ಬರ ಕೇವಲ ನೈಸರ್ಗಿಕವಾದುದ್ದಲ್ಲ: ಅಕಾಲೇರ್ ಸಂಧಾನೆ

‘ಅಕಾಲೇರ್ ಸಂಧಾನೆ’ ಮೃಣಾಲ್ ಸೇನ್ ನಿರ್ದೇಶಿಸಿದ ಬೆಂಗಾಲಿ ಚಿತ್ರ. ಮೃಣಾಲ್ ಚಿತ್ರ ಜೀವನದಲ್ಲೇ ಬಹಳ ಮಹತ್ವದ ಸಿನಿಮಾ ಮತ್ತು ಭಾರತೀಯ ಸಿನಿಮಾಗಳಲ್ಲೂ ಬಹಳ ಅದ್ಭುತವಾದ ಸಿನಿಮಾವಿದು. ಇವರ ಚಿತ್ರಗಳು ಪ್ರಖರ ಚಿಂತನೆಯುಳ್ಳವು ಮತ್ತು ರಾಜಕೀಯ ಸಿದ್ಧಾಂತಕ್ಕೆ ಬದ್ಧರಾಗಿರುವ Agitprop ಶೈಲಿಯನ್ನ ಒಳಗೊಂಡಿರುತ್ತದೆ.  ಕಲ್ಕತ್ತಾದಲ್ಲಿನ ಮಧ್ಯಮವರ್ಗದ ಜನರ ಜೀವನ ಶೈಲಿಯನ್ನು ಅರಿತುಕೊಳ್ಳುವ ಪ್ರಯತ್ನದ ಫಲವೇ ‘ಅಕಾಲೇರ್ ಸಂಧಾನೆ’. ಮೃಣಾಲ್ ಸೇನ್ ಮಧ್ಯಮವರ್ಗದ ಜನಾಂಗಕ್ಕೆ ಸೇರಿದವರಾಗಿರುತ್ತಾರೆ. ಈ ಚಿತ್ರವೂ ಅವರ ಸುತ್ತಲಿನಲ್ಲಿ ನಡೆಯುವ ಸಂಗತಿಗಳ ಚಿತ್ರಣ ಎಂದೇ ಹೇಳಬಹುದು.

ಅಕಾಲೇರ್ ಸಂಧಾನೆ – In Search of Famine. ಬರದ, ಕ್ಷಾಮದ (1943ರ ಬಂಗಾಳದ ಕ್ಷಾಮ) ಹುಡುಕಾಟವನ್ನು ಒಳಗೊಂಡಿರುವ ಚಿತ್ರ. ಮೃಣಾಲ್ ಸೇನ್ ಅವರ ಚಿತ್ರಯಾನದಲ್ಲಿ ಕಾಣುವಂತಹ Agitprop ಶೈಲಿ ಅಥವಾ ಮಧ್ಯಮವರ್ಗದ ಆತ್ಮಾವಲೋಕನದ ಶೈಲಿ ಇಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ.

1943ರಲ್ಲಿ ಭಾರತದಲ್ಲಿ ಬೆಳೆದ ಎಷ್ಟೋ ಆಹಾರ ಪದಾರ್ಥಗಳನ್ನು, ಚರ್ಚಿಲರು ತಮ್ಮ ಸೈನಿಕರ ಬಳಕೆಗೆಂದು ಇಂಗ್ಲೇಂಡಿಗೆ ಕಳುಹಿಸುತ್ತಾರೆ. ಇದರಿಂದ ಭಾರತದಲ್ಲಿ ಆಹಾರದ ಅಭಾವ ಉಂಟಾಗಿ ಬಹುತೇಕರು ಸಾಯುತ್ತಾರೆ. ಈ ಘಟನೆ ಚರ್ಚಿಲ್  ಗಮನಕ್ಕೆ ಬಂದರೂ. “ಅವರು ಸಾಯಲಿ ಬಿಡಿ. ಹಂದಿಗಳ ಹಾಗೆ ಮಕ್ಕಳನ್ನು ಮಾಡಿಕೊಂಡಿರುತ್ತಾರೆ” ಎಂದು ಖಾರವಾದ ಪ್ರತಿಕ್ರಿಯೆ ನೀಡಿದ.

