಹತ್ತಿರವಾಗಿರುತ್ತದೆ.
“An Autumn Afternoon” ಓಝೂ ಅವರ ಚಿತ್ರಯಾನದಲ್ಲೆ ಬಹಳ ಮುಖ್ಯವಾದ ಸಿನಿಮಾ. ವಿಶೇಷವೆಂದರೇ ಓಝೂ ಸಿನಿಮಾಗಳನ್ನು ಕಥೆಯ ದೃಷ್ಟಿಕೋನದಿಂದ ಯಾರೂ ನೋಡಲು ಹೋಗುವುದಿಲ್ಲ. ಯಾಕೆಂದರೇ ಅವರ ಹೆಚ್ಚಿನ ಸಿನಿಮಾಗಳಲ್ಲಿ ಒಂದೇ ಮಾದರಿಯ ಕಥೆಯಿರುತ್ತದೆ. ಒಂದು ಕುಟುಂಬ, ಅದರಲ್ಲಿ ಮಗಳಿಗೆ ಅಥವಾ ಮಗನಿಗೆ ಮದುವೆಯಾಗಿರುವುದಿಲ್ಲ. ಅಪ್ಪ ಕಷ್ಟಪಡುತ್ತಿರುತ್ತಾನೆ. ಕೊನೆಗೆ ಆತನ ಮಗಳಿಗೆ ಅಥವಾ ಮಗನಿಗೆ ಮದುವೆಯಾಗುತ್ತದೆ. ಇದರ ಸುತ್ತವೇ ಓಝೂ ಸಿನಿಮಾಗಳು ಸುತ್ತುತ್ತಿರುತ್ತವೆ. “An Autumn Afternoon” ಕೂಡ ಇಂತಹದೇ ಕಥೆಯಿರುವ ಚಿತ್ರ. ಬೆಳಗಿನ ಜಾವದಲ್ಲಿ ಕವಿದಿರುವ ಮಂಜು, ಬಿಸಿಲು ಬಂದ ಹಾಗೆ ಅಥವಾ ಮಧ್ಯಾಹ್ನದ ಹೊತ್ತಲ್ಲಿ ನಿಧಾನವಾಗಿ ಕರಗುತ್ತಾ ತಿಳಿಯಾಗುತ್ತಿರುತ್ತದೆ. ನಂತರವಷ್ಟೇ ಎದುರಿನಲ್ಲಿರುವುದು ಸ್ಪಷ್ಟವಾಗಿ ಕಾಣುವುದು. ಈ ಚಿತ್ರದಲ್ಲಿರುವುದು ಕಥೆ ಕೂಡ ಇದೆ ಮಾದರಿಯದ್ದು. ಹಿರಾಯಮ ಮತ್ತು ಆತನ ಕುಟುಂಬದ ಕಥೆ.
ಹಿರಾಯಮ 1942-43ರಲ್ಲಿ ಜಪಾನ್ ನೌಕಪಡೆಯ ಅಧಿಕಾರಿಯಾಗಿದ್ದ. ಯುದ್ದವೆಲ್ಲಾ ಮುಗಿದ ನಂತರ 1963ರಲ್ಲಿ ಒಂದು ಕಂಪೆನಿಯೊಂದರಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುತ್ತಾನೆ. ಈತನಿಗೆ ತನ್ನ ಮಗಳಿಗೆ ಮದುವೆ ಮಾಡಬೇಕೆಂಬ ಯೋಚನೆಯೇ ಇರುವುದಿಲ್ಲ. ಯಾಕೆಂದರೇ ಮನೆಯನ್ನು ಯಾರಾದರೂ ನೋಡಿಕೊಳ್ಳಲೇಬೇಕೆಂಬ ಭಾವನೆ ಬೇರೂರಿತ್ತು. ವಯಸ್ಸಾದ ತಂದೆ-ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಆ ಮನೆಯ ಮಕ್ಕಳದ್ದು ಎಂಬ ನಿಯಮ ಭಾರತದಲ್ಲಿರುವಂತೆ ಜಪಾನ್ ನಲ್ಲಿ ಕೂಡ ಇತ್ತು. ಹೀಗಾಗಿ ಹಿರಾಯಮನ ಹಿರಿಯ ಮಗ ಮತ್ತು ಸೊಸೆ ಬೇರೆ ಮನೆ ಮಾಡಿದ್ದರಿಂದ ಅವಿವಾಹಿತಳಾಗಿದ್ದ ಮಗಳು ಮತ್ತು ಮತ್ತೊಬ್ಬ ಕಿರಿಯ ಮಗ ತಂದೆಯನ್ನು ಸಲಹುವ ಜವಾಬ್ದಾರಿ ಹೊತ್ತಿರುತ್ತಾರೆ.