ಅಕಾಲೇರ್ ಸಂಧಾನೆ ಸಿನಿಮಾದಲ್ಲಿ ಇಂತಹ ಸನ್ನಿವೇಶಗಳನ್ನು ಚಿತ್ರೀಕರಿಸಲು ಒಂದು ಫಿಲ್ಮ್ ಯೂನಿಟ್ ಹಳ್ಳಿಯೊಂದಕ್ಕೆ ಕಾಲಿಡುತ್ತದೆ. ಅಂದರೆ ಸಿನಿಮಾದೊಳಗಿನ ಸಿನಿಮಾ ಎಂಬಂತೆ. ಸಿನಿಮಾ ಮಂದಿ ಅಲ್ಲಿಗೆ ತೆರಳಿದಾಗ ಆ ಊರಿನಲ್ಲಿ ಕೃತಕವಾಗಿ ಬರ ಸೃಷ್ಟಿಯಾಗುವುದು. ಅದು ಸಣ್ಣ ಊರಾಗಿದ್ದರಿಂದ ಅಲ್ಲಿ ಸಿಗುವ ಸಾಬೂನು, ಬೇಳೆ, ಕಾಳು, ಇನ್ನಿತರ ಪದಾರ್ಥಗಳನ್ನು ಸಿನಿಮಾದವರು ಜಾಸ್ತಿ ಬೆಲೆ ನೀಡಿ ಖರೀದಿಸುತ್ತಾರೆ. ಅಂಗಡಿಯವರು ಕೂಡ ಹೆಚ್ಚು ದುಡ್ಡಿನ ಆಸೆಗೆ ಸಾಮಾನುಗಳನ್ನು ಕೇವಲ ಸಿನಿಮಾದವರಿಗೆ ಮಾತ್ರ ಮಾರುತ್ತಿದ್ದರಿಂದ, ಗ್ರಾಮಸ್ಥರಿಗೆ ಯಾವುದೇ ಪದಾರ್ಥಗಳು ದೊರಕುತ್ತಿರಲಿಲ್ಲ. ಬರ ಮಾದರಿಯ ಪರಿಸ್ಥಿತಿಯನ್ನು ಸಿನಿಮಾ ಮಂದಿಯೇ ಸೃಷ್ಟಿ ಮಾಡುತ್ತಾರೆ. ಈ ಚಿತ್ರತಂಡವರು ಅರಮನೆಯಂತಹ ಬಂಗಲೆಯಲ್ಲಿ ಶೂಟಿಂಗ್ ಮಾಡುತ್ತಿರುತ್ತಾರೆ. ಈ ಬಂಗಲೆಯಲ್ಲಿ ಮುದುಕ-ಮುದುಕಿ ಜೋಡಿಯೊಂದು ವಾಸ ಮಾಡುತ್ತಿರುತ್ತಾರೆ. ಈ ಜೋಡಿಗೆ ಮಕ್ಕಳಿದ್ದರೂ ಜೊತೆಯಲ್ಲಿರುವುದಿಲ್ಲ. ಅದ್ದರಿಂದ ಭಾವನಾತ್ಮಕ ಬರವನ್ನು ಅನುಭವಿಸಿ ತಮ್ಮ ಮಕ್ಕಳ ಬರುವಿಕೆಗಾಗಿ ಕಾಯುತ್ತಿರುತ್ತಾರೆ.

ಈ ಸಿನಿಮಾ ಕ್ಷಾಮ ಎಂದರೇನು ಎಂಬುವುದನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತದೆಯೇ ಹೊರತು, ಕಥೆಯ ರೂಪದಲ್ಲಿ ಪ್ರಸ್ತಾಪಿಸುವುದಿಲ್ಲ. ಸಣ್ಣ ಸಣ್ಣ ತುಣುಕಗಳ ಮೂಲಕ ಚಿತ್ರವನ್ನು ಹೆಣೆಯಲಾಗಿದೆ. ಕ್ಷಾಮ ಅಂದರೆ ಯಾವ ರೀತಿಯ ಕ್ಷಾಮ? ಭಾವನಾತ್ಮಕವಾದದ್ದೇ? ಕೃತಕವಾದದ್ದೇ? ಎಂಬುದನ್ನು ತಿಳಿಸುತ್ತದೆ. ಚರ್ಚಿಲ್ ಗೆ ಭಾರತ ಅಮುಖ್ಯವಾಗಿ ಕಂಡ ಹಾಗೆ, ಸಿನಿಮಾ ನಟನಿಗೆ, ಹಳ್ಳಿಯ ಜಗತ್ತು ಬಹಳ ಅಮುಖ್ಯವಾಗಿ ಕಾಣಿಸುತ್ತದೆ.

ಈ ಸಿನಿಮಾದಲ್ಲಿ ಬರುವ ದೃಶ್ಯವೊಂದರಲ್ಲಿ, ಚಿತ್ರತಂಡ ಆ ದಿನದ ಶೂಟಿಂಗ್ ಮುಗಿಸಿ ಕುಳಿತಿದ್ದಾಗ, ನಾಯಕಿ ಪಾತ್ರಧಾರಿಯಾದ ಸ್ಮಿತಾ ಪಾಟೀಲ್ ಒಂದು ಆಟ ಆಡೋಣ ಎಂದು ಹೇಳುತ್ತಾರೆ. ನಂತರ ಫೋಟೋವೊಂದನ್ನು ತೋರಿಸಿ, “ಇದು ಯಾವ ವರ್ಷದಲ್ಲಾದ ಬರದ ಪರಿಸ್ಥಿತಿ“ ಎಂದು ಕೇಳುತ್ತಾರೆ. ಪ್ರತಿಯೊಬ್ಬರೂ 1943ರ ಬರ ಎಂದು ಉತ್ತರಿಸುತ್ತಾರೆ.  ಆದರೆ ಅದು 1953 ಬರದ ಪೋಟೋ ಆಗಿರುತ್ತದೆ. ನಂತರ ಸ್ಮಿತಾ ಮತ್ತೊಂದು ಫೋಟೊ ತೋರಿಸಿ, ಇದು ಯಾವ ಸಂದರ್ಭದ್ದೂ ಎಂದು ಕೇಳಿದಾಗ, 1943 ಎಂದು ಹೇಳುತ್ತಾರೆ. ತದನಂತರ ಮಗದೊಂದು ಪೋಟೋದ ಬಗ್ಗೆ ವಿಚಾರಿಸಿದಾಗ ಎಲ್ಲರೂ ಗೊತ್ತಿಲ್ಲ ತಿಳಿಸುತ್ತಾರೆ. ಆಗ ಇದು 1971ರ ಬರದ ಪರಿಸ್ಥಿಯಾಗಿತ್ತು ಎಂದು ಸ್ಮಿತಾ.ಹೇಳುತ್ತಾರೆ.