ಹಿರಾಯಮನ ಸ್ನೇಹಿತರು ಮಗಳಿಗೆ ಬೇಗ ಮದುವೆ ಮಾಡುವಂತೆ ಒತ್ತಾಯಿಸುತ್ತಾ ಇರುತ್ತಾರೆ. ಇದೇ ರೀತಿ ಇದ್ದರೇ ನಿನ್ನ ಮಗಳು ಅವಿವಾಹಿತಳಾಗಿಯೇ ಉಳಿಯುತ್ತಾಳೆ. ನೀನು ಕಾಲವಾದ ಮೇಲೆ ಮಗಳು ಅನಾಥೆಯಾಗುವುದು ನಿಶ್ಷಿತ ಎಂದು ಬುದ್ದಿವಾದ ಹೇಳುತ್ತಿರುತ್ತಾರೆ. ಆದರೇ ಹಿರಾಯಮನಿಗೆ ಈ ಮಾತೆಲ್ಲಾ ಅರ್ಥವಾಗುತ್ತಿರಲಿಲ್ಲ. ಒಂದು ದಿನ ತನಗೆ ಚೈನೀಸ್ ಸಾಹಿತ್ಯವನ್ನು ಹೇಳಿಕೊಡುತ್ತಿದ್ದ ಗುರುಗಳನ್ನು ಮತ್ತು ಕೆಲವು ಸ್ನೇಹಿರನ್ನು ಪಾರ್ಟಿಯೊಂದರಲ್ಲಿ ಭೇಟಿ ಮಾಡುತ್ತಾನೆ. ಮದ್ಯಸೇವಿಸಿದ ನಂತರ ಗುರುಗಳನ್ನು ಹಿರಾಯಮ ಮತ್ತು ಆತನ ಸ್ನೇಹಿತರು ಮನೆಗೆ ಬಿಟ್ಟು ಬರಲು ತೆರಳುತ್ತಾರೆ. ಆ ಸಮಯದಲ್ಲಿ ಗುರುಗಳು ಆರ್ಥಿಕವಾಗಿ ಬಹಳ ಕಷ್ಟದಲ್ಲಿರುವುದು ಹಾಗೆಯೇ ಮಗಳ ವಿವಾಹಕ್ಕೂ ಹಣ ಹೊಂದಿಸಲಾಗದೇ ಇರುವುದು ಗಮನಕ್ಕೆ ಬರುತ್ತದೆ. ಇದನ್ನು ಕಂಡು ಪ್ರತಿಯೊಬ್ಬರೂ ದುಃಖಿತರಾಗುತ್ತಾರೆ. ನಿನ್ನ ಮಗಳಿಗೂ ಇದೇ ಸ್ಥಿತಿ ಬರುವುದು ಎಂದು ಹಿರಾಯಮನಿಗೆ ಸ್ನೇಹಿತರು ಎಚ್ಚರಿಕೆ ನೀಡುತ್ತಾರೆ. ಕೊನೆಗೆ ಹಿರಾಯಮ ಮಗಳಿಗೆ ಮದುವೆ ಮಾಡುವ ನಿರ್ಧಾರ ತೆಗೆದುಕೊಂಡು ವಿವಾಹವನ್ನು ನೆರವೇರಿಸುತ್ತಾನೆ. ಮದುವೆಯೆಲ್ಲಾ ಮುಗಿದ ನಂತರ ಹಿರಾಯಾಮಾ ತಾನು ಪುನಃ ಒಂಟಿ ಎಂಬ ಮಾತನ್ನು ಹೇಳುತ್ತಾನೆ. ಅಲ್ಲಿಗೆ ಸಿನಿಮಾದ ಮುಕ್ತಾಯವಾಗುತ್ತದೆ.