ಇಲ್ಲಿ ಬರ ಎನ್ನುವುದು ದೇಶದಲ್ಲಿ ನಿರಂತರವಾಗಿ ಆಗುತ್ತಿರುತ್ತದೆ. ಎಲ್ಲದ್ದಕ್ಕೂ ಚರ್ಚಿಲ್ ಕಾರಣರಾಗಿರುವುದಿಲ್ಲ. ನಮ್ಮ ರಾಜಕೀಯ ನೇತಾರರ ದೂರದೃಷ್ಟಿ ಇಲ್ಲದಿರುವುದು ಕೂಡ ಕಾರಣವಾಗಿರುತ್ತದೆ ಎಂಬ ಅಂಶವನ್ನು ಸಿನಿಮಾ ಒತ್ತಿ ಹೇಳುತ್ತದೆ. ಸ್ಮಿತಾ ಕೊನೆಯಲ್ಲಿ ಒಂದು ಖಾಲಿ ಫ್ರೇಮ್ ಬಗ್ಗೆ ವಿಚಾರಿಸಿದಾಗ “ಇದು ಇವತ್ತಿನ ಭಾರತ” ಎನ್ನುತ್ತಾರೆ. ಅದಕ್ಕೆ ಪ್ರತಿನಿತ್ಯವಾಗುವ “ಪವರ್ ಕಟ್” ವಿದ್ಯಾಮಾನವನ್ನು ಸಮರ್ಥನೆಯಾಗಿ ನೀಡುತ್ತಾರೆ. ಇಂತಹ ರಾಜಕೀಯ ಸ್ಥಿತಿಯ ವಿಶ್ಲೇಷಣೆಯನ್ನು ಸಿನಿಮಾದಲ್ಲಿ ಮೃಣಾಲ್ ಸೇನ್ ಸಣ್ಣ ಲಘುದಾಟಿಯಲ್ಲಿ ಹೇಳಿ ಬಿಡುತ್ತಾರೆ. ಇದೇ ರೀತಿಯ ಅನೇಕ ದೃಶ್ಯಗಳು ಈ ಸಿನಿಮಾದಲ್ಲಿದೆ. ಮೇಲ್ನೋಟಕ್ಕೆ ಇವು ಚಿಕ್ಕದಾದ ಮತ್ತು ನಗು ತರಿಸುವ ವಿಚಾರದಂತೆ ಕಂಡುಬಂದರೂ ಅದರ ಹಿಂದೆ ವ್ಯಾಪಕವಾದ ಚರ್ಚೆ, ಚಿಂತನೆ ಮತ್ತು ವ್ಯಾಖ್ಯಾನ ಇರುವುದು ಗಮನಕ್ಕೆ ಬರುತ್ತದೆ.  

ಈ ಚಿತ್ರದಲ್ಲಿ ನಿರ್ದೇಶಕನ ಪಾತ್ರವನ್ನು ಧೃತಿಮಾನ್ ಚಟ್ಟರ್ಜಿ ಅಭಿನಯಿಸಿದ್ದಾರೆ. ಇವರು ಕರೆತರುವ ನಟಿಗೆ ಹಳ್ಳಿಯ ವಸ್ತುಸ್ಥಿತಿಗೆ ಹೊಂದಿಕೊಳ್ಳಲು ಆಗುವುದಿಲ್ಲ. ಒಂದು ದಿನ ಆ ನಟಿ ಬ್ಯೂಟಿ ಪಾರ್ಲರ್ ಗೆ ತೆರಳಿ ಐಬ್ರೊ ಮತ್ತು ಹೇರ್ ಕಟ್ ಮಾಡಿಸಿಕೊಂಡು ಬರುತ್ತಾಳೆ.  ತಕ್ಷಣದ ನಿರ್ದೇಶಕರಾದ ಚಟ್ಟರ್ಜಿ ಅವರು ನೀವು ಕ್ಷಾಮದ ಸಂದರ್ಭದಲ್ಲಿರುವ ವ್ಯಕ್ತಿಯಂತೆ ನಟಿಸಬೇಕು. ಈ ರೀತಿ ಕೂದಲನ್ನೆಲ್ಲಾ ಸಿಂಗಾರ ಮಾಡಿಕೊಂಡು ಬಂದರೆ ಆಗುವುದಿಲ್ಲ ಎಂದು ಹೇಳುತ್ತಾರೆ. ಇದರಿಂದ ಆಕೆ ಕೋಪಿಸಿಕೊಂಡು ಅಲ್ಲಿಂದ ತೆರಳುತ್ತಾಳೆ. ಮಾರನೇ ದಿನ ಆಕೆಯ ಪಾತ್ರ ಮಾಡುವುದಕ್ಕೆ ನಟಿಯರೇ ಸಿಕ್ಕದಿದ್ದಾಗ ಅಲ್ಲಿ ಮತ್ತೊಂದು ರೀತಿಯ ಬರ ಸೃಷ್ಟಿಯಾಗುವುದು. ಆಗ ನಿರ್ದೇಶಕರು, “ನೋಡಿ ಬರ ಬಂತು. ಬರ ಬಂದಾಗ ಜನರಲ್ಲಿ ದುಡ್ಡು ಇರುವುದಿಲ್ಲ. ಕೊನೆಗೆ ಅಲ್ಲಿನ ಗಂಡಸರು ತಮ್ಮ ಹೆಂಡತಿಯರನ್ನು ವೇಶ್ಯಾವಾಟಿಕೆಗೆ ತಳ್ಳಿ, ಅಲ್ಲಿಂದ ಬರುವ ದುಡ್ಡಿನಿಂದ ತಮ್ಮ ಬದುಕನ್ನು ಸಾಗಿಸುತ್ತಾರೆ. ಇದು 1943ರ ವಸ್ತುಸ್ಥಿತಿ” ಎಂದು ವಿವರಿಸುತ್ತಾರೆ.