ಈ ಒಂಟಿತನ ಎಂಬುದು ಆ ಕಾಲದ ಜಪಾನಿನ ಕೌಟುಂಬಿಕ ರಚನೆಯನ್ನು ವಿವರಿಸುತ್ತಾ ಹೋಗುತ್ತದೆ. ಈ ಒಂಟಿತನಕ್ಕೂ ವಿಶೇಷ ಧ್ವನಿಯಿದೆ ಎಂಬುದನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಲಾಗಿತ್ತು. ಮು ಅಥವಾ ಶಾಂತತೆಯನ್ನು ಓಝೂ ತನ್ನ ಸಿನಿಮಾದ ತತ್ವವಾಗಿ ಹೆಚ್ಚಾಗಿ ಬಳಸಿರುವುದು ಗಮನಕ್ಕೆ ಬರುತ್ತದೆ. ಬಹುಶಃ ಇಡೀ ಜಗತ್ತಿನಲ್ಲಿ ಓಝೂ, ಪಾತ್ರ ಚಿತ್ರಣಕ್ಕೆ ನೀಡಿದ ಮಹತ್ವವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಪ್ರೇಕ್ಷಕನಿಗೆ ಚಿತ್ರದಲ್ಲಿ ಅಭಿನಯಿಸುತ್ತಿರುವವರನ್ನು ತಾನೆಲ್ಲೋ ನೋಡಿದ್ದೇನೆ ಎಂದು ಭಾಸವಾಗುವಷ್ಟರ ಮಟ್ಟಿಗೆ ಓಝೂ ಕತೆಯನ್ನು ಕಟ್ಟಿರುತ್ತಾರೆ. ಈ ಕಾರಣಕ್ಕಾಗಿಯೇ ಅನೇಕ ನಿರ್ದೇಶಕರು ಓಝೂವನ್ನು ಮೆಚ್ಚಿಕೊಳ್ಳುತ್ತಾರೆ.
ಪ್ರತಿಯೊಬ್ಬ ನಿರ್ದೆಶಕರು ಪಾತ್ರ ಸೃಷ್ಟಿ ಮಾಡುವಾಗ ಪಾತ್ರದ ಹಿಂದೆ ಕೆಲವೊಂದು ಮನಸ್ಥಿತಿಯನ್ನು ಸೃಷ್ಟಿ ಮಾಡಿರುತ್ತಾರೆ. ಇದು ಒಂದು ರೀತಿಯಲ್ಲಿ ನಿಗೂಢವಾಗಿರುತ್ತದೆ. ಆದರೆ ಓಝೂವಿನ ಸಿನಿಮಾ ಚಿತ್ರಣದಲ್ಲಿ ಈ ಅಂಶಗಳು ಕಾಣುವುದಿಲ್ಲ. ಈತನ ಸಿನಿಮಾ ಭಾಷೆ ಬಹಳ ಸರಳವಾಗಿರುತ್ತದೆ. ಅದ್ದರಿಂದ ಸಿನಿಮಾದಲ್ಲಿ ಧ್ಯಾನಸ್ಥ ಗುಣವನ್ನು ಅಥವಾ ಮೆಡಿಟೇಟಿವ್ ಕ್ವಾಲಿಟಿಯನ್ನು ಹೆಚ್ಚಾಗಿ ಕಾಣಬಹುದು. ಉದಾಹರಣೆಗೆ: ಈತನ ಸಿನಿಮಾದಲ್ಲಿ ಯಾವುದೇ ರೋಚಕವಾದಂತಹ, ಚಮತ್ಕಾರವಾದಂತಹ ಕ್ಯಾಮರಾ ಕೈಚಳಕವಿರುವುದಿಲ್ಲ. ಸಂಕಲನವೂ ಸಾಮಾನ್ಯವಾಗಿರುವುದು. ಎಲ್ಲವೂ ಪೂರ್ವನಿರ್ಧರಿತಾವಗಿರುತ್ತದೆ. ಓಝೂವಿನ ಒಂದು ಸಿನಿಮಾವನ್ನು ಗಮನಿಸಿದರೇ ಮತ್ತೆಲ್ಲವೂ ಅದೇ ತೆರನಾಗಿ ಕಾಣುತ್ತದೆ. ಆದರೆ ಕೊನೆ ಸಿನಿಮಾವನ್ನು ಓಝೂ ಕಲರ್ ನಲ್ಲಿ ಚಿತ್ರಿಸಿದ್ದ. ಚಿತ್ರದಲ್ಲಿ ಕಂಡುಬರುವ ಕಲರಿನ ಗುಣಮಟ್ಟವನ್ನು ಅಂದಿನ ಕಾಲದಲ್ಲಿ ಯಾವ ನಿರ್ದೆಶಕನಿಗೂ ತರಲು ಸಾಧ್ಯವಾಗಿರಲಿಲ್ಲ.
“An Autumn Afternoon” ಚಿತ್ರದಲ್ಲಿ ಕಲರಿಂಗ್ ಬಹುಮುಖ್ಯ ಪಾತ್ರವಹಿಸಿತ್ತು. ಕಲರ್ ಕಂಪೋಸಿಂಗ್, ಕಲರ್ ಬ್ಯಾಲೆನ್ಸಿಂಗ್ ಮುಂತಾದವಕ್ಕೆಲ್ಲಾ ಓಝೂ ಅಲಂಕಾರ ಮಾತ್ರವಲ್ಲದೆ ಧ್ವನಿಗಳನ್ನು ಕೂಡ ನೀಡಿದ್ದರು. ಓಝೂವಿನ Mise-en-scène ಅಥವಾ ಸಿನಿಮಾ ಸಂರಚನೆ ಬಹಳ ಆಳವಾಗಿತ್ತು. ಅದರಿಂದಲೇ ಸಿನಿಮಾದ ಪ್ರತಿ ದೃಶ್ಯದಲ್ಲೂ ವಿಶೇಷವಾದ ಅರ್ಥ ಕಾಣಿಸುತಿತ್ತು.
ಸಿನಿಮಾದಲ್ಲಿ ಅತ್ಯಂತ ಹೆಚ್ಚು ಮಹತ್ವವಿರುವ ಬಾರ್ ದೃಶ್ಯವೊಂದು ಕಾಣಿಸಿಕೊಳ್ಳುತ್ತದೆ. ಹಿರಾಯಮ ಬಾರ್ ಗೆ ಹೋದಾಗ ಆತನ ಹಳೆಯ ಸ್ನೇಹಿತನೊಬ್ಬ ಸಿಗುತ್ತಾನೆ. ಆತ ಕೂಡ ನೌಕಪಡೆಯಲ್ಲಿ ಕಾರ್ಯನಿರ್ವಹಿಸಿ ಈಗ ಕಾರು ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಾ ಇದ್ದ. ಇಬ್ಬರು ಕುಡಿಯಲು ಆರಂಭಿಸಿದ ಮೇಲೆ ಹಿರಾಯಮನಿಗೆ ಬಾರ್ ಓನರ್ ಅವನ ಹೆಂಡತಿ ತರ ಭಾಸವಾಯ್ತು, ಹೀಗಾಗಿ ಮತ್ತೆ ಮತ್ತೆ ಆ ಬಾರ್ ಗೆ ಮದ್ಯ ಸೇವಿಸಲು ಬರುತ್ತಿರುತ್ತಾನೆ. ಆದರೇ ಮೆಕ್ಯಾನಿಕ್ ಗೆ, ತಾನು ಈ ಹಿಂದೆ ನೌಕಾಪಡೆಯಲ್ಲಿದ್ದಾಗ ಸಂಭವಿಸಿದ ಎರಡನೇ ಮಹಾಯುದ್ದದ ಸಂದರ್ಭದ ನೆನಪನ್ನು ತೋಡಿಕೊಳ್ಳೋಕೆ ಈ ಬಾರ್ ಒಂದು ವೇದಿಕೆಯಾಗಿತ್ತು, ಬಾರ್ ಓನರ್ ಕೂಡ 1943ರಲ್ಲಿ ನೌಕಾಪಡೆಯ ಗೀತೆಯೊಂದನ್ನು ಹಾಕಿ ಅವನ ನೆನಪನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿದ್ದಳು.