ನಟಿಯ ಪಾತ್ರ ಮಾಡಲು ಬಂದವರು ಕಥೆಯನ್ನು ಕೇಳಿದ ನಂತರ ಇದು ತಮ್ಮಿಂದ ಸಾಧ್ಯವಿಲ್ಲ ಎಂದು ಅಲ್ಲಿಂದ ತೆರಳುತ್ತಾರೆ. ಕೊನೆಗೆ ಸಿನಿಮಾ ತಂಡಕ್ಕೆ ಟೀ ಮಾರುತ್ತಿದ್ದ ಹುಡುಗಿಯೇ (ಶೈಲ ಮಜುಂದಾರ್)  ನಟಿಸಲು ಒಪ್ಪಿಕೊಳ್ಳುತ್ತಾಳೆ. ತದನಂತರ ಈ ಯೋಜನೆ ಇನ್ನೊಂದು ರೀತಿಯ ಚಿಂತನೆಗೆ ಕಾರಣವಾಗಿ, ಗ್ರಾಮಸ್ಥರೇ ಅವರನ್ನು ಅಲ್ಲಿಂದ ಹೊರಡುವಂತೆ ಮನವಿ ಮಾಡುತ್ತಾರೆ.

ಸಿನಿಮಾದಲ್ಲಿ ಸ್ಮಿತಾ ಪಾಟೀಲ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಚಿತ್ರದ ಸನ್ನಿವೇಶವೊಂದರಲ್ಲಿ ಆಕೆ ತನ್ನ ಮನೆಗೆ ಅಕ್ಕಿ ಮತ್ತು ಅಡುಗೆ ಎಣ್ಣೆ ಮುಂತಾದ ಸಾಮಾನುಗಳನ್ನು ಕೊಂಡೊಯ್ಯುತ್ತಾಳೆ. ಹಣವಿಲ್ಲದಿದ್ದರೂ ಇದೆಲ್ಲಾ ಹೇಗೆ ಖರೀದಿಸಲು ಸಾಧ್ಯವಾಯಿತು ಎಂದು ಕಾಯಿಲೆಯಲ್ಲಿ ಮಲಗಿದ್ದ ಗಂಡನಿಗೆ ಅನುಮಾನ ಬರುತ್ತದೆ. ಮಾತ್ರವಲ್ಲದೆ ಅವಳ ಶೀಲವನ್ನು ಶಂಕಿಸಿ ಹಿಗ್ಗಾಮುಗ್ಗಾ ಹೊಡೆದು, ಆಕೆಯ ಕೈಯಲ್ಲಿದ್ದ ಮಗುವನ್ನು ಎಸೆಯುವ ರೀತಿಯಲ್ಲಿ ಮೇಲಕ್ಕೆ ಎತ್ತುತ್ತಾನೆ. ಇದನ್ನು ಶೂಟಿಂಗ್ ನೋಡಲು ಬಂದಿದ್ದ ಹೆಂಗಸು ಕಂಡು, ಮಗುವನ್ನು ಬಿಸಾಕಿಯೇ ಬಿಡುತ್ತಾರೆ ಎಂಬ ಭಯದಿಂದ ಕಿಟಾರ್ ಎಂದು ಕಿರುಚಿಕೊಳ್ಳುತ್ತಾಳೆ. ಏಕೆಂದರೆ ಆಕೆಯ ಜೀವನದಲ್ಲೂ ಇದೇ ಮಾದರಿಯ ಘಟನೆ ನಡೆದಿರುತ್ತದೆ. ಹಾಗಾಗಿ ಸಿನಿಮಾದ ಕಥೆ, ಇಲ್ಲಿಯ ಕಥೆ, ನಿಜವಾದ ಕಥೆ ಮತ್ತು 1943ರ ಕಥೆ ಇವೆಲ್ಲವನ್ನೂ ಮೃಣಾಲ್ ಸೇನ್ ಅವರು ಒಂದು ರೀತಿಯಲ್ಲಿ ಹೆಣೆಯುತ್ತಾ ಹೋಗುತ್ತಾರೆ.