ಈ ಸಮಯದಲ್ಲಿ ಮೆಕ್ಯಾನಿಕ್ ಆಡುವ ಮಾತೊಂದು ಬಹಳ ಮಾರ್ಮಿಕವಾಗಿರುತ್ತದೆ. ನಾವೇನಾದರೂ ಎರಡನೇ ಮಹಾಯುದ್ದದಲ್ಲಿ ಗೆದ್ದಿದ್ದರೇ ಈ ಜಪಾನೀಸ್ ಸಂಸ್ಕೃತಿ ಉಳಿಯುತ್ತಲೇ ಇರಲಿಲ್ಲ. ನಮ್ಮ ಶುದ್ದತೆಯಲ್ಲಿ ವ್ಯತ್ಯಾಸವಾಗುತ್ತಿತ್ತು. ಅನೇಕ ವಿಷಯದಲ್ಲಿ ಬದಲಾವಣೆಗಳಿಗಿರುತ್ತಿದ್ದವು. ಆದ್ದರಿಂದ ನಾವು ಸೋತಿದ್ದೇ ಒಳ್ಳೆದಾಯ್ತು ಎಂದು ಹೇಳುತ್ತಾನೆ. ಈ ಮಾತಿನಿಂದ ಆ ವಿಶ್ವ ಸಮರ ಜಪಾನ್ ನಲ್ಲಿ, ಯಾವ ತರದ ನೋವನ್ನು ಉಳಿಸಿಹೋಗಿದೆ ಎಂಬುದರ ಅರಿವಾಗುತ್ತದೆ. ಸೋತಿದ್ದು ಒಳ್ಳೆದಾಯ್ತು ಎಂಬ ಮಾತನಾಡಿದ್ದರೂ ಅದರ ಹಿಂದೆ ಬಹಳ ನೋವು ಎದ್ದು ಕಾಣುತಿತ್ತು.
ಜಪಾನ್ ಎಂಬುದು ಬಹಳ ಪ್ಯೂಡಲಿಸ್ಟಿಕ್ ಸೊಸೈಟಿ. ಅಲ್ಲಿನ ರಾಜ ಅಮೇರಿಕಾದ ಮಿಲಿಟರಿ ಪಡೆಗೆ ಶರಣಾದಾಗ ಜನರೆಲ್ಲಾ ಬಿಕ್ಕಿ ಬಿಕ್ಕಿ ಅಳುತ್ತಾರೆ. ಇಂತಹ ನಿಷ್ಠಾವಂತ ಜನರು ಕೇವಲ ಮುಖವಾಡ ಹಾಕಿಕೊಂಡು ಮಾತ್ರ ಸೋತಿದ್ದು ಒಳ್ಳೇದೆ ಆಯ್ತ ಎಂಬುದನ್ನು ಹೇಳಿದ್ದರು. ಹೀಗಾಗಿ ಬಾರ್ ದೃಶ್ಯ, ಅಭಿನಯ, ಮಿಲಿಟರಿ ಬ್ಯಾಂಡ್ ಗಳಿಗೆ ಮಾರ್ಚ್ ಫಾಸ್ಟ್ ಮಾಡುವುದು, ಸಲ್ಯೂಟ್ ಮಾಡುವುದು ಇವೆಲ್ಲವೂ ಚಿತ್ರದಲ್ಲಿ ವ್ಯಂಗ್ಯವಾಗಿ ಎದ್ದು ಕಾಣುತ್ತದೆ.