ಬರ, ಬಡತನದ ಬಗ್ಗೆ ಮನದಲ್ಲೆ ಚಿತ್ರಣ ಮಾಡಿಕೊಳ್ಳುವುದಕ್ಕೂ, ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ‘Bourgeoisification of images’ ಎಂದು ಗೊಡಾರ್ಡ್ ಹೇಳುತ್ತಾನೆ. ಅಂದರೆ ವಸ್ತುಸ್ಥಿತಿಯನ್ನು ಪರಿಚಯ ಮಾಡಿಕೊಳ್ಳದೆ, ಕೇವಲ ಕಲ್ಪನೆಯಲ್ಲೆ ಒಂದು ಚಿತ್ರಣವನ್ನು ಸೃಷ್ಟಿ ಮಾಡಿಕೊಳ್ಳುವುದು. ಆದರೆ ಈ ಕಲ್ಪನೆ ಎಲ್ಲಿಂದ ಬರುತ್ತದೆ? ನಾವು ಇರುವ ಸ್ಥಿತಿ “Bourgeios” ಸ್ಥಿತಿ. ಹಾಗಾಗಿ ಇದು ನನ್ನ ಕನಸು ಮಾತ್ರ. ಇದಕ್ಕೆ ಅನುಗುಣವಾಗಿ ಸೃಷ್ಟಿ ಮಾಡುವ ಚಿತ್ರಣ ನಿಜವಾದುದ್ದಲ್ಲ. ಇದನ್ನೇ ‘Bourgeoisification’ ಎಂದು ಗೊಡಾರ್ಡ್ ಹೇಳುತ್ತಾನೆ.