ಓಝೂವಿನ ಬಹಳ ದೊಡ್ಡ ಗುಣ ಎಂದರೇ stylization ಮತ್ತು minimalism. ಸಾಮಾನ್ಯವಾಗಿ ಭಾರತದಲ್ಲೂ stylization ಅನ್ನು ಬಳಸುತ್ತಾರೆ. ಇದು ಪ್ರೇಕ್ಷಕನನ್ನು ಹತ್ತಿರ ಬರಲು ಬಿಡದೇ ದೂರಕ್ಕೆ ತಳ್ಳುವುದು. ಆದರೇ ಓಝೂವಿನ stylization ಪ್ರೇಕ್ಷಕರನ್ನ ತನ್ನತ್ತ ಸೆಳೆಯುತ್ತದೆ. ಇದನ್ನು ಓಝೂ ಹೇಗೆ ಸಾಧಿಸುತ್ತಾನೆ ಎಂಬುದಕ್ಕೆ ಬಹಳ ಅಧ್ಯಯನ ಅಗತ್ಯ. ಆತ noh ಥಿಯೇಟರ್ ನಿಂದ ಕೆಲವೊಂದು ಅಂಶಗಳನ್ನು ತೆಗೆದುಕೊಂಡು ಸಿನಿಮಾವನ್ನು ರೂಪಿಸುತ್ತಾನೆ. ಸಾಮಾನ್ಯವಾಗಿ ಹಾಲಿವುಡ್ ಮುಂತಾದ ಸಿನಿಮಾ ರಂಗದಲ್ಲಿ ‘ಕಟ್’ ಊಹೆಗೆ ನಿಲುಕಬಾರದು ಎಂಬ ಮಾತನ್ನು ಹೇಳುತ್ತಾರೆ. ಆದರೇ ಓಝೂ ಸಿನಿಮಾದಲ್ಲಿ ಕಟ್ ಯಾವಾಗಾ ಆಗುತ್ತೆ ಎಂಬುದನ್ನು ಊಹಿಸಬಹುದು. ಹೀಗಾಗಿ ಪ್ರೇಕ್ಷಕರ ಗಮನ ತಂತ್ರಜ್ಞಾನದ ಕಡೆಗೆ ಹೋಗದೆ ಕೇವಲ ವಸ್ತುವಿನ ಕಡೆಗೆ ಮತ್ತು ಓಝೂ ಹೇಳುವ ಅಂಶದ ಕಡೆಗೆ ಮಾತ್ರ ಹೋಗುತ್ತದೆ.
ಓಝೂ ಹೆಚ್ಚಾಗಿ ಕಡುನೀಲಿ ಬಣ್ಣಕ್ಕೆ ಸಿನಿಮಾದಲ್ಲಿ ಆದ್ಯತೆ ನೀಡುತ್ತಾನೆ. ಅಪರೂಪಕ್ಕೆ ಅವನ ಬಳಸುವ ಒಂದೊಂದು ಕಲರ್ ಕೂಡ ‘ರಿಚ್’ ಆಗಿ ಕಂಡುಬರುತ್ತದೆ. ಕೆಂಪು-ಹಸಿರು ಮುಂತಾದ ಮುಖಕ್ಕೆ ರಾಚದ ರೀತಿಯಲ್ಲಿ ಕಲರ್ ಆಯ್ಕೆ ಮಾಡಿಕೊಳ್ಳುತ್ತಾನೆ. pillow shots ಕೂಡ “An Autumn Afternoon” ಚಿತ್ರದಲ್ಲಿ ಬಹಳ ಅದ್ಭುತವಾಗಿ ಮೂಡಿಬಂದಿದೆ. ಹೀಗಾಗಿ ಓಝೂವಿನ ಸಾಧನೆ ಪ್ರತಿಯೊಬ್ಬರಿಗೂ ಅಧ್ಯಯನದ ವಸ್ತು ಆಗಿದೆ. Minimalism, formalism, no emotions, Non acting ಮುಂತಾದ ಹಲವು ಅಂಶಗಳು ಓಝೂ ಸಿನಿಮಾದಲ್ಲಿ ಅಡಗಿದ್ದು, ಪ್ರೇಕ್ಷಕರನ್ನು ಬಹಳ ಯೋಚನೆಗೆ ಹಚ್ಚುತ್ತದೆ.
0 Comments