ಈ ಸಿನಿಮಾದಲ್ಲಿ ಅಂತಹ ಚಿತ್ರಣಗಳ ಬಗ್ಗೆ ಬಹಳ ವಿಸ್ತಾರವಾಗಿ, ಟೀಕಾತ್ಮಕವಾಗಿ ಮೃಣಾಲ್ ಸೇನ್ ಕಟ್ಟಿದ್ದಾರೆ. ಹಾಗಾಗಿ ಇದು ಮಾಧ್ಯಮದ ಬಗ್ಗೆಯೂ ಹೌದು, ವಸ್ತುಸ್ಥಿತಿಯ ವ್ಯಾಖ್ಯಾನವೂ ಹೌದು. ನಮ್ಮ ಸಾಮ್ರಾಜ್ಯಶಾಹಿ ಮಾಡಿದಂತಹ ಅನ್ಯಾಯದ ಬಗ್ಗೆಯೂ ಚಿತ್ರದಲ್ಲಿ ಹೇಳಲಾಗಿದೆ. ಸಾಮ್ರಾಜ್ಯಶಾಹಿ ಯಾವೆಲ್ಲಾ ಅನ್ಯಾಯ ಮಾಡಿತ್ತೋ, ಅದೇ ಅನ್ಯಾಯವನ್ನು ನಗರದಿಂದ ಬಂದಂತಹ ಸಿನಿಮಾ ತಂಡ, ಹಳ್ಳಿಯವರ ಮೇಲೆ ಮಾಡುತ್ತಿರುತ್ತದೆ. ಏನೂ ತಿಳಿಯದ ಹಳ್ಳಿಯ ಜನರು ಬಹಳ ಆಸಕ್ತಿಯಿಂದ ಸಿನಿಮಾ ನೋಡಲೂ ಬಂದರೂ, ಕಾಲಕ್ರಮೇಣ ಎಲ್ಲರಿಗೂ ಕೃತಕ ಎಂದನಿಸುತ್ತದೆ. ಮಾತ್ರವಲ್ಲ ಕಥೆಯೇ ಸುಳ್ಳು ಎಂಬ ಭಾವನೆ ಬರುತ್ತದೆ.

ಇದೆಲ್ಲದರ ನಡುವೆ ಬಂಗಲೆಯಲ್ಲಿರುವ ವೃದ್ಧ ದಂಪತಿಗಳು ತಮ್ಮ ಮಗಳ ಬರುವಿಕೆಗೆಗಾಗಿ ಕಾಯುತ್ತಲೇ ಇರುತ್ತಾರೆ. ಕೊನೆಗೆ ಮಗಳು ಬರೆದಿದ್ದಾಗ ವೃದ್ಧ ಗಂಡ, ಅದೇ ಯೋಚನೆಯಲ್ಲೇ ಮೃತಪಡುತ್ತಾನೆ. ಆಗ ಹೆಂಡತಿಗೆ ಏನು ಮಾಡಬೇಕೆಂದು ತಿಳಿಯದಿದ್ದಾಗ ಚಿತ್ರತಂಡದವರು ಆಕೆಯ ನೆರವಿಗೆ ಧಾವಿಸುತ್ತಾರೆ. ಕಾರು ಕಳುಹಿಸಿ ಅವರ ಮಗಳನ್ನು ಸ್ಥಳಕ್ಕೆ ಕರೆಸಿಕೊಳ್ಳುತ್ತಾರೆ. ಚಿತ್ರತಂಡ ಈ ರೀತಿ ಮಾನವೀಯ ಗುಣವನ್ನು ತೋರಿಸುವುದರ ಜೊತೆಜೊತೆಗೆ ಹೊರ ಜಗತ್ತಿನ ಬಗ್ಗೆ ತಾತ್ಸಾರದಿಂದ ಹುಟ್ಟುವ ಅಮಾನವೀಯ ಘಟನೆಗಳೂ ನಡೆಯುತ್ತಿರುತ್ತವೆ. ಅಂದರೆ ಇದು ‘Non Narrative’ ಘಟನಾ ಪ್ರಧಾನವಾದಂತಹ ಸಿನಿಮಾವಲ್ಲ. ಬದಲಾಗಿ ಇದರಲ್ಲಿ ಯೋಚನಾ ಪ್ರಧಾನವಾದಂತಹ, ವಿಚಾರ ಪ್ರಧಾನವಾದಂತಹ ಸಂವಹನವಿದೆ. ಆ ಕಾರಣಕ್ಕಾಗಿ ಅಕಾಲೇರ್ ಸಂಧಾನೆ ಸಿನಿಮಾ ಬಹಳ ಯಶಸ್ವಿಯಾಗಿದೆ.

– ಗಿರೀಶ್ ಕಾಸರವಳ್ಳಿ

0 Comments

Submit a Comment

Your email address will not be published. Required fields are marked *

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more